ಸಚಿನ್ ತೆಂಡುಲ್ಕರ್ ಇಂಗ್ಲೆಂಡ್ ಪ್ರವಾಸಕ್ಕಿರ್ತಾರಾ ?

foto courtesy topnews.in

ನಾಲ್ಕು ವರ್ಷಗಳ ನಂತ್ರ ಟೀಂ ಇಂಡಿಯಾ ಇಂಗ್ಲೆಂಡ್‌ ಪ್ರವಾಸ ಹೊರಡಲಿದೆ. ಅಲ್ಲಿ ನಾಲ್ಕು ಟೆಸ್ಟ್‌, ಐದು ಏಕದಿನ ಮತ್ತು ಒಂದು ಟಿ ೨೦ ಪಂದ್ಯಗಳನ್ನಾಡಲಿದೆ. ೨೦೧೧ ರ ವಿಶ್ವಕಪ್ ಪಂದ್ಯಾವಳಿ ನಂತ್ರ ಈ ಟೂರ್ನಿ ನಡೆಯಲಿದೆ. ಇದ್ರಲ್ಲಿ ಸಚಿನ್ ತೆಂಡುಲ್ಕರ್ ಭಾಗವಹಿಸ್ತಾರಾ ಅನ್ನೋದು ಈಗಿರೋ ಪ್ರಶ್ನೆ. 

ಮುಂಬರುವ ಇಂಗ್ಲೆಂಡ್ ಪ್ರವಾಸದ ವೇಳೆ ಸಚಿನ್ ಟೀಂ ಇಂಡಿಯದಲ್ಲಿ ಇರುತ್ತಾರಾ ? ಅಥವಾ ನಿವೃತ್ತಿ ಪಡೀತಾರಾ ? ಹೀಗೊಂದು ಪ್ರಶ್ನೆ ಈಗ ಕ್ರೀಡಾ ಪ್ರೇಮಿಗಳನ್ನು ಕಾಡತೊಡಗಿದೆ.

 ೨೦೧೧ರ ವಿಶ್ವಕಪ್ ಮುಗಿಯುತ್ತಿದ್ದಂತೆ ಸಚಿನ್ ನಿವೃತ್ತಿ ಘೋಷಿಸ್ತಾರೆ ಅನ್ನೋ ವದಂತಿ ಇದೆ. ವಿಶ್ವಕಪ್ ಮುಗಿದ ಮೂರು ತಿಂಗಳ ಬಳಿಕ ಟೀಂ ಇಂಡಿಯ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದನ್ನು ಮುಗಿಸಿ ನಿವೃತ್ತಿ ಘೋಷಿಸ್ತಾರಾ ಅನ್ನೋದು ಮತ್ತೊಂದು ಪ್ರಶ್ನೆ …

ಅಂದ ಹಾಗೇ, ಈ ಗೊಂದಲಕ್ಕೂ ಒಂದು ಕಾರಣ ಇದೆ. ಸಚಿನ್ ತೆಂಡುಲ್ಕರ್ ಇಂಗ್ಲೆಂಡ್‌ ನೆಲವನ್ನು ತನ್ನ ಎರಡನೇ ತಾಯ್ನೆಲ ಎಂದು ಕರೆದಿದ್ದಾರೆ. ಅಲ್ಲಿ ಕ್ರಿಕೆಟ್ ಆಡೋದೂ ಎಂದ್ರೆ ಸಚಿನ್‌ಗೆ ಇಷ್ಟ. ಇಂಗ್ಲೆಂಡ್‌ ನೆಲದಲ್ಲಿ ಸಚಿನ್ ದಾಖಲೆ ಕೂಡಾ ಅದ್ಭುತ..

ಇಂಗ್ಲೆಂಡ್‌ನಲ್ಲಿ ಸಚಿನ್ ಟೆಸ್ಟ್‌ ಸಾಧನೆ

ಅವಧಿ ೧೯೯೦-೨೦೦೭

ಪಂದ್ಯ ೧೩

ರನ್‌ ೧೩೦೨

ಗರಿಷ್ಠ ರನ್ ೧೯೩

ಶತಕ ೦೪

ಅರ್ಧಶತಕ ೦೬

ಇಂಗ್ಲೆಂಡ್‌ನಲ್ಲಿ ಸಚಿನ್ ಟೆಸ್ಟ್‌ ಸಾಧನೆ ಗಮನಿಸಿದ್ರೆ, ೧೯೯೦-೨೦೦೭ರ ಅವಧಿಯಲ್ಲಿ ೧೩ ಪಂದ್ಯಗಳನ್ನಾಡಿದ್ದು, ೧೩೦೨ ರನ್‌ ಗಳಿಸಿದ್ದಾರೆ. ೧೯೩ ರನ್ ಗರಿಷ್ಠ ಸ್ಕೋರ್. ನಾಲ್ಕು ಶತಕ, ೬ ಅರ್ಧ ಶತಕದ ದಾಖಲೆ ಸಚಿನ್‌ ಪಾಲಿಗಿದೆ.

ಇಂಗ್ಲೆಂಡ್‌ನಲ್ಲಿ ಸಚಿನ್ ಏಕದಿನ ಸಾಧನೆ

ಅವಧಿ ೧೯೯೦-೨೦೦೭

ಪಂದ್ಯ ೨೬

ರನ್‌ ೧೦೫೧

ಗರಿಷ್ಠ ರನ್ ೧೪೦*

ಶತಕ ೦೩

ಅರ್ಧಶತಕ ೦೪

ಇನ್ನು ಏಕದಿನ ಪಂದ್ಯಗಳ ಕಡೆ ಗಮನ ಹರಿಸಿದ್ರೆ, ಇಂಗ್ಲೆಂಡ್‌ನಲ್ಲಿ ಇದೇ ಅವಧಿಯಲ್ಲಿ ಸಚಿನ್ ೨೬ ಪಂದ್ಯಗಳನ್ನಾಡಿದ್ದಾರೆ. ಒಟ್ಟು ೧೦೫೧ ರನ್ ಗಳಿಸಿದ್ದಾರೆ. ಗರಿಷ್ಠ ಅಂದ್ರೆ ಅಜೇಯವಾಗಿ ೧೪೦ ರನ್ ಗಳಿಸಿದ್ದು, ಮೂರು ಶತಕ, ನಾಲ್ಕು ಅರ್ಧಶತಕ ಬಾರಿಸಿದ ಕೀರ್ತಿ ಕೂಡಾ ಸಚಿನ್‌ ಪಾಲಿಗಿದೆ.

ಇಂಗ್ಲೆಂಡ್‌ ನೆಲ ಸಚಿನ್‌ ತೆಂಡುಲ್ಕರ್ ಗೆ ಯಾವಾಗ್ಲೂ ವಿಶೇಷವೇ. ಕೇವಲ ವೈಯಕ್ತಿಕ ದೃಷ್ಟಿಯಿಂದ ಮಾತ್ರವಲ್ಲ ಕ್ರಿಕೆಟ್‌ನ ದೃಷ್ಟಿಯಿಂದ ನೋಡಿದಾಗ್ಲೂ ಹಾಗೇ ಅನಿಸತ್ತೆ. ತೆಂಡುಲ್ಕರ್ ನ ಕ್ರಿಕೆಟ್‌ ಕೆರಿಯರ್ ನ ಎರಡು ವಿಶೇಷ ಕ್ಷಣಗಳು ದಾಖಲಾದುದು ಇಂಗ್ಲೆಂಡ್‌ ನೆಲದಲ್ಲೇ..

1990ರ ಓಲ್ಡ್‌ ಟ್ರಾಫೋರ್ಡ್‌ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು.. ೧೮೬ಕ್ಕೆ ೬ ವಿಕೆಟ್ ಕಳೆದುಕೊಂಡಿತ್ತು. ಇಂಗ್ಲೆಂಡ್ ಬೌಲರ್ ಗಳು ಜಯ ತಮ್ಮದೇ ಎಂದು ಬೀಗುತ್ತಿದ್ದ ಆ ಕ್ಷಣ.. ಸಚಿನ್ ಬ್ಯಾಟಿನಿಂದ ಶತಕ ಹೊರಹೊಮ್ಮಿತ್ತು. ಸೋಲ ಬೇಕಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು.. ಸಚಿನ್‌ ಗೆ ಆಗ ಹದಿನೇಳೂವರೆ ವರ್ಷ. 

ಇನ್ನೊಂದು ಶತಕ ದಾಖಲಾದುದು ಬ್ರಿಸ್ಟಲ್‌ನಲ್ಲಿ.. ೧೯೯೯ರ ವಿಶ್ವಕಪ್‌ ಪಂದ್ಯಾವಳಿ ಅದು… ಕೀನ್ಯಾ ವಿರುದ್ಧದ ಏಕದಿನ ಪಂದ್ಯ.. ಸಚಿನ್ ತನ್ನ ತಂದೆಯ ಸಾವಿನ ನೋವಿನಲ್ಲೂ ಶತಕ ಸಿಡಿಸಿದ್ರು… 

ಈ ಎರಡು ಮಹತ್ವದ ಘಟನೆಗಳು ಕೂಡಾ ಸಚಿನ್‌ಗೆ ಭಾವನಾತ್ಮಕವೆನಿಸಿದ್ದು, ಈಗ ಮತ್ತೆ ಸಚಿನ್‌ ತಮ್ಮ ವೃತ್ತಿಗೆ ವಿದಾಯ ಹೇಳೋದಕ್ಕೂ ಇಂಗ್ಲೆಂಡ್‌ ನೆಲವನ್ನೇ ಬಳಸ್ತಾರಾ ಅನ್ನೋ ಪ್ರಶ್ನೆ ಕುತೂಹಲ ಮೂಡಿಸಿದೆ.

Tags :

Leave a Reply

Your email address will not be published. Required fields are marked *