ಸಂಹಿತೆ ಮೀಮಾಂಸೆ

ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್ ಪದ್ಧತಿ ವಿರುದ್ಧ ಕೇಂದ್ರ ಸರ್ಕಾರ ಕಳೆದವಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ ಅಫಿಡವಿಟ್ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದಕ್ಕೆ ಪೂರಕ ಎಂಬಂತೆ ಕೇಂದ್ರ ಕಾನೂನು ಆಯೋಗ ಸಮಾನ ನಾಗರಿಕ ಸಂಹಿತೆ ಕುರಿತ ಪ್ರಶ್ನಾವಳಿ ಪ್ರಕಟಿಸಿದ್ದು, ಸಾರ್ವಜನಿಕ ಅಭಿಪ್ರಾಯ ಕೋರಿದೆ.

uccಕಳೆದ ವರ್ಷ ಅಕ್ಟೋಬರ್ನಲ್ಲಿ ಪತಿಯಿಂದ ತ್ರಿವಳಿ ತಲಾಖ್ನೊಂದಿಗೆ ವಿಚ್ಛೇದಿಸಲ್ಪಟ್ಟ ಉತ್ತರಾಖಂಡದ ಮುಸ್ಲಿಂ ಮಹಿಳೆ ಶಾಯರಾ ಬಾನೊ, ಪ್ರಕರಣವನ್ನು ಕೋರ್ಟ್ಗೆ ಒಯ್ದಿದ್ದರು. ಈ ವರ್ಷಾರಂಭದಲ್ಲಿ ದಾವೆ ಹೂಡಿದ ಶಾಯರಾ ಬಾನೊ, ತ್ರಿವಳಿ ತಲಾಖ್ ಪದ್ಧತಿ ರದ್ದುಗೊಳಿಸಬೇಕು, ಮುಸ್ಲಿಂ ಮಹಿಳೆಯರ ಹಕ್ಕು ಕಾಪಾಡಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಂಡಿದ್ದರು. ಕೇಂದ್ರ ಸರ್ಕಾರ, ಕೇಂದ್ರ ಕಾನೂನು ಸಚಿವಾಲಯ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ), ರಾಷ್ಟ್ರೀಯ ಮಹಿಳಾ ಆಯೋಗ, ತಲಾಖ್ ನೀಡಿದ ಪತಿ ರಿಜ್ವಾನ್ ಅಹ್ಮದ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಈ ವಿಷಯವಾಗಿ ಅಭಿಪ್ರಾಯ ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ತ್ರಿವಳಿ ತಲಾಖ್ಗೆ ವಿರೋಧ ವ್ಯಕ್ತಪಡಿಸಿ ಅ.8ರಂದು ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.

ಇನ್ನೊಂದೆಡೆ, ನ್ಯಾ.ಡಾ.ಬಿ.ಎಸ್.ಚೌಹಾಣ್ ನೇತೃತ್ವದ ಕೇಂದ್ರ ಕಾನೂನು ಆಯೋಗವು ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಿರುವ ‘ಸಮಾನ ನಾಗರಿಕ ಸಂಹಿತೆ’ ಜಾರಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಅ.7ರಂದು ಪ್ರಕಟಿಸಿದೆ. ಈ ಕುರಿತು ಸಾರ್ವಜನಿಕ ಅಭಿಪ್ರಾಯವನ್ನೂ ಅದು ಕೋರಿದೆ.

ಈ ಎರಡು ಬೆಳವಣಿಗೆಗಳು ಸಮಾನ ನಾಗರಿಕ ಸಂಹಿತೆ ಅನುಷ್ಠಾನದ ವಿಚಾರವನ್ನು ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ತಂದಿವೆ. ಅದರ ಅನುಷ್ಠಾನದ ಅಗತ್ಯವನ್ನು ಸಾಬೀತು ಮಾಡುವಂತಹ ಪ್ರಕರಣಗಳೂ ವಿವಿಧ ನ್ಯಾಯಾಲಯಗಳ ಮುಂದಿವೆ. ಆದರೆ, ಈ ವಿಷಯದ ಸಂಕೀರ್ಣತೆ, ಸದ್ಯದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ, ಜಾಗತಿಕ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇದರ ಅನುಷ್ಠಾನ ಅಷ್ಟು ಸುಲಭವಲ್ಲ ಎಂಬುದೂ ಮನದಟ್ಟಾಗುತ್ತದೆ.

ಶಾಯರಾ ದೂರಿನಲ್ಲೇನಿದೆ?

ಪತಿ ರಿಜ್ವಾನ್ ಅಹ್ಮದ್ 2015ರ ಅಕ್ಟೋಬರ್ 10ರಂದು ತಲಾಖ್ ನಾಮಾ(ತ್ರಿವಳಿ ತಲಾಖ್ ಪದ್ಧತಿ) ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಮೂವತ್ತೆಂಟು ವರ್ಷದ ಶಾಯರಾ ಬಾನೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯಲ್ಲಿ ಈ ಮೌಖಿಕ ವಿಚ್ಛೇದನದ ಮಾನ್ಯತೆಯನ್ನು ಪ್ರಶ್ನಿಸಲಾಗಿದ್ದು, ತ್ರಿವಳಿ ತಲಾಖ್ ಅಥವಾ ತಲಾಖ್-ಎ-ಬಿದತ್(ಏಕಪಕ್ಷೀಯವಾಗಿ ಮೌಖಿಕವಾಗಿ ಮೂರು ಬಾರಿ ತಲಾಖ್ ಹೇಳುವುದು), ನಿಖಾಹ್-ಹಲಾಲಾ (ಮಾಜಿ ಪತಿ ಬಳಿ ಹೋಗುವುದಕ್ಕಾಗಿ ಸ್ತ್ರೀಯೊಬ್ಬಳಿಗೆ ಮತ್ತೊಬ್ಬ ಪುರುಷನೊಂದಿಗೆ ನಿಖಾಹ್(ಮದುವೆ) ನೆರವೇರಿಸುವ ಪದ್ಧತಿ) ಮತ್ತು ಬಹುಪತ್ನಿತ್ವ ಪದ್ಧತಿಗಳು ಅಕ್ರಮ ಎಂದು ವಾದಿಸಲಾಗಿದೆ. ಈ ಪದ್ಧತಿಗಳಿಂದಾಗಿ ಸಂವಿಧಾನದ ಅನುಚ್ಛೇದ 14(ಕಾನೂನಿನ ಎದುರು ಎಲ್ಲರೂ ಸಮಾನರು), 15 (ಧರ್ಮ, ಜಾತಿ, ಲಿಂಗ, ಜನ್ಮಸ್ಥಳಗಳನ್ನು ಆಧರಿಸಿದ ತಾರತಮ್ಯ ನಿಷೇಧ), 21(ವ್ಯಕ್ತಿಯ ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆ), 25(ಧರ್ಮಶ್ರದ್ಧೆ ಮತ್ತು ಸದಸದ್ವಿವೇಕ ಪ್ರಜ್ಞೆಯ ಸ್ವಾತಂತ್ರ್ಯ ಧರ್ಮದ ಆಚರಣೆ ಮತ್ತು ಪ್ರಸಾರದ ಸ್ವಾತಂತ್ರ್ಯಗಳ ಸ್ಪಷ್ಟ ಉಲ್ಲಂಘನೆ ಆಗುತ್ತಿದೆ ಎಂಬುದು ಶಾಯರಾ ವಾದ. ತನ್ನ ವಾದ ಸಮರ್ಥನೆಗಾಗಿ ಶಾಯರಾ, ಜಗತ್ತಿನ ವಿವಿಧ ಮುಸ್ಲಿಂ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳು, ಅಂಕಿಅಂಶಗಳನ್ನು ಬಳಸಿಕೊಂಡಿದ್ದಾರೆ.

ವೈಯಕ್ತಿಕ ಕಾನೂನಿನ ಬಿಕ್ಕಟ್ಟು

ಭಾರತದಲ್ಲಿ ಮುಸ್ಲಿಮರಿಗೆ ವೈಯಕ್ತಿಕ ಕಾನೂನು ಆಗಿ ಷರೀಯತ್(ಕುರಾನ್ ಆಧರಿತ) ಮತ್ತು ಹದಿತ್ (ಪ್ರವಾದಿಯ ವಚನ ಪ್ರಕಾರ)ಗಳ ಕಾನೂನು ಪಾಲನೆಗೆ ಮುಸ್ಲಿಂ ವೈಯಕ್ತಿಕ ಕಾನೂನು(ಷರೀಯತ್) ಅನ್ವಯ ಕಾಯ್ದೆ-1937 ಅವಕಾಶ ಮಾಡಿಕೊಟ್ಟಿದೆ. ಯಾವುದಾದರೂ ಬಿಕ್ಕಟ್ಟಿಗೆ ಕುರಾನ್ ಚೌಕಟ್ಟಿನಲ್ಲಿ ಪರಿಹಾರ ಸಿಗದಿದ್ದಲ್ಲಿ ಷರೀಯತ್ನ ವ್ಯಾಖ್ಯಾನ ಮಾಡುವ ಅವಕಾಶ ಮುಸ್ಲಿಂ ಧರ್ಮಗುರುಗಳಿಗಿದೆ. ಆದರೆ, ಮುಸ್ಲಿಂ ಮಹಿಳೆಯ ವಿಷಯಕ್ಕೆ ಬಂದಾಗ, ಲಿಂಗ ಮತ್ತು ಧರ್ವಚರಣೆಯ ವಿಷಯದಲ್ಲಿ ಸಮಾನತೆ ಇರುವುದಿಲ್ಲ, ತಾರತಮ್ಯ ನೀತಿ ವಿರುದ್ಧ ರಕ್ಷಣೆಯೂ ಸಿಗುವುದಿಲ್ಲ. ‘ತಲಾಖ್- ಎ-ಬಿದತ್ ಆಚರಣೆಗೆ ಕುರಾನ್ನಲ್ಲಿ ಯಾವುದೇ ಆಧಾರವಿಲ್ಲ. ಅಲ್ಲದೇ, ಬಹುಪತ್ನಿತ್ವ ಪದ್ಧತಿಯು ಇಸ್ಲಾಂನ ಅವಿಭಾಜ್ಯ ಅಂಗವೂ ಅಲ್ಲ. ಹಲವು ಬಾರಿ ಪತಿ-ಪತ್ನಿಯರ ನಡುವೆ ಸಾಮರಸ್ಯ ಅಥವಾ ರಾಜೀ ಸಂಧಾನ ಯಶಸ್ವಿಯಾಗದ ಸಂದರ್ಭದಲ್ಲಿ 90 ದಿನಗಳ ಅವಧಿಯಲ್ಲಿ ಮೂರು ಬಾರಿ ತಲಾಖ್ ಹೇಳಿದರಷ್ಟೇ ತ್ರಿವಳಿ ತಲಾಖ್ಗೆ ಮಾನ್ಯತೆ ಲಭಿಸುತ್ತದೆ, ಇಲ್ಲವಾದಲ್ಲಿ ಮಾನ್ಯತೆ ಇರುವುದಿಲ್ಲ ಎಂಬುದನ್ನು ಇಸ್ಲಾಂನ ಹಲವು ವಿದ್ವಾಂಸರು ಹೇಳುತ್ತಾರೆ’ ಎಂಬ ಅಂಶವನ್ನೂ ಶಾಯರಾ ಬಾನೊ ದಾವೆಯಲ್ಲಿ ಉಲ್ಲೇಖಿಸಿದ್ದಾರೆ.

ಮೂಲಭೂತ ಹಕ್ಕು ನಿರಾಕರಣೆ ಪ್ರಶ್ನಿಸಿದ ಮೊದಲ ಪ್ರಕರಣ

ಮುಸ್ಲಿಂ ವೈಯಕ್ತಿಕ ಕಾನೂನು ಆಚರಣೆಯಿಂದಾಗಿ ಸಂವಿಧಾನ ಕೊಡಮಾಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಪ್ರಶ್ನಿಸಿದ ಮೊದಲ ಪ್ರಕರಣ ಇದಾಗಿದೆ. ಈ ಮೂಲಕ, ಕಾನೂನಿನ ಎದುರು ಎಲ್ಲರೂ ಸಮಾನರೆಂಬ ಅಂಶವನ್ನು ಮುಂದಿಟ್ಟು, ಯಾವುದೇ ತಾರತಮ್ಯ ಆಗದಂತೆ ರಕ್ಷಿಸುವ ಸರ್ಕಾರದ ಹೊಣೆಗಾರಿಕೆಯನ್ನೂ ಪ್ರಶ್ನಿಸಿದಂತಾಗಿದೆ. ಅಷ್ಟೇ ಅಲ್ಲ, ಧಾರ್ವಿುಕ ವಿಶ್ವಾಸ ಮತ್ತು ಆಚರಣೆಗಳಿಂದ ಸಂವಿಧಾನ ಕೊಡಮಾಡಿರುವ ಹಕ್ಕುಗಳ ರಕ್ಷಣೆಯ ಮೂಲಕ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಅಥವಾ ಸ್ವಾಸ್ಥ್ಯನ್ನು ಕಾಪಾಡುವ ಅಗತ್ಯವನ್ನೂ ಪ್ರಕರಣ ಎತ್ತಿಹಿಡಿದಿದೆ. ಹಾಗೆಯೇ, ಅನುಚ್ಛೇದ 14,15,21 ಮತ್ತು 25ನ್ನು ಉಲ್ಲೇಖಿಸುವ ಮೂಲಕ ‘ಸಮಾನ ನಾಗರಿಕ ಸಂಹಿತೆ’ ಅನುಷ್ಠಾನದ ಅಗತ್ಯವನ್ನು ಈ ಪ್ರಕರಣವು ಬಿಂಬಿಸಿದಂತಾಗಿದೆ.

ಹಲವರ ಬೆಂಬಲ

ಶಾಯರಾ ಬಾನೊ ಈ ದಾವೆಯನ್ನು ಫೆಬ್ರವರಿಯಲ್ಲಿ ಹೂಡಿದ್ದರೂ, ಈಗ ಅದರ ವ್ಯಾಪ್ತಿ ಹಿರಿದಾಗಿದೆ. ಇಂಥದ್ದೇ ಹಲವು ದಾವೆಗಳನ್ನು ಇದರ ಜತೆ ಸೇರಿಸಲಾಗಿದೆ. ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆಂಡ್ ಸೆಕ್ಯುಲರಿಸಂ, 15 ರಾಜ್ಯಗಳಲ್ಲಿ 1 ಲಕ್ಷಕ್ಕೂ ಅಧಿಕ ಸದಸ್ಯತ್ವ ಹೊಂದಿರುವ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್, ಬೇಬಾಕ್ ವೇದಿಕೆ-ದೇಶದ ಏಳು ಮುಸ್ಲಿಂ ಮಹಿಳಾ ಸಂಘಟನೆಗಳ ಒಕ್ಕೂಟಗಳೂ ಶಾಯರಾ ಬಾನೊ ಅರ್ಜಿಯನ್ನು ಬೆಂಬಲಿಸಿ ಮಧ್ಯಪ್ರವೇಶದ ಕಕ್ಷಿದಾರರಾಗಿ ಸೇರ್ಪಡೆಗೊಂಡಿವೆ. ಷರೀಯಾ ನಿಖಾಹ್ನಾಮಾ ಎಂಬ ತನ್ನದೇ ಕರಡು ಕಾನೂನು(ಪುರುಷರು ಹಾಗೂ ಮಹಿಳೆಯರಿಗೆ ತ್ರಿವಳಿ ತಲಾಖ್ ಆಚರಣೆಯಲ್ಲಿ 8 ಸಮಾನ ಹಕ್ಕುಗಳ ಕರಡು) ಸಿದ್ಧಪಡಿಸಿಕೊಂಡಿರುವ ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ಕೂಡ ಶಾಯರಾ ಬಾನೊ ಅರ್ಜಿ ಬೆಂಬಲಿಸಿ ಮಧ್ಯಪ್ರವೇಶಿಸುವ ನಿರೀಕ್ಷೆ ಇದೆ.

ಕಾನೂನು ಮಂಡಳಿ ವಿರೋಧ

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಶಾಯರಾ ಬೆಂಬಲಿಗರ ವಾದವನ್ನು ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ಗೆ ಈ ಕುರಿತು ಅಫಿಡವಿಟ್ ಸಲ್ಲಿಸಿರುವ ಮಂಡಳಿ, ಧಾರ್ವಿುಕ ಮತ್ತು ಸಾಂಸ್ಕೃತಿಕ ಹಕ್ಕುಗಳ ವಿಚಾರದಲ್ಲಿ ಕೋರ್ಟ್ ಪದೇಪದೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ವಾದಿಸಿದೆ. ‘ಕೋರ್ಟ್ಗಳಲ್ಲಿ ನಡೆಯುವ ವಿವಾಹ ವಿಚ್ಛೇದನ ಪ್ರಕ್ರಿಯೆಯಿಂದ ಮುಸ್ಲಿಂ ಮಹಿಳೆಯರಿಗೆ ಆಗುವ ಅವಮಾನವನ್ನು ತ್ರಿವಳಿ ತಲಾಖ್ ತಡೆಯುತ್ತದೆ. ಹಾಗೆಯೇ, ಆಕೆಯ ಮರುಮದುವೆಗೂ ಅವಕಾಶ ನೀಡುತ್ತದೆ. ಇದಲ್ಲದೆ, ಪತಿಯಿಂದ ಹತ್ಯೆಗೊಳಗಾಗುವುದನ್ನೂ ತಪ್ಪಿಸುತ್ತದೆ. ಬಹುಪತ್ನಿತ್ವವೂ ಸಮರ್ಥನೀಯವಾಗಿದ್ದು, ಸಮಾಜದಲ್ಲಿ ಪತ್ನಿ ಹೊರತಾದ ಸ್ತ್ರೀಯೊಂದಿಗೆ ಅಕ್ರಮವಾಗಿ ಸಂಬಂಧ ಹೊಂದುವುದಕ್ಕಿಂತ ಕಾನೂನುಬದ್ಧವಾಗಿ ಎರಡನೇ ಪತ್ನಿಯನ್ನು ಹೊಂದುವುದು ಉತ್ತಮ’ ಎಂದು ಅದು ಅಫಿಡವಿಟ್ನಲ್ಲಿ ಹೇಳಿಕೊಂಡಿದೆ.

ಕೇಂದ್ರದ ಅಫಿಡವಿಟ್

ಶಾ ಬಾನೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದು ಸರಿಸುಮಾರು 3 ದಶಕದ ಬಳಿಕ, ಇದೀಗ ಶಾಯರಾ ಬಾನೊ ಪ್ರಕರಣದ ಮೂಲಕ ವೈಯಕ್ತಿಕ ಕಾನೂನುಗಳ ಮಾನ್ಯತೆಯ ಕುರಿತ ಪ್ರಶ್ನೆಗಳು ಎದ್ದಿವೆ. ವಿಶೇಷವಾಗಿ, ಸಂಪ್ರದಾಯಬದ್ಧ ಧಾರ್ವಿುಕ ಆಚರಣೆ ಮತ್ತು ಲಿಂಗ ತಾರತಮ್ಯ ನೀತಿ ಕುರಿತ ಚರ್ಚೆಗೆ ಇದು ನಾಂದಿ ಹಾಡಿತು. ಸರ್ಕಾರ ಸಲ್ಲಿಸಿದ ಅಫಿಡವಿಟ್ನಲ್ಲಿರುವ ಮುಖ್ಯ ಅಂಶಗಳಿವು;-

* ಲಿಂಗ ಸಮಾನತೆ ಮತ್ತು ಮಹಿಳೆಯರ ಘನತೆ ವಿಚಾರದಲ್ಲಿ ರಾಜಿ ಇಲ್ಲ. ಸಂವಿಧಾನದ ಮೌಲ್ಯಗಳನ್ನು ತಿರುಚುವುದರಿಂದಲೋ ಅಥವಾ ಅದನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸುವುದರಿಂದಲೋ ಇಂತಹ ಕೆಲಸಗಳನ್ನು ಸಮರ್ಥಿಸಲಾಗದು.

* ಮಹಿಳೆ ಯಾವುದೇ ಧರ್ಮವನ್ನು ಅನುಸರಿಸುತ್ತಿರಲಿ, ಯಾವುದೇ ಧಾರ್ವಿುಕ ಆಚರಣೆಗಳ ಮೂಲಕ ಮಹಿಳೆಯರ ವ್ಯಕ್ತಿಗತ ಹಕ್ಕು ಮತ್ತು ಆಕಾಂಕ್ಷೆಗಳ ಮೇಲೆ ನಿರ್ಬಂಧ ಹೇರುವಂತಿಲ್ಲ, ಅಥವಾ ಅವುಗಳನ್ನು ಅತಿಕ್ರಮಿಸುವಂತಿಲ್ಲ. ್ಝ ತ್ರಿವಳಿ ತಲಾಖ್, ಬಹುಪತ್ನಿತ್ವ, ನಿಖಾಹ್ ಹಲಾಲಾಗಳನ್ನು ಧಾರ್ವಿುಕ ಆಚರಣೆಯ ಅವಿಭಾಜ್ಯ ಅಂಗ ಎಂದು ಪರಿಗಣಿಸಲಾಗದು. ಸಂವಿಧಾನ ಕೊಡಮಾಡಿರುವ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಈ ಪದ್ಧತಿಗಳು ಸಂರಕ್ಷಿಸುತ್ತಿಲ್ಲ.

ಸಮಾನ ನಾಗರಿಕ ಸಂಹಿತೆ

* ಸಂವಿಧಾನದ ಅನುಚ್ಛೇದ 44ರಲ್ಲಿರುವ ರಾಜ್ಯನೀತಿಯ ನಿರ್ದೇಶಕ ತತ್ತ್ವಗಳ ಪ್ರಕಾರ, ‘ಭಾರತದ ಭೌಗೋಳಿಕ ಪ್ರದೇಶಾದ್ಯಂತ ಪೌರರ ಹಿತವನ್ನು ಕಾಪಾಡುವುದ ಕ್ಕಾಗಿ ಸರ್ಕಾರವು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕು’.

* ಸಮಾನ ನಾಗರಿಕ ಸಂಹಿತೆ ಎಂದರೆ ವೈಯಕ್ತಿಕ ಕಾನೂನು ಆಧರಿಸಿದ ಧಾರ್ವಿುಕ ಸಮಿತಿಗಳ ಹಿಡಿತದಿಂದ ಪೌರರನ್ನು ಸಂರಕ್ಷಿಸುವ ಸಲುವಾಗಿ ಮದುವೆ, ವಿಚ್ಛೇದನ, ವಾರಸುದಾರಿಕೆ, ದತ್ತು ಮತ್ತು ಜೀವನಾಂಶ ಮುಂತಾದ ಕಾನೂನುಗಳನ್ನು ಒಟ್ಟು ಸೇರಿಸಿ ರಚಿಸಿದ ನಿರ್ದಿಷ್ಟ ನೀತಿಗಳು.

ಸಮಾನತೆ ಯಾಕೆ ಬೇಕು?

 • ಹಿಂದು ಮತ್ತು ಕ್ರಿಶ್ಚಿಯನ್ ವಿವಾಹ ಕಾನೂನು ಪ್ರಕಾರ ಪುರುಷನಿಗೆ 21, ಮಹಿಳೆಗೆ 18 ವರ್ಷ ಪೂರ್ತಿಯಾಗಿರಬೇಕು. ಇದು ಕಾನೂನು ಸಮ್ಮತ ವಯಸ್ಸು ಕೂಡ. ಆದರೆ, ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ, 15 ವರ್ಷಕ್ಕೆ ಮೈನೆರೆದರೆ ಮದುವೆ ಮಾಡಬಹುದು.
 • ಹಿಂದು ವಿವಾಹ ಕಾಯ್ದೆ 1955ರ ಪ್ರಕಾರ ಬಹುಪತ್ನಿತ್ವ ಶಿಕ್ಷಾರ್ಹ ಅಪರಾಧ. ಕ್ರಿಶ್ಚಿಯನ್ ಧಾರ್ವಿುಕ ಕಾನೂನು ಪ್ರಕಾರವೂ ನಿಷೇಧವಿದೆ. ಮುಸ್ಲಿಂ ವೈಯಕ್ತಿಕ ಕಾನೂನು ನಾಲ್ವರು ಪತ್ನಿಯರನ್ನು ಹೊಂದಲು ಪುರುಷನಿಗೆ ಅವಕಾಶ ಕಲ್ಪಿಸುತ್ತದೆ.
 • ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಪತಿ-ಪತ್ನಿ ಬೇರೆ ಬೇರೆ ವಾಸವಿದ್ದರೆ ಹಿಂದು ವೈಯಕ್ತಿಕ ಕಾನೂನು ವಿಚ್ಛೇದನಕ್ಕೆ ಅನುಮತಿಸುತ್ತದೆ. ಕ್ರಿಶ್ಚಿಯನ್ ವೈಯಕ್ತಿಕ ಕಾನೂನು ಪ್ರಕಾರ 2 ವರ್ಷ. ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ತ್ರಿವಳಿ ತಲಾಖ್ ಹೇಳಿದರಷ್ಟೇ ಸಾಕು.
 • ಭಾರತದ ಸಂವಿಧಾನದ ಪೀಠಿಕೆ ಪ್ರಕಾರ, ಭಾರತವು ಜಾತ್ಯತೀತ ರಾಷ್ಟ್ರ. ಇದರ ಅರ್ಥ ಧರ್ಮವನ್ನು ಆಧರಿಸಿ ಯಾರೊಬ್ಬರನ್ನೂ ತಾರತಮ್ಯ ಭಾವದಿಂದ ನೋಡಲಾಗದು. ಇದು ಎಲ್ಲ ಪೌರರಿಗೂ ‘ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ’ಯನ್ನು ಒದಗಿಸುತ್ತದೆ.

ಹಿಂದುಗಳಲ್ಲಿರುವ ಮೈತ್ರಿ ಕರಾರು

ಗುಜರಾತ್ನ ಕೆಲವೆಡೆ ಹಿಂದುಗಳಲ್ಲಿ ವಿವಾಹಪೂರ್ವದಲ್ಲಿ ಮೈತ್ರಿ ಕರಾರು ಪದ್ಧತಿ ಅಸ್ತಿತ್ವದಲ್ಲಿದೆ. ಅಂದರೆ, ವಿವಾಹಿತ ಪುರುಷನೊಬ್ಬ ಅನ್ಯ ಸ್ತ್ರೀಯೊಂದಿಗೆ ಗೆಳೆತನದ ಒಪ್ಪಂದಕ್ಕೆ ಸಹಿಹಾಕುತ್ತಾನೆ. ಇದಕ್ಕಾಗಿ ಛಾಪಾ ಕಾಗದವನ್ನೂ ಬಳಸುತ್ತಾರೆ. ನಂತರ, ಆಕೆಯನ್ನು ಆ ಪುರುಷ ತನ್ನ ಮನೆಗೆ ಕರೆತಂದು ಅವರಿಬ್ಬರೂ ಜತೆಗೆ ಬದುಕು ಸಾಗಿಸುತ್ತಾರೆ.

ಸುಪ್ರೀಂ ಕೋರ್ಟ್ ಹಿಂದೆಯೂ ಹೇಳಿತ್ತು

ಶಾ ಬಾನೋ ಪ್ರಕರಣ ಹಿನ್ನೆಲೆಯಲ್ಲಿ, ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ 1985ರಲ್ಲಿ ಸುಪ್ರೀಂ ಕೋರ್ಟ್ ಸಂಸತ್ತಿಗೆ ನಿರ್ದೇಶನ ನೀಡಿತ್ತು. ಶಾ ಬಾನೋಗೆ ಆಕೆಯ ಪತಿ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡಿದ್ದ. ಆದರೆ ಜೀವನಾಂಶ ನೀಡದ ಕಾರಣ ಭಾರತೀಯ ದಂಡ ಸಂಹಿತೆ ಸೆಕ್ಷನ್ 125 ಪ್ರಕಾರ ತಲಾಖ್ ನೀಡಿದ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಆಕೆಗಿದೆ ಎಂದು ಕೋರ್ಟ್ ಹೇಳಿತ್ತು. 2015ರ ಅಕ್ಟೋಬರ್ನಲ್ಲಿ ಸಮಾನ ನಾಗರಿಕ ಸಂಹಿತೆಯ ಅವಶ್ಯಕತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ‘ಒಂದೊಂದು ವೈಯಕ್ತಿಕ ಕಾನೂನು ಒಂದೊಂದು ರೀತಿ ಇದೆ. ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಅವುಗಳಿಗೆ ಅವುಗಳದ್ದೇ ಆದ ನಿರ್ಧಾರಗಳಿರಬಹುದು. ಅದನ್ನೆಲ್ಲ ನಾವು ಒಪ್ಪಿಕೊಳ್ಳಲಾಗದು. ಪೌರರ ಹಿತ ಕಾಯುವುದಕ್ಕಾಗಿ ಕೋರ್ಟ್ ನಿರ್ದೇಶಿಸಿದಂತೆ ಸಂವಿಧಾನಾನುಸಾರ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಿ’ ಎಂದು ಹೇಳಿತ್ತು.

ಪಾಕ್-ಬಾಂಗ್ಲಾದಲ್ಲಿ ಇಲ್ಲ

ಪಾಕಿಸ್ತಾನದಲ್ಲಿ ತ್ರಿವಳಿ ತಲಾಖ್ ಕಾನೂನು ಮರುಪರಿಶೀಲನೆಯಾಗಬೇಕು ಎಂಬ ವಿಚಾರ 1950ರ ದಶಕದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. 1955ರಲ್ಲಿ ಅಂದಿನ ಪ್ರಧಾನಿ ಮುಹಮ್ಮದ್ ಅಲಿ ಬೋಗ್ರಾ ಮೊದಲ ಪತ್ನಿಗೆ ತಲಾಖ್ ನೀಡಿ ಕಾರ್ಯದರ್ಶಿಯನ್ನೇ ವಿವಾಹವಾಗಿದ್ದರು. ಅದು, ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತಲ್ಲದೆ, ಅಖಿಲ ಪಾಕಿಸ್ತಾನ ಮಹಿಳಾ ಸಂಘಟನೆಯ ಪ್ರತಿಭಟನೆಗೆ ಮಣಿದು, ವಿವಾಹ ಮತ್ತು ಕೌಟುಂಬಿಕ ಕಾನೂನು ಪರಿಷ್ಕರಣೆಗೆ ಸಂಬಂಧಿಸಿ ಏಳು ಸದಸ್ಯರ ಆಯೋಗವನ್ನೂ ಸರ್ಕಾರ ರಚಿಸಿತ್ತು. 1956ರಲ್ಲಿ ಈ ಆಯೋಗವು ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ಹೇಳುವುದನ್ನು ಮಾನ್ಯ ಮಾಡಬಾರದು. ವೈವಾಹಿಕ ಮತ್ತು ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದೇ ಪತಿಯು ಪತ್ನಿಗೆ ವಿಚ್ಛೇದನ ನೀಡಬಾರದು. ಒಂದೊಮ್ಮೆ ನೀಡಿದರೆ ಅದನ್ನು ಮಾನ್ಯ ಮಾಡಬಾರದು ಎಂದು ಶಿಫಾರಸು ಮಾಡಿತು. ಹಲವು ಸುತ್ತುಗಳ ಚರ್ಚೆ ನಡೆದು ಕೊನೆಗೆ 1961ರಲ್ಲಿ ಮುಸ್ಲಿಂ ಕೌಟುಂಬಿಕ ಕಾನೂನು ಅಧ್ಯಾದೇಶವನ್ನು ಸರ್ಕಾರ ಜಾರಿಗೊಳಿಸಿದಾಗ ಸೆಕ್ಷನ್ 7ರಲ್ಲಿ ತಲಾಖ್ ಮತ್ತು ಅದರ ಆರು ಉಪವಿಧಿಗಳನ್ನು ಸೇರಿಸಲಾಗಿತ್ತು.

ಬಾಂಗ್ಲಾ ಉದಯದಲ್ಲೇ ಜಾರಿ: ಬಾಂಗ್ಲಾದೇಶ 1971ರಲ್ಲಿ ರಚನೆಯಾದಾಗಲೇ, ಮುಸ್ಲಿಂ ಕೌಟುಂಬಿಕ ಕಾನೂನು ಅಧ್ಯಾದೇಶದಲ್ಲಿ ವಿವಾಹ ಮತ್ತು ವಿಚ್ಛೇದನ ಕಾನೂನುಗಳ ನಿಯಂತ್ರಣವನ್ನೂ ರೂಢಿಸಿಕೊಂಡುಬಿಟ್ಟಿತ್ತು. ಹೀಗಾಗಿ, ತ್ರಿವಳಿ ತಲಾಖ್ ನಿಷೇಧ ಆರಂಭದಿಂದಲೇ ಚಾಲ್ತಿಯಲ್ಲಿದ್ದಂತಾಗಿದೆ.

ಇತರೆಡೆ ಬಹುಪತ್ನಿತ್ವ ಮತ್ತು ವಿಚ್ಛೇದನ

 • ಮೊರೊಕ್ಕೊದಲ್ಲಿ ವಿವಾಹ ವಿಚ್ಛೇದನ ಪ್ರಕರಣ ವಿಚಾರಣೆ ಜಾತ್ಯತೀಕ ನ್ಯಾಯಾಲಯದಲ್ಲಿ ನಡೆಯುತ್ತದೆ. ಪುರುಷನೊಬ್ಬ ಎರಡನೇ ಪತ್ನಿಯನ್ನು ಹೊಂದುವುದಕ್ಕೆ ಕೆಲವೇ ಕೆಲವು ಸನ್ನಿವೇಶಗಳಲ್ಲಷ್ಟೇ ಸಾಧ್ಯ.
 • ಅಫ್ಘಾನಿಸ್ತಾನದಲ್ಲಿ ವಿಚ್ಛೇದನಕ್ಕೆ ಒಂದೇ ಬಾರಿ ತ್ರಿವಳಿ ತಲಾಖ್ ನುಡಿದರೆ ಅದನ್ನು ಮಾನ್ಯ ಮಾಡಲಾಗುವುದಿಲ್ಲ.
 • ಟರ್ಕಿಯಲ್ಲಿ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸುವ ಹೊಣೆಗಾರಿಕೆ ನ್ಯಾಯಾಲಯದ್ದು. ಪತಿ/ಪತ್ನಿಯ ಸಾವು ಸಂಭವಿಸಿದರಷ್ಟೇ ವಿವಾಹ ಜೀವನು ಅಂತ್ಯ ಕಾಣುತ್ತದೆ. ಬಹುಪತ್ನಿತ್ವಕ್ಕೆ ನಿಷೇಧವಿದ್ದು, ಇದಕ್ಕೆ ಎರಡು ವರ್ಷ ಸೆರೆವಾಸ ಶಿಕ್ಷೆಯೂ ಇದೆ.
 • ಟ್ಯುನಿಷಿಯಾದಲ್ಲಿ ವಿಚ್ಛೇದನ ಪ್ರಕರಣವು ಕಡ್ಡಾಯವಾಗಿ ಕಾನೂನಿನ ಪರಿಧಿಯಲ್ಲೇ ನಡೆಯವುದಾಗಿದ್ದು, ತಲಾಖ್ ಪದ್ಧತಿಗೆ ಮಾನ್ಯತೆ ಇಲ್ಲ. ಬಹುಪತ್ನಿತ್ವಕ್ಕೆ ಒಂದು ವರ್ಷ ಸೆರೆವಾಸ ಅಥವಾ 2.4 ಲಕ್ಷ ಫ್ರಾಂಕ್ ದಂಡ.
 • ಇಂಡೋನೇಷ್ಯಾದಲ್ಲಿ ಬಹುಪತ್ನಿತ್ವಕ್ಕೆ ಮಾನ್ಯತೆ ಇದೆಯಾದರೂ, ಕಾನೂನು ಅಂತಹ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವುದಿಲ್ಲ, ನಿರ್ಬಂಧ ಹೇರುತ್ತದೆ. ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದ ಉಸ್ತುವಾರಿಯಲ್ಲೇ ನಡೆಯುತ್ತದೆ.

ನೀವೂ ಅಭಿಪ್ರಾಯ ತಿಳಿಸಿ

ಕಾನೂನು ಆಯೋಗ ಸಮಾನ ನಾಗರಿಕ ಸಂಹಿತೆ ಕುರಿತು 16 ಪ್ರಶ್ನೆಗಳ ಪ್ರಶ್ನಾವಳಿಯನ್ನು ಪ್ರಕಟಿಸಿದ್ದು, ಸಾರ್ವಜನಿಕ ಅಭಿಪ್ರಾಯವನ್ನು ಕೋರಿದೆ. ಈ ಪ್ರಶ್ನಾವಳಿ ಪ್ರಕಟಿಸಿದ 45 ದಿನದೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆಯೋಗದ ಅಂತರ್ಜಾಲ ತಾಣ (http://www.lawcommissionofindia.nic.in/questionnaire.pdf) ಕ್ಕೆ ಭೇಟಿ ನೀಡಬಹುದು.

ಕಾನೂನು ಆಯೋಗದ ಪ್ರಶ್ನಾವಳಿ

ಸಂವಿಧಾನದ ಅನುಚ್ಛೇದ 44ರ ಪ್ರಕಾರ, ದೇಶದ ಎಲ್ಲ ರಾಜ್ಯಗಳಲ್ಲಿರುವ ಪೌರರನ್ನೂ ಒಂದೇ ನೆಲೆಯಲ್ಲಿ ನೋಡುವಂತಹ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸು ವುದು ಸರ್ಕಾರದ ಹೊಣೆಗಾರಿಕೆ. ಈ ಹಿನ್ನೆಲೆಯಲ್ಲಿ, ಕೌಟುಂಬಿಕ ಕಾನೂನು, ವೈಯಕ್ತಿಕ ಕಾನೂನುಗಳ ಪರಿಷ್ಕರಣೆ ಅಗತ್ಯವೂ ಇದ್ದು, ಸಮಾನ ನಾಗರಿಕ ಸಂಹಿತೆ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕು. ಬಹುವಿಧದ ವೈಯಕ್ತಿಕ ಕಾನೂನುಗಳಿಂದಾಗಿ ಇಂತಹ ನ್ಯಾಯ ಒದಗಿಸುವ ಪ್ರಕ್ರಿಯೆ ಸಂಕೀರ್ಣವಾಗಿದೆ. ಈಗ ಮಹಿಳೆಯರ ಹಕ್ಕುಗಳ ರಕ್ಷಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಮಾನ ನಾಗರಿಕ ಸಂಹಿತೆಯ ಅಗತ್ಯವನ್ನು ತೋರಿದೆ. ಈ ಕಾರಣದಿಂದ ಮಹಿಳಾ ಹಕ್ಕು ಸಂರಕ್ಷಣೆ ಹಿನ್ನೆಲೆಯಲ್ಲಿ ಸಮಾನ ನಾಗರಿಕ ಸಂಹಿತೆ ಕುರಿತ ಅಭಿಪ್ರಾಯಗಳನ್ನು ತಿಳಿಸಿ ಎಂದು ಕಾನೂನು ಆಯೋಗವು ಸಾರ್ವಜನಿಕರಿಗೆ ಕರೆ ನೀಡಿದೆ. ಪ್ರಶ್ನೆಗಳಿಗೆ ಉತ್ತರಿಸುವುದರ ಜತೆಗೆ ಹೆಚ್ಚಿನ ಸಲಹೆ ನೀಡುವುದಕ್ಕೂ ಅವಕಾಶವಿದೆ. 16 ಪ್ರಶ್ನೆಗಳ ಸಾರಾಂಶ ಇಂತಿದೆ-

 1. ಸಂವಿಧಾನದ ಅನುಚ್ಛೇದ 44ರಲ್ಲಿನ ‘ಸಮಾನ ನಾಗರಿಕ ಸಂಹಿತೆ’ ವಿಚಾರ ನಿಮ್ಮ ಅರಿವಿನಲ್ಲಿದೆಯೇ? ಎ) ಹೌದು, ಬಿ) ಇಲ್ಲ
 2. ನಿಮ್ಮ ದೃಷ್ಟಿಯಲ್ಲಿ, ಇದಕ್ಕೆ ಇನ್ನೇನಾದರೂ ಅಂಶ ಸೇರ್ಪಡೆಯಾಗಬೇಕೆ?
 3. ಕೌಟುಂಬಿಕ ಕಾನೂನಿನ ವಿಚಾರಕ್ಕೆ ಬಂದರೆ ಭಾರತದಲ್ಲಿ ವಿವಿಧ ಧಾರ್ವಿುಕ ಉಪಾಧಿಗಳು ವೈಯಕ್ತಿಕ ಕಾನೂನು ಮತ್ತು ಸಾಂಪ್ರದಾಯಿಕ ಆಚರಣೆಗಳಿಂದ ನಿರ್ವಹಿಸಲ್ಪಡುತ್ತಿವೆ. ಮದುವೆ, ವಿಚ್ಛೇದನ, ದತ್ತು, ಪೋಷಕತ್ವ ಮತ್ತು ಮಗುವಿನ ಪಾಲನೆ, ನಿರ್ವಹಣೆ, ಉತ್ತರಾಧಿಕಾರಿ ಮತ್ತು ವಾರಸುದಾರಿಕೆ ವಿಷಯಗಳಿಗೆ ಸೀಮಿತವಾದ ಸಮಾನ ನಾಗರಿಕ ಸಂಹಿತೆ ಬೇಕೆ ಅಥವಾ ಎಲ್ಲ ವಿಷಯಗಳಿಗೂ ಸಮಾನ ನಾಗರಿಕ ಸಂಹಿತೆ ಬೇಕೆ? ಎ) ಹೌದು, ಎಲ್ಲದಕ್ಕೂ ಅನ್ವಯವಾಗುವಂಥದ್ದು ಬೇಕು ಬಿ)ಬೇಡ, ಕೆಲವು ವಿಷಯಗಳಲ್ಲಿ ಬೇಡ-(ವಿಷಯಗಳನ್ನು ಉಲ್ಲೇಖಿಸಿ) ಸಿ) ಇವುಗಳ ಜತೆಗೆ ಇನ್ನಷ್ಟು ವಿಚಾರಗಳನ್ನು ಸೇರ್ಪಡೆಗೊಳಿಸಿ…(ವಿಷಯಗಳನ್ನು ಉಲ್ಲೇಖಿಸಿ)
 4. ಈಗ ಚಾಲ್ತಿಯಲ್ಲಿರುವ ವೈಯಕ್ತಿಕ ಕಾನೂನು ಮತ್ತು ಸಾಂಪ್ರದಾಯಿಕ ಆಚರಣೆಗಳ ಸಂಕಲನ ಅವಶ್ಯವೆಂದು ನಿಮಗನಿಸುತ್ತದೆಯೇ? ಮತ್ತು ಅದರಿಂದ ಜನರಿಗೇನಾದೂ ಪ್ರಯೋಜನವಾದೀತೇ? ಎ) ಹೌದು ಬಿ) ಇಲ್ಲ ಸಿ) ಸಮಾನ ನಾಗರಿಕ ಸಂಹಿತೆಯನ್ನು ಇವುಗಳ ಜಾಗಕ್ಕೆ ಅನ್ವಯಿಸಬೇಕು ಡಿ) ವೈಯಕ್ತಿಕ ಕಾನೂನು ಮತ್ತು ಆಚರಣೆಗಳನ್ನು ಸಂಕಲಿಸಿ ಅವುಗಳನ್ನು ಮೂಲಭೂತ ಹಕ್ಕುಗಳ ಜತೆ ಜೋಡಿಸಬೇಕು.
 5. ಸಮಾನ ನಾಗರಿಕ ಸಂಹಿತೆ ಅಥವಾ ವೈಯಕ್ತಿಕ ಕಾನೂನು ಆಚರಣೆಗಳ ಸಂಕಲನದಿಂದ ಲಿಂಗ ಸಮಾನತೆ ಖಾತರಿಪಡಿಸಬಹುದೇ? ಎ)ಹೌದು ಬಿ) ಇಲ್ಲ
 6. ಸಮಾನ ನಾಗರಿಕ ಸಂಹಿತೆ ಆಯ್ಕೆಯ ವಿಷಯವಾಗಬೇಕೆ? ಎ) ಹೌದು ಬಿ) ಇಲ್ಲ
 7. ಈ ಪದ್ಧತಿಗಳನ್ನು ನಿಷೇಧಿಸಬೇಕೆ ಅಥವಾ ನಿರ್ಬಂಧಿಸಬೇಕೆ? ಎ) ಬಹುಪತ್ನಿತ್ವ (ನಿಷೇಧಿಸಬೇಕು/ನಿರ್ಬಂಧಿಸಬೇಕು) ಬಿ) ಬಹುಪತಿತ್ವ (ನಿಷೇಧಿಸಬೇಕು/ನಿರ್ಬಂಧಿಸಬೇಕು) ಸಿ) ಇದೇ ರೀತಿ ಹಿಂದುಗಳಲ್ಲಿರುವ ಮೈತ್ರಿ ಕರಾರು ಸಂಪ್ರದಾಯ (ನಿಷೇಧಿಸಬೇಕು/ನಿರ್ಬಂಧಿಸಬೇಕು)
 8. ತ್ರಿವಳಿ ತಲಾಖ್ ಸಂಪ್ರದಾಯವನ್ನು ಎ) ಸಂಪೂರ್ಣ ರದ್ದುಗೊಳಿಸಿ. ಬಿ) ಸಂಪ್ರದಾಯಕ್ಕೆ ಸೀಮಿತಗೊಳಿಸಿ. ಸಿ) ಸೂಕ್ತ ಪರಿಷ್ಕರಣೆಗಳೊಂದಿಗೆ ಉಳಿಸಿಕೊಳ್ಳಿ
 9. ಹಿಂದು ಸಂಪ್ರದಾಯದಲ್ಲಿ ಆಸ್ತಿ ಹಂಚಿಕೆ ವೇಳೆ ಮಗನಿಗೆ ಸಿಗುವ ಪ್ರಾಮುಖ್ಯ ಮಗಳಿಗೂ ಸಿಗಬೇಕು. ಮಗಳ ಹಕ್ಕನ್ನು ಖಾತರಿ ಪಡಿಸಬೇಕೆಂದು ಅನಿಸುತ್ತದೆಯೇ? ಎ) ಹೌದು, ಹಿಂದು ಮಹಿಳೆಯ ಆಸ್ತಿ ಹಕ್ಕನ್ನು ಖಾತರಿಪಡಿಸಬೇಕು. ಬಿ) ಬೇಡ, ಈಗಾಗಲೇ ಇರುವಂತಹ ಕಾನೂನಿನಲ್ಲೇ ಆಸ್ತಿ ಹಕ್ಕನ್ನು ಖಾತರಿಪಡಿಸುವ ಅಂಶಗಳಿವೆ. ಸಿ) ಸಾಂಪ್ರದಾಯಿಕ ಆಚರಣೆಗಳನ್ನು ತಡೆಯಲು ಕಾನೂನು ತರುವುದರಿಂದ ಪ್ರಯೋಜನವಿಲ್ಲ, ಜನರಲ್ಲೇ ಜಾಗೃತಿ ಮೂಡಿಸಬೇಕು.
 10. ಕ್ರಿಶ್ಚಿಯನ್ನರ ವಿಚ್ಛೇದನ ಪ್ರಕರಣಗಳಲ್ಲಿ ಅದನ್ನು ಪೂರ್ತಿಗೊಳಿಸಲು ಎರಡು ವರ್ಷ ಕಾಯಬೇಕು ಎಂಬುದು ಆ ಸಮುದಾಯದ ಮಹಿಳೆಯ ಸಮಾನತೆಯ ಹಕ್ಕನ್ನು ಪ್ರತಿಪಾದಿಸುತ್ತದೆಯೇ? ಎ)ಹೌದು, ಈ ನಿಯಮವನ್ನು ಎಲ್ಲ ಮದುವೆಗಳಿಗೂ ಅನ್ವಯಿಸಬೇಕು. ಬಿ) ಬೇಡ, ಧಾರ್ವಿುಕ ಭಾವನೆಗಳನ್ನು ಗಮನಕ್ಕೆ ತೆಗೆದುಕೊಂಡು ಹೇಳುವುದಾದರೆ ಈ ಅವಧಿಯೇ ಸಾಕಷ್ಟಾಯಿತು.
 11. ಎಲ್ಲ ವೈಯಕ್ತಿಕ ಕಾನೂನು ಮತ್ತು ಆಚರಣೆಗಳ ಪ್ರಕಾರ ಮದುವೆಗೆ ಒಂದು ಸಮಾನ ವಯಸ್ಸನ್ನು ಗುರುತಿಸುವುದು ಅಗತ್ಯ ಎಂಬುದನ್ನು ಒಪ್ಪುತ್ತೀರಾ? ಎ) ಹೌದು ಬಿ) ಬೇಡ, ಆಯಾ ವೈಯಕ್ತಿಕ ಕಾನೂನು, ಆಚರಣೆಗಳ ಪ್ರಕಾರವೇ ಯೌವನಕ್ಕೆ ಕಾಲಿರಿಸಿದಾಗ ಮದುವೆ ನಡೆಯಲಿ. ಸಿ) ಈಗಾಗಲೇ ಇರುವಂತಹ ವ್ಯವಸ್ಥೆಯೇ ‘ಮದುವೆ’ ವಯಸ್ಸು ನಿಗದಿಗೆ ಸೂಕ್ತವೆನಿಸುವಂತಿದೆ.
 12.  ಎಲ್ಲ ಧಾರ್ವಿುಕ ಉಪಾಧಿಗಳಿಗೂ ವಿಚ್ಛೇದನ ವಿಚಾರದಲ್ಲಿ ಸಮಾನ ನೆಲೆಗಳಿರಬೇಕು ಎಂಬುದನ್ನು ನೀವು ಒಪ್ಪುತ್ತೀರಾ? ಎ) ಹೌದು ಬಿ) ಇಲ್ಲ, ಸಾಂಸ್ಕೃತಿಕ ಭಿನ್ನತೆಗಳನ್ನು ಕಾಪಾಡಬೇಕು. ಸಿ) ಬೇಡ, ಆದರೆ, ವಿಚ್ಛೇದನ ಪ್ರಕ್ರಿಯೆಯಲ್ಲಿ ಪುರುಷ ಹಾಗೂ ಸ್ತ್ರೀಯರಿಗೆ ವೈಯಕ್ತಿಕ ಕಾನೂನಿನಡಿ ಸಮಾನತೆ ಕಲ್ಪಿಸಬೇಕು.
 13.  ವಿಚ್ಛೇದನಾನಂತರದಲ್ಲಿ ಮಹಿಳೆಗೆ ಸಾಕಷ್ಟು ಜೀವನಾಂಶ ಕೊಡಲು ನಿರಾಕರಿಸಿದ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆಯು ಪರಿಹಾರವನ್ನು ಒದಗಿಸಬಹುದೇ? ಎ) ಹೌದು ಬಿ) ಬೇಡ -ಕಾರಣಗಳನ್ನು ಕೊಡಿ
 14.  ಕಡ್ಡಾಯ ವಿವಾಹ ನೋಂದಣಿ ಜಾರಿಗೊಳಿಸಿದರೆ ಹೇಗೆ? ನೀವೇನನ್ನುತ್ತೀರಿ ವಿವರಿಸಿ.
 15.  ಅಂತರ್ಜಾತೀಯ ಅಥವಾ ಅಂತರ್ಧರ್ವಿುಯ ವಿವಾಹವಾದ ದಂಪತಿಯ ರಕ್ಷಣೆಗೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು? ಹೇಳಿ
 16.  ಸಮಾನ ನಾಗರಿಕ ಸಂಹಿತೆಯು ವ್ಯಕ್ತಿಯ ಧಾರ್ವಿುಕ ಸ್ವಾತಂತ್ರ್ಯ ಹಕ್ಕನ್ನು ಅತಿಕ್ರಮಿಸಬಹುದೇ?   ಎ) ಹೌದು ಬಿ) ಇಲ್ಲ ಕಾರಣಗಳನ್ನು ಕೊಡಿ

ಸಮಾನ ನಾಗರಿಕ ಸಂಹಿತೆ ಅಥವಾ ವೈಯಕ್ತಿಕ ಕಾನೂನು ಸಂಕಲನಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದಕ್ಕೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು? ವಿವರಿಸಿ…

triple-talaq-vijayavani-14-oct-2016

Leave a Reply

Your email address will not be published. Required fields are marked *