ಸಂಕಷ್ಟದಲ್ಲಿ `ಪಬ್ಲಿಕ್ ಸಿಎಂ’

ಹರೀಶ್ ರಾವತ್
ಹರೀಶ್ ರಾವತ್

ಉತ್ತರಾಖಂಡದಲ್ಲೀಗ ರಾಜಕೀಯ ಅರಾಜಕತೆಯ ಪರಿಸ್ಥಿತಿ. ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡೆದ್ದ ಒಂಭತ್ತು ಕಾಂಗ್ರೆಸ್ ಶಾಸಕರು ಅಮಾನತುಗೊಂಡಿದ್ದಾರೆ. ಪರಿಣಾಮ 70 ಸದಸ್ಯಬಲದ ವಿಧಾನಸಭೆಯಲ್ಲಿ 36 ಸ್ಥಾನಗಳೊಂದಿಗೆ ಬಹುಮತದಲ್ಲಿದ್ದ ಕಾಂಗ್ರೆಸ್ 27ಕ್ಕೆ ಕುಸಿದಿದೆ. 28 ಸದಸ್ಯ ಬಲದ ಬಿಜೆಪಿ ಈಗ ಅತಿದೊಡ್ಡ ಪಕ್ಷವಾಗಿದ್ದು, ಸರ್ಕಾರ ರಚನೆಯ ಉಮೇದಿನಲ್ಲಿದೆ. ಆದರೆ, ವಿಶ್ವಾಸಮತ ಯಾಚನೆಗೆ ಹರೀಶ್ ರಾವತ್ ಹೈಕೋರ್ಟ್ ಏಕಸದಸ್ಯಪೀಠದ ಮೂಲಕ ಪಡೆದುಕೊಂಡಿದ್ದ ಅವಕಾಶಕ್ಕೆ ಹೈಕೋರ್ಟ್‍ನ ವಿಭಾಗೀಯ ಪೀಠ ತಡೆ ನೀಡಿ, ವಿಚಾರಣೆಯನ್ನು ಏ.6ಕ್ಕೆ ಮುಂದೂಡಿದೆ.
ಈ ಬೆಳವಣಿಗೆಯಿಂದಾಗಿ ಸುದ್ದಿಯಲ್ಲಿದ್ದಾರೆ ಹರೀಶ್ ರಾವತ್. ಸದ್ಯದ ರಾಜಕೀಯ ಅಂತಂತ್ರ ಸ್ಥಿತಿ ಅವರ ಹಾಗೂ ಕಾಂಗ್ರೆಸ್ಸಿಗರ ಸ್ವಯಂಕೃತಾಪರಾಧ ಎನ್ನುವುದಂತೂ ಖರೆ. ಹಾಗಂತ ಹರೀಶ್ ಆಳ್ವಿಕೆ ಬಗ್ಗೆ ಸಾರ್ವಜನಿಕ ಆಕ್ರೋಶ ಇದೆ ಎಂದರ್ಥವಲ್ಲ. ವಾಸ್ತವದಲ್ಲಿ ಅವರು ನಿಯತವಾಗಿ ಸಾರ್ವಜನಿಕರ ಜೊತೆಗೆ ಬೆರೆತು ಮಾತುಕತೆ ನಡೆಸುವ ಕಾರಣ ಅವರಿಗೆ `ಪಬ್ಲಿಕ್ಸ್ ಸಿಎಂ’ ಎಂಬ ಹೆಗ್ಗಳಿಕೆಯಿದೆ. ಅವರು ನಡೆದು ಬಂದ ರಾಜಕೀಯ ಪಥದತ್ತ ನೋಟ ಬೀರಿದರೆ ಅವರ ರಾಜಕೀಯ ಪಟುತ್ವದ ಒಂದು ಚಿತ್ರಣ ಸಿಕ್ಕೀತು.
ಸುಮಾರು 44 ವರ್ಷಗಳ ಹಿಂದಿನ ಮಾತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ ಹರೀಶ್ ರಾವತ್, ಹಂತ ಹಂತವಾಗಿ ಮೇಲೇರುತ್ತ ಬಂದರು. ಮುಖ್ಯಮಂತ್ರಿಯಾಗುವ ಬಹುಕಾಲದ ಕನಸನ್ನು ಎರಡು ವರ್ಷ ಹಿಂದಷ್ಟೇ 2014ರ ಫೆ.1ರಂದು ಈಡೇರಿಸಿಕೊಂಡಿದ್ದರು. ಅದಕ್ಕೆ ಅವಕಾಶ ಮಾಡಿಕೊಟ್ಟದ್ದು ಸಾವಿರಾರು ಜನರ ಸಾವಿಗೆ ಕಾರಣವಾದ, ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾದ 2013ರ ಜೂನ್ ತಿಂಗಳಲ್ಲಿ ಸಂಭವಿಸಿದ ಉತ್ತರಾಖಂಡ ಪ್ರಕೃತಿವಿಕೋಪ- ದಿಢೀರ್ ಪ್ರವಾಹ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ವಿಜಯ್ ಬಹುಗುಣ ಅವರು ಸಮರ್ಪಕ ರೀತಿಯಲ್ಲಿ ಪರಿಹಾರ ಕ್ರಮ ಕೈಗೊಂಡಿಲ್ಲ ಎಂಬ ಜನಾಕ್ರೋಶ ತೀವ್ರಗೊಂಡ ಬಳಿಕ ನೂತನ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್ ಪಾಳಯಕ್ಕೆ ಅನಿವಾರ್ಯವಾಗಿತ್ತು.
ಆರಂಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾವತ್‍ಗೆ ಕಠಿಣ ಪೈಪೆÇೀಟಿ ನೀಡಿದ್ದು ಗಢವಾಲ ಸಂಸದ ಸತ್ಪಾಲ್ ಮಹಾರಾಜ. ಅವರಿಗೆ ಬಹುಗುಣ ಬಣದ ಬೆಂಬಲವಿತ್ತು. ಅವರೆಲ್ಲ ಸೇರಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಪಟ್ಟದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹರೀಶ್ ರಾವತ್ ಮೇಲೆ ಒತ್ತಡ ಹೇರಿದ್ದರು.
ನಾಲ್ಕು ದಶಕಗಳ ರಾಜಕಾರಣದ ಅನುಭವದ ರಾವತ್ ಈ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೆ, ವಿವೇಚನೆ ಕಳೆದುಕೊಳ್ಳದೆ, ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಮೊದಲ ಸುತ್ತಿನ ಮಾತುಕತೆ ಮುಗಿಸಿ ಹೊರಬಂದ ಸತ್ಪಾಲ್, `ರಾವತ್‍ಗೆ ನಾನು ಅವಕಾಶ ಬಿಟ್ಟುಕೊಟ್ಟಿಲ್ಲ’ ಎಂದು ಹೇಳಿದ್ದರು. ಅಷ್ಟರಲ್ಲಿ ಅವರಿಗೆ ಒಳಗಿನ ವಿದ್ಯಮಾನಗಳು ಪೂರ್ಣವಾಗಿ ಅರ್ಥವಾಗಿಬಿಟ್ಟಿತ್ತು. ನಂತರ ಹೊರಗೆ ಬಂದ ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರು ಮುಂದಿನ ಮುಖ್ಯಮಂತ್ರಿ ಹರೀಶ್ ರಾವತ್ ಎಂದು ಘೋಷಿಸಿದ್ದರು. ಹಾಗೆ ಅವರು ರಾಜಕೀಯ ಚಾಣಾಕ್ಷತನ ಪ್ರದರ್ಶಿಸಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು.
2014ರ ಲೋಕಸಭೆ ಚುನಾವಣೆ ಪೂರ್ವದಲ್ಲಿ ನಡೆದ ಈ ರಾಜಕೀಯ ಬದಲಾವಣೆ ಕಾಂಗ್ರೆಸ್ಸಿಗರಲ್ಲಿ ಮೇಲ್ನೋಟಕ್ಕೆ ಉತ್ಸಾಹ ತುಂಬಿತ್ತು. ಆದರೆ, ಆ ಚುನಾವಣೆಯಲ್ಲಿ ರಾಜ್ಯದ ಐದಕ್ಕೆ ಐದೂ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಆದಾಗ್ಯೂ ಎದೆಗುಂದ ಹರೀಶ್, ಹೊಸ ಹೊಸ ಯೋಜನೆಗಳನ್ನು ಘೋಷಿಸಿದರು. ಈ ನಡುವೆ ಪಕ್ಷದೊಳಗಿನ ಭಿನ್ನರು, `ನಮ್ಮನ್ನು ಹರೀಶ್ ರಾವತ್ ಕಡೆಗಣಿಸುತ್ತಿದ್ದಾರೆ’ ಎಂಬ ಆರೋಪ ಮಾಡಲಾರಂಭಿಸಿದರು.
ಉತ್ತರಾಖಂಡ ಪ್ರವಾಹದ ಬಳಿಕ ಕೇದಾರನಾಥ, ಬದರೀನಾಥ, ಗಂಗೋತ್ರಿ, ಯಮುನೋತ್ರಿಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ಸರಿಪಡಿಸುವ ಕಾರ್ಯ ಪೂರ್ಣಗೊಳ್ಳದೆ ಯಾತ್ರೆಗೆ ಅನುಮತಿ ನೀಡುವುದು ಬೇಡ ಎಂಬ ಬಿಜೆಪಿ ಹಾಗೂ ಪಕ್ಷದ ಹಿರಿಯ ನಾಯಕರ ಮಾತನ್ನು ಹರೀಶ್ ರಾವತ್ ಅಲಕ್ಷಿಸಿದ್ದರು. ಅಷ್ಟೇ ಅಲ್ಲ, 2014ರಲ್ಲಿ ಚಾರ್‍ಧಾಮ್ ಯಾತ್ರೆಗೆ ಪಟ್ಟುಹಿಡಿದು ಅನುಮತಿ ನೀಡಿದರು ಕೂಡ. ನಂತರದ ಎರಡು ವರ್ಷಗಳಲ್ಲಿ ರಾವತ್ ಸರ್ಕಾರ ವಿವಿಧ ಬೆಟ್ಟ ಪ್ರದೇಶಗಳಲ್ಲಿ 60 ಹೆಲಿಪ್ಯಾಡ್‍ಗಳನ್ನು ನಿರ್ಮಿಸಿತು. ಅವರು ಕೈಗೊಂಡ ದಿಟ್ಟ ನಿರ್ಧಾರ, ಅಧಿಕಾರಿಗಳಿಗೆ ಅವರು ನೀಡಿದ ನಿರ್ದೇಶನದಿಂದಾಗಿ ಆಡಳಿತ ಯಂತ್ರ ಜನರ ಬಾಗಿಲಿಗೆ ಹೋಯಿತು. ಅಧಿಕಾರಿಗಳು ರಾತ್ರಿ ಹೊತ್ತು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಅದನ್ನು ಪರಿಹರಿಸುವುದಕ್ಕೆ ಪ್ರಯತ್ನಿಸಿದ್ದೂ ಈ ವರ್ಷಾರಂಭದಲ್ಲಿ ಸುದ್ದಿಯಾಗಿತ್ತು.
ಕಳೆದ ವರ್ಷವಂತೂ ಖುದ್ದು ರಾವತ್ ಒಂದಷ್ಟು ದೂರವಾಣಿ ಸಂಖ್ಯೆಗಳನ್ನು ಆಯ್ದುಕೊಂಡು ಸಾರ್ವಜನಿಕರ ಜೊತೆ ಮಾತುಕತೆ ನಡೆಸಿ ಆಡಳಿತ ಯಂತ್ರದ ಸಾರ್ವಜನಿಕ ಸೇವೆಗಳ ಕುರಿತು ಮಾಹಿತಿ ಪಡೆಯುತ್ತಿದ್ದುದು, ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸುತ್ತಿದ್ದುದು ಗಮನಸೆಳೆದಿತ್ತು. ಒಬ್ಬ ಮುಖ್ಯಮಂತ್ರಿಯಾಗಿ ರಾವತ್ ಈ ರೀತಿ ಕ್ರಿಯಾಶೀಲರಾಗಿದ್ದು, ಸಹಜವಾಗಿಯೇ ಆಡಳಿತಯಂತ್ರವನ್ನೂ ಚುರುಕಾಗಿಸಿತ್ತು. ಪಕ್ಷದ ಸಾಮಾನ್ಯ ಕಾರ್ಯಕರ್ತ ಕೂಡ ರಾವತ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಬಹುದಾಗಿತ್ತು ಎಂಬುದನ್ನು ಅನೇಕ ಕಾರ್ಯಕರ್ತರೇ ಮಾಧ್ಯಮದೆದುರು ಹೇಳಿಕೊಂಡಿದ್ದರು. ಇನ್ನೊಂದೆಡೆ, ಕೆಲವೇ ಕೆಲವು ಸಚಿವರ ಮಾತುಗಳಷ್ಟೇ ಅವರಿಗೆ ರುಚಿಸುತ್ತದೆ, ಶಾಸಕರ ಪೈಕಿಯೂ ಅಷ್ಟೆ ಎಂಬ ಆರೋಪವೂ ಪದೇಪದೆ ಕೇಳುತ್ತಿತ್ತು. ಅವರ ಈ ಕಾರ್ಯವೈಖರಿ ಪಕ್ಷದೊಳಗೆ ಗುಂಪುಗಾರಿಕೆಗೆ ಕಾರಣವಾಯಿತು. ಇದುವೇ, ಈಗ ಅವರಿಗೆ ಮುಳುವಾಗಿದ್ದು ಕೂಡ.
ಆ ವಿಷಯ ಹಾಗಿರಲಿ, ಹರೀಶ್ ರಾವತ್ ಮುಖ್ಯಮಂತ್ರಿ ಪಟ್ಟಕ್ಕೇರಲು ಬಯಸಿದ್ದು ಅದೇ ಮೊದಲೇನಲ್ಲ. 2012ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿ ಅನೇಕ ಕಸರತ್ತುಗಳನ್ನು ಮಾಡಿ ಬಂಡಾಯದ ಬಾವುಟ ಹಾರಿಸಿದ್ದರು. ಆದರೆ, ಅಂದು ಹೈಕಮಾಂಡ್ ಜತೆಗಿನ ನಿಕಟ ಸಂಪರ್ಕ ಹೊಂದಿದ್ದ ವಿಜಯ್ ಬಹುಗುಣ ಮುಖ್ಯಮಂತ್ರಿಯಾದರು. ಆ ಸಂದರ್ಭದಲ್ಲಿ ಅವರು ಕೇಂದ್ರ ಸಚಿವರಾಗಿದ್ದರು. ಯುಪಿಎ2 ಸರ್ಕಾರ ಅಸ್ತಿತ್ವದಲ್ಲಿದ್ದಾಗ ಆರಂಭದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವ, ಬಳಿಕ ಕೃಷಿ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆ ಖಾತೆಯ ರಾಜ್ಯ ಸಚಿವ, 2011ರ ಜುಲೈನಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು.
ರಜಪೂತ ಕುಟುಂಬದ ರಾಜೇಂದ್ರ ಸಿಂಗ್ ರಾವತ್ ಮತ್ತು ದೇವಕಿ ದೇವಿ ಅವರ ಮಗನಾಗಿ 1948ರ ಏ.27ರಂದು ಜನಿಸಿದ ರಾವತ್, ಲಖನೌ ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಕಲಾ ವಿಷಯದಲ್ಲಿ ಪದವಿ ಪಡೆದರು. ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿದ್ದ ರೇಣುಕಾ ರಾವತ್ ಅವರನ್ನೇ ವಿವಾಹವಾದರು. ದಂಪತಿಗೆ ಮಕ್ಕಳಿಲ್ಲ. 1977ರಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಂಜಯ್ ಗಾಂಧಿ ಅವರ ಆಪ್ತವಲಯ ಸೇರಿದರು. ಟ್ರೇಡ್ ಯೂನಿಯನ್ನನ್ನು ಏಣಿಯಾಗಿಸಿಕೊಂಡು ರಾಜಕೀಯ ಉತ್ತುಂಗಕ್ಕೇರಿದರು. 1980ರಲ್ಲಿ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರನ್ನು ಸೋಲಿಸಿ ಗಮನಸೆಳೆದರು. ಸುದೀರ್ಘ ರಾಜಕೀಯ ಅನುಭವ ಹೊಂದಿದ ರಾವತ್, ಸ್ವಯಂಕೃತ ಅಪರಾಧದಿಂದಾದ ಲೋಪವನ್ನು ಯಾವ ರೀತಿ ಸರಿಪಡಿಸಿಕೊಳ್ಳುತ್ತಾರೆ? ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಅವರಿಗೆ ಅವಕಾಶ ಸಿಗುತ್ತದೆಯಾ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *