ಕಾಮನ್ ವೆಲ್ತ್‌ ಗೇಮ್ಸ್‌ ಹಗರಣ – ಸಿಎಜಿ ವರದಿ ಬಯಲುಗೊಳಿಸಿದ ಸತ್ಯ

foto courtesy - delhicommonwealthgame.blogspot.com

ಕಾಮನ್ ವೆಲ್ತ್ ಗೇಮ್ಸ್ ಹಣಕಾಸಿನ ಅವ್ಯವಹಾರ ದಿನಕ್ಕೊಂದು ಹೊಸ ರೂಪ ಪಡೆಯುತ್ತಿದೆ. ಈ ಬಗ್ಗೆ ತನಿಖೆ ನಡೆಸ್ತಾ ಇರೋ ಕಂಟ್ರೋಲರ್ ಅಂಡ್ ಅಡಿಟರ್ ಜನರಲ್ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಎಲ್ಲೆಲ್ಲೆ ಎಷ್ಟೆಷ್ಟು ಹಣಕಾಸಿನ ಅವ್ಯವಹಾರ ನಡೆದಿದೆ ಎಂಬುದನ್ನು ಬೊಟ್ಟು ಮಾಡಿ ತೋರಿಸಲಾಗಿದೆ.

ಕ್ವೀನ್ಸ್ ಬ್ಯಾಟನ್ ರಿಲೇ ಗುತ್ತಿಗೆ ವಿವಾದದ ಗುಲ್ಲು ಇದೀಗ ಬಹುತೇಕ ನಿರ್ಣಾಯಕ ಹಂತಕ್ಕೆ ತಲುಪಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಎಲ್ಲರ ದೃಷ್ಟಿಯೂ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್‌ ಕಲ್ಮಾಡಿ ಮೇಲೆ ನೆಟ್ಟಿದೆ. ದರ್ಬಾರಿ ವಜಾ ಪ್ರಕರಣದಿಂದ ಕಲ್ಮಾಡಿ ಮತ್ತು ಸಂಘಟನಾ ಸಮಿತಿ ಸದಸ್ಯರ ನಡುವಿನ ಶೀತಲ ಸಮರಕ್ಕೂ ಒಂದು ತಿರುವು ಸಿಕ್ಕಿದೆ.  ರಿಲೇ ಅವ್ಯವಹಾರ ಪ್ರಕರಣ ಕುರಿತಾದ ಮಧ್ಯಂತರ ವರದಿಯನ್ನು ಸಿಎಜಿ ಸಿದ್ದಗೊಳಿಸಿದೆ.

ಕ್ವೀನ್ಸ್ ಬ್ಯಾಟನ್ ರಿಲೇ ಅವ್ಯವಹಾರ

 • ಅಕ್ಟೋಬರ್ 2007 ರಲ್ಲಿ ಬಿಡ್ಡಿಂಗ್‌

 • ಪ್ರೈಸ್‌ವಾಟರ್‌‌ಹೌಸ್‌ ಕೂಪರ್ಸ್‌  – 1.91 ಕೋಟಿ ರೂ.

 • ಬ್ರಿಲಿಯಂಟ್‌ ಎಂಟರ್‌ಟೈನ್‌ಮೆಂಟ್‌ ನೆಟ್‌‌ವರ್ಕ್ಸ್    – 1.85 ಕೋಟಿ ರೂ.

 • ಮಾಕ್ಸಮ್‌‌ ಇಂಟರ್‌ನ್ಯಾಷನಲ್‌      –    8.01 ಕೋಟಿ ರೂ.

ಕ್ವೀನ್ಸ್ ಬ್ಯಾಟನ್ ರಿಲೇ ಕಾರ್ಯಕ್ರಮದ ಗುತ್ತಿಗೆಯ ಟೆಂಡರ್ ಪ್ರಕ್ರಿಯೆ 2007 ರ ಅಕ್ಟೋಬರ್‌ನಲ್ಲಿ ನಡೆದಿತ್ತು. ಆಗ ಮೂರು ಸಂಸ್ಥೆಗಳು ಬಿಡ್ಡಿಂಗ್ ಮಾಡಿದ್ದವು. ಪ್ರೈಸ್‌ವಾಟರ್‌‌ಹೌಸ್‌ ಕೂಪರ್ಸ್‌  1.91 ಕೋಟಿ ರೂಪಾಯಿ, ಬ್ರಿಲಿಯಂಟ್‌ ಎಂಟರ್‌ಟೈನ್‌ಮೆಂಟ್‌ ನೆಟ್‌‌ವರ್ಕ್ಸ್  1.85 ಕೋಟಿ ರೂಪಾಯಿ ಮತ್ತು  ಮಾಕ್ಸಮ್‌‌ ಇಂಟರ್‌ನ್ಯಾಷನಲ್‌   8.01 ಕೋಟಿ ರೂಪಾಯಿ ಬಿಡ್ಡಿಂಗ್ ಸಲ್ಲಿಸಿತ್ತು.

ಈ ಅಂಶಗಳನ್ನು ಉಲ್ಲೇಖಿಸಿದ ಸಿಎಜಿ ವರದಿ, ನಿಯಮಾವಳಿ ಪ್ರಕಾರ ಕಡಿಮೆ ಬಿಡ್‌ ಸಲ್ಲಿಸಿದವರಿಗೆ ಕಾರ್ಯಕ್ರಮದ ಉಸ್ತುವಾರಿ ವಹಿಸಬೇಕಿತ್ತು. ಆದ್ರೆ, ಸಂಘಟನಾ ಸಮಿತಿ ಇಲ್ಲಿ ಮಾಕ್ಸಮ್‌ ಬಿಡ್‌‌ ಅನ್ನು ಸ್ವೀಕರಿಸಿದೆ.  ಇದಕ್ಕೆ ಸಮಜಾಯಿಷಿ ನೀಡೋದಕ್ಕಾಗಿ ಮಾಕ್ಸಮ್‌‌ ಉಳಿದ ಸಂಸ್ಥೆಗಳಿಗಿಂತ ವೃತ್ತಿಪರತೆ ಹೊಂದಿದೆ ಎಂದು ಸಂಘಟನಾ ಸಮಿತಿ ಸಮರ್ಥಿಸಿಕೊಂಡಿರುವುದಾಗಿ ತಿಳಿಸಿದೆ. ಮಾಕ್ಸಮ್‌ಗೆ ಗುತ್ತಿಗೆ ನೀಡಿದ್ದರಿಂದ 6.16 ಕೋಟಿ ರೂಪಾಯಿ ಹೆಚ್ಚುವರಿ ಖರ್ಚಾಗಿದೆ. ಇದೇ ರೀತಿ ಗುತ್ತಿಗೆ ನೀಡೋದ್ರಲ್ಲಿ  ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಆದಾಯದಲ್ಲೂ ನಷ್ಟ ಉಂಟಾಗಿದೆ ಎಂದು ಉಲ್ಲೇಖಿಸಿದೆ.

ಸಿಎಜಿ ವರದಿಯಲ್ಲಿನ ಪ್ರಮುಖ ಅಂಶಗಳು

 • ಅಂತಾರಾಷ್ಟ್ರೀಯ ಪ್ರಸಾರದ ಹಕ್ಕುಗಳ ಮಾರಾಟದ ಬಿಡ್‌‌‌

 • ಎಸ್‌‌ಎಂಎಎಂ, ಫಾಸ್ಟ್‌ ಟ್ರಾಕ್ ಇವೆಂಟ್‌ ಕಂಪೆನಿಗಳಿಂದ ಬಿಡ್ಡಿಂಗ್

 • ಎಸ್‌ಎಂಎಎಂ  ಫ್ಲಾಟ್‌ ರೇಟ್‌ ಕಮಿಷನ್  ಶೇಕಡಾ 12.5

 • ಫಾಸ್ಟ್‌ ಟ್ರಾಕ್‌  ಫ್ಲಾಟ್‌ ರೇಟ್‌ ಕಮಿಷನ್‌  ಶೇಕಡಾ 15

 • ಫಾಸ್ಟ್‌ ಟ್ರಾಕ್‌ಗೆ ಫೆನೆಲ್‌, ಹೂಪರ್ ಮತ್ತು ಕಲ್ಮಾಡಿ ಸಾಥ್

 • ಬಿಡ್ಡರ್‌ಗಳ ತಾಂತ್ರಿಕ ಪರಿಶೀಲನೆ ನಡೆಸಿಲ್ಲ

 • 24.60 ಕೋಟಿ ರೂಪಾಯಿ  ಆದಾಯ ನಷ್ಟ

ಅಂತಾರಾಷ್ಟ್ರೀಯ ಪ್ರಸಾರದ ಹಕ್ಕುಗಳ ಮಾರಾಟಕ್ಕೆ ಸಂಬಂಧಿಸಿದ ಟೆಂಡರ್‌ಗೆ ಎಸ್‌‌ಎಂಎಎಂ ಮತ್ತು ಫಾಸ್ಟ್‌ ಟ್ರಾಕ್ ಇವೆಂಟ್‌ ಅನ್ನೋ  ಎರಡು ಕಂಪೆನಿಗಳು ಸ್ಪಂದಿಸಿದ್ದವು. ಸ್ಮಾಮ್‌  ಇದಕ್ಕಾಗಿ 12.5 ಶೇಕಡಾ ಫ್ಲಾಟ್‌ ರೇಟ್‌ ಕಮಿಷನ್‌ ಕೊಡುವುದಾಗಿ ಹೇಳಿದ್ರೆ, ಫಾಸ್ಟ್‌ ಟ್ರಾಕ್‌‌ ಶೇಕಡಾ 15 ರ ಪ್ರಸ್ತಾಪ ಮುಂದಿಟ್ಟಿತ್ತು. ಈ ಪ್ರಕರಣದಲ್ಲಿ ಕಾಮನ್ ವೆಲ್ತ್ ಗೇಮ್ಸ್‌ ಫೆಡರೇಷನ್‌ ಅಧ್ಯಕ್ಷ ಫೆನೆಲ್‌  ಮತ್ತು ಸಿಇಒ ಮೈಕ್ ಹೂಪರ್‌, ಸಂಘಟನಾ ಸಮಿತಿ ಅಧ್ಯಕ್ಷ ಕಲ್ಮಾಡಿ ಶಿಫಾರಸಿನ ಆಧಾರದಲ್ಲಿ ಫಾಸ್ಟ್‌ ಟ್ರಾಕ್ ಕಂಪೆನಿ ಬಿಡ್‌ ಊರ್ಜಿತಗೊಂಡಿದೆ. ಬಿಡ್ಡರ್‌ಗಳ ತಾಂತ್ರಿಕ ಪರಿಶೀಲನೆ ನಡೆಸಿಲ್ಲ. ಇದರಿಂದಾಗಿ ಆದಾಯದಲ್ಲಿ  24.60 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ. ಲೆಕ್ಕಪತ್ರ ಪರಿಶೋಧನೆಯಲ್ಲಿ ಬಹಿರಂಗಗೊಂಡ ಅಂಶಗಳೆಂದ್ರೆ,  ರೇಟ್ ಆಫ್ ಕಮಿಷನ್‌ನ ವ್ಯತ್ಯಾಸದಿಂದಾಗಿ 5.20 ಕೋಟಿ ರೂಪಾಯಿ ನಷ್ಟವಾಗಿದೆ. ಇದಲ್ದೇ, ಸೇವಾ ಗುತ್ತಿಗೆಯಲ್ಲಿನ ಲೋಪದೋಷಗಳಿಂದ ಆದಾಯದಲ್ಲಿ 19 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

ಸಿಎಜಿ ವರದಿ ಪ್ರಮುಖ ಅಂಶಗಳು

 • ಟೆಲಿವಿಷನ್‌ ಪ್ರಸಾರದ ಹಕ್ಕುಗಳ ಮಾರಾಟ

 • ನೆಟ್‌ವರ್ಕ್‌ ಟೆನ್ ಆಸ್ಟ್ರೇಲಿಯಾ, ಟಿವಿ ನ್ಯೂಜಿಲೆಂಡ್‌

 • 15.94 ಕೋಟಿ ರೂಪಾಯಿಗೆ ಮಾರಾಟ

 • ಒಟ್ಟು ಮೌಲ್ಯದ ಶೇಕಡಾ ಹತ್ತು ಪಾವತಿ

 • ಬಡ್ಡಿ ಮೊತ್ತ 65. 81 ಲಕ್ಷ ನಷ್ಟ

ಟೆಲಿವಿಷನ್‌ ಪ್ರಸಾರದ ಹಕ್ಕುಗಳನ್ನು ಸಂಘಟನಾ ಸಮಿತಿ ನೆಟ್‌ವರ್ಕ್‌ ಟೆನ್ ಆಸ್ಟ್ರೇಲಿಯಾ ಮತ್ತು ಟಿವಿ ನ್ಯೂಜಿಲೆಂಡ್‌ಗೆ 15.94 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈ ಕುರಿತ ದಾಖಲಾತಿಗೆ ಜನವರಿ 2008 ರಲ್ಲಿ ಸಹಿ ಹಾಕಲಾಗಿದೆ. ಇದರ ಪ್ರಕಾರ, ಈ ಎರಡೂ ಕಂಪೆನಿಗಳು  ಪ್ರಸಾರ ಹಕ್ಕಿನ ಒಟ್ಟು ಮೌಲ್ಯದ ಶೇಕಡಾ 10 ರಷ್ಟು ಮೊತ್ತವನ್ನು ಕೂಡಲೇ ಪಾವತಿ ಮಾಡಿದೆ. ಇದಾಗಿ 5 ತಿಂಗಳಾದ್ರೂ ಸಂಘಟನಾ ಸಮಿತಿ ಇನ್‌ವಾಯ್ಸ್‌  ಸಿದ್ದಪಡಿಸಿರಲಿಲ್ಲ. ಇದರಿಂದ ಒಟ್ಟು ಮೊತ್ತದ  ಬಡ್ಡಿ ಮೊತ್ತ  ಅಂದಾಜು 65.81 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.  ಸಿಎಜಿ ತನ್ನ ಮಧ್ಯಂತರ ವರದಿಯಲ್ಲೇ ಇನ್ನಷ್ಟು ಅಂಶಗಳನ್ನು ಬಹಿರಂಗಗೊಳಿಸಿದೆ. ಎಲ್ಲವೂ ಸೂಕ್ಷ್ಮ ವಿಚಾರಗಳಾಗಿದ್ದು, ಸಂಘಟನಾ ಸಮಿತಿಯ ಆಡಳಿತ ವೈಫಲ್ಯಗಳನ್ನು ಹೊರಹಾಕಿದೆ.

ಸಿಎಜಿ ವರದಿ ಪ್ರಮುಖ ಅಂಶಗಳು

 • ಸಲಹೆಗಾರರ ಅವೈಜ್ಞಾನಿಕ ನೇಮಕಾತಿ

 • 15 ಸಲಹೆಗಾರರನ್ನು ನೇಮಕ ಮಾಡಿದ ಕಲ್ಮಾಡಿ

 • ವೇತನ ತಲಾ 35 ಸಾವಿರದಿಂದ 85 ಸಾವಿರ ರೂಪಾಯಿ

 • ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಎಚ್‌‌ಆರ್‌ಎ ಪಾವತಿ

 • ಬಾಡಿಗೆ ವಾಹನಗಳ ಸೇವೆ

ಗೇಮ್ಸ್‌ ನ ಸಂಘಟನಾ ಸಮಿತಿ ತನ್ನ ಸಿಬ್ಬಂದಿಗಳ ನೇಮಕ ವಿಚಾರದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿದೆ. ಅದ್ರಲ್ಲೂ ಸಂಘಟನಾ ಸಮಿತಿ ಅಧ್ಯಕ್ಷ ಕಲ್ಮಾಡಿ, ಎರಡು ವರ್ಷದ ಅವಧಿಯಲ್ಲಿ 15 ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಇವರ ವೇತನ ತಲಾ 35 ಸಾವಿರ ದಿಂದ 85 ಸಾವಿರ ರೂಪಾಯಿ  ತನಕ ನಿಗದಿಯಾಗಿದೆ. ಇದಲ್ದೇ, ಈಗಾಗ್ಲೇ ಅಮಾನತುಗೊಂಡಿರುವ ಅಧಿಕಾರಿ ಜಯಚಂದ್ರನ್‌ಗೆ ನಿಗದಿಯಾಗಿದ್ದ ಹೌಸ್‌ ರೆಂಟ್‌ ಎಲೋವೆನ್ಸ್‌ 22 ಸಾವಿರ ರೂಪಾಯಿ. ಆದ್ರೆ, ಪಾವತಿಯಾಗುತ್ತಿದ್ದುದು 40 ಸಾವಿರ ರೂಪಾಯಿ. ಬಾಡಿಗೆ ವಾಹನಗಳ ಸೇವೆ ಪಡೆದುಕೊಳ್ಳುವಲ್ಲಿ ಕೂಡಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. 2007-08 ನೇ ಹಣಕಾಸು ವರ್ಷದಲ್ಲಿ ಕೇವಲ ಕಾರುಗಳ ಬಾಡಿಗೆಯಾಗಿ 59, 82,660 ರೂಪಾಯಿ  ಪಾವತಿಯಾಗಿದೆ.

ಇಲ್ಲಿ ಉಲ್ಲೇಖಿಸಿರೋದು ಕೇವಲ ಕೆಲವೇ ಅಂಶಗಳು. ಆದ್ರೆ, ಇನ್ನಷ್ಟು ಅಂಶಗಳನ್ನು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸುವಾಗ ಅನುಸರಿಸಬೇಕಾದ ಅಂಶಗಳನ್ನು ಉಲ್ಲಂಘಿಸಿರೋದು ಜಾಣತನ ಎನ್ನಬೇಕೋ ಅಥವಾ ಮುಟ್ಟಾಳತನ ಎನ್ನಬೇಕೋ? ಗೊತ್ತಿಲ್ಲ. ಆದ್ರೆ, ಹಗರಣಗಳ ಉರುಳು ಸಂಘಟನಾ ಸಮಿತಿ ಅಧ್ಯಕ್ಷ ಕಲ್ಮಾಡಿ ಕೊರಳಿಗೆ ನಿಧಾನವಾಗಿ ಬಿಗಿಯುತ್ತಿರೋದಂತೂ ಸತ್ಯ.

Leave a Reply

Your email address will not be published. Required fields are marked *