ನೆಟ್ ಲೋಕದಲ್ಲಿ ಬಿರುಗಾಳಿ

ಮುಕ್ತ ಮತ್ತು ಸಮಾನ ಅಂತರ್ಜಾಲ ಸೇವೆ ಅರ್ಥಾತ್ ತಟಸ್ಥ ಜಾಲಸೇವೆ ನಿಯಮ ಜಾರಿಗೆ ಬರಬೇಕೆಂದು ವಿಶ್ವದೆಲ್ಲೆಡೆಯ ನೆಟ್ಟಿಗರ ಬೇಡಿಕೆ. ಟೆಲಿಕಾಂ ಸೇವಾ ಕಂಪನಿಗಳು ಈ ನಿಯಮವನ್ನು ಗಾಳಿಗೆ ತೂರಿ ಸುಲಿಗೆ ಮಾಡುತ್ತಿವೆ ಎಂಬುದು ಗ್ರಾಹಕರ ಕೋಪ. ಈ ವಿದ್ಯಮಾನದ ಅವಲೋಕನ ಇಲ್ಲಿದೆ.

ವಿಜಯವಾಣಿ ಪತ್ರಿಕೆಯ ಏ.೧೪ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ
ವಿಜಯವಾಣಿ ಪತ್ರಿಕೆಯ ಏ.೧೪ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಇಂಟರ್‍ನೆಟ್ ವಲಯದಲ್ಲಿ ಇದೀಗ ಹೆಚ್ಚು ಚರ್ಚೆಗೊಳಗಾಗುತ್ತಿರುವ ವಿಷಯ ತಟಸ್ಥ ಜಾಲಸೇವೆ (net neutrality). ಕಳೆದ ಮೂರು ತಿಂಗಳಿಂದ ಈ ವಿಚಾರ ಭಾರತದಲ್ಲೂ ಚರ್ಚೆಗೀಡಾಗಿದ್ದು, ಇದೀಗ `ಅಂತರ್ಜಾಲ ಉಳಿಸಿ’ ಎಂಬ ಅಭಿಯಾನದ ಸ್ವರೂಪ ಪಡೆದುಕೊಂಡಿದೆ. ಕೆಲ ಟೆಲಿಕಾಂ ಕಂಪನಿಗಳು ಮೌಲ್ಯವರ್ಧಿತ ಸೇವೆಗಳ ಹೆಸರಿನಲ್ಲಿ ಗ್ರಾಹಕರು ಮತ್ತು ಉದಯೋನ್ಮುಖ ಉದ್ಯಮಗಳನ್ನು ಸುಲಿಗೆ ಮಾಡುತ್ತಿದ್ದು, ಇದರಿಂದ ಗ್ರಾಹಕರ ಹಕ್ಕನ್ನು ಉಳಿಸಿಕೊಳ್ಳಬೇಕು ಎಂಬುದು ಈ ಅಭಿಯಾನದ ಉದ್ದೇಶ.

ಸರಳವಾಗಿ ಹೇಳುವುದಾದರೆ, ನೆಟ್ ನ್ಯೂಟ್ರಾಲಿಟಿ ಅಥವಾ ತಟಸ್ಥ ಜಾಲಸೇವೆ ಎಂದರೆ ಯಾವುದೇ ಟೆಲಿಕಾಂ ಆಪರೇಟರ್‍ಗಳು ಅಥವ ಇಂಟರ್‍ನೆಟ್ ಸೇವಾ ಪೂರೈಕೆದಾರರು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡ ಯೋಜನೆ ಅಡಿ ಎಲ್ಲ ಸೇವೆಗಳನ್ನು ಸಮಾನ ರೀತಿಯಲ್ಲಿ, ಸಮಾನವೇಗದಲ್ಲಿ ಮತ್ತು ಮುಕ್ತವಾಗಿ ಒದಗಿಸಬೇಕು. ಉದಾಹರಣೆಗೆ- 90ರ ದಶಕದಲ್ಲಿ ಲ್ಯಾಂಡ್‍ಲೈನ್ ಸಂಪರ್ಕ ನೀಡಿದಾಗ ಅನುಸರಿಸುತ್ತಿದ್ದ ವಿಧಾನ. ಒಮ್ಮೆ ಒಬ್ಬ ಗ್ರಾಹಕನಿಗೆ ದೂರವಾಣಿ ಸಂಪರ್ಕ ಒದಗಿಸಿದರೆ ಆತ ಯಾವುದೇ ದೂರವಾಣಿಗೆ ಅಂದರೆ ಉದ್ಯಮಿಗೆ ಅಥವಾ ವ್ಯಾಪಾರಿ ಅಥವಾ ಸಂಬಂಧಿಕರಿಗೆ ಕರೆ ಮಾಡಬಹುದು. ಸ್ಥಳೀಯ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಕರೆಗಳೆಂದು ವಿಂಗಡಿಸಿ ದರಗಳನ್ನು ವಿಧಿಸಲಾಗುತ್ತದೆ. ಇದೇ ರೀತಿ, ಆನ್‍ಲೈನ್‍ನಲ್ಲಿ ಎಲ್ಲ ಅಂತರ್ಜಾಲ ತಾಣಗಳೂ ಸುಲಭವಾಗಿ ಸಿಗುವಂತಿರಬೇಕು. ಆ ತಾಣಗಳು ತೆರೆದುಕೊಳ್ಳುವ ವೇಗವೂ (ಟೆಲಿಕಾಂ ಕಂಪನಿ/ಇಂಟರ್‍ನೆಟ್ ಸೇವಾ ಪೂರೈಕೆದಾರ ಕಂಪನಿ ಯಾವುದಿದ್ದರೂ) ಒಂದೇ ರೀತಿಯಿರಬೇಕು. ಡಾಟಾ ಶುಲ್ಕ (ಕೆಬಿ/ಎಂಬಿಗೆ ಇಂತಿಷ್ಟು)ಕೂಡ ಸಮನಾಗಿರಬೇಕು.
ಸದ್ಯ ನೆಟ್ ಗ್ರಾಹಕರು ಫೇಸ್‍ಬುಕ್, ವಾಟ್ಸ್‍ಆ್ಯಪ್, ಸ್ಕೈಪ್ ಮೊದಲಾದ ಅಂತರ್ಜಾಲ ಆಧಾರಿತ ಸಂದೇಶ ರವಾನೆ, ಮೊಬೈಲ್ ಕರೆ ಸೇವೆಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಇಂತಹ ಸೇವೆಗಳ ಮೇಲೆ ನಿಯಂತ್ರಣ ಹೇರುವ ಸಲುವಾಗಿ ನಿಯಮ ರೂಪಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಾಗಿದ್ದು ಕಳೆದ ಮಾಸಾಂತ್ಯದಲ್ಲಿ ತಜ್ಞರು ಹಾಗೂ ಬಳಕೆದಾರರಿಂದ ಸಲಹೆಕೋರಿದ್ದು, ಏ.24ರ ಗಡುವು ವಿಧಿಸಿದೆ.
ಸಮಸ್ಯೆ ಇಲ್ಲಿದೆ: ಸದ್ಯ 1885ರ ಭಾರತೀಯ ಟೆಲಿಗ್ರಾಫ್ ಕಾಯ್ದೆ ಅಡಿ ವಿವಿಧ ತಿದ್ದುಪಡಿಗಳೊಂದಿಗೆ ನಿಯಂತ್ರಣ ನಿಯಮ ಚಾಲ್ತಿಯಲ್ಲಿದೆ. ಇಂಟರ್‍ನೆಟ್ ಸೇವಾ ಪೂರೈಕೆದಾರ ಕಂಪನಿಗಳಿಗೆ ಟೆಲಿಕಾಂ ಮಾದರಿ ಪರವಾನಗಿ ಇಲ್ಲ. ಎರಡು ವರ್ಷಗಳ ಹಿಂದೆ ಟ್ರಾಯ್ ಅಧ್ಯಕ್ಷರು ಈ ಕುರಿತು ಸಲಹಾಪತ್ರವನ್ನು ಪ್ರಕಟಿಸಿದ್ದು, ಟೆಲಿಕಾಂ ಕಂಪನಿಗಳು ಹಾಗೂ ಇಂಟರ್‍ನೆಟ್ ಸೇವಾ ಪೂರೈಕೆದಾರ ಕಂಪನಿಗಳು ನೈತಿಕ ಹಾಗೂ ವ್ಯಾವಹಾರಿಕ ಮೌಲ್ಯಗಳಿಗೆ ಧಕ್ಕೆ ಉಂಟಾಗದಂತೆ ಜೊತೆಯಾಗಿ ಗ್ರಾಹಕರಿಗೆ ಸೇವೆ ಒದಗಿಸುವ ಮಾದರಿಯನ್ನು ರೂಪಿಸಬೇಕು ಎಂದಿದ್ದರು. ಆದರೆ, ಅಂಥದ್ದೊಂದು ಸೇವಾ ಪೂರೈಕೆ ಮಾದರಿ ಅಥವಾ ಚೌಕಟ್ಟು ಇನ್ನೂ ರೂಪಿಸಲ್ಪಟ್ಟಿಲ್ಲ.
ಹೀಗಾಗಿಯೇ ಇಂಟರ್‍ನೆಟ್.ಆರ್ಗ್, ಏರ್‍ಟೆಲ್ ವನ್‍ಟಚ್ ಇಂಟರ್‍ನೆಟ್, ಡಾಟಾ ವಿಎಎಸ್ ಮೊದಲಾದ ಗೇಟ್‍ವೇಗಳ ಮೂಲಕ ಅಂತರ್ಜಾಲ ಸೇವೆಯನ್ನು ಒದಗಿಸಲಾಗುತ್ತಿದೆ. ಟೆಲಿಕಾಂ ಕಂಪನಿ ಅಥವಾ ಇಂಟರ್‍ನೆಟ್ ಸೇವಾ ಪೂರೈಕೆದಾರರಿಗೆ ನಿಗದಿತ ಹೆಚ್ಚುವರಿ ಹಣ ಪಾವತಿಸುವ ಕಂಪನಿಗಳ ವೆಬ್‍ಸೈಟ್ ತೆರೆದುಕೊಳ್ಳುವ ವೇಗವನ್ನು ಹೆಚ್ಚಿಸಲಾಗುತ್ತದೆ. ಅವುಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಮುತುವರ್ಜಿಯಿಂದ ಮಾಡಲಾಗುತ್ತದೆ. ಉಳಿದ ವೆಬ್‍ಸೈಟ್‍ಗಳನ್ನು ಕಡೆಗಣಿಸಲಾಗುತ್ತದೆ. ಕೆಲವೊಂದು ಜಾಲತಾಣಗಳು ಕೆಲವೊಂದು ಟೆಲಿಕಾಂ/ಇಂಟರ್‍ನೆಟ್ ಸೇವಾ ಪೂರೈಕೆದಾರರ ಸೇವೆ ಅಡಿ ತೆರೆದುಕೊಳ್ಳುವುದೇ ಇಲ್ಲ. ಇನ್ನು ಕೆಲವು ತಾಣಗಳನ್ನು ಕಂಪನಿಗಳು ಮೌಲ್ಯವರ್ಧಿತ ಸೇವೆಗಳ ಮೂಲಕ ಗ್ರಾಹಕರಿಗೆ ಪರಿಚಯಿಸುತ್ತವೆ. ಗ್ರಾಹಕರು ಹೆಚ್ಚುವರಿ ಹಣಪಾವತಿಸಿದರಷ್ಟೇ ಆ ತಾಣಗಳ ಸೇವೆ ಲಭ್ಯವಾಗುತ್ತದೆ.
ನಮ್ಮ ದೇಶದಲ್ಲಿ ನೆಟ್ ನ್ಯೂಟ್ರಾಲಿಟಿ ಕುರಿತು ಯಾವ ನಿಯಮವೂ ಇಲ್ಲ. ಈ ಪರಿಕಲ್ಪನೆ ಇಲ್ಲಿಗೆ ಹೊಸದು. ಇಂಟರ್‍ನೆಟ್ ಸೇವಾ ಪೂರೈಕೆದಾರರಿಗೆ ವಿಶೇಷ ಕಾನೂನು, ನಿಯಮಗಳ ಚೌಕಟ್ಟು ಇಲ್ಲದಿರುವುದರಿಂದ ಗ್ರಾಹಕರು ಮತ್ತು ಉದಯೋನ್ಮುಖ ಉದ್ದಿಮೆಗಳು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಇದೆ. 2006ರಲ್ಲಿ ಈ ವಿಷಯದ ಬಗ್ಗೆ ಚರ್ಚೆ ಆಗಿದ್ದು ಬಿಟ್ಟರೆ ಅದು ಕಾನೂನು ರೂಪ ಪಡೆದುಕೊಂಡಿಲ್ಲ.
ನೆಟ್ ನ್ಯೂಟ್ರಾಲಿಟಿಗೆ ಏಕಿಷ್ಟು ಪ್ರಾಮುಖ್ಯತೆ?: ಯಾವುದೇ ಅಧಿಕೃತ ಜಾಲತಾಣಗಳನ್ನು ಅಂತರ್ಜಾಲ ಸೇವಾ ಪೂರೈಕೆದಾರರ ಹಸ್ತಕ್ಷೇಪವಿಲ್ಲದೇ ಬಳಕೆದಾರರು ನೇರವಾಗಿ ಬಳಸುವುದಕ್ಕೆ ಅನುವು ಮಾಡಿಕೊಡುತ್ತದೆ. ಯಾರು ಬೇಕಾದರೂ ಉಚಿತವಾಗಿ ವೆಬ್‍ಸೈಟ್ ರಚಿಸಿಕೊಂಡು ಸ್ಪರ್ಧೆ ನೀಡಬಹುದು.
ನೆಟ್ ನ್ಯೂಟ್ರಾಲಿಟಿ ಇಲ್ಲದಿದ್ದರೆ, ಇಂಟರ್‍ನೆಟ್ ಸೇವಾ ಪೂರೈಕೆದಾರರು ತಮ್ಮ ಲಾಭಕ್ಕಾಗಿ ಅಂತರ್ಜಾಲ ತಾಣಗಳ ಟ್ರಾಫಿಕ್(ಬಳಕೆದಾರರ ದಟ್ಟಣೆ)ನ್ನು ಬಳಸುವುದಕ್ಕೆ ಅವಕಾಶವಿದೆ. ಇದರಿಂದಾಗಿ ಏಕಸ್ವಾಮ್ಯ ಸಾಧಿಸುವ ಕಂಪನಿಗಳು ಗ್ರಾಹಕರಿಗೆ ಕೆಲವೇ ವೆಬ್‍ತಾಣಗಳನ್ನು ಉಚಿತವಾಗಿ ನೀಡುವ ಸಾಧ್ಯತೆಗಳಿರುತ್ತವೆ. ಈ ರೀತಿ ಆದರೆ, ಉದ್ದಿಮೆಗಳಿಗೂ ಹೊಡೆತ ಬೀಳಬಹುದು.
ಏರ್‍ಟೆಲ್ ಜೀರೋ ವಿವಾದ: ಕಳೆದ ಸೋಮವಾರ ಏರ್‍ಟೆಲ್ ಕಂಪನಿ ತನ್ನ ಗ್ರಾಹಕರಿಗೆ ಏರ್‍ಟೆಲ್ ಜೀರೋ ಎಂಬ ಮೌಲ್ಯವರ್ಧಿತ ಸೇವೆಯನ್ನು ಪರಿಚಯಿಸಿತು. ಇದು ಮೇಲ್ನೋಟಕ್ಕೆ ಸಾಮಾನ್ಯ ಮೌಲ್ಯವರ್ಧಿತ ಸೇವೆಯಂತೆ ಕಂಡುಬಂದರೂ, ಈ ಸೇವೆಯಲ್ಲಿ ಆ್ಯಪ್ ಡೆವಲಪರ್‍ಗಳು ಮತ್ತು ಸೇವಾ ಪೂರೈಕೆದಾರರು ಹಣಪಾವತಿಸಿದರಷ್ಟೇ ಆ ಟೆಲಿಕಾಂ ಕಂಪನಿಯ ಗ್ರಾಹಕರಿಗೆ ಅವರ ಸೇವೆ ಉಚಿತವಾಗಿ ಲಭ್ಯವಾಗುತ್ತದೆ. ಏರ್‍ಟೆಲ್ ಜೀರೋ ಪ್ಯಾಕೇಜ್‍ನಲ್ಲಿ ಫ್ಲಿಪ್‍ಕಾರ್ಟ್ ಸೇರಿದ್ದು, ಗ್ರಾಹಕರು ಉಚಿತವಾಗಿ ಫ್ಲಿಪ್‍ಕಾರ್ಟ್‍ನ ಆ್ಯಪ್ ಬಳಸಬಹುದು. ಈ ಪ್ಯಾಕೇಜ್ ತೆಗೆದುಕೊಳ್ಳದವರು ಇದರ ಬಳಕೆಗಾಗಿ ಡಾಟಾ ಯೂಸೇಜ್ ದರವನ್ನು ಪಾವತಿಸಬೇಕಾಗುತ್ತದೆ. ಇದು ನೆಟ್ ನ್ಯೂಟ್ರಾಲಿಟಿಯ ಉಲ್ಲಂಘನೆ ಎಂಬ ಕೂಗು ಎದ್ದಿದ್ದು, ಕಂಪನಿ ಇದನ್ನು ಅಲ್ಲಗಳೆದಿದೆ. ಫ್ಲಿಪ್‍ಕಾರ್ಟ್ ಕೂಡಾ ಇದನ್ನು ತಿರಸ್ಕರಿಸಿದೆ. ಈ ಪ್ರಕರಣದ ಬಗ್ಗೆ ಗಮನಹರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
——

ಲಕ್ಷಕ್ಕೂ ಅಧಿಕ ದೂರು

ನೆಟ್‍ನ್ಯೂಟ್ರಾಲಿಟಿ ಪರಿಕಲ್ಪನೆ ಭಾರತದಲ್ಲಿ ಸಾಕಾರಗೊಳ್ಳುವುದಕ್ಕಾಗಿ ಇಂಟರ್‍ನೆಟ್ ಬಳಕೆದಾರರು ಒಂದಾಗಿದ್ದಾರೆ.net neutrality, savetheinternet, change.org  ಮೂಲಕ ದೂರುಗಳನ್ನು ಸಲ್ಲಿಸತೊಡಗಿದ್ದಾರೆ. ಎರಡೇ ದಿನದಲ್ಲಿ ಲಕ್ಷಕ್ಕಿಂತ ಅಧಿಕ ದೂರುಗಳು ಟ್ರಾಯ್‍ಗೆ ಇ-ಮೇಲ್ ಮೂಲಕ ರವಾನೆಯಾಗಿವೆ. ಈ ಬೆಳವಣಿಗೆ `ಅಂತರ್ಜಾಲ ಉಳಿಸಿ’ ಅಭಿಯಾನಕ್ಕೆ ಪೂರಕವಾಗಿದೆ.

ಭಾರತದಲ್ಲಿ ತಟಸ್ಥ ಜಾಲಸೇವೆಯ ಹಾದಿ

2006 – ಟೆಲಿಕಾಂ ಕಂಪನಿಗಳು ಹಾಗೂ ತಜ್ಞರಿಂದ ನೆಟ್ ನ್ಯೂಟ್ರಾಲಿಟಿ ನಿಯಂತ್ರಣದ ಕುರಿತು ಸಲಹೆ ಆಹ್ವಾನಿಸಿ ಪ್ರಕಟಣೆ ನೀಡಿದ ಟ್ರಾಯ್.
2012 – ಯೂಟ್ಯೂಬ್, ಗೂಗಲ್, ಫೇಸ್‍ಬುಕ್ ಮತ್ತು ಇತರೆ ಕಂಪನಿಗಳು ಟೆಲಿಕಾಂ ಕಂಪನಿಗಳಿಗೆ ಸೇವಾಶುಲ್ಕ ಪಾವತಿಸಬೇಕು. ಹಾಗಿದ್ದರೆ ಮಾತ್ರ ಅವುಗಳ ಬಳಕೆದಾರರಿಗೆ ಉಚಿತ ಸೇವೆ ಒದಗಿಸಬಹುದು ಎಂಬ ಪ್ರಸ್ತಾವನೆಯನ್ನು ಮುಂದಿರಿಸಿದ ಏರ್‍ಟೆಲ್ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್.
2014 ಫೆಬ್ರವರಿ– ವಾಟ್ಸ್‍ಆ್ಯಪ್, ಸ್ಕೈಪ್, ಲೈನ್ ಮೊದಲಾದ ಆ್ಯಪ್‍ಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬ ಪ್ರಸ್ತಾವನೆ ಸಲ್ಲಿಸಿದ ಏರ್‍ಟೆಲ್. ಇದನ್ನು ತಿರಸ್ಕರಿಸಿದ ಟ್ರಾಯ್.
2015 ಮಾರ್ಚ್ 27– `ಕನ್ಸಲ್ಟೇಶನ್ ಪೇಪರ್ ಆನ್ ರೆಗ್ಯುಲೇಟರಿ ಫ್ರೇಮ್‍ವರ್ಕ್ ಫಾರ್ ಓವರ್ ದ ಟಾಪ್ ಸರ್ವೀಸಸ್’ ಪ್ರಕಟಿಸಿದ ಟ್ರಾಯ್. 117 ಪುಟಗಳ ಈ ದಾಖಲೆಯಲ್ಲಿ ನೆಟ್ ನ್ಯೂಟ್ರಾಲಿಟಿ ವಿಷಯ ಪ್ರಸ್ತಾಪಿಸಲ್ಪಟ್ಟಿದೆ.
2015 ಏಪ್ರಿಲ್ 6– ಏರ್‍ಟೆಲ್ ಕಂಪನಿ ಏರ್‍ಟೆಲ್ ಝೀರೊ ಎಂಬ ಉತ್ಪನ್ನದ ಮೂಲಕ ಮುಕ್ತ ಮಾರುಕಟ್ಟೆ ವೇದಿಕೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಇದರಿಂದ ಇಂಟರ್‍ನೆಟ್ ಸೇವೆಯನ್ನು ಎರಡಾಗಿ ವಿಭಜಿಸಿದಂತಾಗಿದ್ದು, ಕೆಲವು ಗ್ರಾಹಕರಿಗೆ ಉಚಿತವಾಗಿ ಹಾಗೂ ಮಿಕ್ಕವರಿಗೆ ಪಾವತಿ ಮೂಲಕ ಇಂಟರ್‍ನೆಟ್ ಸೇವೆ ಒದಗಿಸುವಂತಾಗಿದೆ. ಈ ಪ್ರಕ್ರಿಯೆ ತಟಸ್ಥ ಜಾಲಸೇವಾ ನಿಯಮಕ್ಕೆ ವಿರುದ್ಧವಾದುದು ಎಂಬ ಆರೋಪ ಕೇಳಿಬಂದಿದೆ.
ನೆಟ್ ನ್ಯೂಟ್ರಾಲಿಟಿ ಎಲ್ಲೆಲ್ಲಿ?: ಕೆನಡಾ, ಅಮೆರಿಕ, ಬ್ರಿಟನ್, ನೆದರ್‍ಲೆಂಡ್‍ಗಳಲ್ಲಿ ಹಂತಹಂತವಾಗಿ ಅನುಷ್ಠಾನಗೊಳ್ಳುತ್ತಿದೆ.

Leave a Reply

Your email address will not be published. Required fields are marked *