ರಾಜಕೀಯವೂ ವ್ಯಾಪರೀಕರಣವಾದಾಗ…

 

foto courtesy - indianbloggers.com

 

ವಿಧಾನ ಸೌಧಕ್ಕೇ ಮಾಟ…. ಮುಖ್ಯಮಂತ್ರಿ ಯಡಿಯೂರಪ್ಪ ಕೇರಳದ ರಾಜರಾಜೇಶ್ವರಿ ದೇವಸ್ಥಾನಕ್ಕೆ… ಅತೃಪ್ತ ಶಾಸಕರು ಶಿರಡಿಗೆ… ಅವರವರ ಇಷ್ಟ ದೇವರಿಗೆ ಮೊರೆ… ಯಾವ ಚಾನೆಲ್ ಕಿವಿ ಹಿಡಿದ್ರೂ ಅದೇ ಸುದ್ದಿ…  ಪತ್ರಿಕೆಯಲ್ಲೂ ಅದೇ ಸುದ್ದಿ… ಇವ್ರೆಲ್ಲಾ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ದೇವರ ಮೊರೆ ಹೋಗಿದ್ದಾರಲ್ಲ… ಹಾಗಾದ್ರೆ ಅಲ್ಲಿನ ಪರಿಸ್ಥಿತಿ ಏನಿರಬಹುದು ? ಇದರ ವರದಿ ಯಾರು ಕೊಡ್ತಾರೆ.. ಹೀಗೊಂದು ಸಂಶಯ ಕಾಡಿತ್ತು ಭಕ್ತ ಮಹಾಶಯನೊಬ್ಬನಿಗೆ…

****

ಭೂಲೋಕದಲ್ಲಿ ನಾರದ ಮಹಾಮುನಿಯ ಕೆಲಸವನ್ನು ಮಾಧ್ಯಮಗಳು, ಪತ್ರಿಕೆಗಳು ನಿರ್ವಹಿಸ್ತಿವೆ. ಆದ್ರೆ, ಭೂಲೋಕದ ಸುದ್ದಿ ದೇವಲೋಕಕ್ಕೆ ದೇವಲೋಕದ್ದು ಭೂಲೋಕಕ್ಕೆ ತಿಳಿಸೋದಕ್ಕೆ ಒಂದು ವ್ಯವಸ್ಥೆ ಬೇಕಲ್ವೇ ? ರಾಜ್ಯದ ಆಡಳಿತ ಬಿಟ್ಟು ಜನಪ್ರತಿನಿಧಿಗಳು ಹೀಗೆ ದೇವರ ಮೊರೆ ಹೋದ್ರೆ ಗತಿ ಏನು ? ಭೂಲೋಕದಲ್ಲಂತೂ ಜನರಲ್ಲಿ ಒಗ್ಗಟ್ಟಿಲ್ಲ. ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ. ಪ್ರತಿಯೊಬ್ಬನ ಜೀವನದೊಳಕ್ಕೂ ಕಾಲೆಳೆಯುವ ರಾಜಕಾರಣ ಹಾಸುಹೊಕ್ಕಾಗಿದೆ. ಎಲ್ಲರಲ್ಲೂ ಒಂದೇ ಒಂದು ಸಾಮ್ಯತೆ ಇದೆ… ಅದೇನಪ್ಪಾ ಅಂದ್ರೆ… ಸಂಕಟ ಬಂದಾಗ ಎಲ್ರೂ ದೇವರನ್ನು ಸ್ಮರಿಸ್ತಾರೆ. ದೇವಸ್ಥಾನಕ್ಕೋ, ಮಸೀದಿಗೋ, ಚರ್ಚಿಗೋ ಓಡ್ತಾರೆ… ದೇವರಿಗೆ ಆಮಿಷ ಒಡ್ಡಿ ಬೇಡಿಕೆ ಈಡೇರಿಸುವಂತೆ ಕೋರಿಕೆ ಸಲ್ಲಿಸ್ತಾರೆ.. ಕೋರಿಕೆ ಈಡೇರಿದ ಕೂಡ್ಲೇ ಹೋಗಿ ಆನೆಯನ್ನೋ, ಏನೇನನ್ನೋ ಕಾಣಿಕೆಯಾಗಿ ಸಮರ್ಪಿಸ್ತಾರೆ.. ಈ ವಿಚಾರ ಹಾಗಿರಲಿ…

ಸದ್ಯದ ರಾಜ್ಯ ರಾಜಕೀಯ ನೋಡಿದ್ರೆ… ನಿಜವಾಗ್ಲೂ ಆತಂಕವಾಗತ್ತೆ.. ಜನರೇ ಆಯ್ಕೆ ಮಾಡಿ ಕಳುಹಿಸಿದಂತಹ ಜನಪ್ರತನಿಧಿಗಳು ಈ ಮಟ್ಟಕ್ಕೆ ಇಳಿದ್ರೆ… ಇನ್ನು ದೇವರು ಏನ್‌ ಮಾಡಬಹುದು ? ಬಿಜೆಪಿ ದೇವರು, ಜೆಡಿಎಸ್ ದೇವರು, ಕಾಂಗ್ರೆಸ್ ದೇವರು… ಯಾಕೆ ಹೀಗೆ ಹೇಳಿದೆ ಅಂದ್ರೆ.. ಎಲ್ಲ ಪಕ್ಷದವರೂ ತಮ್ಮದೇ ಸರಿ ಎಂಬಂತೆ ವರ್ತಿಸಿದ್ದಾರೆ. ಎಲ್ಲ್ರೂ ಈ ಸಂಕಷ್ಟ ಕಾಲದಲ್ಲಿ ದೇವರನ್ನೇ ಸ್ಮರಿಸ್ತಿದ್ದಾರೆ. ದೇವರು ಯಾರ ಮಾತು ಕೇಳ್ತಾರೆ… ಭಾರತದಲ್ಲಿ ಹಲವು ದೇವರುಗಳಿದ್ದಾರೆ. ಹಾಗಾಗಿ ದೇವಲೋಕದಲ್ಲೂ ಈಗ ಇದೇ ಪರಿಸ್ಥಿತಿ ಇರಬಹುದೇನೋ..

ದಕ್ಷಿಣ ಭಾರತದಲ್ಲಿ ಇದೇ ಮೊದಲ ಸಲ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಯಡಿಯೂರಪ್ಪ ಅಧಿಕಾರ ಚುಕ್ಕಾಣಿ ಹಿಡಿದ್ದಾರೆ. ಯಡಿಯೂರಪ್ಪ ನಂಬ್ತಿರೋದು ಕೇರಳದ ದೇವರನ್ನು.. ಅತೃಪ್ತರು ಕೆಲವರು ಶಿರಡಿ ಕಡೆ ಮುಖ ಮಾಡಿದ್ರೆ,ಇನ್ನು ಕೆಲವರು ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಕಂಡ ಕಂಡ ದೇವರನ್ನೆಲ್ಲಾ ಕೇಳೋದು ಒಂದೇ… ಕುರ್ಚಿ ಉಳಿಸಪ್ಪ…. ರಾಜ್ಯ”ಭಾರ” ನಡೆಸಲು ಅನುವು ಮಾಡಿಕೊಡು ದೇವಾ…

****

ದೇವಲೋಕದಲ್ಲೂ ಪರಿಸ್ಥಿತಿ ಅಲ್ಲೋಲ ಕಲ್ಲೋಲ ಆಗಿರುವ ಸಾಧ್ಯತೆಯೇ ಹೆಚ್ಚು.. ಯಡಿಯೂರಪ್ಪ ಅವರ ಪ್ರಾರ್ಥನೆ ಕೇಳಿದ ಕೇರಳದ ದೇವರು  ಏನ್‌ ಮಾಡಬಹುದು… ಎಲ್ಲ ಜನ ಪ್ರತಿನಿಧಿಗಳು ತಮ್ಮ ತಮ್ಮ ಲಾಭಕ್ಕಾಗಿ ಅವರವರ ಇಷ್ಟ ದೇವರ ಮೊರೆ ಹೋಗಿದ್ದಾರೆ. ದೇವರು ಈ ಭಕ್ತರ ಬೇಡಿಕೆ ಈಡೇರಿಸ್ತಾರಾ… ಅಥವಾ ಅಲ್ಲೂ ಇದೇ ರೀತಿ ಕಾಲೆಳೆಯುವ ಪ್ರಯತ್ನ… ಊಹೂಂ ಗೊತ್ತಾಗ್ತಾ ಇಲ್ಲ..

ಯಾಕೆಂದ್ರೆ ಎಲ್ಲ ದೇವರುಗಳು ಕೂಡಾ ತಮ್ಮ ಭಕ್ತರ ಬೇಡಿಕೆ ಈಡೇರಿಸಲೇ ಬೇಕಲ್ವೇ… ಬಹುಶಃ ಅವ್ರೂ ಸಭೆ ಸೇರಿರಬಹುದೇನೋ.. ಭಕ್ತರು ಎಷ್ಟೆಷ್ಟು ಕೋಟಿ ಡೀಲ್ ಮಾಡ್ತಾರೆ ಅಂತ ನೋಡ್ತಾ ಇರಬಹುದು… ಯಾವ ಪಕ್ಷದವರು ಯಾವ ಪಕ್ಷದ ಶಾಸಕರನ್ನು ತಮ್ಮ ಬಲೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಲೆಕ್ಕಾಚಾರದಲ್ಲೂ ಇರಬಹುದು.. ಅಲ್ಲೂ ಬೆಟ್ಟಿಂಗ್ ದಂಧೆ ಪ್ರಾರಂಭವಾಗಿರಬಹುದೇನೋ…

ಪರಿಸ್ಥಿತಿಯ ಲಾಭ ಪಡೆದುಕೊಳ್ಳುವುದು ಮಾನವನ ಲೆಕ್ಕಾಚಾರ ಅಲ್ವೇ… ಏನಿದ್ರೂ ನಾವು ಮಾನವರು ದೇವಲೋಕದಲ್ಲಿ ಏನು ನಡೀತಿರಬಹುದು ಅಂತ ಕುಳಿತಲ್ಲಿಂದಲೇ ನಮ್ಮ ಅನುಭವದ ವ್ಯಾಪ್ತಿಗೆ ತಕ್ಕಂತೆ ಊಹಿಸ್ತೇವೆ… ಅದನ್ನೇ ಹೇಳ್ತೇವೆ… ಹೀಗಂತ ಹೇಳಿ ಕೈ ತೊಳೆದು ಬಿಟ್ಟ ಆ ಭಕ್ತ ಮಹಾಶಯ..

****

ಒಟ್ಟಿನಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷದ ರಾಜಕೀಯ ಚಟುವಟಿಕೆ ನಿಜಕ್ಕೂ ಕುತೂಹಲ ಕೆರಳಿಸುವಂಥಾದ್ದು. ಒಂದೆಡೆ ದೇವರಿಗೆ ಮೊರೆ… ಇನ್ನೊಂದೆಡೆ ಮಾಟ ಮಂತ್ರ… ದೇವರ ಮತ್ತು ಕ್ಷುದ್ರ ಶಕ್ತಿಗಳ ಮೊರೆ ಹೋಗಿರುವುದರಿಂದ ಈ ಶಕ್ತಿಗಳ ಲೋಕದಲ್ಲೂ ಇದೇ ರಾಜಕೀಯ ಪರಿಸ್ಥಿತಿಯನ್ನು ಒಮ್ಮೆ ಊಹಿಸಿ ನೋಡಿ…

Leave a Reply

Your email address will not be published. Required fields are marked *