ಲವ್ ಅಟ್ ಫಸ್ಟ್ ಸೈಟಾ ?

ಆಕೆಗೆ ರಸ್ತೆ ದಾಟುವ ಧಾವಂತ. ಬೆಂಗಳೂರಿನಲ್ಲೇನು ಟ್ರಾಫಿಕ್ ನಿಲ್ಲತ್ತಾ ? ವಾಹನಗಳಿಗೂ ಗುರಿ ಸೇರುವ ತವಕ. ಅದು ಬೆಳಗ್ಗಿನ ೮ ಗಂಟೆ. ಶೇಷಾದ್ರಿಪುರಂ ರಸ್ತೆ ಅದು. ಕೇಳಬೇಕೆ ? ಬೆಳಗಿನ ಹೊತ್ತಂತೂ ರಸ್ತೆ ದಾಟಬೇಕಾದ್ರೆ ಹರಸಾಹಸ ಮಾಡ್ಲೇ ಬೇಕು. ಅಂಥದ್ರಲ್ಲಿ ಅವಸರ ಮಾಡಿದ್ರೆ ಯಾವನಾದ್ರೂ ಬಂದು ಢೀ ಕೊಟ್ಟೇ ಕೊಡ್ತಾನೆ. ಅಂದೂ ಅದೇ ಆಯ್ತು. ಆಕೆ ರಸ್ತೆಗೆ ಇಳಿದೇ ಬಿಟ್ಟಿದ್ಳು. ಅತ್ತ ಸ್ಕೂಟರ್‌ನವನೊಬ್ಬ ಬಂದು ಆಕೆಗೆ ಢೀ ಕೊಟ್ಟೇ ಬಿಟ್ಟ. ಹೇಗೂ ಢೀ ಕೊಟ್ಟಾಗಿದೆ. ನಿಂತ್ರೆ ಗ್ರಹಚಾರ ಕೆಡತ್ತೆ ಅಂತ ಅವನೋ ಮುಂದಕ್ಕೋಡಿದ್ದ. ಆಕೆ ರಸ್ತೆ ಮೇಲೆ ಬಿದ್ದು ಬಿಟ್ಳು. ಗಲಿಬಿಲಿಯಿಂದ ಎದ್ದಾಕೆ ಮತ್ತೆ ಹಿಂದಕ್ಕೆ ಓಡಿದ್ಳು. ವಾಹನ ಸವಾರರಿಗೋ ಇವ್ಳನ್ನು ತಪ್ಪಿಸಬೇಕಾದ ಪೇಚುಹಾಗೂ ಹೀಗೂ ಫೂಟ್‌ಪಾತ್ ಏರಿದ ಚೆಲುವೆಗೆ ನೆರವಾಗಲು ಬಂದವರೋ ಹತ್ತಾರು ಜನಆದ್ರೆ ಆಕೆ ಅವರನ್ನೆಲ್ಲಾ ಬಿಟ್ಟು ನಡೆದುದು ಎಲ್ಲಿಗೆ ಗೊತ್ತಾ ?

 

 

courtesy - birdie.glogster.com

*****

 ಇದೇ ವೇಳೆ , ಶೇಷಾದ್ರಿಪುರಂ ಲಿಂಕ್ ರೋಡ್‌ನಿಂದ ಸ್ವಸ್ತಿಕ್ ಸರ್ಕಲ್ ಕಡೆಗೆ ಫೂಟ್‌ಪಾತ್ ಮೇಲೆ ಯುವಕನೊಬ್ಬ ನಡೆದು ಬರ್‍ತಾ ಇದ್ದ. ಆತನೋ ಅವನದೇ ಯೋಚನೆಯಲ್ಲಿದ್ದ. ಆದ್ರೂ ಕಣ್ ಮುಂದೆ ನಡೆದ ಘಟನೆ ನೋಡ್ತಾ ನೋಡ್ತಾ ಹೋಗ್ತಿದ್ದ. ಇನ್ನೇನು ಆ ಅಪಘಾತ ನಡೆದ ಸ್ಥಳಕ್ಕೆ ತಲುಪುವುದಕ್ಕೂ ಆ ಚೆಲುವೆ ಅವನತ್ತ ನಡೆದು ಬರುವುದಕ್ಕೂ ಸರಿ ಹೋಯ್ತು.
 *****

ಆಕೆ : ಸ್ವಲ್ಪ ಹೆಲ್ಪ್ ಮಾಡ್ತೀರಾ ?

 

 

 ಆತ ಆಕೆಯನ್ನೊಮ್ಮೆ ನೋಡ್ತಾನೆ . ಮುದ್ದಾದ ಚೆಲುವೆ. ಮುಖದಲ್ಲಿ ಮುಗ್ಧತೆ. ಕಣ್ಣಲ್ಲಿ ಭೀತಿ. ತಡವರಿಸುವ ಮಾತು. ಅಷ್ಟರಲ್ಲೇ ಮನದಲ್ಲಿ ನೂರೆಂಟು ಪ್ರಶ್ನೆ. ಇಷ್ಟೊಂದು ಜನ ಸಹಾಯಕ್ಕಾಗಿ ಮುಂದಾದ್ರೂ ಈಕೆ ನನ್ ಬಳಿ ಯಾಕೆ ಬಂದ್ಳು ?

 

 

 ಆತನಿಂದ ಪ್ರತಿಕ್ರಿಯೆ ಬಾರದೇ ಹೋದಾಗ ,
 
 ಆಕೆ : ಮೊಣಕೈ ಸಮೀಪ ಗಾಯ ಆಗಿದೆ. ಸ್ವಲ್ಪ ನೀರು ಹಾಕಿ ತೊಳೀತೀರಾ
 
 ಆತ ಎಚ್ಚೆತ್ತುಕೊಂಡ . ಯಾರೋ ನೀರು ತಂದುಕೊಟ್ಟರು. ಆತ ಆಕೆಯ ಮೊಣಕೈಗೆ ನೀರು ಹಾಕಿ ನಿಧಾನವಾಗಿ ನೋವಾಗದಂತೆ ರಕ್ತ ತುಂಬಿದ ಗಾಯವನ್ನು ತೊಳೆದ. ಬಳಿಕ ಸಮೀಪವೇ ಇದ್ದ ಮೆಡಿಕಲ್ ಶಾಪ್‌ಗೆ ಆಕೆಯನ್ನು ಕರೆದೊಯ್ದು ಆಯಿಂಟ್‌ಮೆಂಟ್ ತಗೊಂಡು ಆ ಗಾಯಕ್ಕೆ ಹಚ್ಚಿ ಬ್ಯಾಂಡೇಜ್ ಮಾಡಿದ. ಅಷ್ಟರಲ್ಲಾಗಲೇ, ಆಕೆಯಿಂದ ಸೂಕ್ತ ಪ್ರತಿಕ್ರಿಯೆ ಬಾರದೇ ಹೋದ್ದರಿಂದ ಸಹಾಯಕ್ಕೆ ಮುಂದಾಗಿದ್ದವರೆಲ್ಲಾ ಕರಗಿಹೋಗಿದ್ದರು.
ಆತ ನಿಧಾನವಾಗಿ ಮಾತಿಗಾರಂಭಿಸಿದ..  

ಆತ  : ಏನಾಯ್ತು ? ಹೇಗಾಯ್ತು ?

ಆಕೆ  : ಏನೋ ಯೋಚನೆ ಮಾಡ್ತಾ ರಸ್ತೆ ದಾಟೋಕೆ ಹೋದೆ. ತುಂಬಾ ಟೆನ್ಶನ್ ಯಾಕೋ ಮನಸ್ಸೇ ಸರಿ ಇಲ್ಲ. ರಸ್ತೆ ದಾಟೋವಾಗ ಸ್ಕೂಟರ್‌ನವನು ಬಂದು ಹೊಡೀತಾನೆ ಅಂತ ಅಂದ್ಕೊಂಡಿರಲಿಲ್ಲ.
 
 ಆತ   : ಸರಿ. ರಸ್ತೆ ದಾಟೋವಾಗ ಎಚ್ಚರದಿಂದ ದಾಟ್‌ಬೇಕಮ್ಮ. ಮೊದ್ಲೇ ಇದು ಬೆಂಗಳೂರು. ಯಾರು ಯಾವಾಗ ಎಲ್ಲಿ ಸೇರ್‍ತಾರೋ ಹೇಳೋಕಾಗಲ್ಲ. ಹುಷಾರಾಗಿ ಹೋಗಮ್ಮ.
 
 ಆಕೆ  : ನೀವೇನೋ ತಿಳ್ಕೊಳ್ಳೋದಿಲ್ಲಾ ಅಂದ್ರೆ ಒಂದ್ ಸಹಾಯ ಮಾಡ್ತೀರಾ ?
 
 ಆತ  : ಏನು ?
 
 ಆಕೆ  : ರಸ್ತೆ ದಾಟಿಸ್ತೀರಾ ?
 
 ಆತ  : ಸರಿ ಬಾಮ್ಮಾ.
 
 ಆಕೆ   : ಕೈ ಹಿಡ್ಕೊಳ್ಳಿ. ಭಯ ಆಗತ್ತೆ. ಮನಸ್ಸೂ ಸರಿ ಇಲ್ಲ ಪ್ಲೀಸ್..
 
 ಆತ  : ಸರಿ ನನ್ ಕೈ ಬಿಗಿಯಾಗಿ ಹಿಡ್ಕೋಬಾಮ್ಮಾ .

ಇಬ್ಬರ ನಡುವೆ ಒಂಥರಾ ಮೌನ… ಅಂತೂ ಇಬ್ರೂ ರಸ್ತೆ ದಾಟಿದ್ರು. ಕೆಲವು ಹೆಜ್ಜೆಗಳು ಇಬ್ಬರ ನಡುವೆ ಮೌನವೇ ಮಾತಾಗಿತ್ತು. ರಸ್ತೆ ದಾಟುತ್ತಲೇ ಆಕೆ ಮತ್ತೆ ಮಾತಾಡಿದ್ಳು.

 ಆಕೆ  : ಮನೆ ತನಕ ಬಿಡ್ತೀರಾ ?
 
ಅರೆ ಇದೊಳ್ಳೆ ಕತೆಯಾಯ್ತಲ್ಲ  . ಈಕೆ ನನ್ ಯಾಕೆ ಹೀಗೆ ಹಿಡ್ಕೊಂಡ್ ಬಿಟ್ಳು. ಇರಲಿ ಮನೆ ನೋಡಿದಂಗೆ ಆಯ್ತು. ಆದ್ರೂ ಯಾಕೋ ಮನದಲ್ಲಿ ಅವ್ಯಕ್ತ ಅನುಭವ. ಒಲ್ಲದ ಮನಸು ಎಂಬಂತೆ ಆತ ತಲೆ ಆಡಿಸಿದ. ಶೇಷಾದ್ರಿಪುರಂ ಕೆನರಾಬ್ಯಾಂಕ್ ಪಕ್ಕದ ಕ್ರಾಸ್ ರೋಡ್‌ನಲ್ಲಿ ಸಾಗಿತು ಇಬ್ಬರ ಪಯಣ. ಆಕೆಯೇ ಮಾತು ಮುಂದುವರಿಸಿದ್ಳು.
  
ಆಕೆ  : ತುಂಬಾ ಥ್ಯಾಂಕ್ಸ್. ಒಳ್ಳೇ ಟೈಮ್‌ನಲ್ಲಿ ಸಹಾಯ ಮಾಡಿದ್ರಿ.
  
ಆತ   : ಅದ್ರಲ್ಲೇನಿದೆ ಬಿಡಿಆಕೆ   : ಮನೆಯಲ್ಲಿ ತುಂಬಾ ಪ್ರಾಬ್ಲಮ್. ಅದಕ್ಕೆ ಟೆನ್ಶನ್.
  
ಆತ ಏನೂ ಹೇಳಲೇ ಇಲ್ಲ . ಆಕೆ ಮಾತು ಮುಂದುವರಿಸಿದ್ಳು
 
ಆಕೆ   : ಅಪ್ಪ ಆಕ್ಸಿಡೆಂಟ್‌ನಲ್ಲಿ ತೀರ್‍ಕೊಂಡಿದ್ದಾರೆ. ನಾನು ಬಿಎಎಂಎಸ್ ಮಾಡ್ತಾ ಇದ್ದೇನೆ. ಪಾರ್ಟ್ ಟೈಂ ಕೆಲಸ ಬೇರೆ ಮಾಡ್ತಾ ಇದ್ದೇನೆ. ಇಲ್ಲಿ ಪಿ.ಜಿ.ಯಲ್ಲಿರೋದು. ಅಮ್ಮನೂ ಇಲ್ಲ. ತಮ್ಮ ಪಿಯುಸಿ ಒದ್ತಾ ಇದ್ದಾನೆ. ಅವರ ಖರ್ಚೂ ನಾನೇ ನೋಡ್‌ಬೇಕು. ಹೇಗೋ ಮ್ಯಾನೇಜ್ ಮಾಡ್ತಾ ಇದ್ದೇನೆ.
ಆತ   : ಹ್ಞುಂಯಾವೂರು.
ಆಕೆ    : ತುಮಕೂರು. ನಾನೊಂದು ವಿಷಯ ಕೇಳ್‌ಬೇಕು. ಹೇಗೆ ಕೇಳಲಿ ಅಂತ ಗೊತ್ತಾಗ್ತಾ ಇಲ್ಲ.
ಆತ   : ಕೇಳು ಅದ್ರಲ್ಲೇನಿದೆ ?
ಆಕೆ  : ಮದುವೆ ಬಗ್ಗೆ ಏನ್ ಅಭಿಪ್ರಾಯ ನಿಮ್ದು ?
ಆತ : ಯಾಕೆ ?
ಆಕೆ : ಪ್ರೀತಿ ಬಗ್ಗೆ ಏನು ಅಭಿಪ್ರಾಯ ?
ಆತ : ನಗುತ್ತಾ ಅದೇ ಯಾಕೆ ?
ಆಕೆ : ಇಲ್ಲಾ ನೀವು ನಂಗೆ ಸಹಾಯ ಮಾಡೋವಾಗ ಮನಸ್ಸಲ್ಲೇನೂ ಅನಿಸಿಲ್ವಾ ? ನಾನು ನಿಮ್ ಹತ್ರ ಬಂದು ಸಹಾಯ ಕೇಳ್ದಾಗ ಏನನ್ಸುತ್ತು ? ನಂಗಂತೂ ನೀವು ಇಷ್ಟವಾಗಿದ್ದೀರಿ..
ಆತ ಸುಮ್ನೆ ನಗ್ತಾನೆ..
ಆಕೆ : ಯಾಕೆ ನಗ್ತಾ ಇದ್ದೀರಾ… ?
ಆತ ಒಂದು ಕ್ಷಣ ಸುಮ್ಮನಾಗ್ತಾನೆ. ಮನದಲ್ಲಿ ಏನೋ ಕಳವಳ. ಯಾರು ಏನ್ ಹೇಳ್ತಾರೋ ? ಈಕೆ ಹೀಗೆಲ್ಲಾ ಮಾತನಾಡಿ ನನ್ನ ಎಲ್ಲಿ ಕೆಡವುತ್ತಾಳೋ ? ಗುರುತು ಪರಿಚಯ ಬೇರೆ ಇಲ್ಲ. ಏನ್ ಮಾಡೋದು ಅನ್ನೋ ಯೋಚನೆ ಆತನ ಮನದಲ್ಲಿ ಸುಳಿಯುತ್ತದೆ. ಕೊನೆಗೆ ಆತ ಬಾಯ್ಬಿಡ್ತಾನೆ.
ಆತ : ನಿಂಗೆ ಅಣ್ಣ ಇಲ್ವಲ್ಲಾ ?
ಆಕೆ : ಇಲ್ಲ. ಯಾಕೆ ಹೀಗೆ ಕೇಳ್ತೀರಾ ?
ಉತ್ತರ ಇಲ್ಲ …

****

ಆತ ಮತ್ತು ಆಕೆಯ ನಡುವೆ ಮತ್ತೆ ಮೌನ. ಇದು ಲವ್ ಅಟ್ ಫಸ್ಟ್ ಸೈಟಾ ?

ಆತನ ಪ್ರಶ್ನೆ ಆಕೆಗೆ ಹೊಳೆಯಲೇ ಇಲ್ಲ.  ಆತನಿಗೋ ಆಕೆಗೆ ಮನವರಿಕೆ ಮಾಡಲಾಗಲಿಲ್ಲ. ಇಷ್ಟಾದ್ರೂ ಇಬ್ಬರಿಗೂ ಪರಸ್ಪರ ಹೆಸರೇ ಗೊತ್ತಿರಲಿಲ್ಲ. ಆದರೂ ಆಕೆ ಪ್ರೀತಿಯ ಸುಳಿಯಲ್ಲಿ ಸಿಕ್ಕಿ ಬಿದ್ದದ್ದಳು. ಲವ್ ಅಟ್ ಫಸ್ಟ್ ಸೈಟ್. ಆತನೋ ಸಂಘಟನೆಯೊಂದರ ಪೂರ್ಣಾವಧಿ ಕಾರ್ಯಕರ್ತ. ಅದಕ್ಕೆ ಚ್ಯುತಿ ಬರುವಂತೆ ನಡೆಯಬಾರದು ಅನ್ನೋದು ಅವನ ಸಿದ್ಧಾಂತ. ಹೀಗಾಗಿ ಆತ ಅಣ್ಣ ಅನ್ನೋ ಪದದ ಮೂಲಕ ಪ್ರಿಯತಮ ಕೊಡುವ ಪ್ರೀತಿ ಕೊಡಲು ನಿರಾಕರಿಸಿದ್ದ….

@@@@@@

 

0 thoughts on “ಲವ್ ಅಟ್ ಫಸ್ಟ್ ಸೈಟಾ ?

    1. ಅಬ್ಬಾ ಭಯ ಇತ್ತು ! ಬರೆಯೋವಾಗ. ಮೊದಲ ಕತೆ ಹೇಗಿದೆಯೋ ಏನೋ ಅನ್ನೋ ಭಯ… ಧನ್ಯವಾದಗಳು ಕೇಶವ ಪ್ರಸಾದ್‌ 🙂

Leave a Reply

Your email address will not be published. Required fields are marked *