ಚತುರಮತಿ ಶ್ರಮಜೀವಿ

TimCook with Apple-LogosteveJobs.jpgಸ್ಮಾರ್ಟ್ಫೋನ್ ಯುಗದಲ್ಲಿ ನಮ್ಮ ದೇಶದ ಬಹುತೇಕ ಮಧ್ಯಮ ವರ್ಗದ ಬಳಕೆದಾರರು ಕಾಣುವ ಕನಸೊಂದಿದೆ – ‘ಜೀವನದಲ್ಲಿ ಒಮ್ಮೆ ಆಪಲ್ ಫೋನ್ ಖರೀದಿಸಿ ಉಪಯೋಗಿಸಬೇಕು. ಆ ಎಕ್ಸ್ಪೀರಿಯನ್ಸ್ ಹೇಗಿದೆ ಎಂದರಿಯಬೇಕು’. ಹೌದು ಆಪಲ್ ಫೋನ್ ಬಗ್ಗೆ ಆ ಮಟ್ಟಿನ ಕ್ರೇಜ್ ಇದೆ. ಅದು ಜನಸಾಮಾನ್ಯರ ಕೈಗೆಟುಕದ ಉಪಕರಣ. ಶ್ರೀಮಂತರ ಮಧ್ಯೆ ಅದಕ್ಕೊಂದು ಬ್ರಾಂಡ್ ವ್ಯಾಲ್ಯೂ ಇದೆ. ಬಳಕೆದಾರರ ಖಾಸಗಿತನ ಕಾಪಾಡುವ ವಿಷಯದಲ್ಲಿ ಆಪಲ್ನದ್ದು ಒಂದು ಕೈ ಮೇಲೆ. ಈ ರೀತಿ ಉಪಕರಣಗಳ ಗುಣಮಟ್ಟ, ವಿಶ್ವಾಸಾರ್ಹತೆಯ ಮೇಲೆಯೇ ಜಗತ್ಪ್ರಸಿದ್ದವಾಗಿರುವ ಆಪಲ್ ಕಂಪನಿ ಎಂದ ಕೂಡಲೇ ನೆನಪಾಗುವುದು ಸ್ಟೀವ್ ಜಾಬ್ಸ್ ಎಂಬ ಮಹಾನ್ ಸಾಧಕನ ಹೆಸರು. ಅವರ ನಿಧನಾನಂತರ ಆಪಲ್ ಕಂಪನಿಯಲ್ಲಿ ಆ ಸ್ಥಾನವನ್ನು ತುಂಬಿದವರು ಟಿಮ್ ಕುಕ್. ಸದ್ಯ ಅವರು ನಾಲ್ಕು ದಿನಗಳ ಪ್ರವಾಸಕ್ಕಾಗಿ ಭಾರತದಲ್ಲಿದ್ದಾರೆ. ಕುಕ್ 2011ರಲ್ಲೇ ಆಪಲ್ ಕಂಪನಿಯ ಸಿಇಒ ಹುದ್ದೆಗೇರಿದರೂ, ಭಾರತಕ್ಕೆ ಇದು ಚೊಚ್ಚಲ ಅಧಿಕೃತ ಪ್ರವಾಸ. ವ್ಯಾಪಾರ ವೃದ್ಧಿ ಇದರ ಉದ್ದೇಶ.

ಆಪಲ್ ಕಂಪನಿಯ ಸಿಇಒ ಎನ್ನುವ ಕಾರಣಕ್ಕೇ ಅವರಿಂದು ವಾಣಿಜ್ಯೋದ್ಯಮ ಜಗತ್ತಿನಲ್ಲಿ ಐಕಾನ್. ವಾಣಿಜ್ಯೋದ್ಯಮ ಮತ್ತು ವಾಣಿಜ್ಯ ವ್ಯವಹಾರ ನಿರ್ವಹಣೆ ವಿಷಯ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಅವರ ವೃತ್ತಿಜೀವನ ಒಂದು ಪಾಠವೂ ಹೌದು. ಕಾರಣ ಇಷ್ಟೆ, ಅವರೊಬ್ಬ ಶ್ರಮಜೀವಿ. ಶಿಸ್ತುಬದ್ಧ ಬದುಕು ರೂಪಿಸಿಕೊಂಡಿರುವ ಕುಕ್ಗೆ ಉದ್ಯಮದ ಚಾಕಚಾಕ್ಯತೆಗಳು ಒಲಿದಿದ್ದವು ಅನ್ನುವುದಕ್ಕಿಂತಲೂ ಅವರು ಅದನ್ನು ಒಲಿಸಿಕೊಂಡಿದ್ದರು ಎನ್ನಬಹುದು. ಇಂತಹ ಕುಕ್ ಆಪಲ್ ಕಂಪನಿಗೆ ಸೇರಿದ್ದು 1998ರಲ್ಲಿ. ಅದಕ್ಕೆ ಹಿಂದಿನ ವರ್ಷವಷ್ಟೇ ಕಂಪನಿ 100 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಆದರೆ, ಕುಕ್ ವೃತ್ತಿಜೀವನದಲ್ಲಿ ತಾನೂ ಬೆಳೆಯುತ್ತ ಸಂಸ್ಥೆಯನ್ನೂ ಬೆಳೆಸಿದ ರೀತಿ ಅನನ್ಯ, ಇತರೆ ಉದ್ಯಮಿಗಳಿಗೆ ದಾರಿದೀಪ.

ಟಿಮ್ ಕುಕ್ ಆಪಲ್ ಕಂಪನಿಗೆ ಸೇರ್ಪಡೆಗೊಂಡದ್ದೇ ವಿಶಿಷ್ಟ ಸನ್ನಿವೇಶದಲ್ಲಿ. 1998ರ ಆರಂಭದ ಅವಧಿ. ಪ್ಲೇಸ್ವೆುಂಟ್ ಏಜೆನ್ಸಿಯ ಸಿಬ್ಬಂದಿ ಒಬ್ಬರು ಕುಕ್ ಅವರಿಗೆ ಕರೆ ಮಾಡಿ, ‘ಆಪಲ್ ಕಂಪನಿಯಲ್ಲಿ ತಮ್ಮ ಅರ್ಹತೆಗೆ ಸೂಕ್ತವಾದ ಹುದ್ದೆಯೊಂದು ಖಾಲಿ ಇದೆ. ಸಂದರ್ಶನಕ್ಕೆ ಹಾಜರಾಗಿ’ ಎಂದು ತಿಳಿಸಿದ್ದರು. ಆದರೆ, ಅದನ್ನು ಕುಕ್ ನಯವಾಗಿ ತಿರಸ್ಕರಿಸಿದ್ದರು. ಇದಾಗಿ, ಐದೇ ನಿಮಿಷದಲ್ಲಿ ಅಂದು ಆಪಲ್ ಕಂಪನಿಯ ಸಿಇಒ ಆಗಿದ್ದ ಸ್ಟೀವ್ ಜಾಬ್ಸ್ ಖುದ್ದು ಕರೆ ಮಾಡಿ ಬಂದು ಭೇಟಿಯಾಗುವಂತೆ ಹೇಳಿದರು. ಜಾಬ್ಸ್ ಕರೆಗೆ ಸ್ಪಂದಿಸಿದ ಕುಕ್, ಕಾಂಪ್ಯಾಕ್ನ ಉದ್ಯೋಗ ತೊರೆದು ಆಪಲ್ ಕಂಪನಿಗೆ ಜಾಗತಿಕಮಟ್ಟದ ವಹಿವಾಟಿನ ಹಿರಿಯ ಉಪಾಧ್ಯಕ್ಷರಾಗಿ ಸೇರಿದರು. ‘ಕರ್ತವ್ಯವನ್ನು ಹೈನುಗಾರಿಕೆ ವಹಿವಾಟಿನಂತೆಯೇ ನಿರ್ವಹಿಸಬೇಕು. ಒಂದೊಮ್ಮೆ ತಾಜಾತನ ಹೊರಟುಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ’ ಎಂಬ ಭಾವನೆಯೊಂದಿಗೆ ಈ ಪಾತ್ರವನ್ನು ನಿಭಾಯಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಕುಕ್ 2004ರಲ್ಲಿ ಕಂಪನಿಯ ಮ್ಯಾಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ವಿಂಡೋಸ್ ಅಪ್ಲಿಕೇಶನನ್ನು ಮ್ಯಾಕ್ನಲ್ಲೂ ಕೆಲಸ ಮಾಡುವಂತೆ ಮಾಡುವುದಕ್ಕೆ ಅಗತ್ಯ ಕ್ರಮಕೈಗೊಂಡು ಯಶಸ್ವಿಯಾದರು. ಪರಿಣಾಮ ಕಂಪ್ಯೂಟರ್ ಬಳಸುತ್ತಿದ್ದವರು ಆಪಲ್ ಮ್ಯಾಕ್ನತ್ತ ವಾಲಿದರು. ಇದೇ ಅವಧಿಯಲ್ಲಿ ಕಂಪನಿ ಸಿಇಒ ಆಗಿದ್ದ ಸ್ಟೀವ್ ಜಾಬ್ಸ್ ಮೇದೋಜ್ಜೀರಕ ಗ್ರಂಥಿಯ ಶಸ್ತ್ರಚಿಕಿತ್ಸೆಗೆ ತೆರಳಬೇಕಿತ್ತು. ಆ ಸಂದರ್ಭದಲ್ಲಿ ಹಂಗಾಮಿ ಸಿಇಒ ಆಗಿಯೂ ಹೊಣೆಗಾರಿಕೆ ನಿಭಾಯಿಸಿದ್ದರು ಕುಕ್. ಇದಾಗಿ 2007ರಲ್ಲಿ ಕುಕ್ ಅವರಿಗೆ ಸಿಒಒ (ಮುಖ್ಯ ಕಾರ್ಯಾಚರಣೆ ಅಧಿಕಾರಿ) ಆಗಿ ಬಡ್ತಿ ನೀಡಲಾಗಿತ್ತು. 2009ರಲ್ಲಿ ಸ್ಟೀವ್ ಜಾಬ್ಸ್ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಕುಕ್ ಮತ್ತೆ ಹಂಗಾಮಿ ಸಿಇಒ ಆಗಿ ಕೆಲಸಮಾಡಿದ್ದರು.

ಕುಕ್ ಅವರು ವಿಪರೀತ ಕಾರ್ಯವ್ಯಸನಿ (ವಕೋಹಾಲಿಕ್). ಪ್ರತಿನಿತ್ಯ ಬೆಳಗ್ಗೆ 4.30ಕ್ಕೆಲ್ಲ ಸಹೋದ್ಯೋಗಿಗಳಿಗೆ ಇ-ಮೇಲ್ ಕಳುಹಿಸಲಾರಂಭಿಸುತ್ತಾರೆ. ವಾರದ ಕೆಲಸಗಳನ್ನು ಮುಂಚಿತವಾಗಿಯೇ ನಿಗದಿ ಮಾಡಿಕೊಳ್ಳುವ ಅವರು, ಈ ವಿಷಯವಾಗಿ ಭಾನುವಾರ ರಾತ್ರಿಯೇ ಆಯಾ ವಿಭಾಗದ ಮ್ಯಾನೇಜರ್ಗಳ ಜೊತೆ ಮಾತುಕತೆ ನಡೆಸುತ್ತಾರೆ. ಅವರ ಕಾರ್ಯದಕ್ಷತೆ, ಚುರುಕುತನ ಎಷ್ಟರ ಮಟ್ಟಿಗೆ ಇತ್ತು ಎನ್ನುವುದಕ್ಕೊಂದು ನಿದರ್ಶನವಾಗಿ ಒಂದು ಪುಟ್ಟ ಘಟನೆಯನ್ನು ಉದಾಹರಿಸಬಹುದು. ಕಂಪನಿಯು ಚೀನಾದಿಂದ ಒಂದು ಸಮಸ್ಯೆಯನ್ನು ಎದುರಿಸಿತ್ತು. ಅದನ್ನು ಅಮೆರಿಕದಲ್ಲಿ ಕುಳಿತು ಪರಿಹರಿಸಲಾಗದು ಎಂಬುದು ಮನವರಿಕೆಯಾಗುತ್ತಿದ್ದಂತೆ, ಅಂದು ಕಂಪನಿಯ ಆಪರೇಷನ್ ಮ್ಯಾನೇಜರ್ ಆಗಿದ್ದ ಸಬಿಹ್ ಖಾನ್ರನ್ನು ಕರೆದು, ‘ನೀನಿನ್ನೂ ಯಾಕಿದ್ದೀಯ ಇಲ್ಲಿ?’ ಎಂದು ಪ್ರಶ್ನಿಸಿದ್ದರು. ಮುಂದಿನ ವಿಮಾನದಲ್ಲಿ ಖಾನ್ ಚೀನಾ ತಲುಪಿದ್ದರು. ಸಮಸ್ಯೆಯೂ ಪರಿಹಾರವಾಗಿತ್ತು.

ಕುಕ್ ಅವಧಿಯಲ್ಲಿ, ಸ್ವತಃ ಬಿಡಿಭಾಗಗಳನ್ನು ತಯಾರಿಸುವುದನ್ನು ನಿಲ್ಲಿಸಿದ ಆಪಲ್ ಕಂಪನಿಯು ಫಾಕ್ಸ್ಕಾನ್ನಂಥ ಬಿಡಿಭಾಗ ಉತ್ಪಾದಕ ಕಂಪನಿಗಳ ಮೇಲೆ ಹೂಡಿಕೆ ಮಾಡುವುದಕ್ಕಾರಂಭಿಸಿತು. ಈ ವ್ಯೂಹಾತ್ಮಕ ಹೆಜ್ಜೆ ಇನ್ನಷ್ಟು ಕ್ರಾಂತಿಕಾರಕ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವುದಕ್ಕೆ ಆಪಲ್ಗೆ ಸಹಕಾರಿಯಾಯಿತು. ಪರಿಣಾಮ 2005ರಲ್ಲಿ ಐಪಾಡ್ ನ್ಯಾನೋ ಮಾರುಕಟ್ಟೆಗೆ ಬಂತು. ಅಲ್ಲಿಂದೀಚೆಗೆ ಇದೇ ರೀತಿ ಹಲವು ಉತ್ಪನ್ನಗಳು ಗ್ರಾಹಕ ಮಾರುಕಟ್ಟೆಗೆ ಪರಿಚಯಿಸಲ್ಪಟ್ಟಿವೆ. ಸದ್ಯ ಭಾರತೀಯ ಮಾರುಕಟ್ಟೆಯ ಪ್ರಯೋಜನವನ್ನು ಹೆಚ್ಚು ಪಡೆಯುವ ನಿಟ್ಟಿನಲ್ಲಿ ಕುಕ್ ಪ್ರವಾಸ ಯೋಜಿಸಲ್ಪಟ್ಟಿದೆ.

ಅಸಾಮಾನ್ಯ ಪ್ರತಿಭೆ ಹೊಂದಿರುವ ಕುಕ್ ಅವರ ಖಾಸಗಿ ಬದುಕಿನ ಬಗ್ಗೆ ಕುತೂಹಲ ಹುಟ್ಟುವುದೂ ಸಹಜ. ಟಿಮ್ ಕುಕ್ ಯಾನೆ ಟಿಮೋತಿ ಕುಕ್ ಯಾನೆ ಟಿಮೋತಿ ಡೊನಾಲ್ಡ್ ಕುಕ್ ಯಾನೆ ಟಿಮೋತಿ ಡಿ. ಕುಕ್… ಹೀಗೆ ಬಹು ನಾಮಧೇಯಗಳಿಂದ ಗುರುತಿಸಲ್ಪಡುತ್ತಿದ್ದಾರೆ. 1960ರ ನವೆಂಬರ್ 1ರಂದು ಅಲಬಾಮಾದ ರಾಬರ್ಟ್ಸ್ ಡೇಲ್ ಎಂಬ ಪುಟ್ಟ ಪಟ್ಟಣದಲ್ಲಿ ಡೊನಾಲ್ಡ್ ಹಾಗೂ ಜೆರಾಲ್ಡಿನ್ ಎಂಬ ದಂಪತಿಯ ಮೂವರು ಪುತ್ರರ ಪೈಕಿ ಎರಡನೇಯವರಾಗಿ ಕುಕ್ ಜನನ. ತಂದೆ ಡೊನಾಲ್ಡ್ ಬಂದರಿನಲ್ಲಿ ಕಾರ್ವಿುಕರಾಗಿದ್ದರೆ, ತಾಯಿ ಜೆರಾಲ್ಡಿನ್ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ಬಡಕುಟುಂಬದಲ್ಲಿ ಜನಿಸಿದ ಕುಕ್ ಮಹತ್ವಾಕಾಂಕ್ಷೆ ಹೊಂದಿದವರಾಗಿದ್ದರು. ರಾಬರ್ಟ್ಸ್ ಡೇಲ್ನಲ್ಲೇ ಹೈಸ್ಕೂಲ್ ಶಿಕ್ಷಣ ಮುಗಿಸಿದ ಅವರು, 1982ರಲ್ಲಿ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಏತನ್ಮಧ್ಯೆ ಹದಿಹರೆಯದಲ್ಲಿ ‘ದ ಪ್ರೆಸ್ ರಿಜಿಸ್ಟರ್’ ಎಂಬ ಪತ್ರಿಕಾ ಕಂಪನಿಯಲ್ಲಿ ಮನೆ ಮನೆಗೆ ಪತ್ರಿಕೆ ವಿತರಿಸುವ ಹುಡುಗನಾಗಿ ಅರೆಕಾಲಿಕ ಉದ್ಯೋಗ ಮಾಡಿದ್ದರು. ಅಷ್ಟೇ ಅಲ್ಲ, ತಾಯಿ ಜೊತೆ ಮೆಡಿಕಲ್ ಕಂಪನಿಯಲ್ಲೂ ಅರೆಕಾಲಿಕ ಉದ್ಯೋಗ ಮಾಡಿದ್ದರು. 1988ರಲ್ಲಿ ಎಂಬಿಎ ಪದವಿ ಪಡೆಯುವುದಕ್ಕೆ ಡ್ಯೂಕ್ ವಿವಿಯ ಫುಕ್ವಾ ಸ್ಕೂಲ್ ಆಫ್ ಬಿಸಿನೆಸ್ಗೆ ತೆರಳಿದ್ದರು. ಶಿಕ್ಷಣ ಪಡೆದು ಇಂಜಿನಿಯರ್ ಆಗಬೇಕು ಎಂದು ಬಯಸಿದ್ದ ಕುಕ್ಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಐಬಿಎಂನಲ್ಲಿ ಕೆಲಸ ಸಿಕ್ಕಿತ್ತು. 12 ವರ್ಷ ಅಲ್ಲಿ ಕೆಲಸ ಮಾಡಿ, ಬಳಿಕ ಕಾಂಪ್ಯಾಕ್ ಕಂಪನಿ ಸೇರಿ ಆರು ತಿಂಗಳಷ್ಟೇ ಕೆಲಸ ಮಾಡಿದ್ದರು. ಬಳಿಕ ಸೇರಿದ್ದು ಆಪಲ್ಗೆ. ಅಲ್ಲಿಂದೀಚೆಗೆ ಇತಿಹಾಸ ಹಾಗೂ ವರ್ತಮಾನ. ಅಂದ ಹಾಗೆ ಇಷ್ಟೆಲ್ಲ ಸಾಧನೆ ಮಾಡಿರುವ ಕುಕ್ ‘ಅವಿವಾಹಿತ’ ಸಾಧಕರ ಪಟ್ಟಿಗೆ ಸೇರುವವರು.

Leave a Reply

Your email address will not be published. Required fields are marked *