ಕಾಮನ್‌ವೆಲ್ತ್ ಸಂಕ್ಷಿಪ್ತ ಇತಿಹಾಸ…

ವಿವಾದಗಳು, ಹಗರಣಗಳು ಇವೆಲ್ಲದರ ನಡುವೆ ವಿಳಂಬಗೊಂಡ ಕಾಮಗಾರಿಗಳು ಅಂತೂ ಇಂತೂ ಪೂರ್ಣಗೊಂಡಿವೆ. ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭಕ್ಕೆ ಬೇಕಾದ ಎಲ್ಲ ಅಂತಿಮ ಸಿದ್ಧತೆಗಳೂ ಪೂರ್ಣಗೊಂಡಿವೆ. ವಿವಾದಗಳು, ಟೀಕೆಗಳು ಏನೇ ಇದ್ರೂ, ಕಾಮನ್‌ವೆಲ್ತ್‌ ಗೇಮ್ಸ್‌ ಅಂದ್ರೆ ಏನು ? ಯಾವಾಗ ಆರಂಭ ಆಯ್ತು ? ಹೀಗೆ ಈ ಹಬ್ಬದ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಕೆಲವು ಅಂಶಗಳಿವೆ.

foto courtesy - panasianbiz.com

ನವದೆಹಲಿಯಲ್ಲಿ  ಕಾಮನ್‌ವೆಲ್ತ್  ಕ್ರೀಡಾ ಹಬ್ಬ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ. ಕಾಮನ್‌ವೆಲ್ತ್ ಗೇಮ್ಸ್ ಬಗ್ಗೆ ಕುತೂಹಲದಿಂದ ಗಮನಿಸಿದ್ರೆ, ಎಲ್ಲದಕ್ಕೂ ಮೊದಲು ಕಾಮನ್‌ವೆಲ್ತ್ ಅಂದ್ರೆ ಏನು ಅನ್ನೋ ಪ್ರಶ್ನೆ ಕಾಡತ್ತೆ. ಈ ಕ್ರೀಡಾಕೂಟದ ಹಿನ್ನೆಲೆ ಏನು ಅನ್ನೋ ಸಹಜವಾದ ಸಂಶಯ ಕೂಡಾ ಎದುರಾಗತ್ತೆ.

ಕಾಮನ್‌‌ವೆಲ್ತ್ ಕ್ರೀಡಾಕೂಟದ ಇತಿಹಾಸದ ಕಡೆಗೆ ತಿರುಗಿದ್ರೆ, ಆಸ್ಟ್ಲೇ ಕೂಪರ್ ಅನ್ನೋ ಆಂಗ್ಲ ಪ್ರಜೆ 1891 ರಲ್ಲಿ ಕಂಡ ಕನಸು ಈ ಕ್ರೀಡಾಕೂಟ.  ಬ್ರಿಟಷ್‌ ಸಾಮ್ರಾಜ್ಯದ ಅಡಿಯಲ್ಲಿದ್ದ ಎಲ್ಲ ದೇಶಗಳ ಜನರಿಗಾಗಿ ಈ ಕ್ರೀಡಾಕೂಟ ನಡೆಸಬೇಕು ಅನ್ನೋದು ಆಶಯವಾಗಿತ್ತು. ಆದ್ರೆ, ಇದು ನನಸಾಗೋದಕ್ಕೆ ಕೆಲವು ದಶಕಗಳೇ ಬೇಕಾಯ್ತು. 1911 ರಲ್ಲಿ ಮೊದಲ ಅಂತರ್ ದೇಶೀಯ ಚಾಂಪಿಯನ್ ಶಿಪ್‌ ನಡೆಯಿತು. ಇದ್ರಲ್ಲಿ ಆಸ್ಟ್ರೇಲಿಯ, ಕೆನಡಾ, ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್‌ ತಂಡಗಳು ಭಾಗವಹಿಸಿದ್ದವು. ಬ್ರಿಟಿಷ್ ಎಂಪಾಯರ್‌ನ  ಅಡಿ ಇರುವ ದೇಶಗಳು ಭಾಗವಹಿಸಿದ ಮೊದಲ ಕ್ರೀಡಾಕೂಟ 1930 ರಲ್ಲಿ ಕೆನಡಾದ ಒಂಟಾರಿಯೋ, ಹ್ಯಾಮಿಲ್ಟನ್‌ ನಲ್ಲಿ ನಡೆಯಿತು.

ಮೊದಲ ಬ್ರಿಟಿಷ್ ಎಂಪಾಯರ್ ಗೇಮ್ಸ್‌ 1930ರಲ್ಲಿ ನಡೆಯಿತು. ಆದ್ರೆ, ಬಳಿಕ 1942 ಮತ್ತು 1946 ರಲ್ಲಿ ಎರಡನೇ ಜಾಗತಿಕ ಸಮರದ ಕಾರಣ ಕ್ರೀಡಾಕೂಟ ನಡೆದೇ ಇಲ್ಲ.

ಎರಡನೇ ವಿಶ್ವ ಯುದ್ಧದ ಬಳಿಕ 1954ರಲ್ಲಿ ಕ್ರೀಡಾಕೂಟ ನಡೆಸುವಾಗ ಬ್ರಿಟಿಷ್‌ ಎಂಪಾಯರ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಎಂದು ಮರುನಾಮಕರಣ ಮಾಡಲಾಯಿತು. ಇದ್ರಲ್ಲಿ ಮಹಿಳೆಯರು ಕೂಡಾ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಸ್ಪರ್ಧಿಸುವ ಪರಿಪಾಠ ಇಲ್ಲಿಂದಲೇ ಆರಂಭ. ಬಳಿಕ 1970 ರಲ್ಲಿ ಮತ್ತೆ ಕ್ರೀಡಾಕೂಟ ನಡೆದಾಗ ಬ್ರಿಟಿಷ್‌ ಕಾಮನ್‌ವೆಲ್ತ್ ಎಂದು ಮತ್ತೆ ಮರುನಾಮಕರಣವಾಯ್ತು.  1978 ರಿಂದ ಈ ಕ್ರೀಡಾಕೂಟಕ್ಕೆ ಕಾಮನ್‌ವೆಲ್ತ್‌ ಗೇಮ್ಸ್ ಅನ್ನೋ ಹೆಸರು ಚಾಲ್ತಿಗೆ ಬಂತು. ಅಲ್ಲಿಂದ ಇಲ್ಲಿ ತನಕ ಕ್ರೀಡಾಕೂಟದ ಹೆಸರಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದಾಗಿ 1998ರ ತನಕ ಕೇವಲ ಅಥ್ಲೆಟಿಕ್ಸ್‌ ಗೆ ಸೀಮಿತವಾಗಿದ್ದ ಕ್ರೀಡಾಕೂಟದಲ್ಲಿ ಕ್ರಿಕೆಟ್, ಹಾಕಿ, ನೆಟ್‌ಬಾಲ್‌, ರಗ್ಬಿ ಸೇರ್ಪಡೆಯಾಯ್ತು.

ಇವಿಷ್ಟು ಕಾಮನ್‌ವೆಲ್ತ್ ಗೇಮ್ಸ್ ನ  ಸಂಕ್ಷಿಪ್ತ ಇತಿಹಾಸ. ಈಗ ದೆಹಲಿಯಲ್ಲಿ ನಡೀತಿರೋದು 19ನೇ ಕಾಮನ್‌‌ವೆಲ್ತ್‌ ಗೇಮ್ಸ್‌‌. ಅಕ್ಟೋಬರ್ 3 ರಂದು ಉದ್ಘಾಟನೆಗೊಂಡು 14 ರಂದು ಸಮಾರೋಪ ಕಾಣಲಿದೆ

Leave a Reply

Your email address will not be published. Required fields are marked *