ಬೇಟಿ ಪಢಾವೋಗೆ ಹೊಸ ಐಕಾನ್

ದೇವಿಕಾ ಸಿರೋಹಿ
ದೇವಿಕಾ ಸಿರೋಹಿ

ಅತ್ಯಂತ ವಿರಳ ಝಿಕಾ ವೈರಾಣು ಸೋಂಕು ಜಗತ್ತಿನಾದ್ಯಂತ ಆತಂಕ ಮೂಡಿಸಿರುವುದು ತಿಳಿದ ವಿಚಾರ. ಸೊಳ್ಳೆಗಳ ಮೂಲಕ ಹರಡುವ ಈ ಸೋಂಕಿಗೆ ಇನ್ನೂ ನಿಖರ ಔಷಧ ಲಭ್ಯವಿಲ್ಲ. ಆದರೆ, ಈ ನಿಟ್ಟಿನಲ್ಲಿ ವಿವಿಧ ರಾಷ್ಟ್ರಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಅಮೆರಿಕದ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆ ಕಳೆದ ವಾರ ವಿಶ್ವದ ಗಮನಸೆಳೆದಿತ್ತು. ಏಳು ಜನರ ತಂಡವೊಂದು ನಡೆಸಿದ ಸಂಶೋಧನೆಯಲ್ಲಿ ಈ ಝಿಕಾ ವೈರಾಣುವಿನ ಸಂರಚನೆ ಬಹಿರಂಗವಾಗಿದ್ದು, ವೈದ್ಯಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದು ಔಷಧ ಪತ್ತೆಗೆ ಬುನಾದಿ ಎಂಬ ವಿಶ್ಲೇಷಣೆಯೂ ಕೇಳಿಬಂದಿದೆ. ಇವೆಲ್ಲದರ ನಡುವೆ ಸುದ್ದಿಯ ಕೇಂದ್ರ ಬಿಂದುವಾಗಿದ್ದು ತಂಡದಲ್ಲಿದ್ದ ಕಿರಿಯ ಸದಸ್ಯೆ ಭಾರತೀಯಳಾದ ದೇವಿಕಾ ಸಿರೋಹಿ.
ದೇವಿಕಾ ಅವರ ಸಾಧನೆ ಬಗ್ಗೆ ವಿವರಿಸುವ ಮುನ್ನ ಝಿಕಾ ವೈರಾಣು(1947ರಲ್ಲಿ ಉಗಾಂಡದ ಝಿಕಾ ಅರಣ್ಯದಲ್ಲಿ ಪತ್ತೆಯಾಗಿದ್ದ ವೈರಸ್) ಸೋಂಕಿನ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಒಳಿತು. ಅತ್ಯಂತ ವಿರಳವಾದ ವೈರಾಣು ಇದಾಗಿದ್ದು, ಲ್ಯಾಟಿನ್ ಅಮೆರಿಕದಲ್ಲಿ ಇದು ಜನವರಿ ಮಧ್ಯಭಾಗದಲ್ಲಿ ಪತ್ತೆಯಾಗಿದ್ದು ತ್ವರಿತಗತಿಯಲ್ಲಿ ಹರಡುತ್ತಿರುವುದು ಆತಂಕ ಸೃಷ್ಟಿಗೆ ಕಾರಣವಾಗಿತ್ತು. ಅಮೆರಿಕ, ಆಫ್ರಿಕಾ, ಬ್ರೆಜಿಲ್‍ನ ಕೆಲವೆಡೆ ಈ ವೈರಾಣು ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದರ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು ಕೂಡ. ಇದರಿಂದ ನೇರ ಪ್ರಾಣಾಪಾಯ ಇಲ್ಲದೇ ಹೋದರೂ, ಇದು ಉಂಟುಮಾಡುವ ಪರಿಣಾಮ ಅಪಾಯಕಾರಿಯಾದುದು. ಈಡಿಸ್ ಈಜಿಪ್ಟಿ ಸೊಳ್ಳೆ ಇದನ್ನು ಹರಡುತ್ತಿದ್ದು, ಈಗಾಗಲೇ ಸಾವಿರಾರು ಮಕ್ಕಳು ಈ ಸೋಂಕಿಗೆ ಒಳಗಾಗಿದ್ದು, ಅಲ್ಪಶೀರ್ಷ (ಶರೀರದ ಇತರೆ ಭಾಗಗಳಿಗೆ ಹೋಲಿಸಿದರೆ ತಲೆ ತುಂಬ ಚಿಕ್ಕದಾಗಿರುವುದು) ಕಾಯಿಲೆಗೊಳಗಾಗಿದ್ದಾರೆ. ಇದುವರೆಗೆ 14 ಲಕ್ಷ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಲ್ಯಾಟಿನ್ ಅಮೆರಿಕದ ಎಲ್ ಸಾಲ್ವಡಾರ್‍ನ ಸಹಾಯಕ ಆರೋಗ್ಯ ಸಚಿವ ಎಡ್ವಾರ್ಡೊ ಎಸ್ಪಿನೋಜಾ, 2018ರ ತನಕ ಗರ್ಭ ಧರಿಸಬೇಡಿ ಎಂದು ಮಹಿಳೆಯರಿಗೆ ಸೂಚನೆ ನೀಡಿದ್ದಾರೆ. ಅಮೆರಿಕದಲ್ಲಿ ಮೊದಲ ಪ್ರಕರಣ ಟೆಕ್ಸಾಸ್‍ನಲ್ಲಿ ಜನವರಿ ಮಧ್ಯಭಾಗದಲ್ಲಿ ಪತ್ತೆಯಾಗಿತ್ತು. ಆ ವ್ಯಕ್ತಿ ಲ್ಯಾಟಿನ್ ಅಮೆರಿಕದಿಂದ ಟೆಕ್ಸಾಸ್‍ಗೆ ಪ್ರಯಾಣಿಸಿದ್ದರು.
ವೈರಾಣುವಿನ ಬಗ್ಗೆ ಹೇಳುವುದಾದರೆ, ಇದು ತತ್‍ಕ್ಷಣವೇ ಪ್ರಾಣಾಪಾಯ ಉಂಟುಮಾಡುವಂತಹದಲ್ಲ. ಆದರೆ, ಈ ವೈರಾಣು ಸೋಂಕು ತಗುಲಿದರೆ ವಾರದೊಳಗೆ ಅದರ ಪರಿಣಾಮಗಳು ಕಾಣಿಸುತ್ತವೆ. ಅಷ್ಟೇ ಅಲ್ಲ, ಗರ್ಭಿಣಿಯರಿಗೆ ಈ ಸೋಂಕು ತಗುಲಿದರೆ ಹುಟ್ಟುವ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಸೊಳ್ಳೆಗಳ ಮೂಲಕ ಈ ವೈರಾಣು ಸೋಂಕು ಹರಡುವುದಾಗಿದ್ದು, ಈ ಸೊಳ್ಳೆಗಳು ಸರಕು ಸಾಗಣೆ ವಾಹನಗಳ ಮೂಲಕವೋ, ವ್ಯಕ್ತಿಗಳ ಬ್ಯಾಗಿನ ಮೂಲಕವೋ ಹೊಸ ಪ್ರದೇಶಗಳಿಗೂ ತಲುಪಿ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ. ಸೊಳ್ಳೆಗಳ ಮೂಲಕ ಹರಡುವ ಚಿಕೂನ್ ಗುನ್ಯಾ, ಡೆಂಘೆಗಳಿಗೆ ಸಂಬಂಧಿಸಿದ ರೋಗ ಎಂಬುದನ್ನು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‍ನ ತಜ್ಞರು ಹೇಳುತ್ತಾರೆ.
ಇಂತಹ ಅಪಾಯಕಾರಿ ವೈರಾಣುವಿನ ಸಂರಚನೆ ಹೇಗಿದೆ ಎಂಬುದು ಮಾರ್ಚ್ ಕೊನೆಯವಾರದ ತನಕವೂ ಬಹಿರಂಗವಾಗಿರಲಿಲ್ಲ. `sciencemag.org’ನ ಮಾರ್ಚ್ 31ರ ಸಂಚಿಕೆಯಲ್ಲಿ ಪಡ್ರ್ಯೂ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಒಳಗೊಂಡ ಏಳು ಸದಸ್ಯರ ತಂಡ ಪ್ರಕಟಿಸಿದ ವೈದ್ಯಪ್ರಬಂಧದಲ್ಲಿ ಈ ವೈರಾಣುವಿನ ಸಂರಚನೆಯನ್ನು ವಿವರಿಸಲಾಗಿದೆ. ಈ ತಂಡದಲ್ಲಿದ್ದ ಕಿರಿಯ ಸದಸ್ಯೆ ದೇವಿಕಾ ಸಿರೋಹಿ.
ನಾಲ್ಕು ತಿಂಗಳ ಈ ಯೋಜನೆಯಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡಿದ್ದ ಸಿರೋಹಿ ಭಾರತದ ಹೆಣ್ಮಗಳಾದ್ದರಿಂದ ಅವರ ಸಾಧನೆಯನ್ನು ಗುರುತಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ ಮೂಲಕ ಗಮನ ಸೆಳೆದ ಸಿರೋಹಿ, ಭಾರತೀಯ ಮಾಧ್ಯಮಗಳ ಜತೆ ಮಾತನಾಡಿಕೊಂಡು ಅಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ ಕೂಡ.
`ನಾನು ಮೊದಲ ಬಾರಿ ಅಮೆರಿಕಕ್ಕೆ ಬಂದಿಳಿದಾಗ ಇಂತಹ ಸಾಧನೆ ನನ್ನಿಂದಾಗುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಐದು ವರ್ಷಗಳ ಹಿಂದೆ ನಾನು ಸಂಶೋಧನಾ ವಿದ್ಯಾರ್ಥಿ ಜೀವನ ಆರಂಭಿಸಿದ್ದು, ಈ ವರ್ಷಾಂತ್ಯಕ್ಕೆ ಸಂಶೋಧನಾ ಪ್ರಬಂಧವನ್ನು ಮಂಡಿಸಲಿz್ದÉೀನೆ. ಝಿಕಾ ವೈರಾಣು ಸಂರಚನೆಗಾಗಿ ನಡೆಸಿದ ಸಂಶೋಧನೆಯು ಹಲವು ರೀತಿಯ ಸವಾಲುಗಳನ್ನು ಒಳಗೊಂಡಿತ್ತು. ಅದನ್ನು ಸಮರ್ಥವಾಗಿ ಎದುರಿಸಿದೆವು. ಆ ವೈರಾಣುವಿನ ಸಂರಚನೆ ತಿಳಿದುಕೊಳ್ಳುವುದಕ್ಕೆ ನಮಗೆ ನಾಲ್ಕು ತಿಂಗಳುಗಳೇ ಬೇಕಾಯಿತು. ಏಳು ಸದಸ್ಯರ ನಮ್ಮ ತಂಡದಲ್ಲಿ, ಮೂವರು ಪ್ರೊಫೆಸರ್‍ಗಳು ಹಾಗೂ ನಾನೂ ಸೇರಿ ನಾಲ್ವರು ವಿದ್ಯಾರ್ಥಿಗಳು. ಸಂಶೋಧನೆಯ ಅವಧಿಯಲ್ಲಿ ನಾವು ದಿನಕ್ಕೆ ಎರಡು ಅಥವಾ ಮೂರು ಗಂಟೆ ನಿದ್ದೆ ಮಾಡಿರಬಹುದಷ್ಟೆ. ನಮ್ಮ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲಸಿಕ್ಕಿತು. ಈ ಸಂಶೋಧನಾ ಫಲವು ವೈದ್ಯರಿಗೆ ಹಾಗೂ ಸಂಶೋಧಕರಿಗೆ ಆ ಅಪಾಯಕಾರಿ ಸೋಂಕನ್ನು ನಿವಾರಿಸುವುದಕ್ಕೆ ಸಹಕಾರಿಯಾಗಲಿದೆ’.
ಸದ್ಯ ಸಿರೋಹಿ ಅವರು `Structure and Maturation of Flaviviruses’ ಎಂಬ ವಿಷಯದ ಬಗ್ಗೆ ಸಂಶೋಧನಾ ಪ್ರಬಂಧ ಸಿದ್ಧಪಡಿಸುತ್ತಿದ್ದಾರೆ. ಅಮೆರಿಕದಲ್ಲಿ ಷಿಕಾಗೋ ಸಮೀಪದ ವೆಸ್ಟ್ ಲಫಾಯೆಟೆನಲ್ಲಿ ವಾಸವಿರುವ ಅವರು ಮೂಲತಃ ಉತ್ತರಪ್ರದೇಶದ ಮೀರತ್‍ನವರು. ತಂದೆ ಸತೇಂದ್ರ ಸಿರೋಹಿ ವೃತ್ತಿಯಲ್ಲಿ ಪೆಥಾಲಜಿಸ್ಟ್. ತಾಯಿ ರೀನಾ ಮಕ್ಕಳ ತಜ್ಞೆ. ದೆಹಲಿಯಲ್ಲಿ ವಾಸವಿದ್ದಾರೆ. ಮೀರತ್‍ನ ಸೋಫಿಯಾ ಸ್ಕೂಲ್‍ನಲ್ಲಿ ಆರಂಭಿಕ ಶಿಕ್ಷಣ ಪಡೆದ ದೇವಿಕಾ ದಯಾವತಿ ಮೋದಿ ಅಕಾಡೆಮಿ ಶಾಲೆಯಲ್ಲಿ ಪ್ಲಸ್‍ಟು ವ್ಯಾಸಂಗ ಪೂರ್ತಿಗೊಳಿಸಿದರು. ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿ ವಿಷಯದಲ್ಲಿ ಪದವಿ ಪಡೆದು, ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಮಗಳ ಈ ಸಾಧನೆಯಿಂದಾಗಿ ಹೆಮ್ಮೆಪಡುತ್ತಿರುವ ಸತೇಂದ್ರ ಸಿರೋಹಿ, `ದೇವಿಕಾ ಆರಂಭದಿಂದಲೂ ಡೆಂಘೆ ವೈರಾಣುವಿನ ಬಗ್ಗೆ ಅಧ್ಯಯನ ನಡೆಸುತ್ತಿದ್ದಳು. ಜಗತ್ತಿನ ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಝಿಕಾ ವೈರಾಣುವಿನ ಸಂರಚನೆ ಪತ್ತೆಹಚ್ಚುವಲ್ಲಿ ಆಕೆಯ ಪಾತ್ರ ಮಹತ್ವದ್ದು. ಇದು ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾದ ಹೆಮ್ಮೆಯ ವಿಷಯವಲ್ಲ. ಇಡೀ ದೇಶದ ಹೆಮ್ಮೆ’ ಎಂದಿದ್ದಾರೆ.
ಸತ್ಯೇಂದ್ರ ಅವರ ಈ ಮಾತು ಅಕ್ಷರಶಃ ನಿಜ ಕೂಡ. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ಅಸಡ್ಡೆ ಕಡಿಮೆಗೊಳಿಸುವುದಕ್ಕೆ, ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆ ತಡೆಯುವುದಕ್ಕೆ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಯಾಕೆ ಆದ್ಯತೆ ಕೊಡಬೇಕು ಎಂಬುದನ್ನು ಬಿಂಬಿಸುವುದಕ್ಕೆ, ಅವರ ಶೋಷಣೆಯನ್ನು ತಗ್ಗಿಸುವುದಕ್ಕೆ ಹೆಣ್ಮಕ್ಕಳ ಇಂತಹ ಸಾಧನೆಗಳು ಪ್ರೇರಣೆಯಾದಾವು. ದೇವಿಕಾ ನಿಜಕ್ಕೂ `ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಗೆ ಹೊಸ ಐಕಾನ್ ಅಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *