ವ್ಯವಹಾರ ಚಾಣಕ್ಷನೋ ರಾಜತಂತ್ರ ಸೂತ್ರಧಾರನೋ..!

sajjan-jindal
Sajjan Jindal

ಸ್ಥಳ ಪಾಕಿಸ್ತಾನದ ಲಾಹೋರ್. ಕ್ರಿಸ್‍ಮಸ್ ಹಬ್ಬದ ದಿನ. ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಹುಟ್ಟುಹಬ್ಬದ ದಿನವೂ ಹೌದು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ರಷ್ಯಾ ಮತ್ತು ಅಫ್ಘಾನಿಸ್ತಾನ ಪ್ರವಾಸ ಮುಗಿಸಿ ಹಿಂತಿರುಗುವ ದಿನವೂ ಆಗಿತ್ತು. ಇದ್ದಕ್ಕಿದ್ದಂತೆ ಟಿವಿ ಚಾನೆಲ್‍ಗಳ ಪರದೆ ಮೇಲೆ ಬ್ರೇಕಿಂಗ್ ನ್ಯೂಸ್ ! ಪ್ರಧಾನಿ ಮೋದಿ ಲಾಹೋರ್‍ನಲ್ಲಿ ಇಳಿಯಲಿದ್ದಾರೆ, ಷರೀಫ್ ಅವರ ಮನೆಗೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಲಿದ್ದಾರೆ ಎಂಬ ಸುದ್ದಿ ಜಗತ್ತಿನ ಹಲವೆಡೆ ಅನುರಣಿಸಿತು. ದಾಯಾದಿಗಳಾಗಿರುವ ಭಾರತ-ಪಾಕ್ ಸಂಬಂಧ ಅಷ್ಟೇನೂ ಸಮಾಧಾನಕರವಾಗಿಲ್ಲ ಎಂಬುದೇ `ಮೋದಿ ಭೇಟಿಯ ಮಹತ್ವ’ ಹೆಚ್ಚಿಸಿತು. ಇದೇ ಸಂದರ್ಭದಲ್ಲಿ ಮೋದಿಯವರು ಸಾಂದರ್ಭಿಕ ಟ್ವೀಟ್ ಸಂದೇಶಗಳನ್ನು ಪ್ರಕಟಿಸಿದ್ದರು. ಮೋದಿಯವರ ಈ ಅಚಾನಕ್ ಭೇಟಿಯ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳೂ ಪ್ರಕಟವಾದವು. ಇದೇ ವೇಳೆ ಗಮನಸೆಳೆದ್ದದ್ದು `In Lahore to greet PM Navaz Sharif on his birthday – Sajjan Jindal (@sajjanjindal59)’ ಎಂಬ ಟ್ವೀಟ್.

ಸಜ್ಜನ್ ಜಿಂದಾಲ್ ಅವರ ಈ ಟ್ವೀಟ್ ಪ್ರಾಮುಖ್ಯತೆ ಪಡೆಯಿತು. ಇದಕ್ಕೆ ಕಾರಣ ಇಲ್ಲದಿಲ್ಲ. 25 ದಿನಗಳ ಮೊದಲೇ ನ.30ರಂದು ಹಿರಿಯ ಟಿವಿ ಪತ್ರಕರ್ತೆ ಬರ್ಖಾ ದತ್ ಒಂದು ಟ್ವೀಟ್ ಪ್ರಕಟಿಸಿದ್ದರು – `From my book ThisUnquietLand scoop by prashantktm on the steel baron who has been a conduit between Modi & Sharif- barkha dutt (@BDUTT)’ !.
ವಾಸ್ತವದಲ್ಲಿ ಜಿಂದಾಲ್ ಅವರ ಟ್ವೀಟ್‍ನಲ್ಲಿ ಯಾವುದೇ ಮಹತ್ವದ ಅಂಶವಿರಲಿಲ್ಲ. ಸಾಮಾನ್ಯವಾದ ಟ್ವೀಟ್ ಆಗಿದ್ದರೂ, ಮೋದಿ ಟ್ವೀಟ್ ಬೆನ್ನಲ್ಲೇ ಜಿಂದಾಲ್ ಈ ಟ್ವೀಟ್‍ಗಳನ್ನು ಪ್ರಕಟಿಸಿದ ಕಾರಣ, ಅವುಗಳಲ್ಲೇನೋ `ರಹಸ್ಯ’ ಒಳಗೊಂಡಿರುವಂತೆಯೇ ಭಾಸವಾಗತೊಡಗಿತು. ಹೀಗಾಗಿಯೇ ಮೋದಿಯವರ ಅಚಾನಕ್ ಲಾಹೋರ್ ಭೇಟಿಯ `ಸೂತ್ರಧಾರ’ನೆಂದು ಸಜ್ಜನ್ ಜಿಂದಾಲ್ ಬಿಂಬಿಸಲ್ಪಟ್ಟರು. ಕಾಂಗ್ರೆಸ್ ನಾಯಕ ಆನಂದ ಶರ್ಮಾ ಅವರು, `ಮೋದಿ- ಷರೀಫ್ ಭೇಟಿ ಖಾಸಗಿ ಉದ್ಯಮ ಹಿತಾಸಕ್ತಿಯದ್ದು. ಇದರಲ್ಲಿ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ವಾಣಿಜ್ಯ ಹಿತಾಸಕ್ತಿ ಹೆಚ್ಚಾಗಿದೆ’ ಎಂದು ಟೀಕಿಸಿದ್ದರು. ಈ ನಡುವೆ, ಪ್ರಧಾನಿಗಳಿಬ್ಬರ ಭೇಟಿಯಲ್ಲಿ ಜಿಂದಾಲ್ ಪಾತ್ರವೇನೂ ಇಲ್ಲ ಎಂದು ಸಷ್ಟಪಡಿಸಿತು.
ಆದಾಗ್ಯೂ, ಬರ್ಖಾ ದತ್ ಅವರ ಪುಸ್ತಕದಲ್ಲಿರುವ ಅಂಶಗಳು ಜಿಂದಾಲ್ ಪಾತ್ರವಿದೆ ಎಂಬ ವಾದವನ್ನು ಪುಷ್ಟೀಕರಿಸುವಂತಿದೆ. ಮೋದಿ – ಷರೀಫ್ ರಾಜತಾಂತ್ರಿಕ ಭೇಟಿಯ ನಡುವೆ ಸಜ್ಜನ್ ಪಾತ್ರ ಅನೌಪಚಾರಿಕವಾದದ್ದು ಎಂಬುದು ದತ್ ಅವರ ವಾದ. ಷರೀಫ್ ಅವರ ಕುಟುಂಬದೊಂದಿಗೆ ಜಿಂದಾಲ್ ಅವರದ್ದು ವ್ಯಾವಹಾರಿಕ ನಂಟು. ಷರೀಫ್ ಅವರ ಪುತ್ರ “ಇತ್ತೇಫಾಕ್” ಎಂಬ ಉಕ್ಕು ಉತ್ಪಾದನಾ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ದತ್ ಅವರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ. ಕಳೆದ ವರ್ಷ ನೇಪಾಳದಲ್ಲಿ ನಡೆದ ಸಾರ್ಕ್ ಶೃಂಗದ ವೇಳೆ ಕಠ್ಮಂಡುವಿನ ಒಂದು ಹೋಟೆಲ್‍ನಲ್ಲಿ ಈ ಇಬ್ಬರು ನಾಯಕರು ಗೌಪ್ಯವಾಗಿ ಭೇಟಿಯಾಗಿದ್ದು, ಇದಕ್ಕೆ ವೇದಿಕೆ ನಿರ್ಮಿಸಿದ್ದು ಕಾಂಗ್ರೆಸ್‍ನ ಮಾಜಿ ಸಂಸದ ನವೀನ್ ಜಿಂದಾಲ್ ಅವರ ಸಹೋದರ ಸಜ್ಜನ್ ಜಿಂದಾಲ್. ಆದರೆ, ಭಾರತೀಯದ ಮಾಧ್ಯಮಗಳು ಮೋದಿ- ಷರೀಫ್ ಮುಖಕೊಟ್ಟು ಮಾತನಾಡಿಲ್ಲ ಎಂದು ತಪ್ಪಾಗಿ ವರದಿ ಮಾಡಿದ್ದವು. ಪಾಕಿಸ್ತಾನದ ಮಾಧ್ಯಮಗಳಲ್ಲಿ ಅವರ ಈ ಭೇಟಿ ಟೀಕೆಗೊಳಗಾಗಿತ್ತು. ಸಜ್ಜನ್ ಜಿಂದಾಲ್‍ನ ಪಾತ್ರ ಚರ್ಚಿಸಲ್ಪಟ್ಟಿತ್ತು. ಷರೀಫ್ ಅವರ ದೆಹಲಿ ಭೇಟಿ ವೇಳೆ ಕಾಶ್ಮೀರದ ಪ್ರತ್ಯೇಕತವಾದಿಗಳ ಜತೆ ಮಾತನಾಡುವ ಬದಲು ಸಜ್ಜನ್ ಜಿಂದಾಲ್ ಅವರ ಆತಿಥ್ಯ ಸ್ವೀಕರಿಸಿದ್ದು ಕೂಡ ಪಾಕ್ ಮಾಧ್ಯಮಗಳಲ್ಲಿ ಟೀಕೆಗೊಳಗಾಗಿತ್ತು.
ಇದಕ್ಕೂ ಮೊದಲು ಷರೀಫ್ ಅವರು ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಬಂದಾಗ ದೆಹಲಿಯ ತಾಜ್ ಮಾನ್‍ಸಿಂಗ್ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಆಗ ಅಲ್ಲಿ ಷರೀಫ್ ಅವರ ಪುತ್ರ ಹುಸೇನ್ ಹಾಗೂ ಸಜ್ಜನ್ ಜಿಂದಾಲ್ ಜೊತೆಯಾಗಿ ಊಟಕ್ಕೆ ಹೋಗಿದ್ದರು. ಅವರ ಅಲ್ಲಿನ ನಡವಳಿಕೆ ಸ್ನೇಹದ ಅಗಾಧತೆಯನ್ನು ಪ್ರತಿಬಿಂಬಿಸುವಂತಿತ್ತು. ಅದೇ ರೀತಿ ಒಡನಾಟ ಭಾರತದ ಪ್ರಧಾನಿ ಜತೆಗೂ ಜಿಂದಾಲ್ ಇರಿಸಿಕೊಂಡಿದ್ದಾರೆ ಎಂಬ ಅಂಶಗಳನ್ನು ದತ್ ತಮ್ಮ ವಾದವನ್ನು ಸಮರ್ಥಿಸುವುದಕ್ಕಾಗಿ ಉಲ್ಲೇಖಿಸಿದ್ದಾರೆ.
ಇಷ್ಟಕ್ಕೂ ಸಜ್ಜನ್ ಜಿಂದಾಲ್ ವೃತ್ತಿ ಬದುಕಿನ ಕಡೆ ನೋಡಿದರೆ ಪ್ರಸಿದ್ಧ ಜಿಂದಾಲ್ ಉದ್ಯಮ ಸಾಮ್ರಾಜ್ಯ ಕಣ್ಮುಂದೆ ಬರುತ್ತದೆ. ಪ್ರಸಿದ್ಧ ಉದ್ಯಮಿ ಓಂಪ್ರಕಾಶ್ ಜಿಂದಾಲ್ ಮತ್ತು ಸಾವಿತ್ರಿ ಜಿಂದಾಲ್ ದಂಪತಿಯ ನಾಲ್ವರು ಮಕ್ಕಳ ಪೈಕಿ ಎರಡನೆಯವರು. ಸಜ್ಜನ್ ಜಿಂದಾಲ್ ಜೆಎಸ್‍ಡಬ್ಲೂೃ ಗ್ರೂಪ್ ಆಫ್ ಕಂಪನಿಗಳ ಪೈಕಿ ಜೆಎಸ್‍ಡಬ್ಲುೃ ಸ್ಟೀಲ್ ಕಂಪನಿಯ ಚೇರ್‍ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೆಎಸ್‍ಡಬ್ಲುೃ ಸ್ಟೀಲ್ ಭಾರತದ ಎರಡನೇ ಅತಿದೊಡ್ಡ ಹಾಗೂ ಜಗತ್ತಿನ ಆರನೇ ಅತಿದೊಡ್ಡ ಖಾಸಗಿ ಉಕ್ಕು ಉತ್ಪಾದನಾ ಕಂಪನಿ. ಪೃಥ್ವಿರಾಜ್, ರತನ್, ನವೀನ್ ಜಿಂದಾಲ್ ಇವರ ಸಹೋದರರು.
1959ರ ಡಿಸೆಂಬರ್ 5ರಂದು ಹರಿಯಾಣದ ಹಿಸ್ಸಾರ್‍ನಲ್ಲಿ ಜನಿಸಿದ ಸಜ್ಜನ್ ಪ್ರಾಥಮಿಕ ವಿದ್ಯಾಭ್ಯಾಸ ಅಲ್ಲೇ ನಡೆಯಿತು. ಬೆಂಗಳೂರಿನ ಎಂ.ಎಸ್.ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿದ್ದು, ಇದೀಗ ಬೆಳಗಾವಿಯ ವಿಟಿಯು ಅಧೀನದಲ್ಲಿದೆ)ಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ.ಪದವಿಯನ್ನು ಪಡೆದರು. 1983ರಲ್ಲಿ ಒ.ಪಿ.ಜಿಂದಾಲ್ ಗ್ರೂಪ್‍ಗೆ ಕೆಲಸಕ್ಕೆ ಸೇರಿದ ಸಜ್ಜನ್, ಆರಂಭದಲ್ಲಿ ಪಶ್ಚಿಮ ಭಾಗದ ವ್ಯವಹಾರಗಳನ್ನು ಗಮನಿಸುವುದಕ್ಕಾಗಿ ಮುಂಬೈಗೆ ಹೋದರು. 1989ರಲ್ಲಿ ಜಿಂದಾಲ್ ಐರನ್ ಆ್ಯಂಡ್ ಸ್ಟೀಲ್ ಕಂಪನಿ ಲಿಮಿಟೆಡ್‍ಗೆ ಬಡ್ತಿ ಸಹಿತ ವರ್ಗಾವಣೆಯೂ ಸಿಕ್ಕಿತು. ಮುಂದೆ ಜಿಂದಾಲ್ ವಿಜಯನಗರ ಸ್ಟೀಲ್ ಲಿ., ಜೆಎಸ್‍ಡಬ್ಲುೃ ಎನರ್ಜಿ ಲಿ., ಜಿಂದಾಲ್ ಪ್ರಾಕ್ಸಿಯರ್ ಆಕ್ಸಿಜನ್ ಲಿ., ವಿಜಯನಗರ ಮಿನರಲ್ಸ್ ಪ್ರೈ.ಲಿ.ಗಳ ವ್ಯವಹಾರ ಗಮನಿಸುವ ಅವಕಾಶ ಸಜ್ಜನ್ ಪಾಲಾಯಿತು. 2005ರಲ್ಲಿ ಜೆಐಎಸ್‍ಸಿಒ ಹಾಗೂ ಜೆವಿಎಸ್‍ಎಲ್ ವಿಲೀನಗೊಂಡು ಜೆಎಸ್‍ಡಬ್ಲುೃ ಸ್ಟೀಲ್ ರಚನೆಯಾಯಿತು. ಪ್ರಸ್ತುತ ಇದರ ಸಿಎಂಡಿಯಾಗಿ ಸಜ್ಜನ್ ಕಾರ್ಯನಿರ್ವಹಿಸುತ್ತಿದ್ದಾರೆ.
ವ್ಯಕ್ತಿಗತ ಬದುಕು ಕೂಡ ಸುಂದರವಾಗಿದ್ದು, ಸಂಗೀತಾ ಜಿಂದಾಲ್ ಅವರನ್ನು ವಿವಾಹವಾಗಿದ್ದಾರೆ. ಸಂಗೀತಾ ಮೇಕ್ ಎ ವಿಷ್ ಫೌಂಡೇಷನ್ ಇಂಡಿಯಾದ ಟ್ರಸ್ಟಿ. ಇವರಿಗೆ ಇಬ್ಬರು ಪುತ್ರಿಯರು ತಾರಿಣಿ ಹಾಗೂ ತನ್ವಿ ಮತ್ತು ಒಬ್ಬ ಪುತ್ರ ಪಾರ್ಥ. 2011ರಲ್ಲಿ ದಕ್ಷಿಣ ಮುಂಬೈನ ನೇಪಿಯನ್ ಸೀ ರಸ್ತೆಯಲ್ಲಿರುವ ಮೂರಂತಸ್ತಿನ ಮಹೇಶ್ವರಿ ಹೌಸನ್ನು 400 ಕೋಟಿ ರೂಪಾಯಿಗೆ ಖರೀದಿಸಿದ್ದು ಸುದ್ದಿಯಾಗಿತ್ತು.

Leave a Reply

Your email address will not be published. Required fields are marked *