ಕ್ರೀಡಾಳುಗಳಿಗೆ ತವರು ನೆಲ ಪ್ಲಸ್ ಪಾಯಿಂಟ್‌ ಆಗತ್ತಾ ..?

ಕಾಮನ್ ವೆಲ್ತ್ ಗೇಮ್ಸ್ ಅಕ್ಟೋಬರ್‌ ತಿಂಗಳಲ್ಲಿ ಭಾರತದಲ್ಲಿ ನಡೆಯಲಿದೆ. ಭಾರತೀಯ ಕ್ರೀಡಾಳುಗಳಿಗೆ ತವರು ನೆಲದಲ್ಲಿ ಆಡುವ ಅವಕಾಶ. ಇದು ಕ್ರೀಡಾಳುಗಳಿಗೆ ಪ್ಲಸ್‌ ಪಾಯಿಂಟ್‌. ಸಾಕಷ್ಟು ಮೆಡಲ್ ಗೆಲ್ಲೋದು ಗ್ಯಾರೆಂಟಿ. ಇದೆಲ್ಲ ನಮ್ಮ ನಿಮ್ಮ ಲೆಕ್ಕಾಚಾರ. ಆದ್ರೆ, ಈಗ ಇರೋ ಪರಿಸ್ಥಿತಿಯಲ್ಲಿ ಕ್ರೀಡಾಳುಗಳಿಗೆ ತವರು ನೆಲದ ಗೇಮ್ಸ್ ಪ್ಲಸ್ ಪಾಯಿಂಟ್‌ ಆಗತ್ತಾ ಅನ್ನೋ ಆತಂಕ ಎದುರಾಗಿದೆ.

ಕಾಮನ್ ವೆಲ್ತ್‌ ಗೇಮ್ಸ್ ಇನ್ನೇನು ನೆತ್ತಿ ಮೇಲೆ ಇದೆ. ನಾವೀಗ ಹೋರಾಟ ನಡೆಸಬೇಕಿದೆ. ಹೋರಾಡಿ ಗೆಲ್ಲಬೇಕಾಗಿದೆ. ಪದಕ ಪಡೆಯಬೇಕಾಗಿದೆ. ಯಾಕೆಂದ್ರೆ ಈ ಸವಾಲು ನಮ್ಮ ಉಸಿರಿನ ಪ್ರಶ್ನೆ. ದೇಶದ ಘನತೆ, ಪ್ರತಿಷ್ಠೆಯ ವಿಷಯ. ಇಂತಹ ಉದಾತ್ತ ಗುರಿ, ಉದ್ದೇಶ ಇಟ್ಕೊಂಡಿರೋ ಕ್ರೀಡಾಳಗಳು ಮನೆ ಮಠ, ಊಟ ತಿಂಡಿ ಮರೆತು ಅಭ್ಯಾಸ ಮಾಡಬೇಕು ಅನ್ನೋ ಕನಸು ಕಾಣ್ತಿದ್ರು. ಆದ್ರೆ, ಈಗ ನಡೀತಿರೋದು ಮಾತ್ರ ದುರಂತ…

ಓಡೋದಕ್ಕೆ ಟ್ರಾಕ್ ಇಲ್ಲ. ಅಭ್ಯಾಸ ಮಾಡೋಕೆ ಕೋರ್ಟ್ ಇಲ್ಲ. ಈಜೋದಕ್ಕೆ ಸ್ವಿಮ್ಮಿಂಗ್ ಪೂಲ್ ಇಲ್ಲ. ಕೈಯಲ್ಲಿ ಹಾಕಿ ಸ್ಟಿಕ್ ಇದೆ. ಆಡೋದಕ್ಕೆ ಸ್ಟೇಡಿಯಂ ಇಲ್ಲ. ಬಂದೂಕು ಇದೆ. ಆದ್ರೆ ಶೂಟ್‌ ಮಾಡೋಕೆ ರೇಂಜ್ ಇಲ್ಲ. ಗುಂಡಿಗೆಯಲ್ಲಿ ಧಮ್ ಇದೆ. ಆದ್ರೆ ಬಾಕ್ಸಿಂಗ್ ರಿಂಗ್ ಇಲ್ಲ. ಹೀಗೆ ಕ್ರೀಡಾಳುಗಳು ಮೈದಾನದ ಹೊರಗೆ ಆಯೋಜಕರ ಎದುರು ಸೋತಿದ್ದಾರೆ. ಕೋಟಿ ಕೋಟಿ ರೂಪಾಯಿಗಿಲ್ಲಿ ಬೆಲೆಯೇ ಇಲ್ಲ. ಘಟಾನುಘಟಿ ಆಯೋಜಕರ ಅವ್ಯವಾಹರಗಳ ನಡುವೆ ಕ್ರೀಡಾಳುಗಳ ಕ್ರೀಡಾ ಚೀಲ ಖಾಲಿಯಾಗೇ ಉಳಿದಿದೆ.

ಎಲ್ಲಿ ಹಾಕಿ ಅಭ್ಯಾಸ ನಡೀಬೇಕಿತ್ತೋ ಅಲ್ಲಿ ಕಾಂಕ್ರೀಟ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಎಲ್ಲಿ ಸೈಕ್ಲಿಂಗ್ ಅಭ್ಯಾಸ ನಡೀ ಬೇಕಿತ್ತೋ ಅಲ್ಲಿ ಮಳೆ ನೀರು ತುಂಬಿಕೊಂಡಿದೆ. ಎಲ್ಲಿ ಕಾಮಗಾರಿ ಪೂರ್ಣಗೊಂಡಿದೆಯೋ ಅಲ್ಲಿ ಮಾಡು ಸೋರತೊಡಗಿದೆ. ಒಲಿಂಪಿಕ್‌ ಬಿಟ್ರೆ ಅಷ್ಟೇ ದೊಡ್ಡ ಇವೆಂಟ್‌ ಕಾಮನ್ ವೆಲ್ತ್. ಇದಕ್ಕೆ ಸಾಕಷ್ಟು ತಯಾರಿ ನಡೆಸಬೇಕಿತ್ತು. ಆದ್ರೆ, ಈ ಕ್ರೀಡಾಕೂಟಕ್ಕೆ ಇನ್ನು ಎರಡು ತಿಂಗಳು ಕೂಡಾ ಬಾಕಿ ಉಳಿದಿಲ್ಲ. ಸ್ಟೇಡಿಯಂ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ.

ಆಯೋಜಕರು ಈ ಹಿಂದೆ ಹೇಳಿದ ಪ್ರಕಾರ, ಆರು ತಿಂಗಳ ಹಿಂದೆಯೇ ಇದು ಪೂರ್ಣಗೊಳ್ಳಬೇಕಿತ್ತು. ಕ್ರೀಡಾಳುಗಳಿಗೆ ಅಭ್ಯಾಸಕ್ಕೆ ಸಿಗಬೇಕಿತ್ತು. ಆದ್ರೆ, ತವರು ನೆಲದ ಸ್ಟೇಡಿಯಂನ ಲಾಭ ಪಡ್ಕೊಳ್ತೇವೆ ಅನ್ನೋ ಕ್ರೀಡಾಳುಗಳ ಕನಸು ಕನಸಾಗಿಯೇ ಉಳಿಯತ್ತಾ ಅನ್ನೋ ಸಂಶಯ ಕಾಡ್ತಿದೆ. ಕಾಮನ್‌ ವೆಲ್ತ್ ಗೇಮ್ಸ್‌ ಗೂ ಮೊದಲೇ ಆಯೋಜಕರ ಆಟಕ್ಕೆ ಕ್ರೀಡಾಳುಗಳ ಭವಿಷ್ಯ ಮಸುಕಾಗಿದೆ. ಆಯೋಜಕರಿಂದ ಇದಕ್ಕೆ ಬೆಲೆ ಕಟ್ಟೋಕೆ ಸಾಧ್ಯವೇ ?

Leave a Reply

Your email address will not be published. Required fields are marked *