ಮೃತ್ಯು ಎರಗಿದ ಮನೆಯಲ್ಲಿ..!

ಕೆಲವೊಮ್ಮೆ ಮೃತ್ಯು ಎಷ್ಟು ಘೋರ ಎಂದು ಅನಿಸೋದಿದೆ. ಮೊದಲ ಸಲ ಸಾವು ಬಂದು ಎರಗುವುದನ್ನು ಕಣ್ಣಾರೆ ಕಂಡ ಆ ಬಾಲ್ಯದ ಮನಸ್ಸಿಗೆ ಅದು ಸರಿಯಾಗಿ ನಾಟಲೇ ಇಲ್ಲ. ಸಿನಿಮಾದಲ್ಲಿ ನೋಡಿದಂತೆ ಆಗಿದ್ರೂ ಮನದಂಗಳದಲ್ಲಿ ಹುದುಗಿ ಹೋಗಿತ್ತು. ಮರಣವನ್ನು ಮರೆತೇ ಹೋಗಿತ್ತು ಮನ… ಆದ್ರೂ ಆಗಾಗ ಬೆಚ್ಚಿ ಬೀಳಿಸುವ ನೆನಪುಗಳು.. 

foto courtesy - s.sfwgifs.com

****
ಬಸ್‌ ನಿಲ್ದಾಣದ ಸಮೀಪವೇ ನೆತ್ತರ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿ.. ಮರಣ ವೇದನೆ ಏನೆಂದು ಅರಿಯದ ಆ ಮನಸು… ಭೀತಿಯಿಂದ ಓಡುತ್ತಿದ್ದ ಜನರ ಓಟ ಸೃಷ್ಟಿಸಿದ ಭಯ ಆವರಿಸಿದ ಆ ಮನ… ಹೀಗೆ ಮೊದಲ ಸಲ ಮೃತ್ಯು ಎರಗಿದ್ದನ್ನು ನೋಡಿದ್ದು ನೆನಪಾದಾಗಲೆಲ್ಲ ಕಣ್‌ ಮುಂದೆ ಬರುವ ದೃಶ್ಯ ಬೇಟೆ ಹಿಡಿಯುತ್ತಿರುವ ಹುಲಿಯ ದೃಶ್ಯ.. ಸಾವು ಹೇಗಿರತ್ತೆ… ? ನೆತ್ತರು ಸೋರಿದ ಶರೀರಕ್ಕೆ ಏನಾಗತ್ತೆ.. ? ಅನ್ನೋದೆಲ್ಲಾ ಆಗ ಬಾಲ್ಯದ ಮನಸ್ಸನ್ನು ಕಾಡಿದ ಪ್ರಶ್ನೆ..
ಇಂತಹ ಪ್ರಶ್ನೆಗಳಿಗೆ ಉತ್ತರ ಹೀಗೂ ಸಿಗಬಹುದು ಎಂಬ ನಿರೀಕ್ಷೆಯೇ ಇರಲಿಲ್ಲ. ಅದೊಂದು ದಿನ.. ಕೊನೆಯ ಚಿಕ್ಕಪ್ಪ ಇನ್ನಿಲ್ಲ ಅನ್ನೋ ಸುದ್ದಿ ಬಂತು. ಅಪ್ಪ, ಅಮ್ಮ, ತಮ್ಮನ ಜೊತೆ ಹಳ್ಳಿಯಲ್ಲಿರೋ ಮನೆಗೆ ಹೋಗಿದ್ದಾಯ್ತು.
ಮನೆಗೆ ಹೋಗುತ್ತಿದ್ದಂತೆ ಅಂಬುಲೆನ್ಸ್‌ನಲ್ಲಿ ಚಿಕ್ಕಪ್ಪನ ಮೃತದೇಹ ತರಲಾಯಿತು. ಚಿಕ್ಕಪ್ಪನ ಒಬ್ಬನೇ ಮಗ ಇನ್ನೂ ಚಿಕ್ಕವ.. ೫ ವರ್ಷ ವಯಸ್ಸು ಇರಬಹುದು.. ಮನೆ ತುಂಬ ಓಡಾಡುತ್ತಿದ್ದ.. ತುಂಟತನ ತೋರುತ್ತಿದ್ದ.. ನಾನು ಟೈಗರ್‌… ಟೈಗರ್‌… ಅನ್ನುತ್ತಾ ಎಲ್ಲರ ಬಳಿಗೂ ಹೋಗುತ್ತಿದ್ದ.. ಆತನಿಗೋ ಇದಾವುದರ ಅರಿವೇ ಇರಲಿಲ್ಲ… ಚಿಕ್ಕಮ್ಮನ ಕಣ್ಣು ಅತ್ತು ಅತ್ತು ಕೆಂಪಗೆ ಊದಿಕೊಂಡಿತ್ತು.
ಮೊದಲ ಮೃತ್ಯುವನ್ನು ಹತ್ಯೆ ರೂಪದಲ್ಲಿ ಕಂಡ ಬಾಲ್ಯದ ಮನಸ್ಸಿಗೆ ಕುತೂಹಲ..  ಚಿಕ್ಕಪ್ಪನ ಸಾವು ಹೇಗೆ ಸಂಭವಿಸಿರಬಹುದು ? ಚಿಕ್ಕಪ್ಪನೂ ಬಸ್‌ ಸ್ಟ್ಯಾಂಡ್ ಬಳಿ ವಿಲವಿಲ ಒದ್ದಾಡಿದಂತೆ ಒದ್ದಾಡಿರಬಹುದೇ ? ಇತ್ಯಾದಿತ್ಯಾದಿ..
ಅವರಿವರ ಮಾತಿಗೆ ಕಿವಿಕೊಟ್ಟಾಗ ಕೇಳಿದ್ದಿಷ್ಟು.. ಚಿಕ್ಕಪ್ಪನಿಗೆ ಅರಸಿನ ಪಿತ್ತ ಕಾಯಿಲೆ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಷ್ಟೇ ಗೊತ್ತಿತ್ತು. ಆದ್ರೆ, ಅರಸಿನ ಪಿತ್ತವೇ ಮೃತ್ಯುವಾದೀತು ಅನ್ನೋ ಕಲ್ಪನೆ ಕೂಡಾ ಇರಲಿಲ್ಲ. ಆ ಚಿಕ್ಕಪ್ಪ ಸರಿಯಾಗಿ  ಅನ್ನಾಹಾರ ಸೇವಿಸದೇ, ನಿದ್ರೆ ಮಾಡದೇ ಕಳೆದ ರಾತ್ರಿಗಳೆಷ್ಟೋ.. ಜಾಂಡೀಸ್ ಬಂದಾಗ ನಿರ್ಲಕ್ಷಿಸಿದ್ದೇ ಇದಕ್ಕೆ ಕಾರಣ..
ಅಷ್ಟೊತ್ತಿಗೆ ಚಿಕ್ಕಪ್ಪನ ಮೃತದೇಹಕ್ಕೆ ಸ್ನಾನ ಮಾಡಿಸಿ ಕಾಲಿನ ಹೆಬ್ಬೆರಳನ್ನು ಒಟ್ಟಿಗೆ ಕಟ್ಟಿದ್ದು ಕಂಡು ಬಂತು.. ಆದರೆ, ಏನೂ ಕೇಳುವ ಧೈರ್ಯ ಇರಲಿಲ್ಲ. ಎಲುಬು-ಚರ್ಮ ಎಂಬಂತಿದ್ದ ಶರೀರ ನೋಡಿ ಅಚ್ಚರಿಯಾಗಿತ್ತು. ಅಂತಿಮ ವಿಧಿವಿಧಾನ ನಡೆಸಿದ ಬಳಿಕ, ಅಂತ್ಯಕ್ರಿಯೆಗಾಗಿ ಮನೆ ಹಿಂದಿನ ಗುಡ್ಡ ಪ್ರದೇಶಕ್ಕೆ ಚಿಕ್ಕಪ್ಪನ ಮೃತದೇಹ ಕೊಂಡೊಯ್ಯಲಾಗಿತ್ತು. ಮಕ್ಕಳು ಯಾರೂ ಬರೋದು ಬೇಡ.. ಎಂದು ದೊಡ್ಡವರೆಲ್ಲಾ ಗಟ್ಟಿ ಧ್ವನಿಯಲ್ಲಿ ಕೂಗಿ ಹೇಳಿದ್ದು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು.
ಒಂದೆಡೆ ಹಿರಿಯರ ಭಯ.. ಇನ್ನೊಂದೆಡೆ ಕೆಟ್ಟ ಕುತೂಹಲ.. ಇಷ್ಟಾದ್ರೂ.. ಹೋಗೋದಕ್ಕೆ ಆಗಲೇ ಇಲ್ಲ.. ಕೊನೆಗೆ, ನಾಲ್ಕಾರು ತಾಸು ಕಳೆದ ಬಳಿಕ, ಏನೋ ನೆಪ ಮಾಡಿ  ಮನೆಯಿಂದ ಹೊರಬಿದ್ದಾಗ, ಮನೆಯಿಂದ ಪೇಟೆಗೆ ಹೋಗೋ ದಾರಿ ಬದಿಯಲ್ಲೇ ಚಿಕ್ಕಪ್ಪನ ಮೃತದೇಹ ಸುಟ್ಟಿದ್ದು ಗಮನಕ್ಕೆ ಬಂತು.. ಯಾಕೋ ಕಣ್ಣು ಆ ಜಾಗದತ್ತ ಸರಿದಾಗ… ಅಲ್ಲಿ ಅರ್ಧ ಸುಟ್ಟ ಹೆಣ ಕಂಡಿತ್ತು.. ಮನೆಗೆ ಬಂದು ವಿಷಯ ತಿಳಿಸಿದಾಗ, ಹಿರಿಯರು ಪರಸ್ಪರ ದೂಷಿಸಲು ಆರಂಭಿಸಿದರು. ಪೂರ್ತಿ ಸುಟ್ಟು ಹೋಗೋ ತನಕ ಅಲ್ಲಿ ನಿಲ್ಲದೇ ಬಂದಿದ್ದೇ ತಪ್ಪು ಎಂದೆಲ್ಲಾ ಹೇಳತೊಡಗಿದರು. ಕೊನೆಗೆ ಮತ್ತೆ ಒಂದಿಬ್ಬರು ಹೋಗಿ ಆದ ತಪ್ಪನ್ನು ಸರಿಪಡಿಸಿ ಬಂದರು..
****
ಮನದಲ್ಲಿ ಮತ್ತೆ ಪ್ರಶ್ನೆಗಳು… ಓಹೋ.. ಯಾರಾದ್ರೂ ಸತ್ತರೆ ಮತ್ತೆ ಅವರನ್ನು ಬೆಂಕಿಗೆ ಹಾಕ್ತಾರೆ.. ಸತ್ತವರಿಗೇನೋ ಗೊತ್ತಾಗುವುದೇ ಇಲ್ವಾ.. ಇತ್ಯಾದಿತ್ಯಾದಿ.. ಸತ್ತ ಮನೆಯಲ್ಲಿ ನೀರವ ಮೌನ.. ಅಳುವಿನದೇ ಸಾಮ್ರಾಜ್ಯ… ನೆನಪುಗಳದ್ದೇ ಮಾತು.. ಹದಿನೈದು ದಿನ ಬಳಿಕ ಎಲ್ಲವೂ ಎಲ್ಲರೂ ಸಹಜ ಸ್ಥಿತಿಗೆ ಬರ್ತಾರೆ… ಬದುಕಿದ್ದಷ್ಟು ದಿನ ಮಾತ್ರ ವ್ಯಕ್ತಿಗೊಂದು ಸ್ಥಾನಮಾನ.. ಇಲ್ಲಾಂದ್ರೆ ಏನೂ ಇಲ್ಲ…

0 thoughts on “ಮೃತ್ಯು ಎರಗಿದ ಮನೆಯಲ್ಲಿ..!

  1. hiriyara maatu satya…..’ jeevanavendare 3 dinada baalu….adu mugidamele nodalaagadu ulidavara golu…..iruvastu dina sukhavaagi baalu..’

Leave a Reply

Your email address will not be published. Required fields are marked *