ರಾಜತಂತ್ರ ನಿಪುಣ

ಕೆಲವೊಮ್ಮೆ ಇತಿಹಾಸ ಮರುಕಳಿಸುತ್ತದೆ. ಪಾತ್ರಧಾರಿಗಳು ಹಾಗೂ ಪ್ರದೇಶಗಳಷ್ಟೇ ಬದಲಾಗಿರುತ್ತವೆ. ಅದು 1980ನೇ ಇಸವಿ. ಕೇಂದ್ರದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅತ್ತ ಹರಿಯಾಣದಲ್ಲಿ ಜನತಾ ಪಾರ್ಟಿಯ ಸರ್ಕಾರವಿತ್ತು. ಮುಖ್ಯಮಂತ್ರಿಯಾಗಿದ್ದ ಭಜನ್‍ಲಾಲ್ ಆಡಳಿತ ಪಕ್ಷದ ಬಹುತೇಕ ಶಾಸಕರನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು. ಅವರ ಈ ನಡೆ, ಅವಕಾಶವಾದಿ ರಾಜಕಾರಣದ ಪ್ರತೀಕವಾಗಿ, `ಆಯಾ ರಾಮ್, ಗಯಾ ರಾಮ್’ ಸಂಸ್ಕøತಿಯ ಸಂಕೇತವಾಗಿ ರಾಜಕೀಯ ಇತಿಹಾಸದಲ್ಲಿ ದಾಖಲಾಯಿತು. ಇದಾಗಿ 36 ವರ್ಷವಾಗಿದ್ದು, ಪಕ್ಷಗಳಿಗೆ ಸಂಬಂಧಿಸಿ ಸರೀ ತದ್ವಿರುದ್ಧ ಘಟನೆ ನಡೆದು, ಇತಿಹಾಸ ಮರುಕಳಿಸಿದಂತೆ ಭಾಸವಾಗಿದೆ. ಈಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಿದೆ. ಅತ್ತ ಸದಾ ನಾಟಕೀಯ ರಾಜಕೀಯ ವಿದ್ಯಮಾನಗಳಿಗೆ ಒಳಗಾಗುವ ಅರುಣಾಚಲ ಪ್ರದೇಶದಲ್ಲಿ ಪೆಮಾ ಖಂಡು ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಅರವತ್ತು ಸದಸ್ಯ ಬಲದ ವಿಧಾನಸಭೆಯಲ್ಲಿ 44 ಸದಸ್ಯರು ಕಾಂಗ್ರೆಸ್ ಪಕ್ಷದವರು. ಶುಕ್ರವಾರ (ಸೆ.16)ದ ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಸೇರಿ 43 ಕಾಂಗ್ರೆಸ್ ಶಾಸಕರು ಬಿಜೆಪಿ ಬೆಂಬಲಿತ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ(ಪಿಪಿಎ)ಗೆ ಪಕ್ಷಾಂತರವಾಗಿದ್ದಾರೆ. ಇದರೊಂದಿಗೆ ಅರುಣಾಚಲ ಪ್ರದೇಶದಲ್ಲೀಗ ಎನ್‍ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಂತಾಗಿದೆ. ಈ ಬೆಳವಣಿಗೆಯೊಂದಿಗೆ ಪೆಮಾ ಖಂಡು ದೇಶದ ಗಮನಸೆಳೆದಿದ್ದಾರೆ. ಹಾಗೆ ನೋಡಿದರೆ ಪೆಮಾ ಮುಖ್ಯಮಂತ್ರಿ ಗಾದಿಗೇರಿ ಬಹಳ ಕಾಲವೇನೂ ಆಗಿಲ್ಲ. ಅದೂ ಒಂದು ನಾಟಕೀಯ ಬೆಳವಣಿಗೆಯೇ.
pema-khanduರಾಷ್ಟ್ರ ರಾಜಕಾರಣವನ್ನು ಗಮನಿಸಿದರೆ ಮೂವತ್ತೇಳು ವರ್ಷದ ಪೆಮಾ `ಉದಯೋನ್ಮುಖ ರಾಜಕೀಯ ತಾರೆ’ ಎಂದೇ ಹೇಳಬೇಕಷ್ಟೆ. ಯುವ ರಾಜಕಾರಣಿಯಾದರೂ ಅವರಿಗೆ ರಾಜಕೀಯ ಹೊಸದಾಗಿರಲಿಲ್ಲ. ಅವರ ತಂದೆ ದೋರ್ಜಿ ಖಂಡು ಅರುಣಾಚಲ ಪ್ರದೇಶದ ಆರನೇ ಮುಖ್ಯಮಂತ್ರಿ( 2007ರ ಏ.9- 2011ರ ಏ.30)ಯಾಗಿದ್ದವರು. ಅವರು ಅಧಿಕಾರಾವಧಿಯಲ್ಲೇ ತವಾಂಗ್ ಮತ್ತು ಇಟಾನಗರ ನಡುವೆ ಹೆಲಿಕಾಪ್ಟರ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದರು. ಅವರ ಏಳು ಮಕ್ಕಳ ಪೈಕಿ ಪೆಮಾ ರಾಜಕೀಯದತ್ತ ಒಲವು ಬೆಳೆಸಿಕೊಂಡು ಮುನ್ನುಗ್ಗಿದ್ದರು. 2000ನೇ ಇಸವಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಪೆಮಾ, 2005ರ ಹೊತ್ತಿಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಹೊಣೆಗಾರಿಕೆ ಹೊತ್ತುಕೊಂಡಿದ್ದರು. 2010ರಲ್ಲಿ ತವಾಂಗ್ ಜಿಲ್ಲಾ ಕಾಂಗ್ರೆಸ್‍ನ ಅಧ್ಯಕ್ಷರಾಗಿದ್ದ ಅವರು, 2011ರಲ್ಲಿ ತಂದೆ ನಿಧನಾನಂತರ ತವಾಂಗ್ ಜಿಲ್ಲೆಯ ಮುಕ್ತೋ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಲಾರಂಭಿಸಿದರು. ಅದೇ ವರ್ಷ ಜಲಸಂಪನ್ಮೂಲ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಜೆರ್ಬೋಮ್‍ಗ್ಯಾಮ್ಲಿನ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು. ಮುಂದೆ, 2014ರ ವಿಧಾನಸಭಾ ಚುನಾವಣೆಯಲ್ಲಿ ಮುಕ್ತೋ ಕ್ಷೇತ್ರದಿಂದ ಮರುಆಯ್ಕೆಯಾದರು. 2015ರ ಡಿಸೆಂಬರ್‍ನಲ್ಲಿ ಮುಖ್ಯಮಂತ್ರಿಯಾಗಿದ್ದ ನಬುಂ ತುಕಿ ಅವರ ಕಾರ್ಯಶೈಲಿ ಮತ್ತು ನಾಯಕತ್ವದ ಬಗ್ಗೆ ಭಿನ್ನಮತ ಭುಗಿಲೆದ್ದ ಬಳಿಕ ನಡೆದ ನಾಟಕೀಯ ಬೆಳವಣಿಗೆ ಪೆಮಾ ಅವರ ರಾಜಕೀಯ ಬದುಕಿಗೆ ತಿರುವು ನೀಡುವ ಮೆಟ್ಟಿಲಾಯಿತು.
ನಬುಂ ತುಕಿ ವಿರುದ್ಧ ಸಿಡಿದೆದ್ದ ಬಂಡಾಯ ಶಾಸಕರು ವಿಶ್ವಾಸಮತ ಯಾಚಿಸುವಂತೆ ಆಗ್ರಹಿಸಿದರು. ಅಂದು ರಾಜ್ಯಪಾಲರಾಗಿದ್ದ ಜೆ.ಪಿ.ರಾಜಖೋವಾ ಅವರು ಅವಧಿಪೂರ್ವದಲ್ಲೇ ಅಂದರೆ 2016ರ ಜನವರಿ 14ರಿಂದ ಆರಂಭವಾಗಬೇಕಿದ್ದ ವಿಧಾನಸಭೆ ಅಧಿವೇಶನವನ್ನು 2015ರ ಡಿಸೆಂಬರ್ 16ರಿಂದಲೇ ನಡೆಸುವಂತೆ ಸೂಚಿಸಿದರು. ಇದೇ ವೇಳೆ, ತುಕಿ ಅವರು ಬಂಡಾಯ ನಾಯಕ ಕಾಲಿಕೊ ಪೌಲ್ ಅವರನ್ನು ಶಾಸಕತ್ವದಿಂದ ಅಮಾನತುಗೊಳಿಸುವ ಕ್ರಮಕ್ಕೆ ಮುಂದಾದರು. ಅಷ್ಟರಲ್ಲಾಗಲೇ, ರಾಜ್ಯಪಾಲರ ಆದೇಶದಂತೆ ಅಧಿವೇಶನ ಆರಂಭಿಸಿದಾಗ, ಅಂದಿನ ಡೆಪ್ಯುಟಿ ಸ್ಪೀಕರ್ ಟಿ.ಎನ್.ತೊಂಗ್‍ಡೋಕ್ ಅವರು ತುಕಿ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಸ್ವೀಕರಿಸಿದರು. ನಾಟಕೀಯ ಬೆಳವಣಿಗೆಯಲ್ಲಿ ಕಾಲಿಕೊ ಪೌಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪೌಲ್ ಬೆಂಬಲಿಗ ಗುಂಪಿನಲ್ಲಿ ಪೆಮಾ ಕೂಡ ಇದ್ದರು. ಪೌಲ್ ಸರ್ಕಾರಕ್ಕೆ 11 ಬಿಜೆಪಿ ಶಾಸಕರ ಬೆಂಬಲವೂ ದಕ್ಕಿತ್ತು. ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಚೌನಾ ಮೇನ್ ಮತ್ತು ಕಮೆಂಗ್ ಡೋಲೊ ಅವರು ಉಪಮುಖ್ಯಮಂತ್ರಿಗಳಾದರು. ಪೌಲ್ ಸಂಪುಟದಿಂದ ಪೆಮಾ ಹೊರಗುಳಿದರು.
ಈ ನಡುವೆ, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ತುಕಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ತ್ವರಿತ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್‍ನ ಐವರು ನ್ಯಾಯಾಧೀಶರ ಪೀಠ ಒಮ್ಮತದಿಂದ ರಾಜ್ಯಪಾಲರ ನಡೆಯನ್ನು ಅನೂರ್ಜಿತಗೊಳಿಸಿ 2016ರ ಜುಲೈ 13ರಂದು ತೀರ್ಪು ನೀಡಿತು. ಅಷ್ಟೇ ಅಲ್ಲ, 2015ರ ಡಿಸೆಂಬರ್ 15ರ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಆದೇಶಿಸಿತು. ಪರಿಣಾಮ ತುಕಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬಂತು. ತುಕಿ ಮತ್ತೆ ಮುಖ್ಯಮಂತ್ರಿ ಗಾದಿಯೇರಿದರು. ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತಿಯಾಗಿದ್ದ ಪೌಲ್‍ಗೆ ಭಾರಿ ಮುಖಭಂಗವಾಯಿತು. ಅನಾರೋಗ್ಯ ನಿಮಿತ್ತ ರಜೆಯಲ್ಲಿದ್ದ ರಾಜ್ಯಪಾಲ ರಾಜ್‍ಖೋವಾ ಅವರ ಕರ್ತವ್ಯ ನಿರ್ವಹಿಸುತ್ತಿದ್ದ ಹಂಗಾಮಿ ರಾಜ್ಯಪಾಲ ತಥಾಗತ ರಾಯ್ ಅವರು ಜುಲೈ 16ರಂದು ತುಕಿ ಅವರಿಗೆ ವಿಶ್ವಾಸಮತ ಯಾಚಿಸುವಂತೆ ಸೂಚಿಸಿದರು. ಆದರೆ, ಜುಲೈ 15ರ ಮಧ್ಯರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಪೌಲ್ 38 ಶಾಸಕರೊಂದಿಗೆ ಸೇರಿ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಇದಾದ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ತುಕಿಗೆ ಪರ್ಯಾಯ ನಾಯಕನ ಹುಡುಕಾಟದಲ್ಲಿ ತೊಡಗಿತ್ತು. ಆಗ, ಮಾಜಿ ಉಪಮುಖ್ಯಮಂತ್ರಿ ಚೌನಾ ಮೇನ್ ಪೆಮಾ ಖಂಡು ಅವರ ಹೆಸರನ್ನು ಸೂಚಿಸಿದರು.
ಹಾಗೆ ರಾಜಕೀಯ ರಂಗಿನಾಟದ ವೇದಿಕೆಯ ಮುಂಚೂಣಿಗೆ ಬಂದವರು ಪೆಮಾ ಖಂಡು. ಪಕ್ಷದ ಹೈಕಮಾಂಡ್‍ಗೆ ಅವರು ಭರವಸೆಯ ನಾಯಕನಾಗಿಯೂ, ಹೊಸ ಮುಖವಾಗಿಯೂ ಗೋಚರಿಸಿದರು. ಕಾಲಿಕೊ ಪೌಲ್ ಸೇರಿದಂತೆ ಎಲ್ಲ ಬಂಡಾಯ ಶಾಸಕರೂ ಅವರನ್ನು ಬೆಂಬಲಿಸಿದರು. ಪರಿಣಾಮ ಜುಲೈ 17ರಂದು ಯುವ ರಾಜಕಾರಣಿ ಪೆಮಾ ಖಂಡು ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ 9ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರಿಗೆ 45 ಕಾಂಗ್ರೆಸ್ ಶಾಸಕರು ಹಾಗೂ ಇಬ್ಬರು ಪಕ್ಷೇತರರ ಬೆಂಬಲವಿತ್ತು. ಚೌನಾ ಮೇನ್ ಮತ್ತೆ ಉಪಮುಖ್ಯಮಂತ್ರಿಯಾದರು.
ಈ ಬೆಳವಣಿಗೆಯೊಂದಿಗೆ ಕಾಂಗ್ರೆಸ್ ಹೈಕಮಾಂಡ್ ರಾಜಕೀಯ ಸಮರವೊಂದನ್ನು ಗೆದ್ದಂತೆ ಬೀಗಿತು. ರಾಹುಲ್ ಗಾಂಧಿಯವರ ರಾಜಕೀಯ ತಂತ್ರಗಾರಿಕೆ ಎಂಬ ವಿಶ್ಲೇಷಣೆಯೂ ರಾಜಕೀಯ ಚಾವಡಿಯಲ್ಲಿ ನಡೆಯಿತು. ಆದರೆ, ಇದ್ಯಾವುದೂ ಬಹುಕಾಲ ಬಾಳಲಿಲ್ಲ. ಕಾರ್ಯನಿಷ್ಠೆ ಮತ್ತು ವ್ಯಕ್ತಿಗತ ಗೌರವಗಳಿಂದಲೇ ಪ್ರಸಿದ್ಧರಾಗಿದ್ದ ಪೆಮಾ ಖಂಡು ಎಲ್ಲ ಶಾಸಕರ ವಿಶ್ವಾಸಗಳಿಸಿದರು. ಅಲ್ಲದೇ, `ಟೀಮ್ ಅರುಣಾಚಲ’ ಮಂತ್ರ ಜಪಿಸತೊಡಗಿದರು. ಅವರ ಕಾರ್ಯತಂತ್ರ ಮತ್ತು ವೇಗಕ್ಕೆ ಎಲ್ಲರೂ ಮಾರುಹೋದರು. ಅಧಿಕಾರ ಸ್ವೀಕರಿಸಿದ ಬಳಿಕ ಪೆಮಾ ಖಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಅದು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರದ ಜತೆ ಉತ್ತಮ ನಂಟು, ಬಾಂಧವ್ಯ ಬೆಳೆಸುವ ಯತ್ನ ಎಂದು ಬಿಂಬಿತವಾಗಿತ್ತು. ಆದರೆ, ನಂತರ ನಡೆದುದು ಪೂರ್ವನಿಯೋಜಿತ ಅಷ್ಟೇ ಅಲ್ಲ ಯೋಜನಾಬದ್ಧವಾದ ರಾಜಕೀಯ ನಾಟಕ. ಅದೂ ಇತಿಹಾಸ ಮರುಕಳಿಸುವ ರೀತಿಯಲ್ಲೇ ಆಗಿದ್ದು ವಿಶೇಷ. ಈಗ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಶಾಸಕ ಎಂದು ಉಳಿದುಕೊಂಡಿರುವುದು ನಬುಂ ತುಕಿ ಮಾತ್ರ!
ಇಂತಹ ಡೈನಾಮಿಕ್ ನಾಯಕ ಪೆಮಾ 1979ರ ಆಗಸ್ಟ್ 21ರಂದು ತವಾಂಗ್ ಜಿಲ್ಲೆಯ ಗ್ಯನ್‍ಗ್ಕಾರ್ ಗ್ರಾಮದಲ್ಲಿ ಹುಟ್ಟಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ಬಳಿಕ ದೆಹಲಿಯ ಹಿಂದು ಕಾಲೇಜು ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. 2014ರ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್ ಪ್ರಕಾರ 129 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗೆ ಅವರು ಮಾಲೀಕರು. ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ.

Leave a Reply

Your email address will not be published. Required fields are marked *