ಪುಸ್ತಕ ಬರೀತಾರಾ ಸಿಧು?

ದೆಹಲಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಸಿಡಿದೆದ್ದು ಚಳವಳಿ ರೂಪಿಸಿ, ಆಮ್ ಆದ್ಮಿ ಪಕ್ಷ ಕಟ್ಟಿ ‘ಮೋದಿ ಅಲೆ’ಯ ನಡುವೆಯೂ ಅಧಿಕಾರ ಗದ್ದುಗೆಗೆ ಏರಿದ ಸಾಧನೆ ಅರವಿಂದ ಕೇಜ್ರಿವಾಲ್ ಮತ್ತವರ ತಂಡದ್ದು. ಪಂಜಾಬ್‌ನ ರಾಜಕೀಯದಲ್ಲೂ ಅಂಥದ್ದೊಂದು ರಾಜಕೀಯ ಸ್ಥಿತ್ಯಂತರ ಸಾಧ್ಯವೇ? ಮುಂದಿನ ವರ್ಷವೇ ಅಲ್ಲಿ ಚುನಾವಣೆ ಇದೆ. ಇಂತಹ ಸನ್ನಿವೇಶದಲ್ಲಿ ಪ್ರಕಾಶ್ ಸಿಂಗ್ ಬಾದಲ್, ಅಮರಿಂದರ್ ಸಿಂಗ್ ಮುಂತಾದವರ ನಾಯಕತ್ವಕ್ಕೆ ಸವಾಲೆಸೆಯುವಂತಹ ನಾಯಕರಾರಿದ್ದಾರೆ? ಈ ಎಲ್ಲ ಪ್ರಶ್ನೆಗಳ ನಡುವೆ, ಪಂಜಾಬ್ ರಾಜಕಾರಣದಲ್ಲಿ ಸುದ್ದಿಯ ಮುನ್ನೆಲೆಗೆ ಬಂದಿರುವವರೇ ನವಜೋತ್ ಸಿಂಗ್ ಸಿಧು. ಅವರು ಈ ವಾರಾಂತ್ಯದಲ್ಲಿ ಹೊಸ ಪಕ್ಷ ಸ್ಥಾಪನೆಗೆ ಮುಂದಡಿ ಇರಿಸಿದ್ದಾರೆ ಎಂಬುದು ಸದ್ಯ ರಾಜಕೀಯ ವಲಯದಲ್ಲಿ ಚರ್ಚಿತ ಸುದ್ದಿ.Sidhu

ಶಿರೋಮಣಿ ಅಕಾಲಿ ದಳದಿಂದ ಅಮಾನತುಗೊಂಡಿರುವ ಶಾಸಕ, ಮಾಜಿ ಹಾಕಿ ಆಟಗಾರ ಪರ್ಗತ್ ಸಿಂಗ್ ಫಸ್‌ಬುಕ್‌ನಲ್ಲಿ ಅಪ್ಡೇಟ್ ಮಾಡಿರುವ ಪೋಸ್ಟರ್ ಒಂದರಲ್ಲಿ ಈ ಹೊಸ ಪಕ್ಷ ಸ್ಥಾಪನೆಯ ಸುದ್ದಿ ಬಹಿರಂಗವಾಗಿದೆ. ಸಿಧು ಅವರ ಜತೆಗೆ ಇಬ್ಬರು ಪಕ್ಷೇತರ ಶಾಸಕ ಸೋದರರಾದ ಬಲ್ವಿಂದರ್ ಸಿಂಗ್ ಬಿಯಾನ್ಸ್ ಹಾಗೂ ಸಿಮರಜಿತ್ ಸಿಂಗ್ ಬಿಯಾನ್ಸ್ ಕೂಡ ಕೈ ಜೋಡಿಸಿರುವುದು ಖಚಿತವಾಗಿದೆ. ನವಜೋತ್ ಸಿಂಗ್ ಸಿಧು, ಅವರ ಪತ್ನಿ ನವಜೋತ್ ಕೌರ್ ಕೂಡ ಈ ತಂಡದಲ್ಲಿದ್ದಾರೆ. ‘ಆವಾಜ್ಫಏಫಪಂಜಾಬ್’ ಎಂಬುದು ಹೊಸ ರಾಜಕೀಯ ಪಕ್ಷದ ಹೆಸರು. ನವಜೋತ್ ಸಿಂಗ್ ಸಿಧು ಅವರದೇ ನಾಯಕತ್ವ. ಪಂಜಾಬ್ ರಾಜ್ಯವನ್ನು ನಾಶಮಾಡಿದವರ ವಿರುದ್ಧದ ಹೋರಾಟ, ಪಂಜಾಬ್‌ನ ಆಡಳಿತ ವ್ಯವಸ್ಥೆ ಸ್ವಚ್ಛಗೊಳಿಸುವುದೇ ಇದರ ಧ್ಯೇಯ. ಸೆಪ್ಟೆಂಬರ್ 8ರಂದು ಅಧಿಕೃತವಾಗಿ ಪಕ್ಷ ಸ್ಥಾಪನೆ ವಿಚಾರ ಘೋಷಣೆ. ಇವಿಷ್ಟು ಸುದ್ದಿಯ ಸಾರಾಂಶ.

ಪರ್ಗತ್ ಸಿಂಗ್, ಬಿಯಾನ್ಸ್ ಸಹೋದರರು ಹಾಗೂ ಸಿಧು ಆಗಸ್ಟ್ 31ರಂದು ನವದೆಹಲಿಯಲ್ಲಿ ಭೇಟಿಯಾಗಿ, ಮುಂದಿನ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ-ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡುವ ಕುರಿತು ಚರ್ಚಿಸಿದ್ದಾರೆ. ನರೇಂದ್ರ ಮೋದಿಯವರು ಗುಜರಾತ್ ಅಸ್ಮಿತೆಯನ್ನು ಹಾಗೂ ಎನ್‌ಟಿ ರಾಮರಾವ್ ಅವರು ಆಂಧ್ರದ ಅಸ್ಮಿತೆ, ತೆಲುಗರ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ ತಂತ್ರಗಾರಿಕೆಗೆ ಸಿಧು ಕೂಡ ಮೊರೆ ಹೋಗಿದ್ದಾರೆ. ಕಳೆದ ಎರಡು ಮೂರು ತಿಂಗಳ ಬೆಳವಣಿಗೆಗಳನ್ನು ಗಮನಿಸಿದರೆ ಇದು ಮನವರಿಕೆಯಾದೀತು.

ಸಿಧು ನಾಮನಿರ್ದೇಶಿತ ಸದಸ್ಯರಾಗಿ ಇದೇ ವರ್ಷ ಏಪ್ರಿಲ್ 28ರಂದು ರಾಜ್ಯಸಭೆ ಪ್ರವೇಶಿಸಿದರು. ಇದು ಅವರನ್ನು ಚುನಾವಣಾ ರಾಜಕೀಯದಿಂದ ನೇಪಥ್ಯಕ್ಕೆ ಸರಿಸುವ ಬಿಜೆಪಿ ವರಿಷ್ಠರ ತಂತ್ರಗಾರಿಕೆ ಎಂದೇ ರಾಜಕೀಯ ಚಾವಡಿ ಬಣ್ಣಿಸಿತ್ತು. ಇದಕ್ಕೆ ತಕ್ಕಂತೆ ಸಿಧು ಸಿಡಿಮಿಡಿ ಮುಂದುವರಿದಿತ್ತು. ಇದ್ದಕ್ಕಿದ್ದಂತೆ ಕಳೆದ ಜುಲೈ 18ರಂದು ಸಿಧು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಷ್ಟೇ ಅಲ್ಲ, ಪಕ್ಷವನ್ನೂ ತ್ಯಜಿಸಿದರು. ಇಷ್ಟಾಗುತ್ತಲೇ, ಅವರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ಮಾತು ಜೋರಾಗಿ ಕೇಳಿಬಂತು. ಇನ್ನೊಂದೆಡೆ, ಸಿಧು ತಂದೆ ಸರ್ದಾರ್ ಭಗವಂತ್ ಸಿಂಗ್ ಸಿಧು ಕಾಂಗ್ರೆಸ್ಸಿಗ(ಶಾಸಕರಾಗಿದ್ದವರು) ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗರೂ ದಾಳ ಉರುಳಿಸಿದರು. ಆದರೆ, ಎಲ್ಲದಕ್ಕೂ ಸಿಧು ಮೌನವೇ ಉತ್ತರವಾಗಿತ್ತು. ಏತನ್ಮಧ್ಯೆ, ಸಿಧು ರಾಜ್ಯಸಭಾ ಸ್ಥಾನ ತೊರೆಯುವುದಕ್ಕೇನು ಕಾರಣ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಕೆಲವು ದಿನಗಳ ಬಳಿಕ ಮಾಧ್ಯಮದ ಎದುರು ಹಾಜರಾದ ಸಿಧು ಹೇಳಿದ್ದೇನು ಗೊತ್ತೆ?-

‘ನನಗೆ ಗೊತ್ತು. ಸಿಧು ಯಾಕೆ ರಾಜ್ಯಸಭಾ ಸ್ಥಾನ ತೊರೆದರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಾರಣ ಇಷ್ಟೇ- ‘ಪಂಜಾಬ್ ರಾಜಕೀಯಕ್ಕೆ ನೀನು ತಲೆಹಾಕಕೂಡದು. ಪಂಜಾಬ್‌ನಿಂದ ನೀನು ದೂರ ಉಳಿಯಬೇಕು’ ಎಂದರು. ಧರ್ಮಗಳಲ್ಲಿ ಬಹುಶ್ರೇಷ್ಠವಾದುದು ರಾಷ್ಟ್ರಧರ್ಮ. ಹೀಗಿರುವಾಗ ನವಜೋತ್ ಸಿಂಗ್ ಸಿಧು ಹೇಗೆ ತಾನೆ ತನ್ನ ಹುಟ್ಟೂರನ್ನು ಬಿಟ್ಟಾನು? 10 ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆಲ್ಲಿಸಿದ ಅಮೃತಸರ ಕ್ಷೇತ್ರದ ಜನರನ್ನು ಹೇಗೆ ಮರೆಯಲಿ? ನೀನು ಪಂಜಾಬ್‌ನಿಂದ ದೂರ ಇರಬೇಕು ಎಂದರೆ ಅದರ ಹಿಂದಿನ ಲೆಕ್ಕಾಚಾರ ಏನು? ಯಾಕೆ ದೂರ ಇರಬೇಕು? ಯಾವುದಕ್ಕೂ ಸ್ಪಷ್ಟ ಉತ್ತರವಿಲ್ಲ. ಒಂದು ಉದಾಹರಣೆ ಹೇಳ್ತೇನೆ ಕೇಳಿ- ರಾಷ್ಟ್ರಪಕ್ಷಿ ಕೂಡ ತಾನು ನೆಲೆಸಿರುವ ಮರಕ್ಕೆ ಬೆಂಕಿ ಬಿದ್ದರೂ ಅದನ್ನು ಬಿಟ್ಟು ಹೋಗಲ್ಲ. ಅಲ್ಲೇ ಇದ್ದವರೊಬ್ಬರು ಆ ಪಕ್ಷಿಗೆ ಹೇಳುತ್ತಾರೆ ರೆಕ್ಕೆಗಳಿವೆಯಲ್ಲ ಹಾರಿಬಿಡು ಎಂದು.. ಆದರೆ, ಆ ಪಕ್ಷಿ ಏನು ಹೇಳತ್ತೆ ಗೊತ್ತ? ‘ಸತ್ತರೂ, ಬದುಕಿದರೂ ನನಗೆ ನೆಲೆ ಕೊಟ್ಟ ಮರದಲ್ಲೇ ಇರುವೆ’. ಇದು ನನ್ನ ಭಾವನೆಯೂ ಹೌದು, ಧರ್ಮವೂ ಹೌದು. ಈ ಜಗತ್ತಿನ ಯಾವುದೇ ರಾಜಕೀಯ ಪಕ್ಷ ಪಂಜಾಬ್‌ಗಿಂತ ದೊಡ್ಡದಲ್ಲ. ಹೀಗಾಗಿ ನನ್ನ ನಿರ್ಧಾರದಿಂದಾಗಿ ಆಗುವ ಯಾವುದೇ ನಷ್ಟವನ್ನು ಎದುರಿಸುವುದಕ್ಕೂ ತಯಾರಾಗಿದ್ದೇನೆ’.

2004ರ ಲೋಕಸಭಾ ಚುನಾವಣೆ ಸಂದರ್ಭದ ಕೊನೇ ಕ್ಷಣದಲ್ಲಿ ಬಿಜೆಪಿ ಮೂಲಕ ಚುನಾವಣಾ ಅಖಾಡಕ್ಕೆ ಇಳಿದವರು ಸಿಧು. 2014ರಲ್ಲಿ ಅಮೃತಸರವನ್ನೇ ಪ್ರತಿನಿಧಿಸಬಯಸಿದ್ದರು. ಆದರೆ, ಅರುಣ್ ಜೇಟ್ಲಿಗಾಗಿ ಅಮೃತಸರವನ್ನು ಅವರು ಬಿಟ್ಟುಕೊಡಬೇಕಾಯಿತು. ಅಷ್ಟಾಗಿಯೂ ಜೇಟ್ಲಿ ಏನೂ ಅಲ್ಲಿ ಗೆಲುವು ಸಾಧಿಸಲಾಗಲಿಲ್ಲ. ಗೆಲ್ಲಬಹುದಾಗಿದ್ದ ಸ್ಥಾನವನ್ನು ಬಿಜೆಪಿ ‘ಸಿಧು ಎಫಕ್ಟ್’ನಿಂದಾಗಿ ಕಳಕೊಂಡಿತು ಎಂಬ ವಿಶ್ಲೇಷಣೆಯೂ ಕೇಳಿತ್ತು. ಇಷ್ಟಾಗಿ, 2014ರ ಲೋಕಸಭೆ ಚುನಾವಣೆಯಿಂದೀಚೆಗೆ ಬಿಜೆಪಿಯ ಪಾಲಿಗೆ ಸಿಧು ಸಿಡಿಮಿಡಿ ನುಂಗಲಾರದ ತುತ್ತಾಗಿತ್ತು ಎಂಬುದು ವಾಸ್ತವ.

ಇವೆಲ್ಲದರ ನಡುವೆ ನೋಡಿದರೆ, ಪಕ್ಷ ಕಟ್ಟುವ ವೇಳೆ ಅರವಿಂದ ಕೇಜ್ರಿವಾಲ್ ಮತ್ತವರ ತಂಡಕ್ಕೆ ರಾಜಕೀಯದ ಗಂಧಗಾಳಿ ಗೊತ್ತಿರಲಿಲ್ಲ. ಆದರೆ, ಇಲ್ಲಿ ಹಾಗಲ್ಲ, ಪಕ್ಷ ಕಟ್ಟುತ್ತಿರುವವರು ರಾಜಕೀಯದಲ್ಲಿರುವವರೇ. ಅದರಲ್ಲೂ, ಬಿಯಾನ್ಸ್ ಸಹೋದರರಂತೂ ಬಾದಲ್ ವಿರೋಧಿ ಚಳವಳಿ ನಡೆಸುತ್ತಿರುವವರು. ಸದ್ಯ ರಾಜ್ಯ ಸರ್ಕಾರದ ವಿರುದ್ಧ ಇರುವ ಆಡಳಿತ ವಿರೋಧಿ ಭಾವನೆಯನ್ನು ಸಿಧು ನೇತೃತ್ವದಲ್ಲಿ ಇವರು ‘ಎನ್‌ಕ್ಯಾಶ್’ ಮಾಡಬಹುದೇ ಎಂಬುದು ಕುತೂಹಲದ ಪ್ರಶ್ನೆ.

ಹೀಗೆ ಹೊಸ ಹೆಜ್ಜೆ ಇರಿಸಿರುವ ಸಿಧುವಿಗೆ ಬಲ ಒದಗಿಸಿರುವುದೇ ಬಾದಲ್ ವಿರೋಧಿ ಛಾಯೆ. ಅಕಾಲಿಗಳ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವ ಅವಕಾಶವಿದೆ. ಸಂಸದನಾಗಿ ಅಮೃತಸರದಲ್ಲಿ ಮಾಡಿದ ಕಾರ್ಯಗಳನ್ನು ಬಿಂಬಿಸಬಹುದು. ಉತ್ತಮ ವಾಗ್ಮಿ. ಇವೆಲ್ಲದರ ನಡುವೆ, ಟಿವಿ ಚಾನೆಲ್‌ಗಳ ಕಾರ್ಯಕ್ರಮದಲ್ಲೇ ಹೆಚ್ಚು ವ್ಯಸ್ತರಾಗಿರುತ್ತಾರೆ ಎಂಬ ಆರೋಪ ಇರುವುದೇ ಬಹುದೊಡ್ಡ ಕೊರತೆ. ಅಷ್ಟಕ್ಕೂ ಅವರು ಗಂಭೀರ ರಾಜಕಾರಣಿಯಲ್ಲ ಎಂಬ ಆಕ್ಷೇಪವೂ ಇದೆ. ಅಷ್ಟೇ ಅಲ್ಲ, 1991ರಲ್ಲಿ ಅಪಘಾತ ನಡೆಸಿದ ಬಳಿಕ ಪ್ರವೀಣ್ ಶಾ ಎಂಬುವರ ಮೇಲೆ ಹಲ್ಲೆ ನಡೆಸಿ ಆತನ

ಸಾವಿಗೂ ಕಾರಣರಾದರೆಂಬ ಪ್ರಕರಣದಲ್ಲಿ ಕೆಲಕಾಲ ಅವರು ಪಟಿಯಾಲ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ತನ್ನ ವಿರುದ್ಧದ ಆರೋಪಗಳನ್ನು ಸಿಧು ಅಲ್ಲಗಳೆದರೂ, ಕೊನೆಗೆ 2006ರ ಡಿಸೆಂಬರ್‌ನಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ತೀರ್ಪು ಹೊರಬಿದ್ದಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಇದಕ್ಕೆ ತಡೆ ನೀಡಿತ್ತು.

ಇಂತಹ ಸಿಧು ಅವರದ್ದು ಬಹುಮುಖ ಪ್ರತಿಭೆ. ಕ್ರಿಕೆಟಿಗರಾಗಿ ಸಿಕ್ಸರ್ ಸಿಧು ಎಂದೇ ಪ್ರಸಿದ್ಧರಾಗಿದ್ದ ಅವರು, ನಿವೃತ್ತಿಯ ಬಳಿಕ ಕಾಮೆಂಟೇಟರ್ ಆಗಿ ಖ್ಯಾತಿ ಗಳಿಸಿದರು. ಕಾಮೆಂಟರಿ ಸಂದರ್ಭದಲ್ಲಿ, ಅದೇ ರೀತಿ ಕಾಮಿಡಿ ನೈಟ್ಸ್ ವಿತ್ ಕಪಿಲ್, ದ ಕಪಿಲ್ ಶರ್ಮಾ ಶೋಗಳಲ್ಲಿ ಅವರು ಹಾರಿಸುತ್ತಿದ್ದ ಒಂದು ವಾಕ್ಯದ ಚಟಾಕಿಗಳು ‘ಸಿಧುಯಿಸಂ’ ಎಂದೇ ಪ್ರಸಿದ್ಧ. ಅದರಲ್ಲೊಂದು ಚಟಾಕಿ ಹೀಗಿದೆ – ‘Politics is not a bad profession boss, if you succeed there are rewards, if you fail you can always write the book’!.

Leave a Reply

Your email address will not be published. Required fields are marked *