ಸುಧಾರಕನೋ ಸೇನಾನಿಯೋ

Shinzo Abe
Shinzo Abe

‘ಬಲಿಷ್ಠ ಬಾರತ ಎನ್ನುವುದು ಜಪಾನ್​ನ ಪ್ರಮುಖ ಹಿತಾಸಕ್ತಿಗಳಲ್ಲೊಂದು. ಅದೇ ರೀತಿ ಬಲಿಷ್ಠ ಜಪಾನ್ ಎಂಬುದು ಕೂಡ ಭಾರತದ ಪ್ರಮುಖ ಹಿತಾಸಕ್ತಿಗಳಲ್ಲೊಂದು ಎಂಬುದು ನನ್ನ ಬಲವಾದ ನಂಬಿಕೆ. ಭಾರತದ ಅಭಿವೃದ್ಧಿಯಲ್ಲಿ ಜಪಾನ್ ಕೊಡುಗೆ ಬಹಳಷ್ಟಿದ್ದರೂ, ಭಾರತದಿಂದ ಜಪಾನ್ ಕಲಿಯುವುದು ಬಹಳಷ್ಟಿದೆ’

ಈ ರೀತಿ ಹೇಳಿಕೆ ನೀಡಿರುವುದು ಬೇರಾರೂ ಅಲ್ಲ, ಸದ್ಯ ಮೂರು ದಿನಗಳ(ಡಿ.11-13) ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ. ಇದು ಭಾರತ ಹಾಗೂ ಜಪಾನ್ ನಡುವಿನ ಬಾಂಧವ್ಯದ ಪುಟ್ಟ ನುಡಿಚಿತ್ರ ಎನ್ನಬಹುದು. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಬೆ ಅವರ ನಡುವಿನ ಬಾಂಧವ್ಯವೂ ಹಳೆಯದು. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೇ ಜಪಾನ್ ಜತೆಗೆ ಉತ್ತಮ ವ್ಯಾವಹಾರಿಕ ನಂಟು ಹೊಂದಿದ್ದರು. ಎರಡೂ ದೇಶಗಳಿಗೆ ಚೀನಾದ ಕಾಟ ಇರುವುದರ ಹಿನ್ನೆಲೆಯಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಸುವುದು ಉಭಯ ನಾಯಕರಿಗೆ ಅನಿವಾರ್ಯ. ಚೀನಾ ಕ್ಯಾತೆಗೆ ತಕ್ಕಂತೆ ಸೆಡ್ಡು ಹೊಡೆಯುವಂತಹ ತಂತ್ರಗಾರಿಕೆಯನ್ನು ಹೆಣೆಯುವ ಜತೆಗೆ, ಇತ್ತ ದೇಶದ ಸಮಗ್ರ ಅಭಿವೃದ್ಧಿಗೂ ಪ್ರಯತ್ನಿಸುತ್ತಿರುವ ರೀತಿ ಗಮನಿಸಿದ ಜಾಗತಿಕ ಮಾಧ್ಯಮಗಳು ಇವರೇನು ಆಧುನಿಕ ಜಪಾನಿನ ಸುಧಾರಕನೋ ಅಥವಾ ಅಪಾಯಕಾರಿ ಸೇನಾನಿಯೋ ಎಂಬ ಉದ್ಗಾರದೊಂದಿಗೆ ವಿಶ್ಲೇಷಣೆ ನಡೆಸಿದ್ದೂ ಇದೆ. ಇವು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅವರ ರಾಜಕೀಯ ಪಯಣ ಗಮನಿಸಿದರೆ, ರಾಜಕೀಯ ಹಿನ್ನೆಲೆಯ ಕುಟುಂಬದ ಛಾಪು ಎದ್ದು ಕಾಣಿಸುತ್ತದೆ.

ಅಬೆ ರಾಜಕೀಯ ಪ್ರವೇಶ ಮಾಡಿದ್ದು 1990ರ ದಶಕದಲ್ಲಿ. ಯೊಷಿರೊ ಮೋರಿ ಬಣದಲ್ಲಿ ಗುರುತಿಸಿಕೊಂಡ ಅವರು, ರಾಜಕೀಯ ಮುಖ್ಯವಾಹಿನಿಯಲ್ಲಿ ಪ್ರವರ್ಧಮಾನಕ್ಕೆ ಬಂದುದು 1993ರ ಅವಧಿಯಲ್ಲಿ. ಆಗ ಅವರು ಮೊದಲ ಬಾರಿ ಸಂಸತ್ತು ಪ್ರವೇಶಿಸಿದ್ದರು.

ಈ ನಡುವೆ, ಜಪಾನಿ ಪ್ರಜೆಗಳ ಅಪಹರಣ ಘಟನೆಗೆ ಸಂಬಂಧಿಸಿದಂತೆ ನೆರೆಯ ಉತ್ತರ ಕೊರಿಯಾದ ವಿರುದ್ಧ ಕಠಿಣ ನಿಲುವು ತಾಳಿ ದೇಶದ ಗಮನಸೆಳೆದರು. ಈ ವಿಷಯವಾಗಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ಏರ್ಪಟ್ಟಾಗ ಪ್ರಮುಖ ಮಧ್ಯಸ್ಥಿಕೆದಾರ ಪಾತ್ರವನ್ನು ಅಬೆ ನಿರ್ವಹಿಸಿದ್ದರು. ಈ ಪ್ರಯತ್ನದ ಫಲವಾಗಿ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಇಲ್ (ಹಾಲಿ ಸರ್ವಾಧಿಕಾರಿ ಕಿಮ್ ಜೊಂಗ್ ಉನ್​ರ ತಂದೆ) ಜತೆ ಸಂಧಾನ ನಡೆಸಲು ಜುನಿಚಿರೊ ಕೊಯಿಜುಮಿ ಜೊತೆ ಅಬೆ ಕೂಡ ಹೋಗಬೇಕಾಗಿ ಬಂತು. ಮಾತುಕತೆ ವೇಳೆ ಕಠಿಣ ನಿಲುವು ತಳೆದದ್ದರ ಫಲವಾಗಿ 2002ರಲ್ಲಿ ಅವರು ದೇಶಾದ್ಯಂತ ಜನಪ್ರಿಯರಾಗಿಬಿಟ್ಟರು.

ಮುಂದೆ ಹಂತ ಹಂತವಾಗಿ ಪಕ್ಷದ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸುತ್ತ 2003ರಲ್ಲಿ ಎಲ್​ಡಿಪಿಯ ಮಹಾಪ್ರಧಾನ ಕಾರ್ಯದರ್ಶಿಯಾದರು. ಇದಕ್ಕೂ ಮುನ್ನ 2000-2003ರ ಅವಧಿಯಲ್ಲಿ ಯೊಷಿರೊ ಮೋರಿ ಮತ್ತು ಜುನಿಚಿರೊ ಕೊಯಿಜುಮಿ ಸಚಿವ ಸಂಪುಟದಲ್ಲಿ ಸಾಮಾಜಿಕ ವ್ಯವಹಾರಗಳ ವಿಭಾಗದ ನಿರ್ದೇಶಕ ಹಾಗೂ ಡೆಪ್ಯುಟಿ ಚೀಫ್ ಕ್ಯಾಬಿನೆಟ್ ಸೆಕ್ರಟರಿ ಹುದ್ದೆ ನಿಭಾಯಿಸಿದ್ದರು.

ಅದು 2006ರ ಅವಧಿ. ಎಲ್​ಡಿಪಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಿತ್ತು. ಆರಂಭದಲ್ಲಿ ಯಸುವೊ ಫುಕುದ ಹೆಸರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ಅಬೆ ಮತ್ತು ಫುಕುದ ಇಬ್ಬರೂ ಮಾಜಿ ಪ್ರಧಾನಿ ಯೊಷಿರೊ ಮೋರಿ ಅವರ ಬಣದವರು. ವಾಸ್ತವದಲ್ಲಿ ಮೋರಿ ಬಣವನ್ನು ಈ ಹಿಂದೆ 1986-1991ರ ಅವಧಿಯಲ್ಲಿ ಅಬೆ ಅವರ ತಂದೆ ಶಿಂತಾರೊ ಅಬೆ ಮುನ್ನಡೆಸಿದ್ದರು. ಪಕ್ಷದೊಳಗಿನ ಈ ಬಣ ಅಬೆ ಪರ ಒಲವು ತೋರಿದ್ದರಿಂದ ಫುಕುದ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಪರಿಣಾಮ, ಸೆಪ್ಟೆಂಬರ್ 20ರಂದು ಎಲ್​ಡಿಪಿಯ ಅಧ್ಯಕ್ಷನಾಗಿ ಅಬೆ ಆಯ್ಕೆಯಾದರು. ನಂತರದಲ್ಲಿ ಪ್ರಧಾನಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 475 ಮತಗಳ ಪೈಕಿ 339 ಮತ ಗಳಿಸಿ ಪ್ರಧಾನಿ ಪಟ್ಟಕ್ಕೇರಿದರು. ಎರಡನೇ ವಿಶ್ವಯುದ್ಧದ ಬಳಿಕ ಜಪಾನ್ ಆಡಳಿತ ಚುಕ್ಕಾಣಿ ಹಿಡಿದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾದ ಅಬೆ, ದೇಶದ ಆರ್ಥಿಕತೆಯ ಸುಧಾರಣೆಗೋಸ್ಕರ ಹೊಸ ನೀತಿಯನ್ನು ಜಾರಿಗೊಳಿಸಿದರು. ಅದು ‘ಅಬೆನಾಮಿಕ್ಸ್’ ಎಂದೂ ’Three Arrows’ ಎಂದೂ ಪ್ರಸಿದ್ಧವಾಗಿತ್ತು.

ಆದರೆ, ಒಂದೇ ವರ್ಷದಲ್ಲಿ ನಿರೀಕ್ಷೆಗಳೆಲ್ಲವೂ ಹುಸಿಯಾದವು. ಅಬೆ ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿಗಳ ಹೆಸರು ಒಂದಿಲ್ಲೊಂದು ಹಗರಣದಲ್ಲಿ ಸಿಲುಕಿದವು. ಈ ಬೆಳವಣಿಗೆಯಿಂದ ಧೃತಿಗೆಟ್ಟ ಅಬೆ 2007ರಲ್ಲಿ ಅನಾರೋಗ್ಯದ ನೆಪವೊಡ್ಡಿ ರಾಜೀನಾಮೆ ನೀಡಿ ನೇಪಥ್ಯಕ್ಕೆ ಸರಿದರು. ಅಲ್ಪಾವಧಿಯಲ್ಲಿ ಅವರು ದೇಶದ ವಿದೇಶಾಂಗ ನೀತಿಯಲ್ಲಿ ತಂದ ಬದಲಾವಣೆ ಪರಿಣಾಮಕಾರಿಯಾದುದು. ಅಷ್ಟೇ ಅಲ್ಲ, ದೇಶಾದ್ಯಂತ ರಾಷ್ಟ್ರಪ್ರಜ್ಞೆಯನ್ನು ಬಡಿದೆಬ್ಬಿಸಿದರು. ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ಚತುಷ್ಕೋನ ಸುರಕ್ಷಾ ಮಾತುಕತೆ (Quadrilateral Security Dialogue)ಗೆ2007ರಲ್ಲಿ ಮುನ್ನುಡಿ ಬರೆದರು. ಆ ವರ್ಷ ಆಗಸ್ಟ್​ನಲ್ಲಿ ಮೂರು ದಿನಗಳ ಭಾರತ ಭೇಟಿಗೆ ಬಂದಿದ್ದ ಅಬೆ, ಹೊಸ ದ್ವಿಪಕ್ಷೀಯ ಬಾಂಧವ್ಯಕ್ಕೆ ನಾಂದಿ ಹಾಡಿದ್ದರು. ಪ್ರಾದೇಶಿಕವಾಗಿ ಚೀನಾದ ಆರ್ಥಿಕ ಹಾಗೂ ವ್ಯೂಹಾತ್ಮಕ ಪ್ರಾಬಲ್ಯ ತಗ್ಗಿಸುವ ಸಲುವಾಗಿ ವಿಸõತ ಏಷ್ಯಾ ರಾಷ್ಟ್ರಗಳ ಮೈತ್ರಿಯ ಯೋಜನೆಯನ್ನು ಘೊಷಿಸಿದ್ದರು.

‘ಒಬ್ಬ ರಾಜಕಾರಣಿಯಾಗಿ ನಾನು ಸೋಲುಗಳನ್ನು ಅನುಭವಿಸಿದ್ದೇನೆ. ಅವು ನನಗೆ ಸಾಕಷ್ಟು ಪಾಠಗಳನ್ನು ಕಲಿಸಿವೆ. ಹೀಗಾಗಿಯೇ ನಾನು ಜಪಾನ್​ಗಾಗಿ ಎಲ್ಲವನ್ನೂ ಧಾರೆ ಎರೆಯಲು ಸಿದ್ಧನಿದ್ದೇನೆ’ ಎನ್ನುವ ಅಬೆ, ರಾಜಕೀಯ ಜೀವನದುದ್ದಕ್ಕೂ ಸಾಕಷ್ಟು ಏಳುಬೀಳುಗಳನ್ನು ಕಂಡವರು. 2012ರ ಡಿಸೆಂಬರ್​ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿ ಅಬೆ ಎರಡನೇ ಬಾರಿ ಪ್ರಧಾನಿಯಾದರು. ಈ ಚುನಾವಣೆಗೆ ಮೂರು ತಿಂಗಳ ಮೊದಲಷ್ಟೇ ಅವರು ಪಕ್ಷದ ವೇದಿಕೆಯ ಮುಂಚೂಣಿಗೆ ಬಂದಿದ್ದು. ಅದು ಅವರ ರಾಜಕೀಯ ಮರುಪ್ರವೇಶವೂ ಆಗಿತ್ತು.

1954 ಸೆ.21ರಂದು ಜಪಾನಿನ ಯಮಗುಚಿನ ನಗಾಟೊನಲ್ಲಿ ಅಬೆ ಜನನ. ತಂದೆ ಮಾಜಿ ವಿದೇಶಾಂಗ ಸಚಿವ ಶಿಂತಾರೊ ಅಬೆ. ತಾಯಿ ಯೊಕೊ ಅಬೆ. ಈಕೆ ಮಾಜಿ ಪ್ರಧಾನಿ ನೊಬುಸುಕೆ ಕಿಷಿ ಅವರ ಮಗಳು. ಅಜ್ಜ ಕೆನ್ ಅಬೆ ಮಾಜಿ ಸಂಸದ. ಹೀಗೆ ರಾಜಕೀಯ ಹಿನ್ನೆಲೆಯದೇ ಕುಟುಂಬ. ಪತ್ನಿ ಅಕಿ ಮಟ್ಸುಜಕಿ. ಅಬೆ ದಂಪತಿಗೆ ಮಕ್ಕಳಿಲ್ಲ. ಟೋಕಿಯೋದಲ್ಲಿ ಶಿಕ್ಷಣ ಮುಗಿಸಿ 1977ರಲ್ಲಿ ಲಾಸ್ ಏಂಜಲೀಸ್​ನಲ್ಲಿ ಉನ್ನತ ಶಿಕ್ಷಣ ಪೂರೈಸಿದ ಅಬೆ, 1979ರಲ್ಲಿ ಕೊಬೆ ಸ್ಟೀಲ್ ಕಂಪನಿಯಲ್ಲಿ ವೃತ್ತಿ ಜೀವನ ಆರಂಭಿಸಿದರು. 1982ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ವಿದೇಶಾಂಗ ಸಚಿವರಾಗಿದ್ದ ತಂದೆ ಶಿಂತಾರೊ ಅಬೆಗೆ ಆಪ್ತ ಸಹಾಯಕರಾದರು.

ಸದ್ಯ ಪ್ರಧಾನಿಯಾಗಿ ಎರಡನೆಯ ಅವಧಿಯಲ್ಲಿನ ಅವರ ಸಾಧನೆ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಮೊದಲ ಅವಧಿಯಲ್ಲಿ ದೇಶಾದ್ಯಂತ ಉದ್ದೀಪಿಸಿದ್ದ ರಾಷ್ಟ್ರಪ್ರಜ್ಞೆಯನ್ನು ಇನ್ನಷ್ಟು ಜಾಗೃತಗೊಳಿಸುವ ಸಲುವಾಗಿ ಶಾಲಾ, ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಸಾಕಷ್ಟು ಪರಿಷ್ಕರಣೆಗಳನ್ನು ಮಾಡಿಸಿದರು. ವಿದೇಶಗಳ ಜತೆಗಿನ ನಂಟನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮುಂದುವರಿಸಿದ ಅವರು, ಚೀನಾದ ಜತೆಗಿನ ಬಾಂಧವ್ಯ ವೃದ್ಧಿಗೆ ಪ್ರಯತ್ನಿಸುತ್ತಿರುವುದರ ನಡುವೆಯೇ ತನ್ನ ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಬೇಡ ಎಂಬಂತೆ ಚುರುಕುಮುಟ್ಟಿಸುವ ಕೆಲಸವನ್ನೂ ಮಾಡಿ ಸಮರ್ಥ ನಾಯಕರೆನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *