ಬೇಲಿಯೇ ಎದ್ದು ಹೊಲ ಮೇಯೋದು ಅಂದ್ರೆ…

ಐಪಿಎಲ್ ಎಂದಾಕ್ಷಣ ಸಹಜವಾಗಿಯೇ ಲಲಿತ್ ಮೋದಿ ನೆನಪಾಗ್ತಾರೆ. ಹಾಗೆಯೇ ಸದ್ಯದ ಪರಿಸ್ಥಿತಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಅಂದ್ರೆ ತಕ್ಷಣ ನೆನಪಾಗೋದು ಸುರೇಶ್ ಕಲ್ಮಾಡಿ.  ಈ ಇಬ್ಬರಲ್ಲೂ ಕೆಲವು ಸಾಮ್ಯತೆಗಳಿವೆ..
ಕೋಟ್ಯಂತರ ರೂಪಾಯಿ ವ್ಯವಹಾರಗಳೇ ಹಾಗೆ. ಒಂದಿಲ್ಲೊಂದು ವಿವಾದಗಳು ಇದ್ದೇ ಇರ್ತಾವೆ.  ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಥಾತ್  ಐಪಿಎಲ್‌ ವಿವಾದ ಕೂಡಾ ಹಣಕಾಸಿನ ಅವ್ಯವಹಾರದ್ದೇ.. ಅದೇ ರೀತಿ ಇತ್ತೀಚಿಗೆ ಉಂಟಾದ ಕಾಮನ್‌ವೆಲ್ತ್‌ ಕ್ರೀಡಾಕೂಟದ ವಿವಾದ ಕೂಡಾ ಹಣಕಾಸಿನ ವಿಚಾರದ್ದೇ.  ಪ್ರಸ್ತುತ ಕ್ರೀಡಾ ಕ್ಷೇತ್ರದ  ಹಣಕಾಸಿನ ಅವ್ಯವಹಾರದಲ್ಲಿ ಕೇಳಿ ಬರ್ತಾ ಇರೋದು  ಲಲಿತ್ ಮೋದಿ ಮತ್ತು ಸುರೇಶ್ ಮೋದಿ ಮತ್ತು ಕಲ್ಮಾಡಿ ಇಬ್ಬರ ವ್ಯಕ್ತಿತ್ವದಲ್ಲೂ ಕಂಡು ಬರುವ ಸಾಮ್ಯತೆಗಳಿವು. ಇಬ್ಬರಲ್ಲೂ ಸ್ವಪ್ರತಿಷ್ಠೆ, ಸ್ವಜನ ಪಕ್ಷಪಾತ, ಹಣಕಾಸಿನ ಅವ್ಯವಹಾರ ಸರ್ವೇ ಸಾಮಾನ್ಯವಾಗಿದೆ.
ವ್ಯಕ್ತಿತ್ವದ ವಿಚಾರ  ಬದಿಗಿಟ್ಟು ನೋಡಿದ್ರೂ, ವಿವಾದಗಳ ವಿಚಾರದಲ್ಲೂ  ಇಬ್ಬರದ್ದೂ ಒಂದೇ ದಾರಿ.

foto courtesy p gulfkannadiga.com

ಲಲಿತ್ ಮೋದಿ ವಿವಾದಗಳ ಸ್ವರೂಪ ಬೇರೆ. ಆದ್ರೆ, ಹಣಕಾಸಿನ ವಿಚಾರವೇ ವಿವಾದದ  ಕೇಂದ್ರ ಬಿಂದು.  ಪಂಜಾಬ್ ಮತ್ತು ರಾಜಸ್ತಾನ ಕ್ರಿಕೆಟ್ ಅಸೋಸಿಯೇಷನ್‌ ಗಳ ಜೊತೆಗೆ ಬೆಳೆದ್ರು. ಕೇಂದ್ರ ವಲಯದ ಮೂಲಕ ಬಿಸಿಸಿಐ ಪ್ರವೇಶ ಪಡೆದ ಮೋದಿ, ಕ್ರಿಕೆಟ್ ರಂಗದಲ್ಲಿ ಐಪಿಎಲ್ ಎಂಬ ಹೊಸ ಸಂಚಲನವನ್ನು ಮೂಡಿಸಿದ್ರು. ವಿವಾದಗಳ ಮೂಲಕ ಅಷ್ಟೇ ವೇಗವಾಗಿ ಕುಸಿದ್ರು ಕೂಡಾ..

ಐಪಿಎಲ್ ವಿವಾದ ಪ್ರಾರಂಭವಾಗಿದ್ದೇ ಫ್ರಾಂಚೈಸಿ ಪಾಲುದಾರಿಕೆ ವಿಚಾರದಿಂದ.  ಹಗರಣಗಳು ಬಯಲಿಗೆ ಬರುತ್ತಲೇ ಲಲಿತ್‌ ಮೋದಿ ಕೂಡಾ ರಾಜಸ್ತಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ಇಲೆವನ್ ಪಂಜಾಬ್ ಫ್ರಾಂಚೈಸಿಯಲ್ಲಿ ಗುಪ್ತ ಪಾಲುದಾರಿಕೆ ಹೊಂದಿದ್ದಾರೆ ಅನ್ನೋ ವಿವಾದ ಎದ್ದಿತ್ತು.  ಮೋದಿ ಹಿನ್ನೆಲೆ ಕೆದಕಿದ್ರೆ, ಲಲಿತ್ ಮೋದಿಯ ಕ್ರಿಮಿನಲ್ ರೂಪ ಅನಾವರಣಗೊಳ್ಳತ್ತೆ. ಚಿಕ್ಕಂದಿನಿಂದಲೇ ಅಪರಾಧದ ಕಡೆಗೆ ಹೆಚ್ಚು ವಾಲಿದ್ದ ಮೋದಿ, ಮಾದಕ ದ್ರವ್ಯ ಸಾಗಿಸಿದ ಆರೋಪ ಮತ್ತು  ಸಹಪಾಠಿಯ ಜೊತೆ ಸೇರಿ ಅಪಹರಣ, ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿ ಜೈಲುವಾಸ ಅನುಭವಿಸಿರೋದು ಕಂಡು ಬರುತ್ತಿದೆ.

ಇವಿಷ್ಟು, ಶ್ರೀಮಂತಿಕೆಯಲ್ಲೇ ಹುಟ್ಟಿ ಬೆಳೆದ ಮೋದಿ ವಿವಾದಗಳ ಪುರಾಣವಾದ್ರೆ, ಸುರೇಶ್ ಕಲ್ಮಾಡಿ ವಿಚಾರ ಕೊಂಚ ವಿಭಿನ್ನ.  ಪುಣೆಯಲ್ಲಿ  ವಿದ್ಯಾಭ್ಯಾಸ ಮುಗಿಸಿದ ಕಲ್ಮಾಡಿ, ವಾಯುಸೇನೆಯಲ್ಲಿ 1964 ರಿಂದ 1972 ರ ತನಕ ಸೇವೆ ಸಲ್ಲಿಸಿದ್ರು. ಬಳಿಕ ಯುವ ಕಾಂಗ್ರೆಸ್ ಜೊತೆ ಗುರುತಿಸಿಕೊಂಡು ರಾಜಕೀಯವಾಗಿ ಬೆಳೆದವರು.

 

foto courtesy - ndtv.com

ಸುರೇಶ್ ಕಲ್ಮಾಡಿ ವಿವಾದಗಳ ಸ್ವರೂಪ ಕೊಂಚ ಭಿನ್ನ.  2008ರ ಬೇಸಿಗೆ  ಒಲಿಂಪಿಕ್ಸ್‌ನಲ್ಲಿ ಗೆದ್ದ ಭಾರತೀಯ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮದಲ್ಲಿ, ಅಂದಿನ  ಉಪರಾಷ್ಟ್ರಪತಿ   ಹಮೀದ್ ಅನ್ಸಾರಿ ಪಕ್ಕದ ಕುರ್ಚಿ ತಮಗೆ ಬಿಟ್ಟುಕೊಟ್ಟಿಲ್ಲ ಎಂಬ ಕಾರಣಕ್ಕೆ ವಾಕ್‌ ಔಟ್ ಮಾಡಿದ್ದು ವಿವಾದಕ್ಕೀಡಾಗಿತ್ತು.  ಕಾಮನ್‌ವೆಲ್ತ್ ಕ್ರೀಡಾಕೂಟದ ತಯಾರಿ ವೇಗ ಪಡೆದುಕೊಂಡ ಸಂದರ್ಭದಲ್ಲಿ  ಭಾರತೀಯ ಹಾಕಿ ತಂಡದ ಮಾಜಿ ಕಪ್ತಾನ ಪರ್ಗತ್ ಸಿಂಗ್, ಕಲ್ಮಾಡಿ ಸ್ಪೋರ್ಟ್ಸ್ ಮಾಫಿಯ ನಡೆಸ್ತಿದ್ದಾರೆ ಎಂದು ಆರೋಪಿಸಿದ್ರು.  ಇದ್ರ ಬೆನ್ನಲ್ಲೇ , ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅವ್ಯವಹಾರ ನಡೀತಿದೆ. ಅದು ನಡೆಯದಿದ್ರೇ ಉತ್ತಮ ಎಂದು ಮಾಜಿ ಕ್ರೀಡಾ ಸಚಿವ ಮಣಿಶಂಕರ ಅಯ್ಯರ್  ಹೇಳಿದ್ರು. ಅವ್ಯವಹಾರಗಳು ಬಳಿಕ ಬಹಿರಂಗಗೊಂಡು ಕಲ್ಮಾಡಿ ಮುಜುಗರ ಅನುಭವಿಸಿದ್ರು ಕೂಡಾ.  ಇದಲ್ದೇ, ಗ್ರೇಟರ್ ನೋಯ್ಡದಲ್ಲಿ ಎಫ್‌ 1 ಪ್ರಾಜೆಕ್ಟ್‌ ತಮ್ಮ ಮಗ ಸುಮೀರ್ ಗೆ ಕೊಡಿಸಲು ನಿಯಮಗಳನ್ನು ಗಾಳಿಗೆ ತೂರಿದ್ದು ಕೂಡಾ ವಿವಾದಕ್ಕೀಡಾಗಿದೆ.

ಒಂದೆಡೆ, ಲಲಿತ್ ಮೋದಿ ತಾನು ಯಾವುದೇ ಅವ್ಯವಹಾರ ನಡೆಸಿಲ್ಲ. ವಿಚಾರಣೆಗೂ ಸಹಕರಿಸ್ತಿದ್ದೇನೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದ್ರೆ, ಭಾರತದ ಜಾರಿ ನಿರ್ದೇಶನಾಲಯ ಮೋದಿ ವಿರುದ್ಧ ರೆಡ್ ಅಲರ್ಟ್‌ ನೋಟಿಸ್ ಜಾರಿಗೊಳಿಸಿದೆ.  ಇನ್ನೊಂದೆಡೆ, ಸುರೇಶ್  ಕಲ್ಮಾಡಿ  ತನ್ನ ಮೇಲಿನ ಆರೋಪಗಳನ್ನು ನಿರಾಕರಿಸ್ತಿದ್ದಾರೆ. ಅದ್ರೆ, ಕೇಂದ್ರ ಸರಕಾರ  ಕಾಮನ್‌ವೆಲ್ತ್‌  ಹಗರಣಗಳ ವಿವಾದ ತನಿಖೆಗೆ ಸಮಿತಿ ನೇಮಕಗೊಳಿಸಿದೆ.  ತನಿಖೆ ಬಳಿಕ ವಷ್ಟೇ ಸತ್ಯಾಸತ್ಯ ಹೊರಬೀಳಲಿದೆ.

Leave a Reply

Your email address will not be published. Required fields are marked *