ಮಾತಿನಿಂದಲೇ ಸುದ್ದಿಯಾದ ಸಾಧ್ವಿ

`ದೆಹಲಿಯಲ್ಲಿ ರಾಮನ ಮಕ್ಕಳ ಸರ್ಕಾರವಿರಬೇಕೇ ಅಥವಾ ಅಕ್ರಮ ಸಂತಾನದ ಸರ್ಕಾರವಿರಬೇಕೇ ಎಂಬುದನ್ನು ಇಲ್ಲಿನ ಜನತೆ ನಿರ್ಧರಿಸಬೇಕು. ಭಾರತದಲ್ಲಿ ಮುಸಲ್ಮಾನರಿರಲಿ, ಕ್ರಿಶ್ಚಿಯನ್ನರೇ ಇರಲಿ ಅವರೆಲ್ಲರೂ ರಾಮನ ಮಕ್ಕಳೆ. ಒಂದು ವೇಳೆ ಇದನ್ನು ಅವರು ಒಪ್ಪದಿದ್ದರೆ ಈ ದೇಶದಲ್ಲಿರಲು ಅವರಿಗೆ ಅವಕಾಶವಿಲ್ಲ’ ಎಂಬ ಒಂದೇ ಒಂದು ಹೇಳಿಕೆಯಿಂದಾಗಿ ಕೇಂದ್ರ ಆಹಾರ ಸಂಸ್ಕರಣಾ ಖಾತೆ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ದಿನಬೆಳಗಾಗುವಷ್ಟರಲ್ಲಿ ದೇಶಾದ್ಯಂತ ಸುದ್ದಿಯಾಗಿಬಿಟ್ಟರು. ಹೌದು, ಅವರು ಆ ಹೇಳಿಕೆ ನೀಡಿದ್ದು ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರಕಣದಲ್ಲಿ. ಒಂದೊಮ್ಮೆ ಅವರು ಬಿಜೆಪಿಯ ಸಂಸದರಷ್ಟೇ ಅಥವಾ ನಾಯಕರಷ್ಟೇ ಆಗಿದ್ದು ಇಂತಹ ಹೇಳಿಕೆ ನೀಡಿದ್ದರೆ ರಾಷ್ಟ್ರವ್ಯಾಪಿ ಗಮನ ಸೆಳೆಯುತ್ತಿರಲಿಲ್ಲವೇನೋ.. ಆದರೆ, ಈ ಮಾತುಗಳನ್ನಾಡುವಾಗ ಅವರು ತಮ್ಮ ಸ್ಥಾನಮಾನವನ್ನು ಮರೆತುದೇ ಅವಾಂತರಕ್ಕೆ ಕಾರಣವಾಯಿತು.

Sadhvi Niranjana Jyothi
Sadhvi Niranjana Jyothi

ಸಾಧ್ವಿ ನಿರಂಜನ ಜ್ಯೋತಿಯವರು ಕ್ಷಮೆಯಾಚಿಸಬೇಕು, ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದ ಪ್ರತಿಪಕ್ಷ ಸದಸ್ಯರು ಸಂಸತ್ತಿನ ಕಲಾಪಕ್ಕೂ ಅಡ್ಡಿ ಉಂಟುಮಾಡಿದರು. ತಮ್ಮ ಒಂದು ಹೇಳಿಕೆಯಿಂದಾದ ಅನಾಹುತಗಳನ್ನು ಮನಗಂಡ ಸಾಧ್ವಿ ಸದನದಲ್ಲಷ್ಟೇ ಅಲ್ಲದೆ, ಬಹಿರಂಗವಾಗಿ ಮಾಧ್ಯಮಗಳೆದರೂ ಕೈಜೋಡಿಸಿ,`ಯಾರನ್ನೂ ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ಈ ಬಗ್ಗೆ ವಿಷಾದವಿದೆ. ನನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದೇನೆ’ ಎಂದು ಹೇಳಿದ್ದರು. ಅಷ್ಟರಲ್ಲಾಗಲೇ ಸಾಧ್ವಿಯವರ ಮಾತುಗಳ ಬಗ್ಗೆ ಹಲವಾರು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದಕ್ಕೇ ಇರಬೇಕು ಹಿರಿಯರು ಹೇಳೋದು, `ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂದು.

ಮೇಲಿನ ಘಟನೆ, ಕಳೆದ ತಿಂಗಳಷ್ಟೇ ಸಚಿವ ಸಂಪುಟಕ್ಕೆ ಸೇರಿದ ಸಾಧ್ವಿಯವರ ಬಗ್ಗೆ ನೆಗೆಟಿವ್ ಇಮೇಜ್ ಕೊಟ್ಟರೂ, ತತ್‍ಕ್ಷಣವೇ ಎಚ್ಚೆತ್ತುಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ತಪ್ಪನ್ನು ತಿದ್ದುಕೊಳ್ಳುವ ಅವರ ಉತ್ತಮ ಗುಣವನ್ನು ಎತ್ತಿತೋರಿಸಿದೆ. ಇದಕ್ಕೆ ಪೂರಕವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ, ಸಾಧ್ವಿ ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ಮೊದಲ ಬಾರಿ ಸಂಸದರಾಗಿದ್ದಾರೆ. ಅವರು ತಾವಡಿದ ಮಾತಿಗೆ ಈಗಾಗಲೇ ಕ್ಷಮೆಯನ್ನೂ ಕೋರಿದ್ದಾರೆ. ಹೀಗಾಗಿ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಧ್ವಿಯವರ ರಾಜಕೀಯ ಬೆಳವಣಿಗೆಗೆ ಮೋದಿ ಸಾಥ್ ನೀಡುತ್ತಿರುವುದು ಅವರ ಮಾತುಗಳಲ್ಲೇ ಸ್ಪಷ್ಟವಾಗುತ್ತಿದೆ. ಸಾಧ್ವಿ ನಿರಂಜನ ಮೊದಲ ಬಾರಿ ಸಂಸದೆಯಾಗಿದ್ದು, ತಿಳಿದುಕೊಳ್ಳುವುದು ಬಹಳಷ್ಟಿದೆ. ಅವರಿಗೆ ಅದಕ್ಕೆ ಅವಕಾಶ ನೀಡಬೇಕು. ಅವರು ಕೂಡಾ ಕಲಿತುಕೊಳ್ಳುವುದು ಸಾಕಷ್ಟಿದೆ. ಮಾತಿನ ಮೇಲೂ ಅವರು ಹಿಡಿತ ಸಾಧಿಸಬೇಕಾಗಿದೆ ಎಂಬುದನ್ನು ಮೋದಿಯವರು ಸೂಚ್ಯವಾಗಿ ಹೇಳಿದ್ದಾರೆ. ಹಿಂದೆಂದೂ ಅವರು ಇಂತಹ ದ್ವೇಷಭಾಷಣ ಮಾಡಿದ್ದಾಗಿ ಯಾವುದೇ ವರದಿಗಳಿಲ್ಲ. ಹಾಗೆ ನೋಡಿದರೆ, ರಾಜಕೀಯದಲ್ಲಿ ಹಂತ ಹಂತವಾಗಿ ಪ್ರವರ್ಧಮಾನಕ್ಕೆ ಬರುವುದಕ್ಕೆ ಅವರ ಸಾಧನೆಯ ಹಾದಿಯೇ ಪ್ರಮುಖ ಕಾರಣ.

ಉತ್ತರ ಭಾರತದ ಅತ್ಯಂತ ಹಿಂದುಳಿದ ನಿಷಾದ (ಬೆಸ್ತರು) ಸಮುದಾಯಕ್ಕೆ ಸೇರಿದ ನಲವತ್ತೇಳು ವರ್ಷ ಪ್ರಾಯದ ಸಾಧ್ವಿ ನಿರಂಜನ ಜ್ಯೋತಿ, ಉತ್ತರಪ್ರದೇಶದ ಹಮೀರ್‍ಪುರ ಜಿಲ್ಲೆಯ ಪತಿಉರಾ ಗ್ರಾಮದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 1967ರಲ್ಲಿ ಜನಿಸಿದರು. ಬುಂದೇಲ್‍ಖಂಡದಲ್ಲಿ ನೆಲೆಸಿದ್ದ ಇವರ ಪರಿವಾರ ಜೀವನೋಪಾಯಕ್ಕಾಗಿ ಮೀನು ಹಿಡಿದು ಮಾರಾಟ ಮಾಡುತ್ತಿತ್ತು. ಅವರು ಮನಸ್ಸಿನ ಮಾತುಗಳನ್ನು ಹೇಳುವುದಕ್ಕೆ ಬಾಲ್ಯದಲ್ಲೂ ಹಿಂದುಮುಂದು ನೋಡಿದವರಲ್ಲ. ಇಂಟರ್‍ಮೀಡಿಯೆಟ್ (12) ತನಕ ಶಿಕ್ಷಣ ಪಡೆದ ಅವರು, ವಿಶ್ವ ಹಿಂದು ಪರಿಷದ್‍ನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಅಲ್ಲಿ ಸ್ವಾಮಿ ಅಚ್ಯುತಾನಂದರ ಮಾತುಗಳಿಂದ ಪ್ರಭಾವಿತರಾದ ಅವರು, 21ನೇ ವಯಸ್ಸಿನಲ್ಲಿ ಅವರನ್ನೇ ಗುರುವೆಂದು ಪರಿಗಣಿಸಿ ಸಂನ್ಯಾಸ ಸ್ವೀಕರಿಸಿದರು. ಬಳಿಕ ವಿಶ್ವ ಹಿಂದು ಪರಿಷದ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು, ಉತ್ತರಪ್ರದೇಶದ ಭಗವಾ ಬ್ರಿಗೇಡ್‍ನ ನಾಯಕಿಯಾಗಿ ಗುರುತಿಸಿಕೊಂಡರು. ಮುಂದೆ ವಿಶ್ವ ಹಿಂದು ಪರಿಷದ್‍ನ ಕೇಂದ್ರೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು. ಎಲ್ಲದಕ್ಕಿಂತಲೂ ಹೆಚ್ಚಾಗಿ `ಕಥಾ ವಾಚಕಿ’ ಎಂದೇ ಉತ್ತರಪ್ರದೇಶಾದ್ಯಂತ ಗುರುತಿಸಿಕೊಂಡಿರುವ ಸಾಧ್ವಿ ನಿರಂಜನಾ, ಧಾರ್ಮಿಕ ಉಪನ್ಯಾಸಗಳ ಮೂಲಕ ಸಮಾಜದ ಗಮನಸೆಳೆದವರು.
ತೊಂಭತ್ತರ ದಶಕದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಆಂದೋಲನ ನಡೆದಾಗ ರಾಜಕೀಯವಾಗಿ ಮುಂಚೂಣಿಗೆ ಬಂದ ಅವರು, ದುರ್ಗಾವಾಹಿನಿ, ವಿಹಿಂಪಗಳಲ್ಲಿ ಕೆಲಸ ಮಾಡಿದ ಬಳಿಕ ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಹೆಚ್ಚು ಕಡಿಮೆ ಕಳೆದ ಒಂದೂವರೆ ದಶಕದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಪ್ರದೇಶ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

2002 ಹಾಗೂ 2007ರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಉತ್ತರಪ್ರದೇಶ ವಿಧಾನಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. 2012ರಲ್ಲಿ ಮೊದಲ ಬಾರಿ ಫತೇಪುರ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದ ಸಂಸದೆಯಾಗಿಯೂ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದರು.

ಲೋಕಸಭೆ ಚುನಾವಣೆ ವೇಳೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ಒಂದು ಕ್ರಿಮಿನಲ್ ಪ್ರಕರಣ ತನ್ನ ಮೇಲಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿರುವ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರಿತ ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಸರ್ಕಾರ ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಹೇಳುತ್ತಾರೆ. ಆದರೂ ಅದೊಂದು ಕಪ್ಪುಚುಕ್ಕೆಯಂತೆ ಕಾಣಿಸುತ್ತಿದೆ.

ಇದಾದ ಬಳಿಕ ಜೂನ್ 14ರಂದು ಫತೇಪುರ ಜಿಲ್ಲೆಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಧ್ವಿ ಮೇಲೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಎನ್ನಲಾದ ಕೆಲವರು ದಾಳಿ ನಡೆಸಿದ್ದರು. ಅಂದು ಸುದ್ದಿಯಾಗಿದ್ದ ಅವರು, ಮತ್ತೆ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದು, ಕಳೆದ ತಿಂಗಳು ಮೋದಿ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾದಾಗ.

ಹೀಗೆ ಸಂಪುಟ ಸೇರ್ಪಡೆಗೊಳ್ಳುವುದಕ್ಕೂ ಸಕಾರಣಗಳಿವೆ. ಹಿಂದುಳಿದ ವರ್ಗಕ್ಕೆ ಸೇರಿದ ಸಾಧ್ವಿ ಉಮಾಭಾರತಿಯವರ ನಂತರ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ಹಿಂದುಳಿದ ಸಮುದಾಯದ ಇನ್ನೊಬ್ಬಾಕೆ ಸಾಧ್ವಿ ನಿರಂಜನ ಜ್ಯೋತಿ. ಉತ್ತರಪ್ರದೇಶದ ನದಿ ತೀರದಲ್ಲಿ ವಾಸಿಸುವ ಬೆಸ್ತರು ಇದೇ ನಿಷಾದ ಸಮುದಾಯಕ್ಕೆ ಸೇರಿದವರು. ಅತ್ಯಂತ ಹಿಂದುಳಿದ ಸಮುದಾಯವಾಗಿದ್ದರೂ ರಾಜಕೀಯ ಪಕ್ಷಗಳ ಮಟ್ಟಿಗೆ ರಾಜ್ಯದಲ್ಲಿ ಇದು ಬಹುದೊಡ್ಡ ನಿರ್ಣಾಯಕ ಮತಬ್ಯಾಂಕ್. ಈ ಬಾರಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಲು ಸಿಂಹಪಾಲು ಸದಸ್ಯರನ್ನು ಕಳುಹಿಸಿದ್ದು ಇದೇ ಉತ್ತರಪ್ರದೇಶ. ಹೀಗಾಗಿ ಹಿಂದುಳಿದ ಜನಾಂಗಕ್ಕೆ ಸೇರಿದ ಪ್ರತಿನಿಧಿಯಾಗಿ ಮೋದಿ ಸಂಪುಟದ ಮೂರನೇ ಸಚಿವರಾಗಿ (ಸಾಧ್ವಿ ಉಮಾಭಾರತಿ, ಸಂತೋಷ್ ಗಂಗ್ವಾರ್ ಇನ್ನಿಬ್ಬರು ಸಚಿವರು) ಸಾಧ್ವಿ ನಿರಂಜನ ಸೇರ್ಪಡೆಯಾಗಿದ್ದಾರೆ.

ಇದುವರೆಗೆ ಉತ್ತರಪ್ರದೇಶದಲ್ಲಿ ಹಿಂದುಳಿದ ವರ್ಗದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಬಿಜೆಪಿಯಿಂದ ಕಾಣಿಸಿಕೊಂಡಿದ್ದರು. ಅವರೀಗ ರಾಜಸ್ಥಾನದ ರಾಜ್ಯಪಾಲರಾಗಿದ್ದಾರೆ. ಉತ್ತರಪ್ರದೇಶದಲ್ಲಿ 2017ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿನ ಹಿಂದುಳಿದ ವರ್ಗಗಳ ಮತ ಸೆಳೆಯುವುದಕ್ಕಾಗಿ ಸಾಧ್ವಿ ನಿರಂಜನ ಜ್ಯೋತಿಯವರನ್ನು ಬಿಜೆಪಿ ಬೆಳೆಸುತ್ತಿದೆ ಎಂಬ ವಿಶ್ಲೇಷಣೆ ಕೂಡಾ ಇದೆ.

ಇದಕ್ಕೆ ಪೂರಕವಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಪ್ರಚಾರದ ಹೊಣೆ ಸಾಧ್ವಿ ನಿರಂಜನ ಜ್ಯೋತಿಯವರ ಹೆಗಲೇರಿದೆ. ದೆಹಲಿಯಲ್ಲಿ ಗೆದ್ದು ಅಧಿಕಾರಕ್ಕೇರುವುದು ಬಿಜೆಪಿಯ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿದೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಚುಕ್ಕಾಣಿ ಹಿಡಿಯುವಷ್ಟು ಬಹುಮತ ಸಿಕ್ಕಿರಲಿಲ್ಲ. ಹೀಗಾಗಿ ಸಚಿವ ಸ್ಥಾನದ ಹೊಣೆಯ ಜೊತೆಗೆ ದೆಹಲಿ ಚುನಾವಣೆ ತಮ್ಮ ಸಾಮಥ್ರ್ಯ ನಿರೂಪಿಸುವುದಕ್ಕೆ ಸಾಧ್ವಿಯವರಿಗೆ ಇರುವ ವೇದಿಕೆಯೂ ಹೌದು.

Leave a Reply

Your email address will not be published. Required fields are marked *