ಸ್ವಾತಂತ್ರ್ಯ ಜೀವಾಳ

Jan creamer‘ಥಾರ್ ಮರುಭೂಮಿಯಂಥ ಪ್ರದೇಶದಲ್ಲಿ ನೀವು ಒಂಟಿಯಾಗಿಬಿಟ್ಟಿದ್ದೀರಿ ಎಂದು ಊಹಿಸಿಕೊಳ್ಳಿ. ಅನೇಕ ದಿನಗಳ ಕಾಲ ನಿಮಗೆ ಮನುಷ್ಯರ ಸಂಪರ್ಕವೇ ಇಲ್ಲದೇ ಇದ್ದು, ಒಂದು ದಿನ ಇದ್ದಕ್ಕಿದ್ದಂತೆ ಆ ಪ್ರದೇಶದಲ್ಲಿ ಮನುಷ್ಯ ಧ್ವನಿಯೊಂದು ಕೇಳಿದರೆ…?’

ಪ್ರಾಣಿಗಳ ಸ್ವಾತಂತ್ರ್ಯ ವಿಚಾರ ಬಂದಾಗ ಇಂಥದ್ದೇ ಪ್ರಶ್ನೆಯೊಂದಿಗೆ ಜ್ಯಾನ್ ಕ್ರೀಮರ್ ಮಾತಿಗಿಳಿಯುತ್ತಾರೆ. ಒಂದರೆ ಕ್ಷಣ ಮೇಲಿನ ಮಾತನ್ನು ಊಹಿಸಿ ನೋಡಿದರೆ ಅವರ ಮಾತಿನಲ್ಲಿರುವ ವಾಸ್ತವ ಪ್ರಜ್ಞೆ, ಸ್ವಾತಂತ್ರ್ಯ ಯಾಕೆ ಬೇಕು? ಎಂಬುದು ಮನದಟ್ಟಾದೀತು. ಮನುಷ್ಯರಿಗೇ ಹಾಗನಿಸುತ್ತಿರಬೇಕಾದರೆ ಪ್ರಾಣಿಗಳ ಪಾಡೇನು? ಎಂಬ ಪ್ರಶ್ನೆಗೆ ಜ್ಯಾನ್ ಕ್ರೀಮರ್ ಸ್ವತಃ ಉತ್ತರವನ್ನೂ ಕಂಡುಕೊಂಡು ಪ್ರಾಣಿ ಹಕ್ಕು ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕ್ರೀಮರ್ ಕಳೆದ ವಾರ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದ್ದರು. ದಕ್ಷಿಣ ಅಮೆರಿಕದ ಪೆರು ಮತ್ತು ಕೊಲಂಬಿಯಾಗಳಲ್ಲಿ ಸರ್ಕಸ್ ಕಂಪನಿಗಳ ವಶದಲ್ಲಿದ್ದ 33 ಸಿಂಹಗಳನ್ನು ಏರ್ಲಿಫ್ಟ್ ಮೂಲಕ 14,417 ಕಿ.ಮೀ. ದೂರದ ದಕ್ಷಿಣ ಆಫ್ರಿಕಾದ ಜೊಹನ್ಸ್ಬರ್ಗ್ನ ವನ್ಯಧಾಮಕ್ಕೆ ಸಾಗಿಸಿದ್ದೇ ಅದಕ್ಕೆ ಕಾರಣ.(ವಿಜಯವಾಣಿ ಮೇ 9ರ ಸಂಚಿಕೆಯ ಮಂಥನ ಪುಟದಲ್ಲಿ ‘ಮೃಗರಾಜನಿಗೆ ಮರುಜೀವ’ ಶೀರ್ಷಿಕೆಯಲ್ಲಿ ಈ ಕಾರ್ಯಾಚರಣೆಯ ಚಿತ್ರಣ ನೀಡಲಾಗಿತ್ತು). ಈ ಬೃಹತ್ ಏರ್ಲಿಫ್ಟ್ ಕಾರ್ಯಾಚರಣೆ ಜಾಗತಿಕ ಮಟ್ಟದಲ್ಲೊಂದು ದಾಖಲೆಯೂ ಹೌದು.

ಅಂದ ಹಾಗೆ ಜ್ಯಾನ್ಕ್ರೀಮರ್ ಎಂಬ ಈ ಮಹಿಳೆಯ ವಯಸ್ಸೆಷ್ಟು ಗೊತ್ತೆ? ಕೇವಲ 63! ಸರಿಸುಮಾರು ಐದು ದಶಕಗಳಿಂದ ಪ್ರಾಣಿ ಸಂರಕ್ಷಣೆ, ಅವುಗಳ ಸ್ವಾತಂತ್ರ್ಯ್ಕಾಗಿ ಜೀವನ ಮುಡಿಪಿಟ್ಟ ಈ ಸಾಹಸಿ ಹೆಣ್ಮಗಳು ತನ್ನ ಬದುಕಿನ ಪಥವನ್ನು ಮಾಧ್ಯಮದೆದುರು ಹಿಂದೊಮ್ಮೆ ತೆರೆದಿಟ್ಟಿದ್ದರು. ಅಲ್ಲಿ ಅವರು ತೆರೆದ ಬದುಕಿನ ಬುತ್ತಿಯ ನುಡಿಚಿತ್ರವನ್ನು ಅವರದೇ ಮಾತುಗಳಲ್ಲಿ ದಾಖಲಿಸುವುದು ಸೂಕ್ತ.

‘ಅದು 1975ರ ಕಾಲಾವಧಿ. ನಾನು ಬ್ರಿಟನ್ ಮೂಲದವಳು. ಉನ್ನತ ಶಿಕ್ಷಣ ಮುಗಿಸಿ ಗ್ರಾಫಿಕ್ ಡಿಸೈನರ್ ಆಗಬೇಕು ಎಂಬ ಹಂಬಲದೊಂದಿಗೆ ಮುನ್ನಡೆಯುತ್ತಿದ್ದೆ. ನನ್ನ ಮನೆ ಇರುವ ಬೀದಿಯಲ್ಲಿ ಹೆಜ್ಜೆ ಹಾಕುತ್ತಿರಬೇಕಾದರೆ ಒಬ್ಬಾತ ಸಮೀಪಕ್ಕೆ ಬಂದು ಕರಪತ್ರವೊಂದನ್ನು ಕೊಟ್ಟ. ಅದರಲ್ಲಿ ಪ್ರಾಣಿಗಳನ್ನು ಪ್ರಯೋಗ ಪಶುವನ್ನಾಗಿಸುತ್ತಿರುವ ವಿಷಯ ಮುದ್ರಿತವಾಗಿತ್ತು. ಮುಖ್ಯವಾಗಿ ಬೀದಿನಾಯಿಗಳ ಮೇಲೆ ಸಿಗರೇಟ್ ಹೊಗೆಯಿಂದಾಗುವ ಪರಿಣಾಮ ಏನೆಂಬುದನ್ನು ಪತ್ತೆ ಹಚ್ಚಲು ಈ ಪ್ರಯೋಗ ನಡೆಯುತ್ತಿದೆ ಎಂಬುದು ಮನವರಿಕೆಯಾಯಿತು. ಬ್ರಿಟನ್ನ ಸಂಶೋಧನಾಲಯವೊಂದರಲ್ಲಿ ನಡೆಯುತ್ತಿದ್ದ ಪ್ರಯೋಗವನ್ನು ಒಬ್ಬ ಅಂಡರ್ಕವರ್ ಏಜೆಂಟ್ ಪತ್ತೆ ಹಚ್ಚಿ ಛಾಯಾಚಿತ್ರ ಸಹಿತ ವರದಿ ನೀಡಿದ್ದನ್ನು ಪತ್ರಿಕೆಯೊಂದು ಪ್ರಕಟಿಸಿತ್ತು. ಈ ವರದಿ ನೋಡಿದ ಇತರೆ ಎಲ್ಲರಂತೆ ನನಗೂ ದ್ವೇಷ ಮೂಡಿತು. ಸಹಜವಾಗಿಯೇ ಪ್ರಾಣಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಕೆಂಬ ಇರಾದೆ ಮೂಡಿತು. ಹಾಗೆ ಆ ಕರಪತ್ರ ಮುದ್ರಿಸಿ ಪ್ರಕಟಿಸಿದ ಸಂಸ್ಥೆ ಯಾವುದೆಂದು ನೋಡಿದಾಗ ಅದರ ಹೆಸರು ನ್ಯಾಷನಲ್ ಆಂಟಿ ವಿವಿಸೆಕ್ಷನ್ ಸೊಸೈಟಿ (ಎನ್ಎವಿಎಸ್) ಎಂದು ನಮೂದಾಗಿತ್ತು. ಅದು ನನ್ನ ಬದುಕಿನ ಬಹುದೊಡ್ಡ ‘ಟರ್ನಿಂಗ್ ಪಾಯಿಂಟ್’ ಆಗಿತ್ತು. ಕೂಡಲೇ ಆ ಸಂಸ್ಥೆ ಜೊತೆ ಸಂಪರ್ಕ ಸಾಧಿಸಿ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾದೆ. ಅಷ್ಟರಲ್ಲಾಗಲೇ ಡಿಸೈನರ್ ಆಗಬೇಕೆಂಬ ಮನದಿಚ್ಛೆ ಮರೆಯಾಗಿತ್ತು. ನೈಸರ್ಗಿಕ ಪ್ರದೇಶದಿಂದ ಬೇರ್ಪಟ್ಟು ಸರ್ಕಸ್ ಕಂಪನಿಗಳಲ್ಲಿ ಬಂಧಿಯಾಗಿರುವ ವನ್ಯಜೀವಿಗಳಿಗೊಂದು ಸ್ವತಂತ್ರ ಬದುಕು ಕೊಡಬೇಕೆಂಬ ಇರಾದೆ ಹೆಚ್ಚಾಯಿತು. 1982ರ ಹೊತ್ತಿಗೆ ಎನ್ಎವಿಎಸ್ನ ಮ್ಯಾಗಜಿನ್ ಎಡಿಟರ್ ಹಾಗೂ ರೀಜಿನಲ್ ಕ್ಯಾಂಪೇನ್ಸ್ ಆಫೀಸರ್ ಹೊಣೆಗಾರಿಕೆ ಹೆಗಲೇರಿತ್ತು. ನಿಯತಕಾಲಿಕೆ ಹೊರತರುವುದು ಹಾಗೂ ವಿವಿಧ ಶಿಕ್ಷಣ ಸಂಸ್ಥೆ, ಮಾಧ್ಯಮ ಹಾಗೂ ಸಾರ್ವಜನಿಕ ಸಂಸ್ಥೆಗಳ ವೇದಿಕೆಗಳಲ್ಲಿ ಎನ್ಎವಿಎಸ್ ಪರವಾಗಿ ಭಾಷಣ ಮಾಡುವ ಹೊಣೆಗಾರಿಕೆ ಅದಾಗಿತ್ತು. ಅದೇ ಸಂಸ್ಥೆಯಲ್ಲಿ ಟಿಮ್ ಫಿಲಿಪ್ಸ್ ಎಂಬ ಯುವಕನ ಪರಿಚಯವೂ ಆಯಿತು. ಅವರು ಅಂದು ಪ್ರಾಣಿ ಹಕ್ಕು ಸಂರಕ್ಷಣೆ ಕುರಿತಾದ ‘ಟರ್ನಿಂಗ್ ಪಾಯಿಂಟ್’ ಎಂಬ ನಿಯತಕಾಲಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿದ್ದರು. ಇಬ್ಬರ ಆಸಕ್ತಿಯೂ ಒಂದೇ ಇದ್ದುದರಿಂದ ಜತೆಜತೆಯಾಗಿ ಪ್ರಾಣಿ ಹಕ್ಕು ಸಂರಕ್ಷಣಾ ಕೆಲಸಗಳಲ್ಲಿ ಭಾಗಿಯಾದೆವು. ಮುಂದೆ 1996ರಲ್ಲಿ ನಮ್ಮ ವಿವಾಹವೂ ಆಯಿತು’ ಎಂದು ಪ್ರೇಮಕಥೆಯ ಎಳೆಯನ್ನೂ ಕ್ರೀಮರ್ ಮುಂದಿಟ್ಟುಬಿಡುತ್ತಾರೆ.

ಆದರೆ ಪ್ರೇಮಕಥೆಯ ಬಗ್ಗೆ ಹೆಚ್ಚೇನೂ ಹೇಳದೆ, ಪ್ರಾಣಿ ಹಕ್ಕು ಸಂರಕ್ಷಣೆ, ಪ್ರಾಣಿಗಳ ಸ್ವಾತಂತ್ರ್ಯ್ಕಾಗಿ ಅವರು ಮಾಡಿದ ಕೆಲಸಗಳನ್ನು ಸ್ಮರಿಸುತ್ತಾರೆ. ಮುಂದೆ 90ರ ದಶಕದಲ್ಲಿ ಅಮೆರಿಕ ಕೇಂದ್ರಿತವಾಗಿ, ಬ್ರಿಟನ್ ಮತ್ತು ಕೊಲಂಬಿಯಾದಲ್ಲಿ ಅನಿಮಲ್ ಡಿಫೆಂಡರ್ಸ್ ಇಂಟರ್ನ್ಯಾಷನಲ್(ಎಡಿಐ-www.ad-international.org) ಎಂಬ ಸಂಸ್ಥೆಯನ್ನು ಟಿಮ್ ಜೊತೆ ಸೇರಿ ಸ್ಥಾಪಿಸುತ್ತಾರೆ. ಈ ಸಂಸ್ಥೆ ಅಲ್ಲಿಂದೀಚೆಗೆ ಹಲವು ಅಂಡರ್ಕವರ್ ಆಪರೇಷನ್ಗಳನ್ನು ಮಾಡಿ ಸರ್ಕಸ್ ಕಂಪನಿಗಳಲ್ಲಿದ್ದ ವನ್ಯಮೃಗಗಳನ್ನು ಬಚಾವ್ ಮಾಡಿದೆ. ಇವುಗಳ ಪೈಕಿ ಸಿಂಹ, ಆನೆ, ಕೋತಿ, ಕುದುರೆ ಮುಂತಾದ ಪ್ರಾಣಿಗಳೇ ಹೆಚ್ಚಾಗಿದ್ದವು. ಇವುಗಳ ಸಂರಕ್ಷಣೆಗಾಗಿ ಕ್ರೀಮರ್ ಮತ್ತು ಅವರ ತಂಡ ಬಹುದೊಡ್ಡ ಸಾಹಸವನ್ನೇ ಮಾಡಿದೆ. ಈ ಪೈಕಿ ಆನ್ ಎಂಬ ಆನೆಯನ್ನು ಬ್ರಿಟನ್ನ ‘ಬಾಬ್ಬಿ ರಾಬರ್ಟ್ಸ್ ಸೂಪರ್ ಸರ್ಕಸ್’ ಕಂಪನಿಯಿಂದ ರಕ್ಷಿಸಿದ ಘಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಕಾರ್ಯಾಚರಣೆ ಪುಸ್ತಕ ರೂಪದಲ್ಲೂ ಪ್ರಕಟವಾಗಿದೆ. ಕ್ಲಾರೇ ಎಲ್ಲಿಕಾಟ್ ಎಂಬುವರು ‘ಸೇವಿಂಗ್ ಆನ್ ದ ಎಲಿಫೆಂಟ್’ ಎಂಬ ಪುಸ್ತಕ ಬರೆದು ಪ್ರಕಟಿಸಿದ್ದಾರೆ.

ಅಂದ ಹಾಗೆ ಕ್ರೀಮರ್ ಹಾಗೂ ಫಿಲಿಪ್ಗೆ ಎಡಿಐ ಸ್ಥಾಪನೆ ಮಾಡುವುದಕ್ಕೆ ಪ್ರೇರಣೆಯಾಗಿದ್ದು ಸ್ವೀಡಿಷ್ ಮಹಿಳೆ ಲಿಂಡ್ ಅಫ್ ಹಗೆಬಿ. 1902ರಲ್ಲಿ ಈ ಸ್ವೀಡಿಷ್ ಮಹಿಳೆ ಇನ್ನೊಬ್ಬ ಎನ್ಎವಿಎಸ್ ಕಾರ್ಯಕರ್ತೆ ಲೀಸಾ ಶಾರ್ಟೆ ಜೊತೆಗೂಡಿ ವೈದ್ಯಕೀಯ ವಿದ್ಯಾರ್ಥಿಯಂತೆ ತೆರಳಿ ಲ್ಯಾಬ್ನಲ್ಲಿ ನಡೆಯುತ್ತಿದ್ದ ಪ್ರಾಣಿ ಹಿಂಸೆಯ ವಿವರವನ್ನು ಅಂಡರ್ಕವರ್ ಆಪರೇಷನ್ ಮೂಲಕ ಬಹಿರಂಗಪಡಿಸಿದ್ದರು. ಅವರು ಆ ಆಪರೇಷನ್ ಮೂಲಕ ಪುಟ್ಟ ಕಂದು ಬಣ್ಣದ ನಾಯಿ ಸಾಯುವುದಕ್ಕಿಂತ ಎರಡು ತಿಂಗಳು ಮೊದಲು ಅನುಭವಿಸಿದ ಹಿಂಸೆಯ ಕಥೆಯನ್ನು ಬಹಿರಂಗಗೊಳಿಸಿದ್ದರು. ಪರಿಣಾಮ ಲಂಡನ್ನಲ್ಲಿ ಪ್ರತಿಭಟನೆಗಳಾಗಿ ಕೊನೆಗೆ ಆ ನಾಯಿಯ ಗೌರವಾರ್ಥ ಅಲ್ಲಿ ಆ ನಾಯಿ ಸಹಿತ ಇತರೆ ನಾಯಿಗಳ ಪ್ರತಿಮೆ ಸ್ಥಾಪಿಸಲಾಗಿತ್ತು. ಕಾಲಾನಂತರದಲ್ಲಿ ಆ ಪ್ರತಿಮೆಗಳು ನಾಪತ್ತೆಯಾಗಿದ್ದವು. ಕೊನೆಗೆ 1980ರ ದಶಕದಲ್ಲಿ ಎನ್ಎವಿಎಸ್ ಕಾರ್ಯಕರ್ತರ ಒತ್ತಡದಿಂದಾಗಿ ಅದನ್ನು ಮರುಸ್ಥಾಪಿಸಲಾಗಿದೆ. ಈ ಘಟನೆ ಕ್ರೀಮರ್ ಹಾಗೂ ಫಿಲಿಪ್ ಅವರ ಧ್ಯೇಯಕ್ಕೊಂದು ಪ್ರೇರಣೆಯಾಯಿತು.

ಈ ನಡುವೆ ಹಲವು ಕಾರ್ಯಾಚರಣೆಗಳನ್ನು ನಡೆಸಿದ ಕ್ರೀಮರ್, ಫಿಲಿಪ್ ದಂಪತಿಗಳ ತಂಡ 2007ರಲ್ಲಿ ಬೊಲಿವಿಯಾ, ಕೊಲಂಬಿಯಾ, ಈಕ್ವಡಾರ್, ಪೆರು ಮುಂತಾದೆಡೆ Stop Circus Suffering’ ಎಂಬ ಚಳವಳಿ ಆರಂಭಿಸಿದರು. ಬ್ರೆಜಿಲ್ ಹಾಗೂ ಚಿಲಿಯಲ್ಲಿ 2008ರಲ್ಲಿ ಈ ಚಳವಳಿ ಆರಂಭವಾಯಿತು.

ಪರಿಣಾಮ ಬೊಲಿವಿಯಾದಲ್ಲಿ ಮೊದಲ ಬಾರಿಗೆ ಸರ್ಕಸ್ನಲ್ಲಿ ಯಾವುದೇ ಪ್ರಾಣಿಗಳನ್ನು ಬಳಸದಂತೆ ನಿಷೇಧ ಹೇರಲಾಯಿತು. ಇದಾಗಿ, ಪೆರು, ಈಕ್ವೆಡಾರ್, ಪೆರುಗ್ವೆ, ಬ್ರೆಜಿಲ್, ಕೊಲಂಬಿಯಾಗಳಲ್ಲೂ ಈ ನಿಷೇಧ ಜಾರಿಗೆ ಬಂತು. ಏತನ್ಮಧ್ಯೆ, ಸಿಂಹಗಳನ್ನು ಸರ್ಕಸ್ ಕಂಪನಿಯಿಂದ ರಕ್ಷಿಸುವ ಸಲುವಾಗಿ ರಚಿಸಿದ ಸಾಕ್ಷ್ಯತ್ರ ‘ದ ಲಯನ್ ಆರ್ಕ್’ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ. ಪ್ರಾಣಿ ಸಂರಕ್ಷಣೆಗಾಗಿ ಇಷ್ಟೆಲ್ಲ ಕೆಲಸ ಮಾಡುತ್ತಿರುವ ಈ ದಂಪತಿಯ ಖಾಸಗಿ ಬದುಕಿನ ಚಿತ್ರಣ ಪೂರ್ಣಪ್ರಮಾಣದಲ್ಲಿ ಲಭ್ಯವಿಲ್ಲ. ಏನೇ ಆಗಲಿ, ಎಲ್ಲರಿಗಿಂತ ಭಿನ್ನವಾಗಿ ಸಾಧನೆ ಮಾಡುತ್ತಿರುವ ಈ ಮಹಿಳೆಯ ಸಾಧನೆಗೊಂದು ಹ್ಯಾಟ್ಸ್ ಆಫ್ ಹೇಳಲೇಬೇಕು.

Leave a Reply

Your email address will not be published. Required fields are marked *