ವ್ಯಂಗ್ಯ ಟೀಕೆಗಳ ಸರದಾರ

‘ಪಾಕಿಸ್ತಾನಿಗಳೇ, ನಾವು ಕಾಶ್ಮೀರವನ್ನು ನಿಮಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ, ಒಂದೇ ಷರತ್ತು- ನೀವು ಬಿಹಾರವನ್ನೂ ಜತೆಗೆ ತೆಗೆದುಕೊಳ್ಳಬೇಕು. ಇದು ಪ್ಯಾಕೇಜ್ ಡೀಲ್. ತೆಗೆದುಕೊಳ್ಳುವುದಾದರೆ ಎರಡನ್ನೂ ತೆಗೆದುಕೊಳ್ಳಬೇಕು. ಈ ರೀತಿಯಾಗಿ ನಮ್ಮ ನಡುವಿನ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳೋಣ’

-ಕಳೆದ ಭಾನುವಾರ ಹೀಗೊಂದು ವಿಚಿತ್ರ ಟೀಕೆ ಮಾಡಿ ವಾರಪೂರ್ತಿ ಸುದ್ದಿಯಲ್ಲಿದ್ದವರು ಸುಪ್ರೀಂ ಕೋರ್ಟ್ನ ನಿವೃತ್ತ markandeykatjuನ್ಯಾಯಾಧೀಶ ನ್ಯಾ.ಮಾರ್ಕಂಡೇಯ ಕಾಟ್ಜು. ಇಂತಹ ವ್ಯಂಗ್ಯ, ಟೀಕೆಗಳಿಂದಾಗಿ ಅವರು ಪದೇಪದೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದಕ್ಕೆ ಕಾರಣ ಅವರ ಹೇಳಿಕೆ, ಲೇಖನಗಳು. 2012ರಿಂದ ಬ್ಲಾಗ್ (http://justicekatju.blogspot.in/) ಬರೆಯುತ್ತಿರುವ ಅವರು ಕಳೆದ ತಿಂಗಳ ಕೊನೆಯವರೆಗಿನ ಅವಧಿಯಲ್ಲಿ ಒಟ್ಟು 1471 ಬ್ಲಾಗ್ ಪೋಸ್ಟ್ಗಳನ್ನು ಅಪ್ಡೇಟ್ ಮಾಡಿದ್ದಾರೆ. ಇವುಗಳ ಪೈಕಿ ವ್ಯಂಗ್ಯ ಟೀಕೆಗಳೊಂದಿಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ವಿವಾದಕ್ಕೀಡಾಗಿವೆ. ಕಾಶ್ಮೀರ ಕುರಿತ ಟೀಕೆ ಇತ್ತೀಚಿನ ಉದಾಹರಣೆ. ಈ ಟೀಕೆಗಾಗಿ ಅವರ ವಿರುದ್ಧ ಬಿಹಾರದಲ್ಲಿ ರಾಷ್ಟ್ರದ್ರೋಹದ ಪ್ರಕರಣವೂ ದಾಖಲಾಗಿದೆ. ‘ಕಾಶ್ಮೀರದ ಜತೆಗೆ ಬಿಹಾರ ಉಚಿತ ಎಂಬ ಟೀಕೆಯು ವ್ಯಂಗ್ಯವಾಗಿದ್ದು, ಅದನ್ನು ಅರ್ಥಮಾಡಿಕೊಳ್ಳುವ ಹಾಸ್ಯಪ್ರಜ್ಞೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಪಾಕಿಸ್ತಾನ ಜಂಗಲ್ರಾಜ್ ಆಗಿದ್ದು, ಬಿಹಾರದಿಂದ ಪ್ರೇರಣೆ ಪಡೆದಿರಬಹುದೆಂಬ ಅರ್ಥದಲ್ಲಿ ಆ ಟೀಕೆ ಮಾಡಿದ್ದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಪರೀತ ಅರ್ಥ ಕಲ್ಪಿಸುವ ಇಂತಹ ಟೀಕೆಗಳನ್ನು ಅವರು ಈ ಹಿಂದೆಯೂ ಮಾಡಿದ್ದರು. ಅವು ವಿವಾದಕ್ಕೀಡಾದ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡುವ ಅವರು ಹಿಂದೊಮ್ಮೆ, ತಮ್ಮ ನಡೆಯನ್ನು ಸಮರ್ಥಿಸಿಕೊಂಡದ್ದು ಹೀಗೆ – ‘ವಿವಾದಾತೀತನಾಗಿ ಇರಬೇಕು ಎಂದು ಬಯಸುತ್ತೇನೆ. ಆದರೆ, ನನ್ನ ವ್ಯಕ್ತಿತ್ವದ ಬಹುದೊಡ್ಡ ಕೆಟ್ಟಗುಣ ಅಂದರೆ ದೇಶ ಅವನತಿಯ ಕಡೆಗೆ ಹೋಗುವುದನ್ನು ನೋಡಿದಾಗ ಸುಮ್ಮನೆ ಕೂರಲಾಗದೆ ಬಹಿರಂಗವಾಗಿ ಟೀಕಿಸಿಬಿಡುತ್ತೇನೆ. ಉಳಿದವರಂತೆ ಮೂಕನಂತೆಯೋ, ಕಿವುಡನಂತೆಯೋ ನಾನಿರಲಾರೆ’.

ಈ ಒಂದೇ ಹೇಳಿಕೆ ಸಾಕು, ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಡುವುದಕ್ಕೆ. ಯಾವುದೇ ವಿಷಯ ಮನಸ್ಸಿಗೆ ತಟ್ಟಿದರೆ ಕೂಡಲೆ ಪ್ರತಿಕ್ರಿಯೆ ನೀಡುವುದು ಅವರ ಗುಣ. ಹೀಗಾಗಿ, ಅವರು ‘ನಿರ್ದಾಕ್ಷಿಣ್ಯವಾದಿ ನ್ಯಾಯಾಧೀಶ’ ಎಂದೇ ಪ್ರಸಿದ್ಧರಾಗಿದ್ದರು. ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಅನೇಕ ಐತಿಹಾಸಿಕ ತೀರ್ಪಗಳನ್ನು ನೀಡಿದ್ದ ಅವರು, ಅನೇಕ ಪ್ರಕರಣಗಳಲ್ಲಿ ಅಣಕವಾಡುವಂಥ ಟೀಕೆಗಳನ್ನು ತೀರ್ಪಿನಲ್ಲಿ ದಾಖಲಿಸಿದ್ದಾರೆ. ಪ್ರಸ್ತುತ ವೈಯಕ್ತಿಕ ಪ್ರತಿಕ್ರಿಯೆ ಹಾಗೂ ಬ್ಲಾಗ್ ಬರಹಗಳ ಮೂಲಕ ಜನಸಾಮಾನ್ಯರಲ್ಲಿ ಸಂಚಲನ ಮೂಡಿಸುತ್ತಲೇ ಇದ್ದಾರೆ. ‘ಯಾರನ್ನೋ ನೋಯಿಸಬೇಕು ಎಂಬುದು ನನ್ನ ಉದ್ದೇಶವಲ್ಲ, ವಾಸ್ತವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಪ್ರಯತ್ನ’ ಎಂಬ ಸ್ಪಷ್ಟೀಕರಣವನ್ನೂ ನೀಡುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ, ನ್ಯಾ. ಕಾಟ್ಜು ಅವರನ್ನು ಪರಿಚಯಿಸುವಾಗ ಅವರ ವಿವಾದಾತ್ಮಕ ಹೇಳಿಕೆ, ಟೀಕೆ ಟಿಪ್ಪಣಿಗಳ ಬಗ್ಗೆಯೂ ವಿವರ ನೀಡಬೇಕಾದುದು ಅನಿವಾರ್ಯ. ಆಯ್ದ ಕೆಲ ಟೀಕೆಗಳ ವಿವರ ಇಂತಿದೆ –

‘ಶೇಕಡ 90ರಷ್ಟು ಭಾರತೀಯರು ಮುಠ್ಠಾಳರು ಎಂದು ನಾನು ಹೇಳಬಯಸುತ್ತೇನೆ. ನಿಮ್ಮ ತಲೆಯೊಳಗೆ ಮಿದುಳು ಇಲ್ಲವೇ? ಯಾರು ಏನೇ ಹೇಳಿದರೂ ಪರಾಮಶಿಸದೆ ನಂಬಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಿಬಿಡುತ್ತೀರಲ್ಲ?!’ – ಹೀಗೊಂದು ಟೀಕೆಯನ್ನು ನ್ಯಾ.ಕಾಟ್ಜು ಮಾಡಿದ್ದು ಒಂದು ವಿಚಾರ ಸಂಕಿರಣದಲ್ಲಿ. ದೆಹಲಿಯಲ್ಲಿ ಕೇವಲ 2,000 ರೂಪಾಯಿಗಾಗಿ ನಡೆದ ಕೋಮುಗಲಭೆ ಪ್ರಕರಣವನ್ನು ನಿರೂಪಿಸುತ್ತ ಈ ಟೀಕೆ ಮಾಡಿದ್ದರು. ಹಣ ಕೊಡುತ್ತೇವೆ ಎಂದರೆ ಪ್ರಾರ್ಥನಾ ಮಂದಿರದಲ್ಲಿ ದುಷ್ಕೃತ್ಯ ಎಸಗುವವರು ಒಂದಷ್ಟು ಜನ ಮತ್ತು ಅದನ್ನು ಗಮನಿಸದೆ ಪರಸ್ಪರ ಕಾದಾಡುವವರು ಮತ್ತೊಂದಷ್ಟು ಜನ ಎಂದು ಅವರು ಹೇಳಿದ್ದರು.

‘ಹಿಂದುಗಳು ಮತ್ತು ಮುಸಲ್ಮಾನರು ತಿಳಿಗೇಡಿಗಳು. ಸಂತ ಕಬೀರರ ಪಥವೇ ಸರಿ’ ಹೀಗೊಂದು ವ್ಯಂಗ್ಯ ಪ್ರತಿಕ್ರಿಯೆಯನ್ನು ಅವರು ಫೇಸ್ಬುಕ್ ಪುಟದಲ್ಲಿ ಹಾಕಿದ್ದರು. ಅದರಲ್ಲಿ ಅವರು, ಗೋವನ್ನು ತಾಯಿ ಎಂದು ಪೂಜಿಸುವ ಹಾಗೂ ಜಾತಿ ಪದ್ಧತಿ ಅನುಸರಿಸುವ ಹಿಂದು ಸಂಪ್ರದಾಯವನ್ನು ಟೀಕಿಸಿದ್ದರು. ಅಷ್ಟೇ ಅಲ್ಲ, ಜಗತ್ತು ಇಷ್ಟೊಂದು ಮುಂದುವರಿದಿದ್ದರೂ ಮುಸ್ಲಿಮರು ಇನ್ನೂ ಹಿಜಬ್, ಬುರ್ಖಾ ಧರಿಸುವ ಸಂಪ್ರದಾಯವನ್ನು ಟೀಕಿಸಿದ್ದರು. ಇದಕ್ಕಾಗಿ ಅವರು ಹಿಂದುಗಳು ಹಾಗೂ ಮುಸ್ಲಿಮರಿಂದ ಆಕ್ರೋಶ ಎದುರಿಸಬೇಕಾಗಿ ಬಂದಿತ್ತು.

‘ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಿರುವವರಲ್ಲಿ ನನ್ನದೊಂದು ಪ್ರಶ್ನೆ – ಗುಜರಾತ್ನಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು ಮೋದಿ ಅವರು ಅಭಿವೃದ್ಧಿಪಡಿಸಿದ ರಸ್ತೆ, ವಿದ್ಯುತ್ ಮತ್ತು ಫ್ಯಾಕ್ಟರಿಗಳನ್ನು ತಿನ್ನಬೇಕೆ?’ ಎಂದು ನ್ಯಾ.ಕಾಟ್ಜು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಅರುಣ್ ಜೇಟ್ಲಿ ಅವರು, ‘ಕಾಂಗ್ರೆಸ್ಸೇತರ ಸರ್ಕಾರಗಳನ್ನು ವಿನಾಕಾರಣ ಟೀಕಿಸುವ ತಮ್ಮ ಕೆಲಸ ನಿವೃತ್ತಿಪೂರ್ವದ ‘ಕೃತಜ್ಞತೆ’ ಸಲ್ಲಿಕೆಯಂತೆ ಭಾಸವಾಗುತ್ತಿದೆ’ ಎಂದು ಅಣಕವಾಡಿದ್ದರು. ಇದಕ್ಕೆ, ಈ ದೇಶದ ಪ್ರಜ್ಞಾವಂತ ಪೌರನೆಂಬ ನೆಲೆಯಲ್ಲಿ ಆಡಿದ ಮಾತುಗಳವು ಎಂದು ಸ್ಪಷ್ಟೀಕರಣವನ್ನೂ ಕಾಟ್ಜು ನೀಡಿದ್ದರು.

‘ಇತ್ತೀಚಿನ ದಿನಗಳಲ್ಲಿ ಜಾಟರು, ಮುಸ್ಲಿಮರು, ಯಾದವರು ಮುಂತಾದ ಹೆಸರಿನಲ್ಲಿ ಮತ ಚಲಾವಣೆಯಾಗುತ್ತಿದೆ. ಹೀಗಾಗಿ ನನ್ನ ಮತ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ನಾನು ಮತ ಚಲಾಯಿಸುವುದಿಲ್ಲ. ಪಶುಗಳ ಸರದಿಯಲ್ಲಿ ನಿಂತು ನಾನೇಕೆ ಸಮಯ ಹಾಳು ಮಾಡಿಕೊಳ್ಳಲಿ?’ -ಅಪರಾಧ ಹಿನ್ನೆಲೆಯವರು ಸಂಸದರಾಗಿ ಆಯ್ಕೆಯಾಗುತ್ತಿರುವ ಬಗ್ಗೆ ಕಾಟ್ಜು ನೀಡಿದ ಪ್ರತಿಕ್ರಿಯೆ ಇದಾಗಿತ್ತು. ಇಂತಹ ಅಣಕವಾದಿ ನ್ಯಾ.ಕಾಟ್ಜು ಅವರು ಮೂಲತಃ ಕಾಶ್ಮೀರದವರು. ರಾಜಕೀಯ ಮತ್ತು ಕಾನೂನು ಹಿನ್ನೆಲೆಯ ಕಾಶ್ಮೀರಿ ಪಂಡಿತರ ಮನೆತನದವರು. ಬ್ರಿಟಿಷ್ ಇಂಡಿಯಾದ ಲಖನೌನಲ್ಲಿ 1946ರ ಸೆ.20ರಂದು ಜನನ. ಅಲಹಾಬಾದ್ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿದ್ದ ನ್ಯಾ.ಎಸ್.ಎನ್.ಕಾಟ್ಜು ಇವರ ತಂದೆ. ಅವರು ಉತ್ತರಪ್ರದೇಶ ವಿಧಾನಸಭೆಗೆ ಜನಪ್ರತಿನಿಧಿಯಾಗೂ ಆಯ್ಕೆಯಾಗಿದ್ದವರು. ತಾತ ಡಾ.ಕೈಲಾಶ್ನಾಥ್ ಕಾಟ್ಜು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದವರು. ತರುವಾಯ ಕೇಂದ್ರ ಸಚಿವ ಸಂಪುಟದಲ್ಲಿ ಕಾನೂನು, ಗೃಹ ಮತ್ತು ರಕ್ಷಣಾ ಖಾತೆಗಳನ್ನು ನಿಭಾಯಿಸಿದವರು. ಮುಂದೆ ಪಶ್ಚಿಮ ಬಂಗಾಳ, ಒಡಿಶಾಗಳ ರಾಜ್ಯಪಾಲರಾಗಿದ್ದರು. ಕಾಟ್ಜು ಅವರ ಚಿಕ್ಕಪ್ಪ ಬಿ.ಎನ್.ಕಾಟ್ಜು ಅವರು ಅಲಹಾಬಾದ್ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿದ್ದವರು. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಮೊದಲ ಪತ್ನಿ ಶಿಕ್ಷಣ ತಜ್ಞೆ ತಿಲೋತ್ತಮ ಮುಖರ್ಜಿ ನ್ಯಾ.ಕಾಟ್ಜು ಅವರ ಸೋದರ ಸಂಬಂಧಿ (ತಂದೆಯ ತಂಗಿ ಮಗಳು).ಲಖನೌನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಕಾಟ್ಜು, 1967ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಬಿ ಪದವಿಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದರು. ನಂತರ, ನವದೆಹಲಿಯ ಲಾಲ್ಬಹಾದುರ್ ಶಾಸ್ತ್ರಿ ಸಂಸ್ಕೃತಿ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದರು. 1970ರಿಂದ 1991ರ ತನಕ ಅಲಹಾಬಾದ್ ಹೈಕೋರ್ಟ್ನಲ್ಲಿ ವಕೀಲಿಕೆ ನಡೆಸಿದ ಅವರು, ಕಾರ್ವಿುಕ ಕಾನೂನು, ತೆರಿಗೆ ಮತ್ತು ರಿಟ್ ದಾವೆಗಳಲ್ಲಿ ಪರಿಣತಿ ಪಡೆದಿದ್ದರು. ಹೀಗಾಗಿ ಸರ್ಕಾರದ ವಿವಿಧ ಹೊಣೆಗಾರಿಕೆಗಳನ್ನು ಅವರು ನಿರ್ವಹಿಸಿದ್ದರು. 1991ರಲ್ಲಿ ನ್ಯಾಯಾಧೀಶರಾಗಿ ಬಡ್ತಿ ಪಡೆದ ಅವರು, 2004ರಲ್ಲಿ ಅಲಹಾಬಾದ್ ಹೈಕೋರ್ಟ್ನ ಹಂಗಾಮಿ ಮುಖ್ಯನ್ಯಾಯಮೂರ್ತಿಯಾದರು. 2005ರಲ್ಲಿ ದೆಹಲಿ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ, 2006ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದು, 2011ರ ಸೆ.19ರಂದು ನಿವೃತ್ತರಾದರು.

ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಒಂದು ವಾರದೊಳಗೆ ತ್ವರಿತವಾಗಿ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಿದ ದಾಖಲೆ ಅವರದ್ದು. ‘ಲಾ ಇನ್ ದ ಸೈಂಟಿಫಿಕ್ ಎರಾ’, ಇಂಟರ್ಪ್ರಿಟೇಶನ್ ಆಫ್ ಟ್ಯಾಕ್ಸಿಂಗ್ ಸ್ಟಾಟ್ಯೂಟ್ಸ್’, ‘ಮಿಮಾನ್ಸಾ ರೂಲ್ಸ್ ಆಫ್ ಇಂಟರ್ಪ್ರಿಟೇಶನ್’, ‘ಡೊಮೆಸ್ಟಿಕ್ ಎನ್ಕ್ವಯಿರಿ’ ಸೇರಿ ಅನೇಕ ಕೃತಿಗಳನ್ನು ಅವರು ರಚಿಸಿದ್ದಾರೆ. ಪತ್ನಿ ರೂಪಾ ಮತ್ತು ಒಬ್ಬ ಪುತ್ರ, ಪುತ್ರಿಯರನ್ನೊಳಗೊಂಡ ಸುಖಸಂಸಾರ ಅವರದ್ದು. ಸಂಸ್ಕೃತ, ಉರ್ದು, ಇತಿಹಾಸ, ತತ್ತ್ವಶಾಸ್ತ್ರ, ವಿಜ್ಞಾನ ಮತ್ತು ಸಮಾಜವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು.

Leave a Reply

Your email address will not be published. Required fields are marked *