ನವೋದ್ಯಮಗಳ ಬೆಳೆ !

ಭಾರತದ ಬಹುಪಾಲು ಜನ ಕೃಷಿಯನ್ನೇ ಆದಾಯ ಮೂಲವನ್ನಾಗಿ ನೆಚ್ಚಿಕೊಂಡಿದ್ದಾರೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿವೆ. ವ್ಯವಸ್ಥಿತವಾಗಿ ಕೃಷಿ ಮತ್ತು ಕೃಷಿ ಉತ್ಪನ್ನಗಳ ವಾಣಿಜ್ಯ ವಹಿವಾಟು ನಡೆಯದಿರುವ ಕಾರಣ ಕೃಷಿಕರು ಸಂಕಷ್ಟಕ್ಕೆ ಒಳಗಾಗುತ್ತಿರುವುದು ಸರ್ವವೇದ್ಯ. ಇದೀಗ ನವೋದ್ಯಮಿಗಳು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಒಂದಷ್ಟು ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ.

Vitta-1-Leadಕೃಷಿ ಕ್ಷೇತ್ರ ಎಂದೊಡನೆ ತತ್ಕ್ಷಣ ನೆನಪಿಗೆ ಬರುವುದು ಸಾಂಪ್ರದಾಯಿಕ ಕೃಷಿ ಪದ್ಧತಿ, ಕೃಷಿ ಉತ್ಪನ್ನ ವಿಲೇವಾರಿ ವ್ಯವಸ್ಥೆ. ಸಂಸ್ಕೃರಿತ ಆಹಾರಗಳು ದುಪ್ಪಟ್ಟು ಬೆಲೆಯಲ್ಲಿ ಮಾರಾಟವಾಗುತ್ತಿದ್ದರೆ, ಕಚ್ಚಾ ವಸ್ತು ಅರ್ಥಾತ್ ಕೃಷಿ ಉತ್ಪನ್ನ ಬೆಳೆದ ರೈತ ಮಾತ್ರ ಆ ಬೆಳೆಗೆ ಸಮರ್ಪಕ ಬೆಲೆ ಸಿಗದೆ ಇಂದಿಗೂ ಸಾಲದ ಸುಳಿಯಲ್ಲೇ ಬದುಕು ಸಾಗಿಸುವಂತಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉಳಿದ ಕೈಗಾರಿಕೆಗಳೆಲ್ಲ ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೆ ಕೃಷಿ ಕ್ಷೇತ್ರ ಈ ವಿಷಯದಲ್ಲಿ ಹಿಂದುಳಿದಿದೆ.

ಈ ಎಲ್ಲ ಭಿನ್ನತೆಗಳ ನಡುವೆ ನವೋದ್ಯಮಿಗಳ ಗಮನ ಕೃಷಿಕ್ಷೇತ್ರದ ಕಡೆಗೂ ಹರಿದಿದೆ. ಹೊಸ ಹೊಸ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಹಂಬಲದೊಂದಿಗೆ ಮುನ್ನುಗ್ಗುತ್ತಿರುವ ನವೋದ್ಯಮಿ(ಸ್ಟಾರ್ಟಪ್)ಗಳು ಕೃಷಿ ಕ್ಷೇತ್ರದಲ್ಲೂ ಹುಲುಸಾಗಿ ಬೆಳೆಯುತ್ತಿದ್ದಾರೆ. ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ಗ್ರಾಮೀಣ ಭಾಗಗಳಿಗೂ ಪಸರಿಸತೊಡಗಿರುವುದು ಈ ಬೆಳವಣಿಗೆಗೆ ಕಾರಣ.

‘ಡಿಜಿಟಲ್ ಇಂಡಿಯಾ’ದ ಕನಸು ಗ್ರಾಮೀಣ ಭಾರತಕ್ಕೂ ಈ ಮೂಲಕ ಹರಡುತ್ತಿರುವುದು ಕೂಡ ಒಂದು ಉತ್ತಮ ಬೆಳವಣಿಗೆ ಎನ್ನಬಹುದು. ಹವಾಮಾನ ಮುನ್ಸೂಚನೆ, ಕೃಷಿ ಸಲಹೆ ಮುಂತಾದವುಗಳನ್ನು ಎಸ್ಎಂಎಸ್ಗಳ ಮೂಲಕ ಕೃಷಿಕರಿಗೆ ತಲುಪಿಸುವ ಕಾರ್ಯವನ್ನು ಕೃಷಿ ಇಲಾಖೆಯೂ ಮಾಡುತ್ತಿದೆ. ಇವೆಲ್ಲದರ ಜೊತೆ ನವೋದ್ಯಮಿಗಳು ಕೂಡ ಕೃಷಿಯಲ್ಲಿ ವಿವಿಧ ರೀತಿಯ ತಂತ್ರಜ್ಞಾನ ಬಳಕೆ, ನೀರು ಪೋಲಾಗದಂತೆ ತಡೆಯುವುದು, ಇಳುವರಿ ಹೆಚ್ಚಿಸುವುದಕ್ಕೆ ಅಗತ್ಯ ಕ್ರಮಗಳ ಅಳವಡಿಕೆಯ ಕುರಿತು ರೈತರಲ್ಲಿ ಅರಿವು ಮೂಡಿಸುವಂಥ ಕೆಲಸವನ್ನು ಮಾಡುತ್ತಿದ್ದಾರೆ.

ಭಾರತದ ಕೃಷಿ ಪಾಲು

ಭಾರತದ ಕೃಷಿ ಕ್ಷೇತ್ರ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದ್ದು, ವಾರ್ಷಿಕ 22,70,505 ಕೋಟಿ ರೂಪಾಯಿ ವಹಿವಾಟು ಹೊಂದಿರುವಂಥದ್ದು. ಆದರೆ, ಭಾರತದ ಜಿಡಿಪಿ ಮಟ್ಟಿಗೆ ವಾರ್ಷಿಕವಾಗಿ ಕೃಷಿ ಕ್ಷೇತ್ರದ ಕೊಡುಗೆ ಇಳಿಮುಖವಾಗುತ್ತ ಸಾಗಿದೆ. ಹಲವೆಡೆ ಟ್ರ್ಯಾಕ್ಟರ್, ಟಿಲ್ಲರ್ಗಳಂತಹ ಯಂತ್ರೋಪಕರಣ ಬಳಸುತ್ತಿರುವುದು ಬಿಟ್ಟರೆ ಬಹುತೇಕ ಕೃಷಿಕರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಹೆಚ್ಚಿನ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನೂ ಬಳಸುತ್ತಿದ್ದಾರೆ. ಪರಿಣಾಮ ಕೆಲವೊಮ್ಮೆ ವ್ಯತಿರಿಕ್ತವಾಗಿ ನಷ್ಟ ಉಂಟಾಗುವುದೂ ಹೆಚ್ಚು, ಭೂಮಿಗೂ ಹಾನಿ. ಇವೆಲ್ಲದರ ನಡುವೆ, ಕೃಷಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಇಳುವರಿ ವೃದ್ಧಿಸುವ ಹಾಗೂ ತಂತ್ರಜ್ಞಾನ ಬಳಕೆ ಹೇಗೆ ಎಂಬಿತ್ಯಾದಿ ವಿವರ ನೀಡುವ ಕೆಲಸವನ್ನು ಹಲವು ನವೋದ್ಯಮಿಗಳು ಮಾಡತೊಡಗಿದ್ದಾರೆ. ಇದು ಹೆಚ್ಚಿನ ಪರಿಣಾಮ ಬೀರತೊಡಗಿದ್ದು, ಕೃಷಿಕರ ಬದುಕಿನಲ್ಲೂ ಹೊಸಭರವಸೆ ಹುಟ್ಟುಹಾಕಿದೆ.

ಭಾರತದಲ್ಲಿ ಕೃಷಿ ನವೋದ್ಯಮಗಳು

ಜಿನೋವ್ ಮತ್ತು ನಾಸ್ಕೋಮ್ ಅಂಕಿ ಅಂಶ ಪ್ರಕಾರ ಭಾರತದಲ್ಲಿ ನವೋದ್ಯಮಗಳು ಉತ್ತಮ ರೀತಿಯಲ್ಲಿ ಪ್ರಗತಿಸಾಧಿಸುತ್ತಿವೆ. ಇದುವರೆಗೆ ಒಟ್ಟು 4,400 ನವೋದ್ಯಮಗಳಿದ್ದು, ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಅಮೆರಿಕ 48,000 ನವೋದ್ಯಮಗಳೊಂದಿಗೆ ಮುಂಚೂಣಿಯಲ್ಲಿದ್ದರೆ, 5,000 ನವೋದ್ಯಮಗಳೊಂದಿಗೆ ಬ್ರಿಟನ್ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿರುವ ನವೋದ್ಯಮಗಳ ಪೈಕಿ ಕೃಷಿ ಕ್ಷೇತ್ರದ ನವೋದ್ಯಮಗಳ ಸಂಖ್ಯೆ ಬಹಳ ಕಡಿಮೆ. ಆದಾಗ್ಯೂ ಈ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಒಂದಷ್ಟು ಬೆಳವಣಿಗೆಗಳಂತೂ ಆಗುತ್ತಿವೆ.

ರಾಜ್ಯದಲ್ಲೂ ನವೋದ್ಯಮಗಳು

ನವೋದ್ಯಮಗಳ ಪಾಲಿಗೆ ಕರ್ನಾಟಕ ಆಡುಂಬೊಲವಾಗಿದೆ. ಹೊಸ ಹೊಸ ನವೋದ್ಯಮಗಳ ಆರಂಭಕ್ಕೆ ಸರ್ಕಾರವೂ ಉತ್ತೇಜನ ನೀಡುತ್ತಿದ್ದು, ಕೃಷಿ ಕ್ಷೇತ್ರದಲ್ಲೂ ಒಂದಷ್ಟು ಬದಲಾವಣೆಗೆ ಇದು ಕಾರಣವಾಗಿದೆ. ಕೆಲವೊಂದು ನವೋದ್ಯಮಗಳು ಈಗಾಗಲೇ ಉತ್ತಮ ಪ್ರಗತಿಯನ್ನು ದಾಖಲಿಸಿವೆ. ಫ್ಲೈಬರ್ಡ್ ಇನ್ನೋವೇಷನ್ಸ್, ನೂಬ್ಸೋಲ್, ಕ್ರಾಪ್ಇನ್ ಮುಂತಾದ ನವೋದ್ಯಮಗಳು ಈಗಾಗಲೇ ಕೃಷಿಕರ ಬದುಕಿನ ಜೊತೆಗೆ ಹಾಸುಹೊಕ್ಕಿವೆ.

ಉದಾಹರಣೆಗೆ ಹೇಳುವುದಾದರೆ, ಕ್ರಾಪ್ಇನ್ (cropin.co.in) ಎಂಬ ನವೋದ್ಯಮ ತನ್ನ ಅಪ್ಲಿಕೇಶನ್ಗಳನ್ನು ಅಂದರೆ ತಂತ್ರಜ್ಞಾನವನ್ನು ವಿವಿಧ ಕೃಷಿ ಉತ್ಪಾದನಾ ಸಂಘಟನೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಒದಗಿಸುತ್ತಿದೆ. ಆ ಮೂಲಕ ಕೃಷಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಐದಾರು ವರ್ಷದ ಹಿಂದೆ ಆರಂಭವಾದ ಈ ನವೋದ್ಯಮ, ಈಗಾಗಲೇ ನಾಲ್ಕು ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲೇ ಇದನ್ನು ಹತ್ತು ರಾಜ್ಯಗಳಿಗೆ ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಅಂದಹಾಗೆ, ಜಿಇ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಕೃಷ್ಣಕುಮಾರ್ ಇದರ ಸಂಸ್ಥಾಪಕರು ಹಾಗೂ ಸಿಇಒ.

ಈ ನವೋದ್ಯಮವು ತಳಮಟ್ಟದಲ್ಲಿ ಸಿಕ್ಕ ದತ್ತಾಂಶಗಳನು ಅಂದರೆ ಮಣ್ಣಿನ ಗುಣ, ವಾರ್ಷಿಕ ಮಳೆ, ಹಿಂದಿನ ಬೆಳೆಯ ವಿಧಾನ, ಕೃಷಿ ಭೂಮಿ ಇರುವ ಪರಿಸರ ಎಂಬಿತ್ಯಾದಿ ವಿಷಯಗಳನ್ನು ಬಳಸಿಕೊಂಡು, ಅಲ್ಲಿರುವ ಸಮಸ್ಯೆಗಳನ್ನು ವಿಶ್ಲೇಷಿಸುವ ಕೆಲಸ ಮಾಡುತ್ತದೆ.

ತೋಟಗಾರಿಕೆಯು ಜಗತ್ತಿನ ಅತಿದೊಡ್ಡ ಹಾಗೂ ಅತಿಮುಖ್ಯ ಕೈಗಾರಿಕೆಗಳಲ್ಲೊಂದು. ಆದರೆ, ಮಾಹಿತಿ ತಂತ್ರಜ್ಞಾನ ಕಂಪನಿಗಳ ಅಬ್ಬರದಿಂದಾಗಿ ಇದು ಮರೆಯಾಗಿದೆ. ಕ್ರಾಪ್ಇನ್ ಕಂಪನಿಯು ದತ್ತಾಂಶ ವಿಜ್ಞಾನವನ್ನು ಬಳಸಿಕೊಂಡು ತೋಟಗಾರಿಕೆಗೆ ನೆರವು ನೀಡುವುದಲ್ಲದೆ, ವ್ಯವಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕೆ ಸಹಕರಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ತೀವ್ರ ಬದಲಾವಣೆಗಳಾಗಲಿವೆ. ಈ ಹಿನ್ನೆಲೆಯಲ್ಲಿ ನಮ್ಮ ಕಂಪನಿಯು ಭವಿಷ್ಯದ ಸವಾಲು ಮತ್ತು ಅವಕಾಶಗಳಿಗೆ ಪ್ರತಿಕ್ರಿಯಿಸುವಲ್ಲಿ ಕೃಷಿಕರಿಗೆ ನೆರವಾಗುತ್ತದೆ.

| ಕೃಷ್ಣಕುಮಾರ್,  ಸಿಇಒ ಕ್ರಾಪ್ಇನ್  (ಅಂತರ್ಜಾಲ ತಾಣದಲ್ಲಿ ಹೇಳಿಕೊಂಡಂತೆ)

Vitta-1-A

Leave a Reply

Your email address will not be published. Required fields are marked *