ಅಭಾ ಮಾಥುರ್ ಅಲ್ಲ ಇಶಾ ಪಂಥ್‌ ಐಪಿಎಸ್!

ಇಶಾ ಪಂಥ್
ಇಶಾ ಪಂಥ್

`ಕುತ್ತೆ ಕಿ ಜಿಂದಗೀ ಹೇ ಸಾಲಾ, ಕುಛ್ ನ ಕೀಜಿಯೇ ತೋ ಪಬ್ಲಿಕ್ ಮಾರೇ. ಕುಛ್ ಕೀಜಿಯೇ ತೋ ಸಾಹಿಬ್ ಮಾರೇ, ಹಮ್ಸೆ ಜ್ಯಾದಾ ಇಜ್ಜತ್ ತೋ ಕ್ರಿಮಿನಲ್ ಕಾ ಹೇ, (ನಾಯಿ ಪಾಡು ನಮ್ಮದು, ಏನೂ ಮಾಡದೇ ಇದ್ರೆ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳಬೇಕು, ಏನಾದ್ರೂ ಮಾಡ್ತೀವೀ ಅಂತ ಹೋದ್ರೆ ಆಡಳಿತದಲ್ಲಿರುವವರಿಂದ ಉಗಿಸ್ಕೋಬೇಕು, ನಮಗಿಂತ ಇಲ್ಲಿ ಹೆಚ್ಚು ಗೌರವ, ಬೆಲೆ ಇರುವುದು ಕ್ರಿಮಿನಲ್‍ಗಳಿಗೆ)
ಹದಿಮೂರು ವರ್ಷಗಳ ಹಿಂದೆ ಖ್ಯಾತ ನಿರ್ದೇಶಕ ಪ್ರಕಾಶ್ ಝಾ ನಿರ್ದೇಶಿಸಿದ `ಗಂಗಾಜಲ್’ ಸಿನಿಮಾದಲ್ಲಿ ಭ್ರಮನಿರಸನಗೊಂಡ ಪೊಲೀಸ್ ಅಧಿಕಾರಿಯ ಆಕ್ರೋಶಭರಿತ ಮಾತುಗಳಿವು. ಈಗ ಮತ್ತೆ ಝಾ ಇಂಥದ್ದೇ ಮತ್ತೊಂದು ಸಿನಿಮಾ `ಜೈ ಗಂಗಾಜಲ್’ ಮೂಲಕ ಗಮನಸೆಳೆದಿದ್ದಾರೆ. ಇದು ಕೂಡ ಪೊಲೀಸ್ ವ್ಯವಸ್ಥೆ, ರಾಜಕೀಯ ವ್ಯವಸ್ಥೆಯನ್ನೊಳಗೊಂಡ ಕಥಾಹಂದರ. ಬಿಹಾರದ ಬಂಕೀಪುರ ಎಂಬ ಜಿಲ್ಲೆಯ ಕಥೆ. ಇಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮಹಿಳೆ. ಹೆಸರು `ಅಭಾ ಮಾಥುರ್’. ನಟಿ ಪ್ರಿಯಾಂಕಾ ಚೋಪ್ರಾ ಈ ಪಾತ್ರ ಮಾಡಿದ್ದು, ಬಾಲಿವುಡ್‍ನಲ್ಲಿ ಸದ್ದು ಮಾಡಿದೆ. ಅಂದ ಹಾಗೆ, ಅಭಾ ಮಾಥುರ್ ಪಾತ್ರದ ನಿರ್ವಹಣೆಗಾಗಿ ಪ್ರಿಯಾಂಕಾ ಅವರು ಮಹಿಳಾ ಪೆÇಲೀಸ್ ಅಧಿಕಾರಿಯ ನಡವಳಿಕೆ, ಬಾಡಿ ಲಾಂಗ್ವೇಜ್‍ಗಳನ್ನೆಲ್ಲ ಗಮನಿಸಬೇಕಿತ್ತು. ಇದೀಗ ಆ ಮಹಿಳಾ ಪೊಲೀಸ್ ಅಧಿಕಾರಿಯೂ ಸುದ್ದಿಯಲ್ಲಿದ್ದಾರೆ. ಮಧ್ಯಪ್ರದೇಶ ಕೆಡರ್‍ನ ಈ ಅಧಿಕಾರಿಗೆ ಇತ್ತೀಚೆಗಷ್ಟೇ ಕರ್ನಾಟಕ ಕೆಡರ್‍ಗೆ ವರ್ಗಾವಣೆ ಸಿಕ್ಕಿದ್ದು, ಶೀಘ್ರವೇ ನಿಯುಕ್ತಿಗೊಳ್ಳುವ ನಿರೀಕ್ಷೆ ಇದೆ.
ಈ ಖಡಕ್ ಅಧಿಕಾರಿ ಬೇರಾರೂ ಅಲ್ಲ, ಮಧ್ಯಪ್ರದೇಶದ ಭೋಪಾಲ್‍ನ ಸಾಕೇತ್‍ನಗರದ ನಿವಾಸಿ ಇಶಾ ಪಂಥ್. 2011ರ ಮಧ್ಯಪ್ರದೇಶ ಕೆಡರ್‍ನ ಅಧಿಕಾರಿ. ಯುಪಿಎಸ್‍ಸಿ ಪರೀಕ್ಷೆಯಲ್ಲಿ ಅಖಿಲ ಭಾರತದ ಮಟ್ಟದಲ್ಲಿ 191ನೇ ರ್ಯಾಂಕ್ ಪಡೆದ ಅವರು ಹೈದರಾಬಾದ್‍ನ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡಮಿಯಲ್ಲಿ ಪೊಲೀಸ್ ತರಬೇತಿ ಪೂರ್ಣಗೊಳಿಸಿದರು. ಇಲ್ಲಿ ತರಬೇತಿ ಅವಧಿಯಲ್ಲಿದ್ದಾಗಲೇ ಪ್ರಧಾನಮಂತ್ರಿಯವರ ದಂಡ, ಗೃಹಸಚಿವರ ರಿವಾಲ್ವರ್ ಉಡುಗೊರೆಯನ್ನೂ 64ನೇ ದಿಕ್ಶಾಂತ್ (ಘಟಿಕೋತ್ಸವ) ಪರೇಡ್‍ನಲ್ಲಿ ಗೆದ್ದಿದ್ದರು. ಇದಾದ ಬಳಿಕವಷ್ಟೇ ಅವರು, ಪ್ರೊಬೆಷನರಿ ಅವಧಿಯಲ್ಲಿ ಜಬಲ್‍ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು.
ಜಬಲ್‍ಪುರ `ಡ್ರಗ್ಸ್‍ನ ಅಡ್ಡಾ’ ಎಂದೇ ಕುಪ್ರಸಿದ್ಧಿ ಪಡೆದ ಊರು. ಜಬಲ್‍ಪುರ ಜಿಲ್ಲೆಯ ಎಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಕಾನೂನು ಸುವ್ಯವಸ್ಥೆ ಹತೋಟಿಗೆ ತರುವ ಕೆಲಸಕ್ಕೆ ಇಶಾ ಮುಂದಾದರು. ಪರಿಣಾಮ ಡ್ರಗ್ಸ್ ಮಾಫಿಯಾಕ್ಕೆ ಬ್ರೇಕ್ ಬಿತ್ತು. ಈ ಕೆಲಸದಿಂದಾಗಿ ಅವರಿಗಲ್ಲಿ ಜನಪ್ರಿಯತೆ ಸಿಕ್ಕಿತು. ಪರಿಣಾಮ, ಮಧ್ಯಪ್ರದೇಶದ ಲೇಡಿ ಸಿಂಘಂ ಎಂಬ ವಿಶೇಷಣವೂ ಹೆಸರಿನ ಜತೆ ಸೇರಿಕೊಂಡು ಸಾರ್ವಜನಿಕ ವಲಯದಲ್ಲಿ ಹರಿದಾಡತೊಡಗಿತು. ಅಷ್ಟೇ ಅಲ್ಲ, 2012ರ ಅತ್ಯುತ್ತಮ ಆಲ್‍ರೌಂಡ್ ಐಪಿಎಸ್ ಪ್ರೊಬೆಷನರ್ ಎಂಬ ಪ್ರಶಸ್ತಿಯ ಗರಿಮೆಯೂ ಅವರಿಗೆ ದಕ್ಕಿತು.
ಜಬಲ್‍ಪುರದಲ್ಲಿ ಅವರು ಮಾಡಿದ ಸಾಧನೆ ಪ್ರಕಾಶ್ ಝಾ ಅವರ ಗಮನಸೆಳೆದಿತ್ತು. ಅದರ ಪ್ರೇರಣೆಯೇ `ಅಭಾ ಮಾಥುರ್’ ಪಾತ್ರದ ಸೃಷ್ಟಿ. ಈ ವಿಷಯವಾಗಿ ಮಾಧ್ಯಮಗಳ ಜತೆ ಮಾತನಾಡಿರುವ ಇಶಾ, `ಪ್ರಕಾಶ್ ಝಾ ಅವರು ಜೈ ಗಂಗಾಜಲ್ ಸಿನಿಮಾ ಹಾಗೂ ಅಭಾ ಮಾಥುರ್ ಪಾತ್ರದ ಬಗ್ಗೆ ಮಾತನಾಡಲು ಬಂದಾಗ ನಾನು ಮೂಕಳಾಗಿದ್ದೆ. ನನ್ನ ಹಾವಭಾವನ್ನು ಪ್ರಿಯಾಂಕ ಅನುಕರಿಸಿದ್ದರು. ಇದು ಬಿಟ್ಟು ಮಾಧ್ಯಮಗಳಲ್ಲಿ ಬಿಂಬಿತವಾಗಿರುವಂತೆ ನನ್ನ ಜೀವನಕ್ಕೂ ಜೈ ಗಂಗಾಜಲ್ ಸಿನಿಮಾಕ್ಕೂ ಯಾವುದೆ ಸಂಬಂಧವಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.
ಇವಿಷ್ಟೇ ಇಶಾ ಸಾಧನೆ ಎಂದುಕೊಳ್ಳಬೇಡಿ. ಅವರು ಸಾಹಿತ್ಯಾಸಕ್ತರೂ ಹೌದು. ಅವರದ್ದೆ ಆದ ಒಂದು ಬ್ಲಾಗ್(http:treeonthehilltop.blogspot.in) ಕೂಡ ಇದೆ. 2006ರಲ್ಲಿ ಈ ಬ್ಲಾಗನ್ನು ಅವರು ಪ್ರಾರಂಭಿಸಿದ್ದು, ಇದರಲ್ಲಿ ಒಂದಷ್ಟು ಕವನ, ಲಘು ಬರಹ, ಜೀವನದ ಕೆಲವು ಪ್ರಸಂಗಗಳು, ಕೆಲವೇ ಕೆಲವು ಪ್ರಚಲಿತ ವಿಷಯಗಳ ಕುರಿತ ಟೀಕೆ, ವಿಡಂಬನೆ ಕೂಡ ಇವೆ. ಎಲ್ಲವೂ ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿವೆ.
ಈ ಬ್ಲಾಗ್‍ನಲ್ಲಿ ಗಮನಸೆಳೆದ ಲಘು ಬರಹದ ಶೀರ್ಷಿಕೆ `ದ ವಿಸಿಟರ್’. ಅದರ ಭಾವಾನುವಾದ ಇಂತಿದೆ- `ಅದು ಬೆಳಗಿನ ಜಾವ ಐದು ಗಂಟೆ ಸಮಯ. ಅಲರಾಂ ಬಡಿದುಕೊಳ್ಳುತ್ತಿತ್ತು. ನನ್ನ ಸೋಮಾರಿ ಕೈಗಳು ಅಲರಾಂ ಬಟನ್ ಅದುಮಿ ಮತ್ತೆ ಮುಸುಕು ಹಾಕಿ ಮಲಗಿದೆ. ಐದು ನಿಮಿಷದ ಬಳಿಕ ಮತ್ತೆ ಅಲರಾಂ ಬಡಿದುಕೊಳ್ಳತೊಡಗಿತು. ನನ್ನ ಬದುಕಿನ ಮೇಲೆ ಅಂಥದ್ದೊಂದು ಅಧಿಕಾರ ಇರುವುದು ಅದಕ್ಕೊಂದಕ್ಕೇ.. ನಿದ್ದೆಗಣ್ಣಿನಲ್ಲಿ ಎದ್ದು ಮೈ ಮುರಿದು ವಾಲಾಡುತ್ತ ಬಾತ್‍ರೂಮ್ ಕಡೆಗೆ ಹೊರಟೆ. ಅಲ್ಲಿ ನನಗೊಬ್ಬ ಅತಿಥಿ ಕಾಯುತ್ತಿದ್ದ. ಆತ ತಲೆ ಕೆಳಗಾಗಿ ನಿಧಾನವಾಗಿ ನನ್ನತ್ತ ಬರುತ್ತಿದ್ದ. ಆತನಿಗೆ ಹೋಗುವುದಕ್ಕೆ ಜಾಗ ಮಾಡಿಕೊಡಲು ನಾನು ಉಸಿರುಕಟ್ಟಿ ತಲೆ ಹಿಂಬದಿಗೆ ತಂದು ಆ ಕಾಲುದಾರಿಯಲ್ಲಿ ನಿಂತುಬಿಟ್ಟೆ. ಆದಾಗ್ಯೂ, ಆತ ಪಥ ಬದಲಿಸಲಿಲ್ಲ. ಸೀದಾ ಬಳಿ ಬಂದ.. ಆ ಕಪಿಲ ವರ್ಣದ ಪುಟಾಣಿ ಅತಿಥಿ ಸೀದಾ ಬಂದು ಕೈ ಹಿಡಿದು ಮೈ ಎಲ್ಲ ನಡುಕ ಹುಟ್ಟಿಸಿಬಿಟ್ಟ… ನಾನು ನಿಧಾನವಾಗಿ ಬಗ್ಗಿ ನನ್ನ ಸ್ಲಿಪ್ಪರ್ ಕೈಗೆತ್ತಿಕೊಂಡೆ, ಆತನ ತಲೆಮೇಲೊಂದು ಮೊಟಕಿ ಹೇಳಿದೆ It was nice meeting you Mr. Spider!’..! ಇಂದಿಗೂ ಗೋಡೆ ಮೇಲೆ ಜೇಡನ ಹೊಡೆದ ಜಾಗದಲ್ಲಿ ಒಂದು ಕಂದು ಬಣ್ಣದ ಕಲೆ ಹಾಗೆಯೇ ಉಳಿದುಕೊಂಡಿದೆ’. ಈ ರೀತಿಯ, ಸರಳ ನಿರೂಪಣೆಯ ಹಲವು ಬರಹಗಳು ಅವರ ಬ್ಲಾಗ್‍ನಲ್ಲಿವೆ.
ಅಂದ ಹಾಗೆ, ಇಶಾ ಜನಿಸಿದ್ದು 1984ರ ಜೂನ್ 23ರಂದು. ತಂದೆ ಭಾಗವತ್ ಪಂಥ್ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್‍ನ ನಿವೃತ್ತ ಉದ್ಯೋಗಿ. ತಾಯಿ ಭಾಗವತಿ ಪಂಥ್. ಅವರ ತಾಯಿ ಹಿಂದುಸ್ಥಾನಿ ಸಂಗೀತದಲ್ಲಿ ಸಾಧನೆ ಮಾಡಿದ್ದಾರೆ. ಈ ದಂಪತಿಯ ನಾಲ್ವರು ಮಕ್ಕಳ ಪೈಕಿ ಇಶಾ ಕೊನೆಯವರು. ಉಳಿದವರು ಅಕ್ಕಂದಿರು. ಒಬ್ಬ ಅಕ್ಕ ಐಎಫ್‍ಎಸ್ ಅಧಿಕಾರಿ, ಮತ್ತೊಬ್ಬಾಕೆ ಮಾನವ ಸಂಪನ್ಮೂಲ ಅಧಿಕಾರಿ, ಮೂರನೇ ಅಕ್ಕ ಭಾರತೀಯ ವಾಯುಪಡೆಯಲ್ಲಿ ಸ್ಕ್ವಾಡ್ರನ್ ಲೀಡರ್. ಇಂತಹ ಪ್ರತಿಭಾವಂತ, ಪ್ರೇರಣಾದಾಯಿ ಹಿನ್ನೆಲೆಯ ಕುಟುಂಬದಿಂದ ಬಂದ ಇಶಾ ಕರ್ನಾಟಕ ಕೆಡರ್‍ನ ಐಎಎಸ್ ಅಧಿಕಾರಿ ಅನಿರುದ್ಧ್ ಶ್ರವಣ್ (ಕಲಬುರಗಿ ಜಿ.ಪಂ. ಸಿಇಒ)ರನ್ನು 2014ರ ಫೆ.5ರಂದು ವಿವಾಹವಾಗಿದ್ದಾರೆ.
ಇಶಾ ಪ್ರಸ್ತುತ ಗ್ವಾಲಿಯರ್‍ನಲ್ಲಿ 14ನೇ ಬೆಟಾಲಿಯನ್‍ನ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2011ರ ಬ್ಯಾಚಿನ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಅವರ ಅನುಭವ ಸೀಮಿತ ಹೌದಾದರೂ, ಪ್ರತಿಭಾನ್ವಿತೆಯಾದ ಅವರು ಸಿನಿಮಾ ಹಾಗೂ ದಿಟ್ಟ ಕಾರ್ಯವೈಖರಿಯಿಂದ ಸುದ್ದಿಯಾಗಿದ್ದಾರೆ. ಸಾಧನೆಯ ಹಾದಿಯಲ್ಲಿ ಅವರು ಇನ್ನಷ್ಟು ಸಾಗಬೇಕಿದ್ದು, ಕರ್ನಾಟಕದಲ್ಲೂ ಅವರ ಬಗ್ಗೆ ಒಂದಷ್ಟು ಕುತೂಹಲ, ನಿರೀಕ್ಷೆಗಳು ಹುಟ್ಟಿಕೊಂಡಿವೆ.

Leave a Reply

Your email address will not be published. Required fields are marked *