ಸೈನಿಕ ಪುತ್ರ `ಸಿರಿಸೇನಾ’ ಶ್ರೀಲಂಕಾಗೆ ಅಧಿಪತಿ

`ಒಂದೊಮ್ಮೆ ಈ ಚುನಾವಣೆಯಲ್ಲಿ ನಾನು ಸೋತರೆ ಕಳೆದ ಚುನಾವಣೆಯಲ್ಲಿ ಸೋತ ಜನರಲ್ ಶರತ್ ಫೊನೆಸ್ಕಾರಿಗಾದ ಗತಿಯೇ ನVYAKTHI VISHESHA - Maithripala Sirisena 11.1.15ನಗೂ ಆಗಲಿದೆ. ರಾಜಪಕ್ಸ ಕುಟುಂಬದ ಆಡಳಿತವನ್ನು ಕೊನೆಗೊಳಿಸಬೇಕಾಗಿದೆ. ದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆ ತರಬೇಕೆಂಬ ಇಚ್ಛೆ ನನ್ನದು’ – ಇದು ಆರುವಾರಗಳ ಹಿಂದೆ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮೈತ್ರಿಪಾಲ ಸಿರಿಸೇನಾ ಆರು ವಾರಗಳ ಹಿಂದಷ್ಟೇ ವಿಪಕ್ಷ ಮೈತ್ರಿಕೂಟದ ಅಭ್ಯರ್ಥಿಯಾಗಿ ಹೇಳಿದ ಮಾತಿದು.

ಮೃದು ಮಾತಿನ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಮೈತ್ರಿಪಾಲ ಇಂಥ ಮಾತು ಹೇಳಬೇಕೆಂದರೆ ಅದರ ಹಿಂದೆ ನಡೆದ ರಾಜಕೀಯ ಬೆಳವಣಿಗೆಗಳೇ ಕಾರಣ. ಚುನಾವಣೆ ಘೋಷಣೆಯಾಗುವ ಮೊದಲು ನಡೆದ ಘಟನೆ ಅದು. ಮೂರು ತಿಂಗಳು ಮೊದಲೇ ಇದರ ಸುಳಿವರಿತ ಸಿರಿಸೇನಾ, ಅವಧಿಪೂರ್ವ ಚುನಾವಣೆ ನಡೆಸದಂತೆ ಮಹಿಂದಾಗೆ ಪತ್ರ ಬರೆದಿದ್ದರು. ದೇಶಾದ್ಯಂತ ಆಡಳಿತ ವಿರೋಧಿ ಅಲೆ ಇದೆ. ಇನ್ನುಳಿದ ಎರಡು ವರ್ಷ ಕಾಲ ಆದ ತಪ್ಪುಗಳನ್ನು ಸರಿಪಡಿಸಲು ಉಪಯೋಗಿಸಬೇಕು. ನಂತರ ಚುನಾವಣೆ ಎದುರಿಸಿದರೆ ಸಾಕು ಎಂದು ಸಲಹೆಯನ್ನೂ ನೀಡಿದ್ದರು. ಅದನ್ನು ಲೆಕ್ಕಿಸದೇ ಮಹಿಂದಾ ನಿರ್ಣಯ ತೆಗೆದುಕೊಂಡಿದ್ದೇ ಬಂಡಾಯಕ್ಕೆ ಕಾರಣ. ಅಷ್ಟೇ ಅಲ್ಲ, ರಾಜಕೀಯ ಬದುಕಿನಲ್ಲಿ ಅತ್ಯಂತ ಕ್ಲಿಷ್ಟಕರ ಸವಾಲು ಎದುರಿಸಬೇಕಾದ ಪರಿಸ್ಥಿತಿ ಕೂಡಾ ಚುನಾವಣಾ ಕಣಕ್ಕಿಳಿವ ತನ್ನ ನಿರ್ಧಾರದಲ್ಲಿ ಅಡಗಿತ್ತು ಎಂದು ಅವರು ಗೆದ್ದ ಬಳಿಕ ಹೇಳಿಕೊಂಡಿದ್ದಾರೆ.

ಹೌದು.. ಅರುವತ್ತು ದಿನಗಳಲ್ಲಿ ನೆರೆ ರಾಜ್ಯದ ಶ್ರೀಲಂಕಾದ ರಾಜಕೀಯ ಚಿತ್ರಣವೇ ಬದಲಾಗಿ ಹೋಯಿತು. ಮೂರನೇ ಅವಧಿಗೆ ಅಧಿಕಾರ ಹಿಡಿಯಬೇಕೆಂದು ಸಂವಿಧಾನ ತಿದ್ದುಪಡಿ ಮಾಡಿ ಅವಧಿಪೂರ್ವ ಚುನಾವಣೆ ಘೋಷಿಸಿದ್ದರು ಮಹಿಂದಾ ರಾಜಪಕ್ಸ. ಅವರ ಸಚಿವ ಸಂಪುಟದ ಸಹೋದ್ಯೋಗಿ, ಹೆಚ್ಚೇನೂ ಪ್ರಭಾವಿಯಾಗಿಲ್ಲದ ಮೈತ್ರಿಪಾಲ ಸಿರಿಸೇನಾ ಅನಿರೀಕ್ಷಿತವಾಗಿ ಚುನಾವಣಾ ಕಣದಲ್ಲಿ ಪ್ರಬಲ ಎದುರಾಳಿಯಾಗಿಬಿಟ್ಟರು. ಚುನಾವಣೆ ಘೋಷಣೆಯಾದ ಮರುದಿನವೇ ಸರ್ಕಾರ ಹಾಗೂ ಪಕ್ಷ ತ್ಯಜಿಸಿದ ಸಿರಿಸೇನಾ ಸ್ಪರ್ಧೆಗಿಳಿಯುವುದಾಗಿ ಘೋಷಿಸಿದರು. ತುರುಸಿನ ರಾಜಕೀಯ ನಡೆಯಲ್ಲಿ ಕೂಡಲೇ ಒಂದಾದ ವಿಪಕ್ಷಗಳು ಸಿರಿಸೇನಾ ಬೆಂಬಲಕ್ಕೆ ನಿಂತವು. ಮುಂದಿನದು ಲಂಕಾ ರಾಜಕೀಯದ ಪುಟದಲ್ಲಿ ದಪ್ಪ ಅಕ್ಷರಗಳಲ್ಲಿ ದಾಖಲಿಸಬೇಕಾದ ಇತಿಹಾಸ. ಮೃದುಮಾತಿನ ಸಿರಿಸೇನಾ `ಜೈಂಟ್ ಕಿಲ್ಲರ್’ ಆಗಿಬಿಟ್ಟರು.

ಇಂತಹ ಮೈತ್ರಿಪಾಲ ಸಿರಿಸೇನಾ ಅವರ ಹುಟ್ಟೂರು ಪೋಲುನ್ನರುವಾ. ಹುಟ್ಟಿದ್ದು 1951 ಸೆಪ್ಟೆಂಬರ್ 3ರಂದು. `ಪಲ್ಲವಟ್ಟೆ ಗಮರಲಾಲಗೆ ಮೈತ್ರಿಪಾಲ ಯಪ ಸಿರಿಸೇನಾ’ ಅವರ ಪೂರ್ಣ ಹೆಸರು. ತಂದೆ ಅಲ್ಬರ್ಟ್ ಸಿರಿಸೇನಾ ಎರಡನೇ ವಿಶ್ವಮಹಾ ಯುದ್ಧದಲ್ಲಿ ಹೋರಾಡಿದವರು. ಅವರ ಸೇವೆ ಮೆಚ್ಚಿದ ಅಂದಿನ ಲಂಕಾ ಪ್ರಧಾನಿ ಡಿ.ಎಸ್.ಸೇನಾನಾಯಕೆ ಹುಟ್ಟೂರಿನ ಸಮೀಪವೇ ಐದು ಎಕರೆ ಭತ್ತದ ಗದ್ದೆಯನ್ನು ಕೊಡುಗೆಯಾಗಿ ನೀಡಿದ್ದರು. ಹುಟ್ಟೂರಿನಲ್ಲೇ ಕಾಲೇಜು ಶಿಕ್ಷಣ ಪಡೆದ ಅವರು, ಕುಂಡಸಾಲೆಯ ಶ್ರೀಲಂಕಾ ಸ್ಕೂಲ್ ಆಫ್ ಅಗ್ರಿಕಲ್ಚರ್‍ನಲ್ಲಿ ಮೂರವರ್ಷದ ಕೃಷಿ ಪದವಿ ಪಡೆದರು. ಮುಂದೆ 1980ರಲ್ಲಿ ರಷ್ಯಾದ ಮಾಕ್ಸಿಮ್ ಗೋರ್ಕಿ ಲಿಟ್ರೇಚರ್ ಇನಿಸ್ಟಿಟ್ಯೂಟ್‍ನಲ್ಲಿ ರಾಜಕೀಯ ವಿಜ್ಞಾನದ ಡಿಪ್ಲೊಮಾ ಪದವಿ ಪಡೆದರು. ಆದರೆ, ಕೃಷಿಯನ್ನೇ ವೃತ್ತಿಯನ್ನಾಗಿಸಿಕೊಂಡವರು.

ಮೈತ್ರಿಪಾಲ ಅವರು ಹದಿಹರೆಯದವರಿದ್ದಾಗಲೇ ಕಮ್ಯುನಿಸಂನಿಂದ ಪ್ರಭಾವಿತರಾಗಿದ್ದರು. ಹಾಗೆಯೇ ಮಹಾತ್ಮ ಗಾಂಧೀಜಿಯವರ ತತ್ತ್ವಾದರ್ಶಗಳಿಂದ ಪ್ರಭಾವಿತರಾಗಿದ್ದರು. ಆದರೆ, ಅವರು ಸೇರಿದ್ದು ಮಾತ್ರ ಶ್ರೀಲಂಕಾ ಫ್ರೀಡಂ ಪಾರ್ಟಿ(ಎಸ್‍ಎಲ್‍ಎಫ್‍ಪಿ)ಯ ಯುವಘಟಕಕ್ಕೆ. 1967ರಲ್ಲಿ ಆರಂಭವಾದ ರಾಜಕೀಯ ಜೀವನದ ಗ್ರಾಫ್ ಹಂತ ಹಂತವಾಗಿ ಮೇಲೇರುತ್ತಲೇ ಹೋಯಿತು. 1981ರಲ್ಲಿ ಅದೇ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾದರು. 1983ರಲ್ಲಿ ಆಲ್ ಐಲಾಂಡ್ ಎಸ್‍ಎಲ್‍ಎಫ್‍ಪಿ ಯುವ ಘಟಕದ ಅಧ್ಯಕ್ಷರೂ ಆದರು. ಯುವ ಘಟಕದ ಮೂಲಕ ರಾಜಕಾರಣ ನಡೆಸುತ್ತಿದ್ದ ಮೈತ್ರಿಪಾಲ 1989ರಲ್ಲಿ ರಾಜಕೀಯ ಮುಖ್ಯವಾಹಿನಿ ಪ್ರವೇಶಿಸಿದರು. ಇದೇ ವರ್ಷ ನಡೆದ ಚುನಾವಣೆಯಲ್ಲಿ ಗೆದ್ದ ಅವರು ಪೋಲುನ್ನರುವಾ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದರು. 1994ರಲ್ಲಿ ಅವರು ಪೀಪಲ್ಸ್ ಅಲಯನ್ಸ್ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ಈ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದು ಚಂದ್ರಿಕಾ ಕುಮಾರ ತುಂಗಾ ಅಧ್ಯಕ್ಷರಾದರು. ಇವರ ಸಂಪುಟಕ್ಕೆ ನೀರಾವರಿ ಸಹಾಯಕ ಸಚಿವರಾಗಿ ಎಂಟ್ರಿ ಕೊಟ್ಟರು. ಮುಂದೆ 1997ರಲ್ಲಿ ಜಲಸಂಪನ್ಮೂಲ ಸಚಿವರಾಗಿ ಬಡ್ತಿ ಪಡೆದರು. 2000ದ ಆಗಸ್ಟ್ ತಿಂಗಳಲ್ಲಿ ಎಸ್‍ಎಲ್‍ಎಫ್‍ಪಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಎಸ್.ಬಿ. ದಿಸ್ಸನಾಯಕೆ ಎದುರು ಸೋತರು. 2001ರಲ್ಲಿ ದಿಸ್ಸನಾಯಕೆ ಬಂಡಾಯ ಎದ್ದು ಯುನೈಟೆಡ್ ನ್ಯಾಷನಲ್ ಪಾರ್ಟಿ ಕಟ್ಟಿದಾಗ, ಸಿರಿಸೇನಾ ಎಸ್‍ಎಲ್‍ಎಫ್‍ಪಿಗೆ ಪ್ರಧಾನ ಕಾರ್ಯದರ್ಶಿಯಾದರು. ಇದೇ ವರ್ಷ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಗೆದ್ದರಾದರೂ, ವಿಪಕ್ಷದಲ್ಲಿ ಕೂರಬೇಕಾಯಿತು.

ಮುಂದೆ 2005ರಲ್ಲಿ ಚುನಾವಣೆ ನಡೆದು ಮಹಿಂದಾ ರಾಜಪಕ್ಸ ಅಧ್ಯಕ್ಷರಾದಾಗ ಸಿರಿಸೇನಾ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ. ರಾಜಪಕ್ಸ ಕುಟುಂಬಕ್ಕೆ ನಿಕಟವಾಗುತ್ತಾರೆ. ಕೃಷಿ ಸಚಿವರಾಗಿ ಮೊದಲ ಅವಧಿಯಲ್ಲೂ, ಆರೋಗ್ಯ ಸಚಿವರಾಗಿ ಎರಡನೇ ಅವಧಿಯಲ್ಲೂ ಜವಾಬ್ದಾರಿ ನಿರ್ವಹಿಸಿದ್ದರು. 2008ರಲ್ಲಿ ಎಲ್‍ಟಿಟಿಇ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದರು. ಕಳೆದ ವರ್ಷ ಸೆಪ್ಟೆಂಬರ್ ನಂತರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಹೀಗೆ ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೆದ್ದ ಮುತ್ಸದ್ಧಿ ರಾಜಕಾರಣಿಯನ್ನು ಅಧ್ಯಕ್ಷಗಾದಿಯಲ್ಲಿ ಕೂರಿಸಿಬಿಟ್ಟಿತು.

ಬುದ್ಧನ ಆರಾಧಕ ಸಿರಿಸೇನ ಅವರ ರಾಜಕೀಯ ಹಾಗೂ ಖಾಸಗಿ ಜೀವನದ ಹಾದಿಯನ್ನು ನೆನಪಿಸುತ್ತಿದೆ ಅವರ ಆಪ್ತ ವಲಯ. ಸಿರಿಸೇನಾ ಅವರ `ಮೊದಲ ನೋಟ’ದ ಪ್ರೇಮ ಕಥೆಯೂ ಅದರಲ್ಲೊಂದು. 1960ರ ದಶಕ ಅದು. ಚುನಾವಣಾ ಪ್ರಚಾರಕ್ಕಾಗಿ ಪೆÇಲುನ್ನರುವಾದಿಂದ ಕೊಲೊಂಬೊಗೆ ಪಕ್ಷದ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದಾಗ ಸಿರಿಸೇನಾರ ಲಾರಿಯ ಟಯರ್ ಪಂಕ್ಚರ್ ಆಗಿಬಿಡುತ್ತದೆ. ಈ ಘಟನೆ ನಡೆದುದು ಕುರುಂಗಲ ಎಂಬ ಹಳ್ಳಿ ಸಮೀಪ. ಹಾಗೆ ಲಾರಿಯಿಂದ ಇಳಿದು ರಸ್ತೆ ಬದಿ ನಿಂತಿದ್ದಾಗ ಕಟ್ಟಿಗೆ ಸಂಗ್ರಹಿಸುತ್ತಿದ್ದ ಹುಡುಗಿಯರಿಬ್ಬರು ಸಿರಿಸೇನಾರ ಕಣ್ಣಿಗೆ ಬೀಳುತ್ತಾರೆ. ಅವರ ಪೈಕಿ ಒಬ್ಬಾಕೆ ಸಿರಿಸೇನಾರ ಮನ ಗೆಲ್ಲುತ್ತಾಳೆ. ಆಕೆ ಹೆಸರು ಜಯಂತಿ ಪುಷ್ಪ ಕುಮಾರಿ. ಹಾಗೆ ಮೊದಲ ನೋಟದ ಪ್ರೀತಿ ಹಾಗೂ ಅವರ ಲವ್ ಸ್ಟೋರಿ 1970ರ ದಶಕದಲ್ಲಿ ಮದುವೆಯೊಂದಿಗೆ ಸತಿಪತಿಗಳಾಗಿ ಮುಂದುವರಿಯಿತು. ಈಗ ಈ ದಂಪತಿಗೆ 22 ವರ್ಷದ `ಧಹಮ್’ ಎಂಬ ಮಗ, ಧರಣಿ ಹಾಗೂ ಚತುರಿಕಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

ಪ್ರಸ್ತುತ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅವರ ಮುಂದೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸುವ ಜೊತೆಗೆ ಆಡಳಿತ ಸರಿಪಡಿಸುವ ಮಹತ್ವದ ಹೊಣೆ ಹೆಗಲೇರಿದೆ. ಭಾರತ, ಚೀನಾ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ಲಂಕಾದ ಕಡೆ ನೋಡತೊಡಗಿವೆ. ಅವರ ಕಾರ್ಯವೈಖರಿ ಜಗದ ಮುಂದೆ ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. `ಅಚ್ಛೇ ದಿನ್’ ನಿರೀಕ್ಷೆ ಅಲ್ಲೂ ಇದೆ.. ಇಲ್ಲೂ ಇದೆ..

Tags :

Leave a Reply

Your email address will not be published. Required fields are marked *