ಕುತೂಹಲ ಮೂಡಿಸಿದ ‘ಚಾಣಕ್ಯ’ ನಡೆ

vyakthivishesha vijayavani 8.3.15 yogendra yadav ಆಮ್ ಆದ್ಮಿ ಪಕ್ಷ (ಎಎಪಿ)ದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ)ಯಿಂದ ವಜಾಗೊಳಿಸಲ್ಪಟ್ಟ ಯೋಗೇಂದ್ರ ಯಾದವ್, ಕಳೆದ ವಾರ ಸಾರ್ವಜನಿಕ ವಲಯದಲ್ಲಿ ಭಾರಿ ಸುದ್ದಿಯಲ್ಲಿದ್ದ ವ್ಯಕ್ತಿ. ಪಕ್ಷದ `ಚಾಣಕ್ಯ’ ಎಂದೇ ಗುರುತಿಸಿಕೊಂಡಿರುವ ಅವರು, ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದೊಳಗೆ ಸಿಲುಕಿಕೊಂಡಿದ್ದಾರೆ. ಪಕ್ಷದೊಳಗಿನ ಭಿನ್ನಮತ, ಅಸಮಾಧಾನಕ್ಕೂ ಇದುವೇ ಕಾರಣ ಎಂಬ ಮಾತು ವ್ಯಾಪಕವಾಗಿದೆ. ಈ ನಡುವೆ, ಪ್ರಶಾಂತ್ ಭೂಷಣ್ ಹಾಗೂ ಯಾದವ್‍ರನ್ನು ಪಕ್ಷದ ಪಿಎಸಿಯಿಂದ ಕೈಬಿಟ್ಟ ನಿರ್ಣಯವನ್ನೂ ಪಕ್ಷ ಪ್ರಕಟಿಸಿದೆ. ಇದರ ಬೆನ್ನಲ್ಲೇ, ಇನ್ನೂ ಶೈಶಾವವಸ್ಥೆಯಲ್ಲಿರುವ ಪಕ್ಷದಲ್ಲಿ ಒಡಕು ಸಲ್ಲದು, ಒಗ್ಗಟ್ಟಿನಿಂದ ಸಾಗಬೇಕು ಎಂಬ ಕಳಕಳಿಯ ಮಾತೂ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಯೋಗೇಂದ್ರ ಯಾದವ್ ಪರ ಅಭಿಯಾನವನ್ನೂ ಎಎಪಿ ಕಾರ್ಯಕರ್ತರು ಕೈಗೊಂಡಿದ್ದಾರೆ. ಇವೆಲ್ಲವೂ ಪಕ್ಷದಲ್ಲಿ ಯೋಗೇಂದ್ರ ಅವರ ಪ್ರಾಮುಖ್ಯತೆ ಏನು ಎಂಬುದನ್ನು ಬಿಂಬಿಸುತ್ತವೆ. ಇಷ್ಟಾದರೂ ಪಕ್ಷದ ಮೇಲಿನ ಅವರ ನಿಷ್ಠೆ ಇನ್ನೂ ಕಡಿಮೆ ಆಗಿಲ್ಲ ಎಂಬುದಕ್ಕೆ, `ನಾನು ಮತ್ತು ಪ್ರಶಾಂತ್ ಭೂಷಣ್ ಇಬ್ಬರೂ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಎತ್ತಿದ್ದೇವೆ. ಇದರಲ್ಲಿ ತಪ್ಪೇನೂ ಇಲ್ಲ. ನನ್ನ ಮೇಲೆ ಏನೇ ಕ್ರಮ ಕೈಗೊಂಡರೂ, ನಾನು ಜನರಿಗೋಸ್ಕರ ಕೆಲಸ ಮಾಡುತ್ತೇನೆ’ ಎಂಬ ಅವರ ಮಾತೇ ಸಾಕ್ಷಿ.

ಯಾದವ್‍ರ ರಾಜಕೀಯಾಸಕ್ತಿಯ ಆರಂಭ 1970ರ ದಶಕದ ಕೊನೆಯ ಅವಧಿಗೆ ಸರಿಯುತ್ತದೆ. ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಂದಾಗಿ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡ ಯಾದವ್, ಸಕ್ರಿಯ ರಾಜಕೀಯಕ್ಕೆ ಕಾಲಿರಿಸಿದ್ದು ಈಗ್ಗೆ ಮೂರು ವರ್ಷದ ಕೆಳಗೆ. ಅದೂ ಆಮ್ ಆದ್ಮಿ ಪಾರ್ಟಿ ಎಂಬ ಹೊಸ ಪಕ್ಷದ ಮೂಲಕ. ಅದರ ಸಂಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರು. ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡರು. ಅಷ್ಟೇ ಅಲ್ಲ, ಮೌರ್ಯ ಸಾಮ್ರಾಜ್ಯದಲ್ಲಿ ಚಂದ್ರಗುಪ್ತ ಮೌರ್ಯನಿಗೆ ಚಾಣಕ್ಯ ಯಾವ ರೀತಿ ಸಲಹೆಗಾರನಾಗಿದ್ದನೋ ಅದೇ ರೀತಿ ಇಲ್ಲಿ ಪಕ್ಷದ ನೀತಿನಿರೂಪಣೆ ವಿಷಯ ಬಂದಾಗ ಚಾಣಕ್ಯನಂತೆ ಸಲಹೆಗಳನ್ನು ನೀಡುತ್ತಿದ್ದುದು ಇದೇ ಯಾದವ್.

ಪಕ್ಷ ಸ್ಥಾಪನೆಯಾಗುತ್ತಿದ್ದಂತೆಯೇ ಆರಂಭವಾದ ವಿವಾದ ಇಂದು ಪೂರ್ತಿಯಾಗಿ ಅವರನ್ನೇ ಸುತ್ತುವರಿದಿದೆ. 2012ರಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಆಂದೋಲನ ಶುರುವಿಟ್ಟುಕೊಂಡಾಗ ಯೋಗೇಂದ್ರ ಯಾದವ್ ಅವರು ಕೇಜ್ರಿವಾಲ್‍ಗೆ ಸಾಥ್ ನೀಡಿದ್ದು ಮಾತ್ರವಲ್ಲದೆ, ಅವರಲ್ಲಿ ಸಕ್ರಿಯ ರಾಜಕಾರಣದ ಕನಸನ್ನೂ ಬಿತ್ತಿದರು. ಅದು ಮೊಳಕೆಯೊಡೆದು ಆಮ್ ಆದ್ಮಿ ಪಕ್ಷದ ರೂಪ ತಳೆಯಿತು. ಕೇಜ್ರಿವಾಲ್ ಜತೆಗೂಡಿ ಪಕ್ಷ ಕಟ್ಟುವಲ್ಲಿಯೂ ಈ ಯಾದವ್‍ರದ್ದು ಪ್ರಮುಖ ಪಾತ್ರ.

ಈ ನಡುವೆ, ತವರು ರಾಜ್ಯ ಹರಿಯಾಣದಲ್ಲಿ ಪಕ್ಷದ ಹಿರಿಯ ನಾಯಕ ನವೀನ್ ಜೈಹಿಂದ್ ಜೊತೆಗಿನ ವಿರಸವೂ ಹೆಚ್ಚಾಯಿತು. ಪಕ್ಷದಲ್ಲಿ ಯಾರು ಪ್ರಬಲರು ಎಂಬ ಮಟ್ಟಿಗೆ ಈ ಬಿಕ್ಕಟ್ಟು ಬೆಳೆಯಿತು. ಅರವಿಂದ ಕೇಜ್ರಿವಾಲ್ ಅವರು ಜೈಹಿಂದ್ ಪರ ನಿರ್ಣಯ ತೆಗೆದುಕೊಂಡರು ಎಂದು ಆಕ್ಷೇಪಿಸಿ ಯಾದವ್ ತೀವ್ರ ಅಸಮಾಧಾನವನ್ನೂ ಈ ಹಿಂದೆ ಹೊರಹಾಕಿದ್ದರು. ಲೋಕಸಭಾ ಚುನಾವಣೆ ನಡೆದಾಗ ಗುರ್‍ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಠೇವಣಿ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದ್ದರು. ಇದರ ಹಿಂದೆ ಜೈಹಿಂದ್ ಕೈವಾಡ ಇದೆ ಎಂದೂ ಅವರು ಆರೋಪಿಸಿದ್ದರು. ಇದಾಗಿ ಕೆಲಕಾಲ ಮೌನವಹಿಸಿದ್ದ ಅವರು, ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಪಕ್ಷದೊಳಗಿನ ಏಕವ್ಯಕ್ತಿ ಕೇಂದ್ರಿತ ಸಂಸ್ಕøತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪರಿಣಾಮ ಪಿಎಸಿಯಲ್ಲಿ 11ರ ಪೈಕಿ 8 ಸದಸ್ಯರ ವಿರೋಧ ಕಟ್ಟಿಕೊಂಡರು. ಏತನ್ಮಧ್ಯೆ ನವೀನ್ ಜೈಹಿಂದ್ ಮತ್ತು ಕೇಜ್ರಿವಾಲ್ ನಡುವಿನ ಒಡನಾಟ ಹೆಚ್ಚಾಗಿತ್ತು. ಪರಿಣಾಮ ಯೋಗೇಂದ್ರ ಯಾದವ್ ಪಕ್ಷದಲ್ಲಿ ಮೂಲೆಗುಂಪಾಗಿಬಿಟ್ಟರು. ಇಷ್ಟಾಗ್ಯೂ ಪಕ್ಷ ತ್ಯಜಿಸುವ ಅಥವಾ ಒಡೆಯುವ ಮಾತನ್ನು ಅವರು ಇದುವರೆಗೆ ಆಡಿಲ್ಲ. ಹೀಗಾಗಿಯೇ ಪಕ್ಷದ ಕಾರ್ಯಕರ್ತರ ಮಟ್ಟದಲ್ಲಿ ಅವರ ವರ್ಚಸ್ಸು ಕೊಂಚ ಹೆಚ್ಚಾಗಿದೆ ಎಂದೇ ಹೇಳಬಹುದು.

ಇಂತಹ ಯಾದವ್ ಅವರ ಖಾಸಗಿ ಬದುಕಿನಲ್ಲೂ ಸಾಕಷ್ಟು ಆಸಕ್ತಿದಾಯಕ ವಿಚಾರಗಳಿವೆ. ಮೂಲತಃ ಹರಿಯಾಣದವರಾದ ಅವರು, ದೇಶದ ಉತ್ತಮ ಸಮಾಜಶಾಸ್ತ್ರಜ್ಞ ಹಾಗೂ ರಾಜಕೀಯ ವಿಶ್ಲೇಷಕರಲ್ಲಿ ಒಬ್ಬರು. ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ದೇವೇಂದ್ರ ಸಿಂಗ್‍ರ ಮಗನಾದ ಯೋಗೇಂದ್ರರ ಬಾಲ್ಯದ ಹೆಸರು ಸಲೀಂ. ತಮಗೆ ಈ ಹೆಸರು ಇಟ್ಟಿದ್ದಕ್ಕೂ ಒಂದು ಹಿನ್ನೆಲೆ ಇದೆ ಎಂಬುದನ್ನು ಅವರೇ ಬಹಿರಂಗಪಡಿಸಿದ್ದರು. 1936ರ ಕೋಮುಸಂಘರ್ಷದ ಸಂದರ್ಭದಲ್ಲಿ ಅವರ ತಾತ ರಾಮ್ ಸಿಂಗ್‍ರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರಂತೆ. ಇಂತಹ ಎರಡು ಮೂರು ಹತ್ಯೆಗಳನ್ನು ನೋಡಿದ ಬಳಿಕ ದೇವೇಂದ್ರ ಸಿಂಗ್ ಅವರು ಹಿಂದು ಆಗಿದ್ದರೂ, ತಮ್ಮ ಮಕ್ಕಳನ್ನು ಕಾಪಾಡುವ ಸಲುವಾಗಿ ಯೋಗೇಂದ್ರ ಯಾದವ್‍ಗೆ ಸಲೀಂ ಎಂದೂ, ಸಹೋದರಿ ನೀಲಂಗೆ ನಜ್ಮಾ ಎಂದೂ ಹೆಸರಿಟ್ಟಿದ್ದರು. ಶಾಲೆಗೆ ಹೋಗಲಾರಂಭಿಸಿದಾಗ ಹಿಂದು ಹುಡುಗರು `ಸಲೀಂ’ ಎಂಬ ಹೆಸರಿನ ಯೋಗೇಂದ್ರರನ್ನು ರೇಗಿಸತೊಡಗಿದ್ದರು. ಕೊನೆಗೆ ಅವರು ಯೋಗೇಂದ್ರ ಯಾದವ್ ಎಂದು ಹೆಸರು ಬದಲಾಯಿಸಿಕೊಂಡರಂತೆ. ಇಂದಿಗೂ ಅವರ ಮನೆಯ ಸದಸ್ಯರು, ಆಪ್ತರು ಅವರನ್ನು ಗುರುತಿಸುವುದು `ಸಲೀಂ ಭಾಯ್’ ಎಂದೇ. ಇನ್ನು ಅವರ ಪತ್ನಿ ಮಧೂಲಿಕ ಬ್ಯಾನರ್ಜಿ ದೆಹಲಿ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕಿ. ಯೋಗೇಂದ್ರ ಯಾದವ್ ಪಂಜಾಬಿನಲ್ಲಿ ಉನ್ನತ ಶಿಕ್ಷಣ ಪಡೆದ ಬಳಿಕ ಚಂಢೀಗಡದ ಪಂಜಾಬ್ ವಿವಿಯಲ್ಲಿ ರಾಜಕೀಯ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು (1985-1993). 1995- 2002ರ ನಡುವೆ, ಲೋಕನೀತಿ ನೆಟ್‍ವರ್ಕ್‍ನ ಸಂಸ್ಥಾಪಕ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ್ದರು. 1997-2003ರ ಅವಧಿಯಲ್ಲಿ Centre for the Study of Developing Societiesನ ಸಂಸ್ಥಾಪಕ ನಿರ್ದೇಶಕರಾಗಿದ್ದರು. 1996ರಿಂದೀಚೆಗೆ ದೂರದರ್ಶನ ಹಾಗೂ ಖಾಸಗಿ ಸುದ್ದಿವಾಹಿನಿಗಳಲ್ಲಿ ರಾಜಕೀಯ ವಿದ್ಯಮಾನಗಳ ಚರ್ಚೆಯಲ್ಲಿ ಭಾಗವಹಿಸಿಸುವ ಮೂಲಕ ದೇಶದ ಪ್ರಮುಖ ರಾಜಕೀಯ ವಿಶ್ಲೇಷಕರಲ್ಲಿ ಒಬ್ಬರಾಗಿ ಹೆಸರುಮಾಡಿದರು. ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ 2010ರಲ್ಲಿ ರಚಿಸಿದ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದರು.

ಪ್ರಸ್ತುತ ಪಕ್ಷದ ಪಿಎಸಿಯಿಂದ ಹೊರದಬ್ಬಲ್ಪಟ್ಟಿರುವ ಯೋಗೇಂದ್ರ ಯಾದವ್, `ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುವೆ. ಸದ್ಯ ದೊಡ್ಡ ಹೊಣೆಗಾರಿಕೆಯನ್ನು ಹೆಗಲಿನಿಂದ ಕೆಳಕ್ಕೆ ಇಳಿಸಿದಂತಹ ಅನುಭವವಾಗಿದ್ದು, ಸಾಮಾನ್ಯ ಕಾರ್ಯಕರ್ತರ ಜೊತೆ ಇನ್ನಷ್ಟು ಬೆರೆಯಲು ಅವಕಾಶ ಸಿಕ್ಕಂತಾಗಿದೆ’ ಎಂದಿದ್ದಾರೆ. ಹೀಗಾಗಿ, ಅವರ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ.

Leave a Reply

Your email address will not be published. Required fields are marked *