ಅಮೆರಿಕಕ್ಕೇ ಡಾಕ್ಟರ್ ಮಂಡ್ಯದ ಗಂಡು!

VYAKTHI VISHESHA 21.12.14 VIJAYAVANI - VIVEK MURTHY`By obstructing the President’s nomination of Vivek Murthy as Surgeon General, the NRA (National Rifle Association) is taking its single-issue political blackmail to a new level’. ಜಗತ್ತಿನ ಪ್ರಸಿದ್ಧ ವೈದ್ಯಕೀಯ ನಿಯತಕಾಲಿಕ `ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ 2014ರ ಮೇ 8ರ ಸಂಪಾದಕೀಯದಲ್ಲಿ ಬರೆದುಕೊಂಡ ಸಾಲಿದು.. ಡಾ.ವಿವೇಕ್ ಹಲ್ಲೇಗೆರೆ ಮೂರ್ತಿ ಅಮೆರಿಕದ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಹುದ್ದೆಗೇರಿದ್ದೇ ಒಂದು ಸಾಹಸ ಎಂಬುದು ಈ ಸಾಲುಗಳಿಂದ ಮನವರಿಕೆಯಾದೀತು.

ಎರಡು ವರ್ಷಗಳ ಹಿಂದೆ ಶೂಟೌಟ್‍ಗಳಿಂದಲೇ ಜಗತ್ತಿನಾದ್ಯಂತ ಅಮೆರಿಕ ಸುದ್ದಿಯಲ್ಲಿತ್ತು. `ಗನ್‍ಗಳಿಂದ ಆಗುತ್ತಿರುವ ಹಿಂಸಾಚಾರ ಇತರೆ ರೋಗಗಳಿಂತಲೂ ಭಯಾನಕವಾಗಿದ್ದು, ಸಾಮಾಜಿಕ ಸ್ವಾಸ್ಥೃವನ್ನು ಕೆಡಿಸುತ್ತದೆ’ ಎಂದು ಡಾ.ವಿವೇಕ್ ಅಂದು ಹೇಳಿಕೆ ನೀಡಿದ್ದರು. ಡಾಕ್ಟರ್ ನೀಡಿದ್ದ ಈ ಹೇಳಿಕೆಗೆ ಸಾರ್ವಜನಿಕವಾಗಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಇದು ರೈಫಲ್ ಶೂಟಿಂಗ್ ತರಬೇತಿ ನೀಡುತ್ತಿದ್ದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ನಿದ್ದೆಗೆಡಿಸಿತ್ತು. ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ಡಾ.ವಿವೇಕ್ ಅವರ ಹೆಸರನ್ನು 2013ರ ನವೆಂಬರ್‍ನಲ್ಲಿ ಅಧ್ಯಕ್ಷ ಬರಾಕ್ ಒಬಾಮ ಯಾವಾಗ ನಾಮನಿರ್ದೇಶನ ಮಾಡಿದರೋ ಅಂದು, ಈ ಅಸೋಸಿಯೇಷನ್ ಇನ್ನಷ್ಟು ಕೆರಳಿತು.

ರಾಜಕೀಯವಾಗಿಯೂ ತನ್ನ ಪ್ರಾಬಲ್ಯ ತೋರಿಸಲು ಮುಂದಾಗಿದ್ದೇ ಅಲ್ಲದೇ, ಸರ್ಜನ್ ಜನರಲ್ ಹುದ್ದೆಗೆ ಚುನಾವಣೆ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗುವಂತೆ ಮಾಡಿತು. ಅಷ್ಟೇ ಅಲ್ಲ, ಡಾ.ವಿವೇಕ್ ವಿರುದ್ಧ ಭರ್ಜರಿ ಪ್ರಚಾರವನ್ನೂ ಮಾಡಿತು. ಕಳೆದ ಸೋಮವಾರ (ಡಿ.15ರಂದು) ಸೆನೆಟ್‍ನಲ್ಲಿ ಚುನಾವಣೆ ನಡೆದಾಗ ಅಲ್ಲಿ, ಸೆನೆಟರ್ ಜಾನ್ ಬರ್ರಾಸ್ಸೋ ಅವರು ಮೂರ್ತಿಯವರ ವಿದ್ಯಾರ್ಹತೆಯನ್ನು ಪ್ರಶ್ನಿಸಿ, `ಡಾ.ಮೂರ್ತಿ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿಷ್ಣಾತರೋ ಅಥವಾ ರೋಗಗಳ ಬಗ್ಗೆ ಸಂಶೋಧನೆ ನಡೆಸುವಲ್ಲಿ ಪರಿಣತರೋ? ಅದಾವುದೂ ಅಲ್ಲ. ಅವರು ವೈದ್ಯಕೀಯ ಕಾಲೇಜುಗಳಲ್ಲಿ ವೃತ್ತಿ ಜೀವನ ಕಟ್ಟಿಕೊಂಡಿದ್ದಾರೆಯೇ ಅಥವಾ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಮುನ್ನಡೆಸಿದ ಅನುಭವ ಅವರಿಗಿದೆಯೇ ? ಇದಾವುದೂ ಇಲ್ಲದ ಮೇಲೆ ಈ ಸ್ಥಾನಕ್ಕೆ ಅವರು ಹೇಗೆ ಅರ್ಹರು?’ ಎಂದು ಕೇಳಿದ್ದರು. ಈ ನಡುವೆ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆಯ್ಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, `ಪ್ರಸ್ತುತ ಸನ್ನಿವೇಶದಲ್ಲಿ ಅಮೆರಿಕ ಎಬೋಲಾ ಸಮಸ್ಯೆಯಿಂದ ಬಳಲುತ್ತಿದೆ. ಇಂಥ ಸಂಕಟದ ಸಮಯದಲ್ಲಿ ಅಮೆರಿಕದಲ್ಲಿ ಸಾರ್ವಜನಿಕ ಸ್ವಾಸ್ಥೃ ಕಾಪಾಡಲು ವಿವೇಕ್ ಅವರು ತಮ್ಮ ಜೀವಮಾನದ ಅನುಭವವನ್ನು ಧಾರೆಯೆರೆಯಲಿದ್ದಾರೆ. ಅವರನ್ನು ಆಯ್ಕೆ ಮಾಡುವ ಮೂಲಕ ಜಗತ್ತಿನಾದ್ಯಂತ ಹಾಗೂ ಇಲ್ಲೇ ಅಮೆರಿಕದಲ್ಲಿರುವ ನಮ್ಮ ಪ್ರಜೆಗಳ ಜೀವ ಉಳಿಸಿಕೊಳ್ಳೋಣ’ ಎಂದು ಹೇಳಿಕೆ ನೀಡಿದ್ದರು.

ಹಾಗೆ ಡಿ.15ರಂದು ಅಮೆರಿಕದ ಸೆನೆಟ್‍ನಲ್ಲಿ ನಡೆದ ಚುನಾವಣೆಯಲ್ಲಿ ಸದಸ್ಯರು 51-43ರ ಮತಗಳ ಅಂತರದಲ್ಲಿ ಡಾ.ವಿವೇಕ್ ಅವರನ್ನೇ ಅಮೆರಿಕದ 19ನೇ ಸರ್ಜನ್ ಜನರಲ್ ಆಗಿ ಆಯ್ಕೆ ಮಾಡಿದ್ದು ಈಗ ಇತಿಹಾಸ. ತನ್ಮೂಲಕ ಪ್ರತಿಷ್ಠಿತ ಹುದ್ದೆಗೇರಿದ ಮೊದಲ ಭಾರತೀಯ ಹಾಗೂ ಅತ್ಯಂತ ಕಿರಿಯ ಎಂಬ ಕೀರ್ತಿಗೂ ಅವರು ಭಾಜನರಾದರು. ಅಮೆರಿಕದಲ್ಲಿ ಮೂವತ್ತೇಳು ವರ್ಷದ ಡಾ.ವಿವೇಕ್ ಅವರ ಮಹತ್ವ ಏನು ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಇವಿಷ್ಟು ಘಟನೆ, ಪ್ರಸಿದ್ಧ ನಿಯತಕಾಲಿಕದ ಸಂಪಾದಕೀಯದ ನುಡಿಗಳು ಹಾಗೂ ಒಬಾಮ ಅವರ ಹೇಳಿಕೆಗಳೇ ಸಾಕು.

ಒಬಾಮ ಅವರ ವಿಶ್ವಾಸಕ್ಕೆ ಪಾತ್ರರಾದ ಡಾ.ವಿವೇಕ್ ಭಾರತೀಯರು ಎಂಬುದು ಹೆಮ್ಮೆಯ ವಿಚಾರ. ಅದಕ್ಕೂ ಮಿಗಿಲಾಗಿ ಅವರು ಕರ್ನಾಟಕದವರು, ಅದರಲ್ಲೂ ಮಂಡ್ಯ ಮೂಲದವರು ಎಂಬುದು ಕನ್ನಡಿಗರ ಪಾಲಿಗೆ ಬಹಳ ಖುಷಿ ಹಾಗೂ ಸಂಭ್ರಮದ ವಿಚಾರ. ಡಾ.ವಿವೇಕ್ ಅವರ ಜನನ 1977ರ ಜುಲೈ 10ರಂದು ಲಂಡನ್‍ನ ಹಡ್ಡರ್ಸ್‍ಫೀಲ್ಡ್‍ನಲ್ಲಿ. ಮಂಡ್ಯ ತಾಲೂಕು ಹಲ್ಲೇಗೆರೆ ಗ್ರಾಮದ ಡಾ.ಲಕ್ಷ್ಮೀನರಸಿಂಹಮೂರ್ತಿ ಮತ್ತು ಮೈತ್ರೇಯ ಅವರ ಅಪ್ಪ-ಅಮ್ಮ. ಡಾ.ರಶ್ಮಿ ಮೂರ್ತಿ ಎಂಬೊಬ್ಬ ಸಹೋದರಿಯೂ ಇದ್ದಾರೆ. ಮೈಶುಗರ್ ಕಾರ್ಖಾನೆ ನಿರ್ದೇಶಕರಾಗಿದ್ದ ಹಲ್ಲೇಗೆರೆ ನಾರಾಯಣಶೆಟ್ಟಿ ಅವರ ಮೊಮ್ಮಗ ಡಾ.ವಿವೇಕ್. ವೈದ್ಯವೃತ್ತಿಯಲ್ಲಿದ್ದ ಲಕ್ಷ್ಮೀನರಸಿಂಹಮೂರ್ತಿಯವರು 40 ವರ್ಷಗಳ ಹಿಂದೆ ಬ್ರಿಟನ್‍ಗೆ ತೆರಳಿದ್ದು, ಅಲ್ಲಿಂದ ಅಮೆರಿಕಕ್ಕೆ ಹೋಗಿದ್ದರು. ಹೀಗಾಗಿ ಮೂರ್ತಿ ಹುಟ್ಟಿದ್ದು ಲಂಡನ್‍ನಲ್ಲಾದರೂ ಶಿಕ್ಷಣವೆಲ್ಲ ಅಮೆರಿಕದಲ್ಲೇ ನಡೆಯಿತು. ಹಾರ್ವರ್ಡ್ ವಿ.ವಿ. ಹಾಗೂ ಯೇಲ್ ವಿ.ವಿ.ಯಲ್ಲಿ ಉನ್ನತ ವ್ಯಾಸಂಗ ಮಾಡಿದ ಅವರು, ಸಾಮಾಜಿಕ ಸ್ವಾಸ್ಥೃ ಕಾಪಾಡುವ ಕಾರ್ಯಗಳಿಂದಲೇ ಹೆಸರುವಾಸಿ. ತನ್ಮೂಲಕವೇ ವೈದ್ಯಕೀಯ ವೃತ್ತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದವರು. ಅವರ ಸಮಾಜಸೇವೆ ಕೇವಲ ಅಮೆರಿಕಕ್ಕೆ ಸೀಮಿತವಾಗಿಲ್ಲ. ಕರ್ನಾಟಕದಲ್ಲೂ ಅವರ ಕುಟುಂಬ `ಸ್ಕೋಪ್ ಫೌಂಡೇಶನ್’ ಎಂಬ ಎನ್‍ಜಿಒ ಸ್ಥಾಪಿಸಿದೆ. ಇದರ ಮೂಲಕ ಹಲ್ಲೇಗೆರೆ ಗ್ರಾಮದಲ್ಲಿ ಪ್ರತಿವರ್ಷ ಆರೋಗ್ಯಮೇಳ ನಡೆಸುತ್ತಾರೆ. ಗ್ರಾಮದ ಸುತ್ತಮುತ್ತಲ 30 ಸರ್ಕಾರಿ ಶಾಲೆಗಳಿಗೆ ತಲಾ 2 ಕಂಪ್ಯೂಟರ್‍ಗಳನ್ನೂ ಒದಗಿಸಿದ್ದಾರೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಏಡ್ಸ್ ತಡೆಗಟ್ಟುವ ಕುರಿತು ಹಲವು ಕಾರ್ಯಾಗಾರಗಳನ್ನೂ ಆಯೋಜಿಸಿದ್ದರು ಎಂಬುದನ್ನು ಅವರ ಕುಟುಂಬದ ಹಿರಿ ಸದಸ್ಯರು, ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಾರೆ.
ಅಮೆರಿಕದ ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸವೆಸಿದ ಹಾದಿ ಸರಳವಾದುದೇನಲ್ಲ. ತಮಗನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವ ಹೊಂದಿರುವುದರಿಂದಲೇ ಅವರ ಹಾದಿ ಕಠಿಣವಾಗಿತ್ತು ಎನ್ನುವವರಿದ್ದಾರೆ. ಅಪ್ಪ ವೃತ್ತಿಯಲ್ಲಿ ವೈದ್ಯರಾಗಿದ್ದುದರಿಂದ ಮಿಯಾಮಿಯ ಕ್ಲಿನಿಕ್‍ನಲ್ಲಿ ಬಾಲ್ಯ ಕಳೆದ ವಿವೇಕ್, ಅಂದಿನಿಂದಲೇ ವೈದ್ಯಕೀಯ ವೃತ್ತಿ ಕಡೆಗೆ ಒಲವು ತೋರಿದವರು. ಅದನ್ನು ಇಷ್ಟಪಟ್ಟು ಕಲಿತು, ಉಳಿದೆಲ್ಲ ವೈದ್ಯರಿಗಿಂತ ಭಿನ್ನವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮುನ್ನಡೆದವರು. ರೋಗಿಗಳಿಗೆ ಔಷಧ ಕೊಡುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸದೇ, ಹೆಲ್ತ್ ಕೇರ್ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಎಂಬಿಎ ಪದವಿಯನ್ನೂ ಗಳಿಸಿದರು. 1995ರಲ್ಲಿ `VISIONS Worldwide’ ಎಂಬ ಎನ್‍ಜಿಒವನ್ನು ಸ್ಥಾಪಿಸಿದ ಸಂಸ್ಥಾಪಕರಲ್ಲಿ ಡಾ.ವಿವೇಕ್ ಅವರೂ ಒಬ್ಬರು. ಎಚ್‍ಐವಿ/ಏಡ್ಸ್ ಬಗ್ಗೆ ಭಾರತ ಹಾಗೂ ಅಮೆರಿಕದಲ್ಲಿ ಜನಜಾಗೃತಿ ಮೂಡಿಸುವ ಕೆಲಸವನ್ನು ಈ ಎನ್‍ಜಿಒ ಮಾಡುತ್ತಿದೆ. 1995ರಿಂದ 2000ನೇ ವರ್ಷದವರೆಗೆ ಈ ಎನ್‍ಜಿಒದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು, 2000-2003ರ ಅವಧಿಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ರೀತಿ ಡಾಕ್ಟರ್ಸ್ ಆಫ್ ಅಮೆರಿಕ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಅವರು, ಅದರ ಸಹಸಂಸ್ಥಾಪಕರಾಗಿ ಹಾಗೂ ಅಧ್ಯಕ್ಷರಾಗಿ 2009ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಎಪರ್‍ನಿಕಸ್ ಎಂದೇ ಪ್ರಸಿದ್ಧವಾಗಿರುವ ಟ್ರಯಲ್ ನೆಟ್‍ವರ್ಕ್‍ನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಅದರ ಸಹಸಂಸ್ಥಾಪಕರಾಗಿ 2007ರಿಂದ ಕೆಲಸ ಮಾಡುತ್ತಿರುವ ಅವರು, ವೈದ್ಯಕೀಯ ಶಿಕ್ಷಣ ಪೂರ್ತಿಗೊಳಿಸಿದ ಕೂಡಲೇ ಬಾಸ್ಟನ್‍ನ ಬ್ರಿಗ್ಹಾಮ್ ಆ್ಯಂಡ್ ವುಮನ್’ಸ್ ಹಾಸ್ಪಿಟಲ್‍ನಲ್ಲಿ ವೃತ್ತಿಜೀವನ ಆರಂಭಿಸಿದರು. ಒಬಾಮ ಸರ್ಕಾರ 2011ರಲ್ಲಿ ಅವರನ್ನು ಸಾರ್ವಜನಿಕ ಸ್ವಾಸ್ಥೃ, ಆರೋಗ್ಯಸೇವೆಗೆ ಸಂಬಂಧಿಸಿದ ಸಲಹಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿತ್ತು.

ಅಮೆರಿಕದಲ್ಲಿ ಇಷ್ಟೆಲ್ಲ ಸಾಧನೆಯೊಂದಿಗೆ ಸದ್ದುಮಾಡುತ್ತಿರುವ ಡಾ.ವಿವೇಕ್ ಅವರ ಮಾತೃಭಾಷೆ ಕನ್ನಡ ಎಂಬ ವಿಚಾರಕ್ಕೂ ಅಲ್ಲಿನ ಮಾಧ್ಯಮಗಳು ಮಹತ್ವವನ್ನು ಕೊಟ್ಟಿವೆ. ಅವರು ಅವಿವಾಹಿತರಾಗಿದ್ದು, ಅವರ ರೆಫ್ರಿಜರೇಟರ್ ನೋಡಿದರೆ ಅಲ್ಲಿ ಬಾದಾಮಿ ಹಾಲು, ತಾಜಾ ಕ್ಯಾರೆಟ್ ಸೇರಿದಂತೆ ತರಕಾರಿಗಳೇ ಕಾಣುತ್ತವೆ. ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡಿರುವುದೇ ಅವರ `ಆರೋಗ್ಯಭಾಗ್ಯ’ದ ರಹಸ್ಯ ಎಂಬುದೂ ಅಲ್ಲಿ ಸುದ್ದಿಯಾಗಿವೆ.

ಹೀಗೆ ತಮ್ಮ ಕಾರ್ಯವೈಖರಿಯಿಂದಲೇ ಅಮೆರಿಕನ್ನರ ಮನಗೆದ್ದ ಮಂಡ್ಯ ಮೂಲದ ಡಾ.ವಿವೇಕ್ ಹಂತ ಹಂತವಾಗಿ ಅಮೆರಿಕಕ್ಕೆ ತಾವೆಷ್ಟು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಅದೇ ರೀತಿ, ಒಬಾಮ ಸರ್ಕಾರದ ಗಮನಸೆಳೆದು ಸರ್ಜನ್ ಜನರಲ್ ಹುದ್ದೆಗೆ ತಾವ್ಯಾಕೆ ಅರ್ಹರು ಎಂಬುದನ್ನು ಸಾಧಿಸಿ ತೋರಿದ್ದು ಬಹುದೊಡ್ಡ ಸಾಧನೆಯೇ ಸರಿ.

Leave a Reply

Your email address will not be published. Required fields are marked *