ಸಹಸ್ರಮಾನದ ಸಾಧಕ

umesh sachdevಪ್ರತಿಷ್ಠಿತ ಟೈಮ್ ನಿಯತಕಾಲಿಕ ಗುರುತಿಸಿರುವ ಜಗತ್ತಿನ ಟಾಪ್ 10 ಸಹಸ್ರಮಾನದ ಸಾಧಕರ ಪೈಕಿ ಈ ಬಾರಿ ಭಾರತೀಯರೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ. ಸಾಧಕ ಎಂದ ಕೂಡಲೇ ವಯೋವೃದ್ಧರ ಚಿತ್ರಗಳನ್ನಷ್ಟೇ ಕಣ್ಣಮುಂದೆ ತಂದುಕೊಳ್ಳಬೇಡಿ. ಬದಲಾದ ಕಾಲಘಟ್ಟದಲ್ಲಿ ಸಾಧನೆಗೂ ವಯಸ್ಸಿಗೂ ಸಂಬಂಧವೇ ಇಲ್ಲ ಎನ್ನುವಂಥದ್ದು ಪದೇಪದೆ ಸಾಬೀತಾಗುತ್ತಿದೆ. ಅದಕ್ಕೆ ಪೂರಕವಾಗಿ ಈ ಸಾಧಕರಿಗೆ ಇನ್ನೂ ಮೂವತ್ತರ ಯೌವನ. ಅದಾಗಲೇ ಅವರು ಜಗತ್ತು ಗುರುತಿಸಿದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕರೂ ಹೌದು. ಅವರ ಸಾಫ್ಟ್ವೇರ್ ಜಗತ್ತಿನ 25 ಭಾಷೆ, 150 ಆಡುಭಾಷೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡುತ್ತದೆ. ಅವರ ಕಂಪನಿ ನಿರ್ವಿುಸಿದ ಈ ಸಾಫ್ಟ್ವೇರ್ ಜಗತ್ತನ್ನೇ ಬದಲಾಯಿಸಬಲ್ಲ ಅರ್ಥಾತ್ ಪರಿವರ್ತನೆಗೊಳಪಡಿಸಬಲ್ಲ ಶಕ್ತಿ ಹೊಂದಿದೆ ಎಂಬುದು ‘ಟೈಮ್ ಪತ್ರಿಕೆಯ ವಿಶ್ಲೇಷಣೆ. ಇದೇ ಕಾರಣಕ್ಕೆ ಅವರು ಸಹಸ್ರಮಾನದ ಸಾಧಕರಾಗಿ ಗುರುತಿಸಲ್ಪಟ್ಟಿದ್ದಾರೆ.

ಈ ಸಾಧಕ ಬೇರಾರೂ ಅಲ್ಲ ಚೆನ್ನೈ ಮೂಲದ ಯುನಿಫೋರ್ ಸಾಫ್ಟ್ವೇರ್ ಸಿಸ್ಟಮ್ಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಹಸಂಸ್ಥಾಪಕ ಉಮೇಶ್ ಸಚ್ದೇವ್. ಟೈಮ್ ನಿಯತಕಾಲಿಕ ಸಚ್ದೇವ್ ಅವರ ಸಾಧನೆಯನ್ನು ಗುರುತಿಸಿ ಪ್ರಶಂಸಿಸಿರುವ ರೀತಿಯೂ ಆಕರ್ಷಕವಾಗಿದೆ. ಇಂತಹ ಸಾಧನೆಗೆ ಸಚ್ದೇವ್ ಅವರಿಗೆ ಪ್ರೇರಣೆಯಾಗಿದ್ದಾದರೂ ಏನು? ಅವರ ಈ ಪಯಣ ಆರಂಭವಾಗಿದ್ದೆಲ್ಲಿ? ಹೇಗೆ? ಯಾರು ಸಾಥ್ ನೀಡಿದರು ಎಂಬಿತ್ಯಾದಿ ಪ್ರಶ್ನೆಗಳು ಏಳುವುದು ಸಹಜ.

ಅವರ ಸಾಧನೆಯ ಹಾದಿ ಆರಂಭವಾಗಿದ್ದು 2007ರಲ್ಲಿ. ಆ ಪಯಣದ ಕಥೆಯನ್ನು ಅವರದೇ ಮಾತುಗಳಲ್ಲಿ ಹೇಳುವುದಾದರೆ, ‘ನಾನು ಮತ್ತು ಸ್ನೇಹಿತ ರವಿ ಸರೋಗಿ ಆಗಷ್ಟೆ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ ಹೊರಬಂದಿದ್ದೆವು. ಸ್ಥಳಾಧಾರಿತ ಮೊಬೈಲ್ ಕಳ್ಳತನ ನಿರೋಧಕ ಆಪ್ ಸಿದ್ಧಪಡಿಸುವುದಕ್ಕಾಗಿ ನಾವು ಮದ್ರಾಸ್ನ ಐಐಟಿಗೆ ತೆರಳಿದ್ದೆವು. ಅಲ್ಲಿ, ಇನ್ಕ್ಯುಬೇಷನ್ ಸೆಂಟರ್ನ ಕೋ-ಚೇರ್ವುನ್ ಅಶೋಕ್ ಜುಂಜನ್ವಾಲಾ ಅವರು ಈ ವಿಷಯವಾಗಿ ನಮಗೆ ಬಹಳ ಸಹಕಾರ ನೀಡಿದರು. ಹೀಗಾಗಿ ಆ ಸಮಸ್ಯೆಯನ್ನು ಮತ್ತಷ್ಟು ಅರ್ಥಮಾಡಿಕೊಳ್ಳುವುದು ಸಾಧ್ಯವಾಯಿತು. ಇದುವೇ ನಮಗೆ ತಮಿಳುನಾಡಿನ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವುದಕ್ಕೆ ಪ್ರೇರಣೆಯನ್ನೂ ನೀಡಿತು. ‘ಮೊಬೈಲನ್ನು ಜನ ಹೇಗೆ ಬಳಸುತ್ತಾರೆ?’ ಎಂಬುದೇ ನಮ್ಮ ಅಧ್ಯಯನ ವಿಷಯವಾಗಿತ್ತು.

ಗ್ರಾಮಾಂತರ ಪ್ರದೇಶದ ಚಿತ್ರಣ ನಮಗೆ ಹೊಸದೊಂದು ಲೋಕವನ್ನೇ ತೆರೆದುಕೊಟ್ಟಿತು. ಬಹುತೇಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳೇ ಇರಲಿಲ್ಲ. ಆದರೆ, ಪ್ರತಿ ಮನೆಯಲ್ಲೂ ಮೊಬೈಲ್ ಫೋನ್ ಇತ್ತು. ಹಾಗೆಂದ ಮಾತ್ರಕ್ಕೆ ಅವರಿಗೆ ಮೊಬೈಲನ್ನು ಸರಿಯಾಗಿ ಬಳಕೆ ಮಾಡಲು ಬರುತ್ತಿತ್ತು ಎಂದರ್ಥವಲ್ಲ. ಬಹುತೇಕ ಜನರಿಗೆ ಇಂಗ್ಲಿಷ್ ಜ್ಞಾನ ಮತ್ತು ಇತರೆ ಡಿಜಿಟಲ್ ಕೌಶಲಗಳೂ ಇರಲಿಲ್ಲ. ಇನ್ನು ಮೊಬೈಲ್ಗಳ ಮೂಲಕ ಸಾರ್ವಜನಿಕ ಸೇವೆ ಅಥವಾ ಇಂಟರ್ನೆಟ್ ಬಳಕೆ ಕನಸಿನ ಮಾತೇ ಸರಿ. ಎಲ್ಲವನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿದಾಗ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ ಭಾಷೆ ಎಂಬುದು ಅರಿವಾಯಿತು. ಯಾವುದೇ ಸೇವೆ ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಿಲ್ಲದೇ ಹೋದರೆ ಅದರ ಬಳಕೆಯೂ ಕ್ಷೀಣಿಸುತ್ತದೆ. ಮನುಷ್ಯ-ಉಪಕರಣಗಳ ನಡುವಿನ ಸಂವಹನಕ್ಕೂ ಪ್ರಾದೇಶಿಕ ಭಾಷೆ ಬಳಕೆಯಾದಲ್ಲಿ ಮಾತ್ರವೇ ‘ಡಿಜಿಟಲ್ ಡಿವೈಡ್’(ಗಣಕಯಂತ್ರ ಬಳಕೆ ಮಾಡುವವರು ಮತ್ತು ಮಾಡದವರ ನಡುವಿನ ಕಂದಕ) ಕಡಿಮೆಯಾದೀತು ಎಂಬುದನ್ನು ಮನಗಂಡೆವು. ಮುಂದಿನ 15-16 ತಿಂಗಳ ಅವಧಿಯಲ್ಲಿ ನಾವಿಬ್ಬರೂ ಈ ಕ್ಷೇತ್ರದಲ್ಲಿ ಅಕಾಡೆಮಿಕ್ ರಿಸರ್ಚ್ ಮಾಡಿದೆವು. ಅದೇ ರೀತಿ ಈ ಕ್ಷೇತ್ರದ ಕಂಪನಿಗಳಲ್ಲಿ ಕೆಲಸವನ್ನೂ ಮಾಡಿದೆವು. ಈ ಅವಧಿಯಲ್ಲಿ ಮನುಷ್ಯನೊಂದಿಗೆ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವ ‘ಭಾಷಾ ದೃಢೀಕರಣ ಹಾಗೂ ಭಾಷಾ ಪತ್ತೆಯ ಪ್ರೋಗ್ರಾಮನ್ನು ಅಭಿವೃದ್ಧಿಪಡಿಸಿದೆವು’.

ಇವಿಷ್ಟೂ ಹೆಚ್ಚು ಕಡಿಮೆ ಒಂದು ವರ್ಷದ ಅವಧಿಯಲ್ಲಿ ಸಚ್ದೇವ್ ಸಾಧನೆಗೆ ಸಿಕ್ಕ ಬುನಾದಿ ಎನ್ನಬಹುದು. ಇದಾದ ನಂತರದಲ್ಲಿ 2008ರಲ್ಲಿ ಯುನಿಫೋರ್ ಸಾಫ್ಟ್ವೇರ್ ಸಿಸ್ಟಮ್್ಸ ಸ್ಥಾಪಿಸಲಾಯಿತು. ವಾಸ್ತವದಲ್ಲಿ ಸಚ್ದೇವ್ ಮತ್ತು ರವಿ ಸರೋಗಿ ಅವರ ಬದುಕು ಬದಲಾಗಿದ್ದು ಈ ಕ್ಷಣದಿಂದ. ಅದನ್ನು ಅವರು ಹೇಳುವುದು ಹೀಗೆ: ‘ಯುನಿಫೋರ್ ಕಂಪನಿ ಸ್ಥಾಪಿಸಿದ ಬಳಿಕ ತಮಿಳುನಾಡಿನ ಗ್ರಾಮಾಂತರ ಪ್ರದೇಶದಲ್ಲಿ ಜನರು ಮೊಬೈಲನ್ನು ಯಾವ ರೀತಿ ಬಳಸುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದ ನಮ್ಮ ಮನಸ್ಸಿನೊಳಗೊಂದು ಹೊಸ ಹೊಳಹು ಮಿಂಚಿತು. ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದೆವು. ಹೀಗೆ ಹೊಸ ಕಂಪನಿ ಆರಂಭಿಸಿದಾಗ ಆರಂಭದಲ್ಲಿ ಅಕಿರಾ ಎಂಬ ವರ್ಚುವಲ್ ಅಸಿಸ್ಟೆಂಟ್, ಆಮ್ಾಯ್್ಸ ಎಂಬ ವಾಯ್್ಸ ಬಯೋಮೆಟ್ರಿಕ್ಸ್, ಔಮಿನಾ ಎಂಬ ಸ್ಪೀಚ್ ಅನಲಿಟಿಕ್ಸ್ ಮುಂತಾದ ಉತ್ಪನ್ನಗಳನ್ನು ಕಾರ್ಪೆರೇಟ್ ಜಗತ್ತಿಗೆ ಪರಿಚಯಿಸಿದೆವು. ಈ ಅಕೀರಾ ಸಾಫ್ಟ್ವೇರ್ ಆರಂಭದಲ್ಲಿ ಭಾರತದ ಕನ್ನಡ, ತಮಿಳು ಸೇರಿ 16 ವಿಭಿನ್ನ ಭಾಷೆಗಳಲ್ಲಿ ಗ್ರಾಹಕರ ಜೊತೆ ಸಂವಹನ ನಡೆಸುವ ಸಾಮರ್ಥ್ಯ ಹೊಂದಿತ್ತು. ಇದಾದ ಬಳಿಕ ಹೆಚ್ಚುವರಿಯಾಗಿ ಒಂದೊಂದೇ ಭಾಷೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ’.

ಜಗತ್ತಿಗೆ ಮೋಡಿ ಮಾಡಿರುವುದು ಇದೇ ‘ಅಕೀರಾ’ ಎಂಬ ವರ್ಚುವಲ್ ಅಸಿಸ್ಟೆಂಟ್. ಪ್ರಸ್ತುತ ಇದಕ್ಕೆ ಆಪಲ್ನ ‘ಸಿರಿ’ ಪ್ರತಿಸ್ಪರ್ಧಿ. ಟೆಕ್ಲೋಕದ ದಿಗ್ಗಜ ಕಂಪನಿಗಳಾದ ಗೂಗಲ್, ಆಪಲ್, ಮೈಕ್ರೋಸಾಫ್ಟ್ ಮುಂತಾದವು ಇದೇ ಕಾನ್ಸೆಪ್ಟ್ ಮೇಲೆ ಬಹಳ ವರ್ಷಗಳಿಂದ ಸಂಶೋಧನೆ ನಡೆಸುತ್ತಿವೆ. ಮೇಲ್ನೋಟಕ್ಕೆ ಇದು ಸರಳವಾದ ಕಾನ್ಸೆಪ್ಟ್ನಂತೆ ಕಂಡರೂ ಹೆಚ್ಚು ವೆಚ್ಚದಾಯಕವಾದುದು ಎಂಬುದು ಪರಿಣತರ ಅಂಬೋಣ. ಆಪಲ್ ‘ಸಿರಿ’ಯನ್ನು ಅಭಿವೃದ್ಧಿಪಡಿಸಿದ್ದರೂ ಇದು 14 ಭಾರತೀಯ ಭಾಷೆ, 30 ಜಾಗತಿಕ ಭಾಷೆಗಳಲ್ಲಷ್ಟೇ ಸಂವಹನ ನಡೆಸುವುದಕ್ಕೆ ಶಕ್ತವಾಗಿದೆ. ಅದೂ ಕೇವಲ ಸ್ಮಾರ್ಟ್ಫೋನಿಗಷ್ಟೇ ಇದರ ಕೆಲಸ ಸೀಮಿತ. ಇದಕ್ಕೆ ಹೋಲಿಸಿದರೆ ಯುನಿಫೋರ್ನ ‘ಅಕೀರಾ’ ಎಲ್ಲ ಫೋನ್ಗಳಿಗೂ ಹೊಂದಿಕೊಳ್ಳುತ್ತದೆ. ಕಂಪ್ಯೂಟರ್ಗಳ ಮೂಲಕವೂ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದೆ.

ಸಾಮಾನ್ಯವಾಗಿ ಯಾವುದೇ ಕಂಪನಿಗಳ ಗ್ರಾಹಕ ಸೇವೆಗೆ ಕರೆ ಮಾಡಿದರೆ, ‘ವೆಲ್ಕಂ ಟು… ಕಂಪನಿ.. ಟು ಚೂಸ್ ಇಂಗ್ಲಿಷ್ ಪ್ರೆಸ್ ಒನ್, ಟು ಚೂಸ್ ಹಿಂದಿ ಪ್ರೆಸ್ 2, ಟು ಚೂಸ್ ಕನ್ನಡ ಪ್ರೆಸ್ 3…….’ ಎಂದು ಪ್ರತಿಕ್ರಿಯಿಸುವುದನ್ನು ಗಮನಿಸಿರಬಹುದು. ಮೊಬೈಲ್ ಫೋನ್, ಕೆಲವು ಖಾಸಗಿ ಬ್ಯಾಂಕ್ಗಳ ಈ ಗ್ರಾಹಕ ಸೇವೆಯಂತೂ ಸುದೀರ್ಘ ಅವಧಿ ತೆಗೆದುಕೊಳ್ಳುವಂಥದ್ದು. ಇಲ್ಲಿ ಗ್ರಾಹಕ ಸೇವಾ ಪ್ರತಿನಿಧಿಯ ಬದಲು ಇಂತಹ ಸಾಫ್ಟ್ವೇರ್ ಕೆಲಸ ಮಾಡುತ್ತಿರುತ್ತದೆ. ಯುನಿಫೋರ್ನ ಅಕಿರಾ ಬೇಸಿಕ್ ಮೊಬೈಲ್ ಸೆಟ್ನಲ್ಲೂ ಕೆಲಸ ನಿರ್ವಹಿಸಬಲ್ಲದು ಎಂಬುದೇ ವಿಶೇಷ. ಅಷ್ಟೇ ಅಲ್ಲ, ಮನುಷ್ಯ-ಉಪಕರಣದ ನಡುವಿನ ಸಂವಹನವನ್ನು ಚುಟುಕುಗೊಳಿಸುವಲ್ಲಿಯೂ ಇದು ಮಹತ್ವದ ಪಾತ್ರ ನಿರ್ವಹಿಸಿದೆ. ರೈತರಿಗೆ ಹವಾಮಾನ ವರದಿ, ಕೃಷಿ ಇಲಾಖೆಯ ಸಂದೇಶಗಳನ್ನು ತಲುಪಿಸುವಲ್ಲಿ ಈ ದೇಸೀ ತಂತ್ರಜ್ಞಾನ ಕೆಲಸ ಮಾಡಿದೆ.

ಸಚ್ದೇವ್ ಮತ್ತು ಸ್ನೇಹಿತರ ಈ ಕಾರ್ಯದಿಂದಾಗಿ ಯುನಿಫೋರ್ ಕಂಪನಿಯ ಆರು ಉತ್ಪನ್ನಗಳಿಗೆ ಪೇಟೆಂಟ್ ಕೂಡ ಸಿಕ್ಕಿದೆ. 2017-18ರಲ್ಲಿ ಈ ಕಂಪನಿಯ ಆದಾಯ 128 ಕೋಟಿ ರೂಪಾಯಿ ಮೀರುವ ನಿರೀಕ್ಷೆ ಇದೆ. ಈ ಯಶೋಗಾಥೆಯ ನಡುವೆ ಸಚ್ದೇವ್ ಖಾಸಗಿ ಬದುಕಿನ ಕುರಿತ ಮಾಹಿತಿ ಮರೆಯಾಗಿದೆ. ಭಾರತದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದ ಕನಸಿಗೆ ಅವರಂತಹ ಸಾಧಕರ ಕೊಡುಗೆ ನಿಜಕ್ಕೂ ಅಮೂಲ್ಯವಾದುದು. ಅವರ ಸಾಧನೆಯನ್ನು ಜಗತ್ತು ಗುರುತಿಸುವಂತಾಗಿದ್ದು, ಇನ್ನಷ್ಟು ಜನಸ್ನೇಹಿ ಆವಿಷ್ಕಾರಿ ಉತ್ಪನ್ನಗಳು ಜನಬಳಕೆಗೆ ಸಿಗಲಿ ಎಂಬ ಆಶಯ ಎಲ್ಲರದ್ದು.

Leave a Reply

Your email address will not be published. Required fields are marked *