ಜನನಾಯಕನೋ ಹಿಟ್ಲರೋ?!

ಕಳೆದ ಶುಕ್ರವಾರ (ಜುಲೈ 15) ಸಂಜೆಯ ಸಮಯ. ಟರ್ಕಿಯ ರಾಜಧಾನಿ ಅಂಕಾರ ಹಾಗೂ ಪ್ರಮುಖ ನಗರ ಇಸ್ತಾಂಬುಲ್ನಲ್ಲಿ ಸೇನಾ ಕ್ರಾಂತಿಯ ಕಹಳೆ ಮೊಳಗಿತ್ತು. ಇಸ್ತಾಂಬುಲ್ನ ಬೋಸ್ಪೋರಸ್ ಜಲಸಂಧಿಯ ಸೇತುವೆಯನ್ನು ಸೇನಾ ಟ್ಯಾಂಕರ್ಗಳನ್ನು ಇಟ್ಟು ಮುಚ್ಚಿದ ಸೈನಿಕರು ಟಿವಿ ಚಾನೆಲ್ ಕಚೇರಿಗೆ ನುಗ್ಗಿ, ‘ದೇಶಾದ್ಯಂತ ಕರ್ಫ್ಯೂ ವಿಧಿಸಿದ್ದು, ರಾಷ್ಟ್ರವನ್ನು ತಾವು ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಘೊಷಿಸಿದ್ದರು. ಇದೇ ವೇಳೆ, ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಬಿನಾಲಿ ಯಿಲಿಮ್ ಕೂಡ ಹೇಳಿಕೆ ನೀಡಿದರು. ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ಅಧ್ಯಕ್ಷ ರೆಜೆಪ್ ತಾಯ್ಜಿಪ್ ಎರಡಾನ್ ಅವರನ್ನು ಪದಚ್ಯುತಗೊಳಿಸಲಾಗುತ್ತಿದೆ ಎಂದು ಸೇನೆಯ ಒಂದು ಬಣ ಘೊಷಿಸಿತು.

RECEP TAYYIP ERDOGANಇಷ್ಟಾಗುತ್ತಿದ್ದಂತೆಯೇ ಎರಡಾನ್ ಅವರ ಬೆಂಬಲಿಗರು ಬೀದಿಗಿಳಿದರು. ಆ ಸಂದರ್ಭದಲ್ಲಿ ಸೀಸೈಡ್ ರೆಸಾರ್ಟ್ ಟೌನ್ ರಜೆ ಪಡೆದು ವಿಶ್ರಾಂತಿಯಲ್ಲಿದ್ದ ರೆಜೆಪ್ ಕೂಡಲೇ ಇಸ್ತಾಂಬುಲ್ಗೆ ಆಗಮಿಸಿ, ‘ಸೇನಾ ಕ್ರಾಂತಿಯನ್ನು ಹಿಮ್ಮೆಟ್ಟಿಸುವಂತೆ ಜನರೇ ಬೀದಿಗಿಳಿಯಬೇಕು’ ಎಂದು ಕರೆ ನೀಡಿದರು. ಆ ಕರೆಗೆ ಅದೆಷ್ಟು ಶಕ್ತಿ ಇತ್ತೆಂದರೆ ಅವರ ಬೆಂಬಲಿಗರೆಲ್ಲ ಬೀದಿಗಿಳಿದು ಬಿಟ್ಟಿದ್ದರು. ಬಂಡಾಯ ಎದ್ದ ಸೈನಿಕರು ಹಾಗೂ ಜನರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಅಂಕಾರಾದ ಸಂಸತ್ ಹಾಗೂ ಅಧ್ಯಕ್ಷ ಭವನಗಳ ಮೇಲೂ ಗುಂಡಿನ ದಾಳಿ ನಡೆಯಿತು. ಸ್ಪೋಟಗಳಾದವು. ಸೇನಾ ಹೆಲಿಕಾಪ್ಟರನ್ನು ಹೊಡೆದುರುಳಿಸಿದ ಜನ, ಸೇನಾ ಮುಖ್ಯಸ್ಥರನ್ನೇ ಒತ್ತೆಯಾಳಾಗಿ ಇರಿಸಿಕೊಂಡರು. ಅನೇಕರು ಸಾವನ್ನಪ್ಪಿದರು. ಸೇನಾ ದಂಗೆ ದಮನಗೊಳ್ಳುತ್ತಿದ್ದಂತೆ ಎಲ್ಲರೆದುರು ಕಾಣಿಸಿಕೊಂಡ ರೆಜೆಪ್, ‘ಸೇನಾ ದಂಗೆ’ ವಿಫಲವಾಗಿದೆ ಎಂದು ಘೊಷಿಸಿದರು.

ಕಳೆದ ಭಾನುವಾರ ದಂಗೆಯಲ್ಲಿ ಮೃತಪಟ್ಟ ಜನರ ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ರೆಜೆಪ್, ದಂಗೆಗೆ ಕಾರಣಕರ್ತರಾದವರನ್ನು ಬೇರು ಸಹಿತ ನಾಶಮಾಡದೆ ಬಿಡಲ್ಲ. ಅವರು ಈ ದೇಶದ ವೈರಸ್ಗಳು’ ಎಂದು ಕಣ್ಣೀರಿಟ್ಟಿದ್ದರು. ಈ ಬೆಳವಣಿಗೆಯಿಂದಾಗಿ, ರೆಜೆಪ್ ಪ್ರಭಾವ ದೇಶದಲ್ಲಿ ಹೆಚ್ಚಾಗಿದೆ. ಅಷ್ಟೇ ಅಲ್ಲ, ದಂಗೆ ಪಿತೂರಿ ನಡೆಸಿದ ಸೇನಾ ಸಿಬ್ಬಂದಿ, 2700ಕ್ಕೂ ಅಧಿಕ ನ್ಯಾಯಾಧೀಶರು ಮತ್ತು ಇತರೆ ರಾಜಕೀಯ ನಾಯಕರು ಒಂದಷ್ಟು ಸೆರೆಯಾಗಿದ್ದರೆ, ಇನ್ನು ಹಲವರು ಇದೀಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಈ ಘಟನೆಯು ರೆಜೆಪ್ ಅವರೊಬ್ಬ ‘ಜನನಾಯಕ’ರೆಂಬುದನ್ನೂ ಸಾಬೀತು ಮಾಡಿದೆ. ಆದರೆ, ಅವರ ರಾಜಕೀಯ ಬದುಕಿನ ಹಾದಿಯನ್ನು ಮುಂದಿಟ್ಟುಕೊಂಡು ರೆಜೆಪ್ ವ್ಯಕ್ತಿತ್ವವನ್ನು ಅವಲೋಕಿಸುವುದಾದರೆ, ‘ಈ ವ್ಯಕ್ತಿ ಜನನಾಯಕನೋ ಅಥವಾ ಹಿಟ್ಲರೋ?’ ಎಂಬ ಅನುಮಾನ ಕಾಡದಿರದು.

ಸಾಮಾನ್ಯವಾಗಿ ಹಿಟ್ಲರ್ ಎಂದ ಕೂಡಲೇ ಸ್ಮೃತಿಪಟಲದಲ್ಲಿ ಮೂಡುವುದು ನೆಗೆಟಿವ್ ಇಮೇಜ್. ಜರ್ಮನಿಯನ್ನು ಆಳಿದ ಹಿಟ್ಲರ್ ಆಡಳಿತದಲ್ಲೂ ಧನಾತ್ಮಕ ಅಂಶಗಳಿರಬಹುದು. ಆದರೆ, ಅದಾವುದೂ ಗಣನೆಗೆ ಬರುವುದಿಲ್ಲ. ಹೀಗಾಗಿಯೇ ‘ನಿರಂಕುಶ ಪ್ರಭುತ್ವ’ ಕಂಡಾಗೆಲ್ಲ ಜನರ ನೆನಪಿನಂಗಳದಲ್ಲಿ ಮೂಡುವುದು ಹಿಟ್ಲರ್ನ ಚಿತ್ರ. ರೆಜೆಪ್ಗೆ ಹಿಟ್ಲರ್ ಆಡಳಿತದ ಬಗ್ಗೆ ಎಲ್ಲಿಲ್ಲದ ಮೋಹ, ಪ್ರೀತಿ. ಅದಕ್ಕೆ ಅವರ ಹೇಳಿಕೆ, ನಡವಳಿಕೆಗಳೇ ಸಾಕ್ಷಿ.

‘ದೇಶದ ಅಧ್ಯಕ್ಷರ ಕೈಯಲ್ಲಿ ರಾಜಕೀಯ ಅಧಿಕಾರಗಳಿದ್ದರೆ ಇಡೀ ದೇಶವನ್ನು ಏಕಸೂತ್ರದಲ್ಲಿ ಇರಿಸಬಹುದು. ಇದಕ್ಕೆ ಜಗತ್ತಿನಾದ್ಯಂತ ಹಲವು ಉದಾಹರಣೆಗಳಿವೆ. ಜರ್ಮನಿಯ ಹಿಟ್ಲರನ್ನೇ ತೆಗೆದುಕೊಳ್ಳಿ. ಅವರ ಆಳ್ವಿಕೆಯಲ್ಲಿ ಆ ದೇಶದ ಆಡಳಿತ ಎಷ್ಟು ಪರಿಣಾಮಕಾರಿಯಾಗಿತ್ತು ನೋಡಿ. ಇದೇ ರೀತಿ ನಮ್ಮ ದೇಶದಲ್ಲೂ ಅಧ್ಯಕ್ಷರ ಕೈಗೆ ರಾಜಕೀಯ ಅಧಿಕಾರ ಸಿಗಬೇಕು’ ಎಂದು ರೆಜೆಪ್ ತಾಯ್ಜಿಪ್ ಎರಡಾನ್ ಈ ವರ್ಷಾರಂಭದಲ್ಲಿ ಹೇಳಿದ್ದರು. ಈ ಹೇಳಿಕೆಯ ಹಿಂದೆ ಅವರ ರಾಜಕೀಯ ಅಧಿಕಾರದ ಹಪಹಪಿ ಎದ್ದು ಕಾಣುತ್ತಿತ್ತು. ಟರ್ಕಿಯಲ್ಲಿ ಅಧ್ಯಕ್ಷ ಸ್ಥಾನ ಎನ್ನುವಂಥದ್ದು ಒಂದು ರೀತಿಯಲ್ಲಿ ‘ತೋರಿಕೆಯ ಗೌರವಾಡಂಬರ’ ಹೊಂದಿರುವಂಥದ್ದು. ಪ್ರಧಾನಿ ಪಟ್ಟ ಸಂಪೂರ್ಣ ರಾಜಕೀಯ ಅಧಿಕಾರವುಳ್ಳದ್ದಾಗಿದ್ದು, ಅದನ್ನು ರೆಜೆಪ್ ಹನ್ನೊಂದು ವರ್ಷ ನಿಭಾಯಿಸಿದ್ದರು. ಬಳಿಕ 2014ರ

ಆಗಸ್ಟ್ನಲ್ಲಿ ದೇಶದ 12ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಆ ಕ್ಷಣದಿಂದಲೇ ಅವರ ‘ಅಧಿಕಾರ ದಾಹ’ ನಾನಾ ರೀತಿಯಲ್ಲಿ ವ್ಯಕ್ತವಾಗುತ್ತ ಬಂದಿದೆ.

‘ಈ ಹಿಂದಿನ ಎಲ್ಲ ಅಧ್ಯಕ್ಷರಂತೆ ರಾಜಕೀಯ ನಿರಾಸಕ್ತಿಯನ್ನು ತೋರುತ್ತ ಕೂರಲು ನನ್ನಿಂದಾಗದು. ನನಗೆ ಅಧಿಕಾರ ಬೇಕು. ಅಧ್ಯಕ್ಷ ಪದವಿಯ ಎಲ್ಲ ಅಧಿಕಾರಗಳನ್ನೂ ಬಳಸುವೆ’ ಎಂದು ಅಧಿಕಾರ ಸ್ವೀಕರಿಸಿದ ಕೂಡಲೇ ರೆಜೆಪ್ ಘೊಷಿಸಿದ್ದರು. ಅದರಂತೆ ಅಧ್ಯಕ್ಷರು ವಿರಳವಾಗಿ ಬಳಸುವ ಅಧಿಕಾರವನ್ನು ಬಳಸಿ, ಕ್ಯಾಬಿನೆಟ್ ಸಭೆಯನ್ನು ನಡೆಸಲಾರಂಭಿಸಿದ್ದರು. ಹಾಗೆ ಸರ್ಕಾರದ ಸಂಪೂರ್ಣ ನಿಯಂತ್ರಣ ರೆಜೆಪ್ ಕೈ ಸೇರಿದೆ. ಪ್ರಧಾನಮಂತ್ರಿ ಸ್ಥಾನದಲ್ಲಿರುವ ಆಹ್ಮೆಟ್ ದವುಟೊಗ್ಲು ಎಲ್ಲ ರೀತಿಯಲ್ಲೂ ರೆಜೆಪ್ಗೆ ತಲೆಬಾಗಿದ್ದಾರೆ ಎಂಬುದು ವಿಪಕ್ಷಗಳ ಆರೋಪ. ಇದಕ್ಕೂ ಕಾರಣವಿದೆ. ರೆಜೆಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆಹ್ಮೆಟ್ ದವುಟೊಗ್ಲು ಅವರನ್ನು ಅವಿರೋಧವಾಗಿ ಪ್ರಧಾನಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಈ ಆಯ್ಕೆ ರೆಜೆಪ್ ನಿರ್ಧಾರ ಪ್ರಕಾರವೇ ಆಗಿತ್ತು. ಇದಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಆಹ್ಮೆಟ್ ಅವರಿಂದಲೂ ಆಂತರಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ರಾಜೀನಾಮೆ ಪಡೆದ ರೆಜೆಪ್, ಹೊಸ ಪ್ರಧಾನಿಯಾಗಿ ಬಿನಾಲಿ ಯಿಲಿಮ್ ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು. ಹೀಗಾಗಿ ಪಕ್ಷದಲ್ಲೂ ಎರಡಾನ್ ಬೆಂಬಲಿಗರದ್ದೇ ಮೇಲುಗೈ. ಈ ಎಲ್ಲ ಕಾರಣಗಳಿಂದಾಗಿಯೇ ರೆಜೆಪ್ ಅವರ ರಾಜಕೀಯ ಅಧಿಕಾರ ದಾಹ, ಹಪಹಪಿ ಹೆಚ್ಚಾಗಿದೆ. ಸಿರಿಯಾದಲ್ಲಿ ಸ್ಥಳೀಯ ಸರ್ಕಾರದ ವಿರುದ್ಧ ಐಎಸ್ಐಎಸ್ ಉಗ್ರರು ನಡೆಸುತ್ತಿರುವ ಹೋರಾಟಕ್ಕೆ ರೆಜೆಪ್ ನೇರ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಉಗ್ರಗಾಮಿ ಚಟುವಟಿಕೆಗೆ ಕಾರಣವಾಗಿರುವ ಐಎಸ್ ಉಗ್ರರನ್ನು ಬೆಂಬಲಿಸುವ ರೆಜೆಪ್ ನಿರಂಕುಶ ಪ್ರಭುತ್ವದ ಅಪಾಯಕಾರಿ ನಡೆಯನ್ನು ಅನುಸರಿಸುತ್ತಿದ್ದಾರೆ. ಈಗ ಸೇನಾಕ್ರಾಂತಿ ಹಿಮ್ಮೆಟ್ಟಿಸುವುದರಲ್ಲಿ ಅವರು ಯಶ ಕಂಡ ಕಾರಣ ನಿರಂಕುಶ ಪ್ರಭುತ್ವ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಭಾರತ ಮತ್ತು ಟರ್ಕಿಯ ಬಾಂಧವ್ಯದ ದೃಷ್ಟಿಯಿಂದ ನೋಡುವುದಾದರೆ ಉಭಯ ದೇಶಗಳ ನಡುವೆ ಸೇನಾ ಸಹಕಾರ, ಬಾಹ್ಯಾಕಾಶ ತಂತ್ರಜ್ಞಾನ, ದ್ವಿಪಕ್ಷೀಯ ವಾಣಿಜ್ಯವಹಿವಾಟಿನಲ್ಲಿ ಹೆಚ್ಚಾಗಿದೆ. ರೆಜೆಪ್ ಪ್ರಧಾನಮಂತ್ರಿಯಾಗಿದ್ದಾಗ 2008ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದರು ಎಂಬುದನ್ನ ಇಲ್ಲಿ ಸ್ಮರಿಸಬಹುದು. ರೆಜೆಪ್ ರಾಜಕೀಯ ಹಾದಿ ಗಮನಿಸಿದರೆ, 2001ರಲ್ಲಿ ಜಸ್ಟೀಸ್ ಆಂಡ್ ಡೆವಲಪ್ವೆುಂಟ್ ಪಾರ್ಟಿ(ಎಕೆಪಿ) ಸ್ಥಾಪಿಸಿದ ಅವರು, 2002, 2007, 2011ರ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ನಿರಂತರ ಗೆಲುವು ದಾಖಲಿಸಿದ್ದರು. 2003ರಿಂದ 2014ರ ತನಕ ಪ್ರಧಾನಮಂತ್ರಿಯಾಗಿದ್ದ ಅವರು, 2014ರಿಂದ ಜನರಿಂದಲೇ ಆಯ್ಕೆಯಾದ ಮೊದಲ ಅಧ್ಯಕ್ಷರಾಗಿ ಈಗ ಅಧಿಕಾರ ಚಲಾಯಿಸುತ್ತಿದ್ದಾರೆ. 1994ರಿಂದ 98ರ ತನಕ ಅವರು ಇಸ್ತಾಂಬುಲ್ನ ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಇಸ್ಲಾಮಿಕ್ ರಾಜಕೀಯ ಸಿದ್ಧಾಂತ ಅನುಸರಿಸುತ್ತಿರುವ ಅವರು, ಆಡಳಿತದಲ್ಲಿ ಹಲವು ಸಮಾಜ ಸುಧಾರಣಾ ಹಾಗೂ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿ ಗಮನಸೆಳೆದಿದ್ದಾರೆ. ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ತೀವ್ರ ಟೀಕೆಗೂ ಗುರಿಯಾದವರು.

ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ, 1954ರ ಫೆ.26ರಂದು ಇಸ್ತಾಂಬುಲ್ನಲ್ಲಿ ಜನನ. 1965ರಲ್ಲಿ ಕಸಿಂಪಸಾದಲ್ಲಿ ಪಿಯಾಲೆ ಎಲಿಮೆಂಟರಿ ಶಾಲೆಯಲ್ಲಿ ಶಿಕ್ಷಣ ಪಡೆದು 1973ರಲ್ಲಿ ಇಸ್ತಾಂಬುಲ್ ಇಮಾಮ್ ಹತಿಪ್ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದರು. ಇದಲ್ಲದೆ, 1981ರಲ್ಲಿ ಅರ್ಥಶಾಸ್ತ್ರ ಮತ್ತು ವಾಣಿಜ್ಯ ವಿಜ್ಞಾನ ವಿಷಯದಲ್ಲಿ ಮರ್ಮರಾ ಯೂನಿವರ್ಸಿಟಿಯಿಂದ ಪದವಿ ಪಡೆದರು. ಅದಾಗುತ್ತಲೇ, ರಾಜಕೀಯ ಮುಖ್ಯವಾಹಿನಿ ಸೇರಿದ ಅವರು, ನ್ಯಾಷನಲ್ ಸಾಲ್ವೇಷನ್ ಪಾರ್ಟಿ, ವೆಲ್ಪೇರ್ ಪಾರ್ಟಿ, ವರ್ಚ್ಯು ಪಾರ್ಟಿಗಳಲ್ಲಿ ರಾಜಕೀಯ ಚಟುವಟಿಕೆ ನಡೆಸಿದರು. ಅಂದ ಹಾಗೆ ಅವರೊಬ್ಬ ಹವ್ಯಾಸಿ ಫುಟ್ಬಾಲ್ ಆಟಗಾರರಾಗಿದ್ದರು. ಪ್ರಸ್ತುತ ಅರೆವೃತ್ತಿಪರ ಫುಟ್ಬಾಲ್ ಆಟಗಾರರೂ ಹೌದು. 1978ರಲ್ಲಿ ಎಮಿನ್ ಎರಡಾನ್ ಅವರನ್ನು ವಿವಾಹವಾದ ಅವರಿಗೆ ನಾಲ್ವರು ಮಕ್ಕಳು(ಇಬ್ಬರು ಪುತ್ರರು, ಇಬ್ಬರು ಪುತ್ರಿಯರು).

Leave a Reply

Your email address will not be published. Required fields are marked *