ಅಂಚೆ ಕಚೇರಿ ಇನ್ನು ಪೇಮೆಂಟ್ ಬ್ಯಾಂಕ್

ಪೋಸ್ಟ್ ಅಥವಾ ಅಂಚೆ ಎಂಬ ಶಬ್ದ ಕೇಳಿದೊಡನೆ ಈಗಿನ ಯುವಜನಾಂಗ, ಮಧ್ಯವಯಸ್ಕರು ಹಾಗೂ ಹಳಬರ ಸ್ಮೃತಿ ಪಟಲದಲ್ಲಿ ಮೂಡುವುದು ‘ಅಂಚೆಯ ಅಣ್ಣ’. ಬದಲಾದ ಕಾಲಘಟ್ಟದಲ್ಲಿ ಅಂಚೆ ವಿನಿಮಯ ಕಡಿಮೆಯಾಗಿದ್ದು, ಅಂಚೆ ಕಚೇರಿಗಳಲ್ಲಿ ಹಣಕಾಸು ವಹಿವಾಟೇ ಹೆಚ್ಚಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದಿರಿಸಿರುವ ಭಾರತೀಯ ಅಂಚೆ ‘ಪೇಮೆಂಟ್ ಬ್ಯಾಂಕ್’ ಆಗಿ ಬದಲಾಗುತ್ತಿದೆ.

Vittavani 40716ಅಂಚೆಯ ಅಣ್ಣ ಬಂದಿಹನಣ್ಣ

ಅಂಚೆಯ ಹಂಚಲು ಮನೆಮನೆಗೆ

ಸಾವಿರ ಸುದ್ದಿಯ ಬೀರುತ ಬರುವನು

ತುಂಬಿದ ಚೀಲವು ಹೆಗಲೊಳಗೆ …

ನೆನಪಿದೆಯೇ ಈ ಹಾಡು..! ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ ಬಹುತೇಕರಿಗೆ ಈ ಹಾಡು ಪರಿಚಿತ. ಇದು ಅಂದಿನ ಅಂಚೆ ಇಲಾಖೆಯನ್ನು ಅಂಚೆಯ ಅಣ್ಣನ ಕೆಲಸಗಳ ಮೂಲಕ ಮಕ್ಕಳಿಗೆ ಪರಿಚಯಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂಚೆಯ ಅಣ್ಣನ ಹೆಗಲಿಗೆ ಇನ್ನೂ ಕೆಲವು ಹೊಣೆಗಾರಿಕೆ ಸೇರ್ಪಡೆಯಾಗಿದೆ, ಆಗುತ್ತಿದೆ ಕೂಡ. ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಅಂಚೆ ಕಚೇರಿಯ ಸ್ವರೂಪವೂ ಬದಲಾಗುತ್ತಿದೆ. ಕೇವಲ ಪತ್ರಗಳ ಬಟವಾಡೆ ಮಾಡುತ್ತಿದ್ದ ಅಂಚೆ ಕಚೇರಿಯು ಕ್ರಮೇಣ ಉಳಿತಾಯ ಖಾತೆ, ಕಿಸಾನ್ ವಿಕಾಸ್ ಪತ್ರ, ವಿಮೆ ಮುಂತಾದ ಬ್ಯಾಂಕಿಂಗ್ ವಹಿವಾಟುಗಳನ್ನೂ ನಡೆಸಲಾರಂಭಿಸಿತು. ಈ ಬದಲಾವಣೆ ಇದೀಗ ದೊಡ್ಡ ಪ್ರಮಾಣದಲ್ಲಾಗುತ್ತಿದ್ದು, ಈಗಿರುವ ಪೋಸ್ಟ್ ಆಫೀಸ್ ಮುಂದಿನ ವರ್ಷ ಮಾರ್ಚ್ ವೇಳೆಗೆ ‘ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)’ ಆಗಿ ಪರಿವರ್ತನೆಗೊಂಡು ಗ್ರಾಹಕ ಸೇವೆ ಸಲ್ಲಿಸಲಿದೆ.

‘ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ದೇಶಾದ್ಯಂತ 5000 ಎಟಿಎಂಗಳನ್ನು ಸ್ಥಾಪಿಸಲಿದೆ. ಇದರೊಂದಿಗೆ ಪೋಸ್ಟ್ ಬ್ಯಾಂಕ್ನ ಬ್ಯಾಂಕಿಂಗ್ ಜಾಲ ಇಡೀ ಜಗತ್ತಿನಲ್ಲೇ ಅತಿದೊಡ್ಡ ಬ್ಯಾಂಕಿಂಗ್ ಜಾಲವೆನಿಸಲಿದೆ. ಇದು ನಿಜಕ್ಕೂ ಭಾರಿ ಬದಲಾವಣೆಯ ನಡೆಯಾಗಲಿದೆ’

ಹೀಗೆಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಜೂನ್ ಒಂದರಂದು ಟ್ವೀಟ್ ಮಾಡಿದ್ದರು. ಅವರ ಈ ಹೇಳಿಕೆ ವಾಸ್ತವ ಕೂಡ. ಪ್ರಸ್ತುತ ದೇಶಾದ್ಯಂತ 1.54 ಲಕ್ಷ ಅಂಚೆ ಕಚೇರಿಗಳಿದ್ದು, ಗ್ರಾಮ ಗ್ರಾಮಗಳನ್ನೂ ಅಂಚೆ ಇಲಾಖೆ ತಲುಪಿದೆ. ಈ ಅಂಚೆ ಕಚೇರಿಗಳ ಗಣಕೀಕರಣಕ್ಕೆ 4909 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಇದು ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ. ಈ ಕಚೇರಿಗಳು ಬ್ಯಾಂಕ್ನಂತೆ ಕೆಲಸ ಮಾಡಲಾರಂಭಿಸಿದರೆ ಅದು ಭಾರತದ ಅರ್ಥ ವ್ಯವಸ್ಥೆಯ ಮಟ್ಟಿಗೆ ಬಹುದೊಡ್ಡ ಬದಲಾವಣೆಯನ್ನೇ ಉಂಟುಮಾಡಲಿದೆ.

ಪೇಮೆಂಟ್ ಬ್ಯಾಂಕ್ ಡ/ಠ ಸ್ಮಾಲ್ ಬ್ಯಾಂಕ್: ಆರ್ಬಿಐ ಹೇಳುವಂತೆ, ಪೇಮೆಂಟ್ ಬ್ಯಾಂಕ್ ಇತರೆ ಬ್ಯಾಂಕ್ಗಳಿಗಿಂತ ಭಿನ್ನವಾದುದು. ಇದರ ಕಾರ್ಯವ್ಯಾಪ್ತಿ ಕೂಡ ಬೇರೆ. ಪೇಮೆಂಟ್ ಬ್ಯಾಂಕ್ಗಳ ಸ್ಥಾಪನೆಯ ಉದ್ದೇಶವೇ ‘ಹಣಕಾಸು ವಹಿವಾಟಿನ ವಿಸ್ತರಣೆ’.

ಉದಾಹರಣೆಗೆ ಹೇಳುವುದಾದರೆ, ಸ್ಮಾಲ್ ಬ್ಯಾಂಕ್ಗಳಲ್ಲಿ ಠೇವಣಿ ಇರಿಸುವುದಕ್ಕೆ ಹಾಗೂ ಸಾಲ ವಿತರಣೆಗೆ ಸೀಮಿತ ಅವಕಾಶವಿದೆ. ಆದರೆ, ಪೇಮೆಂಟ್ ಬ್ಯಾಂಕ್ಗಳು ಗ್ರಾಹಕರಿಗೆ ಕೆಲವೇ ಕೆಲವು ನಿಗದಿತ ಹಣಕಾಸು ಉತ್ಪನ್ನಗಳನ್ನಷ್ಟೇ ಒದಗಿಸಬಹುದು ಹಾಗೂ ಹಣ ರವಾನೆಗೆ ಮಾತ್ರ ಅವಕಾಶ ಒದಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲೂ ಸಂಗ್ರಹ/ಸಂಪರ್ಕ ಕೇಂದ್ರ ಸ್ಥಾಪಿಸುವ ಮೂಲಕ ಜಾಲ ವಿಸ್ತರಣೆಗೆ ಅವಕಾಶವಿರುವುದು ಪೇಮೆಂಟ್ ಬ್ಯಾಂಕ್ಗಳಿಗಿರುವ ಪ್ರಯೋಜನ. ಇಂತಹ ಬ್ಯಾಂಕ್ಗಳು ತಮ್ಮದೇ ಶಾಖೆಯನ್ನು ಆರಂಭಿಸುವುದಕ್ಕೆ ಅಥವಾ ‘ವ್ಯವಹಾರ ಪ್ರತಿನಿಧಿ’ಗಳನ್ನು ಹೊಂದುವುದಕ್ಕೆ ಅನುಮತಿ ಇದೆ. ಆದರೆ, ಅನಿವಾಸಿ ಭಾರತೀಯರಿಂದ ಹಣ ಪಡೆಯುವುದಕ್ಕೋ ಅವರಿಗೆ ಸಾಲ ಕೊಡುವುದಕ್ಕೋ ಪೇಮೆಂಟ್ ಬ್ಯಾಂಕ್ಗೆ ಅವಕಾಶವಿಲ್ಲ. ಈ ಬ್ಯಾಂಕ್ಗಳು ಡೆಬಿಟ್ ಕಾರ್ಡ್ಗಳನ್ನು ವಿತರಿಸಬಹುದೇ ಹೊರತು ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸುವಂತಿಲ್ಲ. ಈ ಬ್ಯಾಂಕ್ಗಳ ಯಾವುದೇ ಖಾತೆಯಲ್ಲಿ ಗರಿಷ್ಠ 1,00,000 ರೂ. ಇರಿಸಬಹುದಷ್ಟೆ.

ಗ್ರಾಹಕರಿಗೇನು ಪ್ರಯೋಜನ

ಬ್ಯಾಂಕ್ ಖಾತೆ ಹೊಂದಿಲ್ಲದವರು, ಹಿಂದುಳಿದ ಪ್ರದೇಶದಲ್ಲಿರುವವರಿಗೆ ಹಣಕಾಸು ಸೇವೆ ಒದಗಿಸುವುದಕ್ಕಾಗಿ ಪೇಮೆಂಟ್ ಬ್ಯಾಂಕ್ಗಳಿಗೆ ಪರವಾನಗಿ ನೀಡಲಾಗುತ್ತಿದೆ. ಪ್ರಸ್ತುತ ಲಭ್ಯವಿರುವ ಮೂಲಸೌಕರ್ಯ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ಆಧುನಿಕ ಪೇಮೆಂಟ್ ಬ್ಯಾಂಕ್ಗಳು ಮೊಬೈಲ್ ಬ್ಯಾಂಕಿಂಗ್ ಮುಂತಾದ ಹೊಸ ಹೊಸ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತವೆ. ಹಣ ರವಾನೆ ಮತ್ತು ಹಣ ಸ್ವೀಕರಿಸುವ ಕೆಲಸವೂ ಸರಳವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ. ಅದೇ ರೀತಿ ಕೇಂದ್ರ ಸರ್ಕಾರದ ನೇರ ನಗದು ಯೋಜನೆ ಅಡಿ ಹಲವು ಸಾಮಾಜಿಕ ಸುರಕ್ಷಾ ಯೋಜನೆಗಳ ಪಿಂಚಣಿ ಹಣವೂ ನೇರವಾಗಿ ಅರ್ಹ ಫಲಾನುಭವಿಯ ಖಾತೆಗೆ ಬೀಳಲಿದೆ. ವಿದ್ಯುತ್, ನೀರು, ಫೋನ್, ಗ್ಯಾಸ್ ಮುಂತಾದವುಗಳ ಹಣಪಾವತಿಯೂ ಸುಲಭವಾಗಲಿದೆ.

ಆಡಳಿತ ಮಂಡಳಿ ನೇಮಕ ಪ್ರಯತ್ನ

ಪೇಮೆಂಟ್ ಬ್ಯಾಂಕ್ಗೆ ನೂತನ ಸಿಇಒ, ಸಿಒಒಗಳ ನಿಯೋಜನೆಗೆ ಭಾರತೀಯ ಅಂಚೆ ಇಲಾಖೆ ಪ್ರಯತ್ನ ನಡೆಸಿದೆ. ಈಗಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಹಾಗೂ ಯೂನಿಯನ್ ಬ್ಯಾಂಕ್ಗಳ ಜೊತೆ ಮಾತುಕತೆ ನಡೆಸಿರುವ ಇಲಾಖೆ, ಐಪಿಪಿಬಿಯ ಆಡಳಿತ ಮಂಡಳಿಗೆ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡುವಂತೆ ಕೋರಿಕೊಂಡಿದೆ.

ಎಲ್ಲೆಲ್ಲಿದೆ ಇಂಥ ಬ್ಯಾಂಕ್?

ಜಗತ್ತಿನ ಶೇಕಡ 75ರಷ್ಟು ದೇಶಗಳಲ್ಲಿ ಪೋಸ್ಟ್ ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಮುಖವಾಗಿ ಜಪಾನ್, ನ್ಯೂಜಿಲೆಂಡ್, ಫ್ರಾನ್ಸ್, ಸ್ವಿಜರ್ಲೆಂಡ್, ಚೀನಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಪೋಸ್ಟ್ ಬ್ಯಾಂಕ್ಗಳು ಜನರಿಗೆ ಯಶಸ್ವಿಯಾಗಿ ಸೇವೆ ಒದಗಿಸುತ್ತಿವೆ.

ಹಣಕಾಸು ವರ್ಷಾಂತ್ಯದಲ್ಲಿ ಆರಂಭ

ಐಪಿಪಿಬಿ 2017ರ ಮಾರ್ಚ್ ವೇಳೆಗೆ 50 ಶಾಖೆಗಳನ್ನು ತೆರೆಯಲಿದೆ. ಈ ಶಾಖೆಗಳಲ್ಲಿ 2,000 ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದು, 2017ರ ಸೆಪ್ಟೆಂಬರ್ ವೇಳೆಗೆ ಶಾಖೆಗಳ ಸಂಖ್ಯೆ 650ಕ್ಕೆ (ಮಾರ್ಚ್ನಲ್ಲಿ 50, ಏಪ್ರಿಲ್ನಲ್ಲಿ 125, ಮೇನಲ್ಲಿ 200, ಜೂನ್ನಲ್ಲಿ 300, ಜುಲೈನಲ್ಲಿ 400, ಆಗಸ್ಟ್ನಲ್ಲಿ 525, ಸೆಪ್ಟೆಂಬರ್ನಲ್ಲಿ 650)ಏರಿಸುವ ಯೋಜನೆಯನ್ನು ಇಲಾಖೆ ಸಿದ್ಧಪಡಿಸಿಕೊಂಡಿದೆ. ಐಪಿಪಿಬಿಯ ಆಡಳಿತ ಮಂಡಳಿಯಲ್ಲಿ ನಾಲ್ವರು ಇಲಾಖೆಯವರಿದ್ದರೆ ಇನ್ನು ಐವರು ಸ್ವತಂತ್ರ ಸದಸ್ಯರನ್ನು ನೇಮಕ ಮಾಡುವ ಬಗ್ಗೆ ಚಿಂತನೆ ಕೂಡ ನಡೆದಿದೆ. ಐಪಿಪಿಬಿಯಲ್ಲಿ ಸ್ವತಂತ್ರ ನಿರ್ದೇಶಕರ ಪಾಲು 51% ಆದರೆ, ಸರ್ಕಾರದ್ದು ಶೇಕಡ 49.

ಭಾರತೀಯ ಅಂಚೆ ಇಲಾಖೆ

  • 1,55,015 – ಅಂಚೆ ಕಚೇರಿಗಳು (ದೇಶಾದ್ಯಂತ ಒಟ್ಟು)
  • 1,39,144- ಅಂಚೆ ಕಚೇರಿಗಳು (ಗ್ರಾಮೀಣ ಭಾಗದಲ್ಲಿ)
  • 4,60,457 – ಉದ್ಯೋಗಿಗಳು (2015ರ ಮಾರ್ಚ್ 31ರ ಪ್ರಕಾರ)
  • 1.7 ಲಕ್ಷ – ಪೋಸ್ಟ್ಮ್ಯಾನ್ವುತ್ತು ಗ್ರಾಮೀಣ ಡಾಕ್ ಸೇವಕರು
  • 5,000 – ಎಟಿಎಂ ಕೇಂದ್ರಗಳು

Leave a Reply

Your email address will not be published. Required fields are marked *