ರಾಜಕೀಯ ಒಲ್ಲದ ಸಾಧಕ

ಡಾ.ಪ್ರಣವ್‌ ಪಾಂಡ್ಯ
ಡಾ.ಪ್ರಣವ್‌ ಪಾಂಡ್ಯ

ಅಂದು ಮೇ 4. ಕೇಂದ್ರ ಸರ್ಕಾರದ ಶಿಫಾರಸಿಗನುಗುಣವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಗಾಯತ್ರಿ ಪರಿವಾರ್‍ನ ಮುಖ್ಯಸ್ಥ ಡಾ.ಪ್ರಣವ್ ಪಾಂಡ್ಯ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದಾಗಿ ಸುದ್ದಿ ಪ್ರಕಟವಾಯಿತು. ಇದಾದ ಬೆನ್ನಲ್ಲೇ, ಪಾಂಡ್ಯ ಅವರು ಕೂಡ ಖುಷಿಯಲ್ಲೇ, `ರಾಜ್ಯಸಭೆಗೆ ನನ್ನನ್ನು ನಾಮನಿರ್ದೇಶನ ಮಾಡುವುದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು. ನಮ್ಮ ಸಂಸದರಿಗೂ ನಾನು ಯುಗನಿರ್ಮಾಣ ಸೂತ್ರಗಳನ್ನು ಕಲಿಸಿಕೊಡಲು ಪ್ರಯತ್ನಿಸುವೆ’ ಎಂದು ಟ್ವೀಟಿಸಿದ್ದರು. ಇಷ್ಟೇ ಆಗಿದ್ದರೆ, ಅದಕ್ಕೂ ಮೊದಲು ರಾಜ್ಯಸಭೆ ಪ್ರವೇಶಿಸಿದ ಆರು ಮಂದಿ ಜೊತೆ ಇವರೂ ಒಬ್ಬರೆನಿಸಿಕೊಳ್ಳುತ್ತಿದ್ದರು.
ಹೀಗನ್ನುವುದಕ್ಕೂ ಕಾರಣವಿದೆ. ಸಾಮಾನ್ಯವಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವುದೇ ದೊಡ್ಡ ಗೌರವ ಎಂಬ ಭಾವನೆಯಿದೆ. ಅದರಲ್ಲೂ ಈ ಸಲ ಕೇಂದ್ರ ಸರ್ಕಾರ ಶಿಫಾರಸು ಮಾಡಿದ ಆರು ಜನರ ಪೈಕಿ ಸುಬ್ರಮಣಿಯನ್ ಸ್ವಾಮಿ ಹೊರತುಪಡಿಸಿದರೆ ಉಳಿದವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಅವರ ಆಯ್ಕೆಯ ಹಿಂದೆ ಮೋದಿ ಹಾಗೂ ಷಾ ಅವರ ತಂತ್ರಗಾರಿಕೆ ಇದೆ ಎಂಬುದು ಸರ್ವವೇದ್ಯ ವಿಚಾರ. ಏಳನೆಯವರಾಗಿ ಡಾ.ಪಾಂಡ್ಯ ರಾಜ್ಯಸಭೆ ಪ್ರವೇಶಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಎರಡು ದಿನದ ಬಳಿಕ ಆಗಿದ್ದು ಆಘಾತ! `ಏಳು ಎಂದರೆ ಬೀಳು’ ಎಂಬಂತೆ ಆ ಆಘಾತಕ್ಕೆ ಕಾರಣವಾಗಿದ್ದು ಪಾಂಡ್ಯ ಅವರ ನಿರ್ಧಾರ.
ಅದೇನಾಯಿತೋ ಏನೋ ಶುಕ್ರವಾರ (ಮೇ 6) ಇದ್ದಕ್ಕಿದ್ದಂತೆ ರಾಜ್ಯಸಭೆಗೆ ಹೋಗಲ್ಲ ಎಂಬ ನಿರ್ಧಾರವನ್ನು ಡಾ.ಪಾಂಡ್ಯ ಪ್ರಕಟಿಸಿದರು. ಈ ನಿರ್ಧಾರದ ಹಿಂದಿನ ಕಾರಣವನ್ನು ಅವರ ಮಾತುಗಳಲ್ಲೇ ಹೇಳುವುದಾದರೆ, `ರಾಜ್ಯಸಭೆಯ ನಾಮನಿರ್ದೇಶನವನ್ನು ಆರಂಭದಲ್ಲಿ ಒಪ್ಪಿಕೊಳ್ಳುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದ್ದ ಭರವಸೆ ಕಾರಣವಾಗಿತ್ತು. ಆದರೆ, ಕಳೆದ ಎರಡು ದಿನಗಳ ಕಾಲ ರಾಜ್ಯಸಭೆಯ ಕಲಾಪ ನೋಡಿದೆ. ಅಲ್ಲಿದ್ದವರು ಪರಸ್ಪರ ದೋಷಾರೋಪಣೆ ಮಾಡುತ್ತಿದ್ದ ರೀತಿ ಕಂಡು, ಅವರನ್ನು ಬದಲಾಯಿಸಲು ನನ್ನಿಂದಾಗದು ಎಂದೆನಿಸಿತು. ರಾಜ್ಯಸಭೆಯ ವಾತಾವರಣ ನನ್ನ ಮಟ್ಟಿಗೆ ಅನುಕೂಲಕರ ಎಂದೆನಿಸುವುದಿಲ್ಲ. ಅದು ಸಾಧ್ಯವೂ ಇಲ್ಲ. ರಾಜ್ಯಸಭೆಯ ಸದಸ್ಯನಾಗಿ ಅಲ್ಲಿ ಸಮಯ ವ್ಯಯಿಸುವ ಬದಲು, ಹೊರಗಿದ್ದುಕೊಂಡು ಲಕ್ಷಾಂತರ ಜನರ ಬದುಕಿನಲ್ಲಿ ಒಂದಷ್ಟು ಬದಲಾವಣೆಗಳನ್ನು ತರಬಲ್ಲೆ ಎಂಬ ವಿಶ್ವಾಸವಿದೆ. ಹೀಗಾಗಿ ವಿನಯಪೂರ್ವಕವಾಗಿ ಹೇಳುವುದಿಷ್ಟೆ- ಗಾಯತ್ರಿ ಪರಿವಾರದ 12 ಕೋಟಿ ಜನರ ಬಳಗವನ್ನು ಬಿಟ್ಟು ಬರಲಾರೆ. ಅವರ ಜೊತೆಗೆ ಇದ್ದು ಸಮಾಜದ ಕೆಲಸ ಮಾಡುವೆ, ರಾಜ್ಯಸಭೆಗೆ ಬರಲಾರೆ.’
ಇದೇ ಕಾರಣಕ್ಕೆ ಅವರು ಕಳೆದ ವಾರ ಸುದ್ದಿಯ ಕೇಂದ್ರಬಿಂದು. ಇಂತಹ ಪಾಂಡ್ಯ ಆಲ್ ವಲ್ರ್ಡ್ ಗಾಯತ್ರಿ ಪರಿವಾರ್ (ಎಡಬ್ಲುೃಜಿಪಿ)ನ ಮುಖ್ಯಸ್ಥ, ದೇವ್ ಸಂಸ್ಕøತಿ ವಿಶ್ವವಿದ್ಯಾಲಯದ ಚಾನ್ಸಲರ್, ಬ್ರಹ್ಮವರ್ಚಸ್ ರೀಸರ್ಚ್ ಇನ್‍ಸ್ಟಿಟ್ಯೂಟ್‍ನ ನಿರ್ದೇಶಕ, 12 ಭಾಷೆಗಳಲ್ಲಿ ಪ್ರಕಟವಾಗುವ, 25 ಲಕ್ಷ ಮನೆಗಳಿಗೆ ತಲುಪುವ `ಅಖಂಡ ಜ್ಯೋತಿ’ ಎಂಬ ನಿಯತಕಾಲಿಕೆಯ ಸಂಪಾದಕ, ಸ್ವಾಮಿ ವಿವೇಕಾನಂದ ಯೋಗವಿದ್ಯಾ ಮಹಾಪೀಠಂನ ಅಧ್ಯಕ್ಷ.
ಅವರು ಪಂಡಿತ್ ಶ್ರೀರಾಮ ಶರ್ಮಾ ಆಚಾರ್ಯ ಅವರ ಆಪ್ತ ಮತ್ತು ನೇರ ಶಿಷ್ಯ. 1995ರಿಂದ ಅವರು ಗಾಯತ್ರಿ ಪರಿವಾರ್‍ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಷಯದಲ್ಲಿ ಅವರಿಗೆ ಪತ್ನಿ ಶಾಯಿಬಾಲಾ ಪಾಂಡ್ಯ(ಮಾತಾ ಭಗವತಿ ದೇವಿ ಶರ್ಮಾ ಮತ್ತು ಆಚಾರ್ಯ ಶ್ರೀರಾಮ ಶರ್ಮಾ ಅವರ ಪುತ್ರಿ) ಸಹಕಾರ ನೀಡುತ್ತಿದ್ದು, ಅವರು ಕೂಡ ಶ್ರೀ ವೇದಮಾತಾ ಗಾಯತ್ರಿ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ. ಪಾಂಡ್ಯಾ ಅವರು ವೈಜ್ಞಾನಿಕ ಅಧ್ಯಾತ್ಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧ ಸಾಧಕ. ಅವರು ಮುಖ್ಯಸ್ಥರಾಗಿರುವ ಗಾಯತ್ರಿ ಪರಿವಾರ್ 80 ದೇಶಗಳಲ್ಲಿ ಪಸರಿಸಿದೆ. ಹರಿದ್ವಾರದಲ್ಲಿ ಇದರ ಕೇಂದ್ರ ಕಚೇರಿ. ಪಾಂಡ್ಯ ಅವರ ಕ್ರಿಯಾಶೀಲ ನಾಯಕತ್ವದಡಿ ಹರಿದ್ವಾರದಲ್ಲಿ ದೇವ್ ಸಂಸ್ಕøತಿ ವಿಶ್ವವಿದ್ಯಾಲಯ ಹಲವು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದು, ಸುಧಾರಿತ ಆಧುನಿಕ ಶಿಕ್ಷಣ ಕ್ರಮವನ್ನು ನಾಡಿಗೆ ಪರಿಚಯಿಸಲಾಗಿದೆ.
ಅರವತ್ತಾರು ವರ್ಷದ ಪಾಂಡ್ಯ ಅವರ ಜೀವನಪಥ ಒಂದು ರೀತಿಯಲ್ಲಿ ವೈದ್ಯವಿಜ್ಞಾನ ಮತ್ತು ಅಧ್ಯಾತ್ಮದ ಸಮ್ಮಿಳನ. 1950ರ ನ.8ರಂದು ಮುಂಬೈನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಅವರ ಜನನ. ಆರಂಭದ ಶಿಕ್ಷಣ ಮುಂಬೈನಲ್ಲಿ. ಈ ನಡುವೆ 1963ರಲ್ಲಿ ಅವರು ಗಾಯತ್ರಿ ಮಿಷನ್ ಸಂಸ್ಥಾಪಕ ಯುಗಋಷಿ ಪಂಡಿತ್ ಶ್ರೀರಾಮ ಶರ್ಮಾ ಆಚಾರ್ಯರ ಸಂಪರ್ಕಕ್ಕೆ ಬಂದರು. ಅವರ ಸಂಘಟನೆ ಸಮಾಜದಲ್ಲಿ ನೈತಿಕತೆ ಹಾಗೂ ಅಧ್ಯಾತ್ಮದ ಮೂಲಕ ಮಾನವೀಯತೆಯನ್ನು ಪಸರಿಸುವ ಕೆಲಸ ಮಾಡುತ್ತಿತ್ತು. ವಿದ್ಯಾರ್ಥಿ ದೆಸೆಯಲ್ಲೇ ಸಿಕ್ಕ ಈ ಸಂಪರ್ಕದಿಂದಾಗಿ ಪಾಂಡ್ಯ ಕೂಡ ಅಧ್ಯಾತ್ಮದತ್ತ ಹೊರಳಿದರು. 1972ರಲ್ಲಿ ಇಂದೋರ್‍ನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ, 1975ರಲ್ಲಿ ಅದೇ ಕಾಲೇಜಿನಿಂದ ಎಂಡಿ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರ್ಣಗೊಳಿಸಿದರು. 1976ರಲ್ಲಿ ಅಮೆರಿಕದ ವೈದ್ಯ ಸೇವೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ನಂತರ, ಎಂಜಿಎಂ ಮೆಡಿಕಲ್ ಕಾಲೇಜಿನ ನ್ಯೂರಾಲಜಿ ಮತ್ತು ಕಾರ್ಡಿಯಾಲಜಿ ವಿಭಾಗಗಳ ವೈದ್ಯವಿಜ್ಞಾನಿಗಳ ಜತೆ ಸೇರಿ ಹಲವು ಸಂಶೋಧನಾ ಕೆಲಸಗಳಲ್ಲಿ ತೊಡಗಿಕೊಂಡರು. ಅಲ್ಲದೆ, ಸೈಕೋಸೊಮಾಟಿಕ್ ಸಮಸ್ಯೆ, ನಿದ್ರಾ ಸಮಸ್ಯೆ ಮುಂತಾದ ವಿಷಯಗಳ ಬಗ್ಗೆ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. 1976-78ರ ಅವಧಿಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ (ಬಿಎಚ್‍ಇಎಲ್) ಕಂಪನಿಯ ಆಸ್ಪತ್ರೆಗಳಲ್ಲಿ(ಹರಿದ್ವಾರ, ಭೋಪಾಲ) ಐಸಿಯುಗಳ ಇನ್‍ಚಾರ್ಜ್ ಆಗಿ ಸೇವೆ ಸಲ್ಲಿಸಿದರು. ಈ ನಡುವೆ, ಅಮೆರಿಕದಿಂದ ಹಲವು ಉದ್ಯೋಗಗಳ ಆಫರ್ ಬಂದರೂ, ಗುರುಗಳ ಆಣತಿಯಂತೆ ಭಾರತದಲ್ಲೇ ಉಳಿದು ಭಾರತೀಯ ಸಂಸ್ಕøತಿಯನ್ನು ಪಸರಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಇದಕ್ಕಾಗಿ ಗಾಯತ್ರಿ ಮಿಷನ್‍ನ ಕೇಂದ್ರ ಕಚೇರಿ ಹರಿದ್ವಾರದ ಶಾಂತಿಕುಂಜಕ್ಕೆ ತೆರಳಿದರು. 1979ರಿಂದ ಬ್ರಹ್ಮವರ್ಚಸ್ ಶೋಧ್ ಸಂಸ್ಥಾನದ ನಿರ್ದೇಶಕರಾಗಿದ್ದಾರೆ. 1979ರಿಂದ 90ರ ತನಕ ಆಚಾರ್ಯ ಅವರ ನಿರ್ದೇಶನದಂತೆ, ವಿಜ್ಞಾನ ಮತ್ತು ಅಧಾತ್ಮವನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸಕ್ಕೆ ಅಡಿಪಾಯ ಹಾಕಿದರು. ಅವರ ಮಾರ್ಗದರ್ಶನದಲ್ಲೇ ಆಯುರ್ವೇದ ಸಂಶೋಧನೆ, ಮನೋವಿಜ್ಞಾನ, ಯಾಜ್ಞಪಥಿ ಮತ್ತು ಧ್ಯಾನದ ಚಿಕಿತ್ಸಾ ಪ್ರಯೋಜನಗಳು, ಪ್ರಾಣಾಯಾಮ ಮುಂತಾದವುಗಳ ಸಂಶೋಧನೆಗಳು ನಡೆದವು.
ಗುರು ಪಂಡಿತ್ ಶ್ರೀರಾಮ ಶರ್ಮಾ ಆಚಾರ್ಯ ಅವರು 1990ರಲ್ಲಿ ಮಹಾಸಮಾಧಿ ಹೊಂದಿದ ಬಳಿಕ ಇಡೀ ಮಿಷನ್‍ನ ಹೊಣೆಗಾರಿಕೆ ಪಾಂಡ್ಯ ಹೆಗಲೇರಿತು. ಅದಾದ ನಂತರದಲ್ಲಿ ಗಾಯತ್ರಿ ಮಿಷನ್ ಆಲ್ ವಲ್ರ್ಡ್ ಗಾಯತ್ರಿ ಪರಿವಾರ್ ಆಗಿ ಬದಲಾಯಿತು. ಅವರ ನೇತೃತ್ವದಲ್ಲೇ ಅದು ಜಗತ್ತಿನಾದ್ಯಂತ ವಿಸ್ತರಿಸಲ್ಪಟ್ಟಿತು. ಪರಿಣಾಮ ಗಾಯತ್ರಿ ಪರಿವಾರಕ್ಕೆ ಜಾಗತಿಕ ಮನ್ನಣೆಯೂ ಸಿಗಲಾರಂಭಿಸಿತು. 1992ರ ಫೆಬ್ರವರಿಯಲ್ಲಿ ಬ್ರಿಟನ್‍ನ ಹೌಸ್ ಆಫ್ ಕಾಮನ್ಸ್ ಹಾಗೂ ಹೌಸ್ ಆಫ್ ಲಾಡ್ರ್ಸ್‍ನ್ನು ಜಂಟಿಯಾಗಿ ಉದ್ದೇಶಿಸಿ ಮಾತನಾಡಿ ಭಾರತೀಯ ಸಂಸ್ಕøತಿಯನ್ನು ವೈಜ್ಞಾನಿಕ ನೆಲೆಯಲ್ಲಿ ಪ್ರಸ್ತುತಪಡಿಸುವ ಅವಕಾಶವೂ ಪಾಂಡ್ಯ ಅವರಿಗೆ ಸಿಕ್ಕಿತು. ಇದೇ ರೀತಿ ಹತ್ತು ಹಲವು ಅವಕಾಶಗಳು ಅವರಿಗೆ ಸಿಕ್ಕಿವೆ. ಈಗ ರಾಜ್ಯಸಭೆಗೆ ನಾಮನಿರ್ದೇಶನವಾಗಿದ್ದೂ ಕೂಡ ಇದೇ ಸಾಧನೆಯ ಕಾರಣಕ್ಕೆ. ಆದರೆ ಅವರದನ್ನು ನಯವಾಗಿ ತಿರಸ್ಕರಿಸಿ ರಾಜಕೀಯ ಒಲ್ಲೆ; ಸಮಾಜಸೇವೆಯೇ ಸಾಕು ಎಂಬ ವಿರಳ ಸಂದೇಶ ರವಾನಿಸಿದರು.

Leave a Reply

Your email address will not be published. Required fields are marked *