ಆರೋಗ್ಯದ ಉಡುಗೊರೆಗೆ ೧೦೮ ದಾರಿ…

ದೀಪಾವಳಿ, ಯುಗಾದಿ, ಕ್ರಿಸ್‌ಮಸ್, ಈದ್‌ಉಲ್‌ಫಿತರ್… ಹೀಗೆ ಯಾವುದೇ ಹಬ್ಬದ ದಿನಗಳಲ್ಲಿ ಪ್ರತಿಯೊಬ್ಬರು ಆತ್ಮೀಯರು ಎದುರಾದಾಗ ಮೊದಲು ಮಾಡುವ ಕೆಲಸ ಏನು? ಮುಗುಳ್ನಗು ಸೂಸಿ, ಕೈ ಕುಲುಕಿ ಅಥವಾ ಆಲಂಗಿಸಿ ಶುಭಹಾರೈಸುತ್ತಾರೆ. ದೂರದ ಊರುಗಳಲ್ಲಿ ಆತ್ಮೀಯರು ಇದ್ದರೆ, ಗ್ರೀಟಿಂಗ್ಸ್ ಅಥವಾ ಶುಭಾಶಯ ಪತ್ರ ಕಳುಹಿಸುವುದು ಕೂಡಾ ವಾಡಿಕೆ.
ಇವೆಲ್ಲ ಆತ್ಮೀಯರ ಬಗ್ಗೆ ತಮಗೆ ಇರುವ ಕಾಳಜಿ, ಅಭಿಮಾನವನ್ನು ವ್ಯಕ್ತಪಡಿಸುವ ರೀತಿ.. ಇಂತಹ ಕಾಳಜಿ, ಆತ್ಮೀಯತೆ ಆಯಾ ಸಂದರ್ಭದಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಆತ್ಮೀಯರು ತಮ್ಮ ಕಾರ್ಯಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದಾಗ ಕೂಡಾ ಶುಭ ಹಾರೈಸಿ ಅವರನ್ನು ಉತ್ತೇಜಿಸುವ ಪರಿಪಾಠ ಕೂಡಾ ಇದೆ.    ಹಾಗೆಯೇ, ಅಪಘಾತಕ್ಕೀಡಾಗಿ ಆಸ್ಪತ್ರೆ ದಾಖಲಾದಾಗ ಇಲ್ಲವೇ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ದಾಖಲಾದಾಗ ಕೂಡಾ ಹೂಗುಚ್ಛ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸುವ ಪರಿಯನ್ನೂ ನಿತ್ಯ ಜೀವನದಲ್ಲಿ ಕಾಣಬಹುದು. ಇನ್ನು ಕೆಲವರು, ಗೆಟ್‌ವೆಲ್ ಸೂನ್ ಎಂಬ ಸಂದೇಶ ಇರುವ ಗ್ರೀಟಿಂಗ್ಸ್ ಕಾರ್ಡ್ ನೀಡುತ್ತಾರೆ. ಹಬ್ಬಹರಿದಿನಗಳ ಸಮಯದ ಶುಭ ಹಾರೈಕೆಗಳು ನೀಡುವ ಸಂಭ್ರಮಕ್ಕಿಂತ, ಅನಾರೋಗ್ಯ ಪೀಡಿತರಾಗಿರುವಾಗ ಸಿಗುವ ಶುಭಹಾರೈಕೆಗಳು ಚೇತೋಹಾರಿ. ಅನೇಕ ಸಂದರ್ಭಗಳಲ್ಲಿ ರೋಗಿಯ ಚೇತರಿಕೆಗೂ ಇಂತಹ ಹಾರೈಕೆಗಳು ಕಾರಣವಾಗುತ್ತವೆ. ಇಂತಹ ಸೂಕ್ಷ್ಮ ವಿಚಾರಗಳು ಕೂಡಾ ಕೆಲವೊಂದು ಗುಡ್ ಐಡಿಯಗಳಿಗೆ ಪ್ರೇರಣೆ. ಅಂತಹದ್ದೇ ಗುಡ್ ಐಡಿಯ..೧೦೮ ವೇಸ್ ಟು ಗಿಫ್ಟ್ ಹೆಲ್ತ್…
ಆರೋಗ್ಯದ ಉಡುಗೊರೆ..!

Image courtesy - Team Vikram

ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಒಂದು ಬದಲಾವಣೆಗೆ ನಾಂದಿಯಾಗುತ್ತಿದೆ. ಆದರೆ, “ಗಿಫ್ಟ್ ಹೆಲ್ತ್” ಅರ್ಥಾತ್ ೧೦೮ ವೇಸ್ ಟು ಗಿಫ್ಟ್ ಹೆಲ್ತ್ ಅನ್ನೋ ವಿಶೇಷ ಯೋಜನೆ ಇಲ್ಲಿ ಚಾಲ್ತಿಯಲ್ಲಿ ಇರುವ ಅನೇಕ ಹೊಸತನಗಳಲ್ಲಿ ಒಂದು. ಈ ಕಾನ್ಸೆಪ್ಟ್ ಎಲ್ಲರ ಗಮನ ಸೆಳೆಯುತ್ತಿದೆ.  ಆರೋಗ್ಯ ಕ್ಷೇತ್ರದಲ್ಲಿ ಈ ಕಾನ್ಸೆಪ್ಟ್ ಖಂಡಿತ ಹೊಸದು.. ಇದುವರೆಗೆ ಯಾವ ಆಸ್ಪತ್ರೆ ಕೂಡಾ ಈ ನಿಟ್ಟಿನಲ್ಲಿ ಯೋಚಿಸಿಯೇ ಇಲ್ಲ ಎಂದು ಹೇಳಬಹುದು.
ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಕಾರ್ಡಿಯಾಕ್ ಕ್ಲಸ್ಟರ್ ಇರುವಲ್ಲಿ ಒಂದು ಸ್ಟ್ಯಾಂಡ್ ಹಾಕಲಾಗಿದೆ. ಮೇಲೆ ೧೦೮ ವೇಸ್ ಟು ಗಿಫ್ಟ್ ಹೆಲ್ತ್ ಅನ್ನೋ ಬರೆಹ ಕೂಡಾ ಕಾಣಿಸುತ್ತದೆ. ಅದರಲ್ಲಿ ಒಂದಷ್ಟು ಮಾದರಿ ಕಾರ್ಡ್‌ಗಳನ್ನು ಕೂಡಾ ಇರಿಸಲಾಗಿದೆ. ಕಾರ್ಡ್‌ಗಳಿಗೆ ಒಂದೊಂದಕ್ಕೆ ಒಂದೊಂದು ದರ.. ಬೇಸಿಕ್ ಹೆಲ್ತ್ ಚೆಕ್ ನಿಂದ ಹಿಡಿದು ಅಂಗಾಂಗಳ ಆರೋಗ್ಯ ತಪಾಸಣೆ ವರೆಗೆ, ವಯಸ್ಸಿನ ಆಧಾರದಲ್ಲಿ, ರೋಗಗಳ ಆಧಾರದಲ್ಲಿ ಒಟ್ಟು ೧೦೮ ರೀತಿಯ ಕಾರ್ಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ಆರೋಗ್ಯ ಉಡುಗೊರೆ ಉಪಯೋಗ ಹೇಗೆ ಎಂಬ ಪ್ರಶ್ನೆ ಕಾಡಬಹುದು. ಯಾವ ರೀತಿ ಸಾಂಪ್ರದಾಯಿಕ ಗ್ರೀಟಿಂಗ್ಸ್ ಕಾರ್ಡ್ ಖರೀದಿ ಮಾಡುತ್ತೀರೋ ಅದೇ ರೀತಿ ಈ ಕಾರ್ಡ್‌ಗಳನ್ನು ಖರೀದಿ ಮಾಡಬಹುದು. ಸ್ನೇಹಿತರ ಅಥವಾ ಪ್ರೀತಿಪಾತ್ರರ ಆರೋಗ್ಯದ ಮಾಹಿತಿ ಇದ್ದಲ್ಲಿ, ಯಾವ ಕಾರ್ಡ್ ಯಾರಿಗೆ ಕೊಡಬೇಕು ಅನ್ನೋದು ಸುಲಭವಾಗಿ ನಿರ್ಧರಿಸಬಹುದು.
ಉದಾಹರಣೆಗೆ, ಸ್ನೇಹಿತರೊಬ್ಬರು ಗಾಯಗೊಂಡು ಅದರಿಂದ ಬಳಲುತ್ತಿರುತ್ತಾರೆ. ಗಾಯ ಮಾಯದೇ ಇದ್ದಲ್ಲಿ, ಅವರನ್ನು ಮಧುಮೇಹ ತಪಾಸಣೆಗೆ ಒಳಪಡಿಸಬಹುದು. ಈ ತಪಾಸಣೆಯ ವೆಚ್ಚವನ್ನು ನೀವು ಭರಿಸಿ, ಅದನ್ನು ಗ್ರೀಟಿಂಗ್ಸ್ ರೂಪದಲ್ಲಿ ಅವರಿಗೆ ತಲುಪಿಸಬಹುದು.
ಇದೇ ರೀತಿ, ಹಿರಿಯರೊಬ್ಬರಿಗೆ ವಯೋಸಹಜ ಆರೋಗ್ಯ ಸಮಸ್ಯೆ ಬಹುಕಾಲದಿಂದ ಇದ್ದು, ಅವರು ಆಸ್ಪತ್ರೆಗೆ ಭೇಟಿ ನೀಡಲು ಯಾವುದೋ ಕಾರಣಕ್ಕೆ ಹಿಂಜರಿಯುತ್ತಿರಬಹುದು. ಆಗ, ವಯೋಮಾನ ಸಹಜ ಆರೋಗ್ಯ ತಪಾಸಣೆಯ ಗ್ರೀಟಿಂಗ್ ಕಾರ್ಡ್ ಖರೀದಿಸಿ, ನಿಮ್ಮ ಕಾಳಜಿ, ಪ್ರೀತಿಯನ್ನು ವ್ಯಕ್ತಪಡಿಸಬಹುದು..   ಹೀಗೆ ಖರೀದಿ ಮಾಡಿದ ಕಾರ್ಡ್ ಒಳಗೆ ಎಡಭಾಗದಲ್ಲಿ ಭಾವನಾತ್ಮಕ ಸಂದೇಶ ಬರೆಯೋದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಬಲಭಾಗದಲ್ಲಿ ಪಡೆದುಕೊಂಡವರು ತಮ್ಮ ಹೆಸರು ಮತ್ತು ಉಳಿದ ಮಾಹಿತಿಗಳನ್ನು ಬರೆದು ಅನುಕೂಲವಾದಾಗ ವಿಕ್ರಂ ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆಗೆ ಒಳಪಡಬಹುದು. ಇದಕ್ಕಾಗಿ ಪ್ರತ್ಯೇಕ ಹಣ ಕಟ್ಟಬೇಕಿಲ್ಲ. ತಪಾಸಣೆಯ ವರದಿ ಪಡೆದ ಬಳಿಕ, ಮುಂದಿನ ಚಿಕಿತ್ಸೆ ಅಗತ್ಯ ಇದ್ದರೆ ತೆಗೆದುಕೊಳ್ಳಬಹುದು. ಆದರೆ ಇದಕ್ಕೆ ಶುಲ್ಕ ಭರಿಸಬೇಕಾಗುತ್ತದೆ.
ಈ ನೂತನ ಯೋಜನೆ ಆಸ್ಪತ್ರೆಯ ನಿರ್ದೇಶಕರಾದ ಕಣ್ಣನ್ ರಮೇಶ್ ಅವರ ಕನಸಿನ ಕೂಸು. ಅವರ ಪ್ರಕಾರ, ಆರೋಗ್ಯವೇ ಭಾಗ್ಯ ಅನ್ನುವ ಮಾತು ಅಕ್ಷರಶಃ ನಿಜ. ಆರೋಗ್ಯ ಒಂದು ಸರಿ ಇದ್ದರೆ, ಏನಾದರೂ ಸಾಧಿಸಬಹುದು. ಹೀಗಾಗಿ ಬದಲಾಗುತ್ತಿರುವ ಪರಿಸ್ಥಿತಿಗೆ ತಕ್ಕಂತೆ, ಆತ್ಮೀಯತೆ, ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಂಡು ಬೆಳೆಸಿಕೊಳ್ಳಬೇಕು. ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಇರುವ ನಕಾರಾತ್ಮಕ ಧೋರಣೆ ಬದಲಾಗಬೇಕು. ಆಸ್ಪತ್ರೆ ಸಿಬ್ಬಂದಿಗಳು ಮತ್ತು ವೈದ್ಯರ ಮನೋಭಾವ ಕೂಡಾ ರೋಗಿಗಳ ಚೇತರಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂಬುದು ರಮೇಶ್ ಅವರ ಮನಸಿನ ಮಾತು.
ಇಂದಿನ ಪರಿಸ್ಥಿತಿಯಲ್ಲಿ ಇಂತಹ ಪ್ರಯೋಗಗಳು ಅಗತ್ಯ. ಬಹುಶಃ ಇಂತಹ ಪ್ರಯೋಗಶೀಲತೆ ಇದ್ದರೆ ಮಾತ್ರ, ಉಳಿದವರಿಗೆ ಮಾದರಿಯಾಗಿ ಕೆಲಸ ಮಾಡಲು ಸಾಧ್ಯ. ಅಂದ ಹಾಗೆ ಈ ಗ್ರೀಟಿಂಗ್ಸ್ ಕಾರ್ಡ್‌ಗಳು ವಿಕ್ರಂ ಆಸ್ಪತ್ರೆಯಲ್ಲಿ ಮಾತ್ರವಲ್ಲದೇ ಕೆಲವು ಪ್ರಮುಖ ಬುಕ್ ಶಾಪ್‌ಗಳಲ್ಲೂ ಶೀಘ್ರದಲ್ಲೇ ಲಭ್ಯವಾಗಲಿದೆ.   ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ೦೮೦-೪೫೦೦-೪೫೦೦ ಕರೆ ಮಾಡಬಹುದು..


Leave a Reply

Your email address will not be published. Required fields are marked *