ರಹೀಲ್ ಎದುರು ಸವಾಲ್

VYAKTHI VISHESHA 28.12.14 VIJAYAVANI - RAHEEL SHARIFಭಾರತದ ವಿರುದ್ಧ ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಛಾಯಾಸಮರ ಸಾರುತ್ತಿರುವ ದೇಶ ಪಾಕಿಸ್ತಾನ. ಅಲ್ಲಿನ ಸೇನೆ ಕೂಡಾ ಇದಕ್ಕೆ ಇಂಬು ನೀಡುತ್ತಿತ್ತು. ಆದರೆ, ಅಂಥ ದೇಶಕ್ಕೆ ಅದೇ ನೆಲದಲ್ಲಿ ಬೆಳೆದ `ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಉಗ್ರ ಸಂಘಟನೆ ಡಿಸೆಂಬರ್ ಮಧ್ಯಭಾಗದಲ್ಲಿ ನೀಡಿದ ಆಘಾತ ಬಹುದೊಡ್ಡದು. ಪೇಶಾವರದ ಸೇನಾ ಶಾಲೆಗೆ ನುಗ್ಗಿದ ಒಂಭತ್ತು ಪಾಕಿಸ್ತಾನಿ ತಾಲಿಬಾನ್ ಉಗ್ರರು 130ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 142 ಜನರನ್ನು ನಿರ್ದಯವಾಗಿ ಹತ್ಯೆಮಾಡಿದ್ದರು. ಈ ಘಟನೆ ಪಾಕ್ ಸೇನೆಗೆ ಭಾರಿ ಆಘಾತವನ್ನೇ ನೀಡಿತು. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್, ತಾಲಿಬಾನ್ ಉಗ್ರರ ಕೃತ್ಯವನ್ನು ಖಂಡಿಸಿ ಸರಣಿ ಟ್ವೀಟ್ ಪ್ರಕಟಿಸಿದರು. ಅವುಗಳ ಪೈಕಿ, `#PakArmy will come at you #Taliban & will destroy you. And they will not target women & children. They are not coward like you’ ಎಂಬ ಟ್ವೀಟ್ ಭಾರಿ ಸಂಚಲನವನ್ನೇ ಉಂಟುಮಾಡಿತ್ತು.

ಹೀಗೆ ಟ್ವೀಟ್ ಪ್ರಕಟವಾದ ಬೆನ್ನಲ್ಲೇ, ಒಂದು ಗಂಟೆ ಅವಧಿಯಲ್ಲಿ ಖೈಬರ್ ಪ್ರಾಂತ್ಯದಲ್ಲಿ ಉಗ್ರರ ಅಡಗುದಾಣದ ಮೇಲೆ 10 ವೈಮಾನಿಕ ದಾಳಿಯನ್ನು ಪಾಕ್ ಸೇನೆ ನಡೆಸಿತ್ತು. ಸೆರೆಯಲ್ಲಿರುವ 3000ಕ್ಕೂ ಹೆಚ್ಚು ಉಗ್ರರನ್ನು ಮುಂದಿನ 48 ಗಂಟೆಗಳೊಳಗೆ ನೇಣಿಗೇರಿಸಬೇಕು ಎಂದು ಪ್ರಧಾನಿ ನವಾಜ್ ಷರೀಫ್ ಅವರನ್ನು ಕೇಳಿಕೊಂಡಿದ್ದಾಗಿ ಜ.ರಹೀಲ್ ಡಿ.17ರಂದು ಟ್ವೀಟ್ ಮಾಡಿದರು. ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ ಸೇನೆ, ಸೆರೆಯಲ್ಲಿರುವ ಉಗ್ರರ ಪೈಕಿ ಆರು ಜನರಿಗೆ ಗಲ್ಲು ಶಿಕ್ಷೆ ವಿಧಿಸುವ ತೀರ್ಮಾನ ತೆಗೆದುಕೊಂಡಿತು. ಈ ನಡುವೆ, ಡಿ.25ರಂದು ಪಾಕಿಸ್ತಾನ ಸೇನಾ ಪ್ರಮುಖರ ಸಭೆ ಕರೆದ ಜ. ರಹೀಲ್ ಷರೀಫ್, `ಉಗ್ರ ನಿಗ್ರಹಕ್ಕೆ ರಾಷ್ಟ್ರ ಮಟ್ಟದ ಕ್ರಿಯಾ ಯೋಜನೆ’ ತುರ್ತು ಅಗತ್ಯ ಎಂಬುದನ್ನು ಸಾರಿದರು. ಆಗ ಇಡೀ ಜಗತ್ತು ಅವರ ಕಡೆಗೆ ನೋಡ ತೊಡಗಿತು. ಜೊತೆಗೆ ಯಾರಿವರು ಎಂಬ ಕುತೂಹಲವೂ ಹೆಚ್ಚಾಗಿತ್ತು.

2013ರ ನವೆಂಬರ್ ತಿಂಗಳಲ್ಲಿ ಸೇವಾ ಹಿರಿತನಕ್ಕೆ ಹೊರತಾಗಿ ಪಾಕಿಸ್ತಾನದ 15ನೇ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದವರು ರಹೀಲ್ ಷರೀಫ್. ನವಾಜ್ ಷರೀಫ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ತಿಂಗಳ ಬಳಿಕ ಈ ನೇಮಕ ಆಗಿತ್ತು. ಹಾಗಂತ ಇವರೇನೂ ಪ್ರಧಾನಿ ಷರೀಫ್ ಅವರ ಸಂಬಂಧಿ ಅಲ್ಲ. ಆದರೆ, ಷರೀಫ್ ಅವರ ಸಚಿವ ಸಂಪುಟದ ಬುಡಕಟ್ಟು ವ್ಯವಹಾರಗಳ ಸಚಿವ ಲೆ.ಜ.ಅಬ್ದುಲ್ ಖಾದಿರ್ ಬಲೂಚ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ರಹೀಲ್. ಅಂದು ಸೇನಾ ಮುಖ್ಯಸ್ಥರ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ಮೂವರ ಪೈಕಿ ಸೇವಾ ಹಿರಿತನ ಪರಿಗಣಿಸಿದರೆ ಇವರೇ ಕೊನೆಯವರಾಗಿದ್ದರು. ಯಾವುದೇ ರಾಜಕೀಯ ಇಚ್ಛೆಗಳಿಲ್ಲದ ನೇರ ನಡೆ ನುಡಿಯ ವೃತ್ತಿಪರ ಸೈನ್ಯಾಧಿಕಾರಿ ಎಂಬ ಅಂಶವೇ ರಹೀಲ್ ಅವರಿಗೆ ಪ್ಲಸ್ ಪಾಯಿಂಟ್ ಆಗಿಬಿಟ್ಟಿತು. ಪ್ರಧಾನಿ ಷರೀಫ್ ಗಮನ ಸೆಳೆದಿದ್ದೂ ಇದೇ ಅಂಶ.

ಕೌಟುಂಬಿಕವಾಗಿಯೂ ಸೇನಾ ಹಿನ್ನೆಲೆ ಹೊಂದಿದ ರಹೀಲ್ 1956ರ ಜೂನ್ 16ರಂದು ಕ್ವೆಟ್ಟಾದಲ್ಲಿ ಜನಿಸಿದರು. ತಂದೆ ಮೇಜರ್ ಮುಹಮ್ಮದ್ ಶರೀಫ್. ಹಿರಿಯ ಸಹೋದರ ಮೇಜರ್ ಶಬ್ಬೀರ್ ಷರೀಫ್ 1971ರ ಭಾರತ- ಪಾಕ್ ಯುದ್ಧದಲ್ಲಿ ಮೃತರಾಗಿದ್ದು, ಮರಣೋತ್ತರವಾಗಿ ನಿಶಾನ್ ಎ ಹೈದರ್ ಪುರಸ್ಕಾರಕ್ಕೆ ಪಾತ್ರರಾದವರು. ಮೂವರು ಸಹೋದರರ ಪೈಕಿ ರಹೀಲ್ ಕೊನೆಯವರು. ಇನ್ನೊಬ್ಬ ಸಹೋದರ್ ಮುಮ್ತಾಜ್ ಷರೀಫ್ ಕೂಡಾ ಪಾಕ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ವೈದ್ಯಕೀಯ ಕಾರಣಕ್ಕೆ ಬಹುಬೇಗ ನಿವೃತ್ತಿ ಪಡೆದಿದ್ದರು. ನಿಶಾನ್ ಎ ಹೈದರ್ ಪುರಸ್ಕಾರಕ್ಕೆ ಪಾತ್ರರಾಗಿದ್ದ ಮೇಜರ್ ರಜಾ ಅಜೀಜ್ ಭಟ್ಟಿ ಅವರು ರಹೀಲ್‍ರ ಸೋದರಮಾವ. ಅವರು 1965ರ ಭಾರತ- ಪಾಕ್ ಯುದ್ಧದಲ್ಲಿ ಸಾವನ್ನಪ್ಪಿದ್ದರು. ಸದ್ಯ 58 ವರ್ಷದ ರಹೀಲ್ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನೊಳಗೊಂಡ ಸಂಸಾರ ಹೊಂದಿದ್ದಾರೆ.
ಅವರು ಲಾಹೋರ್‍ನ ಸರ್ಕಾರಿ ಕಾಲೇಜಿನಲ್ಲಿ ಸಾಮಾನ್ಯ ಶಿಕ್ಷಣ ಪಡೆದು ಪಾಕಿಸ್ತಾನ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಗೊಂಡರು. ಪದವಿ ಪರೀಕ್ಷೆ ಉತ್ತೀರ್ಣರಾದ ಬಳಿಕ 1976ರಲ್ಲಿ ಸೇನೆಯ ಆರನೇ ಬೆಟಾಲಿಯನ್ ದ ಫ್ರಂಟಿಯರ್  ಪೋರ್ಸ್ ರೆಜಿಮೆಂಟ್‍ಗೆ ಸೇರಿದರು. ಇದೇ ರೆಜಿಮೆಂಟ್‍ಗೆ ಇದಕ್ಕೂ ಮೊದಲು ಇವರ ಹಿರಿಯ ಸಹೋದರ ಕೂಡಾ ಸೇರ್ಪಡೆಗೊಂಡಿದ್ದರು.

ಜರ್ಮನಿ, ಕೆನಡಾ ಮತ್ತು ಬ್ರಿಟನ್‍ಗಳಲ್ಲಿ ಸೇನಾ ನಾಯಕತ್ವ ತರಬೇತಿ ಪಡೆದ ಯುವ ಸೇನಾಧಿಕಾರಿಯಾಗಿ ರಹೀಲ್ ಗಿಲ್‍ಗಿಟ್ ಸೇರಿದಂತೆ ವಿವಿಧೆಡೆ ಸೇನಾ ಕಾರ್ಯಗಳನ್ನು ಮುತುವರ್ಜಿಯಿಂದ ಮಾಡಿದವರು. ಅನೇಕ ವರ್ಷಗಳ ಸೇವಾನುಭವ ಪಡೆದ ಅವರು, ಜನರಲ್ ಪರ್ವೇಜ್ ಮುಷರಫ್ ಕಾಲಾವಧಿಯಲ್ಲಿ ಲಾಹೋರಿನ 11ನೇ ಇನ್‍ಫೆಂಟ್ರಿ ವಿಭಾಗಕ್ಕೆ ಕಮಾಂಡರ್ ಆಗಿ ಬಡ್ತಿ ಪಡೆದರು. ಸೇನೆಯಲ್ಲಿ ಸೈನಿಕನಾಗಿ ಸೇವೆಗೆ ಸೇರಿದ ಅವರು ಬ್ರಿಗೇಡಿಯರ್ ಆಗಿ ಒಂದು ಸ್ವತಂತ್ರ ಇನ್‍ಫೆಂಟ್ರಿ ಬ್ರಿಗೇಡ್ ಗ್ರೂಪ್ ಸೇರಿದಂತೆ ಎರಡು ಇನ್‍ಫೆಂಟ್ರಿಗಳನ್ನು ಮುನ್ನಡೆಸಿದರು. ಜನರಲ್ ಆಫೀಸರ್ ಕಮಾಂಡಿಂಗ್, ಲೆಫ್ಟಿನೆಂಟ್ ಜನರಲ್, ಅಬೋಟಾಬಾದ್‍ನಲ್ಲಿರುವ ಪಾಕಿಸ್ತಾನ ಸೇನಾ ಅಕಾಡೆಮಿಯ ಮುಖ್ಯಸ್ಥ ಹೀಗೆ ಹಂತ ಹಂತವಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದರು. ಸೇನಾ ಮುಖ್ಯಸ್ಥರಾಗುವ ಮುನ್ನ ಅವರು ರಾವಲ್ಪಿಂಡಿಯ ಸೇನಾ ಕೇಂದ್ರ ಕಚೇರಿಯ ತರಬೇತಿ ಹಾಗೂ ಮೌಲ್ಯಮಾಪನ ವಿಭಾಗದ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಸೇನೆಗೆ ಸೇರಿದಂದಿನಿಂದಲೂ ವಿವಾದಿತ ಗಡಿ ಪ್ರದೇಶ ಕಾಶ್ಮೀರದಲ್ಲೇ ಹಲವು ಇನ್‍ಫೆಂಟ್ರಿ ಘಟಕಗಳ ನಾಯಕತ್ವ ವಹಿಸಿದ್ದರು. ಸೇನಾ ಅಕಾಡೆಮಿ ಮುಖ್ಯಸ್ಥರಾಗಿದ್ದ ಕಾಲದಲ್ಲಿ ತರಬೇತಿ ವೇಳೆ ಪಠ್ಯದ ಜೊತೆಗೆ ಕ್ಷೇತ್ರ ಕಾರ್ಯ (Field Experience)ದ ಅನುಭವವನ್ನೂ ಸೈನಿಕರು ಪಡೆಯುವಂತಹ ಅವಕಾಶವನ್ನು ಒದಗಿಸಿದರು. ಹೀಗೆ ಸೇನಾ ತರಬೇತಿಯ ಒಟ್ಟು ಚಿತ್ರಣವನ್ನೇ ಬದಲಾಯಿಸಿದ ಕೀರ್ತಿ ಅವರದ್ದು.
ಉಗ್ರ ನಿಗ್ರಹದ ವಿಚಾರಕ್ಕೆ ಬಂದರೆ, 2007ರಿಂದೀಚೆಗೆ ಪಾಕಿಸ್ತಾನದ ಸೇನಾ ಚಿಂತನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಾಂಪ್ರದಾಯಿಕ ವೈರಿ ಭಾರತ ಎಷ್ಟು ಅಪಾಯಕಾರಿಯೋ ಅಷ್ಟೇ ಅಪಾಯಕಾರಿ ದೇಶದೊಳಗಿನ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್ ಮತ್ತು ಇತರೆ ಉಗ್ರ ಸಂಘಟನೆಗಳು. ಅವುಗಳನ್ನು ಮಟ್ಟ ಹಾಕಬೇಕೆಂಬ ಚಿಂತನೆಗೆ ಚಾಲನೆ ಕೊಟ್ಟರು. ಉಗ್ರರನ್ನು ಹತ್ತಿಕ್ಕಲು ಅಗತ್ಯ ಕ್ರಮ ತೆಗೆದುಕೊಳ್ಳಲು ಸೇನೆಯ ಮನವೊಲಿಸುವಲ್ಲಿ ರಹೀಲ್ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲ, ಆಂತರಿಕ ಭಯೋತ್ಪಾದನೆಯನ್ನು ಗಮನದಲ್ಲಿರಿಸಿಕೊಂಡು ಅದರ ಸವಾಲುಗಳನ್ನು ಎದುರಿಸಲು ಸೇನೆಯನ್ನು ಸಜ್ಜುಗೊಳಿಸಿದ್ದರು. ಇಂತಹ ಹಲವು ಸಾಧನೆಗಾಗಿ ಅನೇಕ ಪುರಸ್ಕಾರಗಳು ಅವರ ಪಾಲಾಗಿವೆ ಎಂಬುದನ್ನು ಹಿರಿಯ ಸೇನಾಧಿಕಾರಿಗಳೇ ಹೇಳಿಕೊಂಡಿದ್ದಾರೆ.

ಸೇನಾ ಮುಖ್ಯಸ್ಥರಾಗಿ ರಹೀಲ್ ಅವರ ಸೇವಾವಧಿ ನಾಲ್ಕು ವರ್ಷಕ್ಕೂ ಅಧಿಕ ಇದೆ. ಸುಮಾರು ಹತ್ತು ವರ್ಷಗಳಿಂದ ಟಿಟಿಪಿ ಬಗ್ಗೆ ಜಾಗೃತಿಯ ಕಹಳೆ ಊದುತ್ತಲೇ ಬಂದ ರಹೀಲ್, ಉಗ್ರರು ಮಕ್ಕಳ ಮೇಲೆರಗಿದ್ದನ್ನು ಕಂಡ ವ್ಯಗ್ರರಾಗಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಸಂಪೂರ್ಣ ನಿಗ್ರಹಿಸುವುದೇ ಪಾಕ್ ಸೇನೆಯ ಗುರಿ ಎಂಬುದನ್ನೂ ಘಂಟಾಘೋಷವಾಗಿ ಸಾರಿದ್ದಾರೆ. ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ಈ ಕಾರ್ಯಕ್ಕೆ ಬೆಂಬಲ ಯಾಚಿಸಿರುವ ಅವರು, ಉಗ್ರ ನಿಗ್ರಹಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದೇ ಸದ್ಯದ ಕುತೂಹಲ.

Leave a Reply

Your email address will not be published. Required fields are marked *