ಹೋರಾಟದ ಹಾದಿಯಲ್ಲಿ ಅದೃಷ್ಟವೂ ಜೊತೆಯಾದಾಗ..

VYAKTHI VISHESHA - Raghuvaradas 4.1.15ಬುಡಕಟ್ಟು ಜನರೇ ಹೆಚ್ಚಿರುವ ಜಾರ್ಖಂಡ್ ರಾಜ್ಯ ರಚನೆಯಾದಂದಿನಿಂದಲೂ ಸ್ಥಿರ ಸರ್ಕಾರ ರಚನೆಯಾಗಿರಲಿಲ್ಲ. 2014ರ ಕೊನೆಯಲ್ಲಿ ನಡೆದ ಚುನಾವಣೆ ರಾಜ್ಯದ ರಾಜಕೀಯ ದಿಕ್ಕನ್ನೇ ಬದಲಾಯಿಸಿಬಿಟ್ಟಿತು. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಿತು. ಅದುವರೆಗೆ ಬುಡಕಟ್ಟು ಮುಖ್ಯಮಂತ್ರಿಗಳನ್ನೇ ಕಂಡ ರಾಜ್ಯಕ್ಕೆ ಆ ಜನಾಂಗಕ್ಕೆ ಹೊರತಾದ ಮೊದಲ ಮುಖ್ಯಮಂತ್ರಿಯೂ ಸಿಕ್ಕರು. ಅವರ ಹೆಸರೇ ರಘುವರ ದಾಸ್. ಕಳೆದ ಭಾನುವಾರ ಅವರು ಅಲ್ಲಿನ 10ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಿದರು. ಟಾಟಾ ಸ್ಟೀಲ್ ಕಂಪನಿಯಲ್ಲಿ ಕಾರ್ಮಿಕರಾಗಿದ್ದ ರಘುವರ್ ದಾಸ್ ಜಾರ್ಖಂಡ್ ಮುಖ್ಯಮಂತ್ರಿ ಆಸನ ಅಲಂಕರಿಸುವ ತನಕದ ರಾಜಕೀಯ ಬದುಕು ಹೂವಿನ ಹಾಸಾಗಿರಲಿಲ್ಲ. ಅದು ಕಷ್ಟ ನಷ್ಟಗಳ ಹೋರಾಟದ ಹಾದಿಯಾಗಿತ್ತು.

ಹಿಂದುಳಿದ ವರ್ಗಕ್ಕೆ ಸೇರಿದ ತೇಲಿ(ಗಾಣಿಗ) ಕುಟುಂಬದಲ್ಲಿ 1955ರ ಮೇ 3ರಂದು ಜನಿಸಿದ ಅವರು, ಭಾಲುಬಸ ಹರಿಜನ್ ಹೈಸ್ಕೂಲ್‍ನಲ್ಲಿ ಮೆಟ್ರಿಕ್ಯುಲೇಷನ್, ಜಮ್‍ಶೆಡ್‍ಪುರ ಕೋಆಪರೇಟಿವ್ ಕಾಲೇಜಿನಲ್ಲಿ ಬಿಎಸ್ಸಿ, ಎಲ್‍ಎಲ್‍ಬಿ ಪದವಿ ಶಿಕ್ಷಣ ಪಡೆದರು. ಇದಾದ ಬಳಿಕ ಅವರು ಟಾಟಾ ಸ್ಟೀಲ್ ಕಂಪನಿಗೆ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದರು. ದಾಸ್ ಅವರ ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ, ಪತ್ನಿ ರುಕ್ಮಿಣಿ ದೇವಿ. ದಂಪತಿಗೆ ಒಬ್ಬ ಮಗ ಮತ್ತು ಮಗಳು. ಮೋದಿಯವರಂತೆ ಇವರೂ ಶಾಖಾಹಾರಿಗಳು.

ಕಾಲೇಜು ದಿನಗಳಲ್ಲೇ ರಾಜಕೀಯದ ಕಡೆಗೆ ಒಲವು ಹೊಂದಿದ್ದ ಅವರು, ಜಯಪ್ರಕಾಶ್ ನಾರಾಯಣರ ನೇತೃತ್ವದ ಚಳವಳಿಯಲ್ಲಿ ಭಾಗವಹಿಸಿದ್ದರು. ಅದಾಗಿ, 1977ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿ ಬಂಧನಕ್ಕೊಳಗಾಗಿದ್ದರು. ಕೊನೆಗೆ 1980ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ರಚನೆಯಾದಾಗ ಅದರ ಸಂಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರಾಗಿದ್ದರು. ಮುಂಬೈನಲ್ಲಿ ಅದೇ ವರ್ಷ ನಡೆದ ಪಕ್ಷದ ಮೊದಲ ರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಜಮ್‍ಶೆಡ್‍ಪುರದ ಸೀತರಾಮ್‍ದೇರಾ ಘಟಕದ ಮುಖ್ಯಸ್ಥರಾಗಿಯೂ ನೇಮಕವಾಗಿದ್ದರು. ಅದಾದ ಬಳಿಕ ಅವರು, ಬಿಜೆಪಿ ನಗರ ಘಟಕದ ಮುಖ್ಯಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಹೋರಾಟದ ಹಾದಿಯಲ್ಲಿ ಆರಂಭವಾದ ಅವರ ರಾಜಕೀಯ ಬದುಕು, `ಕೆಲವರ ನಷ್ಟ ಇನ್ನು ಕೆಲವರ ಪಾಲಿನ ಲಾಭ’ ಎಂಬುದಕ್ಕೆ ಅನ್ವರ್ಥವಾಗುವಂತೆ ಸಾಗಿತು.

ರಘುವರ ದಾಸ್ ಅವರು ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು 1995ರಲ್ಲಿ. ಅಂದು ಪೂರ್ವ ಜಮ್‍ಶೆಡ್‍ಪುರದ ಶಾಸಕರಾಗಿದ್ದ ದೀನನಾಥ ಪಾಂಡೆ ಅವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ವರಿಷ್ಠರು, ದಾಸ್ ಅವರನ್ನು ಕಣಕ್ಕಿಳಿಸಿದ್ದರು. ಬಂಡಾಯ ಎದ್ದ ಪಾಂಡೆ ಅದೇ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೆ, ಗೆಲುವು ದಾಸ್ ಅವರ ಪಾಲಾಯಿತು. ಬಿಹಾರ ವಿಧಾನಸಭೆಯಲ್ಲಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಳಿಕ ಅದೇ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ ಕೀರ್ತಿ ಅವರದ್ದಾಗಿದೆ.

2005ರಲ್ಲಿ ಅರ್ಜುನ್ ಮುಂಡಾ ಸರ್ಕಾರದಲ್ಲಿ ನಗರಾಭಿವೃದ್ಧಿ ಖಾತೆಯನ್ನೂ ನಿರ್ವಹಿಸಿದ್ದ ದಾಸ್, ಅಂದು ಸಿಂಗಾಪುರ ಮೂಲದ ಮೈನ್‍ಹಾಡ್ ಕಂಪನಿಗೆ ರಾಂಚಿ ನಗರದ ಒಳಚರಂಡಿ ವ್ಯವಸ್ಥೆ ನಿರ್ವಹಣೆಯ 200 ಕೋಟಿ ಕಾಮಗಾರಿಯ ಗುತ್ತಿಗೆ ಕೊಡಿಸಿದ್ದು ವಿವಾದಕ್ಕೀಡಾಗಿತ್ತು. ದಾಸ್ ನಿಯಮ ಉಲ್ಲಂಘಿಸಿ ಈ ಗುತ್ತಿಗೆ ಕೊಡಿಸಿದ್ದಾಗಿ ಆರೋಪ ಅವರ ರಾಜಕೀಯ ಜೀವನದ ಕಪ್ಪು ಚುಕ್ಕೆ.

ರಾಜಕೀಯ ಯಾವತ್ತೂ ಹಾಗೆ.. ಏರಿಳಿತಗಳಿಂದ ಕೂಡಿದ ಹಾದಿ.. ಯಾರಿಗೆ ಯಾವಾಗ ಅದೃಷ್ಟ ಒಲಿಯುತ್ತದೋ ಗೊತ್ತಾಗಲ್ಲ. 2009ರ ಡಿಸೆಂಬರ್‍ನಲ್ಲಿ ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆದ ಬಳಿಕ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಅಂದು ಜೆಎಂಎಂ ಜೊತೆ ಮೈತ್ರಿ ಸರ್ಕಾರ ರಚನೆಗೆ ಬಿಜೆಪಿ ಸಿದ್ಧವಾಯಿತು. ಶಾಸಕಾಂಗ ಪಕ್ಷದ ನಾಯಕ ಸ್ಥಾನ ದಾಸ್ ಅವರಿಗೆ ಒಲಿಯಿತು. ಅವರು ಜೆಎಂಎಂ ನಾಯಕ ಶಿಬು ಸೊರೇನ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆದರು. ದಾಸ್ ಅವರ ರಾಜಕೀಯ ಏಳಿಗೆ ಬಯಸದ ಪಕ್ಷದೊಳಗಿನ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿತ್ತು. ಇದಕ್ಕೆ ಪೂರಕವಾಗಿ ಸಂಸತ್ ಸದಸ್ಯರಾಗಿಯೂ ಇದ್ದ ಶಿಬುಸೊರೇನ್ 2010ರ ಮೇ ತಿಂಗಳು ಲೋಕಸಭೆಯಲ್ಲಿ ಬಿಜೆಪಿ ಮಂಡಿಸಿದ್ದ ನಿಲುವಳಿ ವಿರುದ್ಧವೇ `ಆಕಸ್ಮಿಕ’ವಾಗಿ ಮತಚಲಾಯಿಸಿದರು. ಇದು ಜಾರ್ಖಂಡ್ ರಾಜಕೀಯದ ಮೇಲೆ ಪರಿಣಾಮ ಬೀರಿತು. ಮೂರು ತಿಂಗಳ ಸರ್ಕಾರ ಪತನವಾಗಿತ್ತು. ಅಲ್ಪಾವಧಿ ಡಿಸಿಎಂ ಹುದ್ದೆ ನಿಭಾಯಿಸಿದ ತೃಪ್ತಿ ಅವರದ್ದಾಯಿತು. ಆದರೆ, ಆ ಅವಧಿಯಲ್ಲಿ ಅವರು ಮಾಡಿದ ಕೆಲಸಗಳು ಬಿಜೆಪಿ ವರಿಷ್ಠರ ಗಮನ ಸೆಳೆದಿತ್ತು. ಮುಂದೆ ಮೂರು ತಿಂಗಳ ನಂತರ ಅದೇ ವರ್ಷ ನಿತಿನ್ ಗಡ್ಕರಿ ಅವರ ಮಧ್ಯಸ್ಥಿಕೆಯೊಂದಿಗೆ ಬಿಜೆಪಿಯ ಅರ್ಜುನ್ ಮುಂಡಾ ನೇತೃತ್ವದ ಸರ್ಕಾರಕ್ಕೆ ಜೆಎಂಎಂ ಬೆಂಬಲ ಸೂಚಿಸಿತು. ಈ ಬೆಳವಣಿಗೆಯಲ್ಲಿ ದಾಸ್ ಅವರು ಶಾಸಕಾಂಗ ಪಕ್ಷದ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು. ಈ ಹಿಂದಿನ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಅವರಿಗೆ ಈ ಬಾರಿ ಮಂತ್ರಿಮಂಡಲದಲ್ಲೂ ಅವಕಾಶವಿರಲಿಲ್ಲ. ಹೀಗೆ ಅಕ್ಷರಶಃ ಮೂಲೆಗುಂಪಾದರು. ಹಾಗೆಂದುಕೊಂಡು ಅವರೆಂದೂ ಬಂಡಾಯ ಏಳಲಿಲ್ಲ. ಆದರೆ, ತನ್ನ ಕಾರ್ಯದ ಮೂಲಕವೇ ಪಕ್ಷದ ವರಿಷ್ಠರ ಗಮನ ಸೆಳೆಯ ಬಯಸಿದ್ದರು ಅವರು. ಆದಾಗ್ಯೂ, ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನದಿಂದಲೂ ಹಿಂದೆ ಸರಿಯಬೇಕಾಯಿತು. ಮುಂಡಾ ಆಪ್ತ ದಿನೇಶಾನಂದ ಗೋಸ್ವಾಮಿ ಪಕ್ಷದ ಅಧ್ಯಕ್ಷರಾದರು.

ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿಯವರು ಜನ ಚೇತನಾ ರ್ಯಾಲಿಗಾಗಿ 2011ರಲ್ಲಿ ರಾಂಚಿಗೆ ಆಗಮಿಸುವ ತನಕವೂ ದಾಸ್ ಅವರು ನೇಪಥ್ಯದಲ್ಲೇ ಉಳಿಯಬೇಕಾಯಿತು. ರ್ಯಾಲಿಯನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಮುಂದಾದರು. ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದ್ದ ತೈಲ ಮತ್ತು ಕಲ್ಲಿದ್ದಲು ಚಾಲಿತ ಇಂಧನ ಘಟಕಗಳ ಕುರಿತು ಸ್ಥಳೀಯ ಪತ್ರಿಕೆಯೊಂದು ಮಾಡಿದ ವರದಿಯೊಂದನ್ನು ಆಡ್ವಾಣಿಯವರಿಗೆ ಖುದ್ದು ನೀಡಿದರು. ಅಂದು ಇಂಧನ ಖಾತೆ ಅರ್ಜುನ್ ಮುಂಡಾ ಅಧೀನದಲ್ಲೇ ಇತ್ತು. ಆದರೆ, ಈ ಪ್ರಯತ್ನ ಅವರಿಗೇ ತಿರುಗುಬಾಣವಾಯಿತು. ಆಡ್ವಾಣಿಯವರು ಅದನ್ನು ಪೂರ್ಣವಾಗಿ ನಿರ್ಲಕ್ಷಿಸಿದರು. ಹೀಗಾಗಿ ಸುಮಾರು ನಾಲ್ಕೂವರೆ ವರ್ಷ ಕಾಲ ತೆರೆಮರೆಯಲ್ಲೇ ಉಳಿದು ಪಕ್ಷ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ದಾಸ್, ಅದಕ್ಕೂ ಮೊದಲು 2004-05 ಮತ್ತು 2009-10ರ ಅವಧಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಯಶವಂತ ಸಿನ್ಹಾ, ಕರಿಯಾ ಮುಂಡಾರಂತೆ ದಾಸ್ ರಾಷ್ಟ್ರ ರಾಜಕಾರಣಕ್ಕೆ ಇಳಿದವರಲ್ಲ.
ಅವರ ಕಾಯುವಿಕೆಗೆ ಫಲ ಸಿಕ್ಕಿದ್ದು 2014ರ ಚುನಾವಣೆಯಲ್ಲಿ. ಅದೃಷ್ಟಲಕ್ಷ್ಮಿ ಅವರ ಕೈ ಹಿಡಿದ ಕಾರಣವೇ ಅವರು ಮುಖ್ಯಮಂತ್ರಿ ಕುರ್ಚಿ ಏರಿದರು. 82 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿಗೆ 41 ಸ್ಥಾನಗಳ ಸ್ಪಷ್ಟ ಬಹುಮತ ಸಿಕ್ಕಿತ್ತು. ಜಾರ್ಖಂಡ್ ಮುಖ್ಯಮಂತ್ರಿ ಪಟ್ಟ ಬುಡಕಟ್ಟು ಜನರಿಗೇ ಸೀಮಿತ ಎಂಬ ಭಾವನೆ ಬಲವಾಗಿತ್ತು. ಆದರೆ, ಅರ್ಜುನ್ ಮುಂಡಾ ಸೋತ ಕಾರಣ ಬಿಜೆಪಿಗೆ ಈ ಬಾರಿ ಬುಡಕಟ್ಟು ಮುಖ್ಯಮಂತ್ರಿ ಆಯ್ಕೆಗೆ ಅವಕಾಶವೇ ಇರಲಿಲ್ಲ. ಹೀಗಾಗಿ ಈ ಬಾರಿ ಮುಖ್ಯಮಂತ್ರಿ ಆಯ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಷಾ ಹೆಗಲೇರಿತ್ತು. ಅವರ ಆಯ್ಕೆ ರಘುವರ ದಾಸ್ ಆಗಿದ್ದು ವಿಶೇಷ. ಅದು ಅವರಿಗೆ ಅರ್ಹವಾಗಿಯೇ ಸಿಕ್ಕಿದ ಗೌರವವೂ ಹೌದು..

Tags :

Leave a Reply

Your email address will not be published. Required fields are marked *