ಕಾಡಿದ್ರೂ ಬೇಡಿದ್ರೂ ಅದು ವ್ಯಾಪಾರ :(

 

ಆಕ್ಸಿಡೆಂಟ್ ಆದಾಗ ನೆಪಾದಳು ಚೆಲುವೆ ಎಂದು ಹೇಳಿದ್ರೂ ವಿಶ್ರಾಂತಿಗಾಗಿ ಮನೆಗೆ ಅಂದ್ರೆ ಚಿತ್ರದುರ್ಗಕ್ಕೆ ತೆರಳುವಾಗ ಬಸ್‌ನಲ್ಲಿ ಕಾಡಿದಾತ ವ್ಯಾಪಾರಿ. ಅಷ್ಟಾದ್ರೆ ಪರವಾಗಿರಲಿಲ್ಲ. ವಾಪಸ್ ಬರೋವಾಗ್ಲೂ ಬಸ್‌ನಲ್ಲಿ ಕಾಡಿದ್ದೂ ವ್ಯಾಪಾರಿಯೇ. ಒಬ್ಬ ಕಾಡಿದ ರೀತಿಗೆ ಮೆಚ್ಚುಗೆಯಾದ್ರೆಇನ್ನೊಬ್ಬ ಕಾಡಿದ ರೀತಿಗೆ ಎದ್ದು ಹೋಗಿ ಒದ್ದೇ ಬಿಡೋಣ ಅನ್ನೋ ಮನಸ್ಸಾಯ್ತು ಅಷ್ಟೇ ವ್ಯತ್ಯಾಸ.. 🙂

ಬೆಂಗಳೂರಿನಿಂದ ಚಿತ್ರದುರ್ಗ ಹೋಗುವ ಬಸ್‌ ಏರಿದ್ದೆ. ಮಧ್ಯಭಾಗದಲ್ಲಿ ಸೀಟೂ ಸಿಕ್ಕಿತ್ತು. ಇನ್ನೇನು ಬಸ್ ಹೊರಡಬೇಕು ಅನ್ನೋ ಹೊತ್ತಲ್ಲಿ ಒಂದಿಬ್ಬರು ಯುವಕರು ಬಸ್‌ ಹತ್ತಿದ್ದರು. ಕೈಯಲ್ಲೊಂದಿಷ್ಟು ಲಗೇಜ್ ಕೂಡಾ ಇದ್ದವು. ನೋಡಿದ್ರೆ ಗೊತ್ತಾಗ್ತಿತ್ತು. ಬಟ್ಟೆ ವ್ಯಾಪಾರಿಗಳು ಅಂತ. ನನ್ನ ಪಕ್ಕದ ಸೀಟಲ್ಲೇ ಅಜ್ಜ ಅಜ್ಜಿ ಕೂತಿದ್ದರು. ಅವರ ಫ್ಯಾಮಿಲಿ ಸದಸ್ಯರು ನನ್ನ ಹಿಂದಿನ ಸೀಟಲ್ಲಿ ಕೂತಿದ್ರು. ಕಂಡಕ್ಟರಮ್ಮ ರೈಟ್ ರೈಟ್‌ ಅನ್ನುತ್ತಲೇ ಬಸ್‌ ಹೊರಟಿತು. ಇನ್ನೇನು ಮೆಜೆಸ್ಟಿಕ್‌ ಬಸ್‌ ನಿಲ್ದಾಣ ದಾಟ್ಟಿದ್ದೇ ತಡ. ಯುವಕರಲ್ಲೊಬ್ಬ ಮುಂದೆ ಬಂದ.

ಎಲ್ಲರ ಎದುರು ನಿಂತು ವ್ಯಾಪಾರ ಪ್ರವರ ಶುರುಹಚ್ಚಿದ. ಕಂಪೆನಿ ಬಟ್ಟೆಗಳನ್ನು ಮಾರಾಟ ಮಾಡೋಕೆ ಬಂದಿದ್ದೇವೆ. ಎಷ್ಟು ರೇಟ್ ಬೇಕಾದ್ರೂ ಕೂಗಬಹುದು. ೧೦ ರೂಪಾಯಿಂದ್ಲೇ ಶುರುಮಾಡಿ. ಹರಾಜಲ್ಲಿ ಭಾಗವಹಿಸಿರೇಟ್ ಕೂಗಿದವರಿಗೆ ಉಚಿತ ಗಿಫ್ಟ್‌ ಕೊಡ್ತೇವೆ.ರೇಟ್ ಕೂಗಿ ಟೈಂಪಾಸ್ ಮಾಡಿ.. ಅದೂ ಇದೂ ಅಂತ ಒಂದೊಂದೆ ಬಟ್ಟೆ ತಂದು ಪ್ರಯಾಣಿಕರ ಮುಂದಿಟ್ಟ

ಒಬ್ಬೊಬ್ಬರೇ ಬಟ್ಟೆಯ ರೇಟ್‌ ಕೂಗಿ ಕೂಗಿ ಹೇಳಿದ್ರು. ಕೂಡಲೇ ಆತ ಮೊದಲೇ ಘೋಷಿಸಿದಂತೆ ಉಚಿತ ಗಿಫ್ಟ್‌ ನೀಡಲು ಮುಂದಾದ. ಪ್ಯಾಕೆಟ್‌ ಸ್ಕ್ರಿಪ್ಲಿಂಗ್ ಪ್ಯಾಡ್ ಕೊಡ್ತಾ ಬಂದ. ನನ್ನ ಪಕ್ಕದಲ್ಲೇ ಕೂತಿದ್ದ ಅಜ್ಜ ಅಜ್ಜಿಯ ಕಡೆ ಕೂತ ಪುಣ್ಯಾತ್ಮಿನಿಗೆ ಚಿಕ್ಕ ಪುಸ್ತಕ ಕೊಟ್ಟ. ಒಂದೆರಡು ಬಟ್ಟೆ ಮಾರಾಟವೂ ಆಯ್ತು. ಹಾಗೆ ಆತ ಬೆಡ್‌ಶೀಟ್ ಒಂದನ್ನು ಎತ್ತಿ ತಂದು ಎಲ್ಲ ಮುಂದೆ ಹರವಿದೆ. ಅಷ್ಟರಲ್ಲಾಗಲೇ ಫ್ರೀ ಗಿಫ್ಟ್‌ ಕೊಡ್ತಾ ಇದ್ದುದ್ದನ್ನು ನೋಡಿದ ನನ್ನ ಪಕ್ಕದಲ್ಲೇ ಕೂತಿದ್ದ ಅಜ್ಜಿಗೆ ಎಲ್ಲಿಂದ ಬಂತೋ ಹುಮ್ಮಸ್ಸು ಗೊತ್ತಿಲ್ಲಮೊದಲ ರೇಟ್ ಅವರೇ ಕೂಗಿದ್ರು. ೫೦ ರೂಪಾಯಿಇನ್ನಾರೋ ೫೫ ಅಂದ್ರು.. ಮತ್ತಾರೋ ನೂರು ಅಂದ್ರು.. ಹಾಗೆ ಅದನು ೨೫೦ಕ್ಕೆ ನಿಂತು ಹೋಯ್ತು.

ಮಾರಾಟ ಮಾಡ್ತಾ ಇದ್ದ ಯುವಕ ಹೇಳಿದಇದು ಕಂಪೆನಿ ಮಾಲು. ಹತ್ತಲ್ಲ ನೂರಲ್ಲ ೨೦೦ ಅಲ್ಲ ೨೫೦ ಕೊಟ್ರೂ ಸಿಗಲ್ಲಇದನ್ನು ಯಾರಿಗೂ ಕೊಡಲ್ಲ.. ರೇಟ್ ಕೂಗಿದವರಿಗೆ ಫೋಟೋ ಆಲ್ಬಮ್‌ ಗಿಫ್ಟ್‌ ಕೊಡ್ತಾ ಬಂದ. ಅಜ್ಜಿ ಕೂಗಿ ಹೇಳಿದ್ರು.. ನಂಗಿಲ್ವಾ ಗಿಫ್ಟ್‌ ಅಂತ

ಬಂದೆ ಇರಿ.. ಅಂತ ಗಿಫ್ಟ್‌ ಕೊಡೋಕೆ ಹತ್ತಿರ ಬಂದಾಗ ಅಜ್ಜ ಕೇಳಿಯೇ ಬಿಟ್ರುಎಲ್ಲಪ್ಪಾ ನಂಗಿಲ್ವಾ ಗಿಫ್ಟ್‌ ಅದೇ ಪ್ಯಾಕೆಟ್‌ ಸ್ಕ್ರಿಪ್ಲಿಂಗ್ ಪ್ಯಾಡ್ ಕೊಡೋ ನಂಗೆ… 🙂 ಆತ ನಗ್ತಾ ಅ‌ಜ್ಜಂಗೂ ಗಿಫ್ಟ್‌ ಕೊಟ್ಟ. ಬಳಿಕ ಒಂದು ಷರ್ಟ್‌ ಪೀಸ್ ತಗೊಂಡು ಮುಂದೆ ಬಂದಗಿಫ್ಟ್‌ ಪಡ್ಕೊಂಡ ಅಜ್ಜಿಗೆ ಹುಮ್ಮಸ್ಸು ಇನ್ನಷ್ಟು ಹೆಚ್ಚಾಗಿತ್ತು. ಅದನ್ನು ನೋಡೋ ಮೊದಲೇ ೨೦೦ ರೂಪಾಯಿ ಘೋಷಿಸಿದ್ರು. ಯಾರೋ ಇನ್ನೂರ ಹತ್ತು ಅಂದ್ರು. ಅಜ್ಜಿ ಪಟ್ಟು ಬಿಡದೇ ೨೫೦ ಅಂದ್ರು.. ಅಲ್ಲಿಗೆ ನಿಂತು ಹೋಯ್ತು. ರೇಟ್‌ ಕೂಗೋದು. ಷರ್ಟ್‌‌ಪೀಸ್ ಅಜ್ಜಿ ಪಾಲಾಯ್ತು. ಅಜ್ಜಿ ತಮ್ಮ ಪರ್ಸ್‌‌ನಿಂದ ನೂರರ ಮೂರು ನೋಟು ತಗೊಂಡ್ರು. ಆತ ದುಡ್ಡು ತಗೊಂಡು ಚಿಲ್ಲರೆ ವಾಪಸ್ ಕೊಡೋಕೆ ಸ್ವಲ್ಪ ಸಮಯ ತಗೊಂಡ. ಅಜ್ಜಂಗೆ ಗಾಬರಿ ಶುರುವಾಯ್ತು. ೫೦ ರೂಪಾಯಿ ವಾಪಸ್ ಕೊಡೋ ಅಂಥ ಪ್ರಲಾಪ ತೆಗೆದರು.

ಅಷ್ಟರಲ್ಲೇ ಹಿಂದಿನ ಸೀಟಿನಲ್ಲಿ ಕುಳಿತ ಅಜ್ಜಿ ಸಂಬಂಧಿಕರು ಅದನ್ನು ವಾಪಸ್ ಕೊಡಿ ಅಂತ ಕೂಗಿದ್ರು. ಆದರೆ ಅಜ್ಜಿ ಮಾತ್ರ ಗಪ್‌ಚಿಪ್‌… ! ವ್ಯಾಪಾರದ ಯುವಕ ಹೇಳತೊಡಗಿದ. ನಾವು ಇಲ್ಲಿ ಬಂದಿರೋದು ವ್ಯಾಪಾರ ಮಾಡೋಕೆ. ಮೊದಲೇ ಹೇಳಿದ್ದೇವೆ. ಬಟ್ಟೆ ನೋಡಿ ರೇಟ್ ಕೂಗಿ ಅಂತ.. ಎಲ್ಲರ ಎದುರಲ್ಲೇ ರೇಟ್‌ ಕೂಗಿದ್ದೀರಾ ಅಂದ್ಮೇಲೆ ನೋಡಿ ತಾನೇ ಅದನ್ನೆಲ್ಲಾ ಮಾಡಿದ್ದು ಅಂದಹಾಗೆ ಅಲ್ಲಿಗೆ ವ್ಯಾಪಾರ ಕ್ಲೋಸ್‌ಬಸ್‌ ತನ್ನ ಪಯಣ ಮುಂದುವರಿಸಿತ್ತು. ಹಾಗೇ ಎಲ್ಲರೂ ಅರ್ಧಗಂಟೆ ಟೈಂಪಾಸ್ ಮಾಡಿದ್ರು. ಅಜ್ಜಿ ಕೂಡಾ ಸಕತ್ತಾಗೇ ಟೈಂಪಾಸ್ ಕೊಟ್ರು.. ಪಾಪ ! ವ್ಯಾಪಾರ ಹೀಗೂ ಮಾಡಬಹುದು ಅಂತ ಗೊತ್ತಾಗಿರ್ಲೇ ಇಲ್ಲ. ಗ್ರಾಹಕರನ್ನು ಸೆಳೆಯೋದಕ್ಕೆ ಬಣ್ಣದ ಜಾಹೀರಾತೇ ಬೇಕಾಗಿಲ್ಲ. ಒಂದಿಷ್ಟು ಬಣ್ಣದ ಮಾತಿದ್ದರೆ ಸಾಕು ಅನ್ನೋಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ… !

ಹಾಗೆ ಚಿತ್ರದುರ್ಗ ಹೋಗಿ ವಿಶ್ರಾಂತಿ ಪಡೆದು ಹತ್ತು ಹದಿನೈದು ದಿನಗಳ ಬಳಿಕ ಮತ್ತೆ ಬೆಂಗಳೂರಿನ ಕಡೆಗೆ ಮುಖ ಮಾಡಿದೆ. ಈಗ ಹೇಳೋ ಕತೆಯಲ್ಲಿ ನಾನೇ ಬಲಿಪಶು.. 🙁

ಬೆಂಗಳೂರಿನಲ್ಲಿ ವ್ಯಾಪಾರದ ಒಂದು ಮುಖ ನೋಡಿದ್ದ ನನಗೆ ಇನ್ನೊಂದು ಮುಖ ಹೀಗೂ ಇರಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಚಿತ್ರದುರ್ಗದಿಂದ ಬೆಂಗಳೂರು ಬಸ್ ಹತ್ತಿದ್ದೆ. ಮಟ ಮಟ ಮಧ್ಯಾಹ್ನ ಸಮಯ. ಸ್ವಲ್ಪ ಹಿಂದಿನ ಸೀಟೇ ಗತಿಯಾಗಿತ್ತು ಬಸ್‌ನಲ್ಲಿ. ಹಾಗೆ ಹೋಗಿ ಕುಳಿತಿದ್ದೆ. ಒಬ್ಬ ಬಸ್‌ ಏರಿದ. ೨೦ ರೂಪಾಯಿಗೆ ಟೂತ್ ಬ್ರಷ್‌.. ತಗೊಳಿ ಸಾರ್‍ ಅಂತ ಎಲ್ಲರೆದುರು ಹೇಳ್ತಾ ಬಂದ. ನೋಡೋಕೂ ಅಷ್ಟೇನೂ ಆಕರ್ಷಕ ವ್ಯಕ್ತಿತ್ವ ಹೊಂದಿರಲಿಲ್ಲ. ಅಯ್ಯೋ ಅನಿಸ್ತಿತ್ತು. ಹಾಗೆ ನನ್ನ ಬಳಿಗೂ ಬಂದ. ಸರ್‍ ೨೦ ರೂಪಾಯಿ.. ಬ್ರಷ್ ತಗೊಳಿ ಸಾರ್‍ಅಂದ. ಬೇಡ ಅಂದೆ..

ಆತ ಹೋಗ್ತಾನೆ ಅಂದ್ಕೊಂಡೆ. ಅದೇ ತಪ್ಪಾಯ್ತು. ಆತ ಕೂಡಲೇ ಕಾಲು ಹಿಡ್ಕೊಂಡು ಬಿಡೋದೆಛೇ.. ! ಎಲ್ಲರ ನೋಟವೂ ನನ್ನ ಕಡೆಗೆ ಏನ್ ಮಾಡ್ಲಿ ? ಇಪ್ಪತ್ತು ರೂಪಾಯಿ ಕೊಟ್ಟು ಖರೀದಿ ಮಾಡೋವಷ್ಟು ಉತ್ತಮ ಗುಣಮಟ್ಟದ ಬ್ರಷ್‌ ಅದಲ್ಲ. ಕೊಡದೇ ಹೋದರೆ ಇವನೆಂಥಾ ನಿಷ್ಕರುಣಿ ಅನ್ನೋ ನೋಟಗಳನ್ನು ಎದುರಿಸಬೇಕಲ್ಲಪ್ಪಾ ಅಂತ ವಿಚಲಿತನಾದೆ. ಆದರೂ ಸಾವರಿಸಿಕೊಂಡೆಆಗ ಆತನ ಮಾತು ಕಿವಿಗೆ ಅಪ್ಪಳಿಸ್ತು..

ಸರ್‍ ಊಟ ಮಾಡಿಲ್ಲ ಪ್ಲೀಸ್‌೨೦ ರೂಪಾಯಿ ಕೊಟ್ಟು ಬ್ರಷ್‌ ತಗೊಳಿ ಸಾರ್‌ ಇಲ್ಲಾಂದ್ರೆ ಊಟಕ್ಕೆ ಗತಿ ಇಲ್ಲಅಂತ ಅಳುಮುಖ ಮಾಡ್ಕೊಂಡ..

ಅಚಾನಕ್ ಆಗಿ ನನ್ನ ಕೈ ಜೇಬಿನಿಂದ ೨೦ ರೂಪಾಯಿ ತೆಗೆದುಕೊಂಡಿತ್ತು. ಆತನಿಗೆ ಕೊಟ್ಟು ಬಿಟ್ಟಿತ್ತು ಕೂಡಾ. ಬಾಯಿಯಿಂದ ಮಾತು ಹೊರಟಿತ್ತು. ಬ್ರಷ್‌ ಬೇಡ ಬಿಡು.. ಹೋಗಿ ಮೊದಲು ಊಟ ಮಾಡು ಅಂತ ಹೇಳಿಯೂ ಆಗಿತ್ತು. ಆತ ನನ್ನ ಕೈಯಿಂದ ಹಣವನ್ನು ಕಿತ್ತುಕೊಂಡು ಆಚೆ ತಿರುಗಿದ.. ಪಕ್ಕದಲ್ಲೇ ಕುಳಿತಿದ್ದ ಇನ್ನೊಬ್ಬರ ಕಾಲು ಹಿಡಿದಿತ್ತು ಆತನ ಕೈಅದೇ ಮಾತು

ಬೆಚ್ಚಿ ಬಿದ್ದೆ ನಾನು. ಕೋಪ ಕೂಡಾ ಬಂದಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಆತನಿಗೆ ಹಣ ಕೊಟ್ಟಾಗಿತ್ತು. ಕೂಡಲೇ ಎಚ್ಚೆತ್ತು ಕೊಂಡೆ.. ದುಡ್ಡು ಕೊಟ್ಟ ನನ್ನ ಅದೇ ಕೈ ಆತನ ಬೆನ್ನ ಮೇಲೊಂದು ಗುದ್ದು ಕೊಟ್ಟಿತ್ತು. ಬಾಯಿ ಕೋಪದಿಂದ ಕಿರುಚಿತು. “ಏಯ್‌ ! ಇಳ್ದು ಹೋಗ್ತಿಯಾ ಇಲ್ಲಾ ಒದೀಲಾ !” ಆತ ಅಲ್ಲಿಂದ ಮುಂದೆ ಹೋಗಿ ಮತ್ತೆ ಅದೇ ಕಾಯಕಕ್ಕೆ ನಿಂತ ಹಿಂದೆ ತಿರುಗಿ ನೋಡ್ತಾ

ನನ್ನ ಸಿಟ್ಟು ನೆತ್ತಿಗೇರಿತ್ತು. ಕುಳಿತಲ್ಲಿಂದ ಹಾಗೇ ಮೇಲಕ್ಕೆ ಎದ್ದಿದ್ದೆಮತ್ತೆ ಕೂಗಾಡಿದೆ. ” ಏಯ್ ನಿಂಗೇ ಹೇಳಿದ್ದುಒಂದ್ಸಲ ಹೇಳಿದ್ರೆ ಅರ್ಥ ಆಗತ್ತೋ ಇಲ್ವೋ ! ದುಡ್ಡು ಕೊಟ್ಟ ಮೇಲೆ ಹೋಗಿ ಉಣ್‌ಬೇಕಪ್ಪಾ ಮತ್ತೆ ಅದೇ ರಾಗ ಎಳೆದ್ರೆ…”

ಅಷ್ಟರಲ್ಲಿ ಉಳಿದವರೆಲ್ಲಾ ನನ್ನ ನೋಡ್ತಿರೋದು ಗೊತ್ತಾಯ್ತುಹಾಗೇ ಸೈಲೆಂಟಾಗಿ ಕುಳಿತೆಎಲ್ಲರನ್ನೂ ನೋಡ್ತಾ.. ಯಾರಿಗೂ ವಿಷಯ ಅರ್ಥ ಆಗಿಲ್ಲ.. ನಾನೂ ಸುಮ್ಮನಾದೆ ವಿವರಣೆ ಕೊಡದೇ..

ಹೀಗೆ ಎರಡು ಘಟನೆ ನಡೆದ ಮೇಲೆ ಯೋಚಿಸ್ತಾ ಇದ್ದೇನೆ ! ವ್ಯಾಪಾರಕ್ಕೆ ಎಷ್ಟು ಮುಖ ? ನಿಮಗೇನಾದ್ರೂ ಗೊತ್ತಾ…. ಗೊತ್ತಾದ್ರೆ ನಂಗೂ ಸ್ವಲ್ಪ ತಿಳಿಸಿ .ಕೆ. ನಾ ? 😉

****

Leave a Reply

Your email address will not be published. Required fields are marked *