ಭಾರತೀಯ ಸೇನೆಗೆ ರಜಪೂತ ಸಾರಥ್ಯ

rawatದೇಶದ 27ನೇ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ವರ್ಷಾಂತ್ಯದ ದಿನ ಅಧಿಕಾರ ಸ್ವೀಕರಿಸಿದರು. ಹದಿಮೂರು ಲಕ್ಷ ಸೇನಾ ಸಿಬ್ಬಂದಿ ಹೊಂದಿದ ಬಲಿಷ್ಠ ಸೇನೆಯ ಆಡಳಿತ ಹೊಣೆಗಾರಿಕೆಯನ್ನು ಶನಿವಾರ(ಡಿ.31) ನಿವೃತ್ತರಾದ ಜ.ದಲ್ಬೀರ್ ಸಿಂಗ್ ಸುಹಾಗ್ ಅವರು ಜ.ರಾವತ್‍ಗೆ ಹಸ್ತಾಂತರಿಸಿದರು. ಜ.ಸಿಂಗ್ ಅವರ ನಿವೃತ್ತಿಗೆ ಎರಡು ವಾರ ಬಾಕಿ ಇರುವಾಗ ಕೇಂದ್ರ ಸರ್ಕಾರವು ಈ ಅಚ್ಚರಿಯ ಘೋಷಣೆ ಮಾಡಿತ್ತು. ಈ ನಿರ್ಣಯದ ಹಿಂದೆ ಹಲವು ಬೆಳವಣಿಗೆಗಳಾಗಿರುವುದರ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ.

ಅಂದು ಡಿಸೆಂಬರ್ 16. ಸಂಸತ್ತಿನ ಚಳಿಗಾಲದ ಅಧಿವೇಶನ ಮಧ್ಯಾಹ್ನ 2 ಗಂಟೆಗೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಅದಾಗಿ ಎರಡು ಗಂಟೆ ಆಗಿರಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರನ್ನು ಕಚೇರಿಗೆ ಕರೆಯಿಸಿಕೊಂಡರು. ತುರ್ತು ಬರುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್‍ಗೂ ಕರೆ ಹೋಗಿತ್ತು. ಇವರ ನಡುವೆ ಕೆಲ ನಿಮಿಷ ನಡೆದ ಗಂಭೀರ ಮಾತುಕತೆಯ ಬಳಿಕ, ಲೆ.ಜ. ಬಿಪಿನ್ ರಾವತ್ ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕವಾಗಿರುವ ವಿಷಯ ಬಹಿರಂಗವಾಯಿತು.
ವಾಸ್ತವದಲ್ಲಿ ಮೂರು ತಿಂಗಳ ಹಿಂದೆಯೇ ಹೊಸ ಸೇನಾ ಮುಖ್ಯಸ್ಥರ ಆಯ್ಕೆಗೆ ಕಸರತ್ತು ಆರಂಭವಾಗಿತ್ತು. ಆಗ ರಾವತ್ ಅವರನ್ನು ಪುಣೆಯ ಸದರ್ನ್ ಕಮಾಂಡ್‍ನಿಂದ ದೆಹಲಿಗೆ ಕರೆಯಿಸಿಕೊಳ್ಳಲಾಗಿತ್ತು. ರಾವತ್ ಅವರ ಸ್ವವಿವರದ ಕಡತ ಪ್ರಧಾನಮಂತ್ರಿ ಕಚೇರಿಗೆ ತಲುಪಿತ್ತು. ನೇಮಕ ಸಮಿತಿಯ ಅನುಮೋದನಗೆ ಒಟ್ಟು ಮೂರು ಹೆಸರು ತಲುಪಿದ್ದವು. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿದ್ದ ಪ್ರತ್ಯಕ್ಷ ಅನುಭವ, ಜತೆಗೆ ದೊವಲ್ ಶಿಫಾರಸು ರಾವತ್ ಅವರ ಸ್ವವಿವರದ ತೂಕವನ್ನು ಹೆಚ್ಚಿಸಿದವು. ರಕ್ಷಣಾ ಇಲಾಖೆಯ ಮಾಹಿತಿ ಪ್ರಕಾರ, ಈ ನೇಮಕ ಘೋಷಣೆಗೆ ಎರಡು ದಿನ ಮೊದಲೇ ರಾವತ್ ಅವರಿಗೆ ಹೊಸ ಹೊಣೆಗಾರಿಕೆಯ ಬಗ್ಗೆ ಸ್ವತಃ ರಕ್ಷಣಾ ಸಚಿವರೇ ವಿವರಿಸಿದ್ದರು. ಪರಿಣಾಮ, ಮೂರು ದಶಕಗಳಿಂದ ಪಾಲನೆಯಾಗುತ್ತಿದ್ದ ಸೇವಾಹಿರಿತನ ಹೊಂದಿದವರಿಗೆ ಸೇನಾಮುಖ್ಯಸ್ಥರ ಹೊಣೆಗಾರಿಕೆ ಎಂಬ ವಾಡಿಕೆ ಕೊನೆಗೊಂಡಿತು. ಇಬ್ಬರು ಹಿರಿಯ ಲೆಫ್ಟಿನೆಂಟ್ ಜನರಲ್‍ಗಳಾದ ಪ್ರವೀಣ್ ಬಕ್ಷಿ ಹಾಗೂ ಪಿ.ಎಂ.ಹ್ಯಾರಿಸ್ ಅವರನ್ನು ಹಿಂದಿಕ್ಕಿ, ಸದ್ಯದ ಸೂಕ್ಷ್ಮ ಪರಿಸ್ಥಿತಿ ನಿಭಾಯಿಸಬಲ್ಲರು ಎಂಬ ಕಾರಣಕ್ಕೆ ರಾವತ್ ಹೆಗಲಿಗೆ ಹೊಣೆಗಾರಿಕೆ ಏರಿತು.
ಇಂಥದ್ದೇ ಸನ್ನಿವೇಶ 1983ರಲ್ಲೂ ಸೃಷ್ಟಿಯಾಗಿತ್ತು. ಅಂದು ಸೇನಾ ಮುಖ್ಯಸ್ಥರನ್ನಾಗಿ ಜನರಲ್ ಅರುಣ್ ಶ್ರೀಧರ್ ವೈದ್ಯ ಅವರನ್ನು ನೇಮಕ ಮಾಡುವ ಸಂದರ್ಭದಲ್ಲಿ ಸೇವಾಹಿರಿತನ ಹೊಂದಿದ್ದ ಲೆ.ಜ. ಎಸ್.ಕೆ.ಸಿನ್ಹಾ ಅವರನ್ನು ಕಡೆಗಣಿಸಲಾಗಿತ್ತು.
ಪ್ರಸ್ತುತ ರಾವತ್ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆ ರಾಜಕೀಯ ಆಕ್ಷೇಪಕ್ಕೆ ಕಾರಣವಾಯಿತು. ಸೇವಾಹಿರಿತನ ಹೊಂದಿದ ಲೆಫ್ಟಿನೆಂಟ್ ಜನರಲ್‍ಗಳಾದ ಪ್ರವೀಣ್ ಬಕ್ಷಿ ಹಾಗೂ ಪಿ.ಎಂ.ಹ್ಯಾರಿಸ್ ಅವರ ಅಸಮಾಧಾನಕ್ಕೂ ಕಾರಣವಾಯಿತು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸೇವಾಹಿರಿತನಕ್ಕಿಂತ ದೇಶಕ್ಕೆ ಬೇಕಾಗಿದುದು ಅನುಭವ ಮತ್ತು ಸಾಮಥ್ರ್ಯ. ಅದನ್ನು ಮನಗಂಡೇ ಜನರಲ್ ರಾವತ್ ಅವರಿಂದ ಹೆಚ್ಚಿನ ಫಲಿತಾಂಶ ಬಯಸಿ ಸರ್ಕಾರ ಈ ಹೊಣೆಗಾರಿಕೆಯನ್ನು ಅವರ ಹೆಗಲೇರಿಸಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ರಾವತ್ ವೃತ್ತಿಜೀವನವನ್ನೊಮ್ಮೆ ಅವಲೋಕಿಸಿದರೆ ಅವರ ಸಾಮಥ್ರ್ಯ ಮನವರಿಕೆಯಾಗುತ್ತದೆ. 1978ರ ಡಿಸೆಂಬರ್ 16ರಂದು ಸೇನೆಯ 11ನೇ ಗೂರ್ಖಾ ರೈಫಲ್ಸ್‍ನ 5ನೇ ಬೆಟಾಲಿಯನ್‍ಗೆ ಸೇರ್ಪಡೆಗೊಂಡರು. ಅದೇ ಬೆಟಾಲಿಯನ್‍ನಲ್ಲಿ ಅವರ ತಂದೆಯೂ ಸೇವೆ ಸಲ್ಲಿಸುತ್ತಿದ್ದರು. ಮುಂದೆ ಹತ್ತು ವರ್ಷಗಳ ಕಾಲ ಉಗ್ರರ ಒಳನುಸುಳುವಿಕೆ ತಡೆಯುವ ಅನೇಕ ಕಾರ್ಯಾಚರಣೆಗಳಲ್ಲಿ ಭಾಗಿಯಾದರು. ಉರಿ ಪ್ರದೇಶದಲ್ಲೂ ಒಂದು ಸೇನಾ ಕಂಪನಿಯನ್ನು ಮುನ್ನಡೆಸಿದ್ದರು. ಅದಾಗಿ, ಈಸ್ಟರ್ನ್ ಸೆಕ್ಟರ್‍ನ ವಾಸ್ತವ ಗಡಿರೇಖೆ ಪಹರೆಯ ಇನ್‍ಫಂಟ್ರಿ ಬೆಟಾಲಿಯನನ್ನು, ಕಾಶ್ಮೀರ ಕಣಿವೆ ಪ್ರದೇಶದಲ್ಲಿ 5ನೇ ಸೆಕ್ಟರ್‍ನ ರಾಷ್ಟ್ರೀಯ ರೈಫಲ್ಸ್ ಹಾಗೂ 19ನೇ ಇನ್‍ಫಂಟ್ರಿ ವಿಭಾಗವನ್ನು ಮುನ್ನಡೆಸಿದ್ದರು. ದಿಮಾಪುರ್, ಪುಣೆಯ ಸದರ್ನ್ ಕಮಾಂಡ್‍ನಲ್ಲೂ ವಿವಿಧ ಹೊಣೆಗಾರಿಕೆ ನಿಭಾಯಿಸಿದರು. ಡೆಹ್ರಾಡೂನ್‍ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ಬೋಧನಾ ವೃತ್ತಿಯನ್ನೂ ಮಾಡಿದ್ದರು. ಸೇನಾ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2 ಜವಾಬ್ದಾರಿ, ಮಧ್ಯಭಾರತದಲ್ಲಿ ರ್ಯಾಪಿಡ್‍ನ ಲಾಜಿಸ್ಟಿಕ್ಸ್ ಸಿಬ್ಬಂದಿ ಅಧಿಕಾರಿ, ಸೇನಾಕಾರ್ಯದರ್ಶಿಗಳ ಶಾಖೆಯಲ್ಲಿ ಕರ್ನಲ್ ಸೇನಾ ಕಾರ್ಯದರ್ಶಿ, ಡೆಪ್ಯುಟಿ ಮಿಲಿಟರಿ ಸೆಕ್ರಟರಿ, ಜ್ಯೂನಿಯರ್ ಕಮಾಂಡ್ ವಿಂಗ್‍ನ ಹಿರಿಯ ಬೋಧಕ ಹೀಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು.
ಕಾಂಗೊದಲ್ಲಿ ಶಾಂತಿಸ್ಥಾಪನೆಯ ಬಹುರಾಷ್ಟ್ರೀಯ ಬ್ರಿಗೇಡ್‍ನ ಏಳನೇ ವಿಭಾಗವನ್ನು ಮುನ್ನಡೆಸಿದ್ದರು. ಅಲ್ಲಿ, ಎರಡು ಬಾರಿ ಅವರಿಗೆ ಫೋರ್ಸ್ ಕಮಾಂಡರ್‍ನ ಸ್ಥಾನ ಸಿಕ್ಕಿತ್ತು. ಇದಾಗಿ, 2015ರಲ್ಲಿ ಮ್ಯಾನ್ಮಾರಿನಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ದಿಮಾಪುರ ಸೇನಾನೆಲೆಯಿಂದ ಯಶಸ್ವಿಯಾಗಿ ನಿರ್ವಹಿಸಿದ್ದರು. ಕಳೆದ ವರ್ಷ ಜನವರಿ ಒಂದರಂದು ಸದರ್ನ್ ಕಮಾಂಡ್‍ನ ಜನರಲ್ ಆಫೀಸ್ ಕಮಾಂಡಿಂಗ್ ಇನ್ ಚೀಫ್ ಹೊಣೆಗಾರಿಕೆ ಹೊತ್ತುಕೊಂಡರು. ತರುವಾಯ ಸೆಪ್ಟೆಂಬರ್ 1ರಿಂದ ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರ ಹೊಣೆಗಾರಿಕೆ ಅವರನ್ನರಸಿ ಬಂತು. ಹೀಗೆ, ಮೂವತ್ತೇಳು ವರ್ಷಗಳ ವೃತ್ತಿಜೀವನದಲ್ಲಿ ಅವರಿಗೆ ಹಲವು ಸೇನಾ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ರಾವತ್ ಸೈನಿಕ ಹಿನ್ನೆಲೆಯಿಂದಲೇ ಬಂದವರು. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ರಜಪೂತ ಕುಟುಂಬದವರು. ತಂದೆ ಲೆ.ಜ. ಲಚು ಸಿಂಗ್ ರಾವತ್. ಡೆಹ್ರಾಡೂನ್‍ನ ಕ್ಯಾಂಬ್ರಿಯನ್ ಹಾಲ್ ಬೋರ್ಡಿಂಗ್ ಸ್ಕೂಲ್, ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್, ಡೆಹ್ರಾಡೂನ್‍ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಆರಂಭದ ಶಿಕ್ಷಣ. ಇಂಡಿಯನ್ ಮಿಲಿಟರಿ ಅಕಾಡೆಮಿ ಸ್ಕೂಲ್‍ನಲ್ಲಿದ್ದಾಗಲೇ ರಾವತ್ ಅವರು `ಸ್ವೋರ್ಡ್ ಆಫ್ ಆನರ್’ ಪುರಸ್ಕೃತರು. ತರುವಾಯ, ವೆಲ್ಲಿಂಗ್ಟನ್‍ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ನಂತರ, ಅಮೆರಿಕದ ಪೋರ್ಟ್ ಲೀವನ್‍ವರ್ತ್‍ನಲ್ಲಿ ಹೈಯರ್ ಕಮಾಂಡ್ ಕೋರ್ಸ್ ಮಾಡಿದರು. 2011ರಲ್ಲಿ ಮಿಲಿಟರಿ-ಮೀಡಿಯಾ ಸ್ಟ್ರಾಟಜಿಕ್ ಸ್ಟಡೀಸ್ ಎಂಬ ವಿಷಯದ ಬಗ್ಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮೀರತ್‍ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಹಾಗೆಯೇ ರಾವತ್ ಅವರು ರಾಷ್ಟ್ರೀಯ ಭದ್ರತೆ ಹಾಗೂ ನಾಯಕತ್ವದ ವಿಷಯವಾಗಿ ಅನೇಕ ಲೇಖನಗಳನ್ನು ಬರೆದಿದ್ದು ಅವುಗಳು ದೇಶ ವಿದೇಶಗಳ ಹಲವು ಪ್ರತಿಷ್ಠಿತ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ವೃತ್ತಿಜೀವನದಲ್ಲಿ `ಮ್ಯಾನ್ ಆಫ್ ಆ್ಯಕ್ಷನ್’ ಎಂದೇ ಪ್ರಸಿದ್ಧರಾಗಿರುವ ಜನರಲ್ ರಾವತ್ ಅವರ ಎದುರು ಸದ್ಯ ಗಂಭೀರ ಸವಾಲುಗಳಿವೆ. ಕಳೆದ ತಿಂಗಳು ಪಾಕಿಸ್ತಾನದಲ್ಲೂ ಸೇನಾ ಹೊಣೆಗಾರಿಕೆಯಲ್ಲಿ ಬದಲಾವಣೆಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಗಳೂ ಹೆಚ್ಚಾಗಿವೆ. ಇದಲ್ಲದೇ ಚೀನಾದ ಬೆದರಿಕೆ ಇದ್ದೇ ಇದೆ. ಭಯೋತ್ಪಾದನೆ ವಿಷಯದಲ್ಲಿ ಕಟ್ಟೆಚ್ಚರ ವಹಿಸಬೇಕಾದ ಸವಾಲೂ ಅವರ ಮೇಲಿದೆ. ಪ್ರಧಾನಿ ಮೋದಿ ತಮ್ಮ ಮೇಲೆ ನಂಬಿಕೆಯಿರಿಸಿ ಕೊಡಮಾಡಿದ ಈ ಹೊಣೆಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *