ಕಾಮಿಡಿ ಕಿಂಗ್ ಕಿರಿಕಿರಿ

ಕಳೆದ ಐದು ವರ್ಷಗಳಿಂದ ನಾನು 15 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುತ್ತ ಬಂದಿದ್ದೇನೆ. ಇಷ್ಟಾಗ್ಯೂ ನನ್ನ ಕಚೇರಿ ನಿರ್ಮಾಣಕ್ಕಾಗಿ ಬಿಎಂಸಿ ಕಚೇರಿಯಲ್ಲಿ 5 ಲಕ್ಷ ರೂಪಾಯಿ ಲಂಚ ನೀಡಬೇಕೆ?.. ಇದೇನಾ ನಿಮ್ಮ ಅಚ್ಛೇ ದಿನ್?’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ ಟ್ವೀಟ್ ಸಂದೇಶ ಪ್ರಕಟಿಸುವ ಮೂಲಕ ಮತ್ತೆ ವಿವಾದದ ಸುಳಿಗೆ ಸಿಲುಕಿ ವಾರಾಂತ್ಯದಲ್ಲಿ (ಸೆ.9) ಸುದ್ದಿಯ ಮುನ್ನೆಲೆಗೆ ಬಂದವರು ಖ್ಯಾತ ಹಾಸ್ಯನಟ, ನಿರೂಪಕ ಕಪಿಲ್ ಶರ್ಮಾ.

kapil-sharmaಕಾಮಿಡಿ ಟಿವಿ ಷೋಗಳಿಂದಾಗಿಯೇ ಪ್ರಸಿದ್ಧಿಗೆ ಬಂದವರು ಕಪಿಲ್. ಆ ಷೋಗಳಲ್ಲಿನ ತಥಾಕಥಿತ ‘ಲೂಸ್ ಟಾಕ್’ ಮತ್ತು ‘ಲೂಸ್ ನಡವಳಿಕೆ’ ಗಳಿಂದಾಗಿ ಪ್ರಸಿದ್ಧಿ ಜತೆಗೆ ಟೀಕೆ, ವಿವಾದಗಳಿಗೂ ಈಡಾದವರು. ಹೀಗಾಗಿ, ಇಂತಹ ವಾಗ್ವಿವಾದಗಳು ಅವರಿಗೆ ಹೊಸತೇನಲ್ಲ ಬಿಡಿ. ಯಶಸ್ಸು ಮತ್ತು ವಿವಾದಗಳೆರಡನ್ನೂ ಜತೆಜತೆಗೇ ಒಯ್ಯುವುದು ಬಹುಶಃ ಅವರಿಗೆ ರೂಢಿಯೋ ಏನೋ! ಹೀಗೆ ಹೇಳುವುದಕ್ಕೂ ಕಾರಣವಿದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಮರಾಠಿ ಚಿತ್ರೋತ್ಸವ ಬಹುಮಾನ ವಿತರಣಾ ಕಾರ್ಯಕ್ರಮದ ವೇಳೆ ಸಹನಟಿಯರಾದ ಮೊನಾಲಿ ಠಾಕೂರ್, ತನಿಶಾ ಮುಖರ್ಜಿ ಮತ್ತು ಇತರೆ ನಟಿಯರ ಜತೆಗೆ ಅನುಚಿತವಾಗಿ ವರ್ತಿಸಿದ್ದ ಆರೋಪವನ್ನೂ ಅವರು ಎದುರಿಸಿದ್ದರು. ಆ ಸಂದರ್ಭದಲ್ಲಿ ಅವರು ಆರೋಪಗಳಿಗೆ ನೇರ ಪ್ರತಿಕ್ರಿಯೆ ನೀಡದೇ  “I fall, I rise, I make mistakes, I live, I learn, I’ve been hurt but I am alive. I am human, I am not perfect but I am thankful  ”) 

(ನಾನು ಬೀಳ್ತೇನೆ, ಏಳ್ತೇನೆ, ತಪ್ಪು ಮಾಡ್ತೇನೆ, ಬದುಕುತ್ತೇನೆ, ಕಲೀತೇನೆ, ನನಗೆ ನೋವಾಗಬಹುದು. ಆದರೆ, ನಾನು ಜೀವಂತ ಇರುತ್ತೇನೆ. ನಾನೊಬ್ಬ ಮನುಷ್ಯ, ಪರಿಪೂರ್ಣನಲ್ಲ. ಆದಾಗ್ಯೂ, ಕೃತಜ್ಞನಿದ್ದೇನೆ)’ ಎಂಬರ್ಥದ ಟ್ವೀಟ್ ಪ್ರಕಟಿಸಿದ್ದರು.

ಪ್ರಸ್ತುತ ಅವರು ಪ್ರಸಿದ್ಧಿ ಮತ್ತು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಹತ್ತು ವರ್ಷಗಳ ಹಿಂದೆ ಕಪಿಲ್ ಶರ್ಮಾ ಎಂದರೆ ಯಾರೆಂದು ದೇಶದ ಜನತೆಗೆ ಗೊತ್ತಿರಲಿಲ್ಲ. ಅವರು ಶ್ರೀಮಂತಿಕೆ, ಸುಖದ ಸುಪ್ಪತ್ತಿಗೆಯಲ್ಲೇನು ಬೆಳೆದು ಬಂದವರಲ್ಲ. ಆ ದಿನಗಳ ನೆನಪನ್ನು ಅವರು ತಾಜಾತನದಿಂದಲೇ ಜತನಮಾಡಿಕೊಂಡಿದ್ದು, ತಮ್ಮಿಷ್ಟದಂತೆ ತಮ್ಮದೇ ಆದ ಜೀವನಾದರ್ಶಗಳೊಂದಿಗೆ ಬದುಕು ಕಟ್ಟಿಕೊಂಡವರು. ಅಂತಹ ಆ ದಿನಗಳ ನೆನಪುಗಳನ್ನು ಅವರು ವಿರಳ ಸಂದರ್ಭಗಳಲ್ಲಷ್ಟೇ ಹಂಚಿಕೊಳ್ಳುತ್ತಾರೆ. ಅದನ್ನು ಅವರ ಮಾತುಗಳಲ್ಲೇ ಹೇಳಿದರೆ ಚೆಂದ.

‘ನನ್ನ ತಂದೆ ಜಿತೇಂದ್ರ ಕುಮಾರ್ ಪೊಲೀಸ್ ಇಲಾಖೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸಿದವರು. 1997ರ ಹೊತ್ತಿಗೆ ಅವರು ಕ್ಯಾನ್ಸರ್‌ಗೆ ತುತ್ತಾಗಿ ಅದು ಅಂತಿಮ ಹಂತದಲ್ಲಿರುವುದು ನಮಗೆ ಗೊತ್ತಾಯಿತು. ಆಗ ನಾನಿನ್ನೂ ಹತ್ತನೇ ತರಗತಿ ವಿದ್ಯಾರ್ಥಿ. ಹಣಕಾಸು ಸ್ಥಿತಿ ಬಿಗಡಾಯಿಸಿತ್ತು. ಇದನ್ನು ಮನವರಿಕೆ ಮಾಡಿಕೊಂಡಿದ್ದ ನಾನು ಸಾರ್ವಜನಿಕ ಟೆಲಿಫೋನ್ ಬೂತ್ ಒಂದರಲ್ಲಿ ಕೆಲಸಕ್ಕೆ ಸೇರಿದೆ. ಆ ಮೂಲಕ ಪಾಕೆಟ್ ಮನಿ ಗಳಿಕೆಗೆ ಒಂದು ದಾರಿ ಕಂಡುಕೊಂಡಿದ್ದೆ. ‘ಅಪ್ಪಾ, ನೀನು ಆರೋಗ್ಯದ ಕಡೆಗೆ ಗಮನ ಕೊಡದ ಕಾರಣ ನೀನು ಮಾತ್ರವಲ್ಲ ನಾವೆಲ್ಲರೂ ದುಃಖಕ್ಕೀಡಾಗಿದ್ದೇವೆ’ ಎಂದು ಬೈದಿದ್ದೆ. ಅವರು ಅನುಭವಿಸುತ್ತಿದ್ದ ಯಾತನೆ ನೋಡಲಾಗದೇ ನಾನು ಹಾಗೆ ಆಡುತ್ತಿದ್ದೆ. ಅವರಿಗೊಮ್ಮೆ ಮುಕ್ತಿ ಕೊಟ್ಟು ಬಿಡಪ್ಪಾ ಎಂದು ದೇವರನ್ನೂ ಬೇಡುತ್ತಿದ್ದೆ.

ಏತನ್ಮಧ್ಯೆ, ಕಾಲೇಜು ಶಿಕ್ಷಣಕ್ಕೆ ಶುಲ್ಕ ಪಾವತಿಸುವುದಕ್ಕೂ ಕಾಸಿರಲಿಲ್ಲ. ಕಾಲೇಜು ಮೆಟ್ಟಿಲೇರಿದ ಕೂಡಲೇ ನಾಟಕಗಳಲ್ಲಿ ಪಾತ್ರ ಮಾಡತೊಡಗಿದೆ. ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರಿಂದ ವಿವಿಧ ಕಾಲೇಜುಗಳು ನನ್ನ ಶಿಕ್ಷಣದ ಪ್ರಾಯೋಜಕತ್ವ ವಹಿಸಿದವು. ಕಮರ್ಷಿಯಲ್ ಆರ್ಟ್ಸ್ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ಶಿಕ್ಷಣ ಪಡೆದೆ. ಈ ನಡುವೆ, ತಂದೆ ಆರೋಗ್ಯ ವಿಷಮ ಸ್ಥಿತಿಗೆ ತಲುಪಿತ್ತು. ಆ ಸಂದರ್ಭದಲ್ಲಿ ಹಣ ಗಳಿಸುವುದಕ್ಕಾಗಿ ಸಹಪಾಠಿಗಳಿಗೆ, ಕಿರಿಯರಿಗೆ ನಟನೆ ಕಲಿಸತೊಡಗಿದೆ. ಕಲಿಯಲು ಬಂದವರಿಂದಲೇ ಬಹಳಷ್ಟನ್ನು ಕಲಿತೆ. ಇದೇ ವೇಳೆ ದ ಗ್ರೇಟ್ ಇಂಡಿಯನ್ ಲಾಫ್ಟ್ ರ್ ಚಾಲೆಂಜ್‌ನ ಅಡಿಷನ್‌ಗೂ ಹೋದೆ. ಆದರೆ, ನಾನಲ್ಲಿ ಆಯ್ಕೆಯಾಗಲಿಲ್ಲ. ಶಾಲಾ ಗೆಳೆಯ ರಾಜು ಆಯ್ಕೆಯಾದ. ಈ ಸೋಲು ನನ್ನೊಳಗಿನ ಇಚ್ಛಾಶಕ್ತಿಯನ್ನು ದೃಢಪಡಿಸಿತು.

2004ರಲ್ಲಿ ತಂದೆ ಕೊನೆಯುಸಿರೆಳೆದರು. ಆಗ, ನಾವು ಇದ್ದುದು ಬಾಡಿಗೆ ಮನೆಯಲ್ಲಿ. ನನ್ನ ಬದುಕಿನ ಅತ್ಯಂತ ಕಷ್ಟದ ಸನ್ನಿವೇಶ ಅದಾಗಿತ್ತು. ಆಸರೆಯಾಗಿ ನಿಂತದ್ದು ಅಮ್ಮ ಜಾನಕಿ ರಾಣಿ. ಮನೆಯ ಹೊಣೆಗಾರಿಕೆಗಳನ್ನು ಹೊರುವ ಗುಣವನ್ನು ಗುರುತಿಸಿದ ಅಮ್ಮ, ನನ್ನ ಕಾಲೇಜು ಶಿಕ್ಷಣಕ್ಕೆ ಹಣವನ್ನು ಹೊಂದಿಸುತ್ತಿದ್ದಳು. ಅಷ್ಟೇ ಅಲ್ಲ, ಗಳಿಸಿದ್ದರಲ್ಲಿ 6 ಲಕ್ಷ ರೂಪಾಯಿ ಉಳಿತಾಯವನ್ನೂ ಮಾಡಿದ್ದಳು. ಅದರಲ್ಲಿ 3.5 ಲಕ್ಷ ರೂಪಾಯಿಯನ್ನು ತಂದೆಗಾಗಿ ವ್ಯಯಿಸಲಾಗಿತ್ತು. 2007ರ ಜನವರಿಯಲ್ಲಿ ಸಹೋದರಿ ಪೂಜಾ ಶರ್ಮಾಳ ಮದುವೆ ನಿಶ್ಚಯಿಸಿದೆವು. ಆಗ ಸಹೋದರಿಯ ಭಾವಿ ಅತ್ತೆ ನಿಶ್ಚಿತಾರ್ಥಕ್ಕೆ ಉಂಗುರ ಹಾಕುವಂತೆ ಆಗ್ರಹಿಸಿದರು. ನಮ್ಮ ಕೈಲಿದ್ದುದು ಕೇವಲ 2.5 ಲಕ್ಷ ರೂಪಾಯಿ. ಅದರಲ್ಲಿ ಉಂಗುರ ತೊಡಿಸುವುದು ಕಷ್ಟವಿತ್ತು. ದಾರಿ ತೋಚದೆ ಅದೇ ವರ್ಷ ಏಪ್ರಿಲ್‌ನಲ್ಲಿ ಮುಂಬೈಗೆ ಬಂದೆ. ಅದೃಷ್ಟ ನನ್ನ ಜತೆಗಿತ್ತು. ದ ಗ್ರೇಟ್ ಇಂಡಿಯನ್ ಲಾಫ್ಟ್ ರ್ ಚಾಲೆಂಜ್‌ನ ಮೂರನೇ ಆವೃತ್ತಿಯಲ್ಲಿ ಗೆದ್ದು ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಪಡೆದೆ. ಕೂಡಲೇ ತಂಗಿಗೆ ಕರೆ ಮಾಡಿ, ನಿನ್ನ ಉಂಗುರ ಖರೀದಿ ಮಾಡು ಎಂದೆ. ಮದುವೆಗೆ 30 ಲಕ್ಷ ರೂಪಾಯಿ ಹೊಂದಿಸಬೇಕಾಗಿತ್ತು. 2008ರಲ್ಲಿ ಛೋಟೇ ಮಿಯಾಂ ಎಂಬ ಟಿವಿ ಷೋದಲ್ಲಿ ನಿರೂಪಕನಾಗಿ ಕೆಲಸ ಮಾಡಿದೆ. ಇದರ ಜತೆಗೆ ಕಾಮಿಡಿ ಷೋಗಳನ್ನೂ ಆಯೋಜಿಸಿ ತಂಗಿಯ ಮದುವೆ ನೆರವೇರಿಸಿದೆ. ಏತನ್ಮಧ್ಯೆ, ತಮ್ಮ ಅಶೋಕ್ ಕುಮಾರ್ ಕೂಡ ಮದುವೆಯಾದ’ ಎಂದು ಹೇಳುವ ಕಪಿಲ್ ಶರ್ಮಾ, ತಮ್ಮ ಮದುವೆಯ ವಿಚಾರ ಬಂದಾಗ ನಕ್ಕು ಬಿಡುತ್ತಾರೆ.

‘ಯಾರಾದರೂ ನನ್ನ ಮದುವೆ ಬಗ್ಗೆ ಪ್ರಶ್ನಿಸಿದರೆ ಸಲ್ಮಾನ್ ಭಾಯ್‌ಗೆ ಜಿಂದಾಬಾದ್ ಎಂದು ಹೇಳಿಬಿಡುತ್ತೇನೆ. ಇನ್ನೂ ಕೆಲವು ವರ್ಷ ನಾನು ಮದುವೆಯಾಗಲ್ಲ. ನನ್ನ ಎಷ್ಟೋ ಗೆಳೆಯರು ಕೆಲಸ ಮಾಡುತ್ತಿದ್ದಾಗ ಅವರ -ನ್‌ಗಳು ರಿಂಗಣಿಸುತ್ತಿರುತ್ತವೆ. ಯಾಕೆ ಎಂದು ವಿವರಿಸಬೇಕಾಗಿಲ್ಲ ತಾನೆ?’ ಎಂದು ನಗುತ್ತಲೇ ಹೇಳುತ್ತಾರೆ.

ಇಂತಹ ಕಪಿಲ್ 2009ರಲ್ಲಿ ‘ಉಸ್ತಾದೋಂ ಕಾ ಉಸ್ತಾದ್’ ಎಂಬ ಜನಪ್ರಿಯ ಟಿವಿ ಷೋದಲ್ಲಿ ಅದಾಗಿ, 2011-12ರಲ್ಲಿ ‘ಸ್ಟಾರ್ ಯಾ ರಾಕ್‌ಸ್ಟಾರ್’, 2008-13ರ ಅವಧಿಯಲ್ಲಿ ‘ಕಾಮಿಡಿ ಸರ್ಕಸ್’ ಎಂಬ ಷೋಗಳಲ್ಲಿ ವಿಜೇತರಾಗಿ ಜನಮನ ಗೆದ್ದರು. 2013ರಲ್ಲಿ ಮತ್ತೆ ‘ಝಲಕ್ ದಿಖ್‌ಲಾ ಜಾ 6’, 2013-16ರ ತನಕ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ನಿರೂಪಕರಾಗಿ ಕಾಣಿಸಿಕೊಂಡರು. ಏತನ್ಮಧ್ಯೆ, 2014ರಲ್ಲಿ ಕೌನ್ ಬನೇಗಾ ಕರೋಡ್‌ಪತಿ, ದ ಅನುಪಮ್‌ಖೇರ್ ಷೋ, 2015ರಲ್ಲಿ ಫರ‍್ಹಾ ಕಿ ದಾವತ್, ಆಪ್ ಕೀ ಅದಾಲತ್, ಡಿಡ್, ಇಂಡಿಯನ್ ಐಡಲ್ ಜ್ಯೂನಿಯರ್, ದ ವಾಯ್ಸ್ ಆಫ್ ಇಂಡಿಯಾ ಷೋಗಳಲ್ಲಿ ಅತಿಥಿಯಾಗಿ ಪಾಲ್ಗೊಂಡರು. 2015ರಲ್ಲಿ 60ನೇ ಫಿಲಂ-ಫೇರ್ ಅವಾರ್ಡ್ಸ್, ಸ್ಟಾರ್ ಗಿಲ್ಡ್ ಅವಾರ್ಡ್ಸ್, 2016ರಲ್ಲಿ 61ನೇ ಫಿಲಂ-ಫೇರ್ ಅವಾರ್ಡ್ಸ್‌ನ ನಿರೂಪಕರಾಗಿ ಗಮನಸೆಳೆದರು. ಪ್ರಸ್ತುತ ‘ದ ಕಪಿಲ್ ಶರ್ಮಾ ಷೋ’ ಮೂಲಕ ಮನೆಮಾತಾಗಿದ್ದಾರೆ.

ಇಂತಹ ಕಪಿಲ್ ಹುಟ್ಟಿದ್ದು(02.04.1981) ಪಂಜಾಬ್‌ನ ಅಮೃತಸರದಲ್ಲಿ. ಅಂದ ಹಾಗೆ, ಕಪಿಲ್ ಪ್ರಾಣಿಪ್ರೇಮಿ ಕೂಡ ಹೌದು. ಪ್ರಾಣಿಗಳ ಹಕ್ಕಿಗಾಗಿ ಪೇಟಾ ಎಂಬ ಎನ್‌ಜಿಒ ಜತೆಗೂ ಕೆಲಸ ಮಾಡುತ್ತಿದ್ದಾರೆ. ಇನ್ನೂ ಒಂದು ವಿಷಯ- ಕಪಿಲ್ ಯಾರನ್ನಾದ್ರೂ ಪ್ರೇಮಿಸಿದ್ರಾ ಎಂಬ ಕುತೂಹಲದ ಪ್ರಶ್ನೆಯೂ ಹಲವರಲ್ಲಿದೆ. ಕಾಲೇಜು ದಿನಗಳಲ್ಲಿ ಪ್ರೀತಿಸಿದ ಹುಡುಗಿ ಬೇರೊಬ್ಬರನ್ನು ಮದುವೆಯಾಗಿ ಲಂಡನ್‌ನಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಸ್ವತಃ ಕಪಿಲ್. ಸದ್ಯ, 2011ರಿಂದೀಚೆಗೆ ಗಿನ್ನಿ ಛಾತ್ರಾತ್ ಎಂಬ ಪಂಜಾಬಿ ಬೆಡಗಿ, ನಟೀಮಣಿಯ ಜತೆ ಲವ್ ಅಫೇರ್ ಇದೆ ಎಂಬ ಗಾಸಿಪ್ ಸುದ್ದಿ ಇದೆ.

Leave a Reply

Your email address will not be published. Required fields are marked *