ಪೊಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ ! ರಾಜಕಾರಣಿಗಳಿಲ್ಲಿ ಬಿಕರಿಗಿದ್ದಾರೆ..

ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿರುವವರಿಗೆ ಮತ್ತು ಹೊಸದಾಗಿ ಷೇರುವಹಿವಾಟು ಆರಂಭಿಸುತ್ತಿರುವವರಿಗೆ ಸಂತೋಷದ ಸುದ್ದಿ. ಹೊಸ ಸ್ಟಾಕ್ ಎಕ್ಸ್‍ಚೇಂಜ್ ಒಂದು ಸದ್ದಿಲ್ಲದೇ ಆರಂಭವಾಗಿ ಕಾರ್ಯನಿರ್ವಹಿಸುತ್ತಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಇದು ಕೂಡಾ ಕಾರ್ಯನಿರ್ವಹಿಸುತ್ತದೆ. ಆದರೆ ಈ ಹೊಸ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವಹಿವಾಟು ಅವಧಿ 24 ಗಂಟೆ. ಇಲ್ಲಿ ವಹಿವಾಟು ನಡೆಸುವುದಕ್ಕೆ ಅದೇ ಸ್ಟಾಕ್ ಎಕ್ಸ್ ಚೇಂಜ್ನವರೇ ಹಣ ಕೊಡುತ್ತಾರೆ. ಅರೆ ಇದಾವುದು ಅಂತ ಹುಬ್ಬೇರಿಸಬೇಡಿ. ಮುಂದೆ ಓದಿ..
psxಹೌದು.. ಇದು `ಪೊಲಿಟಿಕಲ್ ಸ್ಟಾಕ್ ಎಕ್ಸ್‍ಚೇಂಜ್’. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಂತೆಯೇ ಕಾರ್ಯನಿರ್ವಹಿಸುವ ಈ ಸ್ಟಾಕ್ ಎಕ್ಸ್‍ಚೇಂಜ್‍ನಲ್ಲಿ ಕಂಪನಿಗಳಿಲ್ಲ. ಬದಲಾಗಿ ನರೇಂದ್ರ ಮೋದಿ, ಅರವಿಂದ ಕೇಜ್ರಿವಾಲ್, ರಾಹುಲ್ ಗಾಂಧಿಯಾದಿಯಾಗಿ ರಾಜಕಾರಣಿಗಳದ್ದೇ ಕಾರುಬಾರು. ಅವರ ಷೇರುಗಳ ಖರೀದಿ, ಮಾರಾಟವೇ ಇಲ್ಲಿನ ವಹಿವಾಟು! ಲೋಕಸಭಾ ಚುನಾವಣೆಗೆ ತಿಂಗಳುಗಳು ಇರುವಾಗಲೇ ಅಂದರೆ ಜನವರಿ ಫೆಬ್ರವರಿ ಆಜುಬಾಜಿನಲ್ಲೇ ಈ ಸ್ಟಾಕ್ ಎಕ್ಸ್ ಚೇಂಜ್ ವಹಿವಾಟು ಆರಂಭಿಸಿದೆ. ಎಲ್ಲವೂ ಆನ್‍ಲೈನ್ ವಹಿವಾಟು. ಇಲ್ಲಿನ ಷೇರುಗಳ ಮೇಲೆ ಹೂಡಿಕೆ ಮಾಡಿರುವವರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ.

ವಹಿವಾಟು ನಡೆಸುವುದೆಂತು?: ಅಂದ ಹಾಗೆ ಇಲ್ಲಿ ವಹಿವಾಟು ನಡೆಸುವುದಕ್ಕೆ ನೀವು ಮಾಡಬೇಕಿರುವುದಿಷ್ಟೇ. ಇದು ಆನ್‍ಲೈನ್ ವಹಿವಾಟು ಆಗಿರುವುದರಿಂದ, http://psx.moneycontrol.com/ಅಂತರ್ಜಾಲ ತಾಣಕ್ಕೆ ಹೋಗಿ ಹೆಸರು ನೋಂದಾಯಿಸಬೇಕು ಅಷ್ಟೆ. ಆ ಮೇಲೆ ಸೈನ್ ಇನ್ ಆದ ತಕ್ಷಣವೇ ನಿಮ್ಮ ಖಾತೆಗೆ 10 ಲಕ್ಷ ರೂ. ಜಮಾ ಮಾಡುತ್ತಾರೆ. ಅದನ್ನುಪಯೋಗಿಸಿ ನೀವು ರಾಜಕಾರಣಿಗಳ ಷೇರು ಖರೀದಿಸುತ್ತಿರುವಂತೆ ಹೆಚ್ಚುವರಿ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ. ಷೇರು ಖರೀದಿ, ಮಾರಾಟದ ವಹಿವಾಟನ್ನು ಬೆಳೆಸುತ್ತಾ ನಿಮ್ಮ ಖಾತೆಯಲ್ಲಿ ಹಣ ವೃದ್ಧಿಸುವಂತೆ ಮಾಡುತ್ತಾ ಹೋಗಬಹುದು.

ಹ್ಞಾಂ..! ಹೇಳುವುದು ಮರೆತೆ ನೋಡಿ.. ಬಾಂಬೆ ಸ್ಟಾಕ್ಕಾಎಕ್ಸ್ ಚೇಂಜ್  ಕಾರ್ಯನಿರ್ವಹಿಸುವಂತೆಯೇ ಕಾರ್ಯನಿರ್ವಹಿಸುವ ಎಕ್ಸ್ ಚೇಂಜ್ ಇದು ಎಂದಷ್ಟೇ ಆರಂಭದಲ್ಲಿ ಹೇಳಿದ್ದೆ. ಈ ಪೊಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ ಗೆ ಕಚೇರಿಯೇ ಇಲ್ಲ. ಯಾಕೆಂದರೆ ಇದು ಗೇಮ್ಸ್ ಲೋಕ. ಇಲ್ಲಿ ನಡೆಯುವುದೆಲ್ಲವೂ ಆಟ. ಅದೂ ಟೈಮ್ ಪಾಸ್‍ಗಾಗಿರುವ ಆನ್‍ಲೈನ್ ಆಟ. ಆಗಲೇ ಒಂದು ಲಕ್ಷಕ್ಕೂ ಅಧಿಕ ಸದಸ್ಯರು ಈ ಆಟ ಆಡುತ್ತಿದ್ದು, ಪ್ರತಿವಾರ ಈ ಪೇಟೆಯಲ್ಲಿ ಅತ್ಯಧಿಕ ಹಣಗಳಿಸಿದವರಿಗೆ 25ಸಾವಿರ ರೂ. ಬಹುಮಾನ ಕೂಡಾ ಇದೆ. ಅದು ಅವರ ಖಾತೆಗೆ ಸೇರ್ಪಡೆಯಾಗುತ್ತದೆ.

ಹೇಗಿದೆ ಟ್ರೆಂಡ್ ?: ಇಲ್ಲೂ ನರೇಂದ್ರ ಮೋದಿಯೇ ಫ್ರಂಟ್ ರನ್ನರ್… ಈ ಲೇಖನ ಸಿದ್ಧಪಡಿಸುವ ಹೊತ್ತಿಗೆ ಅಂದರೆ ಮೊನ್ನೆ ಭಾನುವಾರ ಮೋದಿ ಷೇರಿನ ಬೆಲೆ 58485 ರೂಪಾಯಿ ಗಡಿದಾಟಿದೆ. ಪ್ರತಿಸ್ಪರ್ಧಿ ರಾಹುಲ್ ಷೇರಿನ ಬೆಲೆ ಕೇವಲ 627.10 ರೂಪಾಯಿ. ಇನ್ನು ಕಳೆದ ವರ್ಷವಷ್ಟೇ ರಾಜಕಾರಣದ ಮುಂಚೂಣಿಗೆ ದೌಡಾಯಿಸಿದ ಅರವಿಂದ ಕೇಜ್ರಿವಾಲ್‍ರ ಷೇರಿನ ಬೆಲೆ 1756.43 ರೂಪಾಯಿ ಆಗಿದೆ. ಪ್ರತಿದಿನ ಯಾವ ರಾಜಕಾರಣಿಗೆ ಎಷ್ಟು ಲೈಕ್ ಮತ್ತು ಡಿಸ್‍ಲೈಕ್ ಮತಗಳು ಸಿಗುತ್ತವೆಯೋ ಅದನ್ನಾಧರಿಸಿ ಅವರ ಷೇರು ಮೌಲ್ಯವೂ ಏರಿಳಿತ ಕಾಣುತ್ತದೆ. ಪ್ರತಿ ಗಂಟೆಗೊಮ್ಮೆ ಷೇರು ಮೌಲ್ಯ ಲೆಕ್ಕ ಹಾಕಲಾಗುತ್ತದೆ. ಒಟ್ಟಾರೆ ರಾಜಕೀಯ ಟ್ರೆಂಡ್ ಹೇಗಿದೆ ಎಂಬುದನ್ನೂ ಈ ಗೇಮ್ ಸೂಚಿಸುತ್ತದೆಯೇನೋ..

ಇನ್ನಷ್ಟು ಎಲೆಕ್ಷನ್ ಗೇಮ್ಸ್
ಪ್ರಸ್ತುತ ಚಾಲ್ತಿಯಲ್ಲಿರುವ ಎಲೆಕ್ಷನ್ ಗೇಮ್ಸ್‍ಗಳ ಪೈಕಿ ಹಾಲಿ ಚುನಾವಣಾ ಕಣದ ಟ್ರೆಂಡ್ ಸೂಚಿಸುವಂತಹ ಕೆಲವು ಆಟಗಳಿವೆ. ಅವುಗಳ ಪೈಕಿ ಮೇರಾಪಿಎಂಕೌನ್ ಪ್ರಮುಖವಾದುದು. ಉಳಿದಂತೆ ಕುರ್ಸಿ ಕ್ರಿಕೆಟ್, ಆಮ್ ಆದ್ಮಿ ರನ್ನರ್, ಮೋದಿ ರನ್, ಆ್ಯಂಗ್ರಿ ಅಣ್ಣಾ, ದ ಶೇಮ್ ಗೇಮ್ ಇತ್ಯಾದಿ ಗೇಮ್ಸ್ ಜನಮೆಚ್ಚುಗೆ ಗಳಿಸಿವೆ. ಇವುಗಳ ಪೈಕಿ ಬಹಳಷ್ಟು ಆಟಗಳು ಮೊಬೈಲ್ ಗೇಮ್ಸ್. ಆಂಡ್ರಾಯ್ಡ್ ಫೋನ್ ಇರುವಂಥವರು ಈ ಆಟಗಳ ಆ್ಯಪ್‍ಗಳನ್ನು ಡೌನ್ ಲೋಡ್ ಮಾಡಿ ಆಡಬಹುದು. ಗೂಗಲ್ ಪ್ಲೇ ವಿಭಾಗಕ್ಕೆ ಹೋದರೆ ಈ ಆ್ಯಪ್‍ಗಳನ್ನು ಡೌನ್ ಲೋಡ್ ಮಾಡಬಹುದು.

ಮೇರಾ ಪಿಎಂ ಕೌನ್: ಇದು ಕೂಡಾ ಅಷ್ಟೇ.. ಆಟ ಆಡುವವರ ಒಲವು ಯಾವ ಕಡೆಗೆ ಇದೆ ಎಂಬುದನ್ನು ವಿಶ್ಲೇಷಿಸುವುದಕ್ಕೆ ಬೇಕಾದ ದತ್ತಾಂಶಗಳನ್ನು ಸಂಸ್ಥೆಗೆ ನೀಡುತ್ತದೆ. ಇಲ್ಲಿ ನೀವು http://www.merapmkaun2014.in/ಎಂಬ ತಾಣ ಪ್ರವೇಶಿಸಿದೊಡನೆ ಆಟದ ಕುರಿತ ವಿವರಣೆ ಗಂಗ್ನಂ ಸ್ಟೈಲ್ ಹಿನ್ನೆಲೆ ಸಂಗೀತದೊಡನೆ ಕಾಣಿಸಿಕೊಳ್ಳುತ್ತದೆ. ಬಳಿಕ ಮತ್ತೊಂದು ಪುಟ ತೆರೆದುಕೊಂಡಾಗ, ನೀವು ಪುರುಷನೋ ಮಹಿಳೆಯೋ ಎಂಬುದನ್ನು ಉಲ್ಲೇಖಿಸಬೇಕು. ನಂತರ ಮಗುವೋ, ಯುವಕನೋ, ಮಧ್ಯವಯಸ್ಕರೋ ಅಥವಾ ವೃದ್ಧರೋ ಎಂಬುದನ್ನೂ ಆಯ್ಕೆ ಮಾಡಬೇಕು. ದೇಶ, ರಾಜ್ಯ, ಊರು ಕೂಡಾ ಆಯ್ಕೆ ಮಾಡಬೇಕು. ಇಷ್ಟಾದ ಮೇಲೆ ಮತ್ತೊಂದು ಪರದೆ ತೆರೆದುಕೊಳ್ಳುತ್ತದೆ. ಅದರಲ್ಲಿ ಮದ್ಯದಲ್ಲೊಂದು ಕುರ್ಚಿ ಅಕ್ಕ ಪಕ್ಕ ಮೋದಿ ಮತ್ತು ರಾಹುಲ್ ಚಿತ್ರಗಳು. ಮುಂಭಾಗದಲ್ಲಿ ಕೇಜ್ರಿವಾಲ್, ಜಯಲಲಿತಾ, ಮಮತಾ ಮತ್ತಿತರರ ಚಿತ್ರ ಇದೆ. ಮೇಲೆ ಆಟ ಆಡುವುದು ಹೇಗೆ ಎಂಬ ವಿವರಣೆ ಇದೆ. ಪ್ರಸ್ತುತ ಪ್ರಚಲಿತದಲ್ಲಿರುವ ವಿಷಯಗಳು ಕೆಂಡದ ರೂಪದಲ್ಲಿ ಕುರ್ಚಿ ಮೇಲೆ ಕಾಣಿಸಿಕೊಳ್ಳುತ್ತದೆ. ಅದನ್ನು ಯಾರು ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ನಿಮಗನಿಸುತ್ತದೆಯೋ ಅವರೆಡೆಗೆ ಎಳೆದು ಬಿಡಬೇಕು. ಕೊನೆಗೆ ಯಾರ ಬಳಿಗೆ ಹೆಚ್ಚು ಕೆಂಡ ಬಿದ್ದಿದೆಯೋ ಅದನ್ನಾಧರಿಸಿ ನಿಮ್ಮ ಒಲವು ಯಾರೆಡೆಗಿದೆ ಎಂಬುದು ಸರಾಸರಿ ಅಂಕಿ ಅಂಶದ ಲೆಕ್ಕದಲ್ಲಿ ಪ್ರಕಟವಾಗುತ್ತದೆ. ಈ ಆಟ ಎಲ್ಲರಿಗೂ ಇಷ್ಟ ಆಗದೇ ಹೋದರೂ, ಕುತೂಹಲ ತಣಿಸುವುದಕ್ಕೆ ಒಮ್ಮೆ ಆಟ ಆಡಬಹುದು.

ವಿಜಯವಾಣಿಯ ಏ.9ರ ಸಂಚಿಕೆಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ ಲೇಖನ
ವಿಜಯವಾಣಿಯ ಏ.9ರ ಸಂಚಿಕೆಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ ಲೇಖನ

ಕುರ್ಸಿ ಕ್ರಿಕೆಟ್: ಇದು ಕೂಡಾ ಮೊಬೈಲ್ ಗೇಮ್ ಆಗಿದ್ದು, ಕ್ರಿಕೆಟ್ ಆಟದ ಅದೇ ಖುಷಿ ಕೊಡುವಂಥದ್ದು. ಆನ್ ಲೈನ್‍ನಲ್ಲೂ ಈ ಆಟ ಆಡಬಹುದಾಗಿದ್ದು, http://bit.ly/1fPrSQ7 ಈ ತಾಣಕ್ಕೆ ಭೇಟಿ ನೀಡಬೇಕು. ಮೊದಲ ಪರದೆ ತೆರೆದುಕೊಂಡ ಕೂಡಲೇ ಪ್ರಸ್ತುತ ಚುನಾವಣಾ ಓಟದಲ್ಲಿ ಮುಂಚೂಣಿಯಲ್ಲಿರುವ ಮೂವರು ನಾಯಕರ ಚಿತ್ರ ಕಾಣಿಸಿಕೊಳ್ಳುತ್ತದೆ. ಅವರಲ್ಲೊಬ್ಬನನ್ನು ಆಯ್ಕೆ ಮಾಡಿಕೊಳ್ಳಬೇಕು. ಕೂಡಲೇ ಎಷ್ಟು ವಿಕೆಟ್ ಆಟ ಎಂಬ ಆಯ್ಕೆ ಕಾಣಿಸುತ್ತದೆ. ಆಟದ ಕೊನೆಯಲ್ಲಿ ಗರಿಷ್ಠ ಸ್ಕೋರ್ ಯಾರದ್ದು ಎಂದು ಬಹಿರಂಗವಾಗುತ್ತದೆ. ಈ ಆಟದಲ್ಲಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನದಲ್ಲಿ ಕೇಜ್ರಿವಾಲ್ ಇದ್ದಾರೆ. ಕೊನೆಯಲ್ಲಿ ರಾಹುಲ್ ಕಾಣಿಸಿಕೊಳ್ಳುತ್ತಾರೆ..
ಇದೇ ರೀತಿ ಆಪ್ ಕಿ ಆಗ್, ರನ್ ಫಾರ್ 272+ ಹೀಗೆ ಹತ್ತು ಹಲವು ಆಟಗಳಿವೆ. ಮತದಾನ ಮುಗಿದ ಬಳಿಕ ಫಲಿತಾಂಶ ಪ್ರಕಟವಾಗಲು ಮತ್ತೂ ಒಂದು ತಿಂಗಳು ಕನ್ನಡಿಗರಾದ ನಾವು ಕಾಯಲೇ ಬೇಕು. ಟೈಮ್ ಪಾಸ್ ಮಾಡುವುದಕ್ಕೆ ಇಂತಹ ಆಟ ಆಡಬಹುದು.

Leave a Reply

Your email address will not be published. Required fields are marked *