“sum”ಸಾರವೋ.. ಸಂಸಾರವೋ…

ಚಿತ್ರಕೃಪೆ - freefoto.com(ಸಾಂಕೇತಿಕ ಚಿತ್ರ)

ನಮ್ದೇನೂ ತಪ್ಪಿಲ್ಲಾ… ಕೇಳಿ ಸರ್ ಪ್ಲೀಸ್ ನಿಮ್ ದಮ್ಮಯ್ಯ ಅಂತೀನೀ…. ಬಿಟ್ ಬಿಡಿ ನಮ್ಮನ್ನು…. ಹೀಗೆ ಗೋಳಾಡ್ತಿದ್ದಾರೆ ಆ ಅಮ್ಮ. ಆದ್ರೂ ಅದು ಪೊಲೀಸರ ಕಿವಿ ತಲುಪುತ್ತಲೇ ಇರಲಿಲ್ಲ. ಅವರ ಪಾಡಿಗೆ ಅವರು ಇವರನ್ನು ಠಾಣೆಗೊಯ್ಯುವ ಕೆಲಸಕ್ಕೆ ಮುಂದಾಗಿದ್ರು…

ಆ ಅಮ್ಮನನ್ನು ಮಾತ್ರ ಪೊಲೀಸರು ಕೊಂಡೊಯ್ಯುತ್ತಿದ್ದಾರೆ ಅಂದ್ಕೊಬೇಡಿ. ಪಕ್ಕದಲ್ಲೇ ಒಬ್ಬ ವಯಸ್ಸಾದವರೂ ಇದ್ದಾರೆ. ಅವರೋ ತಲೆ ತಗ್ಗಿಸಿ ಏನೂ ಮಾತನಾಡದೇ ಮುಂದೆ ಪೊಲೀಸರ ಜೊತೆ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಜೊತೆ ಇನ್ನೊಬ್ಬ ಯುವಕ ಕೂಡಾ ಹೆಜ್ಜೆ ಹಾಕ್ತಿದ್ದ. ಆತನೂ ಮೌನದ ಮೊರೆ ಹೋಗಿದ್ದ. ಅಕ್ಕಪಕ್ಕದ ಮನೆಯವರಿಗೆ ಏನೂ ಅರ್ಥವಾಗಲಿಲ್ಲ. ಎಲ್ಲರೂ ಕುತೂಹಲ ಅಚ್ಚರಿಯೊಂದಿಗೆ ನೋಡ್ತಾ ಇದ್ದಾರೆ. ಹಾಗೂ ಹೀಗೂ ಅವರನ್ನು ಪೊಲೀಸ್ ವ್ಯಾನಿಗೆ ಹತ್ತಿಸಿದ್ದಾಗಿದೆ. ಪೊಲೀಸ್ ಠಾಣೆಗೂ ಕರದೊಯ್ದರು. ಅಲ್ಲಿ ಆ ಅಮ್ಮ ಮೂರ್ಛೆ ತಪ್ಪಿ ಬೀಳ್ತಾರೆ. ಈ ಎಲ್ಲ ದೃಶ್ಯಗಳನ್ನೂ ನೋಡ್ತಾ ಇದ್ದ ವ್ಯಕ್ತಿಯೊಬ್ಬನಿದ್ದ. ಆತ ಅವರ ನೆರೆಮನೆಯವನು. ನೋಡ್ತಾ ನೋಡ್ತಾ ಆತನ ಅಂತರಂಗ ಕಲ್ಲೆಸೆದ ಕೆರೆಯಂತಾಗುತ್ತದೆ. ಮನಸ್ಸು ನೆನಪಿನಂಗಳಕ್ಕೆ ಇಳಿಯುತ್ತದೆ.

****

ಆತ ಉಲ್ಲಾಸದ ಚಿಲುಮೆ. ವಯಸ್ಸು ಮೂವತ್ತರ ಆಸುಪಾಸು. ನೆರೆಮನೆಯವನೇ. ಕೆಲ ವರ್ಷದ ಹಿಂದೆ ಆತನೊಬ್ಬನೇ ಇದ್ದ. ತಂದೆ ತಾಯಿ ಊರಲ್ಲಿದ್ದರು. ಒಬ್ಬನೇ ಮಗ. ಹೆಸರು ಸುಧೀರ್. ತಂದೆ ಹೆಸರು ಸುದೀಪ್. ತಾಯಿ ಜಾನಕಿ. ವೃತ್ತಿಯಲ್ಲಿ ಎಂಜಿನಿಯರ್. ಕಲ್ಲನ್ನಾದರೂ ಮಾತನಾಡಿಸುವ ಗುಣ. ಇಷ್ಟು ಸಾಕಲ್ಲವೇ ಗುಂಪಿನಲ್ಲಿ ಎದ್ದು ಕಾಣಲು.

ಎರಡು ವರ್ಷದ ಹಿಂದಿನ ಮಾತು. ತಂದೆ ತಾಯಿ ಇಬ್ಬರನ್ನೂ ಬೆಂಗಳೂರಿಗೆ ಕರೆ ತಂದಿದ್ದ. ಊರಿನ ಜಾಗ ಮಾರಿ ಅವರೂ ಉಳಿದ ಜೀವನ ಮಗನ ಜೊತೆ ಬೆಂಗಳೂರಿನಲ್ಲೇ ಕಳೆಯಲು ನಿರ್ಧರಿಸಿದ್ದರು. ಸುಧೀರ್ ನನಗೂ ಗೆಳೆಯ. ಪ್ರತಿದಿನ ಬೆಳಗ್ಗೆ ಒಂದು ಕಾಫಿ ಅವರ ಜೊತೆ ಇದ್ದೇ ಇರುತ್ತಿತ್ತು.

ಅಂದೂ ಹಾಗೇ ಆಗಿತ್ತು. ಬೆಳಗ್ಗೆ ಕಾಫಿಗೆ ಹೋಗಿದ್ದೆ. ಅಲ್ಲಿ ಸುಧೀರ್ ಅಪ್ಪ ಅಮ್ಮ ಇಬ್ರೂ ಮಾತಾಡ್ತಾ ಇದ್ರು. ಸುಧೀರ್ ಕೂಡಾ ಅಲ್ಲೇ ಇದ್ದ.

ಜಾನಕಿ : ಮಗನಿಗೆ ಮದುವೆ ವಯಸ್ಸು. ಹುಡುಗಿ ಹುಡುಕಬೇಕು. ಆದರೆ, ಅವನಿಗೆ ಒಪ್ಪಿಗೆ ಆಗಬೇಕಲ್ಲಾ?

ಸುದೀಪ್ : ಈಗಿನ ಕಾಲದ ಹುಡುಗರು ಕಣೆ ಅವರೆಲ್ಲಾ.. ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ತಾರೆ. ನಮ್ಗೆಲ್ಲಿ ಕೆಲಸ…

ಸುಧೀರ್ : ಅಪ್ಪಾ… ನಾನ್ಯಾವತ್ತೂ ಮದುವೆ ಬಗ್ಗೆ ಯೋಚಿಸಿದವನೇ ಅಲ್ಲ. ಅದ್ರಲ್ಲೂ ಸಂಗಾತಿ ಹೀಗೇ ಇರಬೇಕು ಅಂತ ಕನಸು ಕಂಡವನೂ ಅಲ್ಲ. ನೀವು ಯಾವ ಹುಡುಗಿಯನ್ನು ತೋರಿಸಿ ಇವನ್ನು ಬಾಳಸಂಗಾತಿಯನ್ನಾಗಿ ಮಾಡಿಕೋ ಅಂದ್ರೆ ಹಾಗೇ ಮಾಡ್ತೇನೆ…

ಸುದೀಪ್ : ಹೇ… ಏನೋ ಇದು… ಹೀಗಾ ಹೇಳೋದು.. ನೋಡೋ ರಮೇಶಾ ನಿನ್ ಗೆಳೆಯ ಏನ್ ಹೇಳ್ತಿದ್ದಾನೆ..

ಸುಧೀರ್ : ಮತ್ತಿನ್ನೇನು ಅಪ್ಪಾ ? ನೋಡಮ್ಮ ನೀನೇ ಹೇಳು….

ಜಾನಕಿ : ಸರಿಯಪ್ಪಾ… ನಾವೇ ಹುಡುಗಿ ಹುಡುಕಿ ಮದುವೆ ಮಾಡ್ತೀವೆ ಆಯ್ತಾ ?

ಸುಧೀರ್ : ಹ್ಞುಂ…

ಹೀಗೆ ಇವರೆಲ್ಲರ ಸಂಭಾಷಣೆಗೂ ನಾನು ಮೂಕ ಪ್ರೇಕ್ಷಕನಾಗಿದ್ದೆ. ಹಾಗೆ ಒಂದು ತಿಂಗಳಲ್ಲಿ ಮದುವೆ ಸಿದ್ಧತೆ ಕೂಡಾ ನಡೆದಿತ್ತು. ಹುಡುಗಿ ಹೆಸರು ಸಂಧ್ಯಾ. ಬೆಂಗಳೂರಿಗೆ ತಕ್ಕಂತ ಹುಡುಗಿ ಅಂತ ನನಗನಿಸಿತ್ತು. ಹಾಗೆ ನೋಡಿದ್ರೆ ಆಕೆ ಬೆಂಗಳೂರಿನವಳೇ. ಸುಧೀರ್ ಜೊತೆ ನೋಡಿದಾಗ ಸೂಪರ್ ಜೋಡಿ ಅಂತಾನೂ ಅನಿಸ್ತು. ಸುಧೀರ್ ಅಪ್ಪ ಅಮ್ಮ ಕೂಡಾ ತುಂಬಾ ಸಂತಸ ಪಟ್ಟಿದ್ರು. ಮದುವೆ ಕೂಡಾ ಗ್ರಾಂಡಾಗೇ ನಡೆಯಿತು.

ಹಾಗೆ ಸುಧೀರ್‌ನ ಪ್ರಿಯ ಮಡದಿಯಾಗಿ ಸಂಧ್ಯಾ ಆ ಮನೆಗೆ ಕಾಲಿರಿಸಿದ್ಳು. ಸುಧೀರ್ ಅಪ್ಪ ಅಮ್ಮ ಕೂಡಾ ಮೆಚ್ಚಿದ್ರಲ್ವೇ… ಹಾಗೇ ಸಂತಸದಿಂದಲೇ ಇತ್ತು ಆ ಕುಟುಂಬ. ನನ್ನ ಬೆಳಗ್ಗಿನ ಕಾಫಿ ಕೂಡಾ ಹಾಗೇ ಮುಂದುವರಿದಿತ್ತು. ಈ ಒಂದು ವಿಚಾರದಲ್ಲಿ ನಾನು ಆ ಮನೆಯ ಸದಸ್ಯನಾಗಿದ್ದೆ ಅಂತಾನೇ ಹೇಳಬಹುದು. ಸಂಧ್ಯಾ ಕೂಡಾ ನನಗೆ ಪರಿಚಿತಳಾಗಿ ಬಿಟ್ಟಿದ್ಳು.

ಆಕೆ ಕೆಲಸಕ್ಕೆ ಹೋಗೋ ಪ್ರಮೇಯವೇ ಇರಲಿಲ್ಲ. ಯಾಕೆಂದ್ರೆ ಕೆಲಸಕ್ಕೆ ಹೋಗೋದಕ್ಕೆ ಅಥವಾ ಹೋಗದಿರೋದಕ್ಕೆ ಯಾರದ್ದೂ ಬಲವಂತ ಇರಲಿಲ್ಲ.

ಅದೊಂದು ದಿನ ಬೆಳಗ್ಗೆ  ?? ಗಂಟೆಗೆ ಎಂ.ಜಿ.ರಸ್ತೆಯಲ್ಲಿ ಸಂಧ್ಯಾ ಕಾಣಿಸಿಕೊಂಡಿದ್ದಳು. ನನಗೋ ಅಚ್ಚರಿ. ಎದುರಾದರೂ ಗುರುತೇ ಹಿಡಿಯದವಳಂತೆ ಆಕೆ ಮುಂದಕ್ಕೆ ಹೋಗಿದ್ದಳು. ಬಹುಶಃ ಏನೋ ಯೋಚಿಸುತ್ತಿದ್ದಿರಬಹುದು ಅಂದುಕೊಂಡೆ. ಮರುದಿನವೂ ಅದೇ ಸಮಯಕ್ಕೆ ಅಲ್ಲಿ ಆಕೆ ಕಂಡಾಗ ಏನೋ ಅನುಮಾನ ಸುಳಿದಾಡಿತು.  ಅದಾದ ಮರುದಿನ ಬೆಳಗ್ಗೆ ಕಾಫಿ ಕುಡಿಯುವ ಹೊತ್ತಲ್ಲಿ ಸುಧೀರ್ ಎದುರೇ ಆಕೆಯನ್ನು ಪ್ರಶ್ನಿಸಿದೆ.

ನಾನು : ನಿನ್ನೆ ಎಂ.ಜಿ.ರೋಡ್‌ನಲ್ಲಿ ಕಂಡ ಹಾಗಿತ್ತು.

ಸಂಧ್ಯಾ : ಹ್ಞಾಂ… ನಾನಾ ? ನೀವು ಬೇರೆ ಯಾರನ್ನೋ ನೋಡಿರಬೇಕು.

ನಾನು : ಅದೇ ವಯೋಲೆಟ್ ಕಲರ್ ಡ್ರೆಸ್‌ನಲ್ಲಿ…

ಸಂಧ್ಯಾ : ನೀವು ಬೇಗ ಮದುವೆ ಆಗಿ… ನಿಮಗೆಲ್ಲೋ ಭ್ರಮೆ.

ಹೀಗೆ ಆಕೆ ಮಾತು ತೇಲಿಸಿ ಬಿಟ್ಟಳು. ಅಂದು ಬೆಳಗ್ಗೆ  ಮತ್ತೆ ಅದೇ ಜಾಗದಲ್ಲಿ ಕಾಣಿಸಿಕೊಂಡಿದ್ದಳು… ನನಗೋ ಫುಲ್ ಕನ್‌ಫ್ಯೂಸ್… ಅದು ಆಕೆ ಹೌದೋ ಅಲ್ಲವೋ…

ಮುಂದುವರಿಯುವುದು….

0 thoughts on ““sum”ಸಾರವೋ.. ಸಂಸಾರವೋ…

Leave a Reply

Your email address will not be published. Required fields are marked *