ಫ್ಲಿಪ್‍ಕಾರ್ಟ್‍ನ ಹೊಸ ಸಾರಥಿ

binny bansal1
Binny Bansal

“ಅವರವರು ಇರುವ ಪರಿಸ್ಥಿತಿಯ ಬಗ್ಗೆ ಜನ ಯಾವಾಗಲೂ ಹಳಿಯುತ್ತಿರುತ್ತಾರೆ. ಆದರೆ, ಈ ಪರಿಸ್ಥಿತಿಗಳ ವಿಷಯದಲ್ಲಿ ನನಗೆ ನಂಬಿಕೆ ಇಲ್ಲ. ಈ ಜಗತ್ತಿಗೆ ಇಳಿದ ಜನರಲ್ಲಿ ಯಾರು ಎದ್ದು ನಿಂತು ತಮಗೆ ಅನುಕೂಲವಾದ ಪರಿಸ್ಥಿತಿಯನ್ನು ಹುಡುಕುತ್ತಾರೋ ಮತ್ತು ಒಂದೊಮ್ಮೆ ಅದು ಕಾಣಿಸದೇ ಇದ್ದಾಗ ಅಂತಹ ಪರಿಸ್ಥಿತಿಯನ್ನು ಅವರು ಸೃಷ್ಟಿಸಿಕೊಳ್ಳುತ್ತಾರೆ ಎಂಬ ಜಾರ್ಜ್ ಬರ್ನಾಡ್ ಷಾ ಅವರ ಪ್ರೇರಣಾದಾಯಿ ಮಾತಿನ ಮೇಲೆ ನಂಬಿಕೆ ಇರಿಸಿದವನು ನಾನು. ಫ್ಲಿಪ್‍ಕಾರ್ಟ್ ಉದ್ಯಮ ಆರಂಭಿಸುವುದಕ್ಕೆ ಮುನ್ನ, ಏನಾದರೂ ಮಾಡಬೇಕು, ಸಾಧಿಸಬೇಕು ಎಂಬ ಹಸಿವು ಯಾವ ಪ್ರಮಾಣದಲ್ಲಿ ನನ್ನಲ್ಲಿ ಇತ್ತೋ ಅದೇ ಹಸಿವು ಇಂದಿಗೂ ಇದೆ”
ಈಗ್ಗೆ ಮೂರುವರ್ಷಗಳ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೀಗಂದ್ದಿದ್ದು ಬೇರಾರೂ ಅಲ್ಲ ಫ್ಲಿಪ್‍ಕಾರ್ಟ್ ಎಂಬ ಬಹುದೊಡ್ಡ ಆನ್‍ಲೈನ್ ಸ್ಟೋರ್‍ನ ಸಂಸ್ಥಾಪಕರಲ್ಲೊಬ್ಬರಾದ ಬಿನ್ನಿ ಬನ್ಸಲ್. ಧನಾತ್ಮಕ ಚಿಂತನೆ, ಹೊಸದೇನಾದರೂ ಸಾಧಿಸಬೇಕೆಂಬ ತುಡಿತವಿದ್ದರೂ, ತುಂಬ ನಾಚಿಕೆ ಹಾಗೂ ಅಂತರ್ಮುಖಿಯಾಗಿದ್ದವರು ಬಿನ್ನಿ ಬನ್ಸಲ್. ಕಳೆದವಾರವಷ್ಟೇ ಅವರು ಫ್ಲಿಪ್‍ಕಾರ್ಟ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಡೀ ಜಗತ್ತಿನ ಗಮನಸೆಳೆದಿದ್ದಾರೆ.
ಅವರ ಸಾಹಸಗಾಥೆ ನಿಜಕ್ಕೂ ನವೋದ್ಯಮ ಕ್ಷೇತ್ರಕ್ಕೆ ಕಾಲಿರಿಸುವವರಿಗೆ ಪ್ರೇರಣಾದಾಯಿ. ಅದನ್ನು ಅವರ ಮಾತುಗಳಲ್ಲಿ ಹೀಗೆ ದಾಖಲಿಸಬಹುದು.
`ಬಿ ಟೆಕ್ ಪದವಿ ಮುಗಿಸಿ ಹೊರಬಂದ ನಂತರದ ಎರಡು ವರ್ಷದ ಅವಧಿ. ಸರ್ನೋಫ್ ಕರ್ಪೊರೇಷನ್ ಎಂಬ ಕಂಪನಿಯಲ್ಲಿ ಆರಂಭದ ಕೆಲಸ. ಈ ನಡುವೆ, ಎರಡು ಬಾರಿ ಗೂಗಲ್ ಕಂಪನಿಯ ಉದ್ಯೋಗಕ್ಕೆ ಅರ್ಜಿ ಗುಜರಾಯಿಸಿ ತಿರಸ್ಕರಿಸಲ್ಪಟ್ಟಿದ್ದೆ. ಒಂದು ವರ್ಷ ಐದು ತಿಂಗಳು ಕೆಲಸ ನಿರ್ವಹಿಸಿದ ಬಳಿಕ, 2007ರ ಜನವರಿಯಲ್ಲಿ ಸೇರಿದ್ದು ಅಮೆಜಾನ್ ಎಂಬ ಆನ್‍ಲೈನ್ ಮಾರಾಟ ತಾಣದ ಕಂಪನಿಗೆ. ನಮಗೆ ಇದ್ದ ಕೆಲಸ 10ರಿಂದ ಸಂಜೆ 5ರ ಅವಧಿಯ ಕೆಲಸವದು. ಏನಿಲ್ಲ ಆಫೀಸಿಗೆ ಕರೆಕ್ಟಾಗಿ 12ಕ್ಕೆ ಹೋಗು. ಇ-ಮೇಲ್ ಚೆಕ್ ಮಾಡು. ಅಷ್ಟು ಹೊತ್ತಿಗೆ ಗಂಟೆ ಒಂದಾಗಿರುತ್ತದೆ. ನಂತರ ಊಟ. ಮತ್ತೆ ಬಂದು ಟೇಬಲ್ ಎದುರು ಕೂರು. ಸಂಜೆ ಕಾಫಿಗೆಂದು ಬರಿಸ್ತಾಕ್ಕೆ ಹೋಗು. ಇದೇ ರೀತಿ ಆರು ತಿಂಗಳು ಕೆಲಸ ಮಾಡುವ ಹೊತ್ತಿಗೆ ಬೇಸರ ಬಂದು ಹೋಗಿತ್ತು. ಇಂಥದ್ದೇ ಭಾವನೆಗಳೊಂದಿಗೆ ಜೊತೆಯಾದವನು ಸಚಿನ್ ಬನ್ಸಲ್. ಆತ 2006ರ ಜನವರಿಯಿಂದಲೇ ಅಲ್ಲಿ ಕೆಲಸ ಮಾಡುತ್ತಿದ್ದ. ಹೊಸದೇನಾದರೂ ಮಾಡಬೇಕು, ಜೀವನದಲ್ಲೇನಾದರೂ ಸಾಧಿಸಬೇಕು ಎಂಬ ಹಂಬಲ ಹೆಚ್ಚಾಗಿತ್ತು. ಒಬ್ಬ ಐಐಟಿ ಪದವೀಧರನಾಗಿ ವಿದೇಶಕ್ಕೆ ಹೋಗಿ ಮಿಲಿಯನ್ ಡಾಲರ್ ದುಡಿಯಬೇಕು ಎಂಬ ಹಂಬಲ ನನ್ನಲ್ಲಿ ಇರಲಿಲ್ಲ. ಭಾರತದಲ್ಲೇ ಇದ್ದು, ಇಂಟರ್‍ನೆಟ್ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಏನಾದರೂ ಮಾಡಬೇಕು ಎಂಬ ತುಡಿತ ಇತ್ತು. ಹೀಗೆ ಆಲೋಚಿಸುತ್ತಿದ್ದಾಗ ಹೊಳೆದಿದ್ದು ಭಾರತದ್ದೇ ಆದ ಅಮೆಜಾನ್ ಕಂಪನಿಯನ್ನು ಹುಟ್ಟುಹಾಕಬೇಕು. ಹೀಗೆ ಆಲೋಚಿಸುತ್ತಿರುವಾಗ ಮೊಳಕೆಯೊಡೆದಿದ್ದು ಹೊಸ ಸ್ಟಾರ್ಟ್ಅಪ್ ಸ್ಥಾಪನೆಯ ವಿಚಾರ. 2007ರಲ್ಲಿ ಇಬ್ಬರೂ ಜೊತೆಯಾಗಿ ಅಮೆಜಾನ್ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಿದ್ದೆವು. ಆಗಿನ್ನೂ ಇ-ಕಾಮರ್ಸ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದವು.
ಆ ಸಂದರ್ಭದಲ್ಲಿ ಪುಣ್ಯವಶಾತ್ ನಮಗಿಬ್ಬರಿಗೂ ಮದುವೆ ಆಗಿರಲಿಲ್ಲ. ಕುಟುಂಬದ ಹೊಣೆಗಾರಿಕೆಯೂ ನಮಗಿರಲಿಲ್ಲ. ನಮ್ಮದು ಮಧ್ಯಮ ವರ್ಗದ ಕುಟುಂಬ. ನಾವಿಬ್ಬರೂ ತಲಾ 2.5 ಲಕ್ಷ ರೂಪಾಯಿ ಮೂಲಧನವಾಗಿ ಹೂಡಿಕೆ ಮಾಡಿದೆವು. ಹಾಗೆ 2007ರ ಅಕ್ಟೋಬರ್‍ನಲ್ಲಿ ನಾವು ಫ್ಲಿಪ್‍ಕಾರ್ಟ್ ಆನ್‍ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಆರಂಭಿಸಿದೆವು. ಬೆಂಗಳೂರಿನ ಕೋರಮಂಗಲದ ಒಂದು ಡಬಲ್ ಬೆಡ್‍ರೂಮ್ ಫ್ಲಾೃಟ್‍ನಲ್ಲಿ ಮೊದಲ ಕಚೇರಿಯನ್ನೂ ತೆರೆದುದಾಗಿತ್ತು. ಇದಾಗಿ ಎರಡು ವಾರದ ನಂತರ ಮೊದಲ ಗ್ರಾಹಕರಾಗಿ ನಮ್ಮನ್ನು ಸಂಪರ್ಕಿಸಿದ್ದು ಹೈದರಾಬಾದ್ ಮೂಲಕ ವಿ.ವಿ.ಕೆ.ಚಂದ್ರ. ಅವರು ಜಾನ್ ವುಡ್ ಬರೆದ `Leaving Microsoft to Change the World’ ಎಂಬ ಪುಸ್ತಕಕ್ಕಾಗಿ ಹುಡುಕಾಡುತ್ತಿದ್ದರು. ಅವರ ಬೇಡಿಕೆ ಈಡೇರಿಸುವುದಕ್ಕಾಗಿ ನಾವು ಬೆಂಗಳೂರಿನ ಹಲವು ಪುಸ್ತಕದ ಮಳಿಗೆಗಳಿಗೆ ಭೇಟಿ ನೀಡಿದೆವು. ಆದರೆ ಯಾರೊಬ್ಬರಲ್ಲೂ ಆ ಪುಸ್ತಕ ಲಭ್ಯವಿರಲಿಲ್ಲ. ಕೊನೆಗೆ ಬೆಂಗಳೂರಿನ ಇಂದಿರಾನಗರದ ಒಂದು ಪುಸ್ತಕ ಮಳಿಗೆಯಲ್ಲಿ ಇರುವುದು ಗೊತ್ತಾಯಿತು. ನಾನು ಆ ಪುಸ್ತಕ ಖರೀದಿಸಲು ಹೊರಟಾಗ ಕೈಯಲ್ಲಿ ದುಡ್ಡಿರಲಿಲ್ಲ. ಕೊನೆಗೆ ಸ್ನೇಹಿತನೊಬ್ಬನಿಂದ ಸಾಲವಾಗಿ ಪಡೆದ ಹಣದಲ್ಲಿ ಆ ಪುಸ್ತಕ ಖರೀದಿಸಿ ಹೊರಬಂದಾಗ ಭಾರಿ ಮಳೆ ಸುರಿಯಲಾರಂಭಿಸಿತ್ತು. ಆದಾಗ್ಯೂ, ಹೇಗೋ ಅದನ್ನು ನೀಟಾಗಿ ಪ್ಯಾಕ್ ಮಾಡಿ ಕೊರಿಯರ್ ಮಾಡಿದೆವು. ಚಂದ್ರ ಅವರಿಗೆ ಕರೆ ಮಾಡಿ ಅವರ ಬೇಡಿಕೆ ಈಡೇರಿಸಲು ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿ ನೀಡಿ ಕ್ಷಮೆ ಯಾಚಿಸಿದೆವು. ಅದಕ್ಕವರು, ಎರಡು ಮೂರು ವರ್ಷದಿಂದ ಆ ಪುಸ್ತಕಕ್ಕಾಗಿ ಅಲೆದಾಡುತ್ತಿದ್ದೆ. ಇನ್ನು ಮೂರು ದಿನ ಕಾಯುವುದಕ್ಕೇನೂ ತೊಂದರೆ ಇಲ್ಲ ಎಂದು ಬಿಟ್ಟರು. ಹೀಗೆ ಆರಂಭವಾಯಿತು ನಮ್ಮ ಫ್ಲಿಪ್‍ಕಾರ್ಟ್ ಉದ್ಯಮ’ ಎನ್ನುತ್ತ ಆರಂಭದ ದಿನಗಳನ್ನು ಬಿನ್ನಿ ಸ್ಮರಿಸುತ್ತಾರೆ.
ಐದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಆರಂಭವಾದ (2007-08) ನಂತರದ ವರ್ಷದಲ್ಲಿ (2008-09) 2.5 ಕೋಟಿ ರೂಪಾಯಿ ವಹಿವಾಟು ನಡೆಸಿತು. 2009-10ರಲ್ಲಿ 25 ಕೋಟಿ ರೂಪಾಯಿ, 2010-11ರಲ್ಲಿ 75 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿ ದಾಖಲೆ ಮಾಡಿತು. ಅಮೆರಿಕದ ಅರ್ಥವ್ಯವಸ್ಥೆಗೆ ಅನುಗುಣವಾಗಿ ಅಮೆಜಾನ್ ಕಂಪನಿ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವುದಕ್ಕೆ ವ್ಯವಸ್ಥೆ ಮಾಡಿತ್ತು. ಭಾರತದಲ್ಲಿ ಆ ವ್ಯವಸ್ಥೆ ಪೂರ್ಣಪ್ರಮಾಣದಲ್ಲಿ ಸರಿಹೊಂದಲ್ಲ ಎಂಬುದನ್ನು ಮನಗಂಡ ಫ್ಲಿಪ್‍ಕಾರ್ಟ್ 2010ರಲ್ಲಿ ಕ್ಯಾಷನ್ ಆನ್ ಡೆಲಿವರಿ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಿತು. ಈಗಲೂ ಫ್ಲಿಪ್‍ಕಾರ್ಟ್‍ಗೆ ಲಭಿಸುವ ಶೇಕಡ 50ರಷ್ಟು ಆರ್ಡರ್‍ಗಳು ಕ್ಯಾಷ್ ಆನ್ ಡೆಲಿವರಿ ಮೂಲಕವೇ ಲಭ್ಯವಾಗುತ್ತಿವೆ. 2014ರ ಹಣಕಾಸು ವರ್ಷದಲ್ಲಿ 2,846 ಕೋಟಿ ರೂಪಾಯಿ ಆದಾಯ ಗಳಿಸಿರುವ ಕಂಪನಿಯಲ್ಲಿ 33,000 ಉದ್ಯೋಗಿಗಳಿದ್ದಾರೆ. ಕಂಪನಿ ಸ್ಥಾಪನೆಯಾಗಿ ಹತ್ತತ್ತಿರ ಹತ್ತು ವರ್ಷಗಳಾಗುತ್ತಿದೆ. ಈಗ ಲಾಜಿಸ್ಟಿಕ್ಸ್ ಕಡೆಗೆ ಗಮನಹರಿಸಬೇಕಾಗಿದೆ ಎನ್ನುತ್ತಾರೆ ಬಿನ್ನಿ.
ಇಂತಹ ಬಿನ್ನಿ ಮೂಲತಃ ಪಂಜಾಬ್‍ನ ರಾಜಧಾನಿ ಚಂಡೀಗಢದವರು. ಫ್ಲಿಪ್‍ಕಾರ್ಟ್‍ನ ಇನ್ನೊಬ್ಬ ಸಂಸ್ಥಾಪಕ ಸಚಿನ್ ಹೆಸರಿನಲ್ಲಿ ಬನ್ಸಲ್ ಎಂದಿದ್ದರೂ ಇಬ್ಬರ ನಡುವೆ ಯಾವುದೇ ನಂಟು, ಸಂಬಂಧ ಇಲ್ಲ. ಇಬ್ಬರೂ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಿತರಾದವರು. ಐಐಟಿಯಲ್ಲಿ ಜತೆಗೆ ಓದಿದ್ದಾದರೂ ಹೇಳಿಕೊಳ್ಳುವಂತಹ ಸ್ನೇಹಿತರೂ ಆಗಿರಲಿಲ್ಲ. ಬಿನ್ನಿ ಬೆಂಗಳೂರಿನಲ್ಲೇ ವಾಸವಿದ್ದು, ತಂದೆ ತಾಯಿಗೆ ಒಬ್ಬನೇ ಮಗ. ತಂದೆ ಬ್ಯಾಂಕ್ ಒಂದರಲ್ಲಿ ಚೀಫ್ ಮ್ಯಾನೇಜರ್ ಆಗಿ ನಿವೃತ್ತರಾದವರು. ತಾಯಿ ಸರ್ಕಾರಿ ಉದ್ಯೋಗಿ. ಬಿನ್ನಿಗೆ ವಿವಾಹವಾಗಿದ್ದು, ಪತ್ನಿ ಗೃಹಿಣಿ.
ಫ್ಲಿಪ್‍ಕಾರ್ಟಿನ ಸಿಇಒ ಆಗಿ ಮೂವತ್ತೆರಡು ವರ್ಷದ ಬಿನ್ನಿ ಏನೇನು ಬದಲಾವಣೆ ತರುತ್ತಾರೆ ಎಂಬ ನಿರೀಕ್ಷೆ ಕಂಪನಿಯೊಳಗಿದ್ದರೆ, ಇ-ಕಾಮರ್ಸ್ ಕ್ಷೇತ್ರದಲ್ಲೂ ಬಹಳಷ್ಟು ಕಾತರಗಳಿವೆ. ಈ ನಿರೀಕ್ಷೆಗಳನ್ನು ಬಿನ್ನಿ ಯಾವ ರೀತಿ ತಣಿಸುತ್ತಾರೆ ಎಂಬುದೇ ಸದ್ಯದ ಕುತೂಹಲ.

Leave a Reply

Your email address will not be published. Required fields are marked *