ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರುವಂತಹ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಎರಡನೇ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲದೊಂದಿಗೆ, ತೀವ್ರ ಆಂತರಿಕ ಸಂಘರ್ಷದ ನಡುವೆಯೂ ಮುಖ್ಯಮಂತ್ರಿ ಅಖಿಲೇಶ್ ಯಾದವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಘೋಷಿಸಿದ್ದಾರೆ. ಆದಾಗ್ಯೂ, ಪಕ್ಷದೊಳಗಿನ ಯಾದವೀ ಕಲಹ ಪಕ್ಷದ ಪ್ರಚಾರ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ. ದಿನೇದಿನೆ ಚುನಾವಣಾ ಕಾವು ಏರತೊಡಗಿದೆ. ಕುಟುಂಬದ ಯಾದವೀ ಕಲಹ, ಆಂತರಿಕ ಸಂಘರ್ಷಗಳಿಂದಾಗಿ ಆಡಳಿತಾರೂಢ ಸಮಾಜವಾದಿ ಪಕ್ಷದ ಪ್ರಚಾರ ಕಾರ್ಯಕ್ಕಿನ್ನೂ ಸರಿಯಾಗಿ ಚಾಲನೆ ದೊರಕಿಲ್ಲ. ಮಗ ಅಖಿಲೇಶ್ ಯಾದವರನ್ನೇ ಟೀಕಿಸಿ ದೂರ ಇಟ್ಟಿದ್ದ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸೋಮವಾರ(ಅ.17) ಯೂ ಟರ್ನ್ ಹೊಡೆದು, ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ `ಅಖಿಲೇಶ್ ಯಾದವ್’ ಎಂದು ಘೋಷಿಸಿದ್ದು ರಾಜಕೀಯ ಪಂಡಿತರ ಹುಬ್ಬೇರುವಂತೆ ಮಾಡಿದೆ.
ಮುಲಾಯಂ ಅವರು ಕಳೆದವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಾಗಲೂ, ಅಖಿಲೇಶ್ ಹೆಸರನ್ನು ಘೋಷಿಸುವ ವಿಷಯದಲ್ಲಿ ಬಹಳ ಹಿಂದೇಟು ಹಾಕಿದ್ದರು. ಚುನಾವಣೆ ಬಳಿಕ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಲಾಗುತ್ತದೆ ಎಂದಿದ್ದರು. ಅವರ ಈ ನಡೆ, ವಿಪಕ್ಷ ನಾಯಕರಿಂದ ವ್ಯಾಪಕ ಟೀಕೆಗೊಳಗಾಗಿತ್ತು. ಭಾನುವಾರ ತನಕವೂ ಅಖಿಲೇಶ್ ಹೆಸರು ಘೋಷಿಸಲು ಹಿಂದೇಟು ಹಾಕಿದ್ದ ಮುಲಾಯಂ, ನಿರ್ಧಾರ ಬದಲಾಯಿಸುವುದಕ್ಕೆ ಕಾರಣವಾಗಿದ್ದು ಸೋದರ ರಾಮ್ ಗೋಪಾಲ್ ಯಾದವ್ ಕಳುಹಿಸಿದ್ದ ಪತ್ರ. ಪ್ರಸ್ತುತ ಸನ್ನಿವೇಶದಲ್ಲಿ ಅಖಿಲೇಶ್ ಯಾದವ್ ರಾಜ್ಯಾದ್ಯಂತ ಪ್ರಭಾವ ಬೀರಬಲ್ಲ ನಾಯಕರೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವಲ್ಲಿ ಯಾವುದೇ ಗೊಂದಲ ಬೇಡ. ಈ ವಿಷಯದಲ್ಲಿ ಎಡವಿದರೆ ಇತಿಹಾಸವೂ ನಿಮ್ಮನ್ನು ಕ್ಷಮಿಸದು ಎಂಬ ಎಚ್ಚರಿಕೆ ಸಂದೇಶ ಆ ಪತ್ರದಲ್ಲಿತ್ತು.
ಆಡಳಿತ ವಿರೋಧಿ ಅಲೆ: ಇದೊಂದು ಬದಲಾವಣೆ ಆದ ಮಾತ್ರಕ್ಕೆ, ಸಮಾಜವಾದಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯ ಟ್ರಾೃಕ್ಗೆ ಬಂತು ಎನ್ನುವಂತಿಲ್ಲ. ಇತ್ತೀಚೆಗೆ ಪ್ರಕಟವಾಗಿರುವ ಸಮೀಕ್ಷೆಗಳೂ ಅಂಥ ಪರಿಣಾಮವನ್ನು ಬಿಂಬಿಸಿವೆ. ಇಲ್ಲಿ ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ವೇಳೆ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, 403 ವಿಧಾನಸಭಾ ಸ್ಥಾನಗಳ ಪೈಕಿ 170-175 ಸ್ಥಾನಗಳಲ್ಲಿ ಬಿಜೆಪಿ, 115-120 ಸ್ಥಾನಗಳಲ್ಲಿ ಬಿಎಸ್ಪಿ, 94-100 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಗೆಲ್ಲಬಹುದು. ಯಥಾ ಪ್ರಕಾರ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೇ ತೃಪ್ತಿಪಡಬೇಕಾಗಬಹುದು ಎಂದು ಇಂಡಿಯಾ ಟುಡೆ-ಏಕ್ಸಿಸ್ ಸಮೀಕ್ಷೆ ಹೇಳಿತ್ತು. ಇದನ್ನು ಗಮನಿಸಿ ಹೇಳುವುದಾದರೆ, ಪಕ್ಷದೊಳಗೆ ಯಾದವೀ ಕಲಹ ಆರಂಭವಾಗಿ ಒಂದು ವರ್ಷವಾಗುತ್ತ ಬಂತು. ಇದರ ನೇರ ಪರಿಣಾಮ ಪಕ್ಷದ ಭವಿಷ್ಯದ ಮೇಲಾಗುತ್ತಿರುವುದಕ್ಕೂ ಈ ಸಮೀಕ್ಷೆ ಕೈಗನ್ನಡಿ ಎನ್ನಬಹುದು.
ಆಡಳಿತಾರೂಢ ಪಕ್ಷಕ್ಕೆ ಇಂತಹ ಮುಜುಗರದ ಸ್ಥಿತಿ ಯಾಕೆ ನಿರ್ಮಾಣವಾಯಿತು ಎಂದು ಪ್ರಶ್ನಿಸಿದರೆ, ಆಗ ತೆರೆದುಕೊಳ್ಳುವುದು ಪಕ್ಷದೊಳಗಿನ ಯಾದವೀ ಕಲಹದ ಅಧ್ಯಾಯಗಳು. ಈ ಬಗ್ಗೆ ಸಂಕ್ಷಿಪ್ತ ಅವಲೋಕನ ನಡೆಸಬೇಕಾದರೆ 2010ಕ್ಕೂ ಮೊದಲಿನ ಸನ್ನಿವೇಶಗಳನ್ನು ಒಮ್ಮೆ ಗಮನಿಸಬೇಕಾಗುತ್ತದೆ. ಆಗಿನ್ನೂ, ಉತ್ತರಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಳ್ವಿಕೆ ಜಾರಿಯಲ್ಲಿತ್ತು. ದಿನೇದಿನೆ ಆಡಳಿತ ವಿರೋಧಿ ಭಾವನೆ ಜನರ ಮನಸ್ಸಿನಲ್ಲಿ ಹೆಚ್ಚುತ್ತಿದ್ದ ಕಾಲಾವಧಿ. ಲಖನೌನಲ್ಲಿ ನಡೆದ ಘಟನೆ ಇದು. ಸಮಾಜವಾದಿ ಪಕ್ಷದ ಕೇಂದ್ರ ಕಚೇರಿ ಆವರಣ. ಅಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವೇದಿಕೆ ಮೇಲೆ ಅವರು ಕುಳಿತಿದ್ದ ಕುರ್ಚಿ ಖಾಲಿ ಇತ್ತು. ಅದೇ ವೇಳೆಗೆ ವೇದಿಕೆ ಏರಿದ ನಾಯಕ ಅಮರ್ಸಿಂಗ್ ಸುತ್ತಲೂ ನೋಡಿ, ವೇದಿಕೆ ಮೇಲಿದ್ದ ಖಾಲಿ ಕುರ್ಚಿ ಮೇಲೆ ಹೋಗಿ ಕುಳಿತರು. ಆಗ ಕೆಲ ನಾಯಕರು ಆ ಕುರ್ಚಿ ಮುಲಾಯಂ ಅವರದ್ದು ಎಂದು ಹೇಳಲೆತ್ನಿಸಿದರು. ಆಗ ಭಾಷಣ ಮಾಡುತ್ತಿದ್ದ ಮುಲಾಯಂ ಅವರು, ಕೈ ಸನ್ನೆ ಮೂಲಕ ಎಲ್ಲರನ್ನೂ ಸುಮ್ಮನಾಗಿಸಿದ್ದರು. ಮುಲಾಯಂ ಮೇಲೆ ಅಮರ್ ಸಿಂಗ್ ಪ್ರಭಾವ ಎಷ್ಟಿತ್ತು ಎಂಬುದಕ್ಕೆ ಈ ಘಟನೆ ಒಂದು ನಿದರ್ಶನ. ಆದರೆ ಮುಂದೆ ಕೆಲವೇ ತಿಂಗಳಲ್ಲಿ, ಅನ್ಯ ರಾಜಕೀಯ ಕಾರಣಕ್ಕಾಗಿ ಅಮರ್ ಸಿಂಗ್ ಪಕ್ಷದಿಂದ ಉಚ್ಚಾಟಿಸಲ್ಪಟ್ಟರು. ಹಾಗೆ ಹೊರಬಿದ್ದ ಅವರು ತಮ್ಮದೇ ಆದ ಪಕ್ಷ ಕಟ್ಟಿ ಚುನಾವಣೆ ಎದುರಿಸಿ ಸೋತರು ಕೂಡ. ಇದೆಲ್ಲ ಈಗ ಇತಿಹಾಸ.
ಯಾದವರ ಒಳರಾಜಕೀಯ: ತೀರಾ ಇತ್ತೀಚಿನ ಬೆಳವಣಿಗೆಯಲ್ಲಿ ಅಂದರೆ, ಕಳೆದ 18 ತಿಂಗಳ ಅವಧಿಯಲ್ಲಿ ಅಖಿಲೇಶ್ ಯಾದವ್ ಅವರ ವರ್ಚಸ್ಸು ಕುಗ್ಗಿಸುವ ಕೆಲಸವನ್ನು ಸ್ವಪಕ್ಷೀಯರೇ ಮಾಡುತ್ತ ಬಂದರು. ವಿಶೇಷವಾಗಿ ಸ್ವತಃ ಅವರ ತಂದೆ ಮುಲಾಯಂ ಸಿಂಗ್, ಸಹೋದರ ಶಿವಪಾಲ್ ಯಾದವ್. ಸೆಪ್ಟೆಂಬರ್ ಮಧ್ಯಭಾಗದಲ್ಲಿ, ಅಖಿಲೇಶ್ ಆಳ್ವಿಕೆ ಕಾರಣದಿಂದಲೇ 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಐದು ಸ್ಥಾನಗಳಿಗೆ ಕುಸಿಯಿತು. ಇಲ್ಲವಾದರೆ, ತಾನು ಪ್ರಧಾನಮಂತ್ರಿಯಾಗಿರುತ್ತಿದ್ದೆ ಎಂದು ಸಾರ್ವಜನಿಕವಾಗಿ ಹೇಳಿದ್ದರು. ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಾಣುತ್ತಿದ್ದ ಅಖಿಲೇಶ್ಗೆ ತಂದೆಯ ಈ ಹೇಳಿಕೆ ದುಬಾರಿಯಾಯಿತು. ಒಳಗೊಳಗೇ ಕುದಿಯುತ್ತಿದ್ದ ಅಸಮಾಧಾನ ನಿಧಾನವಾಗಿ ಹೊರಬರಲಾರಂಭಿಸಿತು.
ಸರ್ಕಾರದ ಆಡಳಿತವನ್ನು ಟೀಕಿಸುತ್ತಿದ್ದ ಮುಲಾಯಂ ಇತ್ತೀಚಿನ ತಿಂಗಳಲ್ಲಿ ಪಕ್ಷದ ಮೇಲಿನ ಹಿಡಿತ ಬಿಗಿಗೊಳಿಸುತ್ತ ಹೋದರು. ಅಖಿಲೇಶ್ ಪ್ರಭಾವ ತಗ್ಗಿಸುವುದಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಂಡರು. ಆರು ವರ್ಷಗಳ ಹಿಂದೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದ ಅಮರ್ ಸಿಂಗ್ ಕಳೆದ ಮೇ ತಿಂಗಳಲ್ಲಿ ಮತ್ತೆ ಪಕ್ಷ ಸೇರ್ಪಡೆಗೊಂಡರು. ಪರಿಣಾಮ ಒಳಗಿಂದೊಳಗೆ ನಡೆಯುತ್ತಿದ್ದ ಯಾದವೀ ಕಲಹದ ಬೆಂಕಿಗೆ ತುಪ್ಪ ಸುರಿದಂತಾಯಿತು. ಈ ಸೇರ್ಪಡೆಗೆ ಅಖಿಲೇಶ್, ಶಿವಪಾಲ್ ಯಾದವ್ ಹಾಗೂ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಮುಲಾಯಂ ಅವರ ಮಧ್ಯಪ್ರವೇಶದಿಂದಾಗಿ ಈ ಅಸಮಾಧಾನವು ಒಂದು ಹಂತಕ್ಕೆ ಬಗೆಹರಿದಿತ್ತು ಎನ್ನುತ್ತಿವೆ ಪಕ್ಷದ ಮೂಲಗಳು.
ಸೆಪ್ಟೆಂಬರ್ ಸಂಘರ್ಷ: ಏತನ್ಮಧ್ಯೆ, ಪಕ್ಷದ ಮೇಲೆ ಹಿಡಿತ ಬಿಗಿಗೊಳಿಸುವ ವಿಷಯದಲ್ಲಿ ಅಖಿಲೇಶ್ ಹಾಗೂ ಶಿವಪಾಲ್ ನಡುವೆ ಹಣಾಹಣಿ ಏರ್ಪಟ್ಟಿತು. ಈ ಜಟಾಪಟಿ ಕಳೆದ ತಿಂಗಳ ಮಧ್ಯಭಾಗದಲ್ಲಿ ನಡೆದಿದ್ದು, ಅವುಗಳನ್ನು ಇಲ್ಲಿ ಉಲ್ಲೇಖಿಸುವುದು ಅಗತ್ಯ.
ಸೆ.12– ರಾಜ್ಯದ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಆಗಬೇಕೆಂಬ ವಿಚಾರವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿಯಿತು. ಈ ತೀರ್ಪು ಬಂದ ಬೆನ್ನೆಲ್ಲೇ ಗಣಿ ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಪಂಚಾಯತ್ ರಾಜ್ ಸಚಿವ ರಾಜಕಿಶೋರ್ ಸಿಂಗ್ರನ್ನು ಸಂಪುಟದಿಂದ ಕೈಬಿಡಲಾಯಿತು. ಅಖಿಲೇಶ್ರ ಈ ನಡೆಯ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿತ್ತು. ಈ ಇಬ್ಬರೂ ಸಚಿವರು ಮುಲಾಯಂ ಹಾಗೂ ಶಿವಪಾಲ್ ಯಾದವ್ಗೆ ಆಪ್ತರು.
ಸೆ.13 – ದೆಹಲಿಯಲ್ಲಿ ಸೆ.11ರಂದು ಅಮರ್ ಸಿಂಗ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯದ ಮುಖ್ಯಕಾರ್ಯದರ್ಶಿ ದೀಪಕ್ ಸಿಂಘಾಲ್ರನ್ನು ಅಖಿಲೇಶ್ ವಜಾಗೊಳಿಸುತ್ತಾರೆ. ಸಿಂಘಾಲ್ ನೇಮಕವಾಗಿ ಕೆಲವು ತಿಂಗಳಷ್ಟೇ ಆಗಿತ್ತು. ಸಿಂಘಾಲ್ ಅವರು ಶಿವಪಾಲ್ಗೆ ಆಪ್ತ ಎನ್ನುವುದು ಇದರ ಹಿಂದಿನ ಕಾರಣವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಲಾಯಂ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಅಖಿಲೇಶ್ರನ್ನು ವಜಾಗೊಳಿಸಿ, ಆ ಸ್ಥಾನಕ್ಕೆ ಶಿವಪಾಲ್ ಯಾದವರನ್ನು ನೇಮಕ ಮಾಡಿದರು. ಈ ಬೆಳವಣಿಗೆ ನಡೆಯುತ್ತಿದ್ದಂತೆ ಶಿವಪಾಲ್ ಬಳಿ ಇದ್ದ ಪ್ರಮುಖ ಖಾತೆಗಳ ವಿಶೇಷವಾಗಿ ಪಿಡಬ್ಲುಡಿ ಹೊಣೆಗಾರಿಕೆಯನ್ನು ಅಖಿಲೇಶ್ ಹಿಂಪಡೆದುಕೊಂಡರು.
ಸೆ.14 – ಬಿರುಸಿನ ರಾಜಕೀಯ ಚಟುವಟಿಕೆ ನಡೆದು ಸೈಫೈನಲ್ಲಿನ ಶಿವಪಾಲ್ ಮನೆಯಲ್ಲಿ ಬೆಂಬಲಿಗರೆಲ್ಲ ಸೇರಿಕೊಂಡರು. ಈ ಬೆಳವಣಿಗೆ ಆಗುತ್ತಿದ್ದಂತೆ ಶಿವಪಾಲ್ರನ್ನು ಮುಲಾಯಂ ದೆಹಲಿಗೆ ಕರೆಸಿಕೊಂಡರು. ಇದಾಗುತ್ತಿದ್ದಂತೆ, ತನ್ನ ಸರ್ಕಾರದ ಎಲ್ಲ ಬಿಕ್ಕಟ್ಟುಗಳಿಗೆ `ಹೊರಗಿನವರು’ ಕಾರಣ ಎಂದು ದೂಷಿಸಿದರು.
ಸೆ.15 – ಪಕ್ಷದ ಪ್ರಧಾನಕಾರ್ಯದರ್ಶಿ ರಾಮ್ಗೋಪಾಲ್ ಯಾದವ್ ಆಂತರಿಕ ತಪ್ಪು ಕಲ್ಪನೆಗಳ ವಿಚಾರವಾಗಿ ಕಳವಳ ವ್ಯಕ್ತಪಡಿಸುತ್ತಾರೆ. ಇದರ ಬೆನ್ನಲ್ಲೇ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಗೂ ಸಚಿವ ಸ್ಥಾನಕ್ಕೆ ಶಿವಪಾಲ್ ಯಾದವ್ ರಾಜೀನಾಮೆ ಸಲ್ಲಿಸುತ್ತಾರೆ. ನಂತರ ಶಿವಪಾಲ್ ಹಾಗೂ ಮುಲಾಯಂ ನಡುವೆ ರಹಸ್ಯ ಮಾತುಕತೆ ನಡೆದಿತ್ತು. ಅಖಿಲೇಶ್ ನಾಯಕತ್ವವನ್ನೇ ಬೆಂಬಲಿಸುವುದಾಗಿ ಶಿವಪಾಲ್ ಹೇಳತೊಡಗಿದರು.
ಸೆ.16 – ಶಿವಪಾಲ್ ಯಾದವ್ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಮುಲಾಯಂ ತಿರಸ್ಕರಿಸಿದರು. ವಿವಾದಾತ್ಮಕ ಸಚಿವ ಗಾಯತ್ರಿ ಪ್ರಜಾಪ್ರತಿಯನ್ನು, ಶಿವಪಾಲ್ರನ್ನೂ ಪುನಃ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದರು.
ಸೆ.17 – ಸಾರ್ವಜನಿಕ ಸಭೆಯೊಂದರಲ್ಲಿ ಅಖಿಲೇಶ್ ಆಳ್ವಿಕೆ ವಿರುದ್ಧ ಕಿಡಿ ಕಾರಿದ ಮುಲಾಯಂ, 2014ರ ಲೋಕಸಭಾ ಚುನಾವಣಾ ಸೋಲಿಗೆ ಅಖಿಲೇಶ್ ಕಾರಣ. 2012ರಲ್ಲಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದು ಬಹುದೊಡ್ಡ ತಪ್ಪು. ಆತ ಇದುವರೆಗೆ ಸೈಕಲ್ ತುಳಿದಿದ್ದಷ್ಟೇ ಬಂತು ಎಂದುಬಿಟ್ಟರು.
ಸೆ.19 – ಮುಲಾಯಂ ಬೆಂಬಲದೊಂದಿಗೆ ಅಖಿಲೇಶ್ರ ಏಳು ಬೆಂಬಲಿಗರನ್ನು ಪಕ್ಷದಿಂದಲೇ ಉಚ್ಛಾಟಿಸಿಬಿಟ್ಟರು ಶಿವಪಾಲ್. ಯುವ ಹಾಗೂ ವಿದ್ಯಾರ್ಥಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುವ ಕ್ರಮವಾಗಿ ಇದು ಬಣ್ಣಿಸಲ್ಪಟ್ಟಿತು.
ಸೆ.20 – ಹಳೆಯ ಆಪ್ತ ಮಿತ್ರ ಅಮರ್ಸಿಂಗ್ರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ ಮುಲಾಯಂ, ಅಖಿಲೇಶ್ಗೆ ಮತ್ತಷ್ಟು ಆಘಾತ ನೀಡಿದರು.
ಪಕ್ಷ ಕಾರ್ಯದಿಂದ ದೂರಾದ ಅಖಿಲೇಶ್ : ಈ ನಡುವೆ, ಶಿವಪಾಲ್ ಯಾದವ್ ಪಕ್ಷದ ಸೂತ್ರ ಕೈಗೆತ್ತಿಕೊಳ್ಳುತ್ತಲೇ, ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ ಮುಖ್ತಾರ್ ಅನ್ಸಾರಿ ಹಾಗೂ ಆತನ ಸಹೋದರ ಅಫ್ಜಲ್ ಅನ್ಸಾರಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಲ್ಲದೇ, ಅವರ ಪಕ್ಷ ಕ್ವಾಮಿ ಏಕ್ತಾ ದಳವನ್ನು ಪಕ್ಷದಲ್ಲಿ ವಿಲೀನಗೊಳಿಸಿದರು. ಇವರಿಬ್ಬರೂ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂದೂ ಶಿವಪಲ್ ಘೋಷಿಸಿದರು. ಇದನ್ನು ಅಖಿಲೇಶ್ ತೀವ್ರವಾಗಿ ವಿರೋಧಿಸಿದರು. ಪಕ್ಷದ ಸ್ವಚ್ಛ ಇಮೇಜ್ ಉಳಿಸಿಕೊಳ್ಳಲು ಅಖಿಲೇಶ್ ಬಯಸಿದ್ದರು. ಆದರೆ, ಅವರ ವಿರೋಧವನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ.
ಉರಿಯುವ ಗಾಯಕ್ಕೆ ಉಪ್ಪು ಸುರಿಯುವಂತೆ ಶಿವಪಾಲ್, ಮಾಜಿ ಸಚಿವ ಅಮರ್ಮಣಿ ತ್ರಿಪಾಠಿಯ ಮಗ ಅಮನ್ಮಣಿ ತ್ರಿಪಾಠಿಗೂ ಟಿಕೆಟ್ ನೀಡಿದರು. ಅಮನ್ಮಣಿ ತ್ರಿಪಾಠಿ 2003ರ ಮಧುಮಿತಾ ಶುಕ್ಲಾ ಹತ್ಯೆ ಪ್ರಕರಣ ಹಾಗೂ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದಾತ. ಇದಲ್ಲದೇ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನ 5000 ಕೋಟಿ ರೂಪಾಯಿ ಹಗರಣದ ಆರೋಪಿ ಮುಖೇಶ್ ಶ್ರೀವಾಸ್ತವ ಎಂಬಾತನಿಗೂ ಟಿಕೆಟ್ ನೀಡಿದರು.
ಇವೆಲ್ಲದರ ಪರಿಣಾಮ ಅಖಿಲೇಶ್ ಮಾನಸಿಕವಾಗಿ ಪಕ್ಷದಿಂದ ದೂರವಾಗಲಾರಂಭಿಸಿದ್ದರು. ಸೆ.17ರಂದು ಆರಂಭವಾಗಬೇಕಿದ್ದ ಸಮಾಜವಾದಿ ವಿಕಾಸ ರಥ ಯಾತ್ರೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದರು. ಇದಾಗಿ ಕೆಲದಿನಗಳ ಬಳಿಕ, ಅಕ್ಟೋಬರ್ 4ರಂದು ಕಾನ್ಪುರದಲ್ಲಿ ಮೆಟ್ರೋ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸುವವನಿದ್ದೇನೆ. ಈಗ ಕಾಲಚಕ್ರ ತಿರುಗಿದೆ, ನನ್ನ ರಾಜಕೀಯದ ದಿಶೆಯೂ ಬದಲಾವಣೆಯ ಹಂತದಲ್ಲಿದೆ. ಅದಾಗಿ, ಯಾತ್ರೆಯ ದಿನಾಂಕ ನಿಗದಿ ಪಡಿಸುತ್ತೇನೆ’ ಎಂದು ಅಖಿಲೇಶ್ ಹೇಳಿದ್ದರು. ತರುವಾಯ ಅಕ್ಟೋಬರ್6ರಂದು ಸಮಾಜವಾದಿ ವಿಕಾಸ್ ರಥ ಯಾತ್ರೆ ಲಖನೌನ ಐಟಿಐ ಮೈದಾನದಿಂದ ಹೊರಡುವುದು ಎಂದು ಘೋಷಿಸಲಾಗಿತ್ತು. ವಿಕಾಸ್ ಸೇ ವಿಜಯ್ ಕೀ ಓರ್ ಎಂಬ ಘೋಷ ವಾಕ್ಯವನ್ನೂ ಮುದ್ರಿಸಿದ ಕರಪತ್ರಗಳೂ ಸಿದ್ಧವಾಗಿದ್ದವು. ಆದರೆ, ಅದಾವುದೂ ನಡೆಯಲಿಲ್ಲ.
ಪಕ್ಷ ಒಡೆಯಲು ತೀರ್ಮಾನಿಸಿದ್ದರಾ ಅಖಿಲೇಶ್?: ಕಳೆದ ಒಂದೂವರೆ ತಿಂಗಳ ರಾಜಕೀಯ ಬೆಳವಣಿಗೆ ಅಖಿಲೇಶ್ರಲ್ಲಿ ಹೊಸ ರಾಜಕೀಯ ಭವಿಷ್ಯ ಹುಡುಕುವ ಚಿಂತನೆಯನ್ನು ಮೂಡಿಸಿತ್ತು ಎನ್ನುತ್ತಿವೆ ಆಪ್ತವಲಯ. ಹೀಗಾಗಿಯೇ ಅವರು ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಯುವ ನಾಯಕರು ಇರುವಲ್ಲಿಗೆ ಸಮೀಪದಲ್ಲೇ ಬಂದರಿಯಾ ಬಾಘ್ನಲ್ಲಿ ಅಖಿಲೇಶ್ ಹೊಸ ರಾಜಕೀಯ ಕಚೇರಿ(ಜ್ಞಾನೇಶ್ವರ ಮಿಶ್ರಾ ಟ್ರಸ್ಟ್)ಯನ್ನು ಅಕ್ಟೋಬರ್ 9ರಂದು ತೆರೆದರು. ಅಲ್ಲಿದ್ದುಕೊಂಡೇ ತಮ್ಮ ರಾಜಕೀಯ ಚಟುವಟಿಕೆ ನಡೆಸಲಾರಂಭಿಸಿದ್ದಾರೆ. ಅಲ್ಲಿಗೆ, ಪಕ್ಷದ ಹಿರಿಯ ಪದಾಧಿಕಾರಿಗಳಾರೂ ಹೋಗಿಲ್ಲ. ಆದರೆ, ಹಿರಿಯ ಸಚಿವರಾದ ಅಹ್ಮದ್ ಹಸನ್, ರಾಜೇಂದ್ರ ಚೌಧರಿ, ಶಿವ ಪ್ರತಾಪ್ ಯಾದವ್, ರಾಮ್ ಗೋವಿಂದ ಚೌಧರಿ, ಅಭಿಷೇಕ್ ಮಿಶ್ರಾ ಈ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಇವರೆಲ್ಲರೂ ಅಖಿಲೇಶ್ರ ಕಾಯಂ ಟೀಂ ಎಂದು ಪರಿಗಣಿಸಲ್ಪಟ್ಟವರು. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಇನ್ನಷ್ಟು ಹೊಡೆತ ತಿನ್ನುವುದು ಬೇಡ ಎಂಬ ಕಾರಣಕ್ಕೆ ಮುಲಾಯಂ ಯೂ ಟರ್ನ್ ತೆಗೆದುಕೊಂಡು ಅಖಿಲೇಶ್ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆಂಬುದು ರಾಜಕೀಯ ಚಾವಡಿಯ ವಿಶ್ಲೇಷಣೆಯ ಕೇಂದ್ರ ಬಿಂದುವಾಗಿದೆ. ಆದಾಗ್ಯೂ, ಬದಲಾದ ಸನ್ನಿವೇಶದಲ್ಲಿ ವರ್ಚಸ್ಸು ಕಳೆದುಕೊಂಡಿರುವ ಅಖಿಲೇಶ್ರ ಮುಂದಿನ ನಡೆ ಏನು ಎಂಬುದು ಸದ್ಯದ ಕುತೂಹಲ.