`ಪ್ರಜಾಸತ್ತಾತ್ಮಕ’ ಸರ್ವಾಧಿಕಾರಿ

Emomali_Rahmon
ಎಮೋಮಲಿ ರಾಹ್‍ಮೋನ್, ತಜಕಿಸ್ತಾನದ ಅಧ್ಯಕ್ಷ

ಪ್ರಜಾಪ್ರಭುತ್ವ ದೇಶ ಎಂದಾಗ ಸಾಮಾನ್ಯವಾಗಿ ಮೂಡುವುದು ಸಹಜವಾಗಿಯೇ ನಮ್ಮ ಭಾರತದ ಪರಿಕಲ್ಪನೆ. ಇಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ದೇಶವನ್ನಾಳುವುದು ವಾಡಿಕೆ. ಆದರೆ, ಸೋವಿಯತ್ ಯೂನಿಯನ್(ಯುಎಸ್‍ಎಸ್‍ಆರ್)ನ ಭಾಗವಾಗಿದ್ದ ತಜಕಿಸ್ತಾನದ ಕಥೆ ಹೀಗಿಲ್ಲ. ಸೋವಿಯತ್ ಯೂನಿಯನ್ ಛಿದ್ರವಾಗಿ, ಅಂತರ್ಯುದ್ಧ ನಡೆದು 1992ರಲ್ಲಿ ಆ ಪುಟ್ಟ ದೇಶ(1.43 ಲಕ್ಷ ಚ.ಕಿ.ಮೀ. -ಗಾತ್ರದಲ್ಲಿ ನಮ್ಮ ಕರ್ನಾಟಕ(1.92 ಲಕ್ಷ ಚ.ಕಿ.ಮೀ.)ಕ್ಕಿಂತಲೂ ಚಿಕ್ಕದು) ಸ್ವತಂತ್ರವಾದ ಬಳಿಕ ಅಧ್ಯಕ್ಷರಾಗಿ ಅಧಿಕಾರ ಹಿಡಿದವರೇ ಎಮೋಮಲಿ ರಾಹ್‍ಮೋನ್. ಅಂದಿನಿಂದ ಇಂದಿನವರೆಗೂ ಅಷ್ಟೇ ಅಲ್ಲ ಇನ್ನು ಮುಂದೆಯೂ ಅವರೇ ಅಧ್ಯಕ್ಷರಾಗಿ ಮುಂದುವರಿಯಲು ಜನಾದೇಶವನ್ನೂ ಪಡೆದಿದ್ದಾರೆ. ಇತ್ತೀಚೆಗೆ, ರಕ್ತಸಂಬಂಧಿಗಳ ನಡುವಿನ ವಿವಾಹಕ್ಕೆ ಕಡಿವಾಣ ಹಾಕುವ ಕಾನೂನನ್ನು ಜಾರಿಗೊಳಿಸಿದ್ದಾರೆ. ಸುದ್ದಿ/ಅಂಕಣಗಳಲ್ಲಿ ಜನಸಾಮಾನ್ಯರಿಗೆ ಪರಿಚಯವೇ ಇಲ್ಲದ ಪದಗಳನ್ನು ಬಳಸುವ ಪತ್ರಕರ್ತರಿಗೆ ಶಿಕ್ಷೆ/ದಂಡ ವಿಧಿಸುವ ಕಾನೂನನ್ನೂ ಅವರು ಪರಿಚಯಿಸಿದ್ದಾರೆ. ಹೀಗಾಗಿ ಸದ್ಯ ಸುದ್ದಿಯಲ್ಲಿದ್ದಾರೆ.
ಒಂದು ದೇಶದ ಕಾಯಂ ಅಧ್ಯಕ್ಷನಾಗಿಯೇ ಅರ್ಥಾತ್ ಸರ್ವಾಧಿಕಾರಿಯಾಗಿಯೇ ಮುಂದುವರಿಯುವುದಕ್ಕೆ ಜನಾದೇಶ(ರೆಫರೆಂಡಂ) ಪಡೆಯುವುದು ಎಂದರೆ ಸುಲಭದ ಮಾತಲ್ಲ. ಪ್ರಜಾಪ್ರಭುತ್ವ ದೇಶ ಎಂದ ಮೇಲೆ ಪ್ರತಿಯೊಬ್ಬ ಪೌರನಿಗೂ ಆಯ್ಕೆ ಸ್ವಾತಂತ್ರೃ ಇದ್ದೇ ಇರುತ್ತದೆ. ಹೀಗಿರುವಾಗ ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬನೇ ವ್ಯಕ್ತಿ ನಿರಂತರವಾಗಿ ಆಳ್ವಿಕೆ ನಡೆಸುವುದು ಕೂಡ ಕಷ್ಟದ ಮಾತೇ ಸರಿ. ತಜಕಿಸ್ತಾನ ಇವೆಲ್ಲದಕ್ಕೆ ಅಪವಾದ. ಅದರ ಇತಿಹಾಸ ಎಮೋಮಲಿ ರಾಹ್‍ಮೋನ್ ನಾಯಕತ್ವದ ಜೊತೆಗೆ ಹೆಣೆದುಕೊಂಡಿದೆ.
ಅದು 1990ರ ದಶಕದ ಆರಂಭದ ಕಾಲಘಟ್ಟ. ಸೋವಿಯತ್ ಯೂನಿಯನ್ ಅವನತಿ ಹೊಂದಿದ ಸಂದರ್ಭವದು. ತಜಿಕ್‍ನ ಸುಪ್ರೀಂ ಸೋವಿಯತ್(ಸಂಸತ್)ಗೆ ಜನಪ್ರತಿನಿಧಿ(ಪೀಪಲ್ಸ್ ಡೆಪ್ಯುಟಿ)ಯಾಗಿ ಚುನಾಯಿತರಾಗಿದ್ದರು. ಅಂದು ಅಧ್ಯಕ್ಷರಾಗಿದ್ದವರು ರೆಹಮಾನ್ ನಬಿಯೇವ್. 1992ರ ಆರಂಭದಲ್ಲಿ ತಜಕಿಸ್ತಾನದಲ್ಲಿ ಅಂತರ್ಯುದ್ಧ ನಡೆದ ಕಾರಣ ಅದರ ತೀವ್ರತೆ ತಗ್ಗಿಸುವ ಸಲುವಾಗಿ ರೆಹಮಾನ್ ನಬಿಯೇವ್ ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್‌ನಲ್ಲಿ ರಾಜೀನಾಮೆ ನೀಡಬೇಕಾಗಿ ಬಂತು. ಆಗ, ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಚುಕ್ಕಾಣಿ ಹಿಡಿದವರು ಅಕ್ಬರಶೋ ಇಸ್ಕಾನಡರೋವ್. ಅವರ ಆಳ್ವಿಕೆಯೂ ಬಹುಕಾಲ ನಡೆಯಲಿಲ್ಲ. ಅಂತರ್ಯುದ್ಧಕ್ಕೆ ಅಂತ್ಯಹಾಡಲು ಅದೇ ವರ್ಷ ನವೆಂಬರ್‍ನಲ್ಲಿ ಇಸ್ಕಾನಡರೋವ್ ಕೂಡ ರಾಜೀನಾಮೆ ನೀಡಬೇಕಾಯಿತು. ಆಗ ಮುಂಚೂಣಿಗೆ ಬಂದವರೇ ಎಮೋಮಲಿ ರಾಹ್‍ಮೋನ್.
ಹೀಗೆ ಅಧಿಕಾರ ಚುಕ್ಕಾಣಿ ಹಿಡಿದ ಎಮೋಮಲಿಗೆ ಯುನೈಟೆಡ್ ತಜಿಕ್ ಅಪೋಸಿಷನ್‍ನ ವಿರೋಧ ಇದ್ದೇ ಇತ್ತು. ಅಂತರ್ಯುದ್ಧ 1997ರ ತನಕವೂ ಮುಂದುವರಿದಿತ್ತು. ಏತನ್ಮಧ್ಯೆ 1994ರಲ್ಲಿ ಹೊಸ ಸಂವಿಧಾನವನ್ನು ಅಂಗೀಕರಿಸಿದ ಸುಪ್ರೀಂ ಸೋವಿಯತ್, ಅಧ್ಯಕ್ಷರ ಆಳ್ವಿಕೆಗೆ ಅವಕಾಶಮಾಡಿಕೊಟ್ಟಿತು. ಇದರ ಪ್ರಕಾರ ನಡೆದ ಚುನಾವಣೆಯಲ್ಲಿ ಇಮೋಮಲಿ 1994ರ ನವೆಂಬರ್ 6ರಂದು ಅಧ್ಯಕ್ಷರಾಗಿ ಆಯ್ಕೆಯಾಗಿ ಹತ್ತು ದಿನಗಳ ಬಳಿಕ ಅಧಿಕಾರ ಸ್ವೀಕರಿಸಿದರು. ಈ ನಡುವೆ, ಅಂತರ್ಯುದ್ಧ ಮುಕ್ತಾಯಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆದವು. ಕೊನಗೆ 1997ರಲ್ಲಿ ಅದು ಮುಕ್ತಾಯವಾಯಿತಾದರೂ, ಆ ಅವಧಿಯೊಳಗೆ ಎರಡು ಬಾರಿ(1997ರ ಏಪ್ರಿಲ್ ಮತ್ತು ಆಗಸ್ಟ್) ನಡೆದ ಹತ್ಯಾ ಪ್ರಯತ್ನದಿಂದ ಎಮೋಮಲಿ ಬಚಾವ್ ಆಗಿದ್ದರು. 1998ರ ನವೆಂಬರ್‍ನಲ್ಲಿ ಮತ್ತೊಮ್ಮೆ ಅಂಥದ್ದೇ ಹತ್ಯಾ ಪ್ರಯತ್ನ ನಡೆದಾಗಲೂ ಅವರು ಬಚಾವಾಗಿದ್ದರು. ಅಂತರ್ಯುದ್ಧ ಅವಧಿಯಲ್ಲಿ ಅಂದಾಜು ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.
ಎಮೋಮಲಿ ಅವರ ಮೊದಲ ಅಧ್ಯಕ್ಷಾವಧಿ ಮುಗಿಯುವ ಹೊತ್ತಿಗೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗುವುದಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ತರಲಾಯಿತು. ಅದಕ್ಕೆ ಪೂರ್ಣ ಬಹುಮತವೂ ಸಿಕ್ಕಿತು. ಐದು ವರ್ಷ ಇದ್ದ ಅಧ್ಯಕ್ಷಾವಧಿ ಏಳು ವರ್ಷಕ್ಕೆ ಏರಿಕೆಯಾಯಿತು. ಈ ತಿದ್ದುಪಡಿಗೆ ಜನಾದೇಶದ ಮನ್ನಣೆಯೂ ಇತ್ತು ಎನ್ನಿ. ಇದರಂತೆ, 1999ರ ನವೆಂಬರ್ 6ರಂದು ಮರು ಆಯ್ಕೆಯಾದ ಇಮೋಮಲಿ ಶೇಕಡ 97ರಷ್ಟು ಮತ ಗಳಿಕೆಯೊಂದಿಗೆ ಎರಡನೇ ಅವಧಿಗೆ ಅಧ್ಯಕ್ಷ ಗಾದಿ ಏರಿದರು. ಏತನ್ಮಧ್ಯೆ ಅಧಿಕಾರದಲ್ಲೇ ಮುಂದುವರಿಯುವುದಕ್ಕೆ ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಅವರು ತೆಗೆದುಕೊಂಡರು. 2003ರ ಜೂನ್ 22ರಂದು ಮೊದಲ ಜನಾದೇಶ(ರೆಫರೆಂಡಂ) ಪಡೆದು, ಮುಂದಿನ ಎರಡು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಸಂವಿಧಾನಕ್ಕೆ ತಿದ್ದುಪಡಿ ತಂದರು. ಇದರಂತೆ, 2006ರ ನವೆಂಬರ್ 6ರಂದು ನಡೆದ ವಿವಾದಾತ್ಮಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶದಂತೆ ಶೇಕಡ 79 ಮತಗಳಿಕೆಯೊಂದಿಗೆ ಅಧ್ಯಕ್ಷ ಪದವಿಯಲ್ಲಿ ಮುಂದುವರಿದರು. ಮುಂದೆ 2013ರ ನವೆಂಬರ್ 6ರಂದು ಶೇಕಡ 84 ಮತಗಳಿಕೆಯೊಂದಿಗೆ ಜನಾದೇಶದ ಪ್ರಕಾರ ಎರಡನೇ ಅವಧಿಗೂ ಚುಕ್ಕಾಣಿ ಹಿಡಿದರು. ಅವರ ಈ ನಡವಳಿಕೆಗೆ ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇಂತಹ ಟೀಕೆಗಳು ಹೆಚ್ಚಾಗಿದ್ದರಿಂದ 2012ರಲ್ಲೇ ಇಲ್ಲಿ ಫೇಸ್‍ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಲಾಗಿತ್ತು. 2020ರ ತನಕ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಇದ್ದರೂ ಅಧಿಕಾರದಾಹಕ್ಕೆ ಕೊನೆ ಎಲ್ಲಿ?
ಹಾಗೆ, ಅಧಿಕಾರದಲ್ಲಿ ಮುಂದುವರಿಯುವ ಪ್ರಯತ್ನವನ್ನು `ಪ್ರಜಾಸತ್ತಾತ್ಮಕ'(?) ರೀತಿಯಲ್ಲೇ ಮುಂದುವರಿಸಿದ ಇಮೋಮಲಿ, 2015ರ ಡಿಸೆಂಬರ್‍ನಲ್ಲಿ ಹೊಸ ಕಾನೂನು ಜಾರಿಗೊಳಿಸಿದರು. ಅದರಂತೆ, `ಫೌಂಡರ್ ಆಫ್ ಪೀಸ್ ಆ್ಯಂಡ್ ನ್ಯಾಷನಲ್ ಯೂನಿಟಿ, ಲೀಡರ್ ಆಫ್ ದ ನೇಷನ್’ ಎಂಬ ಬಿರುದನ್ನೂ ಇಮೋಮಲಿ ಪಡೆದರು. ಜತೆಗೆ ದೇಶದ ಕಾಯಂ ಅಧ್ಯಕ್ಷನಾಗಿ ಉಳಿಯಲು ಹಾಗೂ ಅವರಿಗೂ, ಕುಟುಂಬದವರಿಗೂ ಕಾಯಂ ಘನತೆ, ಗೌರವ ಹಾಗೂ ದೇಶಕ್ಕೆ ಸಂಬಂಧಿಸಿದ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ವಿಟೋ ಎಂಬ ವಿಶೇಷಾಧಿಕಾರ, ದೇಶವನ್ನು ಮತ್ತು ಸಂಸತ್ತನ್ನು ಉದ್ದೇಶಿಸಿ ತನಗೆ ಪ್ರಮುಖವೆನಿಸಿದ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರವನ್ನೂ ಪಡೆಯಲು ಮುಂದಾದರು. ಇದರ ಅಂಗೀಕಾರಕ್ಕೆ 2016ರ ಮೇ 22ರಂದು `ಜನಾದೇಶ’ ಎಂಬ ಸಿದ್ಧ ಮಾದರಿಗೆ ಅವರು ಮೊರೆ ಹೋದರು. ಅವರ ಜಾಣ್ಮೆ, ತಂತ್ರಗಾರಿಕೆಗೆ ಈ ವರ್ಷ ನಡೆದ ಜನಾದೇಶದಲ್ಲಿ ಭರ್ಜರಿ ಪ್ರತಿಕ್ರಿಯೆ(ಶೇಕಡ 92ರಷ್ಟು ಮತ) ಯೇ ಲಭಿಸಿದೆ. ಶೇಕಡ 3.3ರಷ್ಟು ಮತ ವಿರುದ್ಧವಾಗಿ ಚಲಾವಣೆಯಾಗಿವೆ. ಇದರೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬೇಕಾದ ಕನಿಷ್ಠ ವಯೋಮಿತಿಯನ್ನು 35ರಿಂದ 30ಕ್ಕೆ ಇಳಿಸುವುದು ಸೇರಿ ಸಂವಿಧಾನಕ್ಕೆ ಒಟ್ಟು 41 ತಿದ್ದುಪಡಿ ತರಲಾಗಿದೆ. ಇದು, ರೆಹಮಾನ್ ಅವರ ಪುತ್ರ ರುಸ್ತುಂ ಎಮೋಮಲಿ(28 ವರ್ಷ) ಅವರನ್ನು ಅಧಿಕಾರಕ್ಕೆ ತರುವ ಪ್ರಯತ್ನ ಎಂದು ಬಣ್ಣಿಸಲಾಗುತ್ತಿದೆ.
ಇಂತಹ ಇಮೋಮಲಿ ಹುಟ್ಟಿದ್ದು( 1952ರ ಅಕ್ಟೋಬರ್ 5) ಕುಲೋಬ್ ಒಬ್ಲಾಸ್ಟ್‍ನ ದಂಗ್‍ಹರಾದ ಕೃಷಿಕ ಕುಟುಂಬದಲ್ಲಿ. ಅಧಿಕೃತ ಆತ್ಮಚರಿತ್ರೆ ಪ್ರಕಾರ, ಅವರು ತಜಿಕ್ ಸ್ಟೇಟ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ 1982ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅದಾದ ಬಳಿಕ ಅನೇಕ ವರ್ಷಗಳ ಕಾಲ ದಂಗ್‍ಹಾರದ ಲೆನಿನ್ ಸೋವ್‍ಖೋಜ್‍ನ ಟ್ರೇಡ್‍ಯೂನಿಯನ್ ಪರವಾಗಿ ಕೆಲಸ ಮಾಡಿದ್ದರು. ಏತನ್ಮಧ್ಯೆ ಕೆಲ ಕಾಲ ಸೋವಿಯತ್ ಯೂನಿಯನ್‍ನ ನೌಕಾಪಡೆಯ ಫೆಸಿಫಿಕ್ ಫ್ಲೀಟ್‍ನಲ್ಲಿ ಕೆಲಸ ಮಾಡಿದರು. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ಕೆಲಕಾಲ ಇಲೆಕ್ಟ್ರಿಷಿಯನ್ ಆಗಿದ್ದರು. 2007ರ ಮಾರ್ಚ್‍ನಲ್ಲಿ ಎಮೋಮಲಿ ರೆಹಮಾನೋವ್ ಎಂದಿದ್ದ ಸರ್‍ನೇಮನ್ನು ರಾಹ್‍ಮೋನ್ ಎಂದು ಬದಲಾಯಿಸಿಕೊಂಡರು. ರಷ್ಯನ್ ಮಾದರಿಯಲ್ಲಿದ್ದ ಹೆಸರನ್ನು ತುಂಡರಿಸಿ ಹೊಸ ಹೆಜ್ಜೆ ಇರಿಸಿ, ಎಲ್ಲರೂ ಅಂತೆಯೇ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಕರೆ ನೀಡಿದ್ದರು.
ಪತ್ನಿ ಅಜಿಜ್ಮೋ ಅಸದುಲ್ಲಾಯೆವಾ. ಒಟ್ಟು ಒಂಭತ್ತು ಮಕ್ಕಳು – ಏಳು ಪುತ್ರಿಯರು, ಇಬ್ಬರು ಪುತ್ರರು. ಈ ಪೈಕಿ ರುಸ್ತುಂ ಎಂಬ ಪುತ್ರ ಹಾಗೂ ಒಜೋದಾ ಎಂಬ ಪುತ್ರಿ ಸಚಿವ ಸಂಪುಟದಲ್ಲಿದ್ದಾರೆ. ಒಜೋದಾ ಜಗತ್ತಿನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *