2014 ಕಳೆದು ಹೋಗುತ್ತಿರುವಾಗ ಕಾಡಿದ್ದು..

ಕಾಲಚಕ್ರ ಉರುಳುತ್ತಿದ್ದು, ವರುಷ ಮತ್ತೊಂದು ಅದರಡಿ ಸಿಲುಕಿ ಹೋಗುತ್ತಿದೆ. ಈ ಒಂದು ವರ್ಷದ ಅವಧಿಯಲ್ಲಿ ನಮ್ಮ ಸುತ್ತಮುತ್ತ, ದೇಶ, ಜಾಗತಿಕ ಮಟ್ಟದಲ್ಲಿ ಅದೆಷ್ಟು ಆಗುಹೋಗುಗಳು ಸಂಭವಿಸಿ ಇತಿಹಾಸದ ಪುಟಗಳನ್ನು ಸೇರಿವೆ. ಅವುಗಳಲ್ಲಿ ಬಹುತೇಕದ ವಿದ್ಯಮಾನಗಳನ್ನು ಪತ್ರಿಕೆಯ ಪುಟಗಳಲ್ಲಿ ದಾಖಲಿಸಿದ ಒಬ್ಬ ಪತ್ರಕರ್ತನಾಗಿ, ವರ್ಷದ ಸಮಗ್ರ ನೋಟಕ್ಕಾಗಿ ಮತ್ತೊಮ್ಮೆ ಅದೇ ವಿದ್ಯಮಾನಗಳತ್ತ ಕಣ್ಣು ಹಾಯಿಸಿದಾಗ ಗಮನ ಸೆಳೆದ ಘಟನೆಗಳು ಹಾಗೂ ಕಾಡಿದ ಜಿಜ್ಞಾಸೆ..

ವರ್ಷಾಂತ್ಯದಲ್ಲಿ ಐಎಸ್‍ಐಎಸ್ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಆರೋಪದ ಅಡಿ ಮೆಹದಿ ಎಂಬಾತನನ್ನು ಪೊಲೀಸರು ಬಂಧಿಸುತ್ತಾರೆ.. ಅದು ಬಹುದೊಡ್ಡ ಸುದ್ದಿಯಾಗುತ್ತದೆ. ಅಂದು ಕೆಲ ಟಿವಿ ಮಾಧ್ಯಮದ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಅಲ್ಲೊಂದು ಪ್ರಶ್ನೆ ತೂರಿ ಬಂತು.. ಮೆಹದಿಯನ್ನು ಈಗಲೇ ಉಗ್ರ ಎಂದು ಸಂಬೋಧಿಸುವಂತಿಲ್ಲ. ಅದೇಕೋ ಟಿವಿ ಚಾನೆಲ್ ಮತ್ತು ಪತ್ರಿಕೆಯವರೆಲ್ಲ ಉಗ್ರ ಮೆಹದಿಯ ಬಂಧನ ಎಂದೇ ದಾಖಲಿಸುತ್ತಿದ್ದಾರೆ. ಕಾನೂನು ಪ್ರಕಾರ ಅಪರಾಧ ಸಾಬೀತಾಗುವ ತನಕ ಆರೋಪಿಯನ್ನು ಕೂಡಾ ನಿರಪರಾಧಿ ಎಂದೇ ಪರಿಗಣಿಸಬೇಕು ಎಂದೆಲ್ಲ ಚರ್ಚೆಗಳಾದವು.. ಈ ಹಿನ್ನೆಲೆಯಲ್ಲಿ 2014ರಲ್ಲಿ ಘಟಿಸಿದ ಕೆಲವು ಘಟನೆಗಳು ಬಹುವಾಗಿ ಕಾಡಿವೆ ನನ್ನನ್ನು..

 

sAndharbika chitra
sAndharbika chitra

• ಚಿತ್ರನಟಿ ಶ್ವೇತಾ ಬಸು ಪ್ರಕರಣ ತೆಗೆದುಕೊಳ್ಳಿ.. ಚಿತ್ರರಂಗದಲ್ಲಿ ಆಕೆ ಇನ್ನೂ ಬಾಳಿ ಬೆಳಗಬೇಕಾದವಳು. ಬಾಲನಟಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಆಕೆಯನ್ನು ಪೊಲೀಸರು ಬಂಧಿಸಿ ವೇಶ್ಯಾವಾಟಿಕೆಯ ಆರೋಪಿ ಎಂದರು. ತತ್‍ಕ್ಷಣವೇ ಟಿವಿ ಚಾನೆಲ್‍ಗಳಲ್ಲಿ ಚರ್ಚೆ ಆರಂಭವಾಯಿತು. ಆಕೆಯ ವಿವಿಧ ಭಂಗಿ ವಿಡಿಯೋ, ಛಾಯಾಚಿತ್ರಗಳನ್ನು ತೋರಿಸಿ ಆಕೆಯ ತೇಜೋವಧೆಗೆ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಮಾಡಿದರು. ಪತ್ರಿಕೆಗಳೂ ಅಷ್ಟೆ.. ಸುದ್ದಿಯ ಜೊತೆ ಒಂದಷ್ಟು ಅಭಿಪ್ರಾಯಗಳನ್ನೂ ಪ್ರಕಟಿಸಿದವು. ವಿಚಾರಣೆ ನಡೆದು ಕೊನೆಗೆ ಆಕೆ ನಿರ್ದೋಷಿ ಎಂದು ಬಿಡುಗಡೆ ಮಾಡಲಾಯಿತು. ಆದರೆ, ಈ ಸುದ್ದಿಯನ್ನೇನೂ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸಲಿಲ್ಲ; ಟಿವಿ ಚಾನೆಲ್‍ಗಳನ್ನು ಈ ಸುದ್ದಿಯನ್ನು ಕೇಂದ್ರಬಿಂದುವಾಗಿಸಿ ಚರ್ಚೆಯನ್ನು ನಡೆಸಲಿಲ್ಲ.. ಈ ವಿದ್ಯಮಾನ ಆಕೆಯನ್ನು ಬಹುವಾಗಿ ನೋಯುವಂತೆ ಮಾಡಿತು. ಯಾವ್ಯಾವ ಪತ್ರಿಕೆ- ಮಾಧ್ಯಮಗಳಲ್ಲಿ ಆಕೆ ಸಾರ್ವಜನಿಕ ಪತ್ರವನ್ನೂ ಅಸಮಾಧಾನ ಹೊರಹಾಕಿದಳು. ಅದಾವುದೂ ಮಾಧ್ಯಮಗಳ ಮೇಲೆ ಪರಿಣಾಮ ಬೀರಲಿಲ್ಲ!

• ಗಿರಿನಗರ ಕಾರ್ಪೊರೇಟರ್ ಲಲಿತಾ ಅವರ ಪ್ರಕರಣ ಗಮನಿಸಿ. ಇಲ್ಲೂ ಅಷ್ಟೆ.. ಬಟ್ಟೆ ಅಂಗಡಿಯಿಂದ ಚೂರಿದಾರ್ ಕಳ್ಳತನ ಮಾಡಿದರು .. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.. ಸಿಸಿಟಿವಿ ದೃಶ್ಯಾವಳಿಗಳಿದ್ದವು ಎಂಬಿತ್ಯಾದಿ ಆರೋಪ ಹೊರಿಸಿ ಪೊಲೀಸರು ಬಂಧಿಸಿದರು. ಆದರೆ ಅದು ಸಾಬೀತಾಗಿರಲಿಲ್ಲ. ಕೋರ್ಟ್ ಶಿಕ್ಷೆಯನ್ನೂ ವಿಧಿಸಿರಲಿಲ್ಲ. ಆದರೂ ಟಿವಿ ಚಾನೆಲ್‍ಗಳಲ್ಲಿ ಅತಿರಂಜಿತ ವರದಿ ಪ್ರಸಾರವಾಯಿತು. ಅರ್ಧಗಂಟೆ ಚರ್ಚೆಯೂ ನಡೆಯಿತು. ಅದೊಂದು ಕಾಯಿಲೆ ಎಂದರು. ಜಗತ್ತಿನ ಸೆಲೆಬ್ರಿಟಿಗಳ ಕಳ್ಳತನದ ಕಾಯಿಲೆ ಬಗ್ಗೆ ಚರ್ಚೆ ನಡೆಯಿತು. ಅವರ ತೇಜೋವಧೆ ಅಷ್ಟರಲ್ಲಾಗಲೇ ಆಗಿ ಹೋಗಿತ್ತು. ಇದನ್ನು ತಡೆಯಲಾರದೆ ಅವರು ಮಾನಸಿಕವಾಗಿ ಕುಗ್ಗಿದರು. ಖಿನ್ನತೆಗೆ ಒಳಗಾದರು, ಆತ್ಮಹತ್ಯೆ ಯತ್ನ ನಡೆಸಿ ಕೊನೆಗೆ ಕೊನೆಯುಸಿರೆಳೆದರು.. ಟಿವಿ ಚಾನೆಲ್‍ನಲ್ಲಿ ಪದೇಪದೇ ಆ ವರದಿಯನ್ನು ಸಿಸಿಟಿವಿ ದೃಶ್ಯಗಳನ್ನು ಪದೇಪದೇ ತೋರಿಸಬೇಕಾದ ಅವಶ್ಯಕತೆ ಇತ್ತಾ? ಅವರಿಗೆ ಕಾಯಿಲೆ ಇತ್ತು ಎಂದ ಬಳಿಕ ಅದಕ್ಕೆ ಚಿಕಿತ್ಸೆ ಒದಗಿಸಿ ಗುಣಮುಖಳಾಗುವುದಕ್ಕೆ ಅವಕಾಶ ನೀಡಬಹುದಿತ್ತಲ್ಲವೇ? ಎಲ್ಲಿ ಹೋಯಿತು ಮಾನವೀಯತೆ… ಹಾಗಂತ ಕಳ್ಳತನವನ್ನು ಸಮರ್ಥಿಸುತ್ತಿಲ್ಲ. ಅದನ್ನು ವಿಚಾರಣೆ ನಡೆಸಿ ಶಿಕ್ಷೆ ವಿಧಿಸೋದಕ್ಕೆ ಕೋರ್ಟ್ ಇದೆ. ತೇಜೋವಧೆ ಮಾಡಿ ಆ ವ್ಯಕ್ತಿ ಮಾನಸಿಕವಾಗಿ ಕುಗ್ಗುವಂತೆ ಮಾಡಿ ಪ್ರಾಣಕ್ಕೇ ಎರುವಾಗುವ ವರದಿಗಾರಿಕೆ ಬೇಕಾ?

• ಕೇಂದ್ರ ಸಚಿವ ಸದಾನಂದ ಗೌಡರ ಪುತ್ರನ ಪ್ರಕರಣ ಗಮನಿಸಿದರೆ ಅಲ್ಲೂ ಅಷ್ಟೆ.. ಆರೋಪ ಸಾಬೀತಾಗುವ ಮೊದಲೇ ಟಿವಿ ಚಾನೆಲ್‍ಗಳು, ಕೆಲವು ಪತ್ರಿಕೆಗಳು ಅತಿರಂಜಿತ ವರದಿ ಪ್ರಕಟಿಸಿದವು. ಪ್ಯಾನೆಲ್ ಚರ್ಚೆ ನಡೆಸಿದವು. ಯಾರೋ ಒಬ್ಬರು ವೈಯಕ್ತಿಕ ಕಾರಣಕ್ಕಾಗಿ ಇನ್ನೊಬ್ಬರ ಮೇಲೆ ಅದರಲ್ಲೂ ವಿಶೇಷವಾಗಿ ಸಮಾಜದ ಗಣ್ಯರ ಮೇಲೆ ಅವರ ಮಕ್ಕಳ ಮೇಲೆ ಆರೋಪ ಮಾಡಿದಾಗ ಅದನ್ನೇ ವಿಜೃಂಭಿಸಿ ತೋರಿಸುವ ತರಾತುರಿ ಏಕೆ? ಅದಾಗಿ ಆರೋಪ ಮಾಡಿದಾಕೆಯ ಮೇಲೆಯೇ ಇನ್ನಷ್ಟು ಆರೋಪಗಳು ಕೇಳಿಬಂದವು.. ಕೋರ್ಟ್‍ನಲ್ಲಿ ವಿಚಾರಣೆ ನಡೆದು ಅದರ ತೀರ್ಪು ಹೊರಬರುವ ಮೊದಲೇ ಮಾಧ್ಯಮಗಳೇಕೆ ಆರೋಪಿ ಸ್ಥಾನದಲ್ಲಿರುವವರನ್ನು ಅಪರಾಧಿಗಳೆಂದು ಪರಿಗಣಿಸುತ್ತವೆಯೋ ಗೊತ್ತಿಲ್ಲ..

• ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಪ್ರಕರಣ ಗಮನಿಸಿ.. ರಾಮಕಥಾ ಕಾರ್ಯಕ್ರಮದ ಗಾಯಕಿ ಮತ್ತು ಅವರ ಪತಿಯನ್ನು ಆಗಸ್ಟ್ ತಿಂಗಳಲ್ಲಿ ಹೊನ್ನಾವರ ಪೊಲೀಸರು ಬಂಧಿಸುತ್ತಾರೆ. ಈ ಘಟನೆ ಬೆನ್ನಲ್ಲೇ ಅವರು ಶ್ರೀಗಳನ್ನು ಬ್ಲ್ಯಾಕ್ ಮೇಲ್ ಮಾಡಿದ ವಿಷಯ ಟಿವಿಗಳಲ್ಲಿ ಪ್ರಸಾರವಾಗುತ್ತದೆ. ಅದಾಗಿ ಕೆಲವೇ ಗಂಟೆಗಳಲ್ಲಿ ಕೆಲವು ಟಿವಿ ಮಾಧ್ಯಮಗಳಲ್ಲಿ ಶ್ರೀಗಳ ವಿರುದ್ಧ ಆಕೆ ಅತ್ಯಾಚಾರದ ಆರೋಪ ಹೊರಿಸಿದ್ದಾಗಿ ಸುದ್ದಿ ಪ್ರಸಾರವಾಗುತ್ತದೆ. ಟಿವಿ ಮಾಧ್ಯಮಗಳು ಹಾಗೂ ಕೆಲವು ಪತ್ರಿಕೆಗಳು ಶ್ರೀಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ. ಅಲ್ಲೇನು ನಡೆದಿದೆ ಎಂಬುದನ್ನು ಜನರ ಮುಂದಿರಿಸದೇ ಗಾಯಕಿ ಮತ್ತು ಅವರ ಕುಟುಂಬ, ಬೆಂಬಲಿಗರು ಕೊಟ್ಟ ಮಾಹಿತಿಯನ್ನಷ್ಟೇ ಇಟ್ಟುಕೊಂಡು ಶ್ರೀಗಳ ಪೀಠತ್ಯಾಗಕ್ಕೆ ಒತ್ತಾಯಿಸುವಂಥ ಪ್ಯಾನೆಲ್ ಚರ್ಚೆಗಳಾಗುತ್ತವೆ. ದಂಪತಿ ಬಂಧನವಾದಾಗ ಯಾಕೆ ಅವರನ್ನು ಬಂಧಿಸಿದರು ಎಂಬುದನ್ನು ಹೊನ್ನಾವರ ಠಾಣೆಯಲ್ಲಿ ವಿಚಾರಿಸಿದ್ದರೆ ಗೊತ್ತಾಗಿರೋದು.. ದೂರಿನ ಪ್ರತಿಯೂ ಸಿಗುತ್ತಿತ್ತು. ಇಷ್ಟಾಗ್ಯೂ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕಾರಣ ಅದರ ವಿವರವನ್ನು ಯಥಾವತ್ತಾಗಿ ನೀಡಿದರೂ ಸಾಕಿತ್ತು. ಹಾಗೆ ಮಾಡದ ಮಾಧ್ಯಮಗಳು ಅಲ್ಲೂ “ಬೇಕಾದ್ದನ್ನಷ್ಟೇ’’ ಹೆಕ್ಕಿ ವರದಿ ಮಾಡಿವೆ. ಶ್ರೀಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ತೀರ್ಪುವಂತೆ ಪ್ಯಾನಲ್ ಚರ್ಚೆಯನ್ನೂ ಮಾಡಿವೆ.. ವಾರ್ತಾವಾಚಕಿಯರಂತೂ ಕೋರ್ಟ್‍ಗಿಂತ ಒಂದು ಹೆಜ್ಜೆ ತಾವೇ ಮುಂದಿದ್ದೇವೆ ಎಂಬ ಭಾವದಲ್ಲಿ ಬೀಗಿದ್ದೂ ಇದೆ.

ಇಂತಹ ಹಲವು ಪ್ರಕರಣಗಳನ್ನು ಪಟ್ಟಿ ಮಾಡಬಹುದು.. ಸಾಮಾನ್ಯವಾಗಿ ಯಾವುದೇ ಅಪರಾಧ ವರದಿ ಮಾಡಬೇಕಾದರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆಯೇ ಎಂಬುದನ್ನು ಪತ್ರಕರ್ತರು ಗಮನಿಸುವುದು ವಾಡಿಕೆ. ಒಂದು ವೇಳೆ ದೂರು ದಾಖಲಾಗಿಲ್ಲ ಎಂದಾದರೆ, ಆರೋಪದಲ್ಲಿರುವ ಸತ್ಯಾಂಶ ಗಮನಿಸಿ ವರದಿ ಮಾಡುವುದು ವಾಡಿಕೆ.. ಅಷ್ಟೇ ಅಲ್ಲ, ಉಗ್ರರ ಕುರಿತ ವರದಿ ಮಾಡಬೇಕಾದರೆ “ಆರೋಪಿ’’ಯ ಅಪರಾಧ ಸಾಬೀತಾಗುವ ತನಕ “ನಿರಪರಾಧಿ’’ ಎಂದು ಪರಿಗಣಿಸಬೇಕೆಂಬ ಸಲಹೆ ನೀಡುವ ಮಾಧ್ಯಮ ಮಿತ್ರರು, ಉಳಿದ ಪ್ರಕರಣಗಳಲ್ಲಿ ಎಲ್ಲ ಆರೋಪಿಗಳೂ “ಅಪರಾಧಿ’’ಗಳೆಂಬ ನಿರ್ಣಯಕ್ಕೆ ಬರುವುದೇಕೋ? ಇಲ್ಲಿ ಮಾಧ್ಯಮ ಅನುಸರಿಸುವ “ನೀತಿ’’ ಏನೆಂಬುದೇ ನಿಗೂಢ. ಅಪರಾಧ ವರದಿಗಾರಿಕೆ ಹಾದಿ ತಪ್ಪಿದೆಯೇ ಹಾಗಾದರೆ ಎಂಬ ಜಿಜ್ಞಾಸೆ ಕೂಡಾ ಕಾಡುತ್ತಿದೆ..

Leave a Reply

Your email address will not be published. Required fields are marked *