ನೆನಪುಗಳ ಬುತ್ತಿ ಕೊಟ್ಟು ಹೋದ ಪೈಮಾಮ್..

“ಉಮೇಶ್ ಸರ್.. ವಾರದ ಪತ್ರದ ಬಹುಮಾನ ವಿಜೇತರ ಪುಸ್ತಕ ಬಂದಿಲ್ಲ.. ವಿಳಾಸ ಕೊಡಿ, ಅಭಿನಂದನಾ ಪತ್ರಕ್ಕೆ ಸಹಿ ಹಾಕಿಸಿಡುತ್ತೇನೆ. ಪುಸ್ತಕ ಬಂದ ಕೂಡಲೇ ಕೊರಿಯರ್‍ನಲ್ಲಿ ಕಳುಹಿಸಿಬಿಡುತ್ತೇನೆ…’’ ಎಂದು ಮಂಗಳವಾರ(ನ.3) ಸಂಜೆ ಮನೆಗೆ ಹೋಗುವುದಕ್ಕಿಂತ ಮೊದಲು ಹೇಳಿದ್ದರು ಪ್ರೀತಿಯ ಪೈಮಾಮ್.

ಶ್ರೀ ವೆಂಕಟರಾಯ ಶೇಷಗಿರಿ ಪೈ
ಶ್ರೀ ವೆಂಕಟರಾಯ ಶೇಷಗಿರಿ ಪೈ

ಬುಧವಾರ ಮಧ್ಯಾಹ್ನ ಕಚೇರಿಗೆ ಬಂದಾಗ ವಾರದ ಪತ್ರದ ವಿಜೇತರಿಗೆ ಕಳುಹಿಸಬೇಕಾಗಿದ್ದ 10 ಪುಸ್ತಕಗಳು ನನ್ನ ಟೇಬಲ್‍ಗೆ ತಲುಪಿತ್ತು. ಕೂಡಲೇ ಪೈಮಾಮ್ ಕುಳಿತಿದ್ದ ಕುರ್ಚಿ ಕಡೆಗೆ ನೋಡಿದೆ.. ಅಲ್ಲಿ ಕತ್ತಲಿತ್ತು..!
ಸಂಜೆ 6 ಗಂಟೆ ಸಮಯ. ಸಹೋದ್ಯೋಗಿಯಬ್ಬರು ಆಘಾತವಾದವರಂತೆ ಮಾತನಾಡುತ್ತಿರುವುದು ನೋಡಿದೆ. ಏನಾಯ್ತು ಎಂದರೆ, ಅವರು ಕುಳಿತ ಕುರ್ಚಿ ಕಡೆಗೆ ಕೈ ತೋರಿ “ನಮ್ಮ ಪೈಗಳು ಇನ್ನಿಲ್ಲ, ಹೃದಯಾಘಾತವಾಗಿತ್ತಂತೆ.. ಯಾರಿಗೂ ಗೊತ್ತಾಲಿಲ್ಲ ನೋಡ್ರಿ.. ನಂಬೋದಕ್ಕೇ ಆಗ್ತಾ ಇಲ್ಲ’’ ಎಂದರು..
ಇದುವರೆಗೆ ಉದ್ಯೋಗದಲ್ಲಿದ್ದ ಯಾವ ಸಂಸ್ಥೆಯಲ್ಲೂ ಇಂತಹ ಅನುಭವ ಆಗಿರಲಿಲ್ಲ. ಹಾಗಿದ್ದರು ನಮ್ಮ ಹಿರಿಯ ಹಿತೈಷಿ ಪೈಮಾಮ್.. ಹೌದು ನಮ್ಮ ವಿಜಯವಾಣಿ ಪತ್ರಿಕಾ ಕಚೇರಿಯಲ್ಲಿ ಸಂಪಾದಕೀಯ ವಿಭಾಗದ ಕಾರ್ಯದರ್ಶಿಯಾಗಿ ಕೆಲವು ತಿಂಗಳ ಹಿಂದಷ್ಟೇ ಶ್ರೀ ವೆಂಕಟರಾಯ ಶೇಷಗಿರಿ ಪೈಗಳು ಕೆಲಸಕ್ಕೆ ಸೇರಿಕೊಂಡಿದ್ದರು. ಸೇರಿದ ದಿನವೇ ಮುಗುಳ್ನಗುವಿನೊಂದಿಗೆ ಪರಿಚಯ ಮಾಡಿಕೊಂಡ ಅವರು ಎರಡೇ ದಿನದಲ್ಲಿ ಆತ್ಮೀಯತೆ ಬೆಳೆಯಿತು.
ನಾನು ಕುಳಿತುಕೊಳ್ಳುವಲ್ಲಿಂದ ಎಡಕ್ಕೆ ಹತ್ತಡಿ ದೂರದಲ್ಲಿ ಅವರು ಕುಳಿತಿರುತ್ತಿದ್ದರು. ಅವರು ಅಲ್ಲಿ ಆಸೀನರಾದ ಬಳಿಕ ಆ ಜಾಗಕ್ಕೊಂದು ಉತ್ತಮ ಕಳೆ ಬಂದಿತ್ತು. ಒಂದಷ್ಟು ಬದಲಾವಣೆಗಳಾದವು. ಶಿಸ್ತು, ಸಮಯ ಪರಿಪಾಲನೆ, ಅಚ್ಚುಕಟ್ಟಾದ ಕೆಲಸದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದ ಅವರು, ಕಚೇರಿ ಸಿಬ್ಬಂದಿ ಸಮಸ್ಯೆ ಏನೇ ಇದ್ದರೂ ಪ್ರೀತಿಯಿಂದ ಆಲಿಸುತ್ತಿದ್ದರು. ತಮ್ಮ ಪರಿಧಿಯಲ್ಲಿ ಇಲ್ಲದೇ ಹೋದರೂ, ಸಂಬಂಧಪಟ್ಟವರ ಗಮನಕ್ಕೆ ತಂದು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರು.
ದಾಖಲಾತಿಯಲ್ಲೂ ಅಚ್ಚುಕಟ್ಟು, ಇಂತಿಂಥದ್ದಕ್ಕೆ ಎಂದೇ ವಿಷಯವಾರು ಕಡತಗಳನ್ನೂ ಮಾಡಿಕೊಂಡಿದ್ದರು. ನಮ್ಮ ಪತ್ರಿಕೆಯಲ್ಲಿ ಆರಂಭಿಸಿದ್ದ ವಾರದ ಪತ್ರದ ಬಹುಮಾನ ವಿಜೇತರಿಗೆ ಹತ್ತು ಪುಸ್ತಕ ಮತ್ತು ಪ್ರಶಂಸಾ ಪತ್ರವನ್ನು ತಲುಪಿಸುವ ಹೊಣೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಬಹುಮಾನದ ಪ್ರಾಯೋಜಕತ್ವ ಮುಗಿಯುತ್ತಿದ್ದಂತೆ, ಪ್ರಾಯೋಜಕರಿಗೆ ಒಂದು ಕೃತಜ್ಞತಾ ಪತ್ರವನ್ನು ರವಾನಿಸುವ ಕೆಲಸವನ್ನೂ ಮಾಡಿದ್ದರು. ಅಂತಹ ಪತ್ರ ವ್ಯವಹಾರವನ್ನು ದಾಖಲಿಸಿಡಲು ಪ್ರತ್ಯೇಕ ಕಡತವನ್ನೂ ಸಿದ್ಧಪಡಿಸಿದ್ದರು.
ಅದೊಂದು ದಿನ ಸೀದಾ ನನ್ನ ಬಳಿ ಬಂದವರೇ, “ನೀವು ಸ್ವಯಂಸೇವಕರಾ?’’ ಅಂದರು. “ಹೌದು..’’ ಎಂದೆ. ಕೂಡಲೇ ಸಂಘ ಕಾರ್ಯದ ಅನುಭವಗಳನ್ನು ಹಂಚಿಕೊಂಡು ಇನ್ನಷ್ಟು ಆತ್ಮೀಯರಾಗಿಬಿಟ್ಟರು. ಪ್ರತಿ ವಿಷಯವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದವರು ಅವರು. ಎಲ್ಲಿಯೂ, ಯಾವುದೂ ಪೋಲಾಗಬಾರದು ಎಂಬ ಆಶಯ ಹೊಂದಿದ್ದವರು ಪೈಮಾಮ್. ಆ ವಿಷಯವನ್ನೂ ಅವರು ಹಂಚಿಕೊಂಡು, “ನಿಜವಾಗಿಯೂ ಒಂದು ವ್ಯವಸ್ಥೆ ಈಗ ಸಿದ್ಧವಾಗುತ್ತಿದೆ. ಖುಷಿ, ಸಮಾಧಾನ ಇದೆ ಈ ಕೆಲಸ ಮಾಡುವುದರಲ್ಲಿ.. ವಿದ್ಯುತ್ ಸುಮ್ಮನೆ ಪೋಲಾಗುತ್ತಿತ್ತು. ಬೆಳಗ್ಗೆ ಒಂಭತ್ತು ಗಂಟೆಗೇ ಎಲ್ಲ ಟಿವಿಗಳೂ ಆನ್ ಆಗಿರುತ್ತಿದ್ದವು. ಇದನ್ನೆಲ್ಲ ತಡೆದೆ. 1 ಲಕ್ಷ ಚಿಲ್ಲರೆ ಬರುತ್ತಿದ್ದ ವಿದ್ಯುತ್ ಬಿಲ್ 80 ಸಾವಿರ ರೂಪಾಯಿಗೆ ಇಳಿದಿದೆ.. ಈ ರೀತಿ ಚಿಕ್ಕ ಚಿಕ್ಕ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇನ್ನಷ್ಟು ಉಳಿತಾಯ ಮಾಡಬಹುದು’’ ಎಂದಿದ್ದರು.
ಅದೊಂದು ದಿನ ಪೈಮಾಮ್ ಸೀದಾ ಬಳಿ ಬಂದವರೇ, “ಉಮೇಶ್ ಸರ್.. ನೀವು ಆ ರೀತಿ ಕುಳಿತುಕೊಂಡರೆ ಸ್ವಲ್ಪ ದಿನಗಳಲ್ಲೇ ನಿಮಗೆ ಬೆನ್ನು ನೋವು ಬರುವುದು ಗ್ಯಾರೆಂಟಿ. ತಾಳಿ.. ನಿಮಗೊಂದು ಪಿಲ್ಲೊ ಕೊಡ್ತೇನೆ.. ಅದನ್ನು ಬೆನ್ನಿಗಿಟ್ಟುಕೊಳ್ಳಿ..’’ ಎಂದು ಇತ್ತೀಚೆಗೆ ಪರಿಚಿತನಾದ ನನ್ನ ಆರೋಗ್ಯ ಬಗ್ಗೆ ಕಾಳಜಿ ತೋರಿದ್ದ ಪೈಮಾಮ್ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಮಂಥನ ಪುಟದ ವಿಚಾರಗಳನ್ನೂ ಆಗಾಗ್ಗೆ ಚರ್ಚಿಸುತ್ತಿದ್ದೆವು. ಪತ್ರಿಕೆಯ ಪ್ರಸಾರ ಸಂಖ್ಯೆ, ಗುಣಮಟ್ಟ, ಯಾವ್ಯಾವ ಪುಟದಲ್ಲಿ ಏನೇನಾಗಿವೆ? ಸಂಪಾದಕೀಯ ವಿಭಾಗದಲ್ಲಿ ಯಾವ್ಯಾವ ತಂಡದ ಉನ್ನತೀಕರಣಕ್ಕೆ ಏನೇನು ಮಾಡಬೇಕು ಎಂಬುದೂ ಚರ್ಚೆಗೆ ಬರುತ್ತಿತ್ತು. ಬೆಳ್ಳಂಬೆಳಗ್ಗೆ ವಾಟ್ಸ್ ಆ್ಯಪ್‍ಗೆ ಅಂದಿನ ವಿಶೇಷ ಸುದ್ದಿಗಳ ಲಿಂಕ್‍ಗಳನ್ನೂ ಅವರು ಕಳುಹಿಸುತ್ತಿದ್ದರು. ಏರ್‍ಫೋರ್ಸ್, ಬ್ಯಾಂಕ್‍ಗಳ ಆಡಳಿತ ವಿಭಾಗದಲ್ಲಿ ಕೆಲಸ ಮಾಡಿದ್ದ ಪೈಮಾಮ್ ಆ ಅನುಭವದ ಆಧಾರದ ಮೇಲೆ ನನ್ನ ಜತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅವರು ಬಹಳ ಕಾಳಜಿಯಿಂದ ಕೊಟ್ಟ ಪಿಲ್ಲೋ ಬೆನ್ನಿಗೆ ತಾಗುವಾಗ ಅವರದೇ ನೆನಪು ಕಾಡುತ್ತದೆ. ಅವರ ಪ್ರೀತಿಯ ಮಾತುಗಳು ಕಿವಿಯಲ್ಲಿ ಮತ್ತೆ ಮತ್ತೆ ಮೊಳಗುತ್ತಿದೆ.. ಈಗ ಅವರಿಲ್ಲ ಎನ್ನುವುದನ್ನು ಹೇಗೆ ಅರಗಿಸಬೇಕು ಎಂದು ಗೊತ್ತಾಗುತ್ತಿಲ್ಲ.. ಆದರೂ ಅನಿವಾರ್ಯ… ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ.. ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿ ಆ ಭಗವಂತ ಅನುಗ್ರಹಿಸಲಿ..

Leave a Reply

Your email address will not be published. Required fields are marked *