ನಾ ಕಂಡ ಮೃತ್ಯು…

 

foto courtesy - gifninja

ಮರಣ ಅನ್ನೋ ಶಬ್ಧವೇ ಎಲ್ಲರಲ್ಲೂ ಭೀತಿ ಹುಟ್ಟಿಸತ್ತೆ. ಪ್ರತಿ ದಿನ ಯಾವುದೇ ಪತ್ರಿಕೆ ನೋಡಿದ್ರೂ ಸಾವಿನ ಸುದ್ದಿ ಇಲ್ಲದ ದಿನವೇ ಇಲ್ಲ. ಟಿ.ವಿ.ಚಾನೆಲ್‌ಗಳಲ್ಲಂತೂ ಅಪರಾಧ ಸುದ್ದಿಗಳದ್ದೇ ವೈಭವ.. ಅಂದ ಮೇಲೆ ಮೃತ್ಯುವಿನ ಕುರಿತು ಪ್ರತ್ಯೇಕ ಹೇಳಬೇಕಿಲ್ಲ. ಆದರೂ ಒಂದು ಜಿಜ್ಞಾಸೆಯ ಎಳೆಯೊಂದು ಹುಟ್ಟಿತ್ತು ಆ ಯುವಕನ ಮನದಲ್ಲಿ…
***
ಹೌದು ನನಗಾಗ ಆರೋ ಏಳೋ ವರ್ಷ ವಯಸ್ಸಿರಬೇಕು. ಈ ಪೀಠಿಕೆ ಯಾಕೆ ಅಂದ್ರೆ, ಸಾವಿನ ಬಗ್ಗೆ ಯಾವ ಕಲ್ಪನೆ ಕೂಡಾ ಬಾರದ ವಯಸ್ಸದು.    ಹುಟ್ಟು ಸಾವಿನ ಬಗ್ಗೆ ಮಾತುಗಳಲ್ಲಿ ಕೇಳಿರಬಹುದೇ ಹೊರತು ಕಣ್ಣಾರೆ ನೋಡಿರೋಕೆ ಸಾಧ್ಯವೇ ಇಲ್ಲ. ಬೆರಳಚ್ಚು ಶಾಲೆಯೊಂದನ್ನು ಅಪ್ಪ ಅಮ್ಮ ನಡೆಸುತ್ತಿದ್ದರು. ಈ ಶಾಲೆ, ಮನೆ ಎಲ್ಲವೂ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇತ್ತು. ಶಾಲೆ ಇರೋ ಕಟ್ಟಡದ ಮಾಲಿಕರ ಮನೆ ಸ್ವಂತ ಮನೆಯಂತಾಗಿತ್ತು. ಶಾಲೆ ಕಟ್ಟಡದ ಮಾಲಿಕ ಇಸ್ಲಾಂ ಧರ್ಮದ ಅನುಯಾಯಿ. ಬಾಡಿಗೆ ಮನೆ ಮಾಲಿಕ ವೈದ್ಯ ವೃತ್ತಿ ನಡೆಸುತ್ತಿದ್ದ ಮಲೆಯಾಳಿ. ಮಾಲಿಕರು ಎಂದ ಮೇಲೆ ಇಬ್ಬರ ಮನೆಯಲ್ಲೂ ಟಿ.ವಿ. ಇತ್ತು ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ ತಾನೆ.
ಅದು ೮೦ರ ದಶಕ. ಪ್ರತಿ ಭಾನುವಾರ ಬೆಳಗ್ಗೆ ೯ ಗಂಟೆಯಿಂದ ೧೦ ಗಂಟೆ ತನಕ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆ ಇರ್ತಾ ಇತ್ತು. ಕಾರಣ ಇಷ್ಟೇ.. ಮಹಾಭಾರತ ಸೀರಿಯಲ್ ಪ್ರಸಾರ ಆಗ್ತಾ ಇದ್ದ ಸಮಯವದು.. ಟಿವಿ ಇದ್ದ ಮನೆಗಳ ಸಂಖ್ಯೆ ಕೂಡಾ ಕಡಿಮೆ. ಆದ್ರೂ.. ಜನ ಎಷ್ಟು ಮರುಳಾಗಿದ್ರೂ ಅಂದ್ರೆ.. ಈ ಬೀದೀಲಿ ಕರೆಂಟ್ ಹೋದ್ರೆ ಪಕ್ಕದ ಬೀದೀಲಿ ಟಿವಿ ಇರೋ ಮನೆ ಎಲ್ಲಿದೆ ಎಂದು ಹುಡುಕಿ ಹೋಗುತ್ತಿದ್ದರು.
ಪ್ರತಿ ಭಾನುವಾರ ಬೆಳಗ್ಗೆ ಮನೆ ಮಾಲಿಕರ ಮನೆಯ ತುಂಬಾ ಜನ ಸೇರುತ್ತಿದ್ದರು. ಟಿ.ವಿ. ನೋಡೋದೋದಲ್ಲದೇ ಮಹಾಭಾರತದ ಕತೆಯೇ ಮಾತುಕತೆಯ ವಿಚಾರವಾಗುತ್ತಿತ್ತು. ಪ್ರತಿಯೊಬ್ಬರಿಗೂ ಪರ್ಮನೆಂಟ್ ಸೀಟ್‌.. ಬಹುತೇಕ ಸಂದರ್ಭದಲ್ಲಿ ನಾನು ಹೋಗುತ್ತಿದ್ದುದು ಅಪ್ಪನ ಟೈಪ್‌ರೈಟಿಂಗ್‌  ಶಾಲೆ ಇದ್ದ ಕಟ್ಟಡದ ಮಾಲಿಕನ ಮನೆಗೆ. ಹಾಗೆ ಆ ಭಾನುವಾರ ಕೂಡಾ ಹೋಗಿದ್ದೆ. ಅಲ್ಲಿ ಹೋದಾಗ, ದಢೂತಿ ದೇಹದ ಮಾಲಿಕನ ಮಗ ಕೂಡಾ ಇರ್ತಾ ಇದ್ದ. ಆತನ ವಯಸ್ಸು ೩೫ರಿಂದ ೪೦ರೊಳಗೆ ಇರಬಹುದು. ಒಂದ್ಸಲವಾದ್ರೂ ನನ್ನ ಮಾತನಾಡಿಸದೇ ಇರಲ್ಲ. ಅಂದೂ ಹಾಗೆಯೇ ಆಯಿತು. ನಾನು ಅವರ ಮನೆಯ ಒಳಗಡಿ ಇಡುತ್ತಿದ್ದಂತೆ ಆತ, ಅಲ್ಲಿ ನೆರೆದಿದ್ದವರನ್ನು ವಿಚಾರಿಸುತ್ತಿದ್ದ… ಟೈಪ್ ಮಾಸ್ಟರ್‌ ಕೆ ಬಚ್ಚೇ ನಹೀ ಆಯೇ ?  ನನ್ನನ್ನು ನೋಡಿ ಮುಗುಳು ನಕ್ಕ.. ಕುಳಿತು ಕೊಳ್ಳುವಂತೆ ಸೂಚಿಸಿದ. ಮಹಾಭಾರತ ಸೀರಿಯಲ್ ಆರಂಭವಾಗಿತ್ತು. ಯುದ್ಧದ ಸೀನ್ ಬರ್ತಾ ಇತ್ತು. ಬಾಣ ಬಿಟ್ಟು ಎದುರಾಳಿಗಳನ್ನು ಕೊಲ್ಲುವುದು… ಖಡ್ಗ ಹಿರಿದು ಎದುರಾಳಿಗಳ ಎದೆ ಸೀಳುವುದು… ಇತ್ಯಾದಿ ಇತ್ಯಾದಿ…
ಹಾಗೆ ಎಲ್ಲ ನೋಡಿ ವಾಪಸ್ ಮನೆಗೆ ಬಂದಾಗ. ದೊಡ್ಡಪ್ಪ ಬಂದು, ಶಲ್ಯ ಮರೆತು ವಾಪಸ್ ಹೋಗಿದ್ದರು. ಅದನ್ನು ಕೊಡೋದಕ್ಕೆ ಕೆಲವೇ ಮೀಟರುಗಳ ಅಂತರದಲ್ಲಿದ್ದ ಬಸ್‌ ನಿಲ್ಡಾಣ ಕಡೆಗೆ ಓಡಿದೆ ನಾನು.. ದೊಡ್ಡಪ್ಪನಿಗೆ ಶಲ್ಯ ಕೊಟ್ಟು ಇನ್ನೇನು ಮನೆ ಕಡೆಗೆ ಹೆಜ್ಜೆ ಹಾಕಿದ್ದೆ..
ಬಸ್‌ ನಿಲ್ದಾಣಕ್ಕೆ ಸಮೀಪವೇ ಇದ್ದ ರಿಕ್ಷಾ ನಿಲ್ದಾಣದಲ್ಲೇನೋ ಅರಚಾಟ…
“ಮುಝೆ ಚೋಡೋ ಬಾಯ್‌… ಮತ್‌ ಮಾರ‍್ನಾ…. ಅಮ್ಮಾಗೆ ಮರ್‌ಗಯಾರೇ…. ಅನ್ನೋ ಆರ್ತನಾದ ಕೇಳಿಸಿತ್ತು. ಏನಾಯ್ತು ಎಂದು ನೋಡುವಷ್ಟರಲ್ಲಿ.. ಅಂಗಡಿಗಳ ಬಾಗಿಲು ಒಂದೊಂದೆ ಮುಚ್ಚ ತೊಡಗಿದ್ದವು… ರಿಕ್ಷಾ ನಿಲ್ದಾಣ ಖಾಲಿಯಾಗಿತ್ತು… ನೆಲದ ಮೇಲೊಬ್ಬ ಬಿದ್ದು ಹೊರಳಾಡುತ್ತಿದ್ದ… ಸುತ್ತಲೂ ನೆತ್ತರ ಹೊಳೆ… ಕೈ, ಕಾಲು ತುಂಡಾಗಿ ಬಿದ್ದಿತ್ತು..  ನಾನು ನಿಂತ ಜಾಗದಿಂದ ೫೦೦ ಮೀಟರ್ ದೂರದಲ್ಲಿ ಆತ ಬಿದ್ದು ಹೊರಳಾಡುತ್ತಿದ್ದ.. ಯಾರೊಬ್ಬರೂ ಆತನ ನೆರವಿಗೆ ಮುಂದಾಗಲಿಲ್ಲ.. ಕನಿಷ್ಠ ಪಕ್ಷ ನೀರು ಕೊಡೋದಕ್ಕೂ…
ಮನದಲ್ಲಿ ತಳಮಳ… ಹತ್ತಿರ ಹೋಗೋದಕ್ಕೆ ಭಯ.. ಸಿನಿಮಾಗಳಲ್ಲಿ ರೌಡಿಗಳು ಹೊಡೆದಾಡಿದ್ದಷ್ಟೇ ನೋಡಿದ್ದೆ… ಕಣ್ ಮುಂದೆ ಇಂಥದ್ದೊಂದು ಘಟನೆ ನಿರೀಕ್ಷಿಸಿರಲಿಲ್ಲ. ಪೊಲೀಸ್‌ ಬಂದ್ರೆ ಅಪಾಯ ತಪ್ಪಿದ್ದಲ್ಲ ಎಂದು ಜನ ಓಡ್ತಾ ಇದ್ರು.. ಅವರಲ್ಲೊಬ್ಬ ನನ್ನ ಬೆನ್ನು ತಟ್ಟಿ ಪಾಯಿ ಮೋನೇ.. ಇಲ್ಲಂಗಿಲ್ ಪೊಲೀಸ್ ಕೊಂಡು ಪೋವು… (ಓಡು ಮಗನೇ… ಇಲ್ಲಾಂದ್ರೆ ಪೊಲೀಸ್ ಎತ್‌ಕೊಂಡು ಹೋಗ್ತಾರೆ…) ಎನ್ನುತ್ತಾ ಓಡಿದ್ದ…
ಭಯ ಇನ್ನಷ್ಟು ಹೆಚ್ಚಾಗಿ ಮನೆಗೆ ಓಡಿದೆ. ಅಷ್ಟರಲ್ಲಾಗಲೇ ಮನೆಗೂ ಸುದ್ದಿ ಗೊತ್ತಾಗಿ, ನನ್ನನ್ನು ಕಾಣುತ್ತಿಲ್ಲ ಎಂಬ ತಳಮಳ ಅಪ್ಪ, ಅಮ್ಮನಲ್ಲಿ ಹೆಚ್ಚಾಗಿತ್ತು. ಮನೆ ಸೇರುತ್ತಿದ್ದಂತೆ ಕಂಡದ್ದನ್ನು ವಿವರಿಸಿದೆ.. ಬೇರೆ ಯಾರಿಗೂ ಹೇಳಬೇಡ ಎಂದು ಹೇಳಿದವರೇ ಬಾಗಿಲು ಮುಚ್ಚಿದ್ರು.. ಎಲ್ಲರ ಮನೆಯ ಬಾಗಿಲು ಕಿಟಕಿ ಬಂದ್… ಘಟನೆ ನಡೆದು ಎರಡು ಗಂಟೆ ಬಳಿಕ ಒಬ್ಬೊಬ್ಬರೇ ಹೊರ ಬರ ತೊಡಗಿದ್ರು.. ಕೊಲೆಯಾದವನು ಯಾರು ? ಹತ್ಯೆ ಮಾಡಿದವರು ಯಾರು ? ಯಾಕೆ ಇತ್ಯಾದಿ ಪ್ರಶ್ನೆಗಳಿಗೆ ಪುಂಖಾನುಪುಂಖವಾಗಿ ವಿವರಗಳು ಹೊರಬರತೊಡಗಿದವು.
ಕೊನೆಗೆ ನನಗೂ ಗೊತ್ತಾಯ್ತು.. ಬೆಳಗ್ಗೆ ಟಿ.ವಿ ನೋಡಿದ ಮನೆಯಲ್ಲದ್ದ ದಢೂತಿ ದೇಹದ ಆಸಾಮಿ ಕೊಲ್ಲಲ್ಪಟ್ಟ ವ್ಯಕ್ತಿ. ಹಣಕಾಸಿನ ವ್ಯವಹಾರದಲ್ಲಿ ನಡೆದ ಮೋಸವೇ ಕೃತ್ಯಕ್ಕೆ ಕಾರಣ ಇತ್ಯಾದಿ…
****
ಹಾಗೆ ಮೊದಲ ಬಾರಿಗೆ ಮೃತ್ಯುವಿನ ಅನಾವರಣವಾಗಿತ್ತು ನನ್ನ ಕಣ್ಣಮುಂದೆ… ಆದ್ರೆ, ಆ ಅನುಭವ ಅಷ್ಟೊಂದು ಪರಿಣಾಮ ಬೀರಿರಲಿಲ್ಲ.. ಜೀವನವನ್ನೂ ಸಿನಿಮಾಕ್ಕೆ ಹೋಲಿಸಿತ್ತು ಬಾಲ್ಯದ ಆ ಮನಸ್ಸು…

Leave a Reply

Your email address will not be published. Required fields are marked *