ಸಾರ್ಕ್ ರಾಷ್ಟ್ರಗಳ ಬಾಂಧವ್ಯವೃದ್ಧಿಗೆ `ಜೈ’ಶಂಕರ್ ಸೂತ್ರ

ವಿಜಯವಾಣಿಯ ಸೆ.೧೫ರ ಸಂಚಿಕೆಯಲ್ಲಿ ಪ್ರಕಟವಾದ ವ್ಯಕ್ತಿವಿಶೇಷ
ವಿಜಯವಾಣಿಯ ಸೆ.೧೫ರ ಸಂಚಿಕೆಯಲ್ಲಿ ಪ್ರಕಟವಾದ ವ್ಯಕ್ತಿವಿಶೇಷ

“ನಮ್ಮ ನಡುವಿನ ಬಾಂಧವ್ಯವೃದ್ಧಿಯ ಉದ್ದೇಶದಿಂದ ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿಯವರನ್ನು `ಸಾರ್ಕ್ ಯಾತ್ರೆ’ಗೆ ಶೀಘ್ರವೇ ಕಳುಹಿಸಿಕೊಡುತ್ತಿದ್ದೇವೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಉದ್ದೇಶಿಸಿ ಮಾಡಿದ ಟ್ವೀಟ್ ಒಂದರಿಂದಲೇ ರಾಜತಾಂತ್ರಿಕ ವ್ಯವಹಾರಗಳಲ್ಲಿ ಹೊಸ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರ ಮಹತ್ವ ಏನು ಎಂಬುದು ಮನವರಿಕೆಯಾದೀತು.

ಕಳೆದ ಮಾಸಾಂತ್ಯದಲ್ಲಿ ಸೇವೆಯಿಂದ ನಿವೃತ್ತರಾಗಲು 72 ಗಂಟೆ ಬಾಕಿ ಇದೆ ಎನ್ನುವಾಗ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೈಶಂಕರ್ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಜ.28ರ ಸಂಜೆವರೆಗೂ ಅಮೆರಿಕದಲ್ಲಿ ಭಾರತದ ರಾಯಭಾರಿ ಹುದ್ದೆಯಲ್ಲಿ ಕರ್ತವ್ಯ ನಿಭಾಯಿಸಿದ್ದ ಜೈಶಂಕರ್ ಅವರಿಗೆ 36 ವರ್ಷಗಳ ವಿದೇಶ ಸೇವೆಯ ಅನುಭವವಿದೆ. ಈ ಅವಧಿಯಲ್ಲಿ ಅವರು ಹಲವು ಬಿಕ್ಕಟ್ಟುಗಳನ್ನು ಸಲೀಸಾಗಿ ಪರಿಹರಿಸಿದ್ದಾರೆ, ವಿವಾದಗಳನ್ನು ಇತ್ಯರ್ಥಗೊಳಿಸಿ ಭಾರತದ ಹಿತವನ್ನು ಕಾಪಾಡುವ ಜಾಣ್ಮೆ ಮೆರೆದಿದ್ದಾರೆ. ಈ ಮೂಲಕ ದಿಟ್ಟ ಹಾಗೂ ಕುಶಲ ಅಧಿಕಾರಿ ಎಂದೇ ಜೈಶಂಕರ್ ಹೆಸರುವಾಸಿ.

1977ರ ಬ್ಯಾಚಿನ ಭಾರತೀಯ ವಿದೇಶ ಸೇವೆ (ಐಎಫ್‍ಎಸ್) ಅಧಿಕಾರಿಯಾಗಿರುವ ಅವರು, 1979-1981ರ ತನಕ ಸೋವಿಯತ್ ಯೂನಿಯನ್‍ನ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮೂರನೇ ಮತ್ತು ಎರಡನೇ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ನವದೆಹಲಿಗೆ ವಾಪಸಾಗಿ ವಿದೇಶಾಂಗ ಸಚಿವಾಲಯದ ಅಮೆರಿಕ ವಿಭಾಗದಲ್ಲಿ ಅಧೀನ ಕಾರ್ಯದರ್ಶಿಯಾಗಿ ರಾಜತಾಂತ್ರಿಕ ಅಧಿಕಾರಿ ಜಿ.ಪಾರ್ಥಸಾರಥಿ ಅವರಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದರು.

1985- 1988ರ ತನಕ ವಾಷಿಂಗ್ಟನ್‍ನಲ್ಲಿ ಭಾರತದ ರಾಯಭಾರ ಕಚೇರಿಯಲ್ಲಿ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿ, ತಾರಾಪುರ ಪವರ್ ಸ್ಟೇಷನ್‍ಗಳಿಗೆ ಅಮೆರಿಕದಿಂದ ನ್ಯೂಕ್ಲಿಯರ್ ಇಂಧನ ಪೂರೈಕೆ ವಿಷಯದಲ್ಲಿ ಉಂಟಾದ ಬಿಕ್ಕಟ್ಟು ಪರಿಹರಿಸಿದ ತಂಡದ ಸದಸ್ಯರಾಗಿದ್ದರು. ಅಲ್ಲಿಂದೀಚೆಗೆ ವಿದೇಶಾಂಗ ಸಚಿವಾಲಯದಡಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ ಜೈಶಂಕರ್ 2007-09ರ ತನಕ ಸಿಂಗಾಪುರದಲ್ಲಿ, ನಂತರ 2013ರ ಡಿಸೆಂಬರ್ ತನಕ ಚೀನಾದಲ್ಲಿ, ಬಳಿಕ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು.
ಅಮೆರಿಕಕ್ಕೆ ಸಂಬಂಧಿಸಿದ ರಾಜತಾಂತ್ರಿಕ ವ್ಯವಹಾರಗಳಲ್ಲಿ ಅಪಾರ ನಿಪುಣತೆ ಸಾಧಿಸಿರುವ ಅವರು, 2005-06ರ ಆರಂಭಿಕ ಹಂತ ಹಾಗೂ ಇದೀಗ 2015ರಲ್ಲಿ ಅಮೆರಿಕ-ಭಾರತ ನಡುವಿನ ನಾಗರಿಕ ಪರಮಾಣು ಒಪ್ಪಂದ ಏರ್ಪಡುವಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದ್ದಾರೆ. ಅಷ್ಟು ಮಾತ್ರವಲ್ಲ, ಕಳೆದ ವರ್ಷ ನರೇಂದ್ರ ಮೋದಿ ಅವರು ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಸುಧಾರಿಸುವಲ್ಲಿ ಪ್ರಮುಖಪಾತ್ರ ನಿರ್ವಹಿಸಿದ್ದಲ್ಲದೇ, ಕಳೆದ ಸೆಪ್ಟೆಂಬರ್‍ನಲ್ಲಿ ಮೋದಿ ಅವರ ಅಮೆರಿಕ ಪ್ರವಾಸವನ್ನು ಸುಸೂತ್ರ ಹಾಗೂ ಯಶಸ್ವಿಯಾಗಿ ನಿರ್ವಹಿಸಿದ್ದರು. ಈ ಭೇಟಿ ಬಳಿಕ ಮೋದಿ ಅವರು ಒಬಾಮರನ್ನು ಗಣರಾಜ್ಯೋತ್ಸವದ ಅತಿಥಿಯಾಗಿ ಆಹ್ವಾನಿಸುವ ಕುರಿತಂತೆ ಅಮೆರಿಕದಲ್ಲಿರುವ ಕೆಲ ಭಾರತೀಯರ ಜೊತೆ ಚರ್ಚಿಸಿದ್ದರು. ಪ್ರಧಾನಿ ಮನಸ್ಸಿನ ಇಂಗಿತ ಅರ್ಥಮಾಡಿಕೊಂಡ ಜೈಶಂಕರ್, ವೈಟ್‍ಹೌಸ್ ಜೊತೆ ಸಂಪರ್ಕ ಸಾಧಿಸಿದ್ದಲ್ಲದೇ, ಒಬಾಮ ಅವರಿಗೆ ವಿಷಯ ತಲುಪಿಸಿದರು. ಪ್ರಾಥಮಿಕ ಹಂತದ ಕೆಲಸ ಮುಗಿದ ಬಳಿಕವಷ್ಟೇ ಪ್ರಧಾನಿ ಮೋದಿ ಟ್ವೀಟ್ ಮೂಲಕ `ಗಣರಾಜ್ಯೋತ್ಸವದ ಅತಿಥಿಯಾಗಿ ಒಬಾಮರನ್ನು ಆಹ್ವಾನಿಸಿದ್ದೇನೆ’ ಎಂದು ಪ್ರಕಟಿಸಿದ್ದರು. ಹೀಗೆ ಪ್ರಧಾನಿ ಮನಗೆದ್ದ ಜೈಶಂಕರ್ ತಮ್ಮ ಕಾರ್ಯದಕ್ಷತೆಯಿಂದಲೇ ಗಮನ ಸೆಳೆದಿದ್ದಾರೆ.

ಅತ್ಯುತ್ತಮ ದೂರದೃಷ್ಟಿ, ರಾಜತಾಂತ್ರಿಕ ಅನುಭವ ಮತ್ತು ಕ್ಷಿಪ್ರ ಕಾರ್ಯಗಳಿಂದಾಗಿಯೇ ಜೈಶಂಕರ್ ಉಳಿದ ರಾಜತಾಂತ್ರಿಕ ಅಧಿಕಾರಿಗಳಿಗಿಂತ ಭಿನ್ನವಾಗಿ ಗೋಚರಿಸುತ್ತಾರೆ. ಇದಕ್ಕೆ ಖೋಬ್ರಗಡೆ ಘಟನೆ ವೇಳೆ ಅವರು ನಡೆದುಕೊಂಡ ರೀತಿ ಅತ್ಯುತ್ತಮ ನಿದರ್ಶನ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ 2013ರ ಸೆಪ್ಟೆಂಬರ್‍ನಲ್ಲೇ ಜೈಶಂಕರ್ ಅವರನ್ನು ಸರ್ಕಾರ ನೇಮಿಸಿತ್ತು. ಅವರು ಡಿಸೆಂಬರ್ 23ರಂದು ಅಲ್ಲಿ ಅಧಿಕಾರ ಸ್ವೀಕರಿಸಿದರು. ದೆಹಲಿ ಬಿಡುವುದಕ್ಕೆ ಮುನ್ನ ಸ್ಥಳೀಯ ಗಣ್ಯರೊಬ್ಬರು ಏರ್ಪಡಿಸಿದ್ದ ಔತಣಕೂಟದಲ್ಲಿ ಜೈಶಂಕರ್ ಭಾಗವಹಿಸಿದ್ದರು. ಅದೇ ಔತಣಕೂಟಕ್ಕೆ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ನ್ಯಾನ್ಸಿ ಪೊವೆಲ್ ಕೂಡಾ ಆಗಮಿಸಿದ್ದರು. ಅಲ್ಲಿ ಐಎಫ್‍ಎಸ್ ಅಧಿಕಾರಿಗಳೇನಕರು ಇದ್ದರು. ನ್ಯೂಯಾರ್ಕ್ ಪೊಲೀಸರು ದೇವಯಾನಿ ಖೋಬ್ರಗಡೆ ಅವರಿಗೆ ಕೈ ಕೋಳ ತೊಡಿಸಿ ಬಂಧಿಸಿದ್ದರ ಬಗ್ಗೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ, ಯಾರೊಬ್ಬರೂ ಪೊವೆಲ್ ಬಳಿ ಹೋಗಿ ಮಾತನಾಡಲು ಸಿದ್ಧರಿರಲಿಲ್ಲ. ಜೈಶಂಕರ್ ಧೈರ್ಯ ಮಾಡಿ ಪೊವೆಲ್ ಬಳಿ ಹೋಗಿದ್ದಲ್ಲದೇ, ದೇವಯಾನಿ ವಿಚಾರ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಲಿದೆ ಎಂದು ಎಚ್ಚರಿಸಿದ್ದರು. ಅದರಂತೆಯೇ, ಅಂತಹ ಬಿಕ್ಕಟ್ಟು ಏರ್ಪಟ್ಟಿದ್ದಲ್ಲದೇ, ದೇವಯಾನಿ ಅವರನ್ನು ಬಿಡುಗಡೆ ಮಾಡಬೇಕಾಗಿ ಬಂತು ಎಂಬುದು ಇತಿಹಾಸ.

ಜೈಶಂಕರ್ ಅವರ ರಾಜತಾಂತ್ರಿಕ ಸಂಬಂಧ, ಸಂಪರ್ಕ ಕೇವಲ ಅಮೆರಿಕಕ್ಕೆ ಸೀಮಿತವಲ್ಲ. ಆಗ್ನೇಯ ಏಷ್ಯಾ ರಾಷ್ಟ್ರಗಳು, ಸಾರ್ಕ್ ರಾಷ್ಟ್ರಗಳು, ಚೀನಾ ಮತ್ತಿತರ ರಾಷ್ಟ್ರಗಳ ಜೊತೆಗೂ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಕಾಪಾಡಿಕೊಂಡಿದ್ದಾರೆ. ಚೀನಾದಲ್ಲಿ ಅತಿದೀರ್ಘಾವಧಿ ಅಂದರೆ ನಾಲ್ಕೂವರೆ ವರ್ಷ ಭಾರತದ ರಾಯಭಾರಿಯಾಗಿದ್ದ ಕೀರ್ತಿ ಅವರದ್ದು. ಬೀಜಿಂಗ್‍ನಲ್ಲಿದ್ದಾಗ ಚೀನಾ ಹಾಗೂ ಭಾರತದ ನಡುವಿನ ಆರ್ಥಿಕ, ವಾಣಿಜ್ಯ ಹಾಗೂ ಸಾಂಸ್ಕøತಿಕ ಬಾಂಧವ್ಯ ಇನ್ನಷ್ಟು ಬಲಗೊಳ್ಳುವಂತೆ ಮಾಡಿದ್ದರು. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಚೀನಾ-ಭಾರತದ ನಡುವಿನ ಗಡಿ ವಿವಾದವನ್ನೂ ಬಹಳ ನಾಜೂಕಾಗಿ ನಿರ್ವಹಿಸಿದ್ದರು. 2013ರಲ್ಲಿ ಚೀನಾ ಅತಿಕ್ರಮಣ ನಡೆಸಿದಾಗ ಏರ್ಪಟ್ಟ ರಾಜತಾಂತ್ರಿಕ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಮುಖಪಾತ್ರ ವಹಿಸಿದವರು.

ವಿಶೇಷವೆಂದರೆ, 2013ರ ಮಧ್ಯಭಾಗದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಯ್ಕೆ ವಿಚಾರ ಬಂದಾಗ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಮೊದಲ ಆಯ್ಕೆ ಜೈ ಶಂಕರ್ ಅವರೇ ಆಗಿದ್ದರು! ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಮತ್ತು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪುಲ್ಲೋಕ್ ಚಟರ್ಜಿ ಕೂಡಾ ಇದನ್ನು ಬೆಂಬಲಿಸಿದ್ದರು. ಆದರೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಯ್ಕೆ ಸುಜಾತ್ ಸಿಂಗ್ ಆಗಿದ್ದರಿಂದ ಸಿಂಗ್ ವಿದೇಶಾಂಗ ಕಾರ್ಯದರ್ಶಿಯಾದರು.

ಆದಾಗ್ಯೂ, ಪ್ರತಿಭಾವಂತರಿಗೆ ಮನ್ನಣೆ ಸ್ವಲ್ಪ ತಡವಾಗಿಯಾದರೂ ಸಿಕ್ಕೇ ಸಿಗುತ್ತದೆ ಎಂಬುದು ಜೈಶಂಕರ್ ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಯಿತು. ನಿವೃತ್ತಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಂತೆ ಸೇವಾವಧಿ ವಿಸ್ತರಣೆ ಜೊತೆ ಅನಿರೀಕ್ಷಿತವಾಗಿ ವಿದೇಶಾಂಗ ಕಾರ್ಯದರ್ಶಿಯ ಜವಾಬ್ದಾರಿಯೂ ಅವರ ಹೆಗಲೇರಿತು.

ಅಂದ ಹಾಗೆ, ಜೈಶಂಕರ್ ತಮಿಳುನಾಡು ಮೂಲದವರಾಗಿದ್ದು, 1955 ಜನವರಿ 9ರಂದು ನವದೆಹಲಿಯಲ್ಲಿ ಜನಿಸಿದರು. ಭಾರತದ ವ್ಯೂಹಾತ್ಮಕ ವ್ಯವಹಾರಗಳ ಖ್ಯಾತ ವಿಶ್ಲೇಷಕ ಕೆ. ಸುಬ್ರಹ್ಮಣ್ಯಂ ಅವರ ಪುತ್ರ. ನವದೆಹಲಿಯ ಏರ್‍ಫೋರ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ, ಜವಹರಲಾಲ್ ನೆಹರು ವಿ.ವಿ.ಯಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ನ್ಯೂಕ್ಲಿಯರ್ ಡಿಪ್ಲೊಮಸಿಯ ವಿಶೇಷ ವಿಷಯದೊಂದಿಗೆ ಡಾಕ್ಟರೇಟ್ ಪದವಿ ಪಡೆದರು.

ಸದ್ಯ ವಿದೇಶಾಂಗ ಕಾರ್ಯದರ್ಶಿಯಾಗಿ ಅವರು ಸಾರ್ಕ್ ಯಾತ್ರೆಗೆ ಹೊರಟಿದ್ದು, ಪಾಕಿಸ್ತಾನ ಸೇರಿದಂತೆ ಸಾರ್ಕ್ ರಾಷ್ಟ್ರಗಳ ಜೊತೆಗಿನ ಸಂಬಂಧ ಸುಧಾರಿಸುವ ಮಹತ್ವದ ಹೊಣೆ ಅವರ ಹೆಗಲೇರಿದೆ. ಪಾಕಿಸ್ತಾನದ ಜೊತೆಗಿನ ಹದಗೆಟ್ಟ ಬಾಂಧವ್ಯವನ್ನು ಅವರು ಯಾವ ರೀತಿ ಸರಿಪಡಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *