ಮಾನವ-ಮೀನು!

ನೀಳಕಾಯ – ಎತ್ತರ 6.4 ಅಡಿ, ಅಗಲವಾದ ಎದೆಗೂಡು, ಎರಡೂ ಕೈಗಳನ್ನು ಅಗಲಿಸಿ ನಿಂತರೆ ಅದರ ಉದ್ದ 6 ಅಡಿ 7 ಇಂಚು, ಕೈಗಳ ಗಾತ್ರಕ್ಕೆ ಹೋಲಿಸಿದರೆ ಕಾಲುಗಳು ಚಿಕ್ಕವು, ಪಾದದ ಗಾತ್ರ 14, ತೂಕ 88 ಕಿಲೋ. ಇಂತಹ ವಿಶಿಷ್ಟ ಅಂಗರಚನೆಗೆ ಮುಕುಟವೆಂಬಂತೆ ಪುಟ್ಟ ತಲೆ.. ಇನ್ನು ಈತ ನೀರಿಗಿಳಿದರೆ ಮೀನನ್ನೂ ನಾಚಿಸುವಂತೆ ಮುಂದೆ ಸಾಗುವ ರೀತಿ ಎಂಥವರನ್ನೂ ನಿಬ್ಬೆರಗಾಗಿಸುವಂಥದ್ದು. ಹೀಗಾಗಿಯೇ”Half-Man Half-Fish’, “Deep Sea Frog’, “Flying Fish’, ‘ಬಾಲ್ಟಿಮೋರ್ ಬುಲೆಟ್’ ಎಂಬಿತ್ಯಾದಿ ವಿಶೇಷಣಗಳಿಂದಲೂ ಈತನ ಸಾಧನೆಯನ್ನು ಅಭಿಮಾನಿಗಳು ಗುರುತಿಸುತ್ತಿದ್ದಾರೆ. ರಿಯೋ ಒಲಿಂಪಿಕ್ಸ್ನಲ್ಲಿ ನಾಲ್ಕು ಚಿನ್ನದ ಪದಕ ಗೆದ್ದಿರುವ ಈತ ಮೊನ್ನೆ ಶುಕ್ರವಾರ 22ನೇ ಚಿನ್ನದ ಪದಕಕ್ಕೆ ಕೊರಳೊಡ್ಡಿ ಜಾಗತಿಕ ಮಟ್ಟದ ಸಾರ್ವಕಾಲಿಕ ದಾಖಲೆ ಬರೆದು ‘ಚಿನ್ನದ ಮೀನು’ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

Maichel Phelps GFXಇಷ್ಟು ಸಂಕ್ಷಿಪ್ತ ಪರಿಚಯ ಸಿಕ್ಕ ಬಳಿಕ ಈತ ಅಮೆರಿಕದ ಈಜು ದಿಗ್ಗಜ ಮೈಕೆಲ್ ಫೆಲ್ಪ್ಸ್ ಎಂಬುದನ್ನು ರಿಯೋ ಒಲಿಂಪಿಕ್ಸ್ ಸ್ಪರ್ಧೆಗಳನ್ನು ಗಮನಿಸುತ್ತಿರುವವರು ಥಟ್ಟಂತ ಹೇಳಿಯಾರು. ರಿಯೋದಲ್ಲಿ ಒಟ್ಟು ಆರು ಚಿನ್ನದ ಪದಕಗಳಿಗೆ ಕೊರಳೊಡ್ಡುವರೇ ಈತ ಎಂಬ ನಿರೀಕ್ಷೆ, ಕುತೂಹಲ ಜಗತ್ತಿನಾದ್ಯಂತ ಇತ್ತು. ಆದರೆ, ಶನಿವಾರ ನಡೆದ 100 ಮೀ. ಬಟರ್ಫ್ಲೈ ಸ್ಪರ್ಧೆಯಲ್ಲಿ ಎಲ್ಲರ ನಿರೀಕ್ಷೆ ತಲೆಕೆಳಗಾಗಿ ಸಿಂಗಾಪುರದ ಜೋಸೆಫ್ ಸ್ಕೂಲಿಂಗ್ ಚಿನ್ನದ ಪದಕ ಗೆದ್ದರು. ಮೈಕೆಲ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದರೊಂದಿಗೆ ಆರು ಚಿನ್ನದ ಪದಕ ಗೆಲ್ಲಬೇಕೆಂಬ ಮೈಕೆಲ್ ನಿರೀಕ್ಷೆ ಕಮರಿದೆ. ಆದರೂ, ಈಜುಕೊಳದ ಈ ಸಾಧಕನೇ ಈ ವಾರ ಸುದ್ದಿಯಲ್ಲಿದ್ದ ವ್ಯಕ್ತಿ.

‘ಬದುಕು’ ಎಂಬ ಈಜುಕೊಳದಲ್ಲಿ ಮೈಕೆಲ್ ಸವೆಸಿದ ಹಾದಿ ಸರಳವಾದುದೇನೂ ಆಗಿರಲಿಲ್ಲ. ಅಮೆರಿಕದ ಮೆರಿಲ್ಯಾಂಡ್ನ ಬಾಲ್ಟಿಮೋರ್ನಲ್ಲಿ 1985ರ ಜೂನ್ 30ರಂದು ಜನನ. ತಂದೆ ಫ್ರೆಡ್, ತಾಯಿ ಡೆಬ್ಬಿ ಫೆಲ್ಪ್ಸ್.

ಮೂವರು ಮಕ್ಕಳ ಪೈಕಿ ಮೈಕೆಲ್ ಕೊನೆಯವನು. ಇಬ್ಬರು ಅಕ್ಕಂದಿರು. ಹಿರಿಯ ಅಕ್ಕ ವಿಟ್ನೆ (1978), ಎರಡನೇ ಅಕ್ಕ ಹಿಲರಿ (1980). ತಂದೆ ಫ್ರೆಡ್ ಆಲ್ರೌಂಡ್ ಅಥ್ಲೀಟ್. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಫ್ರೆಡ್ ಹೈಸ್ಕೂಲು ಮತ್ತು ಕಾಲೇಜು ಮಟ್ಟದಲ್ಲಿ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ತಾಯಿ ಡೆಬ್ಬಿ ಮಿಡ್ಲ್ ಸ್ಕೂಲ್ ಪ್ರಾಂಶುಪಾಲರಾಗಿದ್ದವರು. ಇವರ ದಾಂಪತ್ಯ 1994ರಲ್ಲಿ ಮುರಿದು ಬಿತ್ತು. ತರುವಾಯ ಮೈಕೆಲ್ ಮತ್ತು ಸಹೋದರಿಯರು ಬೆಳೆದಿದ್ದೆಲ್ಲ ತಾಯಿಯ ಜೊತೆಗೆ. ಏತನ್ಮಧ್ಯೆ, ಇಬ್ಬರೂ ಸಹೋದರಿಯರು ಸ್ಥಳೀಯ ಈಜು ತಂಡ ಸೇರ್ಪಡೆಗೊಂಡಿದ್ದರು. 1996ರ ಒಲಿಂಪಿಕ್ಸ್ ನಡೆದಾಗ ಅಮೆರಿಕ ತಂಡ ಸೇರಲು ಹಿರಿಯ ಅಕ್ಕ ವಿಟ್ನೆ ಪ್ರಯತ್ನಿಸಿದ್ದಳು. ಆದರೆ, ಆ ಸಂದರ್ಭದಲ್ಲಿ ಗಾಯಗಳಾಗಿ ವಿಟ್ನೆಯ ಕನಸು ನುಚ್ಚುನೂರಾದವು.

ತುಂಬಾ ಚೂಟಿಯಾಗಿದ್ದ ಮೈಕೆಲ್ಗೆ ಒಂದೆಡೆ ಗಮನ ಕೇಂದ್ರೀಕರಿಸಿ ಕೆಲಸ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಯಾವುದರ ಮೇಲೂ ಗಮನ ಕೇಂದ್ರೀಕರಿಸದೇ ತನಗೆ ತೋಚಿದ್ದೆಲ್ಲ ಮಾಡುತ್ತಿರುತ್ತಿದ್ದ. ಇದನ್ನು ಒಬ್ಬ ತಾಯಿಯಾಗಿ ಡೆಬ್ಬಿ ಗಮನಿಸಿದ್ದರು. ಉಳಿದ ಮಕ್ಕಳಂತಲ್ಲ ಈತ ಎಂಬುದನ್ನು ಅರಿತ ಡೆಬ್ಬಿ, ತಜ್ಞರ ಬಳಿ ಕರೆದೊಯ್ದಿದ್ದಳು. ಮೈಕೆಲ್‌ ಗೆ ಎಡಿಎಚ್ಡಿ(attention deficit hyperactivity disorder) ಇರುವುದು ಪತ್ತೆಯಾಯಿತು. ಯಾವುದಾದರೂ ಒಂದೇ ಚಟುವಟಿಕೆ ಮೇಲೆ ಗಮನ ಕೇಂದ್ರೀಕರಿಸುವುದಕ್ಕೆ ಸಾಧ್ಯವಾಗದ ಸ್ಥಿತಿ ಇದು. ಇದನ್ನು ನಿವಾರಿಸುವುದಕ್ಕೆ ಸೂಕ್ತ ಮಾರ್ಗದರ್ಶನವನ್ನೂ ತಜ್ಞರು ನೀಡಿದರು. ಇದೇ ಸಂದರ್ಭದಲ್ಲಿ, ಅಕ್ಕಂದಿರು ಈಜುವುದನ್ನು ಕಂಡ ಮೈಕೆಲ್ಗೆ ತಾನೂ ಈಜು ಕಲಿಯಬೇಕು ಎಂಬ ಮನಸ್ಸಾಯಿತು. ತಾಯಿಗೆ ಈ ವಿಷಯವನ್ನು ತಿಳಿಸಿದ. ಡೆಬ್ಬಿ ಕೂಡ ಮಗನ ಏಕಾಗ್ರತೆ ಹೆಚ್ಚಿಸುವುದು ಹೇಗೆ ಎಂದು ಚಿಂತಿತರಾಗಿದ್ದರು. ಕೂಡಲೇ ಇದಕ್ಕೆ ಸಮ್ಮತಿಸಿ ಮಗನನ್ನು ಈಜು ಕಲಿಕೆಗೆ ಸೇರಿಸಿದರು. ಆಗ ಮೈಕೆಲ್ನ ವಯಸ್ಸು ಕೇವಲ ಏಳು ವರ್ಷ.

ಈಜುಕೊಳಕ್ಕೆ ಇಳಿದ ಮೈಕೆಲ್ಗೆ ಭೀತಿ ಆವರಿಸಿತ್ತು. ಹೀಗಾಗಿ ತಲೆ ಕೆಳಗೆ ಮಾಡಿ ಈಜುವುದನ್ನು ನಿರಾಕರಿಸಿದ್ದ. ತರಬೇತುದಾರರು ಆತನಿಗೆ ಮೇಲ್ಮುಖವಾಗಿ ಈಜುವುದಕ್ಕೆ ಪ್ರೋತ್ಸಾಹಿಸಿದರು. ಪರಿಣಾಮ ಮೊದಲ ಪ್ರಯತ್ನದಲ್ಲಿ ಮೈಕೆಲ್ ಈಜಿದ್ದು ‘ಬ್ಯಾಕ್ ಸ್ಟ್ರೋಕ್’(ಹಿಮ್ಮುಖ ಚಲನೆ) ಮಾದರಿಯಲ್ಲಿ!

1996ರಲ್ಲಿ ಅಟ್ಲಾಂಟಾದಲ್ಲಿ ನಡೆದ ಬೇಸಿಗೆ ಕ್ರೀಡಾಕೂಟದಲ್ಲಿ ಟಾಮ್ ಮಲ್ಕೋವ್ ಮತ್ತು ಟಾಮ್ ಡೊಲಾನ್ ಎಂಬಿಬ್ಬರು ಈಜುಪಟುಗಳು 20160812153114-2-michael-phelps-rio-2016ಸ್ಪರ್ಧಿಸಿದ್ದನ್ನು ವೀಕ್ಷಿಸಿದ ಮೈಕೆಲ್ಗೆ ತಾನೂ ಒಬ್ಬ ಈಜು ಚಾಂಪಿಯನ್ ಆಗಬೇಕು ಎಂಬ ಬಯಕೆ ಚಿಗುರೊಡೆಯಿತು. ಹೀಗೆ ಈಜು ಸ್ಪರ್ಧೆಗೆ ಅಣಿಯಾಗತೊಡಗಿದ್ದು ಲೊಯೋಲಾ ಹೈಸ್ಕೂಲ್ನಲ್ಲಿದ್ದಾಗ. ಮುಂದೆ, ಮೀಡೋಬ್ರೂಲ್ ಅಕ್ವಾಟಿಕ್ ಆಂಡ್ ಫಿಟ್ನೆಸ್ ಸೆಂಟರ್ನಲ್ಲಿ ನಾರ್ತ್ ಬಾಲ್ಟಿಮೋರ್ ಅಕ್ವಾಟಿಕ್ ಕ್ಲಬ್ ಸೇರ್ಪಡೆಗೊಂಡಾಗ ತರಬೇತುದಾರ ಬಾಬ್ ಬೋವ್ವುನ್ ಗರಡಿಯಲ್ಲಿ ಪಳಗತೊಡಗಿದ. ಅಲ್ಲಿ ಮೈಕೆಲ್ನ ನಿಜವಾದ ಪ್ರತಿಭೆಯನ್ನು ಗುರುತಿಸಿದ ಬಾಬ್, ಹೆಚ್ಚಿನ ಮುತುವರ್ಜಿ ವಹಿಸಿದರು. ಇವೆಲ್ಲದರ ಪರಿಣಾಮ 1999ರ ವೇಳೆಗೆ ಮೈಕೆಲ್ ಅಮೆರಿಕದ ರಾಷ್ಟ್ರೀಯ ಮಟ್ಟದ ಬಿ ತಂಡಕ್ಕೆ ಸೇರ್ಪಡೆಗೊಂಡ.

ಮರುವರ್ಷ(2000) ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ ಗೇಮ್ಸ್ನಲ್ಲಿ ಅಮೆರಿಕ ತಂಡದಲ್ಲಿ ಸ್ಥಾನ ಪಡೆದ ಮೈಕೆಲ್, ಆವರೆಗಿನ 68 ವರ್ಷಗಳ ಒಲಿಂಪಿಕ್ ಗೇಮ್ಸ್ನ ಇತಿಹಾಸದಲ್ಲಿ ಭಾಗವಹಿಸಿದ ಅತಿ ಕಿರಿಯ ಅಮೆರಿಕನ್ ಎಂಬ ಕೀರ್ತಿಗೆ ಭಾಜನರಾದರು. ಅಂದು ಈತನ ವಯಸ್ಸು 15 ವರ್ಷ! ಆದರೆ, ಚೊಚ್ಚಲ ಒಲಿಂಪಿಕ್ನಲ್ಲಿ 200 ಮೀ. ಬಟರ್ಫ್ಲೈ ಫೈನಲ್ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟು ಬರಿಗೈಲಿ ನಿರ್ಗಮಿಸಿದ್ದರು. ಇದಾಗಿ, ಮರುವರ್ಷ 200 ಮೀ. ಬಟರ್ಫ್ಲೈ ವಿಭಾಗದಲ್ಲಿ ವಿಶ್ವದಾಖಲೆ ಬರೆದರು. ಇದು ಕೂಡ ಅತಿ ಕಿರಿಯನ ದಾಖಲೆಯಾಗಿ ಇತಿಹಾಸದ ಪುಟ ಸೇರಿತು. ಇದು ಈತನ ಈಜುಕೊಳದ ದಾಖಲೆಗೆ ಮುನ್ನುಡಿಯಾಯಿತು. ಮುಂದೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ದಾಖಲೆಗಳನ್ನು ಮುರಿದ ಮೈಕೆಲ್ 2004ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ 6 ಸ್ವರ್ಣ, 2 ಕಂಚು ಪದಕಗಳನ್ನುಪಡೆದು ಮಿಂಚಿದರು. ಇದುವರೆಗೆ ಒಟ್ಟು ಐದು ಒಲಿಂಪಿಕ್ ಗೇಮ್ಸ್ ನಲ್ಲಿ ಭಾಗವಹಿಸಿದ ಕೀರ್ತಿಗೂ ಅವರು ಭಾಜನರಾಗಿದ್ದು, ಒಟ್ಟು 27 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 22 ಚಿನ್ನ !. ಇದು ಕೂಡ ವಿಶ್ವದಾಖಲೆಯೇ. ವಿಶೇಷ ಎಂದರೆ, ಮೈಕೆಲ್ 13ನೇ ವೈಯಕ್ತಿಕ ಸ್ವರ್ಣ ಪದಕ ಗೆದ್ದಾಗ, 2168 ವರ್ಷ ಹಳೆಯ ಒಲಿಂಪಿಕ್ ದಾಖಲೆ ಮುರಿದು ಹೋಗಿತ್ತು. ಪ್ರಾಚೀನ ಒಲಿಂಪಿಕ್ಸ್ನಲ್ಲಿ ಲಿಯೋನಿಡಸ್ ಆಫ್ ರೋಡ್ಸ್ 12 ವೈಯಕ್ತಿಕ ಸ್ವರ್ಣ ಪದಕ ಗೆದ್ದಿದ್ದು ಆವರೆಗಿನ ವೈಯಕ್ತಿಕ ದಾಖಲೆಯಾಗಿತ್ತು. ಲಿಯೋನಿಡಸ್ ಕ್ರಿಸ್ತಪೂರ್ವ 164, 160, 156 ಮತ್ತು 152ರಲ್ಲಿ ಗ್ರೀಕ್ನಲ್ಲಿ ನಡೆದಿದ್ದ ಪ್ರಾಚೀನ ಒಲಿಂಪಿಕ್ಸ್ ನ ವಿವಿಧ ಓಟದ ಸ್ಪರ್ಧೆಗಳಲ್ಲಿ ತಲಾ 3 ಸ್ವರ್ಣ ಪದಕ ಗೆದ್ದುಕೊಂಡಿದ್ದರು. ಕೊನೇ ಬಾರಿ ಸ್ವರ್ಣ ಪದಕ ಗೆದ್ದಾಗ ಲಿಯೋನಿಡಸ್ಗೆ 36 ವರ್ಷ. ಆದರೆ, ಮೈಕೆಲ್ಗೆ ಇನ್ನೂ 31 ವರ್ಷವಷ್ಟೇ. ಹೀಗಾಗಿ ಸಾಧನೆಯ ಹಾದಿ ಇನ್ನೂ ಇದೆ. ಆದಾಗ್ಯೂ, ಈ ಒಲಿಂಪಿಕ್ ಬಳಿಕ ಮೈಕೆಲ್ ನಿವೃತ್ತರಾಗುತ್ತಾರೆನ್ನುವ ಸುದ್ದಿ ಚಾಲ್ತಿಯಲ್ಲಿದೆ. ಈ ವಿಷಯ ಏನೇ ಇದ್ದರೂ, ಮೈಕೆಲ್ನ ಸಾಧನೆಯ ಬಗ್ಗೆ ಎರಡು ಮಾತಿಲ್ಲ.

ಖಾಸಗಿ ಬದುಕಿನತ್ತ ನೋಡಿದರೆ, ಮೈಕೆಲ್ ಲೇಖಕನೂ ಹೌದು. ‘Beneath the Surface: My Story (2008)’ ಮತ್ತು No Limits: The Will to Succeed (2009) ಎಂಬ ಎರಡು ಪುಸ್ತಕಗಳನ್ನು ಅವರು ಬರೆದಿದ್ದಾರೆ. 2011ರಿಂದ ಪ್ರೇಮಿಸುತ್ತಿದ್ದ ನಿಕೋಲೆ ಜಾನ್ಸನ್ ಎಂಬಾಕೆಯನ್ನು 2015ರ ಫೆಬ್ರವರಿಯಲ್ಲಿ ವಿವಾಹವಾದರು. ಕಳೆದ ಮೇ 5ರಂದು ಇವರ ದಾಂಪತ್ಯದ ಕುಡಿಯೊಂದು ಅರಳಿದೆ. ಈ ಪುಟ್ಟ ಮಗನ ಹೆಸರು ಬೂಮರ್ ರಾಬರ್ಟ್ ಫೆಲ್ಪ್ಸ್.

Leave a Reply

Your email address will not be published. Required fields are marked *