ವಿಶ್ವಸಂಸ್ಥೆ ಚುಕ್ಕಾಣಿ ಹಿಡಿಯುವವರಾರು?

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕಾವೇರುತ್ತಿರುವುದೇನೋ ನಿಜ. ಆದರೆ, ಅದಕ್ಕೂ ಮುನ್ನ ಜಗತ್ತಿನ ಗಮನ ಸೆಳೆದಿರುವುದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಸ್ಥಾನದ ಆಯ್ಕೆ ಪ್ರಕ್ರಿಯೆ. ಮೂರು ಹಂತದ ಈ ಪ್ರಕ್ರಿಯೆ ಏಪ್ರಿಲ್ನಲ್ಲೇ ಆರಂಭವಾಗಿದ್ದು, ಕಣದಲ್ಲಿ ಹನ್ನೊಂದು ಅಭ್ಯರ್ಥಿಗಳಿದ್ದಾರೆ. ಆಯ್ಕೆಯಾದವರು ಜನವರಿ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

United Nations General Assemblyಜಗತ್ತಿನಾದ್ಯಂತ ಸುಸ್ಥಿರ ಅಭಿವೃದ್ಧಿ, ಶಾಂತಿ ಮತ್ತು ಸುರಕ್ಷೆ, ಮಾನವ ಹಕ್ಕು ಮತ್ತು ಉತ್ತಮ ಆಡಳಿತವನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಗೆ ಇದೀಗ 70ನೇ ವರ್ಷ. ಈ ಅವಧಿಯಲ್ಲಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ (ಸೆಕ್ರೆಟರಿ ಜನರಲ್) ಸ್ಥಾನವನ್ನೇರಿ ಕರ್ತವ್ಯ ನಿರ್ವಹಿಸಿದವರ ಸಂಖ್ಯೆ 8. ಪ್ರಸ್ತುತ ಈ ಸ್ಥಾನದಲ್ಲಿ ಎಂಟನೆಯವರಾಗಿ ಕಾರ್ಯನಿರ್ವಹಿಸುತ್ತಿರುವವರು ದಕ್ಷಿಣ ಕೊರಿಯಾದ ಮುತ್ಸದ್ದಿ ಬಾನ್ ಕಿ ಮೂನ್. ಅವರ ಅಧಿಕಾರಾವಧಿ ಇದೇ ವರ್ಷ ಡಿಸೆಂಬರ್ 31ರಂದು ಕೊನೆಗೊಳ್ಳಲಿದೆ. ಅವರಿಂದ ತೆರವಾಗುವ ಸ್ಥಾನಕ್ಕಾಗಿ ಹೊಸಬರ ಆಯ್ಕೆಗೆ ಏಪ್ರಿಲ್ನಿಂದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಹುದ್ದೆ ಹೆಸರು, ಪ್ರಭಾವಳಿಯ ಜತೆಗೆ ಸವಾಲಿನ ಸರಮಾಲೆಯನ್ನೂ ಬಳುವಳಿಯಾಗಿ ತರುತ್ತದೆ. ಜಾಗತಿಕ ಮಟ್ಟದ ಅನೇಕ ಸಮಸ್ಯೆಗಳಿಗೆ ಇವರು ಕಿವಿಯಾಗಬೇಕಾಗುತ್ತದೆ; ಪರಿಹಾರೋಪಾಯಕ್ಕೆ ಪ್ರಯತ್ನಿಸಬೇಕಾಗುತ್ತದೆ. ಜಗತ್ತಿನ ವಿವಿಧೆಡೆಯ ಹಾಲಿ ಪರಿಸ್ಥಿತಿ ನೋಡಿ. ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಯುರೋಪ್ ರಾಷ್ಟ್ರಗಳ ಹಲವೆಡೆ ನಡೆಯುತ್ತಿರುವ ಸಂಘರ್ಷ, ಮಾನವ ಕಳ್ಳಸಾಗಣೆ, ಎಲ್ಲರಿಗೂ ಬೆದರಿಕೆಯಾಗಿರುವ ಹಿಂಸಾತ್ಮಕ ತೀವ್ರವಾದ, ಮಹಿಳೆಯರು ಮತ್ತು ಬಾಲಕಿಯರ ವಿರುದ್ಧದ ತಾರತಮ್ಯ, ಹೆಚ್ಚುತ್ತಿರುವ ಪರಕೀಯ ದ್ವೇಷ, ತೀವ್ರ ಬಡತನದಿಂದಾಗಿ ಜಗತ್ತಿನ 80 ಕೋಟಿಗೂ ಅಧಿಕ ಜನ ನರಳುತ್ತಿರುವುದು, 6 ಕೋಟಿ ಜನ ನಿರಾಶ್ರಿತರು, ಹವಾಮಾನ ವೈಪರೀತ್ಯ ಮುಂತಾದ ಸವಾಲುಗಳ ಜೊತೆಗೆ ಹೊಸ ಹೊಸ ಸವಾಲುಗಳನ್ನೂ ಎದುರಿಸಬೇಕಾಗಿದೆ. ಹೀಗಾಗಿ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಹೊಣೆಯನ್ನು ಜಗತ್ತಿನ ಅತ್ಯಂತ ಕಷ್ಟದ ಕೆಲಸ ಎಂದೇ ಬಣ್ಣಿಸಲಾಗುತ್ತದೆ.

ಅಧಿಕಾರಾವಧಿ

ಇದುವರೆಗಿನ ಇತಿಹಾಸದ ಪ್ರಕಾರ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಅಧಿಕಾರಾವಧಿ 5 ವರ್ಷಗಳ ಅವಧಿಯದ್ದು. ಆದರೆ, ಇದನ್ನು ಏಳು ವರ್ಷಕ್ಕೆ ವಿಸ್ತರಿಸಬೇಕು ಎಂಬ ಚರ್ಚೆ ಭದ್ರತಾ ಮಂಡಳಿಯಲ್ಲಿ ಬಹುಕಾಲದಿಂದ ಇದೆ. ಪ್ರಸ್ತುತ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಎರಡು ಅವಧಿಗೆ ಈ ಹುದ್ದೆಯೇರಿದ್ದರು. ಇದಕ್ಕೂ ಮುನ್ನ ಕೋಫಿ ಅನ್ನಾನ್ ಕೂಡ ಎರಡು ಅವಧಿಗೆ ಕರ್ತವ್ಯ ನಿರ್ವಹಿಸಿದ್ದರು. ಬೌಟ್ರೋಸ್ ಬೌಟ್ರೋಸ್ ಘಲಿ ಎರಡನೇ ಅವಧಿಗೆ ಮುಂದುವರಿಯುವುದನ್ನು ಅಮೆರಿಕ ತಡೆ ಹಿಡಿದಿತ್ತು.

ಪಾರದರ್ಶಕ ವ್ಯವಸ್ಥೆಯೆಡೆಗೆ…

ಇದುವರೆಗೆ, ಮಹಾಪ್ರಧಾನ ಕಾರ್ಯದರ್ಶಿ ಆಯ್ಕೆ ಹೇಗೆ ನಡೆಯುತ್ತದೆ ಎಂಬುದೇ ಜನರಿಗೆ ಗೊತ್ತಾಗುತ್ತಿರಲಿಲ್ಲ. ಈ ಪ್ರಕ್ರಿಯೆಗಳೆಲ್ಲವೂ ತೆರೆಮರೆಯಲ್ಲಿ ನಡೆಯುತ್ತಿತ್ತಲ್ಲದೆ, ಅದನ್ನು ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ನಿರ್ಧರಿಸುತ್ತಿದ್ದರು. ಸಾಂಕೇತಿಕವಾಗಷ್ಟೇ ಈ ನೇಮಕ ನಡೆಯುತ್ತಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಇದೇ ಮೊದಲ ಸಲ ಮೂರು ಹಂತದ ಪಾರದರ್ಶಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.

193 ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಪಾರದರ್ಶಕತೆ ಅಗತ್ಯದ ಬಗ್ಗೆ ಒತ್ತಡ ಹೇರಿದ ಫಲವೇ ಈ ಬದಲಾವಣೆ. ಕಳೆದ ವರ್ಷ ಡಿಸೆಂಬರ್ನಲ್ಲೇ ಭದ್ರತಾ ಮಂಡಳಿಯ ಅಧ್ಯಕ್ಷರು ಹಾಗೂ ತಾವು ಈ ಆಯ್ಕೆ ಪ್ರಕ್ರಿಯೆಯ ಸ್ವರೂಪದ ಬಗ್ಗೆ ಚರ್ಚೆ ನಡೆಸಿ, ಅನುಷ್ಠಾನಗೊಳಿಸಿದ್ದೇವೆ ಎಂದು ವಿಶ್ವಸಂಸ್ಥೆಯ 70ನೇ ಮಹಾಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೊಗೆನ್ಸ್ ಲಿಕ್ಕೆಟೊಫ್ಟ್ ಹೇಳಿಕೊಂಡಿದ್ದಾರೆ.

ಅಭ್ಯರ್ಥಿಗಳು ಮಾಡಬೇಕಾದ್ದೇನು?

ಸೆಕ್ರೆಟರಿ ಜನರಲ್ ಹಿಯರಿಂಗ್ಸ್ (ಎಸ್ಜಿ ಹಿಯರಿಂಗ್ಸ್) ಎಂದು ಕರೆಯಲ್ಪಡುವ ಮುಕ್ತ ಸಂವಾದದ ವೇದಿಕೆಯಲ್ಲಿ ಅಭ್ಯರ್ಥಿಗಳು ತಮ್ಮ ದೃಷ್ಟಿಕೋನದ ಚಿಂತನೆಯನ್ನು ಪ್ರಸ್ತುತಪಡಿಸಬೇಕು. ಅದರಲ್ಲಿ ವಿಶ್ವಸಂಸ್ಥೆ ಹಾಗೂ ಭವಿಷ್ಯದ ಸೆಕ್ರೆಟರಿ ಜನರಲ್ ಎದುರಿಸಬಹುದಾದ ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಷಯವನ್ನು ಮಂಡಿಸಬೇಕು. ಅದನ್ನು ಆಧರಿಸಿ ಮುಂದೆ ಅವರನ್ನು ಎರಡು ಗಂಟೆಗಳ ಕಾಲ ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ರಾಷ್ಟ್ರದ ಪ್ರತಿನಿಧಿಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಪ್ರಶ್ನಿಸುತ್ತಾರೆ. ಈ ಪ್ರಕ್ರಿಯೆ ಏಪ್ರಿಲ್ 12ರಿಂದಲೇ ಆರಂಭವಾಗಿದೆ.

ಆಯ್ಕೆಯ ಹಂತಗಳು

ಎರಡು ಹಂತದ ಆಯ್ಕೆ(ಸ್ಟ್ರಾ ಪೋಲ್ ಅಥವಾ ಸ್ಟ್ರಾ ವೋಟ್) ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಸ್ಟ್ರಾ ಪೋಲ್ ಅಥವಾ ಸ್ಟ್ರಾ ವೋಟ್ ಎಂದರೆ ಅನೌಪಚಾರಿಕ ಮತದಾನ. ಇಲ್ಲಿ ಬೃಹತ್ ಗುಂಪಿನ ನಡುವೆ, ಅಭ್ಯರ್ಥಿಗಳು ಮಂಡಿಸುವ ಚಿಂತನೆ, ವಿಚಾರಗಳಿಗೆ ಸಿಕ್ಕುವ ಅಂಕಗಳ ಆಧಾರದ ಮೇಲೆ ವಿಜೇತರನ್ನು ನಿರ್ಣಯಿಸಲಾಗುತ್ತದೆ. ಈಗಾಗಲೇ ಜುಲೈ 21ರಂದು ಹಾಗೂ ಆಗಸ್ಟ್ 5ರಂದು ಎರಡು ಹಂತದ ಸ್ಟ್ರಾ ಪೋಲ್ಗಳು ಮುಕ್ತಾಯವಾಗಿವೆ. ಕಣದಲ್ಲಿದ್ದ ಹನ್ನೆರಡು ಅಭ್ಯರ್ಥಿಗಳ ಪೈಕಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದದ್ದೂ ಆಗಿದೆ.UN GFX1

ಕೊನೆಯ ಹಂತ 29ಕ್ಕೆ

ಒಂದು ಮತ್ತು ಎರಡನೇ ಹಂತದ ಮಾದರಿಯಲ್ಲೇ ಕೊನೆಯ ಹಂತದ ಆಯ್ಕೆ ಪ್ರಕ್ರಿಯೆಯು ಆಗಸ್ಟ್ 29ಕ್ಕೆ ನಡೆಯಲಿದೆ. ಇಷ್ಟಾಗ್ಯೂ, ಆಯ್ಕೆಯ ಪರಮಾಧಿಕಾರ ವಿಶ್ವಸಂಸ್ಥೆಯ ಐದು ಕಾಯಂ ಸದಸ್ಯ ರಾಷ್ಟ್ರ(ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್ಡಂ ಮತ್ತು ಅಮೆರಿಕ)ಗಳ ಕೈಯಲ್ಲೇ ಉಳಿಯಲಿದೆ. ಅವುಗಳಿಗೆ ವಿಟೋ ಪವರ್(ಏಕಪಕ್ಷೀಯವಾದ ವಿಶೇಷಾಧಿಕಾರ) ಇರುವ ಕಾರಣ ಆಯ್ಕೆಯನ್ನು ತಡೆಯುವ ಸಾಮರ್ಥ್ಯ ಅವುಗಳಿಗೆ ಇದೆ.

 

 

 

ಅಭ್ಯರ್ಥಿಗಳ ಪೈಕಿ ಮಹಿಳೆಯರ ಪ್ರಾಬಲ್ಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಹೆಸರು ಘೊಷಣೆಯಾಗುವ ಮೂಲಕ ದಾಖಲೆಯಾದದ್ದು ಗೊತ್ತಿರುವಂಥದ್ದೇ. ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ 11 ಅಭ್ಯರ್ಥಿಗಳ ಪೈಕಿ ಐವರು ಮಹಿಳೆಯರು ಇರುವುದು ವಿಶೇಷ. ಅವರ ಕಿರು ಪರಿಚಯ ಇಂತಿದೆ.

ಇರಿನಾ ಬೊಕೊವಾ

ಯುನೆಸ್ಕೋದ ಮೊದಲ ಮಹಾನಿರ್ದೇಶಕಿ. ಬಲ್ಗೇರಿಯಾದ ಹಂಗಾಮಿ ವಿದೇಶಾಂಗ ಸಚಿವೆ(1996-97)ಯಾಗಿದ್ದವರು. ವಯಸ್ಸು 64. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆಯ ಮಹಾನಿರ್ದೇಶಕಿ. ಲಿಂಗ ಸಮಾನತೆ ಮತ್ತು ಸುಧಾರಿತ ಶಿಕ್ಷಣದ ಪ್ರತಿಪಾದಕಿ.

ಸುಸಾನಾ ಮಾಲ್ಕೋರಾ

ಅರ್ಜೆಂಟೀನಾದ ವಿದೇಶಾಂಗ ಸಚಿವೆ (2015ರ ಡಿಸೆಂಬರ್ನಿಂದ). ವಯಸ್ಸು 61. ಬಾನ್ನ ಸಿಬ್ಬಂದಿ ವಿಭಾಗದ ಮಾಜಿ ಮುಖ್ಯಸ್ಥೆ. ಜಾಗತಿಕ ಆಹಾರ ಕಾರ್ಯಕ್ರಮವನ್ನು ನಿರ್ವಹಿಸಿದ ಅನುಭವಿ. ಐಬಿಎಂ ಜೊತೆಗೆ ಕೆಲಸ ಮಾಡಿದ ಅನುಭವವೂ ಇದೆ.

ಹೆಲೆನ್ ಕ್ಲಾರ್ಕ್

ನ್ಯೂಜಿಲೆಂಡ್ನ ಮಾಜಿ ಪ್ರಧಾನಮಂತ್ರಿ (1999-2008). ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವನ್ನು ಮುನ್ನಡೆಸುತ್ತಿರುವ ಮೊದಲ ಮಹಿಳೆ. ವಯಸ್ಸು 66. ಮಾಜಿ ಕಾಲೇಜು ಉಪನ್ಯಾಸಕಿ. ಸುಸ್ಥಿರ ಅಭಿವೃದ್ಧಿಯ ಪ್ರತಿಪಾದಕಿ.

ಕ್ರಿಶ್ಚಿಯಾನ ಫಿಗರೆಸ್

ಕೋಸ್ಟರಿಕಾದ ಪ್ರಮುಖ ರಾಜತಂತ್ರಜ್ಞೆ. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವರ ಪೈಕಿ ಒಬ್ಬರು. ವಯಸ್ಸು 60. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಆರುವರ್ಷಗಳ ಚೌಕಟ್ಟು ರೂಪಿಸುವ ಶೃಂಗದ ಎಕ್ಸಿಕ್ಯೂಟಿವ್ ಸೆಕ್ರೆಟರಿ.

ನತಾಲಿಯಾ ಘೆರ್ವುನ್

ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಕಿರಿಯ ವಯಸ್ಸಿನವರು. ವಯಸ್ಸು 47. 2013ರಿಂದ 2016ರ ಜನವರಿ ತನಕ ಮಾಲ್ಡೋವಾದ ವಿದೇಶಾಂಗ ವ್ಯವಹಾರದ ಸಚಿವರಾಗಿದ್ದವರು. ಮಾಲ್ಡೋವಾದ ಮೊದಲ ಅಧ್ಯಕ್ಷ ಮೈರೆಕಾ ಸ್ನೆಗುರ್ ಅವರ ಪುತ್ರಿ.

UN GFX2

Leave a Reply

Your email address will not be published. Required fields are marked *