`ಅಸ್ಸಾಂ ಟೀ’ ರುಚಿ ನೋಡೀತೇ ಬಿಜೆಪಿ?

ಸರ್ಬಾನಂದ ಸೋನವಾಲ
ಸರ್ಬಾನಂದ ಸೋನವಾಲ

ಅಸ್ಸಾಂನಲ್ಲೀಗ ವಿಧಾನಸಭಾ ಚುನಾವಣೆಯ ಕಣ ರಂಗೇರತೊಡಗಿದೆ. ಹಾಲಿ ಸಿಎಂ ತರುಣ್ ಗೊಗೋಯ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ಕಳೆದ ಮೂರು ಅವಧಿಯಲ್ಲಿ ಕಾಂಗ್ರೆಸ್ ಆಳ್ವಿಕೆ ಕಂಡಿದ್ದ ಅಸ್ಸಾಂ ಜನ ಇದೀಗ ಹೊಸ ಆಯ್ಕೆ ಬಯಸತೊಡಗಿರುವುದು ಸ್ಪಷ್ಟ. ಭಾರತೀಯ ಜನತಾ ಪಕ್ಷವೂ (ಬಿಜೆಪಿ) ಹೊಸ ತಂತ್ರಗಾರಿಕೆ ಆರಂಭಿಸಿದ್ದು, ಕಳೆದೊಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸುವಲ್ಲಿ ಭಾರಿ ಕೆಲಸ ಮಾಡುತ್ತಿದ್ದು, ಅದರ ಫಲವನ್ನು ಈ ಚುನಾವಣೆಯಲ್ಲಿ ನಿರೀಕ್ಷಿಸಲಾರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಅವರ ಜೊತೆಗೆ ಕೆಲಸ ಮಾಡಿದ್ದ ಸರ್ಬಾನಂದ ಸೋನವಾಲ ಇದೀಗ ಪಕ್ಷ ಸಾರಥ್ಯದ ನೊಗವನ್ನು ಹೆಗಲಿಗೇರಿಸಿಕೊಂಡಿದ್ದಾರೆ. ಈ ಬೆಳವಣಿಗೆ ಅಸ್ಸಾಂ ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ಸರ್ಬಾನಂದ ಅಪರಿಚಿತರೇನಲ್ಲ, ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಕ್ರೀಡಾ ಸಚಿವರಾಗಿ ಚಿರಪರಿಚಿತರು.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಬಿಜೆಪಿ ಈ ಘೋಷಣೆ ಮಾಡಿರುವುದು ಹಲವರ ಅಚ್ಚರಿಗೆ ಕಾರಣವಾದರೂ, ಅದರ ಚುನಾವಣಾ ತಂತ್ರಗಾರಿಕೆ ಬದಲಾಗಿದ್ದಂತೂ ವಾಸ್ತವ. ಈ ವರ್ಷ ಬಿಜೆಪಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಗೆಲುವು ಕಾಂಗ್ರೆಸ್ಸಿಗೆಷ್ಟು ಪ್ರತಿಷ್ಠೆಯ ಪ್ರಶ್ನೆಯೋ, ಬಿಜೆಪಿಗೂ ಅಷ್ಟೇ ಪ್ರತಿಷ್ಠೆಯ ವಿಚಾರವಾಗಿ ಬಿಟ್ಟಿದೆ. ಬಿಜೆಪಿ ಇಲ್ಲಿ ಒಮ್ಮೆಯೂ ಅಧಿಕಾರ ಚುಕ್ಕಾಣಿ ಹಿಡಿದಿಲ್ಲ. ಈ ನಡುವೆ, ಸರ್ಬಾನಂದರ ಜನಪ್ರಿಯತೆ ಕುಗ್ಗಿಸುವುದಕ್ಕಾಗಿ ಮುಖ್ಯಮಂತ್ರಿ ತರುಣ್ ಗೋಗೊಯ್ ಮಾಡಿದ ಪ್ರಯತ್ನ ಫಲಕಾಣಲಿಲ್ಲ.
ಹಾಗೆ ನೋಡಿದರೆ, ಸೋನವಾಲ ಅವರಿಗೆ ಅಸ್ಸಾಂ ಜತೆಗಿನ ನಂಟು ಹೊಸದೇನಲ್ಲ. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್, ಅಸ್ಸಾಂ ಗಣ ಪರಿಷದ್ ಜೊತೆಗಿನ ಒಡನಾಟ ಬಹಳ ಹಳೆಯದು. ಇವೆರಡೂ ಕೂಡ ಅಲ್ಲಿನ ಪ್ರಾದೇಶಿಕ ಭಾವನೆಗಳಿಗೆ ಸ್ಪಂದಿಸುವಂಥವೇ ಆಗಿವೆ. ಸೋನವಾಲ ಆಯ್ಕೆ ಕಾಂಗ್ರೆಸ್ಸಿಗರ ನಿದ್ದೆ ಕೆಡಿಸಿದ್ದಂತೂ ಹೌದು.
ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿರುವುದು ಸದ್ಯ ಬಿಜೆಪಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಸಾಂಪ್ರದಾಯಿಕ ಮತ ಧ್ರುವೀಕರಣಕ್ಕೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಇದೆ. ಸಾಂಪ್ರದಾಯಿಕವಾಗಿ ಆದಿವಾಸಿಗಳು ಬೋಡೊ ಪೀಪಲ್ಸ್ ಫ್ರಂಟ್‍ನ ಮತಬ್ಯಾಂಕ್. ಆದರೆ, ಬಿಜೆಪಿಯೂ ಇದೀಗ ಈ ಮತಬ್ಯಾಂಕ್ ಮೇಲೆ ಕಣ್ಣಿರಿಸಿದ್ದು, ಮೋಟಕ್, ಮೊರಾನ್, ತಾಯ್ ಅಹೋಮ್, ಕೊಚ್ ರಾಜ್‍ಬೊನ್ಶಿ, ಸೂಟಿಯಾ, ಚಹಾ ಬುಡಕಟ್ಟು ಸಮುದಾಯವನ್ನು ಹಾಲಿ ಇರುವ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಭರವಸೆ ನೀಡಿದೆ.
ಬಿಜೆಪಿಯ ಈ ಚುನಾವಣಾ ತಂತ್ರಗಾರಿಕೆ ಗಮನಿಸಿದರೆ, ದೆಹಲಿ ಮತ್ತು ಬಿಹಾರದಲ್ಲಿ ಮತದಾರರ ನಡೆಯನ್ನು ಬಿಜೆಪಿ ನಾಯಕರು ಸೂಕ್ಷ್ಮವಾಗಿ ಗಮನಿಸಿರುವುದು ಸ್ಪಷ್ಟ. ರಾಷ್ಟ್ರ ರಾಜಕಾರಣ ಹಾಗೂ ಪ್ರಾದೇಶಿಕ ರಾಜಕಾರಣಗಳ ನಡುವೆ ಸ್ಪಷ್ಟ ಅಂತರ ಇದೆ, ಸ್ಥಳೀಯವಾಗಿ ಭರವಸೆಯ ಮುಖವೊಂದು ಇರಲೇಬೇಕು ಎಂಬುದನ್ನು ದೆಹಲಿ ಮತ್ತು ಬಿಹಾರದ ಚುನಾವಣೆಗಳಿಂದ ಅರ್ಥೈಸಿಕೊಂಡಂತಿದೆ. ಇನ್ನೊಂದೆಡೆ, ಗುಜರಾತ್‍ನಲ್ಲಿ ನರೇಂದ್ರ ಮೋದಿ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್‍ಗಢದಲ್ಲಿ ರಮಣ್ ಸಿಂಗ್, ರಾಜಸ್ಥಾನದಲ್ಲಿ ವಸುಂಧರಾ ರಾಜೇ, ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಇಂತಹದೊಂದು ಮ್ಯಾಜಿಕ್ ಸೃಷ್ಟಿಸಿತ್ತು. ಇಂತಹ ಭಾವನಾತ್ಮಕ ನಂಟನ್ನು ಸೋನವಾಲ ತುಂಬಬಲ್ಲರು ಎಂಬುದನ್ನು ಬಿಜೆಪಿ ವರಿಷ್ಠರು ಮನಗಂಡಿದ್ದು, ಅದರಂತೆ ಕಾರ್ಯಪ್ರವೃತ್ತರಾಗಿದ್ದಾರೆ.
ಸೋನವಾಲ್ ಮುಂದೆ ಸದ್ಯ ಹಲವು ಸವಾಲುಗಳಿವೆ. ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರು, ಬಾಂಗ್ಲಾದೇಶದ ಜತೆಗಿನ ಭೂಗಡಿ ಒಪ್ಪಂದದ ವಿಷಯದಲ್ಲಿ, ಅಸ್ಸಾಂ ಒಂದಿಂಚು ಭೂಮಿಯನ್ನು ಬಾಂಗ್ಲಾಕ್ಕೆ ಬಿಟ್ಟುಕೊಡಲ್ಲ ಎಂದಿದ್ದ ಭರವಸೆ ನಿರ್ಲಕ್ಷಿಸಲ್ಪಟ್ಟಿದೆ. ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತು ನೀಡುತ್ತಿರುವ ಬಿಜೆಪಿ ಬಾಂಗ್ಲಾದ ಹಿಂದುಗಳಿಗೆ ನಾಗರಿಕತ್ವ ನೀಡಲು ಮುಂದಾಗಿರುವುದು ಕೂಡ ಚುನಾವಣಾ ವಿಷಯವನ್ನಾಗಿಸುವ ಪ್ರಯತ್ನ ನಡೆದಿದೆ. ಆದರೆ, ಇವು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದೆಂಬುದು ಸದ್ಯದ ಪ್ರಶ್ನೆ.
ಇವೆಲ್ಲದಕ್ಕೂ ಮಿಗಿಲಾಗಿ, ಕಳೆದ 15ವರ್ಷಗಳ ಅವಧಿಯಲ್ಲಿ ವಿಪಕ್ಷಗಳು ಛಿದ್ರಗೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಇರುವ ಪರಿಸ್ಥಿತಿಯ ಲಾಭ ಪಡೆಯಬೇಕು, ರಾಜ್ಯ ರಾಜಕಾರಣದಲ್ಲಿ ಎಜಿಪಿಯಿಂದ ಉಂಟಾಗಿರುವ ನಿರ್ವಾತವನ್ನು ತುಂಬಬೇಕು ಎಂಬುದು ಸೋನೊವಾಲರ ಲೆಕ್ಕಾಚಾರ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಸ್ತುತ ತರುಣ್ ಗೊಗೋಯ್ ಆಳ್ವಿಕೆಯ ವಿರುದ್ಧ ಜನಾಕ್ರೋಶ ಮನಗಂಡ ಕಾಂಗ್ರೆಸ್ ಪ್ರಚಾರ ಸಾರಥ್ಯವನ್ನು ಹಿಮಂತ ಬಿಸ್ವ ಶರ್ಮಾಗೆ ವಹಿಸಿದೆ. ಮತ್ತೊಂದು ಅವಧಿಗೆ ಪಕ್ಷವನ್ನು ಅಧಿಕಾರ ಗದ್ದುಗೆಯಲ್ಲಿ ಕೂರಿಸುವ ಪ್ರಯತ್ನವನ್ನು ಶರ್ಮಾ ಆರಂಭಿಸಿದ್ದಾರೆ. ಆದಾಗ್ಯೂ, ರಾಜ್ಯದ ರಾಜಕಾರಣ 15 ವರ್ಷ ಹಿಂದಿದ್ದಂತೆ ಈಗಿಲ್ಲ. ಕಾಂಗ್ರೆಸ್‍ಗೆ ಪ್ರಬಲ ಪೈಪೋಟಿ ನೀಡಿ ಅಧಿಕಾರ ಚುಕ್ಕಾಣಿ ಹಿಡಿದ ಅಸ್ಸಾಂ ಗಣ ಪರಿಷದ್ (ಎಜಿಪಿ) ಬಳಿಕ ನೆಲಕಚ್ಚಿತು. ಹೀಗಾಗಿ ಮೂರು ಅವಧಿಗೆ ಕಾಂಗ್ರೆಸ್‍ಗೆ ಪರ್ಯಾಯವಾದ ಒಂದು ರಾಜಕೀಯ ಪಕ್ಷ ಹುಟ್ಟಿರಲಿಲ್ಲ.
2014ರ ಲೋಕಸಭಾ ಚುನಾವಣೆ ವೇಳೆ ಈ ಪ್ರಯತ್ನದಲ್ಲಿ ಬಿಜೆಪಿ ಕೊಂಚ ಯಶಕಂಡಿದ್ದು, ಶೇಕಡ 36ರಷ್ಟು ಮತಗಳಿಸಿ 14 ಲೋಕಸಭಾ ಸ್ಥಾನಗಳ ಪೈಕಿ ಏಳನ್ನು ತೆಕ್ಕೆಗೆಳೆದುಕೊಂಡಿತ್ತು. ಆಡಳಿತಾರೂಢ ಕಾಂಗ್ರೆಸ್ 29.5 ಮತಗಳಿಕೆಯೊಂದಿಗೆ 3, ವಿಪಕ್ಷ ಸ್ಥಾನದಲ್ಲಿರುವ ಎಐಯುಡಿಎಫ್ ಶೇಕಡ 14.8 ಮತಗಳಿಕೆಯೊಂದಿಗೆ 3 ಸ್ಥಾನಗಳನ್ನು ಗೆದ್ದುಕೊಂಡವು. ಕೋಕ್ರಜಾರ್‍ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದ. ಈ ಅಂಕಿ ಅಂಶಗಳ ಲೆಕ್ಕಾಚಾರ ಗಮನಿಸಿದರೆ, ಬಿಜೆಪಿ ಸಮರ್ಪಕ ರೀತಿಯಲ್ಲಿ ಪ್ರಚಾರ ಕೈಗೊಂಡರೆ 126 ವಿಧಾನಸಭಾ ಸ್ಥಾನಗಳ ಪೈಕಿ 70ನ್ನು ಅನಾಯಾಸವಾಗಿ ಗೆಲ್ಲಬಹುದು ಎಂಬುದು ರಾಜಕೀಯ ಪಂಡಿತರ ಅಭಿಮತ.
ಅಸ್ಸಾಂ ದಿಬ್ರುಗಢದ ದಿನ್‍ಜಾನ್‍ನಲ್ಲಿ 1962ರ ಅಕ್ಟೋಬರ್ 31ರಂದು ಸೋನವಾಲ ಜನಿಸಿದರು. ಗುವಾಹಟಿಯ ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದ ಸೋನವಾಲ, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (1992-99) ಅಧ್ಯಕ್ಷರೂ ಆಗಿದ್ದರು. 1996-2000ದ ಅವಧಿಯಲ್ಲಿ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಸಂಘಟನೆಯ ಅಧ್ಯಕ್ಷರಾಗಿದ್ದರು. ಈ ನಡುವೆ, ಅಸ್ಸಾಂ ಗಣ ಪರಿಷದ್ ಸೇರಿ, ಪ್ರಮುಖ ಹೊಣೆಗಾರಿಕೆಗಳನ್ನು ನಿಭಾಯಿಸಿದರು. 2011ರಲ್ಲಿ ಬಿಜೆಪಿ ಸೇರ್ಪಡೆಗೊಂಡು ಹಲವು ಸಂಘಟನಾತ್ಮಕ ಹುದ್ದೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡವರು. ಐಎಂಡಿಟಿ(Illegal Migrants (Determination by Tribunal) Act, 1983) ಕಾಯ್ದೆ ಹಿಂಪಡೆಯಬೇಕೆಂದು ನಡೆಸಿದ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಪ್ರಸ್ತುತ ಅಸ್ಸಾಂನ ಲಖಿಮ್‍ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸೋನವಾಲ, ಈ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ, `ಅಸ್ಸಾಂ ಟೀ’ಯ ಗೆಲುವಿನ ಸ್ವಾದವನ್ನು ಮೋದಿಯವರಿಗೆ ಕುಡಿಸುತ್ತಾರಾ ಅನ್ನೋದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *