ಕ್ರೀಡಾ ಬಾಳಿಗೆ ಕವಿದ “ಮಂಜು”

ಕ್ರೀಡೆಗೆ ಸರಿಯಾದ ಪ್ರೋತ್ಸಾಹ ಸಿಗ್ತಾ ಇಲ್ಲ. ಕ್ರೀಡಾ ಪ್ರತಿಭೆಗಳು ಕಮರಿ ಹೋಗ್ತಾ ಇವೆ. ಕ್ರೀಡಾ ಖೋಟ ಇದ್ರೂ ಕೆಲಸ ಇಲ್ಲ.. ಹೀಗೆ ಕ್ರೀಡೆಯ ಅವಗಣನೆಯ ಸುದ್ದಿ ಪ್ರತಿನಿತ್ಯ ಕೇಳ್ತಾ ಇರ್ತೇವೆ. ಈ ಮಾತು ಈಗ್ಯಾಕೆ ಅಂದ್ರೆ, ದೊಡ್ಡವರ ಬಾಯಿ ಮಾತು ಆಶ್ವಾಸನೆ ಅಂತ ಅನಿಸಿದ್ರೆ… ಆ ಆಶ್ವಾಸನೆ ಈಡೇರದೇ ಹೋದ್ರೆ… ಪರಿಣಾಮ ಏನಾದೀತು ? ಕ್ರೀಡಾಪಟುವಿನ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರೀತು? ಕ್ರೀಡಾ ಪ್ರತಿಭೆಗೆ ಉತ್ತೇಜನ ಸಿಕ್ಕಿದಂತಾದೀತೇ ಅಥವಾ ಪ್ರತಿಭೆಯನ್ನು ಚಿಗುರಿನಲ್ಲೇ ಚಿವುಟಿದಂತಾಗುತ್ತಾ ? ಇಂಥದ್ದೇ ಒಂದು ಘಟನೆ ಚಿಂತೆಗೀಡು ಮಾಡಿದೆ.

****

ನನ್ನ ಸಹೋದ್ಯೋಗಿ ಒಬ್ರು ಕೇಳಿದ್ರು… ನೀವು ಕ್ರೀಡಾ ವರದಿ ಮಾಡ್ತೀರಲ್ವಾ ?  ನಿಮಗೊಂದು ಸುದ್ದಿ ಕೊಡ್ತೇನೆ ಮಾಡ್ತೀರಾ ?

ಏನು ಅಂತ ಕೇಳಿದೆ ?

ಕೆಲವು ದಿನಗಳಿಂದ ಒಬ್ರು ಸಖತ್ ತಲೆ ತಿಂತಿದ್ದಾರೆ… ಅವರಿಗೆ ನಿಮ್ ನಂಬರ್ ಕೊಡ್ಲಾ ? ಅಂತ ಕೇಳಿದ್ರು.

ಹಾಗೆ ನಂಬರ್ ತಗೊಂಡು ಅವ್ರಿಗೆ ಕೊಟ್ರು. ಮರುದಿನವೇ ಶ್ರೀನಗರದಿಂದ ಒಬ್ರ ಕರೆ ಮಾಡಿದ್ರು..

ಅವ್ರು ಹೇಳಿದ್ದು ಇಷ್ಟೇ… “ಸರ್… ನಾನು ಜಗದೀಶಯ್ಯ ಅಂತ… ನನ್ನ ಮಗಳು ಮಂಜುಶ್ರೀ ಬ್ಯಾಡ್ಮಿಂಟನ್ ಚೆನ್ನಾಗಿ ಆಡ್ತಾಳೆ.. ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು 9 ಬಾರಿ ಪ್ರತಿನಿಧಿಸಿದ್ದಾಳೆ. ಒಂಬತ್ತು ಸಲ ಕೂಡಾ ಪದಕ ಗೆದ್ದಿದ್ದಾಳೆ. ಕಳೆದ ವರ್ಷ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಕೂಡಾ ಕೊಟ್ರು. ಮುಖ್ಯಮಂತ್ರಿ ಯಡಿಯೂರಪ್ಪನವರೇ ಖುದ್ದು ಈ ಪ್ರಶಸ್ತಿ ನೀಡಿದ್ರು.  ಆಗ, ಮಂಜುಶ್ರೀಯ ಪ್ರೋಫೈಲ್‌ ನೋಡಿದ  ಮುಖ್ಯಮಂತ್ರಿ, ಪದವಿ ಮುಗಿಸಿಕೊಂಡು ಬನ್ನಿ ಸರಕಾರಿ ಕೆಲಸ ಕೊಡಿಸ್ತೇನೆ ಎಂದು ಆಶ್ವಾಸನೆ ನೀಡಿದ್ರು. ಬಿ.ಕಾಂ ಪದವಿ ಮುಗಿಸಿ ಕೆಲಸ ಕೇಳ್ಕೊಂಡು ಹೋದ್ರೆ.. ಮುಖ್ಯಮಂತ್ರಿ ತಮ್ಮ ಮಾತು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ರು. ತಮ್ಮ ಸಹಾಯಕರಿಗೆ ಮಂಜುಶ್ರೀ ಯ ಕೆಲಸದ ಅರ್ಜಿಯನ್ನು ಕೊಟ್ಟು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ರು. ಆದ್ರೆ, ಅದು ಸೇರಿದ್ದು ಕಸದ ಬುಟ್ಟಿಯನ್ನು..

ಇಷ್ಟು ಹೇಳಿ ನಿಟ್ಟುಸಿರು ಬಿಟ್ಟ ಜಗದೀಶಯ್ಯ. ಮತ್ತೆ ಮಾತು ಮುಂದುವರಿಸಿದ್ರು. ಇಷ್ಟಾದ್ರೆ ಪರವಾಗಿರಲಿಲ್ಲ. ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿ ನೋಡಿ ಕ್ರೀಡಾ ಸಚಿವರಾಗಿದ್ದ ಗೂಳಿ ಹಟ್ಟಿ ಶೇಖರ್ ನಮ್ಮನ್ನು ಬರ ಹೇಳಿದ್ರು. ಅಲ್ಲಿಂದ ಜವಳಿ ನಿಗಮದ ಅಧ್ಯಕ್ಷ ರಿಗೆ ಫೋನ್ ಮಾಡಿ ಕೆಲಸ ಕೊಡುವಂತೆ ಹೇಳಿ ನಮ್ಮನ್ನು ಅಲ್ಲಿಗೆ ಕಳುಹಿಸಿದ್ರು. ಅಲ್ಲೂ ಅಂಥದ್ದೇ  ಪರಿಸ್ಥಿತಿ ಎದುರಾಯ್ತು. ಈಗ ನಿಮಗೆ ಫೋನ್ ಮಾಡಿದ್ದೇನೆ ? ಏನಾದ್ರೂ ಮಾಡಿ ಸರ್ … ಅಂದ್ರು…

ನಾಳೆ ಬರ್ತೇನೆ ಎಂದು ನಾನೂ ಆಶ್ವಾಸನೆ ಕೊಟ್ಟೆ… ಅವರ ಬಳಿ ಮುಖ್ಯಮಂತ್ರಿ  ಭರವಸೆ ನೀಡಿದ್ದಕ್ಕೆ ಏನಾದ್ರೂ ದಾಖಲೆ ಇರಬಹುದು ಅಂದ್ಕೊಂಡೆ. ಆದ್ರೆ, ಅವರ ಮನೆಗೆ ಭೇಟಿ ನೀಡಿದ ಬಳಿಕ ನನಗೆ ಮನವರಿಕೆ ಆಗಿದ್ದೇ ಬೇರೆ…

ಶ್ರೀನಗರ ಬಸ್‌ ನಿಲ್ದಾಣದ ಸಮೀದಲ್ಲೇ ಇರುವ ಮನೆಯಲ್ಲಿ ಮಂಜುಶ್ರೀ ಅನ್ನುವ ಉದಯೋನ್ಮುಖ ಬ್ಯಾಡ್ಮಿಂಟನ್‌ ಆಟಗಾರ್ತಿಯ ವಾಸ. ಅಪ್ಪ ಅಮ್ಮನ ಮುದ್ದಿನ ಮಗಳು.. ಕೇವಲ ಆಟದಲ್ಲಷ್ಟೇ ಅಲ್ಲ ಓದಿನಲ್ಲೂ ಚುರುಕಾಗಿದ್ದೇನೆ ಅನ್ನೋದನ್ನು ಸಾಬೀತು ಮಾಡಿದ್ದಾಳೆ. ರಾಷ್ಟ್ರೀಯಮಟ್ಟದ ಬಾಲ್‌ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ 9 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದ ಮಂಜುಶ್ರೀ, ಬಿ.ಕಾಂ ಪದವಿಯಲ್ಲಿ ಶೇ. 72 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ.

ನಾವು ಹೋದ ಕೂಡಲೇ ಹೊರ ಬಂದ ಮಂಜುಶ್ರೀ ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತುಕೊಂಡಳು. ತಂದೆ ಜಗದೀಶಯ್ಯ ಮತ್ತೆ ಫೋನ್‌ನಲ್ಲಿ ಹೇಳಿದ್ದನ್ನೇ ಹೇಳೋಕೆ ಆರಂಭಿಸಿದ್ರು. ಈ ಸಂದರ್ಭದಲ್ಲೇ ಮಂಜುಶ್ರೀ ಮಾತಾಡ್ತಾಳಾ ಅಂತ ನೋಡಿದ್ರೆ… ಚಿಂತೆಗೀಡಾದಂತೆ ಕಂಡಿತ್ತು ಆಕೆಯ ಮುಖ.

ಏನಮ್ಮ ? ಏನಾಯ್ತು ಒಂದಿಷ್ಟು ವಿವರ ಕೊಡ್ತೀರಾ ಅಂತ ಕೇಳಿದೆ.. ಅಷ್ಟು ಕೇಳಿದ್ದೇ ತಡ..

ನೋಡಿ ಸರ್.. ಮುಖ್ಯಮಂತ್ರಿ  ಆಶ್ವಾಸನೆ ಕೊಟ್ಟಿದೇನೋ ನಿಜ. ಆದ್ರೆ, ಅದಕ್ಕೆ ಯಾವುದೇ ದಾಖಲೆಗಳಿಲ್ಲ.. ನಾಲ್ಕೈದು ತಿಂಗಳಿಂದ ಸರಕಾರಿ ಕೆಲಸ ಅಂತ ಅಲೆದು ಅಲೆದು ಸಾಕಾಗಿದೆ. ಪ್ರೈವೇಟ್‌ನಲ್ಲಿ ಕೆಲಸ ಹುಡುಕೋಣ ಅಂತ ನೋಡಿದ್ರೆ,, ಅಪ್ಪ ಅಮ್ಮ ಬೇಡ ಅಂತಾರೆ.. ಅವ್ರಿಗೆ ಮುಖ್ಯಮಂತ್ರಿ ಮಾತಿನ ಮೇಲೆ ಇನ್ನಿಲ್ಲದ ನಂಬಿಕೆ. ಕ್ರೀಡಾ ಸಚಿವರಾಗಿದ್ದ ಗೂಳಿ ಹಟ್ಟಿ ಶೇಖರ್ ಬಳಿಗೂ ಹೋಗಿದ್ವಿ.. ಅಲ್ಲೂ ಅವಮಾನ.. ಬೇಡ್ವೇ ಬೇಡ.. ಕೆಲಸಾ ಅಂತ ಅಂದ್ಕೊಂಡುಬಿಟ್ಟೆ… ಜೊತೆಗೆ ಇಷ್ಟೆಲ್ಲಾ ಕ್ರೀಡಾ ಸಾಧನೆ ಇದ್ರೂ, ಅದಕ್ಕೊಂದು ಪ್ರತಿಫಲ ಇಲ್ಲ. ಖರ್ಚು ಜಾಸ್ತಿ ಯಾಕೆ ಬೇಕು ಅಂತ ನಿರಾಸೆ ಕೂಡಾ ಕಾಡಿದೆ.. ಈಗ ನಾನು ಆಡೋದನ್ನೆ ಬಿಟ್ಟು ಬಿಟ್ಟಿದ್ದೇನೆ… ಸಾಕಾಯ್ತು ನನಗೆ ಏನೂ ಬೇಡ…. ಅಂತ ಕಣ್ಣೀರು ಹಾಕಿ ಬಿಟ್ಟಳು…

ಈಗ ಶಾಕ್ ಆಗೋ ಸರದಿ ನನ್ನದು.. ಏನೋ ಸುದ್ದಿ ಮಾಡಿ ಸಹಾಯ ಆಗತ್ತಾ ನೋಡೋಣ ಅಂತ ಬಂದ್ರೆ… ಈಕೆ ಆಡೋದನ್ನೇ ಬಿಟ್ಟು ನಾಲ್ಕಾರು ತಿಂಗಳಾಗಿದೆ. ಕ್ರೀಡಾ ಪ್ರತಿಭೆಯೊಂದು ರಾಜಕಾರಣಿಗಳ ಬಾಯಿಮಾತಿನ ಆಶ್ವಾಸನೆಗೆ ಕಮರಿ ಹೋಗಿದೆ. ಈಗೇನು ಮಾಡೋದು ಅನ್ನೋ ಪ್ರಶ್ನೆ ನನ್ನ ಮುಂದಿತ್ತು..

ರಾಜಕಾರಣಿಗಳ ಮಾತನ್ನು ಜನ ಎಷ್ಟು ಸುಲಭವಾಗಿ ನಂಬ್ತಾರೆ… ಅದ್ರಲ್ಲೂ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನದಲ್ಲಿರುವವರು ಆಡುವ ಪ್ರತಿ ಮಾತಿಗೂ ಬೆಲೆ ಕೊಡ್ತಾರೆ ಜನಸಾಮಾನ್ಯರು.. ಅದನ್ನು ಆ ಉನ್ನತ ಸ್ಥಾನದಲ್ಲಿರುವವರು ಎಷ್ಟು ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ.. ಅದಕ್ಕೇ ಇರಬೇಕು ಮಾತು ಆಡಿದ್ರೆ ಹೋಯಿತು….  ಮುತ್ತು ಒಡೆದ್ರೆ ಹೋಯ್ತು ಅಂತ ಹೇಳೋದು..

ಮಂಜುಶ್ರೀಗೆ ಒಂದಿಷ್ಟು ಧೈರ್ಯ ಹೇಳಿ.. ಆಟದ ಅಭ್ಯಾಸ ಮುಂದುವರಿಸುವಂತೆ ಮನವೊಲಿಸೋದಕ್ಕೆ ಸ್ವಲ್ಪ ಹೊತ್ತಾಯ್ತು.. ಜೀವನ ಅಂದ್ರೆ ಅದೊಂದು ಹೋರಾಟ.. ಸೋಲು ಗೆಲುವು ಇದ್ದೇ ಇರತ್ತೆ. ಸೋತಾಗ ಕುಗ್ಗದೇ ಮುನ್ನುಗ್ಗಿದರೆ ಮಾತ್ರ ಗೆಲುವಿನ ಗುರಿ ತಲುಪೋದಕ್ಕೆ ಸಾಧ್ಯ ಅನ್ನೋದನ್ನು ಮನವರಿಕೆ ಮಾಡಿ ಕೊಟ್ಟೆ. ಕೊನೆಗೆ  ಮಂಜುಶ್ರೀ ಆಟದ ಅಭ್ಯಾಸ ಮುಂದುವರಿಸ್ತೇನೆ ಎಂದು ಹೇಳಿದ್ಳು..

***

ಅಬ್ಬಾ ಕೊಂಚ ನೆಮ್ಮದಿಯಾಯ್ತು… ಸದ್ಯ 72 ಶೇಕಡಾ ಅಂಕ ಪಡೆದು ಬಿ.ಕಾಂ ಉತ್ತೀರ್ಣಳಾಗಿರೋ ಮಂಜುಶ್ರೀ, ಟಾಲಿ ಕಲಿತಿದ್ದಾಳೆ. ಈಗ ಆಕೆಗೊಂದು ಕೆಲಸದ ಅವಶ್ಯಕತೆ ಇದೆ.. ಅದಕ್ಕೆ ಯಾರದ್ದಾದ್ರೂ ನೆರವು ಪಡೆಯಬೇಕಿದೆ.. ಆ ನೆರವು ನಿಮ್ಮ ಮೂಲಕ ಬರಬಹುದೇನೋ ಅನ್ನೋ  ನಿರೀಕ್ಷೆ ನನ್ನದು…

0 thoughts on “ಕ್ರೀಡಾ ಬಾಳಿಗೆ ಕವಿದ “ಮಂಜು”

  1. ಉಮೇಶ್,
    ಮಂಜುಶ್ರಿಗೆ ಮತ್ತೆ ಆಡುವಂತೆ ಹುರಿದುಂಬಿಸಿ ಒಳ್ಳೆ ಕೆಲಸ ಮಾಡಿದ್ದೀರಿ.ಅವಳ ಜಾತಕವನ್ನ ನನಗೆ ಕಳಿಸಿಕೊಡಿ,ಗೆಳೆಯರ ಬಳಗದಲ್ಲಿ ಪ್ರಯತ್ನಿಸುತ್ತೇನೆ.ಹಾಗೆ ನಿಮ್ಮ ಬ್ಲಾಗ್ನ ಲಿಂಕ್ ಅನ್ನ ಸರ್ಕಾರದ ಮಂತ್ರಿಯೋಬ್ಬರಿಗೆ ಮೇಲ್ ಮಾಡಿದೆ.ನೋಡೋಣ.
    ರಾಕೇಶ್ ಶೆಟ್ಟಿ 🙂

    1. ಧನ್ಯವಾದ ಗೆಳೆಯರೇ… ನಿಮ್ಮ ಮಿಂಚಂಚೆ ಬೇಕಿತ್ತು…ಆಕೆಯ ರೆಸ್ಯೂಮ್ ಕಳುಹಿಸುವ ಪ್ರಯತ್ನಕ್ಕಾಗಿ…

Leave a Reply

Your email address will not be published. Required fields are marked *