ಪ್ರಚಾರ ನಿಪುಣ ಪಿಕೆ

prashanth kishorಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ಜೆಡಿಯು, ಆರ್​ಜೆಡಿ ಮತ್ತು ಕಾಂಗ್ರೆಸ್​ನ ಮಹಾಮೈತ್ರಿಕೂಟ ಗೆಲುವು ಸಾಧಿಸಿದಾಗ ಅತಿಹೆಚ್ಚು ಸ್ಥಾನಗಳಿಸಿದ ಆರ್​ಜೆಡಿ ನಾಯಕ ಲಾಲು ಪ್ರಸಾದ್ ಸರ್ಕಾರದ ಮಟ್ಟಿಗೆ ‘ಕಿಂಗ್​ವೆುೕಕರ್’ ಎನಿಸಿಕೊಂಡರು. ಆದರೆ, ಚುನಾವಣಾ ತಂತ್ರಗಾರಿಕೆ ವಿಷಯದಲ್ಲಿ ‘ಕಿಂಗ್​ವೆುೕಕರ್’ ಪಟ್ಟ ದಕ್ಕಿದ್ದು ಮತ್ತೊಬ್ಬ ಬಿಹಾರಿ ಯುವಕನಿಗೆ. ಆತ ಬೇರಾರೂ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಬೆನ್ನಿಗೆ ನಿಂತು ಅಮಿತ್ ಷಾ ಜೊತೆಗೂಡಿ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್. ಹೀಗಾಗಿ ಕಳೆದ ವಾರ ಸುದ್ದಿಯಲ್ಲಿದ್ದವರು ‘ಪಿಕೆ’ ಅಲಿಯಾಸ್ ಪ್ರಶಾಂತ್ ಕಿಶೋರ್.

ಬಿಹಾರ ಚುನಾವಣೆ ಘೊಷಣೆಗೆ ಕೆಲವು ತಿಂಗಳುಗಳ ಮೊದಲೇ ಜೂನ್ 2ರಂದು ಪ್ರಶಾಂತ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತಬಳಗಕ್ಕೆ ಸೇರ್ಪಡೆಯಾಗಿದ್ದರು. ಬೆನ್ನಲ್ಲೇ, ಪಟನಾದ 7 ಸ್ಟ್ರಾಂಡ್ ರೋಡ್​ನ ಒಂದು ಬಂಗಲೆಯಲ್ಲಿ ಅದಾಗಲೇ ನಿತೀಶ್ ಪ್ರಚಾರಕ್ಕೆ ‘ವಾರ್ ರೂಮ್ ಸಿದ್ಧವಾಗಿತ್ತು. ಅಲ್ಲಿ ನಿತೀಶ್ ಪೋಸ್ಟರ್​ಗಳು, ಪ್ಲೇಟೊ ಮತ್ತು ಮೈಕಲ್ ಪೋರ್ಟರ್ ಅವರ ನುಡಿಮುತ್ತುಗಳು ರಾರಾಜಿಸುತ್ತಿದ್ದವು. ಗೋಡೆ ಮೇಲಿನ ಟಿವಿಗಳಲ್ಲಿ ಎಲ್ಲ ರಾಜ್ಯದ ನ್ಯೂಸ್​ಚಾನಲ್​ಗಳ ಲೈವ್ ಅಪ್​ಡೇಟ್​ಗಳು ಕಾಣಿಸುತ್ತಿದ್ದವು. ಅಲ್ಲಿ 40-50 ಸದಸ್ಯರ ತಂಡ ಹಗಲಿರುಳೆನ್ನದೆ ಪ್ರಚಾರ ತಂತ್ರ ಹೆಣೆಯುತ್ತ ನಿತೀಶ್​ಗೆ ಪ್ರಚಾರ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತಿತ್ತು. ಅದರ ಸಾರಥ್ಯ ವಹಿಸಿದ್ದು ಪ್ರಶಾಂತ್.

ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ  ಎನ್ನುವ ಚುನಾವಣಾ ನಿರ್ವಹಣಾ ಕಂಪನಿಯನ್ನು ಸ್ಥಾಪಿಸಿ, ಅದರ ಮೂಲಕ ಈ ಎಲ್ಲ ಕೆಲಸವನ್ನು ಪ್ರಶಾಂತ್ ನಿರ್ವಹಿಸಿದ್ದರು. ಆರಂಭಿಕ ಹಂತದಲ್ಲಿ 40-50 ಸದಸ್ಯರಿದ್ದ ತಂಡ ಕೊನೆಗೆ 300ರ ಗಡಿ ದಾಟಿತ್ತು. ಇದರಲ್ಲಿ ಶೇಕಡ 70ರಷ್ಟು ಸದಸ್ಯರು ಐಐಟಿ ಪದವೀಧರರಾಗಿದ್ದು, ಕೆಲವರು ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ತೊರೆದು ಪ್ರಚಾರಕ್ಕೆ ಆಗಮಿಸಿದರೆ, ಇನ್ನು ಕೆಲವರು ದೀರ್ಘ ರಜೆ ಹಾಕಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹಲವರು ತಮ್ಮದೆ ಆದ ಕಾರಣಗಳನ್ನು ಮುಂದಿಟ್ಟು ಸ್ವಯಂಪ್ರೇರಣೆಯಿಂದ ಸೇರ್ಪಡೆಗೊಂಡವರು. ಈ ತಂಡದಲ್ಲಿದ್ದ ಹಲವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಪರಿಣಾಮ ಪ್ರಚಾರ ಕಾರ್ಯಕ್ಕೆ ಸೃಜನಶೀಲತೆ ಸ್ಪರ್ಶ ಸಿಕ್ಕಿತು. ‘ಫಿರ್ ಏಕ್ ಬಾರ್ ನಿತೀಶ್ ಕುಮಾರ್’ ಘೊಷಣೆ ಮೊಳಗಿತು. ಫೇಸ್​ಬುಕ್, ಟ್ವಿಟರ್, ರಸ್ತೆ ಬದಿ ಹೋರ್ಡಿಂಗ್​ಗಳಲ್ಲೂ ಅದು ರಾರಾಜಿಸಿತು. ಇದಲ್ಲದೇ, ‘ಹರ್ ಘರ್ ದಸ್ತಕ್’ ಪ್ರಚಾರ ತಂತ್ರದಡಿ ಬಿಹಾರದವರೇ ಆದ ನಿತೀಶರನ್ನು ಬೆಂಬಲಿಸುವಂತೆ ಮನೆ ಮನೆಗೆ ಪ್ರಚಾರ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಡಿಎನ್​ಎ ಹೇಳಿಕೆಯನ್ನು ಬಿಹಾರಕ್ಕಾದ ಅವಮಾನವೆಂಬಂತೆ ಬಿಂಬಿಸಿದ್ದು ಎಲ್ಲವೂ ಈ ತಂಡದ ಪ್ರಚಾರ ತಂತ್ರಗಾರಿಕೆಯ ಭಾಗವೇ. ಮಹಾಮೈತ್ರಿ ಗೆಲುವಿನ ಬಳಿಕ ನಿತೀಶರನ್ನು ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಿಸಿದ ಕೀರ್ತಿಯಲ್ಲಿ ಪ್ರಶಾಂತ್ ಕಿಶೋರ್​ಗೂ ಪಾಲು ದಕ್ಕಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವಲ್ಲಿನ ಶ್ರಮದ ನಂತರ ಇದು ಅವರ ಪಾಲಿನ ಎರಡನೇ ಯಶಸ್ಸು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಹೀಗಾಗಿ ಚುನಾವಣಾ ಮಾರುಕಟ್ಟೆಯಲ್ಲಿ 37 ವರ್ಷದ ಪ್ರಶಾಂತ್​ಗೆ ಈಗ ಎಲ್ಲಿಲ್ಲದ ಬೇಡಿಕೆ. ಚುನಾವಣಾ ತಂತ್ರಗಾರಿಕೆಯನ್ನೇ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡ ಆ ಕ್ಷಣದ ಕಥೆ ಕೊಂಚ ಸಾಹಸಮಯವೇ ಆಗಿತ್ತು. ಅವರ ತಂದೆ ಬಿಹಾರದಲ್ಲಿ ವೈದ್ಯರಾಗಿ ನಿವೃತ್ತಿ ಪಡೆದವರು. ಪ್ರಶಾಂತ್ 2011ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ಅದಕ್ಕೆ ಮೊದಲು ಅವರು 10 ವರ್ಷ ಕಾಲ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಇದರಲ್ಲಿ ಒಂದೂವರೆ ವರ್ಷ ಬಿಹಾರ ಅವರ ಕಾರ್ಯಕ್ಷೇತ್ರವಾಗಿತ್ತು. ರಾಜೀನಾಮೆ ಕೊಡುವ ಸಂದರ್ಭದಲ್ಲಿ ಅವರು ಆಫ್ರಿಕಾದಲ್ಲಿದ್ದರು.

ಇದಾಗಿ ಭಾರತಕ್ಕೆ ಬಂದ ಸಂದರ್ಭದಲ್ಲಿ ಪ್ರಶಾಂತ್ ಭಾರತದ ಆರೋಗ್ಯ ಕ್ಷೇತ್ರದ ಕುರಿತು ಅನೇಕ ದಾಖಲೆಗಳನ್ನು ಕಲೆ ಹಾಕಿ, ಅನೇಕ ವರದಿಗಳನ್ನು ಪ್ರಧಾನಿ ಕಚೇರಿಗೆ ರವಾನಿಸಿದ್ದರು. ಅದರಲ್ಲಿ ಗುಜರಾತ್​ಗೆ ಸಂಬಂಧಿಸಿದ ವಿವರಗಳೂ ಇದ್ದವು. ಆದರೆ, ಅಂದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಅವುಗಳನ್ನು ನಿರ್ಲಕ್ಷಿಸಿದ್ದರು. ನಂತರ ಪ್ರಶಾಂತ್ ಭೇಟಿಯಾಗಿದ್ದು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು. ಆಗ 2012ರ ಗುಜರಾತ್ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗಿತ್ತು. ಆ ಸಂದರ್ಭದಲ್ಲಿ ಮೋದಿ ಪ್ರಚಾರಕ್ಕೆ ಹೈಟೆಕ್ ಸ್ಪರ್ಶಕೊಟ್ಟು 3ಡಿ ಹಾಲೋಗ್ರಾಂ ಭಾಷಣವನ್ನು ಭಾರತೀಯರಿಗೆ ಪರಿಚಯಿಸಿದರು. ಈ ಬೆಳವಣಿಗೆ ಮೋದಿಯನ್ನು ದೇಶದ ಮುಂದಿನ ಪ್ರಧಾನಮಂತ್ರಿಯನ್ನಾಗಿ ಬಿಂಬಿಸುವಲ್ಲಿ ಒಂದಿಷ್ಟು ಪರಿಣಾಮ ಬೀರಿತು. ಚುನಾವಣಾ ಪ್ರಚಾರದ ತಂತ್ರಗಾರಿಕೆ ಮಾಡುವ ಸಲುವಾಗಿ ಉತ್ತಮ ವೇತನ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಬಂದಿದ್ದು ಪ್ರಶಾಂತರ ತಂದೆಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ಅವರು ಆರು ತಿಂಗಳ ಕಾಲ ಮಗನ ಬಳಿ ಮಾತನಾಡಿರಲಿಲ್ಲವಂತೆ!

ಗುಜರಾತ್ ಚುನಾವಣೆ ಮುಗಿದ ಕೆಲವೇ ತಿಂಗಳುಗಳ ಬಳಿಕ ಮೋದಿ ಅವರನ್ನು ಬಿಜೆಪಿ ನಾಯಕರು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾರಂಭಿಸಿದರು. 2013ರ ಜೂನ್​ನಲ್ಲಿ ಪಕ್ಷ ಅಧಿಕೃತವಾಗಿ ಈ ವಿಷಯವನ್ನು ಘೊಷಿಸಿತು ಕೂಡ. ಸೆಂಟರ್ ಫಾರ್ ಅಕೌಂಟೆಬಲ್ ಗವರ್ನೆನ್ಸ್ (ಸಿಎಜಿ) ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಪ್ರಶಾಂತ್, 2014ರ ಚುನಾವಣೆಯ ಪ್ರಚಾರದ ತಂತ್ರಗಾರಿಕೆ ರೂಪಿಸಿದರು. ಚಾಯ್ಪೇ ಚರ್ಚಾ ಮತ್ತಿತರ ತಂತ್ರಗಳು ಜನಮನಗೆದ್ದವು. ಸ್ಪಷ್ಟ ಬಹುಮತದೊಂದಿಗೆ ಮೋದಿಯೂ ಪ್ರಧಾನಿ ಆದರು.

ಈ ಸಂದರ್ಭದಲ್ಲಿ ಪ್ರಶಾಂತ್ ಮತ್ತು ತಂಡ ಕೇಂದ್ರ ಸರ್ಕಾರದ ಅಧಿಕೃತ ಭಾಗವಾಗಿ ಕೆಲಸಮಾಡಲು ಬಯಸಿತ್ತು. ಅದಾಗಲೇ ಮೂರು ವರ್ಷ ಅವರ ಕಾರ್ಯವೈಖರಿ ಕಂಡಿದ್ದ ಅಮಿತ್ ಷಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಗುಜರಾತ್​ನಲ್ಲಿ ಪ್ರಶಾಂತ್ ಅಕ್ಷರಶಃ ಸಿಎಂ ನಿವಾಸದಲ್ಲೇ ಠಿಕಾಣಿ ಹೂಡಿದ್ದರು. ಅವರು ಹೇಳಿದ್ದನ್ನು ಪಕ್ಷದ ನಾಯಕರು ಅನುಸರಿಸುವಂತಾಗಿತ್ತು. ಈ ತಂಡ ಸರ್ಕಾರದ ಜತೆ ಸೇರಿದರೆ ಪಕ್ಷಕ್ಕೆ ಸಮಾನಾಂತರವಾಗಿ ಬೆಳೆಯಬಹುದೆಂಬುದು ಖಚಿತವಾಗಿತ್ತು. ಪಕ್ಷದ ವರಿಷ್ಠರಿಗದು ಬೇಕಾಗಿರಲಿಲ್ಲ ಎಂಬ ಮಾತಿದೆ. ಇದೇ ವಿಷಯಕ್ಕೆ ಅಮಿತ್ ಷಾ ಜತೆಗೆ ಮುನಿಸಿಕೊಂಡು ಪ್ರಶಾಂತ್ ಬಿಜೆಪಿಯಿಂದ ದೂರ ಉಳಿದರಲ್ಲದೇ, ಅವರಿಗೆ ಪಾಠ ಕಲಿಸಲು ಬಿಹಾರದಲ್ಲಿ ನಿತೀಶ್ ಪರವಾಗಿ ಕೆಲಸ ಮಾಡಿದರು ಎಂಬ ವಿಶ್ಲೇಷಣೆಯೂ ಚಾಲ್ತಿಯಲ್ಲಿದೆ.

ಅಸ್ಸಾಮಿ ಹುಡುಗಿಯನ್ನು ಮದುವೆಯಾಗಿರುವ ಪ್ರಶಾಂತ್​ಗೆ ಒಬ್ಬ ಮಗಳಿದ್ದಾಳೆ. ಸದ್ಯ, ‘ಎಲ್ಲ ರಾಜ್ಯಗಳಿಗೂ ‘ಮೋದಿ ಸಿದ್ಧಾಂತ’ ಲಾಗೂ ಆಗಲ್ಲ’ ಎನ್ನುತ್ತಿರುವ ಪ್ರಶಾಂತ್ ಚುನಾವಣಾ ಪ್ರಚಾರಕ್ಕೆ ವೃತ್ತಿಸ್ಪರ್ಶ ನೀಡಿದ್ದರಿಂದ ರಾಜಕೀಯ ಪಕ್ಷಗಳ ಪಾಲಿನ ‘ಸಾರಥಿ’ ಎನಿಸಿಕೊಂಡಿದ್ದಾರೆ.

ಮುಂದಿನ ವರ್ಷ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಇದೆ. ಹೀಗಾಗಿ ರಾಹುಲ್ ಗಾಂಧಿ, ಮಮತಾ ಮತ್ತಿತರೆ ನಾಯಕರು ಪ್ರಶಾಂತ್ ಕಿಶೋರ್ ಮನೆ ಕದ ತಟ್ಟಿದ್ದಾರೆಂಬ ಸುದ್ದಿ ಕೇಳಿಬಂದಿದೆ. ಭಿನ್ನ ರಾಜಕೀಯ ಪರಿಸ್ಥಿತಿ ಇರುವ ನಮ್ಮ ದೇಶದಲ್ಲಿ ವಿಭಿನ್ನ ತಂತ್ರಗಳನ್ನು ಹೊಸೆಯುವುದು ಪ್ರಶಾಂತ್​ಗೆ ಸಾಧ್ಯವಾಗುತ್ತಾ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *