ಪ್ರಥಮ ಪಟ್ಟ ಬಯಸಿದ್ದರು!

Theresa Mayಹೌದು… ಜೀವನದಲ್ಲೊಂದು ಕನಸು ಕಂಡರೆ ಅದು ಈಡೇರುವ ತನಕ ಮನಸ್ಸಿನಲ್ಲಿ ಜಪಿಸುತ್ತಲೇ ಇರಬೇಕು. ಅದಕ್ಕೆ ಪೂರಕವಾದ ಹಾದಿಯಲ್ಲಿ ಪರಿಶ್ರಮ ಇರಲೇಬೇಕು. ಇಚ್ಛೆ, ಕಠಿಣ ಪರಿಶ್ರಮ ಇದ್ದಾಗ ಒಂದಿಷ್ಟು ಅದೃಷ್ಟ ಒಲಿದು ಬಿಟ್ಟರೆ ಸಾಕು. ಕನಸು ನನಸಾಗಿ ಬಿಡುತ್ತದೆ. ದುರಂತ ಎಂದರೆ ಎಷ್ಟೋ ಜನ ‘ದೊಡ್ಡ ದೊಡ್ಡ ಕನಸು’ ಕಾಣುವುದೇ ಇಲ್ಲ. ದೊಡ್ಡದಿರಲಿ, ಚಿಕ್ಕ ಪುಟ್ಟ ಕನಸು ಕಂಡವರ ಜೀವನದಲ್ಲೂ ಇಂಥ ಘಟನೆ ನಡೆದೇ ಇರುತ್ತದೆ. ಒಮ್ಮೆ ಆತ್ಮಾವಲೋಕನ ಮಾಡಿಕೊಂಡರೆ ಸಾಕು. ಅಂತಹ ಘಟನೆಗಳನ್ನು ಗುರುತಿಸಬಹುದು. ಬ್ರಿಟನ್ನ ನೂತನ ಪ್ರಧಾನಿ ಥೆರೇಸಾ ಮೇ ಅವರ ಬಗ್ಗೆ ಹೇಳುವ ಮುನ್ನ ಇಂಥದ್ದೊಂದು ಪೀಠಿಕೆ ಬೇಕೆನಿಸಿತು. ಕಾರಣ ಇಷ್ಟೇ.. ಅವರು ಬ್ರಿಟನ್ನ ಮೊದಲ ಮಹಿಳಾ ಪ್ರಧಾನಿ ಮಾರ್ಗೆರೆಟ್ ಥ್ಯಾಚರ್ಗೂ ಮುನ್ನವೇ ಪ್ರಧಾನಿ ಪಟ್ಟ ಅಲಂಕರಿಸಬಯಸಿದ್ದರು! ಅದು ಅವರ ಜೀವನದ ಏಕೈಕ ಗುರಿ ಮತ್ತು ಉದ್ದೇಶವಾಗಿತ್ತು. ಸರಿ ಸುಮಾರು ನಾಲ್ಕು ದಶಕಗಳ ಕಾಲ ಅವರ ಮನಸ್ಸಿನಲ್ಲಿ ಅದೇ ಧ್ಯಾನ!

ಅದು 1974ನೇ ಇಸವಿ. ಆಕ್ಸ್ಫರ್ಡ್ನ ಸೇಂಟ್ ಹಗ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ. ಅಂದಿನ ಸಂದರ್ಭದಲ್ಲೇ ಮುಕ್ತವಾಗಿ ಮಾತನಾಡುತ್ತಿದ್ದ ಥೆರೇಸಾ ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಬೇಕು ಎಂಬ ಹೆಬ್ಬಯಕೆ ಹೊಂದಿದ್ದರು. ಆದರೆ, ಮರುವರ್ಷವೇ ಮಾರ್ಗರೆಟ್ ಥ್ಯಾಚರ್ ಪ್ರಧಾನಿ ಪಟ್ಟ ಅಲಂಕರಿಸಿದ್ದರು. ಪ್ರಥಮ ಮಹಿಳಾ ಪ್ರಧಾನಿಯಾಗಬೇಕು ಎಂದು ಕನಸುಕಂಡಿದ್ದ ಥೆರೇಸಾಗೆ ಇದು ಬಹಳ ಕಿರಿಕಿರಿ ಉಂಟುಮಾಡಿತ್ತು. ಆದಾಗ್ಯೂ, ಅವರು ಪ್ರಧಾನಿ ಪಟ್ಟ ಅಲಂಕರಿಸಬೇಕು ಎಂಬ ತಮ್ಮ ಕನಸನ್ನು ಹಾಗೇ ಜತನದಿಂದ ಕಾಪಾಡಿಕೊಂಡರು.

ಮುಕ್ತ ಮನಸ್ಸು ಹೊಂದಿದ್ದ ಥೆರೇಸಾ, ಮಾರ್ಗರೆಟ್ ಥ್ಯಾಚರ್ ಅವರನ್ನು ಬಹಳ ಗೌರವಾದರಗಳಿಂದ ಕಾಣುತ್ತಿದ್ದರು. ಹನ್ನೊಂದು ವರ್ಷಗಳ ಅವಧಿಯಲ್ಲಿ ಅವರು ನೀಲಿಬಣ್ಣದ ಉಡುಪಿನಲ್ಲಿ ಅನೇಕ ಸಲ ಕಾಣಿಸಿಕೊಂಡಿದ್ದರು. ಥೆರೇಸಾ ಕೂಡ 1997ರಲ್ಲಿ ಬರ್ಕ್ಷೈರ್ನ ಮೇಡನ್ಹೆಡ್ನಿಂದ ಮೊದಲ ಸಲ ಸಂಸದ ಸ್ಥಾನ ಗೆದ್ದಾಗ ಅಂಥದ್ದೇ ನೀಲಿಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದರು ಎಂಬ ಅಂಶವನ್ನು ಕಾಲೇಜು ದಿನಗಳಿಂದಲೇ ಥೆರೇಸಾರನ್ನು ಬಲ್ಲ ಪ್ಯಾಟ್ ಫ್ರಾಂಕ್ಲಂಡ್ ಬಹಿರಂಗಪಡಿಸಿದ್ದಾರೆ.

ಅರವತ್ತು ವರ್ಷದ ಥೆರೇಸಾರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡು ಜಝುರಿತರಾದರೂ, ಕಂಡ ಕನಸು ನನಸು ಮಾಡಿಕೊಂಡ ದಿಟ್ಟೆ. ಆಕ್ಸ್ಫರ್ಡ್ ವಿವಿಯಲ್ಲಿ ಪದವಿ ಪಡೆದ ಬಳಿಕ 1977ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ನ ಉದ್ಯೋಗಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು 1983ರ ತನಕ ಅಲ್ಲಿ ಕೆಲಸ ಮಾಡಿದರು. 1985ರಿಂದ 1997ರ ತನಕ ಅಸೋಸಿಯೇಷನ್ ಫಾರ್ ಪೇಮೆಂಟ್ ಕ್ಲಿಯರಿಂಗ್ ಸರ್ವೀಸಸ್ನಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಹಿರಿಯ ಸಲಹಾಗಾರರಾಗಿ, ಹಣಕಾಸು ಕನ್ಸಲ್ಟಂಟ್ ಆಗಿ ಸೇವೆ ಸಲ್ಲಿಸಿದರು. 1980ರಲ್ಲಿ ಕಾಲೇಜು ದಿನಗಳ ಗೆಳೆಯ ತಮಗಿಂತ ಕಿರಿಯನಾದ ಫಿಲಿಪ್ ಮೇ (ಜನನ-1957 ಸೆಪ್ಟೆಂಬರ್)ಅವರನ್ನು ವಿವಾಹವಾದರು. ಇದಾಗಿ ಮರುವರ್ಷ ತಂದೆ ಹರ್ಬರ್ಟ್ ಬ್ರೆಸಿಯರ್ ಅವರನ್ನು ಅಪಘಾತದಲ್ಲಿ ಕಳೆದುಕೊಂಡರು. 1982ರಲ್ಲಿ ತಾಯಿ ಝೈದಿ ಮೇರಿ ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟರು. ಕೆಲವರ್ಷಗಳ ಬಳಿಕ ಮಕ್ಕಳಾಗದೇ ಇರುವಾಗ ಪತಿ,ಪತ್ನಿ ಇಬ್ಬರೂ ವೈದ್ಯಕೀಯ ತಪಾಸಣೆಗೆ ಒಳಗಾದಾಗ ಅದಕ್ಕೆ ಆರೋಗ್ಯ ಸಮಸ್ಯೆ ಕಾರಣ ಎಂದು ಅರಿವಾಯಿತು. ಹೀಗೆ ಒಂದರಮೇಲೊಂದು ಕಷ್ಟಗಳು. ಮನೋವೇದನೆಗಳು ಅವರನ್ನೆರಗಿತು.

ಆದರೂ, ಅದಾವುದೂ ರಾಜಕೀಯವಾಗಿ ಬೆಳೆಯಬೇಕೆಂಬ ಅವರ ಇಚ್ಛೆಯನ್ನು ತಡೆಯಲಿಲ್ಲ. 1986ರಲ್ಲಿ ಲಂಡನ್ ಬರೋ ಆಫ್ ಮೆರ್ಟನ್ನ ಕೌನ್ಸಿಲರ್ ಆಗಿ ಆಯ್ಕೆಯಾಗಿ 1994ರ ತನಕ ಸೇವೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಅವರು ಶಿಕ್ಷಣ ವಿಭಾಗದ ಅಧ್ಯಕ್ಷ(1988-90)ರಾಗಿ, ಡೆಪ್ಯುಟಿ ಗ್ರೂಪ್ ಲೀಡರ್ ಮತ್ತು ಹೌಸಿಂಗ್ನ ವಕ್ತಾರ(1992-94)ರಾಗಿ ಕೆಲಸ ಮಾಡಿದ್ದರು. 1992ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ನಾರ್ತ್ವೆಸ್ಟ್ ದುರ್ಹಂನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಅಷ್ಟೇ ಅಲ್ಲ, 1994ರಲ್ಲಿ ರ್ಬಾಂಗ್ನ ಉಪಚುನಾವಣೆಯಲ್ಲೂ ಸೋಲುಂಡರು. ಆದರೆ, 1997ರಲ್ಲಿ ಮೇಡನ್ಹೆಡ್ನಿಂದ ಕನ್ಸರ್ವೆಟಿವ್ ಪಕ್ಷದ ಸಂಸದರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾದರು. ಇಲ್ಲಿಂದ ಮುಂದೆ ಅವರದ್ದು ಪ್ರಗತಿ ಪಥ.

ಇದಾಗಿ ಎರಡು ವರ್ಷಗಳಲ್ಲೇ ಅವರು ವಿಲಿಯಂ ಹೇಗ್ ಅವರ ಶ್ಯಾಡೋ ಕ್ಯಾಬಿನೆಟ್(ಬ್ರಿಟಿಷ್ ಸಂಸತ್ ವ್ಯವಸ್ಥೆಯ ಒಂದು ಭಾಗ- ಅಧಿಕೃತ ವಿಪಕ್ಷ- ಅಫೀಶಿಯಲ್ ಆಪೊಸಿಷನ್ ಶ್ಯಾಡೋ ಕ್ಯಾಬಿನೆಟ್ ಎಂದೂ ಹೇಳುತ್ತಾರೆ)ನಲ್ಲಿ ಸ್ಥಾನ ಪಡೆಯುತ್ತಾರೆ. ಈ ಸ್ಥಾನ ಪಡೆಯುವುದಕ್ಕೆ ಮಾರ್ಗರೆಟ್ ಥ್ಯಾಚರ್ ಸಂಸತ್ತಿಗೆ ಪ್ರವೇಶ ಮಾಡಿದ ಬಳಿಕ ಹಲವು ಕಾಲ ಹಿಡಿದಿತ್ತು. ಶ್ಯಾಡೋ ಕ್ಯಾಬಿನೆಟ್ನಲ್ಲಿ ಥೆರೇಸಾ ಅವರು ಶಾಲೆಗಳು, ಅಂಗವಿಕಲರು ಮತ್ತು ಮಕ್ಕಳ ಪರವಾದ ವಿಷಯಗಳ ವಕ್ತಾರ(1998-1999)ರಾಗಿದ್ದರು. ಇದಾಗಿ 1999ರಲ್ಲಿ ಶ್ಯಾಡೋ ಎಜುಕೇಶನ್ ಆಂಡ್ ಎಂಪ್ಲಾಯ್ಮೆಂಟ್ ಸೆಕ್ರಟರಿಯಾಗಿ ಕೆಲಸ ಮಾಡಿದರು. 2001ರ ಚುನಾವಣೆ ನಂತರ, ಥೆರೇಸಾ ಅವರು ವಿಪಕ್ಷ ಸ್ಥಾನದಲ್ಲಿ ಡಂಕನ್ ಸ್ಮಿತ್, ಮೈಕಲ್ ಹೊವಾರ್ಡ್ ಮತ್ತು ಡೇವಿಡ್ ಕೆಮರಾನ್ ಅಧೀನದಲ್ಲಿ ವಿವಿಧ ಖಾತೆಗಳಲ್ಲಿ ಕೆಲಸ ಮಾಡಿದ್ದರು.

ರಾಜಕೀಯ ಪ್ರಗತಿಪಥದಲ್ಲಿ 2002ರ ಜುಲೈನಲ್ಲಿ ಅವರು ಕನ್ಸರ್ವೆಟಿವ್ ಪಕ್ಷದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕಗೊಂಡರು. ಆ ಸಂದರ್ಭದಲ್ಲಿ ಅವರು ಪಕ್ಷದ ಇಮೇಜ್ ಬದಲಾಯಿಸಬೇಕು ಎಂದು ಹೇಳಿದ್ದಲ್ಲದೇ, ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. 2010ರಲ್ಲಿ ನಡೆದ ಚುನಾವಣೆಯಲ್ಲಿ ಮೇಡನ್ಹೆಡ್ನಿಂದ ಶೇಕಡ 60ರಷ್ಟು ಮತಗಳೊಂದಿಗೆ ವಿಜಯ ಸಾಧಿಸಿದರು. ಈ ಚುನಾವಣೆಯಲ್ಲಿ ಕನ್ಸರ್ವೆಟಿವ್ ಪಕ್ಷ ಅಧಿಕಾರಕ್ಕೆ ಬಂದು ಕೆಮರಾನ್ ಪ್ರಧಾನಿಯಾದರು. ಆಗ ಥೆರೇಸಾ ಅವರನ್ನು ಹೋಮ್ ಸೆಕ್ರಟರಿಯನ್ನಾಗಿ ನೇಮಕ ಮಾಡಿದರು. ಅಲ್ಲಿಂದೀಚೆಗೆ ಆರು ವರ್ಷಗಳ ಕಾಲ (2010ರ ಮೇ 12- 2016ರ ಜುಲೈ 13) ಅದೇ ಹುದ್ದೆಯಲ್ಲಿ ಮುಂದುವರಿದು ದಾಖಲೆ ನಿರ್ವಿುಸಿದರು. ಇದಕ್ಕೂ ಮುನ್ನ ಈ ದಾಖಲೆ 1892ರಿಂದ 5 ವರ್ಷ ಕಾಲ ಹೋಮ್ ಸೆಕ್ರಟರಿಯಾಗಿದ್ದ ಹೆನ್ರಿ ಮ್ಯಾಥ್ಯೂಸ್ ಹೆಸರಿನಲ್ಲಿತ್ತು. ಬ್ರಿಟನ್ ರಾಜಕೀಯ ಇತಿಹಾಸದಲ್ಲಿ ಹೋಮ್ ಸೆಕ್ರಟರಿಯಾಗಿದ್ದವರು ಈ ಮಟ್ಟಕ್ಕೆ ಬೆಳೆದ ಉದಾಹರಣೆಗಳಿಲ್ಲ.

ಸದ್ಯ ಬ್ರೆಕ್ಸಿಟ್ನ ಸವಾಲು ಎದುರಿಸಬೇಕಾದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ಜೊತೆಗಿನ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಕ್ರಿಕೆಟ್ ಪ್ರಿಯರಾಗಿರುವ ಅವರು, ಭಾರತಕ್ಕೆ 2012ರಲ್ಲಿ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದರು. ಕೆಮರಾನ್ ಪ್ರಧಾನಿಯಾಗಿದ್ದಾಗ ಕಾಯ್ದುಕೊಂಡ ಸಂಬಂಧವನ್ನೇ ಭಾರತದ ಜೊತೆ ಮುಂದುವರಿಸುವ ನಿಟ್ಟಿನಲ್ಲಿ ಥೆರೇಸಾ ಕೂಡ ಆಸಕ್ತರಾಗಿದ್ದಾರೆ ಎನ್ನುತ್ತದೆ ಅವರ ಆಪ್ತವಲಯ. ಪ್ರಸ್ತುತ ಅವರ ಬಗ್ಗೆ ಎಲ್ಲೆಡೆ ಆಶಾಭಾವನೆ, ಅವರ ನಡೆಗಳ ಬಗ್ಗೆ ಕುತೂಹಲ ನೆಲೆಸಿದೆ.

ಅದೇನೇ ಇರಲಿ, ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿ ಬಂದ ಥೆರೇಸಾಗೆ ಉಡುಗೆ ತೊಡುಗೆಗಳ ಬಗ್ಗೆ ವಿಪರೀತ ಕಾಳಜಿ, ಆಸಕ್ತಿ. ಎಲ್ಲದಕ್ಕೂ ಮಿಗಿಲಾಗಿ ಪಾದರಕ್ಷೆಗಳ ಹುಚ್ಚು ತುಸುಹೆಚ್ಚೇ ಇದೆ. ಹೀಗಾಗಿ ಬ್ರಿಟನ್ ಮಾಧ್ಯಮಗಳೂ ಅವರ ಫ್ಯಾಶನ್, ಉಡುಗೆ, ತೊಡುಗೆ, ಪಾದರಕ್ಷೆಗಳ ಬಗ್ಗೆ ತುಸು ಹೆಚ್ಚೇ ಕುತೂಹಲ ತೋರುತ್ತಿವೆ. ಅಂದ ಹಾಗೆ, ಅವರು ‘100 ರೆಸಿಪಿ’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಬಿಡುವಿನ ವೇಳೆ ಚಾರಣ ಮಾಡುವುದೂ ಅವರಿಗಿಷ್ಟವಾದ ಹವ್ಯಾಸ.

Leave a Reply

Your email address will not be published. Required fields are marked *